ಬಾಲಿನೀಸ್‍ನವರ ಅನನ್ಯ ಶವಸಂಸ್ಕಾರ ಪದ್ದತಿ
– ಕೆ.ವಿ.ಶಶಿದರ.
ಮಾನವನ ದೇಹ, ಆತ್ಮಕ್ಕೆ ಒಂದು ತಾತ್ಕಾಲಿಕ ನೆಲೆಯಿದ್ದಂತೆ, ಈ ದೇಹವು ಅಶುದ್ದ ಮತ್ತು ಅದಕ್ಕೆ ಯಾವುದೇ ಪ್ರಾಮುಕ್ಯತೆಯಿಲ್ಲ ಎಂಬುದು ಬಾಲಿನೀಸ್ ಗಳ ನಂಬಿಕೆ. ಸಾವಿನ ನಂತರ ಆತ್ಮವು ಮತ್ತೊಂದು ರೂಪದಲ್ಲಿ ಬೇರೆಡೆ ಹುಟ್ಟಬಹುದು, ಸಾವಿನ ನಂತರ ಕೆಲವರ ಆತ್ಮ ನರಕಕ್ಕೆ ಹೋದರೆ ಮತ್ತೆ ಕೆಲವರದು ಸ್ವರ‍್ಗಕ್ಕೆ ಹೋಗುತ್ತದೆ. ಕೆಲವರಿಗೆ ಮೋಕ್ಶ ಸಹ ಸಿಕ್ಕು ದೇವರಲ್ಲಿ ಲೀನವಾಗಬಹುದು. ಮೋಕ್ಶ ಸಾದನೆಗೆ ಆತ್ಮವು ಅನೇಕ ಹಂತಗಳನ್ನು ಹಾದು ಹೋಗಬೇಕು. ಅವುಗಳಲ್ಲಿ ಸುಡುವುದು ಸಹ ಒಂದು ಹಂತವಾಗಿದೆ. ಬಾಲಿನೀಸ್ ನವರಲ್ಲಿ ಸಾವಿನ ಅಚರಣೆ ಅನೇಕ ದೇಶಗಳ ಮತ್ತು ಸಂಸ್ಕ್ರುತಿಗಳಿಗಿಂತ ಬೇರೆಯದಾಗಿದೆ. ಸತ್ತವರ ಕೊನೆಯ ಕ್ರಿಯೆ ಅವರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತೋಶದ ಅಚರಣೆ. ಅವರುಗಳು ಶೋಕಾಚರಣೆ ಮಾಡುವುದಿಲ್ಲ. ಕುಟುಂಬದ ಸದಸ್ಯ/ಸ್ನೇಹಿತ ಕೊನೆಯದಾಗಿ ದೇವರ ಬಳಿಗೆ ಮರಳುತ್ತಾನೆ/ತ್ತಾಳೆ ಎಂದು ನಂಬಿರುವುದೇ ಇದಕ್ಕೆ ಮೂಲ ಕಾರಣ.
ಬಾಲಿನೀಸ್ ಸಂಪ್ರದಾಯದಲ್ಲಿ ಸಾವಿನ ವಿದಿ ವಿದಾನಗಳು ಮತ್ತು ಸುಡುವ ವಿದಿ ವಿದಾನಗಳು ಬೇರೆಯವೇ ಆಗಿವೆ. ಮನುಶ್ಯ ಸತ್ತಾಗ, ಸಾವಿನ ಸಮಾರಂಬವನ್ನು ಹೆಚ್ಚು ಗಡಿಬಿಡಿ ಹಾಗೂ ಸಿದ್ದತೆಗಳಿಲ್ಲದೆ ಸರಳವಾಗಿ ಮಾಡಲಾಗುತ್ತದೆ. ಕೆಲವು ಕುಟುಂಬಗಳು ಹೆಣಕ್ಕೆ ಕೊನೆಯ ಸಂಸ್ಕಾರ ಮಾಡಲು ಅವಕಾಶ ಸಿಗುವವರೆವಿಗೂ, ತಾತ್ಕಾಲಿಕವಾಗಿ ಹೂಳಿರುತ್ತಾರೆ. ಶವ ಸಂಸ್ಕಾರದ ವಿದಿ ವಿದಾನಗಳು ಬಾಲಿಯಲ್ಲಿ ಅತ್ಯಂತ ದುಬಾರಿ ವಿದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸಮಾರಂಬದ ತಯಾರಿಕೆಗೆ ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ ನೂರಾರು ಮಿಲಿಯನ್ ಬಾಲಿನೀಸ್ ರೂಪಾಯಿಗಳು. ಇಶ್ಟೆಲ್ಲಾ ಕರ‍್ಚು ವೆಚ್ಚ ಬಂದರೂ, ಇದು ಅಲ್ಲಿ ಬಹಳ ಸಾಮಾನ್ಯವಾಗಿದೆ. ಮತ್ತೊಂದು ವಿಶೇಶವೆಂದರೆ, ಕಡಿಮೆ ಆದಾಯದವರು, ಸಿರಿವಂತ ಕುಟುಂಬದವರ ಜೊತೆ ಸೇರಿ ಸುಡುವ ಕ್ರಿಯೆಯನ್ನು ಮಾಡುತ್ತಾರೆ. ಅದಕ್ಕಾಗಿಯೇ ಸತ್ತವರ ಹೆಣವನ್ನು ತಾತ್ಕಾಲಿಕವಾಗಿ ಹೂಳಲಾಗಿರುತ್ತದೆ.
ಸುಡುವ ಕ್ರಿಯೆ/ಹೆಣದ ಸಂಸ್ಕಾರಕ್ಕೆ ಎಲ್ಲಾ ದಿನಗಳು ಸೂಕ್ತವಲ್ಲ. ದಿನವನ್ನು ಗೊತ್ತುಮಾಡಲು ಆದ್ಯಾತ್ಮಿಕ ಸಲಹೆಗಾರರ ಮೊರೆ ಹೋಗುತ್ತಾರೆ. ದಿನ ಗೊತ್ತುಮಾಡುತ್ತಿದ್ದಂತೆ, ಸರಣಿ ಸಿದ್ದತೆಗಳು ಪ್ರಾರಂಬವಾಗುತ್ತವೆ. ಇದು ಅತ್ಯಂತ ದೊಡ್ಡ ಕಾರ‍್ಯಕ್ರಮವಾದ ಹಿನ್ನೆಲೆಯಲ್ಲಿ, ಸಾವಿರಾರು ಮಂದಿ ಬಾಗವಹಿಸುತ್ತಾರೆ. ಇಲ್ಲಿ ಯಾರು ಯಾವ ಕೆಲಸವನ್ನು ಮಾಡಬೇಕು ಎಂಬುದಕ್ಕೆ ಯಾವುದೇ ಬರೆದ ಪಟ್ಟಿಯಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ಕೆಲಸವನ್ನು ಹಂಚಿಕೊಂಡು ಕೆಲಸ ಮಾಡುತ್ತಾರೆ. ಕೆಲಸಗಾರರಿಗೆ ವಿಶ್ರಮಿಸಲು ತಾತ್ಕಾಲಿಕ ತಂಗುದಾಣಗಳನ್ನು ಕಟ್ಟುವುದರ ಮೂಲಕ ಕೆಲಸ ಕಾರ‍್ಯಗಳು ಮೊದಲ್ಗೊಳ್ಳುತ್ತದೆ. ಪೂಜೆ ಪುನಸ್ಕಾರಗಳ ತಯಾರಿಕೆಯಲ್ಲಿ ಹೆಂಗಸರು ಪಾಲ್ಗೊಂಡರೆ, ಬಾರವಾದ ಕೆಲಸಗಳು ಗಂಡಸರಿಗೆ ಮೀಸಲು.
ಮೊದಲ ಹಂತದ ತಯಾರಿಯಲ್ಲಿ, ಲೆಂಬು ಎಂದು ಕರೆಯಲಾಗುವ ಶವ ಪೆಟ್ಟಿಗೆಗಳ ತಯಾರಿ ಇರುತ್ತದೆ. ಇದರಲ್ಲಿ ಹಸು, ಸಿಂಹ, ಜಿಂಕೆ, ಆಡು, ಹುಲಿ, ಆನೆ, ಗೂಳಿ ಇವೇ ಮುಂತಾದ ಪ್ರಾಣಿಗಳ ರೂಪದ ಪೆಟ್ಟಿಗೆಗಳನ್ನು ಮರದಿಂದ ಮಾಡಲಾಗುತ್ತದೆ. ಇಲ್ಲಿ ಗಮನಿಸಬಹುದಾದ ಅಂಶವೆಂದರೆ, ಎಲ್ಲಾ ಶವ ಪೆಟ್ಟಿಗೆಗಳೂ ನಾಲ್ಕು ಕಾಲಿನ ಪ್ರಾಣಿಗಳ ರೂಪದಲ್ಲೇ ಇರುವುದು. ಪ್ರಾಣಿಗಳ ನಾಲ್ಕು ಕಾಲುಗಳು, ಕಂಡ ಎಂಪಟ್ ಎನ್ನಲಾಗುವ ನಾಲ್ಕು ಆದ್ಯಾತ್ಮಿಕ ಒಡಹುಟ್ಟಿದವರನ್ನು ಸಂಕೇತಿಸುತ್ತವೆ ಎನ್ನುತ್ತಾರೆ ಬಾಲಿನೀಸ್ ಗಳು. ಇಲ್ಲಿನ ಮತ್ತೊಂದು ನಂಬಿಕೆಯೆಂದರೆ, ಗಂಡಸರಿಗೆ ಗೂಳಿಯಾಕಾರದ ಶವ ಪೆಟ್ಟಿಗೆಯಾದರೆ, ಹೆಂಗಸರಿಗೆ ಹಸುವಿನಾಕಾರದ ಶವ ಪೆಟ್ಟಿಗೆಯನ್ನು ಬಳಸುವುದು. ಸಾವು ಮತ್ತು ವಿನಾಶದ ದೇವರು ಶಿವನ ವಾಹನ ಬಸವ/ಗೂಳಿ. ಆದ್ದರಿಂದ ಇದನ್ನು ಬಹಳ ಪ್ರತಿಶ್ಟಿತವೆಂದು ಪರಿಗಣಿಸಲಾಗುತ್ತದೆ. ಪ್ರಾಣಿಗಳ ಆಕ್ರುತಿಯನ್ನು ಮಾಡುವಲ್ಲಿ, ವಾಡಾ ಅತವಾ ಬಡೆ ಎಂಬ ಸ್ಮಶಾನ ಗೋಪುರವನ್ನು ಮಾಡಿರುತ್ತಾರೆ. ಈ ಗೋಪುರ ಬಾಲನೀಸ್ ಬ್ರಹ್ಮಾಂಡವನ್ನು ಸಂಕೇತಿಸುವ ಅನೇಕ ಬಾಗಗಳನ್ನು ಹೊಂದಿರುತ್ತದೆ. ಈ ಗೋಪುರದ ತಳದಲ್ಲಿ ಆಮೆ ಮತ್ತು ಡ್ರ‍್ಯಾಗನ್ ಬೂಗತ (ಪಾತಾಳ) ಲೋಕವನ್ನು ಪ್ರತಿನಿದಿಸುತ್ತದೆ. ಇದರ ಮೇಲೆ ಮರ, ಗಿಡ ಹಾಗೂ ದೊಡ್ಡ ಬೆಟ್ಟಗಳ ಚಿತ್ರಕಲೆಯಿಂದ ಮಾನವನ ಪ್ರಪಂಚವನ್ನು ಸ್ರುಶ್ಟಿಸಲಾಗುತ್ತದೆ. ಗೋಪುರದಲ್ಲಿ ಮೇರು ಎಂಬ ಪಗೋಡದಂತಹ ರಚನೆಯಿದೆ. ಇದು ಸ್ವರ‍್ಗದ ಪ್ರತಿರೂಪ. ಗೋಪುರದ ಎತ್ತರವು ಸತ್ತವರ ಶ್ರೀಮಂತಿಕೆಯ ದ್ಯೋತಕವಾಗಿರುತ್ತದೆ. ಆತ/ಆಕೆ ಹೆಚ್ಚು ಶ್ರೀಮಂತನಾಗಿದ್ದರೆ/ಳಾಗಿದ್ದರೆ ಗೋಪುರದ ಎತ್ತರ ಹೆಚ್ಚಾಗುತ್ತದೆ. ಅದು ಹತ್ತರಿಂದ ಇಪ್ಪತ್ತು ಮೀಟರ್ ಎತ್ತರದವರೆಗೂ ಹೋಗಬಹುದು.
ಸುಡುವ ಕ್ರಿಯೆಯ ದಿನ ಹಳ್ಳಿಯವರೆಲ್ಲಾ ಮುಂಜಾನೆಯೇ ಒಂದೆಡೆ ಸೇರುತ್ತಾರೆ. ಪ್ರತಿಯೊಬ್ಬರೂ ತಮ್ಮ ನಿಯಮಾನುಸಾರ ಸಾಂಪ್ರದಾಯಿಕ ವೇಶಬೂಶಣಗಳನ್ನು ತೊಟ್ಟುಕೊಳ್ಳುವುದು ಕಡ್ಡಾಯ. ಅವರಲ್ಲಿ ಸಾಂಪ್ರದಾಯಿಕ ವಾದ್ಯವ್ರುಂದದ ಗುಂಪು, ಬಿದಿರಿನ ವಾದ್ಯಗಳಿಂದ ಇಂಪಾದ ಸ್ವರಗಳನ್ನು ನುಡಿಸುತ್ತಾರೆ. ನರ‍್ತಕಿಯರು ಪವಿತ್ರ ನ್ರುತ್ಯವನ್ನು ಮಾಡುತ್ತಾರೆ. ಈ ಎಲ್ಲಾ ದ್ರುಶ್ಯಗಳನ್ನು ಸೆರೆಹಿಡಿಯಲು ಅನೇಕ ದೇಶ ವಿದೇಶದ ಚಾಯಾಗ್ರಾಹಕರ ಉಪಸ್ತಿತಿ ಇರುತ್ತದೆ.
ಸುಡುವ ಕ್ರಿಯೆಯ ಸಮಾರಂಬ, ಬಿಳಿಯ ಬಟ್ಟೆಯಿಂದ ಸುತ್ತಲ್ಪಟ್ಟ ಹೆಣವನ್ನು ಗೋಪುರಕ್ಕೆ (ವಾಡಾ) ಪವಿತ್ರ ಮಂತ್ರಗಳ ಪಟಣದ ಮೂಲಕ ಕೊಂಡೊಯ್ಯುವ ಕಾರ‍್ಯಕ್ರಮ ಮೊದಲಾಗುತ್ತದೆ. ಇದರೊಡನೆ ಮತ್ತೊಂದು ಗುಂಪು, ಪ್ರಾಣಿಗಳ ರೂಪದಲ್ಲಿರುವ (ಲೆಂಬು) ಕಾಲಿ ಶವಪೆಟ್ಟಿಗೆಯನ್ನು ಹೊತ್ತು ತರುತ್ತದೆ. ಸತ್ತವರ ಸಂಬಂದಿಕರ ಹಾಗೂ ಸುಡುವ ಕ್ರಿಯೆಗೆ ಅವಶ್ಯವಿರುವ ಕಾಣಿಕೆಗಳನ್ನು ಹೊತ್ತ ಹೆಂಗಸರ ಸಾಲು ಅವರನ್ನು ಹಿಂಬಾಲಿಸುತ್ತದೆ. ನಂತರ ಸತ್ತವರ ಕುಟುಂಬದವರು, ಪ್ರಾಣಿಯಾಕಾರದ ಶವ ಪೆಟ್ಟಿಗೆಯ ಹಿಂಬಾಗವನ್ನು ಪವಿತ್ರ ಕಟಾರಿಯ ಮೂಲಕ ತೆರೆಯುತ್ತಾರೆ. ತೆರೆದ ತೂತಿನ ಮೂಲಕ ಹೆಣವನ್ನು (ಅತವ ಮೂಳೆಗಳನ್ನು) ಕೆಲವು ಬಟ್ಟೆಗಳು, ಕಾಣಿಕೆಗಳು ಮತ್ತು ಪರಿಕರಗಳೊಂದಿಗೆ ಶವಪೆಟ್ಟಿಗೆಯೊಳಗೆ ಇಡಲಾಗುತ್ತದೆ. ಕೊನೆಯದಾಗಿ ಸತ್ತವರ ಮುಕ ನೋಡಲು ಕುಟುಂಬ ವರ‍್ಗದವರಿಗೆ ಅವಕಾಶ ನೀಡಲಾಗುತ್ತದೆ. ಹಿಂಬಾಗವನ್ನು ಮುಚ್ಚಿದ ಕೂಡಲೆ, ಪ್ರದಾನ ಅರ‍್ಚಕರ ಮಂತ್ರ ಗೋಶಣೆಯ ನಡುವೆ, ಶವ ಪೆಟ್ಟಿಗೆಗೆ ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಆರಿದ ನಂತರ, ಕುಟುಂಬಸ್ತರು ಬಿಳಿ ಬಟ್ಟೆ ಅತವಾ ಅರಿಶಿಣ ಬಣ್ಣದ ತೆಂಗಿನಕಾಯಿಯಿಂದ ತಯಾರಿಸಿದ ಪಾತ್ರೆಯಲ್ಲಿ ಬೂದಿ ಮತ್ತು ಮೂಳೆಯನ್ನು ಕೂಡಿಡಲಾಗುತ್ತದೆ. ಅರ‍್ಚಕರು ಪವಿತ್ರ ಮಂತ್ರ ಪಟಿಸಿ, ಗಂಟೆಯ ನಾದ ಮಾಡಿ, ಆತ್ಮವನ್ನು ಸ್ವರ‍್ಗಕ್ಕೆ ಹೋಗಲು ಬಿಡುಗಡೆ ಮಾಡುತ್ತಾರೆ. ಹೀಗೆ ಕೂಡಿಟ್ಟ ಬೂದಿಯನ್ನು ಕಡಲಿನಲ್ಲಿ, ಕಡಲು ದೂರವಿದ್ದಲ್ಲಿ, ಹತ್ತಿರದ ನದಿಯಲ್ಲಿ ಬಿಡಲಾಗುತ್ತದೆ. ಇದಾದ ನಂತರ ದೇಹವು ಅನಂತದಲ್ಲಿ ಲೀನವಾಗುತ್ತದೆ ಎಂದು ಪರಿಗಣಿಸುತ್ತಾರೆ. ಮುಂಜಾನೆ ಮೊದಲಾದ ಈ ಎಲ್ಲಾ ಕಾರ‍್ಯಕ್ರಮಗಳು ಮುಗಿಯುವ ಹೊತ್ತಿಗೆ ಸಂಜೆ ಆವರಿಸಿರುತ್ತದೆ.
(ಮಾಹಿತಿ ಮತ್ತು ಚಿತ್ರ ಸೆಲೆ: bali.com, theculturetrip.com, dreameratheart.org, thelivingurn.com )
ಇತ್ತೀಚಿನ ಅನಿಸಿಕೆಗಳು