777 ಚಾರ‍್ಲಿ – ಒಂದು ಅನುಬವ

– ರಾಹುಲ್ ಆರ್. ಸುವರ‍್ಣ.

ಸದ್ಯದ ದಿನಗಳಲ್ಲಿ ನಿತ್ಯವೂ ಮಲಯಾಳಂ, ತಮಿಳು ಚಿತ್ರಗಳ ಬಗೆಗೆ ಹೊಗಳಿಕೆಗಳು ಕೇಳಿಬರುತ್ತಿದ್ದ ನನ್ನ ಈ ಕಿವಿಗಳಿಗೆ ಇಂದು ಕನ್ನಡ ಚಿತ್ರರಂಗದಿಂದ ಮಾಡಲ್ಪಟ್ಟ ಬಹುಬಾಶಾ ಸಿನಿಮಾ 777 ಚಾರ‍್ಲಿಯ ಸದ್ದು ಕೆಳುತ್ತಿದೆ. ಅಲ್ಲದೇ ಇದರ ಸದ್ದು ಎಲ್ಲೆಡೆ ಹರಡುತ್ತಿದೆ. ಕನ್ನಡ ಸಿನಿಮಾಗಳಿಂದ ದೂರ ಉಳಿದಿದ್ದ ಪ್ರೇಕ್ಶಕರನ್ನು ಈಗ ಈ ಸಿನಿಮಾ ಮತ್ತೊಮ್ಮೆ ಚಿತ್ರಮಂದಿರದೊಳಗೆ ಸೆಳೆದು ನಗಿಸಿ ಅಳಿಸುವಂತೆ ಮಾಡುತ್ತಿದೆ.

ಇಲ್ಲಿ 777 ಚಾರ‍್ಲಿ ಎಂಬುದು ಯಾವ ಹೀರೊ ಹಾಗೂ ಯಾವ ಹೀರೋಯಿನ್ ಹೆಸರೂ ಅಲ್ಲ. ಅದು ಈ ಚಿತ್ರದಲ್ಲಿ ಮೈನವಿರೇಳಿಸುವಂತೆ ನಟಿಸಿರುವ ಪುಟ್ಟ ನಾಯಿಯ ಹೆಸರು. ನಾವು ಇಂದು ಸಾಕಶ್ಟು ಸಿನಿಮಾಗಳಲ್ಲಿ ನಟರನ್ನು ನಿರ‍್ದೇಶಕರು ನಿರ‍್ದೇಶಿಸಿದ್ದನ್ನು ನೋಡಿದ್ದೇವೆ, ಆದರೆ ಇಲ್ಲಿ ನಾಯಿಗೆ ತರಬೇತಿ ನೀಡಿ ಅದಕ್ಕೆ ಅದರದೇ ರೀತಿಯಲ್ಲಿ ನಟನೆಯನ್ನು ಹೇಳಿಕೊಟ್ಟು, ನಟಿಸುವಂತೆ ತಯಾರು ಮಾಡಲಾಗಿದೆ. ಈ ಚಿತ್ರದಲ್ಲಿ ಆರಂಬದಿಂದ ಅಂತ್ಯದವರೆಗೂ ಅದರ ಸುತ್ತಲೂ ಕತೆ ಸಾಗುತ್ತದೆ. ಈಗಿನ ದಿನಗಲ್ಲಿ ಬೇರೆ ಬಾಶೆಗಳ ಸಿನಿಮಾಗಳಿಗೆ ಮಾರುಹೋಗಿರುವ ಜನರಿಗೆ ಈ ಸಿನಿಮಾ ಹೊಸ ತಿರುವನ್ನು ಸ್ರುಶ್ಟಿಸಿದೆ. ಯಾರ ನಾಲಿಗೆಗಳು ಅಂದು ಕನ್ನಡ ಸಿನಿಮಾಗಳ ಬಗ್ಗೆ ತೆಗಳುವುದಕ್ಕೆ ತಿರುವುತ್ತಿದ್ದವೋ, ಇಂದು ಅದೇ ನಾಲಿಗೆಗಳು ಹೊಗಳಲು ಹೊರಡುತ್ತಿವೆ. ಆ ಒಂದು ಪುಟ್ಟ ನಾಯಿಯಿಂದಲೂ ಕಲಿಯಲು ಬಹಳಶ್ಟಿದೆ ಎಂಬುದು ಇದರ ಮೂಲಕ ಅರಿವಾಗುತ್ತದೆ. ಕೊರೋನಾ ನಂತರ ಕಾಲಿ ಉಳಿದಿದ್ದ ಚಿತ್ರ ಮಂದಿರಗಳ ಸೀಟುಗಳು ಕೆ.ಜಿ.ಎಪ್ ನಂತರ ಮತ್ತೊಮ್ಮೆ ಹೌಸ್ ಪುಲ್ ಪ್ರದರ‍್ಶನಗಳನ್ನು ಕಾಣುತ್ತಿವೆ.

ನಾವು ಮಾತು ಮಾತಿಗೂ ನಾಯಿ, ನಾಯಿ ಎಂದು ಬೈದುಕೊಳ್ಳುತ್ತೇವೆ ಆದರೆ ಯಾಕೆ ಎಂದು ಉತ್ತರ ಹುಡುಕುತ್ತ ಹೋದರೆ ಅದಕ್ಕೆ ಬಹುಶಹ ಉತ್ತರ ಸಿಗಲಾರದು. ನಾಯಿ ಎಂಬುದು ಸಾಕು ಪ್ರಾಣಿ ಮಾತ್ರವಲ್ಲ, ಅದು ಮನುಶ್ಯನ ಬಾವನೆಗಳಿಗೆ ಸ್ಪಂದಿಸಿ ಮನಸ್ಸಿಗೆ ಮುದ ನೀಡುವ ಮಗುವಿದ್ದಂತೆ. ನಾವು ಎಶ್ಟೇ ಹಿಂಸಿಸಿದರೂ ಅದು ನಾವು ಅಂದು ಹಾಕಿದ ಅನ್ನದ ರುಣಕ್ಕಾಗಿ ನಮ್ಮನ್ನು ರಕ್ಶಿಸುತ್ತದೆ. ಈ ಸಿನಿಮಾ ಚಾರ‍್ಲಿ ಹಾಗೂ ದರ‍್ಮ ಎಂಬ ಪ್ಯಾಕ್ಟರಿ ಬಾಯ್ ನಡುವೆ ನಡೆಯುವ ಚಾರ‍್ಲಿಯ ತುಂಟಾಟ, ಪ್ಯಾಕ್ಟರಿ ಬಾಯ್ ನ ಪರದಾಟ, ಚಾರ‍್ಲಿ ಆತನ ಮೇಲಿಟ್ಟಿರುವ ಕಾಳಜಿ ಹಾಗೂ ಆತ ಚಾರ‍್ಲಿಯ ಮೇಲಿಟ್ಟಿರುವ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಾಣಿಗಳಿಗೆ ಬಾಶೆ ಬೇರೆಯಿರಬಹುದು ಆದರೆ ಬಾವನೆಯೊಂದೆ. ಅದು ಬಯಸುವುದು ಹಸಿವಾದಾಗ ಊಟ ಬಿಟ್ಟರೆ ನಾವು ನೀಡುವ ಪ್ರೀತಿ. ಇವನ್ನು ಹೊರತು ಪಡಿಸಿ ಬೇರೇನನ್ನು ಅದು ಬಯಸುವುದಿಲ್ಲ. ಮೊದಲಿನಿಂದಲೂ ನಗಿಸುವ ಈ ಸಿನಿಮಾ ಎರಡನೇ ಬಾಗದಿಂದ ನಮ್ಮನ್ನು ಬಾವೋನ್ಮುಕರಾಗುವಂತೆ ಮಾಡುತ್ತದೆ. ಇದು ಚಾರ‍್ಲಿಯ ಮೊದಲ ಹಾಗೂ ಕೊನೆಯ ಸಿನಿಮಾ ಆದ್ದರಿಂದ ರಕ್ಶಿತ್ ಶೆಟ್ಟಿ ಇದರಲ್ಲಿ ಚಾರ‍್ಲಿಯೇ ಹೀರೊ ಎಂದಿದ್ದಾರೆ. ಮನುಶ್ಯ ಹಾಗೂ ನಾಯಿ ನಡುವಿನ ಅವಿನಾಬಾವ ಸಂಬಂದವನ್ನು ಬಿಚ್ಚಿಡುವ ಈ ಸಿನಿಮಾವನ್ನು ನೋಡಿದರೆ ಎಂತಹ ಕಲ್ಲು ಹ್ರುದಯವುಳ್ಳವರಿಗೂ ಕಣ್ಣೀರುಕ್ಕುತ್ತದೆ.

ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ನಿರ‍್ದೇಶಕರಾದ ಕಿರಣ್ ರಾಜ್ ಕೆ ನಿರ‍್ದೇಶನ ಮಾಡಿದ್ದು, ರಕ್ಶಿತ್ ಶೆಟ್ಟಿ, ಸಂಗೀತ ಶ್ರುಂಗೇರಿ, ರಾಜ್ ಬಿ ಶೆಟ್ಟಿ, ದನೀಶ್, ಬೊಬ್ಬಿ ಸಿಂಹ ಮುಕ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಕ್ಯಾಮೆರಾ ಮುಂದೆ ಹೆಚ್ಚು ಕೆಲಸ ಮಾಡಿದರೆ, ಚಾರ‍್ಲಿಯ ತರಬೇತಿಗಾರರಾದ ಪ್ರಮೋದ್ ಅವರು ಅದನ್ನು ನಟಿಸಿ ನಗಿಸುವಂತೆ ಮಾಡಲು ಹೆಚ್ಚು ಕಡಿಮೆ ಎಂಟು ತಿಂಗಳಗಳ ಕಾಲ ತಯಾರು ಮಾಡಿದ್ದಾರೆ. ಇವರು ಮಾತ್ರವಲ್ಲದೆ ಬಾರ‍್ಗವಿ ನಾರಾಯಣ್, ಅಬಿಜಿತ್ ಮಹೇಶ್, ಗೋಪಾಲ ಕ್ರಿಶ್ಣ ಹಾಗೂ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ನೊಬಿನ್ ಪೌಲ್ ಅವರು ಸಂಗೀತ ನಿರ‍್ದೇಶನ ಮಾಡಿದ್ದಾರೆ ಮತ್ತು “ನೀನೆ ನನ್ನ ಪಾಟವು ನೀನೆ ಪೂರ‍್ತಿ ಅಂಕವು” ಎಂಬ ಹಾಡು ಅದ್ಬುತವಾಗಿದೆ.

ಸಿನಿಮಾ ರಂಗದಲ್ಲಿ ವಿಬಿನ್ನ ಪ್ರಯೋಗಗಳನ್ನು ಮಾಡುತ್ತಲೇ ಬಂದಿರುವ ನಟ ರಕ್ಶಿತ್ ಶೆಟ್ಟಿಯವರಿಗೆ ಈ ಸಿನಿಮಾ ಮೂಲಕ ಒಳ್ಳೆ ನಿರ‍್ದೇಶಕರು ಸಿಕ್ಕಿದ್ದಾರೆ. ಇದೆ ಜೋಡಿ ಮುಂದೆ ಯಾವ ಸಿನಿಮಾಗೆ ಒಟ್ಟಾಗಿ ಕಾಲಿಡಲಿದೆ ಎಂದು ಕಾದು ನೋಡಬೇಕಾಗಿದೆ.

( ಚಿತ್ರಸೆಲೆ: cinemaexpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: