ಕವಿತೆ: ಬೇಡ ಬಾಲ್ಯ ವಿವಾಹ

– ನಾಗರಾಜ್ ಬೆಳಗಟ್ಟ.

ನಾನೇ ನಿಮ್ಮ ಹೆಗಲು ಬಯಸುವ ಕೂಸು
ನನ್ನ ಬಗಲಿಗೇಕೆ ನಿಮ್ಮಿಚ್ಚೆಯ ಹಸಿಗೂಸು
ಬಾಲ್ಯದ ಮನೆಯಲ್ಲೇ ಅರಳುವ ಆಸೆ
ಬಾಲ್ಯ ವಿವಾಹ ಮಾಡಿ ಮೂಡಿಸದಿರಿ ನಿರಾಸೆ

ಅರಿಯದೆ ಎಲ್ಲಿ ಹೋಗಲಿ ನಿಮ್ಮ ಬಿಟ್ಟು
ನನ್ನ ಉಸಿರೇ ನಿಮ್ಮ ಒಲುಮೆಯ ಗುಟ್ಟು
ಚಿಗುರಿಸಿ ಅಕ್ಶರದ ಅಮ್ರುತವ ಕೊಟ್ಟು
ಚಿವುಟದಿರಿ ಹಸಿಮಣಿಯಲಿ ಅಕ್ಶತೆಯ ಇಟ್ಟು

ಅಜ್ನಾನ-ಅಂದಕಾರದ
ಸಾಮಾಜಿಕ ಕಟ್ಟುಪಾಡುಗಳೇ

ಕೊಡದಿರಿ ದೈಹಿಕ ಹಿಂಸೆಯ
ತಾಳಲಾರೆ ಮಾನಸಿಕ ಚಿತ್ರಹಿಂಸೆಯ
ಸ್ವತಂತ್ರವಾಗಿ ಆಡಲು ಬಿಡಿ
ಸ್ಟೇಚ್ಚೆಯಾಗಿ ನಲಿಯಲು ಬಿಡಿ

ಉಸಿರು ನೀಡಿ, ಹಸಿ ಬಸಿರ
ಬಯಸುವ ಪೋಶಕರೇ

ಚಂದಮಾಮ ಕತೆಗಳ ಕೇಳುವ ಬಾಲೆಗೆ
ಮಡದಿ ಮನೆಯೆಂಬ ಜವಾಬ್ದಾರಿ ಹೆಗಲಿಗೆ
ಬಾಲ್ಯದ ಕೊರಳಿಗೆ ಅಲರ‍್ಜಿ ಅರಿಶಿಣದ ದಾರ
ಬಳುವಳಿಯ ಕರುಳ ಬಳ್ಳಿಗೆ ಗರ‍್ಬಪಾತದ ಸೂಜಿ ದಾರ

ಜ್ನಾನಿಗಳೆ ಸಮಾಜದ ವಿಜ್ನಾನಿಗಳೇ
ಸಾರಿ ಹೇಳಿ, ಸಾರಿ ಸಾರಿ ಹೇಳಿ
ಸರ‍್ಕಾರ ತಂದಿದೆ ಬಾಲ್ಯ ವಿವಾಹಕ್ಕೆ ರೀತಿ ನೀತಿ

ಕಾದು ಕುಳಿತಿದೆ ಪೋಶಕರಿಗೆ ಶಿಕ್ಶೆಯ ಪದ್ದತಿ
ಬನ್ನಿ ಜೊತೆಗೆ ಇತರರನ್ನೂ ಕರೆತನ್ನಿ

ಮೊಗ್ಗಿನ ಮನಸನ್ನು ಮುದುಡಿಸುವ
ಸಾಮಾಜಿಕ ಪಿಡುಗನ್ನ ತೊಲಗಿಸೋಣ
ಮೌಡ್ಯದ ಕಗ್ಗತ್ತಲಲ್ಲಿ ಮಿಣುಕುವ
ನಂದಾ ದೀಪಗಳ ಬೆಳಗಿಸೋಣ

(ಚಿತ್ರ ಸೆಲೆ: newindianexpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks