ಕವಿತೆ: ಓ ವಿದಿಯೇ ನೀ ಬದಲಾಗು

– ನಾಗರಾಜ್ ಬೆಳಗಟ್ಟ.

ಕನಸುಗಳ ಚಿವುಟಿ,
ಬರವಸೆಗಳ ಬತ್ತಿಸುವೆ
ಆಸೆಗಳ ಮಣ್ಣಾಗಿಸಿ,
ಮನಸ್ಸುಗಳ ಮೌನವಾಗಿಸುವೆ

ಪ್ರತಿ ಮುಂಜಾನೆ
ಸಾವಿರ ಕಿರಣಗಳ ಮೂಡಿಸಿ
ಮತ್ತೆ ಮುಸ್ಸಂಜೆಯಲ್ಲೇ
ಮಿನುಗು ನಕ್ಶತ್ರವಾಗಿಸುವೆ

ಹ್ರುದಯಗಳಿಗೆ ಗುಂಡಿ ತೋಡಿಸಿ
ನೆನಪುಗಳ ಬಾಚಿ ತಬ್ಬಿಸುವೆ
ಹಟಾತ್ ಹಿಮ ಸುರಿಸಿ
ಹತಾಶೆ ದಾರಿ ತೋರುವೆ

ನಿನಗೆ ಜೀವನ
ಸೆಲೆಗಳ ಸಂಕೋಲೆಯಿಲ್ಲ
ಮನುಕುಲಕ್ಕೆ ನೀನಿತ್ತ ನೋವ ನೆನೆದಾಗಲೆಲ್ಲ
ಅಕ್ಶರಗಳು ಪದವಾಗದೆ ಮೌನಕ್ಕೆ ಶರಣಾಗಿವೆ

ರುತುವಿನಂತೆ ಬದಲಾಗುವುದು ನಿಸರ‍್ಗ
ಕಾಲನ ಹೊಡೆತಕ್ಕೆ ಬದಲಾಗುವುದು ಕಲ್ಲು ಬಂಡೆ
ನೀನೇಕೆ ಶಾಶ್ವತ ಎಂದು ಬಾವಿಸಿರುವೆ?

ಓ ವಿದಿಯೇ
ಜೀವನವ ಕನಸಾಗಿಸುವೆ ಏಕೆ?
ಕಣ್ಣುಗಳ ಮಲಗಿಸುವೆ ಏಕೆ?
ಉಸಿರ ಕಸಿದು
ಜಗವ ಉಸಿರುಗಟ್ಟಿಸುವೆ ಏಕೆ?
ಬದಲಾವಣೆ ಜಗದ ನಿಯಮ
ಜಗದ ಒಳಿತಿಗಾದರೂ
ನೀ ಬದಲಾಗು

(ಚಿತ್ರ ಸೆಲೆ : instonebrewer.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks