ಕೆಂಡಸಂಪಿಗೆ: ಗಿಣಿಮರಿ ಕೇಸ್

– ಕಿಶೋರ್ ಕುಮಾರ್

ಸಿನೆಮಾರಂಗದಲ್ಲಿ ಸೋಲು ಗೆಲುವು ಸಾಮಾನ್ಯ. ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದ ಎಶ್ಟೋ ಸಿನೆಮಾಗಳು ಜನರನ್ನ ಮುಟ್ಟದೆ ಇರಬಹುದು. ಸೋತ ಸಿನೆಮಾಗಳು ನಂತರದ ದಿನಗಳಲ್ಲಿ ಜನರಿಗೆ ಹಿಡಿಸಬಹುದು. ಇದಲ್ಲದೆ ಇನ್ನೊಂದು ವರ‍್ಗವೂ ಇದೆ. ಚಿತ್ರಮಂದಿರದಲ್ಲಿ ಹೆಚ್ಚು ಜನರನ್ನು ತಲುಪಲು ಆಗದಿದ್ದರೂ (ಇದಕ್ಕೆ ಹಲವಾರು ಕಾರಣಗಳಿರಬಹುದು, ಪ್ರಚಾರದ ಕೊರತೆ, ಬಿಡುಗಡೆಯಾದ ಸಮಯ, ಹಂಚಿಕೆಯಲ್ಲಿನ ತಪ್ಪುಗಳು ಹೀಗೆ) ಟಿವಿ ಇಲ್ಲವೇ ಆನ್ಲೈನ್ ನಲ್ಲಿ ಬಿಡುಗಡೆಗೊಂಡಾಗ ಜನರ ಮೆಚ್ಚುಗೆ ಗಳಿಸುವ ಸಿನೆಮಾಗಳು. ಇಂತಹ ಸಿನೆಮಾಗಳ ಸಾಲಿಗೆ ಸೇರುವ ಚಿತ್ರವೇ ಕೆಂಡಸಂಪಿಗೆ. 2015 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಈ ಚಿತ್ರ, ಚಿತ್ರಮಂದಿರದಲ್ಲಿ ಜನರನ್ನು ತಲುಪಿದ್ದಕ್ಕಿಂತಲೂ, ಆನ್ಲೈನ್ ಹಾಗೂ ಟಿವಿಯಲ್ಲಿ ಜನರನ್ನು ತಲುಪಿ, ಮೆಚ್ಚುಗೆ ಗಳಿಸಿದ್ದೇ ಹೆಚ್ಚು. ಇಂತಹ ಒಂದೊಳ್ಳೆ ಚಿತ್ರ ದೊಡ್ಡ ಪರದೆಯಲ್ಲಿ ಸರಿಯಾಗಿ ಬಿಡುಗಡೆಯಾಗಲಿಲ್ಲ ಎಂಬ ವಿಶಯ ಹಲವರಿಗೆ ಕಾಡುತ್ತದೆ.

ಅಂತದ್ದೇನಿದೆ ಈ ಚಿತ್ರದಲ್ಲಿ?

ಸಿರಿವಂತ ಕುಟುಂಬದ ಹುಡುಗಿ, ಬದುಕಿಗಾಗಿ ಪಟ್ಟಣಕ್ಕೆ ಬಂದು ಜಿಮ್ ಒಂದರಲ್ಲಿ ಕೆಲಸಮಾಡುವ ಹುಡುಗ. ಹುಡುಗಿಯ ಕಶ್ಟದ ಸಮಯದಲ್ಲಿ ಕಾಪಾಡುವ ಹುಡುಗ, ಹೀಗೆ ಪರಿಚಯವಾದಮೇಲೆ ಹುಡುಗನ ಮುಗ್ದತೆಗೆ ಮನಸೋತು ಮೂಡುವ ಒಲವು. ಒಂದು ಪುಟ್ಟ ಪ್ರಪಂಚದಲ್ಲಿ ನಲಿಯುತ್ತಾ ಸಾಗುತ್ತಿರುವ ಈ ಮುಗ್ದ ಪ್ರೇಮಿಗಳ ಬದುಕಿನಲ್ಲಿ ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಬುಡಮೇಲು ಮಾಡುವಂತೆ ಬಂದೊದಗುವ ಸಂದರ‍್ಬ. ಇಂತ ಸಮಯದಲ್ಲಿ ಏನೂ ತೋಚದಿದ್ದಾಗ ಹುಡುಗಿಯ ನೆರವು ಕೇಳುವ ಹುಡುಗ, ಆತನ ನೆರವಿಗೆ ಬಂದು, ಹುಡುಗನ ಕಶ್ಟದ ಸಮಯದಲ್ಲಿ ಜೊತೆ ನಿಲ್ಲಬೇಕೆಂದು ತಾನೂ ಆತನೊಟ್ಟಿಗೆ ಹೊರಡುವ ಹುಡುಗಿ. ಸಿರಿವಂತಿಕೆಯ ಪ್ರತಿಶ್ಟೆ ಹೊಂದಿದ ತಾಯಿಯೇ ಇದಕ್ಕೆಲ್ಲ ಕಾರಣ ಎಂದು ತಿಳಿದು, ಹುಡುಕುತ್ತಿರುವವರಿಗೆ ಚಳ್ಳೆಹಣ್ಣು ತಿನಿಸುವ ಚಿನಕುರುಳಿ ಹುಡುಗಿ. ಮಾಡದ ತಪ್ಪಿಗೆ ಆಗಲಿರುವ ಶಿಕ್ಶೆ ನೆನೆದು ಕೊರಗುವ ಮುಗ್ದ ಹುಡುಗನ ಸ್ತಿತಿ ಕಂಡು ಏನೇ ಆದರೂ ಜೊತೆಗಿರುವೆ ಎಂದು ಹುಡುಗನೊಟ್ಟಿಗೆ ನಿಲ್ಲುವ ಹುಡುಗಿ. ಇದೇ ಸಮಯಕ್ಕೆ ಬ್ರಶ್ಟ ಅದಿಕಾರಿಗಳ ನಡುವೆ ಹಣಕ್ಕಾಗಿ ನಡೆಯುವ ಇನ್ನೊಂದು ಕತೆ. ಅದರಲ್ಲಿ ನಡೆಯುವ ವಿದ್ಯಮಾನಗಳು, ಅದರಿಂದ ತಿಳಿಯದೇ ಲಾಬ ಪಡೆಯುವ ಇನ್ನೊಂದು ಪಾತ್ರ ‘ಕಾಗೆ ಬಂಗಾರ’. ಎರಡೂ ಕತೆಯ ಪಾತ್ರಗಳು ಸಂದಿಸಿದರೂ ತಿಳಿಯದೆ ಮುಂದೆ ಸಾಗುವ ಪಾತ್ರಗಳು. ಹೀಗಿದ್ದಾಗ ಹುಡುಗನನ್ನು ಹುಡುಕುವ ಹೊಣೆ ಹೊತ್ತ ಪೊಲೀಸ್ ಅದಿಕಾರಿ, ಪ್ರತ್ಯಕ್ಶ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ನಂಬಿಕೆಯಿಂದ ಎಲ್ಲಾ ಕೋನಗಳಿಂದಲೂ ಯೋಚಿಸಿ, ಹುಡುಗ ತಪ್ಪಿತಸ್ತನಲ್ಲ, ಇದು ಬೇರೆಯದೇ ತಿರುವು ಪಡೆದ ಪ್ರೇಮ ಪ್ರಕರಣ (ಗಿಣಿಮರಿ ಕೇಸ್) ಎಂದು ಮನಗಾಣುವ ಪೊಲೀಸ್ ಅದಿಕಾರಿ. ಆತನಿಗೆ ನೆರವಾಗುವ ಮಡದಿ ಪತ್ರಕರ‍್ತೆ. ಈ ಹೋರಾಟದಲ್ಲಿ ಊರಿಂದ ಊರಿಗೆ ಅಲೆದಾಡಿ, ನಡುವೆ ಹಲವಾರು ಸವಾಲುಗಳನ್ನು ಎದುರಿಸುತ್ತಿರುವಾಗಲೇ ತನ್ನ ಮುದ್ದು ಮಾತುಗಳಿಂದ ಹುಡುಗನನ್ನು ಕೀಟಲೆ ಮಾಡುವ ಹುಡುಗಿ. ಈ ಪ್ರೇಮಿಗಳನ್ನು ಹುಡುಕಿ, ಅವರಿಗೆ ತೊಂದರೆಯಾಗದಂತೆ ಈ ಪ್ರಕರಣವನ್ನು ಮುಗಿಸಲು ಪ್ರಯತ್ನಿಸುವ ಪೊಲೀಸ್ ಅದಿಕಾರಿ. ಈ ಹೋರಾಟದಲ್ಲಿ ಈ ಪ್ರೇಮಿಗಳಿಗೆ ಗೆಲುವಾಗುತ್ತದೆಯೇ ಇಲ್ಲವೇ ಎಂಬುದನ್ನು ಸಿನೆಮಾ ನೋಡಿಯೇ ತಿಳಿಯಬೇಕು.

ನೆಲದ ಸೊಗಡಿಗೆ ತಕ್ಕಂತೆ, ಸದಬಿರುಚಿಯ ಸಿನೆಮಾ ಮಾಡುವ ಕಲೆಯಲ್ಲಿ ನಿಪುಣರಾದ ಸೂರಿಯವರು ಇಲ್ಲಿ ಮತ್ತೊಮ್ಮೆ ತಮ್ಮ ನಿರ‍್ದೇಶನದಲ್ಲಿ ಗೆದ್ದಿದ್ದಾರೆ. ಸುರೇಂದ್ರ ನಾತ್ ಅವರ ಕತೆ, ಸತ್ಯ ಹೆಗ್ಡೆ ಅವರ ಸಿನೆಮಾಟೋಗ್ರಪಿ ಅದ್ಬುತವಾಗಿ ಮೂಡಿ ಬಂದಿದೆ. ವಿ. ಹರಿಕ್ರಿಶ್ಣ ಅವರ ಸಂಗೀತ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ಹಾಡುಗಳು ಜನರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದಂತೂ ನಿಜ. ಸಾಮಾನ್ಯವಾಗಿ ಸಂಗೀತಕ್ಕೆ ತಕ್ಕಂತೆ ಹಾಡುಗಳನ್ನು ಬರೆಯುವುದು ವಾಡಿಕೆ, ಆದರೆ ಈ ಚಿತ್ರದಲ್ಲಿ ಹಾಡುಗಳಿಗೆ ತಕ್ಕಂತೆ ಸಂಗೀತವನ್ನು ನೀಡಿರುವುದು ವಿಶೇಶ. ನೆನಪೆ ನಿತ್ಯ ಮಲ್ಲಿಗೆ ಮತ್ತು ಕನಸಲಿ ನಡೆಸು ಬಿಸಿಲಾದರೆ ಹಾಡುಗಳು ನೋಡುಗರಿಗೆ ಮೋಡಿ ಮಾಡದೆ ಇರದು. ನಾಯಕನ ಪಾತ್ರದಲ್ಲಿ ಸಂತೋಶ್ ಕುಮಾರ್ ಅವರು ನಟಿಸಿದ್ದಾರೆ. ಇವರ ಮುಗ್ದ ಪಾತ್ರ ಜನರಿಗೆ ಹಿಡಿಸುತ್ತದೆ. ನಾಯಕಿಯ ಪಾತ್ರದಲ್ಲಿ ಮಾನ್ವಿತಾ ಕಾಮತ್ ಅವರು ನೋಡುಗರ ಮನಗೆಲ್ಲುತ್ತಾರೆ. ಕಿರಿಕ್ ಪಾರ‍್ಟಿ ಚಿತ್ರದಂತೆ ಸರಿಯಾದ ಪ್ರಚಾರ ಮಾಡಿ, ಬಿಡುಗಡೆಯಾಗಿದ್ದರೆ ರಶ್ಮಿಕಾ ಅವರಿಗಿಂತ ಮೊದಲು ಮಾನ್ವಿತಾ ಅವರು ಕರ‍್ನಾಟಕದ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದರು ಎಂದರೆ ತಪ್ಪಾಗಲಾರದು. ಪೊಲೀಸ್ ಅದಿಕಾರಿಯ ಪಾತ್ರದಲ್ಲಿ ರಾಜೇಶ್, ಡಿಸಿಪಿ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ. ಇನ್ನುಳಿದಂತೆ ನಾಯಕಿಯ ತಾಯಿ ಪಾತ್ರದಲ್ಲಿ ಚಂದ್ರಿಕಾ, ಪತ್ರಕರ‍್ತೆಯಾಗಿ ಶೀತಲ್ ಶೆಟ್ಟಿ ನಟಿಸಿದ್ದಾರೆ. ಪ್ರಸಾಂತ್ ಸಿದ್ದಿ ಅವರದ್ದು ಇಲ್ಲೊಂದು ವಿಶೇಶ ಪಾತ್ರ ಅದೇ ಕಾಗೆ ಬಂಗಾರ, ಚಿತ್ರದ ಕೊನೆಯಲ್ಲಿ ಇದೇ ಪಾತ್ರದ ಮೇಲೆ ಇನ್ನೊಂದು ಚಿತ್ರ ಬರಬಹುದು ಎಂಬ ಸುಳಿವನ್ನು ನಿರ‍್ದೇಶಕರು ನೀಡುತ್ತಾರೆ.

ಕತೆ, ನಿರ‍್ದೇಶನ, ನಾಯಕ, ನಾಯಕಿ, ಸಿನೆಮಾಟೋಗ್ರಪಿ, ಸಂಗೀತ ಹಾಗೂ ಹಾಡುಗಳು ಇವೆಲ್ಲದರ ಸರಿಯಾದ ಹೂರಣವೇ ಕೆಂಡಸಂಪಿಗೆ. ಈ ಚಿತ್ರವನ್ನು ಇನ್ನು ನೋಡಿಲ್ಲ ಎಂದರೆ ಯೂಟ್ಯೂಬ್ ನಲ್ಲಿ ನೋಡಬಹುದು.

ಕೆಂಡಸಂಪಿಗೆಯ ನೆನಪೆ ನಿತ್ಯ ಮಲ್ಲಿಗೆ…

(ಚಿತ್ರ ಸೆಲೆ: facebook.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *