ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 1

– ಸಿ.ಪಿ.ನಾಗರಾಜ.

ಕವಿ ಪರಿಚಯ

ಹೆಸರು: ಕುಮಾರವ್ಯಾಸ
ಕಾಲ: ಕ್ರಿ.ಶ. 1400
ಊರು: ಕೋಳಿವಾಡ ಗ್ರಾಮ. ಈಗಿನ ಗದಗ ಜಿಲ್ಲೆ, ಕರ್‍ನಾಟಕ ರಾಜ್ಯ
ಕವಿಯ ಮೆಚ್ಚಿನ ದೇವರು: ಗದುಗಿನ ವೀರನಾರಾಯಣ
ರಚಿಸಿದ ಕಾವ್ಯ: ಕರ್ಣಾಟ ಭಾರತ ಕಥಾಮಂಜರಿ (ಹತ್ತು ಪರ್‍ವಗಳು, ಭಾಮಿನಿ ಷಟ್ಪದಿಯ 8,270 ಪದ್ಯಗಳು.)

(ಕುಮಾರವ್ಯಾಸ ಕವಿಯ ವ್ಯಕ್ತಿಗತ ಜೀವನದ ವಿವರಗಳು ತಿಳಿದುಬಂದಿಲ್ಲ. ನಿಜ ಜೀವನದಲ್ಲಿ ‘ನಾರಣಪ್ಪ’ ಎಂಬ ಹೆಸರು ಕವಿಗೆ ಇದ್ದಿರಬಹುದೆಂದು ಸಾಹಿತ್ಯ ಚರಿತ್ರಕಾರರಲ್ಲಿ ಕೆಲವರು ಊಹಿಸಿದ್ದಾರೆ. ‘ಕುಮಾರವ್ಯಾಸ’  ಎಂಬುದು ಕವಿಯ ಕಾವ್ಯನಾಮ. ಗದುಗಿನ ಭಾರತ/ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ  ಕಾವ್ಯವು ಜನಪ್ರಿಯವಾಗಿದೆ.)

*** ಕೀಚಕನ  ಪ್ರಸಂಗ ***

(ಕುಮಾರವ್ಯಾಸ ಬಾರತ ಕಾವ್ಯದಲ್ಲಿನ  ವಿರಾಟಪರ್‍ವದ ಎರಡನೆಯ ಮತ್ತು ಮೂರನೆಯ  ಸಂದಿಯಿಂದ ಆಯ್ದ 166 ಪದ್ಯಗಳನ್ನು ನಾಟಕ ರೂಪಕ್ಕೆ ಜೋಡಿಸಲಾಗಿದೆ.)

ಪಾತ್ರಗಳು:

ಕೀಚಕ: ಕೇಕಯ ಮತ್ತು ಮಾಲವಿ ದಂಪತಿಯ ಮಗ. ವಿರಾಟರಾಜನ ಹೆಂಡತಿಯಾದ ಸುದೇಷ್ಣೆಯ ತಮ್ಮ.
ಸುದೇಷ್ಣೆ: ವಿರಾಟರಾಜನ ಹೆಂಡತಿ. ಪಟ್ಟದ ರಾಣಿ. ಕೀಚಕನ ಅಕ್ಕ.
ಸೈರಂಧ್ರಿ/ದ್ರೌಪದಿ: ಪಾಂಡವರ ಮಡದಿ. ಈಗ ವಿರಾಟನಗರಿಯ ಪಟ್ಟದ ರಾಣಿ ಸುದೇಷ್ಣೆಯ ರಾಣಿವಾಸದಲ್ಲಿ ದಾಸಿಯಾಗಿದ್ದಾಳೆ.
ಬಾಣಸಿಗ – ಭೀಮ: ಪಾಂಡುರಾಜ ಮತ್ತು ಕುಂತಿಯ ಮಗ. ಈಗ ವಿರಾಟರಾಜನ ಅರಮನೆಯ ಅಡುಗೆಮನೆಯಲ್ಲಿ ಬಾಣಸಿಗನಾಗಿದ್ದಾನೆ.
ಕಂಕಭಟ್ಟ – ಧರ್ಮರಾಯ: ಪಾಂಡುರಾಜ ಮತ್ತು ಕುಂತಿಯ ಮಗ. ಈಗ ವಿರಾಟರಾಜನ ಆಪ್ತ ಪರಿಚಾರಕನಾಗಿದ್ದಾನೆ.
ಕೀಚಕನ ಸೋದರರು: 105 ಮಂದಿ

*** ಕೀಚಕನ  ಪ್ರಸಂಗ: ನೋಟ – 1 ***

ಕೇಳು ಜನಮೇಜಯ ಧರಿತ್ರೀಪಾಲ, ನಿಮ್ಮಯ ಪೂರ್ವ ಪೃಥ್ವೀಪಾಲರು ವಿರಾಟನಗರಿಯಲಿ ಗುಪುತದಿಂದ ಇದ್ದರು. ಹತ್ತು ತಿಂಗಳ ಮೇಲೆ ಕಾಲ ಸವೆದುದು. ಮತ್ತೊಂದು  ಅತಿಶಯೋಕ್ತಿಯನು  ವಿಸ್ತರದೊಳು ಅರುಪುವೆನು ಆಲಿಸೈ ಎಂದನಾ ಮುನಿಪ. ಆ ವಿರಾಟನ ರಾಜಧಾನಿಯೊಳು ಈ ವಿಳಾಸದಿ ಮುಸುಕಿ ತಾವ್ ಪರಸೇವೆಯಲಿ ಪಾಂಡವರು ಹತ್ತು ಮಾಸವನು ಕಳೆದರು. ರಾವಣನು ಮುನ್ನಂದು ಸೀತಾದೇವಿಗೆ ಅಳುಪಿದ ಕಥೆಯ ವೋಲ್ ಸಂಭಾವಿಸಿದ ಕೀಚಕ ವಿಡಂಬವ ಕೇಳು ಭೂಪಾಲ.

ಒಂದು ದಿವಸ ವಿರಾಟನ ಅರಸಿಯ ಮಂದಿರಕ್ಕೆ ಆಕೆಯ ತಮ್ಮ ಅತುಳ ಭುಜಬಲ ಕೀಚಕನು ಓಲೈಸಲೆಂದು ಐತಂದನು. ಹಿಂದೆ ಮುಂದೆ ಇಕ್ಕೆಲದ ಸತಿಯರ ಸಂದಣಿಯ ಮಧ್ಯದಲಿ ಮೆರೆವ ಅರವಿಂದ ವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ಅನುಜನನು ಅಂಗನೆ ತೆಗೆದಪ್ಪಿ ಮನದಣಿಯಲು ಸಿಂಹಾಸನದ ಕೆಲದಲಿ ತತ್ ಸಹೋದರನ ಕುಳ್ಳಿರಿಸಿ ಮನ್ನಿಸಿದಳೈ. ತನುಪುಳಕ ತಲೆದೋರಲು ಅವನು ಉಬ್ಬಿನಲಿ ಸತ್ಕೃತನಾಗಿ ಸುದೇಷ್ಣೆಯ ಮೇಳದ ಅಬಲೆಯರ ಕಮಳಾನನೆಯರನು ಕಂಡನು.

ಅವಯವದ ಪರಿಮಳದ ಪಸರಕೆ ಕವಿವ ತುಂಬಿಯ ಸಾರ ಸಂಗೀತವನು ಕೇಳುತ ಅವರ ಮಧ್ಯದಲಿ ನದಿಗಳೊಳ್ ಜಾಹ್ನವಿಯ, ಅಮಲ ತಾರಾ ನಿವಹದಲಿ ರೋಹಿಣಿಯವೋಲ್, ಸುರ ಯುವತಿಯರಲಿ ಊರ್ವಶಿಯವೋಲ್ ಪಾಂಚಾಲ ನಂದನೆಯ ಅವ ಕಂಡನು. ಅವನು ಮೊದಲೊಳು ಅವಳ ಅಂಗವಟ್ಟವನು ಒದವಿ ನೋಡಿದೊಡೆ ಅಲ್ಲಿಯೇ ಗಾಢದಲಿ ನೆಟ್ಟವು. ಆಲಿಗಳನು ಅಲುಗಿ ಕೀಳಲು ಅರಿದಾಯ್ತು. ಮದನ ಮಸೆದೋರಿದನು. ಹೂಗಣೆ ಹೃದಯವನು ತಾಗಿದುದು. ಹರ ಹರ… ಖಳನು ಒಂದು ನಿಮಿಷದಲಿ ಹೆದರಿದನು ಹಮ್ಮೈಸಿದನು. “ ನಿಂದು ನೋಡಿದ ದ್ರೌಪದಿಯ ಮೊಗದ ಅಂದವನು ಕಂಡಾಗ ಕೀಚಕ ನೊಂದನು ” ಎನೆ ಮೊಗ ತೆಗೆಯಲು ಕಾಮ ಕೈಗೂಡಿ ಎಚ್ಚನು. ಅಂದು ಕೀಚಕ ಬೆರಗಾದನು.

ಕೀಚಕ: (ತನ್ನ ಮನದಲ್ಲಿಯೇ) ಇಂದು ವಿಳಾಸಿನಿ ಮನವನು ತಳೆದಳು.

(ಎಂದು ಭಾವಿಸಿ ಕದಪಿನಲಿ ಕರತಳವ ಚಾಚಿದನು)

ತಿಳಿ, ಇವಳಾರು?… ಇವಳು ಮೂಜಗವ ಮೋಹಿಪ ತಿಲಕವೋ… ಕಾಮಂಗೆ ಕಟ್ಟಿದ ಕಳನ ಭಾಷೆಗೆ  ನಿಂದ ಮಾಸಾಳೋ… ಮಹಾದೇವ… ಕೊಲೆಗಡಿಗ ಕಂದರ್ಪಕನ ಕೂರಲಗೊ… ಮದನನ ಸೊಕ್ಕಿದಾನೆಯೊ… ನಳಿನಮುಖಿ ಇವಳಾರ ಸತಿ?

(ಎಂದು ಅಳುಪಿ ನೋಡಿದನು.)

ಜಗವ ಕೆಡಹಲು ಜಲಜವಿಶಿಖನು ಬಿಗಿದ ಬಲೆಯಿವಳಲ್ಲಲೇ. ಯೋಗಿಗಳ ಯತಿಗಳನು ಎಸಲು ಕಾಮನು ಮಸೆದ  ಕೂರಲಗು.

(ಕೀಚಕ ಮುಗುದನಾದನು. ಕಾಮನ ಅಂಬುಗಳು ಎದೆಯಲಿ ಉಗಿದವು. ನಟ್ಟ ದೃಷ್ಟಿಯ  ತೆಗೆಯಲಾಗದೆ ಸೋತು ಪಾತಕವ ನೆನೆದ. ಸೂರೆಹೋಯಿತು ಚಿತ್ತ. ಕಂಗಳು ಮಾರುಹೋದವು. ಖಳನ ಧೈರ್ಯವು ತೂರಿ ಪೋದುದು. ಕರಣದಲಿ ಕಳವಳದ  ಬೀಡಾಯ್ತು. ಮೀರಿ ಪೊಗುವ ಅಂಗಜನ ಶರದಲಿ ಹೃದಯ ದೋರುವೋಯಿತು.)

ಕಣ್ ಇರಿಗಾರೆ ಇವಳಾರು?

(ಎನುತ  ನಿಮಿಷದಲಿ ಗಜಬಜಿಸಿದನು.)

ರತಿಯ ಚೆಲುವು ಅಂತಿರಲಿ… ಸಿರಿ ಪಾರ್ವತಿಯ ರೂಪು ಅಂತಿರಲಿ… ಬೊಮ್ಮನ ಸತಿಯ ಸೊಬಗು  ಅಂತಿರಲಿ… ಆ ಬಾಲಕಿಯ ರೂಪಿಂಗೆ ಪ್ರತಿಯ ಕಾಣೆನು. ಪಾಂಡವರ ದುರುಪತಿಯ ರೂಪಿಂಗೆ ಐದು  ಮಡಿ. ಆ ಸತಿಯ ವಿಭ್ರಮವು  ಎನ್ನಯ  ಮನವನು ಐದಿತು.

(ಎನುತ ಇರ್ದ. ಅರಿವು ತಲೆಕೆಳಗಾಯ್ತು. ಧೈರ್ಯದ ನಿರಿಗೆ ನಗೆಗೆ ಎಡೆಯಾಯ್ತು. ಲಜ್ಜೆಯ ಹೊರಗೆ ಬರಿದೊರೆಯಾಯ್ತು. ಭಯ ಬೀಜ ಕರಿಮೊಳೆಯೋಯ್ತು. ಮರವೆ ಗರಿಗಟ್ಟಿತುಮನೋಭನ ಇರಿಗೆಲಸ ಬಲುಹಾಯ್ತು. ಆತನ ತನುವಿನ ಅಂತಸ್ತಾಪದ ಏಳ್ಗೆಯನು ಹೊಗಳುವಡೆ ಅರಿಯೆನು. ಲಜ್ಜೆ ಬೀಳುಗೊಂಡುದು. ಮಹಿಮೆಯ ಕೀಳು ಕಳಚಿತು. ದ್ರುಪದ ತನುಜೆಯನು ಆಲಿಯಲಿ ನುಂಗಿದನು. ಮನದಲಿ ಸತಿಯ ಸೆರೆವಿಡಿದು… )

ಕೀಚಕ: ಅಕ್ಕ, ಬಿನ್ನಹವು ಕೇಳು, ನಿಮ್ಮ ಅಡಿ ಓಲೆಕಾತಿಯರೊಳಗೆ ಮೀಟಿನ  ಮೇಲುಗೈ ಇವಳು ಆವಳು?

ಸುದೇಷ್ಣೆ: ಈಕೆ ಗಂಧರ್ವರ ರಮಣಿ. ನಮ್ಮಾಕೆಯಾಗಿರೆ ಮಾನ್ಯ ವೃತ್ತಿಯೊಳು ಈಕೆಯನು ಸಲಹುವೆವು. ಇವಳ ವಲ್ಲಭರು ಬಲ್ಲಿದರು. ನಿಂದಿರು. ಕಾಕನಾಡದಿರು. ಈಕೆ ನಿನಗೆ ಅಹಳಲ್ಲ ಸಾಕು ಬಿಡಾರಕ್ಕೆ ನೀ ಹೋಗು.

ಪದ ವಿಂಗಡಣೆ ಮತ್ತು ತಿರುಳು

ಜನಮೇಜಯ=ಹಸ್ತಿನಾವತಿಯನ್ನು ಆಳುತ್ತಿರುವ ಪಾಂಡುವಂಶದ ರಾಜ. ಮದ್ರಾವತಿ ಮತ್ತು ಪರೀಕ್ಶಿತ ದಂಪತಿಯ ಮಗ. ಜನಮೇಜಯ ರಾಜನ  ತಂದೆಯಾದ ಪರೀಕ್ಶಿತನು ಅಬಿಮನ್ಯು ಮತ್ತು ಉತ್ತರೆ ದಂಪತಿಯ ಮಗ. ಪರೀಕ್ಶಿತನ ತಂದೆಯಾದ ಅಬಿಮನ್ಯುವು ಸುಬದ್ರೆ ಮತ್ತು ಅರ್‍ಜುನ ದಂಪತಿಯ ಮಗ;  ಧರಿತ್ರೀ=ಭೂಮಿ; ಪಾಲ=ಕಾಪಾಡುವವನು; ವೈಶಂಪಾಯನ=ಒಬ್ಬ ಮುನಿ;

ಕೇಳು ಜನಮೇಜಯ ಧರಿತ್ರೀಪಾಲ=ವೈಶಂಪಾಯನ ಮುನಿಯು ವ್ಯಾಸರು ರಚಿಸಿದ ಮಹಾಭಾರತದ ಕತೆಯನ್ನು ಮತ್ತೊಮ್ಮೆ ಪಾಂಡುವಂಶದ ಅರಸನಾದ ಜನಮೇಜಯನಿಗೆ ಹೇಳತೊಡಗಿದ್ದಾನೆ;

ನಿಮ್ಮಯ=ನಿಮ್ಮ ವಂಶಕ್ಕೆ ಸೇರಿದ; ಪೂರ್ವ=ಹಿಂದಿನ; ಪೃಥ್ವೀ=ಬೂಮಿ; ಪೃಥ್ವೀಪಾಲರು=ಬೂಮಿಯನ್ನು ಕಾಪಾಡುವವರು/ರಾಜರು ; ಗುಪುತ=ಗುಟ್ಟು/ರಹಸ್ಯ ;

ನಿಮ್ಮಯ ಪೂರ್ವ ಪೃಥ್ವೀಪಾಲರು ವಿರಾಟನಗರಿಯಲಿ ಗುಪುತದಿಂದ ಇದ್ದರು=ನಿಮ್ಮ ವಂಶಕ್ಕೆ ಸೇರಿದ ಹಿರಿಯರಾದ ಪಾಂಡವರು ವಿರಾಟನಗರಿಯಲ್ಲಿ ರಹಸ್ಯವಾಗಿ ನೆಲೆಸಿದ್ದಾರೆ. ದುರ್‍ಯೋದನ ಮತ್ತು ದರ್‍ಮರಾಯನ ನಡುವೆ ನಡೆದ ಜೂಜಿನ ಆಟದಲ್ಲಿ ದರ್‍ಮರಾಯನು ಸಕಲ ಸಂಪತ್ತನ್ನು ಕಳೆದುಕೊಂಡಿದ್ದರಿಂದ,  ಪಾಂಡವರು ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶ ಅಜ್ನಾತವಾಸಕ್ಕೆ ಗುರಿಯಾಗಿದ್ದರು.  ಹನ್ನೆರಡು ವರುಶ ವನವಾಸವನ್ನು ಪೂರಯಿಸಿ,  ಒಂದು ವರುಶದ ಅಜ್ನಾತವಾಸವನ್ನು ಕಳೆಯಲೆಂದು  ವಿರಾಟನಗರದ  ಅರಮನೆಯಲ್ಲಿಯೇ ಎಲ್ಲರೂ ಮಾರುವೇಶದಿಂದ ನೆಲೆಸಿದ್ದಾರೆ ;

ಸವೆ=ತೀರು/ಮುಗಿ;

ಹತ್ತು ತಿಂಗಳ ಮೇಲೆ ಕಾಲ ಸವೆದುದು=ಪಾಂಡವರು ವಿರಾಟನಗರಿಗೆ ಬಂದು ಈಗಾಗಲೇ ಹತ್ತು ತಿಂಗಳ ಮೇಲಾಗಿದೆ;

ಅತಿಶಯ+ಉಕ್ತಿಯನು; ಅತಿಶಯ=ಹೆಚ್ಚಳ; ಉಕ್ತಿ=ಮಾತು/ಹೇಳಿಕೆ; ಅತಿಶಯೋಕ್ತಿ=ದೊಡ್ಡ ಸಂಗತಿ; ವಿಸ್ತರ=ವಿವರವಾಗಿ; ಅರುಪು=ತಿಳಿಸು/ಹೇಳು; ಆಲಿಸು=ಕೇಳು; ಮುನಿಪ=ದೊಡ್ಡ ಮುನಿ ;

ಮತ್ತೊಂದು  ಅತಿಶಯೋಕ್ತಿಯನು  ವಿಸ್ತರದೊಳು ಅರುಪುವೆನು ಆಲಿಸೈ ಎಂದನಾ ಮುನಿಪ=ಮುನಿಯು ರಾಜನನ್ನು ಕುರಿತು…ವಿರಾಟನಗರಿಯಲ್ಲಿ ನಡೆದ ಮತ್ತೊಂದು ದೊಡ್ಡ ಸಂಗತಿಯನ್ನು ಈಗ ವಿವರವಾಗಿ ಹೇಳುತ್ತೇನೆ… ಮನವಿಟ್ಟು ಕೇಳು ಎಂದನು;

ರಾಜಧಾನಿ=ರಾಜ್ಯದ ಆಡಳಿತ ಕೇಂದ್ರವಾಗಿರುವ ಊರು ;  ವಿಳಾಸ=ರೀತಿ/ಬಗೆ/ಅಂದ; ಮುಸುಕು=ಗುಟ್ಟು/ರಹಸ್ಯ ;

ಈ ವಿಳಾಸದಿ ಮುಸುಕಿ=ಈ ರೀತಿ ಮಾರುವೇಶವನ್ನು ತೊಟ್ಟು;

ದರ್‍ಮರಾಯನು ‘ ಕಂಕಬಟ್ಟ’ನೆಂಬ ಹೆಸರಿನಿಂದ ರಾಜನಾದ ವಿರಾಟರಾಯನಿಗೆ ಆಪ್ತ ಪರಿಚಾರಕನಾದನು; ಬೀಮನು ಅರಮನೆಯಲ್ಲಿ ಬಾಣಸಿಗನಾದನು; ಅರ್‍ಜುನನು ಅರೆವೆಣ್ಣಿನ ಉಡುಗೆ ತೊಡುಗೆಯನ್ನು ತೊಟ್ಟು ರಾಣಿವಾಸದಲ್ಲಿ  ವಿರಾಟರಾಜನ ಮಗಳಿಗೆ ನಾಟ್ಯ ವಿದ್ಯೆಯನ್ನು ಕಲಿಸುವ ಗುರುವಾದನು; ನಕುಲನು ಅಶ್ವಪಾಲಕನಾಗಿ ಮತ್ತು ಸಹದೇವನು ಗೋಪಾಲಕನಾಗಿ ರಾಜಾಶ್ರಯವನ್ನು ಪಡೆದರು. ದ್ರೌಪದಿಯು ಮಹಾರಾಣಿ ಸುದೇಶ್ಣೆಯ ರಾಣಿವಾಸದಲ್ಲಿ ಸೈರಂದ್ರಿಯಾಗಿ ಸೇರಿಕೊಂಡಳು; ಸೈರಂಧ್ರಿ=ದಾಸಿ; ತಾವು=ಪಾಂಡವರು;  ಪರಸೇವೆ=ಇತರರ ಸೇವೆ; ಮಾಸ=ತಿಂಗಳು ;

ಆ ವಿರಾಟನ ರಾಜಧಾನಿಯೊಳು ಈ ವಿಳಾಸದಿ ಮುಸುಕಿ ತಾವ್ ಪರಸೇವೆಯಲಿ ಪಾಂಡವರು ಹತ್ತು ಮಾಸವನು ಕಳೆದರು=ವಿರಾಟನಗರಿಯಲ್ಲಿ ಈ ರೀತಿ ಪಾಂಡವರು ಮಾರುವೇಶದಲ್ಲಿ ರಾಜವಂಶದವರ ಸೇವೆಯನ್ನು ಮಾಡುತ್ತ ಹತ್ತು ತಿಂಗಳನ್ನು ಕಳೆದರು;

ರಾವಣ=ಲಂಕಾ ನಗರದ ರಾಜ; ಮುನ್ನ+ಅಂದು; ಮುನ್ನ=ಮೊದಲು; ಅಂದು=ಆಗ; ಮುನ್ನಂದು=ಈ ಮೊದಲು ತ್ರೇತಾಯುಗದಲ್ಲಿ;  ಸೀತಾದೇವಿ=ರಾಮನ ಹೆಂಡತಿ; ಅಳುಪು=ಬಯಸು/ಕಾಮಿಸು; ವೋಲ್=ಅಂತೆ/ಹಾಗೆ; ಸಂಭಾವಿಸು=ಉಂಟಾಗು; ಕೀಚಕ=ಕೇಕಯ ಮತ್ತು ಮಾಲವಿ ದಂಪತಿಯ ಮಗ. ವಿರಾಟರಾಜನ ಹೆಂಡತಿಯಾದ ಸುದೇಶ್ಣೆಯ ತಮ್ಮ. ವಿರಾಟರಾಯನ ಸೇನಾಪಡೆಯ ನೇತಾರ. ಬೀಮ, ದುರ್‍ಯೋದನ ಮತ್ತು ಕೀಚಕ-ಈ ಮೂವರು  ಗದಾ ವಿದ್ಯೆಯಲ್ಲಿ ಸರಿಸಮಾನವಾದ ಕುಶಲತೆ ಮತ್ತು ಶಕ್ತಿಯನ್ನು ಪಡೆದವರೆಂದು ಹೆಸರಾಗಿದ್ದರು;  ವಿಡಂಬ=ತೊಂದರೆ/ಸಂಕಟ; ಕೀಚಕ ವಿಡಂಬ=ಕೀಚಕನಿಂದ ಉಂಟಾದ ಕೇಡಿನ ಪ್ರಸಂಗ; ಭೂಪಾಲ=ರಾಜ;

ರಾವಣನು ಮುನ್ನಂದು ಸೀತಾದೇವಿಗೆ ಅಳುಪಿದ ಕಥೆಯ ವೋಲ್ ಸಂಭಾವಿಸಿದ ಕೀಚಕ ವಿಡಂಬವ ಕೇಳು ಭೂಪಾಲ=ತ್ರೇತಾಯುಗದಲ್ಲಿ ಲಂಕೆಯ ರಾಜನಾದ ರಾವಣನು ರಾಮನ ಮಡದಿಯಾದ ಸೀತಾದೇವಿಯನ್ನು ಕಾಮಿಸಿ ಅಪಹರಿಸಿದಾಗ ನಡೆದ ದುರಂತದ ಪ್ರಸಂಗದಂತೆಯೇ,  ಈ ದ್ವಾಪರಯುಗದಲ್ಲಿಯೂ  ಕೀಚಕನ ಕಾಮುಕತನದಿಂದ ಉಂಟಾದ  ಪ್ರಸಂಗವನ್ನು ನಿನಗೆ ಹೇಳುತ್ತೇನೆ;

ವಿರಾಟನ ಅರಸಿಯ ಮಂದಿರ=ಸುದೇಶ್ಣೆಯ ರಾಣಿವಾಸ; ಅತುಳ=ಹೋಲಿಕೆಯಿಲ್ಲದ/ಅಸಮಾನವಾದ; ಭುಜಬಲ=ತೋಳ್ಬಲ; ಓಲೈಸು=ಕಾಣಿಕೆ ಕೊಡುವುದು; ಐತರು=ಆಗಮಿಸು/ಬರುವುದು;

ಒಂದು ದಿವಸ ವಿರಾಟನ ಅರಸಿಯ ಮಂದಿರಕ್ಕೆ ಆಕೆಯ ತಮ್ಮ ಅತುಳ ಭುಜಬಲ ಕೀಚಕನು ಓಲೈಸಲೆಂದು ಐತಂದನು=ಒಂದು ದಿನ ಮಹಾಬಲಶಾಲಿಯಾದ ಕೀಚಕನು ಅಕ್ಕನಿಗೆ  ಉಡುಗೊರೆಯನ್ನು ಕೊಡಲೆಂದು ರಾಣಿವಾಸಕ್ಕೆ ಬಂದನು;

ಇಕ್ಕೆಲ=ಎರಡು ಕಡೆಗಳಲ್ಲೂ/ಅಕ್ಕಪಕ್ಕದಲ್ಲಿ; ಸತಿ=ಹೆಂಗಸು; ಸಂದಣಿ=ಗುಂಪು; ಮೆರೆ=ಕಂಗೊಳಿಸು; ಅರವಿಂದ=ತಾವರೆಯ ಹೂವು; ವದನ=ಮುಖ; ಅರವಿಂದ ವದನೆ=ಹೆಣ್ಣಿನ ಸುಂದರವಾದ ಮುಖವನ್ನು ತಾವರೆಯ ಹೂವಿಗೆ ಸಮೀಕರಿಸಿ ಬಣ್ಣಿಸಲಾಗಿದೆ;

ಹಿಂದೆ ಮುಂದೆ ಇಕ್ಕೆಲದ ಸತಿಯರ ಸಂದಣಿಯ ಮಧ್ಯದಲಿ ಮೆರೆವ ಅರವಿಂದ ವದನೆಯ ಕಂಡು=ಸಖಿಯರ ಗುಂಪಿನ ನಡುವೆ ಕಂಗೊಳಿಸುತ್ತಿದ್ದ ಅಕ್ಕನನ್ನು ನೋಡಿ;

ಕಾಣಿಕೆ+ಕೊಟ್ಟು; ಕಾಣಿಕೆ=ಉಡುಗೊರೆ; ಪೊಡಮಡು=ಅಡ್ಡಬೀಳು/ನಮಸ್ಕರಿಸು; ಅನುಜ=ತಮ್ಮ;

ಕಾಣಿಕೆಗೊಟ್ಟು ಪೊಡಮಟ್ಟ ಅನುಜನನು=ಉಡುಗೊರೆಯನ್ನು ನೀಡಿ ನಮಸ್ಕರಿಸಿದ ತಮ್ಮನನ್ನು;

ಅಂಗನೆ=ಹೆಂಗಸು; ತೆಗೆದು+ಅಪ್ಪಿ; ಅಪ್ಪಿ=ಆಲಿಂಗಿಸಿಕೊಂಡು; ಮನ+ತಣಿ; ಮನ=ಮನಸ್ಸು; ತಣಿ=ಆನಂದ;

ಅಂಗನೆ ತೆಗೆದಪ್ಪಿ ಮನದಣಿಯಲು=ಅಕ್ಕನು ತಮ್ಮನನ್ನು  ಆಲಂಗಿಸಿಕೊಂಡು ಆನಂದವನ್ನು ಹೊಂದಿ;

ಕೆಲ=ಮಗ್ಗುಲು/ಪಕ್ಕ; ತತ್=ಆ; ಮನ್ನಿಸು=ಆದರದಿಂದ ಕಾಣು/ಪ್ರೀತಿಯಿಂದ ಸತ್ಕರಿಸು;

ಸಿಂಹಾಸನದ ಕೆಲದಲಿ ತತ್ ಸಹೋದರನ ಕುಳ್ಳಿರಿಸಿ  ಮನ್ನಿಸಿದಳೈ= ಸಿಂಹಾಸನದ ಪಕ್ಕದಲ್ಲಿ ಅವನನ್ನು ಕುಳ್ಳಿರಿಸಿ ಪ್ರೀತಿಯಿಂದ ಸತ್ಕರಿಸಿದಳು;

ತನು=ದೇಹ/ಮಯ್; ಪುಳಕ=ರೋಮಾಂಚನ/ಮಯ್ ನವಿರೇಳುವಿಕೆ; ತಲೆದೋರು=ಕಂಡುಬರುವುದು/ಉಂಟಾಗುವುದು; ಉಬ್ಬು=ಹಿಗ್ಗು/ಹೆಮ್ಮೆ; ಸತ್ಕೃತ=ಸತ್ಕಾರ;

ತನುಪುಳಕ ತಲೆದೋರಲು ಅವನು ಉಬ್ಬಿನಲಿ ಸತ್ಕೃತನಾಗಿ=ಅಕ್ಕನು ನೀಡಿದ ಸತ್ಕಾರದಿಂದ ಪುಳಕಗೊಂಡ ಕೀಚಕನು ಹೆಮ್ಮೆಯಿಂದ ಹಿಗ್ಗಿದನು;

ಮೇಳ=ಗುಂಪು; ಅಬಲೆ=ಹೆಂಗಸು; ಕಮಳ+ಆನನೆ; ಆನನ=ಮುಖ; ಕಮಳಾನನೆ=ಕಮಲದ ಹೂವಿನಂತಹ ಮುಖವುಳ್ಳವಳು/ಸುಂದರಿ;

ಸುದೇಷ್ಣೆಯ ಮೇಳದ ಅಬಲೆಯರ ಕಮಳಾನನೆಯರನು ಕಂಡನು=ರಾಣಿವಾಸದಲ್ಲಿ ಅಕ್ಕನನ್ನು ಸುತ್ತುವರಿದಿದ್ದ  ಗುಂಪಿನಲ್ಲಿ ಸುಂದರಿಯರಾದ ಸಖಿಯರನ್ನು  ಕಂಡನು;

ಅವಯವ=ದೇಹ/ಶರೀರ/ಮಯ್; ಪರಿಮಳ=ಕಂಪು/ಸುವಾಸನೆ; ಪಸರ=ಹಬ್ಬುವಿಕೆ/ಹರಡುವಿಕೆ; ಕವಿ=ಮುತ್ತು/ಎರಗು; ಸಾರ=ಉತ್ತಮವಾದ/ಸೊಗಸಾದ; ಸಂಗೀತ=ಹಾಡು;

ಅವಯವದ ಪರಿಮಳದ ಪಸರಕೆ ಕವಿವ ತುಂಬಿಯ ಸಾರ ಸಂಗೀತವನು ಕೇಳುತ=ರಾಣಿವಾಸದಲ್ಲಿದ್ದ  ಹೆಂಗಸರು ಮುಡಿದಿದ್ದ ಹೂವುಗಳ ಕಂಪನ್ನು ಸವಿಯುತ್ತ ಮುತ್ತಿಕೊಂಡಿದ್ದ ತುಂಬಿಗಳ ಜೇಂಕಾರವನ್ನು ಕೇಳುತ್ತ;

ಅವರ ಮಧ್ಯದಲಿ=ಸುತ್ತುವರಿದಿದ್ದ ಸಖಿಯರ ಗುಂಪಿನಲ್ಲಿ; ಜಾಹ್ನವಿ=ಗಂಗಾ ನದಿ; ನದಿಗಳೊಳ್ ಜಾಹ್ನವಿಯ=ನದಿಗಳಲ್ಲಿ ಗಂಗಾನದಿಯಂತೆ; ಅಮಲ=ಮಲಿನತೆಯಿಲ್ಲದ/ಶುಚಿಯಾದ; ತಾರಾ=ನಕ್ಶತ್ರ/ಚುಕ್ಕಿ; ನಿವಹ=ಗುಂಪು; ವೋಲ್=ಅಂತೆ/ಹಾಗೆ;

ಅಮಲ ತಾರಾ ನಿವಹದಲಿ ರೋಹಿಣಿಯವೋಲ್=ಗಗನದಲ್ಲಿ ಮಿನುಗುತ್ತಿರುವ ಚುಕ್ಕಿಗಳ ಗುಂಪಿನಲ್ಲಿ  ರೋಹಿಣಿ ನಕ್ಶತ್ರದಂತೆ;

ಸುರ=ದೇವತೆ;

ಸುರ ಯುವತಿಯರಲಿ ಊರ್ವಶಿಯವೋಲ್=ದೇವಲೋಕದ ತರುಣಿಯರಲ್ಲಿ ಊರ್‍ವಶಿಯಂತೆ;

ಪಾಂಚಾಲ ನಂದನೆ=ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳು ದ್ರೌಪದಿ;

ಪಾಂಚಾಲ ನಂದನೆಯ ಅವ ಕಂಡನು=ಆ ಗುಂಪಿನಲ್ಲಿ ಎದ್ದುಕಾಣುವಂತೆ ಕಂಗೊಳಿಸುತ್ತಿದ್ದ ಸುಂದರ ರೂಪಿನ ದ್ರೌಪದಿಯನ್ನು ಕೀಚಕನು ನೋಡಿದನು;

ಅಂಗವಟ್ಟ=ಮಯ್ ಕಟ್ಟು; ಒದವು=ನೆಟ್ಟನೆಯ ನೋಟ/ನಾಟು;

ಅವನು ಮೊದಲೊಳು ಅವಳ ಅಂಗವಟ್ಟವನು ಒದವಿ ನೋಡಿದೊಡೆ=ಕೀಚಕನು ಮೊದಲು ಸೈರಂದ್ರಿಯ ಮಯ್ ಕಟ್ಟಿನ ಚೆಲುವನ್ನು ನೆಟ್ಟನೆಯ ನೋಟದಿಂದ ನೋಡತೊಡಗಿದಾಗ;

ಗಾಢ=ಅತಿಶಯ/ಹೆಚ್ಚಳ;

ಅಲ್ಲಿಯೇ ಗಾಢದಲಿ ನೆಟ್ಟವು=ಅವಳ ಮಯ್ ಕಟ್ಟಿನ ಅಂದಚೆಂದವನ್ನೇ ಸವಿಯುತ್ತ ಕೀಚಕನ ಕಣ್ಣುಗಳು ಅಲ್ಲಿಯೇ ನೆಟ್ಟವು. ಈಗ ಕೀಚಕ ಅತ್ತಿತ್ತ ಯಾರನ್ನೂ ನೋಡುತ್ತಿಲ್ಲ. ಯಾವುದನ್ನೂ ಗಮನಿಸುತ್ತಿಲ್ಲ;

ಆಲಿ=ಕಣ್ಣು/ಕಣ್ಣು ಗುಡ್ಡೆ; ಅಲುಗು=ಅತ್ತಿತ್ತ ಆಡಿಸು; ಅರಿದು=ಅಸಾಧ್ಯ/ಆಗದು;

ಆಲಿಗಳನು ಅಲುಗಿ ಕೀಳಲು ಅರಿದಾಯ್ತು=ಸೈರಂದ್ರಿಯನ್ನಲ್ಲದೇ ಮತ್ತೊಬ್ಬರ ಕಡೆಗೆ ಕಣ್ಣುಗಳನ್ನು ತಿರುಗಿಸಲು ಆಗುತ್ತಿಲ್ಲ. ಅವಳಲ್ಲಿಯೇ ಕೀಚಕನ ದಿಟ್ಟಿ ನಾಟಿಕೊಂಡಿದೆ;

ಮದನ=ಕಾಮದೇವ. ಗಂಡು ಹೆಣ್ಣುಗಳ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಮೂಡಿಸಿ, ಅವರನ್ನು ಜತೆಗೂಡಿಸುವ  ಕಾಮದೇವ. ವಿದ್ಯೆಗೆ ಶಾರದೆ, ಹಣಕ್ಕೆ ಲಕ್ಶ್ಮಿ ಎಂಬ ಹೆಸರಿನ ದೇವತೆಗಳು ಇರುವಂತೆಯೇ ಕಾಮಕ್ಕೆ ಮನ್ಮತ/ಮದನ/ಕಾಮ ಎಂಬ ದೇವತೆಯನ್ನು ಜನಮನದಲ್ಲಿ ಕಲ್ಪಿಸಿಕೊಳ್ಳಲಾಗಿದೆ; ಮಸೆ+ತೋರಿದನು; ಮಸೆ=ಉದ್ರೇಕ/ಆವೇಶ; ಮಸೆದೋರಿದನು=ಉದ್ರೇಕಗೊಳಿಸಿದನು;

ಮದನ ಮಸೆದೋರಿದನು=ಕೀಚಕನ ಮಯ್ ಮನದಲ್ಲಿ ಕಾಮದ ಒಳಮಿಡಿತಗಳು ಕೆರಳಿದವು;

ಹೂ+ಕಣೆ; ಕಣೆ=ಬಾಣ; ಹೂಗಣೆ=ಮದನನು ಹೆಣ್ಣುಗಂಡುಗಳ ಮಯ್ ಮನದಲ್ಲಿ ಕಾಮವನ್ನು ಮೂಡಿಸಿ, ಅವರನ್ನು ಉದ್ರೇಕಗೊಳಿಸಲೆಂದು ಹೂವಿನ ಬಾಣವನ್ನು ವ್ಯಕ್ತಿಗಳ ಎದೆಗೆ ಬಿಡುತ್ತಾನೆ ಎಂಬ ಒಂದು ಕಲ್ಪನೆಯಿದೆ; ತಾಗು=ಚುಚ್ಚು/ತಗಲು/ಮುಟ್ಟು;

ಹೂಗಣೆ ಹೃದಯವನು ತಾಗಿದುದು=ಹೂಬಾಣವು ಕೀಚಕನ ಎದೆಗೆ ನಾಟಿಕೊಂಡಿತು. ಅಂದರೆ ಈಗ ಕೀಚಕನು ಮಯ್ ಮನದಲ್ಲಿ ಕಾಮದ ಒಳಮಿಡಿತಗಳು ಮೂಡತೊಡಗಿದವು; ಹರ ಹರ=ಶಿವ ಶಿವ. ಇದೊಂದು ನುಡಿಗಟ್ಟು. ಅಚ್ಚರಿಯನ್ನು ಇಲ್ಲವೇ ಗಾಸಿಯನ್ನು ಉಂಟುಮಾಡುವ ಸಂಗತಿಯೊಂದನ್ನು ಹೇಳುವಾಗ, ಶಿವನ ಹೆಸರನ್ನು ಎರಡು ಬಾರಿ ಹೇಳುವ ನುಡಿಗಟ್ಟನ್ನು ಬಳಸಲಾಗುತ್ತದೆ;

ಖಳ=ನೀಚ/ಕೇಡಿ; ಹಮ್ಮೈಸು=ಎಚ್ಚರತಪ್ಪು/ಮಯ್ ಮರೆ;

ಹರ ಹರ… ಖಳನು ಒಂದು ನಿಮಿಷದಲಿ ಹೆದರಿದನು ಹಮ್ಮೈಸಿದನು=ಸೈರಂದ್ರಿಯನ್ನು ಕಂಡಕೂಡಲೇ ಈ ಬಗೆಯ ಕಾಮದ ಪರಿತಾಪಕ್ಕೆ ತನ್ನ ಮಯ್ ಮನ ಒಳಗಾದುದನ್ನು ಕಂಡು ಕೀಚಕನು ಒಂದು ಅರೆಗಳಿಗೆ ಹೆದರಿದನು… ಎಚ್ಚರತಪ್ಪಿದಂತಾದನು; ಎನೆ=ಎನ್ನಲು;  ಕೈಗೂಡು=ಜತೆಗೂಡು; ಎಚ್ಚು=ಬಾಣ ಪ್ರಯೋಗ ಮಾಡು;

ನಿಂದು ನೋಡಿದ ಕಾಮ “ದ್ರೌಪದಿಯ ಮೊಗದ ಅಂದವನು ಕಂಡಾಗ ಕೀಚಕ ನೊಂದನು” ಎನೆ ಮೊಗ ತೆಗೆಯಲು ಕೈಗೂಡಿ ಎಚ್ಚನು=ಇದೊಂದು ಕಲ್ಪನೆ. ಕೀಚಕನ ಕಾಮದ ನೋಟವನ್ನು ಗಮನಿಸಿದ ಕಾಮದೇವನು “ದ್ರೌಪದಿಯ ಅಂದವನ್ನು ಕಂಡು ಕೀಚಕನು ಕಾಮಕ್ಕೆ ವಶನಾಗಿ ನೊಂದಿದ್ದಾನೆ” ಎನ್ನುತ್ತ, ಕೀಚಕನ ಕಾಮವನ್ನು ಇಮ್ಮಡಿಗೊಳಿಸುವಂತೆ ಮತ್ತೊಂದು ಹೂಬಾಣವನ್ನು ಕೀಚಕನ ಮೇಲೆ ಪ್ರಯೋಗಿಸಿದನು;

ಅಂದು ಕೀಚಕ ಬೆರಗಾದನು=ಸೈರಂದ್ರಿಯ ರೂಪದ ಚೆಲುವನ್ನು ಕಂಡು ಕೀಚಕನು ಅಚ್ಚರಿಗೊಂಡನು;

ವಿಳಾಸಿನಿ=ದಾಸಿ; ತಳೆ=ಹಿಡಿದುಕೊಳ್ಳು/ವಶಪಡಿಸಿಕೊಳ್ಳು;  ಕದಪು=ಗಲ್ಲ; ಕರತಳ=ಅಂಗಯ್; ಚಾಚು=ಒಡ್ಡು;

ಇಂದು ವಿಳಾಸಿನಿ ಮನವನು ತಳೆದಳು ಎಂದು ಭಾವಿಸಿ ಕದಪಿನಲಿ ಕರತಳವ ಚಾಚಿದನು=ಇಂದು ಈ ದಾಸಿಯು ನನ್ನ ಮನಸ್ಸನ್ನು ವಶಪಡಿಸಿಕೊಂಡಳು ಎಂದುಕೊಂಡು, ತನ್ನ ಗಲ್ಲಕ್ಕೆ ಅಂಗಯ್ ಅನ್ನು ಆಸರೆಯಾಗಿ ಒಡ್ಡಿಕೊಂಡು, ಅವಳ ಬಗ್ಗೆ ಕುತೂಹಲಗೊಂಡನು;

ತಿಳಿ, ಇವಳಾರು?=ಇವಳು ಯಾರು ಎಂಬುದನ್ನು ತಿಳಿದುಕೊಳ್ಳಬೇಕು;

ಮೂಜಗ=ಮೂರು+ಜಗ; ಮೂಜಗ=ಜನಮನದ ಕಲ್ಪನೆಯಲ್ಲಿರುವ ದೇವಲೋಕ, ಬೂಲೋಕ, ಪಾತಾಳಲೋಕ ಎಂಬ ಮೂರು ಜಗತ್ತುಗಳು; ಮೋಹ=ಮರುಳುಗೊಳಿಸುವಿಕೆ/ಸೆಳೆತ/ಆಕರ್ಷಣೆ; ತಿಲಕ=ಉತ್ತಮನಾದ ವ್ಯಕ್ತಿ;

ಇವಳು ಮೂಜಗವ ಮೋಹಿಪ ತಿಲಕವೋ=ಮೂಲೋಕವನ್ನೇ ತನ್ನೆಡೆಗೆ ಸೆಳೆದುಕೊಳ್ಳುವಂತಹ ಮಹಾ ಸುಂದರಿಯೋ;

ಕಳ=ರಣರಂಗ; ಕಳನ ಭಾಷೆ=ರಣರಂಗದ ನುಡಿ; ಮಾಸಾಳು=ದೊಡ್ಡ ಈಟಿ;

ಕಾಮಂಗೆ ಕಟ್ಟಿದ ಕಳನ ಭಾಷೆಗೆ  ನಿಂದ ಮಾಸಾಳೋ=ಕಾಮದೇವನನ್ನು ರಣರಂಗದಲ್ಲಿ ಎದುರಿಸಲು ಕಟ್ಟಿರುವ ದೊಡ್ಡ ಈಟಿಯೋ; ಅಂದರೆ ಸೈರಂದ್ರಿಯ ಚೆಲುವು ಕೀಚಕನ ಮನಸ್ಸನ್ನು ಈಟಿಯಂತೆ ಇರಿಯಲಿದೆ;

ಮಹಾದೇವ=ಶಿವ/ಈಶ್ವರ;  ಅಚ್ಚರಿ ಇಲ್ಲವೇ ಸಂಕಟದ  ಸನ್ನಿವೇಶದಲ್ಲಿ “ಹರ ಹರ… ಶಿವ ಶಿವ” ಎಂದು ತೆಗೆಯುವ ಉದ್ಗಾರ;

ಕೊಲೆಗಡಿಗ=ಕೊಲೆ ಮಾಡುವವನು; ಕಂದರ್ಪಕ=ಮದನ/ಮನ್ಮತ/ಕಾಮದೇವ;

ಕೊಲೆಗಡಿಗ ಕಂದರ್ಪಕ=ವ್ಯಕ್ತಿಗಳ ಮಯ್ ಮನದಲ್ಲಿ ಕಾಮವನ್ನು ಕೆರಳಿಸುವ ಕಾಮದೇವ;

ಕೂರ್+ಅಲಗು; ಕೂರ್=ಹರಿತವಾದ; ಅಲಗು=ಬಾಣ; ಕೂರಲಗು=ಹರಿತವಾದ ಬಾಣ;

ಕಂದರ್ಪಕನ ಕೂರಲಗೊ=ಮನ್ಮತನ ಹರಿತವಾದ ಬಾಣವೋ;

ಮದನನ ಸೊಕ್ಕಿದಾನೆಯೊ=ಮದನನ ಸೊಕ್ಕಿದ ಆನೆಯೋ;

ನಳಿನ=ತಾವರೆಯ ಹೂವು; ನಳಿನಮುಖಿ=ಸುಂದರಿ;

ನಳಿನಮುಖಿ ಇವಳಾರ ಸತಿ=ಈ ಸುಂದರಿಯು ಯಾರ ಸತಿಯಾಗಿರಬಹುದು;

ಅಳುಪು=ಬಯಸಿ/ಇಚ್ಚಿಸಿ;

ಎಂದು ಅಳುಪಿ ನೋಡಿದನು=ಅವಳನ್ನು ಪಡೆಯಬೇಕೆಂಬ ಬಯಕೆಯಿಂದ ಮತ್ತೆ ಮತ್ತೆ ಸೈರಂಧ್ರಿಯತ್ತ  ನೋಡಿದನು;

ಕೆಡಹು=ನಾಶಮಾಡು; ಜಲಜ=ತಾವರೆ; ವಿಶಿಖ=ಬಾಣ; ಜಲಜವಿಶಿಖ=ತಾವರೆಯ ಹೂವಿನ ಬಾಣವುಳ್ಳ ಮನ್ಮತ; ಬಿಗಿ=ರಚಿಸು/ಬಿಗಿ; ಬಲೆ+ಇವಳು+ಅಲ್ಲಲೇ; ಅಲ್ಲಲೇ=ಅಲ್ಲವೇ;

ಜಗವ ಕೆಡಹಲು ಜಲಜವಿಶಿಖನು ಬಿಗಿದ ಬಲೆಯಿವಳಲ್ಲಲೇ=ಜಗತ್ತಿನ ಗಂಡಸರನ್ನು ಕಾಮದ ಒಳಮಿಡಿತಗಳಲ್ಲಿ ಸಿಲುಕುವಂತೆ ಮಾಡಲು ಮದನನು ನೆಯ್ದಿರುವ ಬಲೆಯು ಇವಳೇ ಅಲ್ಲವೇ;

ಯೋಗಿ/ಯತಿ=ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡಿರುವ ತಪಸ್ವಿ; ಎಸು=ಬಾಣ ಪ್ರಯೋಗ ಮಾಡು; ಮಸೆ=ಉಜ್ಜು/ಹರಿತಗೊಳಿಸು/ಚೂಪುಮಾಡು;

ಯೋಗಿಗಳ ಯತಿಗಳನು ಎಸಲು ಕಾಮನು ಮಸೆದ  ಕೂರಲಗು=ಇಂದ್ರಿಯನಿಗ್ರಹವನ್ನು ಮಾಡಿಕೊಂಡಿರುವ ತಪಸ್ವಿಗಳ ಮನದಲ್ಲಿ ಕಾಮದ ಒಳಮಿಡಿತಗಳನ್ನು ಕೆರಳಿಸುವುದಕ್ಕಾಗಿ ಮನ್ಮತನು ಹರಿತಗೊಳಿಸಿ ಬಿಟ್ಟಿರುವ ಬಾಣವು ಇವಳೇ ಆಗಿದ್ದಾಳೆ; ಮುಗುದ=ತಿಳಿಗೇಡಿ;

ಕೀಚಕ ಮುಗುದನಾದನು=ಕೀಚಕನು ಅರಿವನ್ನು ಕಳೆದುಕೊಂಡನು; ಅಂಬು=ಬಾಣ; ಉಗಿ=ಚುಚ್ಚು;

ಕಾಮನ ಅಂಬುಗಳು ಎದೆಯಲಿ ಉಗಿದವು=ಮದನನ ಬಾಣಗಳು ಎದೆಯಲ್ಲಿ ನಾಟಿಕೊಂಡವು. ಇದೊಂದು ರೂಪಕ. ಕೀಚಕನ ಮಯ್  ಮನದಲ್ಲಿ ಕಾಮದ ಬೇಗೆ ಹೆಚ್ಚಾಗತೊಡಗಿತು;

ಪಾತಕ=ಕೆಟ್ಟ ಕೆಲಸ;

ನಟ್ಟ ದೃಷ್ಟಿಯ ತೆಗೆಯಲಾಗದೆ  ಸೋತು ಪಾತಕವ ನೆನೆದ=ಸೈರಂದ್ರಿಯ ರೂಪಸಂಪತ್ತಿನಲ್ಲಿ ನಟ್ಟ ನೋಟವನ್ನು ತೆಗೆಯಲಾಗದೆ, ಕಾಮಕ್ಕೆ ವಶನಾಗಿ ಕೆಟ್ಟದನ್ನು ಮಾಡಲು ಆಲೋಚಿಸಿದ;

ಸೂರೆ=ಕೊಳ್ಳೆ/ಲೂಟಿ; ಚಿತ್ತ=ಮನಸ್ಸು;

ಸೂರೆಹೋಯಿತು ಚಿತ್ತ=ಮನಸ್ಸೆಲ್ಲವೂ ಸೈರಂದ್ರಿಯಲ್ಲಿಯೇ ಮಗ್ನವಾಯಿತು; ಕಂಗಳು ಮಾರುಹೋದವು=ಕಣ್ಣುಗಳು ಅವಳತ್ತಲೇ ವಶವಾದುವು;

ಖಳ=ಕೇಡಿ/ನೀಚ;

ಖಳನ ಧೈರ್ಯವು ತೂರಿ  ಪೋದುದು=ನೀಚನಾದ ಕೀಚಕನ ಕೆಚ್ಚು ಹಾರಿ ಹೋಯಿತು;

ಕರಣ=ದೇಹ/ಮಯ್; ಬೀಡು=ನೆಲೆ;

ಕರಣದಲಿ ಕಳವಳದ  ಬೀಡಾಯ್ತು=ದೇಹದಲ್ಲಿ ಕಳವಳವು ನೆಲೆಗೊಂಡಿತು;

ಮೀರಿ=ಅತಿಕ್ರಮಿಸಿ; ಪೊಗು=ಒಳಸೇರು; ಅಂಗಜ=ಮದನ; ಶರ=ಬಾಣ; ದೋರು=ರಂಧ್ರ/ಬಿಲ;

ಮೀರಿ ಪೊಗುವ ಅಂಗಜನ ಶರದಲಿ ಹೃದಯ ದೋರುವೋಯಿತು=ಅತಿಕ್ರಮಿಸಿ ಒಳನುಗ್ಗುತ್ತಿರುವ ಮದನನ ಬಾಣದಿಂದ ಕೀಚಕನ ಎದೆಯಲ್ಲಿ ಬಿರುಕುಂಟಾಯಿತು. ಅಂದರೆ ಕೀಚಕನ ಮಯ್ ಮನದ ಮೇಲೆ ಹೆಚ್ಚಿನ ಗಾಸಿಯುಂಟಾಯಿತು;

ಇರಿ+ಕಾರೆ; ಇರಿ=ತಿವಿ/ಚುಚ್ಚು; ಇರಿಗಾರೆ=ಚುಚ್ಚುವವಳು/ಇರಿದು ಕೊಲ್ಲುವವಳು;

ಕಣ್ ಇರಿಗಾರೆ ಇವಳಾರು=ನನ್ನ ಕಣ್ಣುಗಳನ್ನೇ ಚುಚ್ಚಿ ಗಾಸಿಗೊಳಿಸುವಂತಿರುವ ಇವಳು ಯಾರು?;

ಗಜಬಜಿಸು=ಆತಂಕಪಡು/ಗೊಂದಲಕ್ಕೆ ಒಳಗಾಗಿ ಚಡಪಡಿಸು;

ಎನುತ  ನಿಮಿಷದಲಿ ಗಜಬಜಿಸಿದನು=ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತ ಕೆಲವೇ ಗಳಿಗೆಯಲ್ಲಿ ಆತಂಕಕ್ಕೆ ಗುರಿಯಾದನು; ತನ್ನ ಮಯ್ ಮನದಲ್ಲಿ ತುಡಿಯುತ್ತಿರುವ ಕಾಮದ ಒಳಮಿಡಿತಗಳಿಂದ ಕೀಚಕನು ಕಂಗಾಲಾದನು;

ರತಿ=ಮನ್ಮತನ ಮಡದಿ; ಅಂತು+ಇರಲಿ; ಅಂತು=ಹಾಗೆ; ಅಂತಿರಲಿ=ಹಾಗಿರಲಿ. ಅವು ಲೆಕ್ಕಕ್ಕೆ ಬರುವುದಿಲ್ಲ; ಸಿರಿ=ಸಂಪತ್ತು; ಬೊಮ್ಮ=ಬ್ರಹ್ಮ; ಬೊಮ್ಮನ ಸತಿ=ಬ್ರಹ್ಮನ ಹೆಂಡತಿ ಸರಸ್ವತಿ; ಸೊಬಗು=ಚೆಲುವು; ಆ ಬಾಲಕಿ=ಸೈರಂದ್ರಿ; ಪ್ರತಿ=ಸಮಾನ/ಸಾಟಿ/ಬದಲು;

ರತಿಯ ಚೆಲುವು ಅಂತಿರಲಿ… ಸಿರಿ ಪಾರ್ವತಿಯ ರೂಪು ಅಂತಿರಲಿ… ಬೊಮ್ಮನ ಸತಿಯ  ಸೊಬಗು  ಅಂತಿರಲಿ… ಆ ಬಾಲಕಿಯ ರೂಪಿಂಗೆ ಪ್ರತಿಯ ಕಾಣೆನು=ಸೈರಂದ್ರಿಯ ರೂಪನ ಮುಂದೆ ದೇವಲೋಕದ  ರತಿದೇವಿಯ… ಪಾರ್‍ವತಿಯ… ಸರಸ್ವತಿಯ ರೂಪ ಲೆಕ್ಕಕ್ಕೆ ಬಾರದು; ಅಂದರೆ ಸೈರಂದ್ರಿಯ ರೂಪಕ್ಕೆ ಸಮಾನರಾದವರನ್ನು ನಾನು ಕಾಣೆನು;

ಮಡಿ=ಪಟ್ಟು/ಸಲ; ವಿಭ್ರಮ=ಅಂದ/ಬೆಡಗು/ಒಯ್ಯಾರ; ಎನ್ನಯ=ನನ್ನ; ಐದಿತು=ಹೊಕ್ಕಿತು;

ಪಾಂಡವರ  ದುರುಪತಿಯ ರೂಪಿಂಗೆ ಐದು  ಮಡಿ. ಆ ಸತಿಯ ವಿಭ್ರಮವು  ಎನ್ನಯ  ಮನವನು ಐದಿತು ಎನುತ ಇರ್ದ=ಪಾಂಡವರ ಮಡದಿ ದುರುಪತಿಗಿಂತಲೂ ಅಯ್ದು ಪಟ್ಟು ರೂಪವಂತೆಯಾದ ಈ ಸೈರಂದ್ರಿಯ ಅಂದಚೆಂದವು ನನ್ನ ಮನಸ್ಸನ್ನು ಆವರಿಸಿಕೊಂಡಿದೆ ಎಂದು ಕೀಚಕನು  ತನ್ನ ಮನದಲ್ಲಿಯೇ ಅಂದುಕೊಳ್ಳತೊಡಗಿದ;

ಅರಿವು ತಲೆಕೆಳಗಾಯ್ತು=ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು ಎಂಬ ವಿವೇಕವು ಸಂಪೂರ್‍ಣವಾಗಿ ನಾಶವಾಯಿತು;

ನಿರಿಗೆ=ನಡವಳಿಕೆ/ಇರುವಿಕೆ; ಎಡೆ=ಅವಕಾಶ;

ಧೈರ್ಯದ ನಿರಿಗೆ ನಗೆಗೆ ಎಡೆಯಾಯ್ತು=ಕೀಚಕನ ಕೆಚ್ಚಿನ ನಡವಳಿಕೆಯು ಮರೆಯಾಗಿ, ಕಾಮುಕನಾದ ಕೀಚಕನ ನಡವಳಿಕೆಯು ಈಗ ಪರಿಹಾಸ್ಯಕ್ಕೆ ಗುರಿಯಾಯಿತು;

ಲಜ್ಜೆ=ನಾಚಿಕೆ/ಸಂಕೋಚ; ಹೊರಿಗೆ=ಹೊಣೆಗಾರಿಕೆ/ಜವಾಬ್ದಾರಿ; ಬರಿ+ತೊರೆ; ಬರಿದೊರೆ=ನೀರಿಲ್ಲದೆ ಬರಿದಾಗಿರುವ ಹೊಳೆ/ನಾಶ/ಅಳಿವು;

ಲಜ್ಜೆಯ ಹೊರಿಗೆ ಬರಿದೊರೆಯಾಯ್ತು=ಕಾಮುಕನಾದ ಕೀಚಕನು ಲಜ್ಜಾಹೀನನಾದನು. ಕೀಚಕನ ವೀರತನದ ವ್ಯಕ್ತಿತ್ವವು ನಾಶಗೊಂಡಿತು;

ಕರಿಮೊಳೆ=ಸುಟ್ಟುಹೋದ ಮೊಳಕೆ; ಕರಿಮೊಳೆಯೋಯ್ತು=ಮೊಳಕೆಯಲ್ಲಿಯೇ ಸೀದುಹೋಗುವುದು;

ಭಯ ಬೀಜ ಕರಿಮೊಳೆಯೋಯ್ತು=ಕೆಟ್ಟದ್ದನ್ನು ಮಾಡಬಾರದು ಎಂಬ ಹೆದರಿಕೆಯು ನಾಶವಾಯಿತು;

ಮರವು=ವಿವೇಕಶೂನ್ಯತೆ; ಗರಿಗಟ್ಟು=ಬಲವಾಗು/ಶಕ್ತಿಯುತವಾಗು;

ಮರವೆ ಗರಿಗಟ್ಟಿತು=ವಿವೇಕವನ್ನು ಸಂಪೂರ್ಣವಾಗಿ ಕಳೆದುಕೊಂಡನು; ಕಾಮುಕನಾದ ವ್ಯಕ್ತಿಯು ಸಮಾಜದ ನೀತಿನಿಯಮಗಳನ್ನು ಲೆಕ್ಕಿಸದೆ, ನಾಚಿಕೆ, ಮಾನ ಮರ್ಯಾದೆಯ ನಡೆನುಡಿಗಳನ್ನು ಬಿಟ್ಟು ವರ್ತಿಸತೊಡಗಿದಾಗ, ಅವನ ವ್ಯಕ್ತಿತ್ವ ಕುಗ್ಗುತ್ತದೆ. ಜನರಿಂದ ಟೀಕೆ, ಅಪಹಾಸ್ಯ ಮತ್ತು ತಿರಸ್ಕಾರಕ್ಕೆ ಗುರಿಯಾಗುತ್ತಾನೆ ಎಂಬುದನ್ನು ಈ ರೂಪಕಗಳು  ಸೂಚಿಸುತ್ತಿವೆ;

ಮನೋಭವ=ಮನ್ಮಥ; ಇರಿ+ಕೆಲಸ; ಇರಿಗೆಲಸ=ಕೊಲ್ಲುವ ಕೆಲಸ; ಬಲುಹು+ಆಯ್ತು; ಬಲುಹು=ಶಕ್ತಿ;

ಮನೋಭವನ ಇರಿಗೆಲಸ ಬಲುಹಾಯ್ತು=ಕಾಮುಕತನಕ್ಕೆ ಪ್ರಚೋದನೆಯನ್ನು ನೀಡುವ ಮದನನ ಶಕ್ತಿಯು ಹೆಚ್ಚಾಯಿತು; ಅಂದರೆ ಕೀಚಕನ ಮಯ್ ಮನದಲ್ಲಿ ಕಾಮ ಉದ್ರಿಕ್ತಗೊಂಡು, ಅವನ ಮಯ್ ಮನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿವೆ;

ಆತನ=ಕೀಚಕನ; ತನು=ದೇಹ/ಮಯ್; ಅಂತಸ್ತಾಪ=ಒಳಗಿನ ಸಂಕಟ/ವೇದನೆ; ಏಳ್ಗೆ=ಹೆಚ್ಚಳ; ಹೊಗಳು=ಬಣ್ಣಿಸು/ವಿವರಿಸು; ಅರಿಯೆನು=ತಿಳಿಯೆನು;

ಆತನ ತನುವಿನ ಅಂತಸ್ತಾಪದ ಏಳ್ಗೆಯನು ಹೊಗಳುವಡೆ ಅರಿಯೆನು=ಕೀಚಕನ ಮಯ್ಯಲ್ಲಿ ಈಗ ಉಂಟಾಗುತ್ತಿರುವ ಕಾಮದ ತುಡಿತದ ಉದ್ವೇಗವನ್ನು  ವಿವರಿಸಲು ನನ್ನಿಂದ ಆಗುತ್ತಿಲ್ಲ ಎಂದು ಮಹಾಭಾರತದ ಕತೆಯನ್ನು ಜನಮೇಜಯ ರಾಜನಿಗೆ ಹೇಳುತ್ತಿರುವ ವೈಶಂಪಾಯನ ಮುನಿಯು ಉದ್ಗಾರವನ್ನು ಎಳೆದಿದ್ದಾನೆ;

ಲಜ್ಜೆ ಬೀಳುಗೊಂಡುದು=ನಾಚಿಕೆ ಇಲ್ಲವಾಯಿತು;

ಮಹಿಮೆಯ ಕೀಳು ಕಳಚಿತು=ಕೀಚಕನು ಮಹಾಬಲಶಾಲಿ ಎಂಬ ಉನ್ನತವಾದ ಹೆಸರು ಕಳಚಿಬಿದ್ದಿತು;

ದ್ರುಪದ ತನುಜೆ=ದ್ರುಪದನ ಮಗಳಾದ ದ್ರೌಪದಿಯನ್ನು; ಆಲಿ=ಕಣ್ಣು;

ದ್ರುಪದ ತನುಜೆಯನು ಆಲಿಯಲಿ ನುಂಗಿದನು=ಸೈರಂದ್ರಿಯನ್ನು ಕಣ್ಣುಗಳಲ್ಲಿಯೇ ನುಂಗಿದನು. ಅಂದರೆ ಅತಿ ಕಾಮುಕತನದ ನೋಟದಿಂದ ಅವಳತ್ತಲೇ ನೋಡತೊಡಗಿದನು; ತನ್ನ ಅಕ್ಕ ಸುದೇಶ್ಣೆಯಾಗಲಿ ಇಲ್ಲವೇ ಅಲ್ಲಿರುವ ದಾಸಿಯರಾಗಲಿ ಇಲ್ಲವೇ ಸೈರಂದ್ರಿಯಾಗಲಿ ತನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಯಾವ ಆತಂಕವಾಗಲಿ ಇಲ್ಲವೇ ನಾಚಿಕೆಯಾಗಲಿ ಈಗ ಕೀಚಕನಲ್ಲಿ ಇಲ್ಲವಾಗಿದೆ. ಏಕೆಂದರೆ ಕಾಮದ ಒಳಮಿಡಿತಗಳು ಅವನನ್ನು ಕುರುಡನನ್ನಾಗಿ ಮಾಡಿವೆ;

ಮನದಲಿ ಸತಿಯ ಸೆರೆವಿಡಿದು=ಮನದಲ್ಲಿ ಆ ಸೈರಂದ್ರಿಯನ್ನೇ ತುಂಬಿಕೊಂಡು;

ಬಿನ್ನಹ=ಮನವಿ/ಅರಿಕೆ;

ಅಕ್ಕ, ಬಿನ್ನಹವು ಕೇಳು=ಅಕ್ಕ, ನಿನ್ನಲ್ಲಿ ಒಂದು ಅರಿಕೆ;

ನಿಮ್ಮ+ಅಡಿ; ಅಡಿ=ಆಶ್ರಯ; ನಿಮ್ಮಡಿ=ನಿಮ್ಮ ಆಶ್ರಯದಲ್ಲಿರುವ/ನಿಮ್ಮ ರಾಣಿವಾಸದಲ್ಲಿರುವ; ಓಲೆಕಾತಿ=ಸೇವಕಿ/ದಾಸಿ/ಊಳಿಗದವಳು; ಮೀಟು=ಅಂದ/ಸೊಗಸು/ಸೊಬಗು; ಮೇಲುಗೈ=ಹೆಚ್ಚುಗಾರಿಕೆ/ಹಿರಿಮೆ/ಮಿಗಿಲು/ಮಿಗಿಲಾದ ವ್ಯಕ್ತಿ;

ನಿಮ್ಮಡಿ ಓಲೆಕಾತಿಯರೊಳಗೆ ಮೀಟಿನ  ಮೇಲುಗೈ ಇವಳು ಆವಳು?=ನಿಮ್ಮ ಬಳಿಯಿರುವ ದಾಸಿಯರಲ್ಲಿ ಎಲ್ಲರಿಗಿಂತಲೂ ಸುಂದರಿಯಾದ ಈಕೆ ಯಾರು;

ಗಂಧರ್ವ=ದೇವತೆ; ರಮಣಿ=ಹೆಂಡತಿ;

ಈಕೆ ಗಂಧರ್ವರ ರಮಣಿ=ಈಕೆಯು ಗಂದರ್‍ವರ ಹೆಂಡತಿ;

ನಮ್ಮಾಕೆ+ಆಗಿರೆ; ನಮ್ಮಾಕೆ=ನಮ್ಮ ರಾಣಿವಾಸದ ದಾಸಿಯರಲ್ಲಿ ಒಬ್ಬಳು; ಮಾನ್ಯ=ಮನ್ನಣೆಗೆ ಯೋಗ್ಯವಾದುದು; ವೃತಿ=ಕೆಲಸ; ಸಲಹು=ಕಾಪಾಡು;

ನಮ್ಮಾಕೆಯಾಗಿರೆ ಮಾನ್ಯ ವೃತ್ತಿಯೊಳು ಈಕೆಯನು ಸಲಹುವೆವು=ಈಕೆಯು ನಮ್ಮ ರಾಣಿವಾಸದಲ್ಲಿರುವುದರಿಂದ, ಈಕೆಗೆ ಯೋಗ್ಯವಾದ ಕೆಲಸವನ್ನು ನೀಡಿ, ಇವಳನ್ನು ಸಲಹಿ ಕಾಪಾಡುವ ಜವಾಬ್ದಾರಿಯನ್ನು ನಾನು ಹೊತ್ತಿದ್ದೇನೆ;

ವಲ್ಲಭರು=ಗಂಡಂದಿರು; ಬಲ್ಲಿದರು=ಬಲಶಾಲಿಗಳು;

ಇವಳ ವಲ್ಲಭರು ಬಲ್ಲಿದರು=ಇವಳ ಗಂಡಂದಿರು ಬಲಶಾಲಿಗಳು;

ನಿಂದಿರು=ಈಕೆಯ ಬಗ್ಗೆ ಆಸಕ್ತಿಯನ್ನು ತಳೆಯಬೇಡ. ಈಕೆಯ ಬಗ್ಗೆ ಇನ್ನು ಮುಂದೆ ಇನ್ನೇನನ್ನು ಆಲೋಚಿಸಬೇಡ ;

ಕಾಕುನು+ಆಡದಿರು; ಕಾಕು=ಕೊಂಕು/ಕೇಡು;

ಕಾಕನಾಡದಿರು=ಈಕೆಯನ್ನು ಕುರಿತು ಕೊಂಕಿನ ಮಾತುಗಳನ್ನಾಡಬೇಡ/ಈಕೆಯ ಗುಣಕ್ಕೆ ಹಾನಿಯನ್ನುಂಟುಮಾಡುವ ಮಾತುಗಳನ್ನಾಡಬೇಡ;

ಅಹಳು+ಅಲ್ಲ; ಅಹಳು=ದೊರೆಯುವವಳು;

ಈಕೆ ನಿನಗೆ ಅಹಳಲ್ಲ=ಈಕೆ ನಿನಗೆ ದೊರೆಯುವವಳಲ್ಲ ;

ಬಿಡಾರ=ವಾಸದ ನೆಲೆ/ಮನೆ;

ಸಾಕು ಬಿಡಾರಕ್ಕೆ  ನೀ ಹೋಗು=“ಇನ್ನು ಇವಳ ಬಗ್ಗೆ ತಳೆದಿರುವ ಕುತೂಹಲವನ್ನು ಇಲ್ಲಿಗೆ ಬಿಡು”  ಎಂದು ಅಕ್ಕನು ತಮ್ಮನಿಗೆ ಎಚ್ಚರಿಕೆಯನ್ನು ನೀಡಿ “ ಈಗ ನೀನು ನಿನ್ನ ಬಿಡಾರಕ್ಕೆ ಹೋಗು” ಎಂದಳು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks