ಲದ್ದೆಯ ಸೋಮಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanasಹೆಸರು: ಲದ್ದೆಯ ಸೋಮಯ್ಯ
ದೊರೆತಿರುವ ವಚನ: ಒಂದು
ವಚನದ ಅಂಕಿತನಾಮ: ಲದ್ದೆಯ ಸೋಮ

***

ಆವ ಕಾಯಕವಾದಡೂ
ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ
ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮ.

***

ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಎಡರುತೊಡರುಗಳನ್ನು ದಿಟ್ಟತನದಿಂದ ಮತ್ತು ತಾಳ್ಮೆಯಿಂದ ತಾನೇ ಎದುರಿಸಿ ಪರಿಹಾರವನ್ನು ಕಂಡುಕೊಂಡು ಬಾಳಬೇಕೆ ಹೊರತು, ಯಾವುದಕ್ಕೂ ದೇವರನ್ನು ಅವಲಂಬಿಸಬಾರದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ತಮ್ಮ ಜೀವನದಲ್ಲಿ ಬರುವ ಎಲ್ಲ ಬಗೆಯ ಸಂಕಟಗಳನ್ನು ಪರಿಹರಿಸಿ, ತಮ್ಮ ಮಯ್ ಮನದ ಬಯಕೆಗಳೆಲ್ಲವನ್ನೂ ಈಡೇರಿಸಿ, ತಮ್ಮನ್ನು ಕಾಪಾಡುವ ಒಬ್ಬ ವ್ಯಕ್ತಿಯನ್ನಾಗಿ ಇಲ್ಲವೇ ಒಂದು ಶಕ್ತಿಯನ್ನಾಗಿ ದೇವರನ್ನು ಮಾನವರು ಕಲ್ಪಿಸಿಕೊಂಡು, ದೇವರ ಅನುಗ್ರಹವನ್ನು ಪಡೆಯಲೆಂದು ನೂರಾರು ಬಗೆಯ ಪೂಜೆಯ ಆಚರಣೆಯಲ್ಲಿ ತೊಡಗಿದ್ದಾರೆ. ದೇವರ ಬಗೆಗಿನ ಇಂತಹ ಕಲ್ಪನೆ, ನಂಬಿಕೆ ಮತ್ತು ಆಚರಣೆಯನ್ನು ಕ್ರಿ.ಶ.ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ನಿರಾಕರಿಸಿದ್ದರು.

ಏಕೆಂದರೆ ಮಾನವರ ಬದುಕಿನ ನೋವು ನಲಿವಿಗೆ ಮತ್ತು ಒಳಿತು ಕೆಡುಕಿಗೆ ನಿಸರ್‍ಗದಲ್ಲಿ ನಡೆಯುವ ಕ್ರಿಯೆಗಳಾದ ಅತಿ ಹೆಚ್ಚಾದ ಮಳೆ ಇಲ್ಲವೇ ಮಳೆಯೇ ಇಲ್ಲದಿರುವುದು; ಬಿರುಗಾಳಿ; ಬೂಕಂಪನ, ಅಗ್ನಿಪರ್‍ವತದಿಂದ ಲಾವಾರಸ ಉಕ್ಕೆದ್ದು ಹರಿಯುವುದು; ಕ್ರಿಮಿಕೀಟಗಳಿಂದ ರೋಗರುಜಿನಗಳ ಹರಡುವಿಕೆ ಮತ್ತು ಮಾನವರ ಒಳ್ಳೆಯ ಇಲ್ಲವೇ ಕೆಟ್ಟ ನಡೆನುಡಿಗಳೇ ಕಾರಣವೆಂಬ ವಾಸ್ತವವನ್ನು ಅರಿತುಕೊಂಡು ಬಾಳುತ್ತಿದ್ದರು. ಆದ್ದರಿಂದಲೇ ಅವರು ಕಲ್ಲು/ಮಣ್ಣು/ಮರ/ಲೋಹದಿಂದ ಮಾಡಿದ ವಿಗ್ರಹರೂಪಿಯಾದ ದೇವರಿಂದ ಮತ್ತು ದೇವಾಲಯಗಳಿಂದ ದೂರಸರಿದು, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳುತ್ತಿದ್ದರು.

ಆವ=ಯಾವ/ಯಾವುದೇ ಬಗೆಯ; ಕಾಯಕ+ಆದಡೂ; ಕಾಯಕ=ದುಡಿಮೆ/ಕೆಲಸ; ಆದಡೂ=ಆದರೂ/ಆಗಿದ್ದರೂ; ಸ್ವಕಾಯಕ=ತನ್ನ ಪಾಲಿಗೆ ಬಂದ ಕೆಲಸ/ತಾನು ಮಾಡಬೇಕಾದ ಕೆಲಸ;

ಆವ ಕಾಯಕವಾದಡೂ ಸ್ವಕಾಯಕವ ಮಾಡಿ=ಶಿವಶರಣಶರಣೆಯರ ಪಾಲಿಗೆ ‘ಕಾಯಕ ’ ಎನ್ನುವುದು ಜೀವನದಲ್ಲಿ ಬಹು ದೊಡ್ಡ ಸಂಗತಿಯಾಗಿತ್ತು. ಕಾಯಕ ಎಂದರೆ ಅದು ಕೇವಲ ದುಡಿಮೆಯಲ್ಲ. ವ್ಯಕ್ತಿಯು ಮಾಡುವ ದುಡಿಮೆಯು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿರಬೇಕು. ಅಂತಹ ಒಳ್ಳೆಯ ದುಡಿಮೆಯನ್ನು ಮಾತ್ರ ಅವರು ‘ಕಾಯಕ’ ಎಂದು ಪರಿಗಣಿಸಿದ್ದರು. ಆದ್ದರಿಂದ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಉದ್ದೇಶ ಮತ್ತು ಪ್ರಾಮಾಣಿಕತನದಿಂದ ತನ್ನ ಕಾಯಕದಲ್ಲಿ ತೊಡಗಿ;

ಗುರು=ಒಳ್ಳೆಯ ನಡೆನುಡಿಗಳನ್ನು ಕಲಿಸುವ ವ್ಯಕ್ತಿ; ಲಿಂಗ=ನಿಜದ ನಡೆನುಡಿಗಳಿಗೆ ಸಂಕೇತವಾಗಿರುವ ದೇವರಾದ ಶಿವ; ಜಂಗಮ=ಸಮಾಜದ ವ್ಯವಸ್ತೆಯಲ್ಲಿ ಮತ್ತು ಜನರ ನಡೆನುಡಿಗಳಲ್ಲಿ “ಯಾವುದು ಸರಿ/ಯಾವುದು ತಪ್ಪು; ಯಾವುದು ವಾಸ್ತವ/ಯಾವುದು ಕಲ್ಪನೆ; ಯಾವುದು ದಿಟ/ಯಾವುದು ಸಟೆ ” ಎಂಬ ಸಾಮಾಜಿಕ ಅರಿವನ್ನು ಮತ್ತು “ಯಾವುದನ್ನು ಮಾಡಬೇಕು/ಯಾವುದನ್ನು ಮಾಡಬಾರದು” ಎಂಬ ಎಚ್ಚರವನ್ನು ಜನಸಮುದಾಯದ ಮನದಲ್ಲಿ ಮೂಡಿಸುತ್ತ, ಎಲ್ಲಿಯೂ ಒಂದೆಡೆ ನೆಲಸದೆ ನಿರಂತರವಾಗಿ ಸಂಚರಿಸುತ್ತಿರುವ ವ್ಯಕ್ತಿ; ಮುಂದೆ+ಇಟ್ಟು;

ಗುರು ಲಿಂಗ ಜಂಗಮದ ಮುಂದಿಟ್ಟು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ವ್ಯಕ್ತಿಯು ತಾನು ಮಾಡುವ ಕಾಯಕಕ್ಕೆ ಗುರು ಲಿಂಗ ಜಂಗಮವನ್ನೇ ಸಾಕ್ಶಿಯನ್ನಾಗಿ ಇಟ್ಟುಕೊಂಡು; ಅಂದರೆ ಕೆಟ್ಟದ್ದನ್ನು ನುಡಿಯಬಾರದು ಮತ್ತು ಕೆಟ್ಟ ಕೆಲಸವನ್ನು ಮಾಡಬಾರದು ಎಂಬ ಎಚ್ಚರವನ್ನು ಸದಾಕಾಲ ಹೊಂದಿದವನಾಗಿ;

ಒಕ್ಕು=ಬಲಿತ ತೆನೆಯಿಂದ ಕೂಡಿರುವ ಬತ್ತ ರಾಗಿ ಜೋಳ ಮುಂತಾದ ಪಯಿರಿನಿಂದ ಕಾಳನ್ನು ಹೊರತೆಗೆಯುವುದು; ಹಾರೈಸು=ಬಯಸು; ಮಿಕ್ಕು=ಉಳಿದುದ್ದು; ಕೈಕೊಂಡು=ಪಡೆದು;

ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು=ಪಯಿರಿನಿಂದ ತೆನೆಯನ್ನು ಬೇರ್‍ಪಡಿಸಿ, ಮತ್ತೆ ತೆನೆಯಿಂದ ಕಾಳನ್ನು ಬಿಡಿಸಿ, ಅನಂತರ ಕಾಳುಗಳಲ್ಲಿರುವ ಜಳ್ಳನ್ನು ಹೊರಹಾಕಿ, ಉಳಿದ ಗಟ್ಟಿಯಾದ ಕಾಳನ್ನು ಪಡೆದುಕೊಂಡು;

ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ವ್ಯಕ್ತಿಯು ತಾನು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಮಾಡುವ ಯಾವುದೇ ಬಗೆಯ ಒಳ್ಳೆಯ ಕಾಯಕದಿಂದ ತಾನು ಬಯಸಿದ್ದನ್ನು ಪಡೆದುಕೊಂಡು ಬಾಳುವುದನ್ನು ಕಲಿಯಬೇಕು;

ವ್ಯಾಧಿ=ರೋಗ/ಕಾಯಿಲೆ; ಬಂದಡೆ=ಬಂದರೆ; ನರಳು=ಮಯ್ ಮನಸ್ಸಿಗೆ ತೊಂದರೆಯಾದಾಗ ಸಂಕಟದ ದನಿಯಿಂದ ಮುಲುಕುವುದು; ಬೇನೆ=ತೊಂದರೆ/ಸಂಕಟ; ಒರಲು=ಅರಚು/ಕಿರುಚು/ಚೀರು; ಜೀವ=ಉಸಿರು/ಪ್ರಾಣ; ಹೋದಡೆ=ಹೋದರೆ; ಸಾಯಿ=ಉಸಿರನ್ನು ಬಿಡು/ಸಾವನ್ನು ಅಪ್ಪು; ಇದಕ್ಕೆ+ಆ; ಇದಕ್ಕೆ=ಇಂತಹ ರೋಗ, ಬೇನೆ, ಸಾವುಗಳಿಗೆ; ದೇವರು=ವಾಸ್ತವದಲ್ಲಿ ಇಲ್ಲದ ಕೇವಲ ಮನದ ಕಲ್ಪನೆಯಲ್ಲಿರುವ ವ್ಯಕ್ತಿ ಇಲ್ಲವೇ ಶಕ್ತಿ; ಹಂಗು+ಏಕೆ; ಹಂಗು=ಅವಲಂಬನೆ/ರುಣ;

ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ… ಇದಕ್ಕೆ ಆ ದೇವರ ಹಂಗೇಕೆ=ಈ ಜಗತ್ತಿನಲ್ಲಿ ಹುಟ್ಟಿದ ಜೀವಿಗಳೆಲ್ಲವೂ, ಪ್ರಾಣಿಗಳಾಗಿರಲಿ/ಕ್ರಿಮಿಕೀಟಗಳಾಗಿರಲಿ/ಗಿಡಮರಗಳಾಗಿರಲಿ/ಮಾನವರಾಗಿರಲಿ, ಒಂದಲ್ಲ ಒಂದು ಬಗೆಯ ರೋಗಕ್ಕೆ, ಸಂಕಟಕ್ಕೆ ಮತ್ತು ಕಟ್ಟಕಡೆಯಲ್ಲಿ ಸಾವಿಗೆ ಒಳಗಾಗಲೇ ಬೇಕು. ಅದು ನಿಸರ್‍ಗದ ನಿಯಮ.

ಬೂಮಿ, ಬೆಂಕಿ, ವಾಯು ಮತ್ತು ನೀರಿನಿಂದ ಕೂಡಿದ ನಿಸರ್‍ಗದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಿಂದ ಜೀವಿಗಳು ಹುಟ್ಟುತ್ತವೆ, ಬೆಳೆಯುತ್ತವೆ, ಸಾಯುತ್ತವೆ. ಈ ಕ್ರಿಯೆಗಳಿಗೂ ದೇವರಿಗೂ ಯಾವುದೇ ನಂಟು ಇಲ್ಲ. ಏಕೆಂದರೆ ನಿಸರ್‍ಗವೆಂಬುದು ವಾಸ್ತವ, ದೇವರು ಎನ್ನುವುದು ಮಾನವನ ಮನದಲ್ಲಿ ಮೂಡಿರುವ ಕಲ್ಪನೆ. ಆದ್ದರಿಂದ ಮಾನವನು ನಿಸರ್‍ಗದ ಆಗುಹೋಗುಗಳೊಡನೆ ಹೊಂದಿಕೊಂಡು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಬೇಕು; ಮಾನವನು ತನ್ನ ಬದುಕಿಗೆ ಅಗತ್ಯವಾದ “ಅನ್ನ. ಬಟ್ಟೆ. ವಸತಿ. ವಿದ್ಯೆ, ಉದ್ಯೋಗ, ಆರೋಗ್ಯ” ವನ್ನು ನಿಸರ್‍ಗದಿಂದ ಮತ್ತು ತನ್ನ ಪರಿಶ್ರಮದಿಂದ ಪಡೆಯುತ್ತಾನೆಯೇ ಹೊರತು ದೇವರಿಂದಲ್ಲ. ಆದ್ದರಿಂದ ಮಾನವನು ದೇವರ ಅನುಗ್ರಹಕ್ಕಾಗಿ ಇಲ್ಲವೇ ದೇವರ ಕರುಣೆಗಾಗಿ ಹಾತೊರೆಯಬಾರದು;

ಭಾಪು=ಮೆಚ್ಚುಗೆಯನ್ನು/ಆನಂದವನ್ನು ಸೂಚಿಸುವಾಗ ಆಡುವ ಪದ; ಲದ್ದೆ=ಹೊರೆ/ಹೇರು; ಹುಲ್ಲಿನ ಹೊರೆಯನ್ನು ಮಾರುವ ಕಾಯಕವನ್ನು ಲದ್ದೆಯ ಸೋಮಯ್ಯನವರು ಮಾಡುತ್ತಿದ್ದರು ಎಂಬ ಊಹೆಯಿದೆ;

ಲದ್ದೆಯ ಸೋಮ=ವಚನಕಾರರು ತಮ್ಮ ಹೆಸರನ್ನೇ ತಾವು ರಚಿಸಿದ ವಚನದ ಅಂಕಿತನಾಮವಾಗಿ ಬಳಸಿದ್ದಾರೆ.

(ಚಿತ್ರ ಸೆಲೆ: sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications