ನಾ ನೋಡಿದ ಸಿನೆಮಾ: ಸಕುಟುಂಬ ಸಮೇತ

– ಕಿಶೋರ್ ಕುಮಾರ್

ಸಿನೆಮಾಗಳು ಎಂದಮೇಲೆ ಕಮರ‍್ಶಿಯಲ್ ಅಂಶಗಳು ಇರುವುದು ಸಾಮಾನ್ಯ. ಇದನ್ನು ಬಿಟ್ಟು, ಎಲ್ಲವೂ ನಿಜ ಜೀವನದಲ್ಲಿ ನಡೆದಂತೆ ಚಿತ್ರೀಕರಿಸುವುದಿರಲಿ ಹಾಗೆ ಯೋಚಿಸುವವರೂ ಸಹ ಕಡಿಮೆ ಎನ್ನಬಹುದು. ಆದರೆ ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ತೆರೆದುಕೊಂಡಿರುವ ಹಲವು ಸಿನೆಮಾದೊಲವಿಗರು ಈ ರೀತಿಯ ನಿಜ ಜೀವನಕ್ಕೆ ಹತ್ತಿರವಾಗುವಂತೆ ಸಿನೆಮಾ ಕತೆಯನ್ನು ಕಟ್ಟುಕೊಡುತ್ತಿರುವುದು ನಲಿವಿನ ವಿಶಯ. ಕೆಲವು ದಿನಗಳ ಹಿಂದೆ ವೂಟ್ (voot) ನಲ್ಲಿ ಬಿಡುಗಡೆಯಾದ ಸಕುಟುಂಬ ಸಮೇತ ಸಿನೆಮಾ ಕೂಡ ಇದೇ ಸಾಲಿನಲ್ಲಿ ನಿಲ್ಲುತ್ತದೆ. 

ಒಂದು ಮದ್ಯಮ ವರ‍್ಗಕ್ಕೆ ಸೇರಿದ ಕುಟುಂಬ. ಮಕ್ಕಳ ಕಲಿಕೆ ಹಾಗೂ ಒಂದು ಸ್ವಂತ ಮನೆಗಾಗಿ ದೂರದ ಊರಿಗೆ ಹೋಗಿ ದುಡಿದ ಅಪ್ಪ. ದುಡಿಯಲು ಹೊರ ಹೋದ ಗಂಡನ ಅನುಪಸ್ತಿತಿಯಲ್ಲಿ, ಒಂಟಿಯಾಗಿ ಮಕ್ಕಳನ್ನು ಸಾಕಿದ ದಿಟ್ಟ ಹೆಣ್ಣು ಅಮ್ಮ. ಓದಿ ಒಂದೊಳ್ಳೆ ಕೆಲಸ ಪಡೆದು, ಮುಂದಿನ ನಾಳೆಗಳ ಕನಸಿನೊಂದಿಗೆ ಮದುವೆಗೆ ಹುಡುಗಿ ಹುಡುಕುತ್ತಾ, ಆ ಹುಡುಕಾಟದಲ್ಲಿ ಎಶ್ಟೋ ಸಂಬಂದಗಳನ್ನು ನೋಡಿ, ಕೊನೆಗೆ ಸಿಕ್ಕ ಒಂದು ಸಂಬಂದವನ್ನು ಉಳಿಸಿಕೊಳ್ಳಲು ಹೋರಾಡುವ ಮಗ. ಇನ್ನೊಂದು ಕಡೆ ಎಲ್ಲವೂ ಇದ್ದು ಕುಟುಂಬದೊಂದಿಗೆ ಕಾಲ ಕಳೆಯಲಾಗದ ಒಂದು ಮೇಲ್ವರ‍್ಗದ ಕುಟುಂಬ. ತನ್ನಲ್ಲಿನ ಗೊಂದಲಗಳಿಂದ ಹೊರ ಬರಲು ಹೆಣಗಾಡುತ್ತಿರುವ ಹುಡುಗಿ, ತನ್ನ ಮಗಳ ಇಶ್ಟವೇ ಮುಕ್ಯ ಎಂದು ಮಗಳೊಂದಿಗೆ ನಿಲ್ಲುವ ತಾಯಿ. ಯಾವುದೇ ಸಮಸ್ಯೆಯಿರಲಿ ಸಂಯಮದಿಂದ ತಿಳಿಗೊಳಿಸುವ ತಂದೆ. ಈ ಎರಡೂ ಕುಟುಂಬದ ಸದಸ್ಯರುಗಳ ಬದುಕಿನ ಬವಣೆಯನ್ನು ಬಿಚ್ಚಿಡುವುದೇ ಕತೆ.

ಒಂದು ಮನೆಯಲ್ಲಿನ ಅಡುಗೆ ಮನೆಯ ಸಾಮಾನ್ಯ ದ್ರುಶ್ಯಗಳು, ಮನೆಯಲ್ಲೇ ಇನ್ನೊಬ್ಬರು ಸಂಬಂದಿಕರಿದ್ದರೆ ದಿನ ಕಳೆದಂತೆ ಅವರೊಡನೆ ಉಂಟಾಗುವ ವೈಮನಸ್ಸುಗಳು. ಎಲ್ಲವನ್ನೂ ಒಂಟಿಯಾಗಿ ನಿಬಾಯಿಸಿಕೊಂಡು ಹೋಗುವ ಹೆಂಡತಿಯ ಬಗ್ಗೆ ಮನದಲ್ಲೇ ಹೆಮ್ಮೆ ಪಡುವ ಗಂಡ. ಮದುವೆಗೆ ಹುಡುಗಿ ಹುಡುಕುವಲ್ಲಿ ಹುಡುಗರು ಪಡುವ ಪಾಡು. ಬಾಳಸಂಗಾತಿಯಾಗುವವಳಲ್ಲವೇ ಎಂಬ ಕನಸಿನೊಂದಿಗೆ ಎಲ್ಲದಕ್ಕೂ ಹೊಂದಿಕೊಳ್ಳಲು ಸಿದ್ದನಿರುವ ಹುಡುಗ. ನಿನಗೆ ಇವನೆ ಸರಿಯಾದ ಹುಡುಗ ಎಂದು ಬುದ್ದಿ ಹೇಳುವ ಹುಡುಗಿಯ ಅಮ್ಮ. ಬಟ್ಟೆ ತಗೊಳೋದಕ್ಕೆ ಡಿಸ್ಕೌಂಟ್ಗಾಗಿ ಕಾಯೋ ಹುಡುಗ. ಇದು ಯಾವುದೋ ನಮ್ಮ ಪಕ್ಕದ ಮನೆಯ ಕುಟುಂಬವೇ ಅನಿಸುವ ಹಾಗೆ ಸಿನೆಮಾವನ್ನು ಕೊಂಡೊಯ್ಯುತ್ತಾರೆ ನಿರ‍್ದೇಶಕ ರಾಹುಲ್. ನಾಯಕನ ಪಾತ್ರದಲ್ಲಿ ಬರತ್ ಹಾಗೂ ನಾಯಕಿಯಾಗಿ ಸಿರಿ ರವಿಕುಮಾರ‍್ ಅವರು ನಟಿಸಿದ್ದಾರೆ. ನಾಯಕನ ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ‍್ ಎಂದಿನಂತೆ ಮನಗೆಲ್ಲುತ್ತಾರೆ. ಇಡೀ ಸಿನೆಮಾಗೆ ಅಚ್ಯುತ್ ಅವರು ಮೆರಗು ತಂದಿದ್ದಾರೆ ಎಂದರೆ ತಪ್ಪಾಗಲಾರದೇನೋ. ಇನ್ನು ನಾಯಕನ ತಾಯಿಯ ಪಾತ್ರದಲ್ಲಿ ರೇಕಾ ಕೂಡ್ಲಿಗಿ ಅವರು ಒಂದು ಮದ್ಯಮವರ‍್ಗದ ಗಟ್ಟಿಗಿತ್ತಿ ಹೆಣ್ಣುಮಗಳನ್ನ ನಮ್ಮ ಮುಂದೆ ನಿಲ್ಲಿಸುತ್ತಾರೆ ಅಂದ್ರೆ ತಪ್ಪಾಗಲಾರದು. ನಾಯಕಿಯ ತಂದೆಯ ಪಾತ್ರವನ್ನು ಕ್ರಿಶ್ಣ ಹೆಬ್ಬಾಳೆ ಅವರು ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ. ಈ ಚಿತ್ರಕ್ಕೆ ಇವರನ್ನ ಬಿಟ್ಟು ಇನ್ಯಾರು ತಾನೆ ನ್ಯಾಯ ಒದಗಿಸಲು ಅಗುತಿತ್ತು ಎನ್ನುವಶ್ಟು ಮಟ್ಟಿಗೆ ಈ ಮೂವರು (ಅಚ್ಯುತ್, ರೇಕಾ & ಕ್ರಿಶ್ಣ) ಸಹ ಕಲಾವಿದರು ಒಬ್ಬರಿಗಿಂತ ಒಬ್ಬರು ತಮ್ಮ ನಟನೆಯಿಂದ ನೋಡುಗರನ್ನ ಬೆರಗುಗೊಳಿಸುತ್ತಾರೆ. ಇಂತಹ ಒಂದೊಳ್ಲೆ ಚಿತ್ರವನ್ನು ಕನ್ನಡಿಗರಿಗೆ ನೀಡಿದ ರಕ್ಶಿತ್ ಶೆಟ್ಟಿ ಅವರಿಗೆ ಕಂಡಿತವಾಗಿಯೂ ಮೆಚ್ಚುಗೆ ಸಲ್ಲಬೇಕು. ಅವರ ಪರಮ್ವ ಸ್ಟುಡಿಯೋದಿಂದ ಇನ್ನಶ್ಟು ಸದಬಿರುಚಿಯ ಚಿತ್ರಗಳು ಬರಲಿ.

(ಚಿತ್ರ ಸೆಲೆ: paramvah.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: