ಮುಕ್ತಾಯಕ್ಕನ ವಚನದ ಓದು
– ಸಿ.ಪಿ.ನಾಗರಾಜ.
ಊರು: ಲಕ್ಕುಂಡಿ
ದೊರೆತಿರುವ ವಚನಗಳು: 37
ಅಂಕಿತನಾಮ: ಅಜಗಣ್ಣ ತಂದೆ
ನುಡಿಯಲುಬಾರದು ಕೆಟ್ಟ ನುಡಿಗಳ
ನಡೆಯಲುಬಾರದು ಕೆಟ್ಟ ನಡೆಗಳ
ನುಡಿದಡೇನು ನುಡಿಯದಿರ್ದಡೇನು
ಹಿಡಿದ ವ್ರತ ಬಿಡದಿರಲು
ಅದೆ ಮಹಾ ಜ್ಞಾನದಾಚರಣೆ
ಎಂಬೆನು ಅಜಗಣ್ಣ ತಂದೆ.
ವ್ಯಕ್ತಿಯು ತಾನು ಪಡೆದ ಅರಿವಿನಿಂದ ಕೆಟ್ಟ ನಡೆನುಡಿಗಳನ್ನು ತೊರೆದು, ಒಳ್ಳೆಯವನಾಗಿ ಬಾಳುವುದೇ ಎಲ್ಲಕ್ಕಿಂತಲೂ ದೊಡ್ಡದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
‘ಅರಿವು’ ಎಂದರೆ “ಜೀವನದಲ್ಲಿ ವ್ಯಕ್ತಿಯು ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ತಿಳುವಳಿಕೆ / ತನಗೆ , ತನ್ನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ಬಯಸುವಂತೆಯೇ ಸಹಮಾನವರ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ತಿಳುವಳಿಕೆ;
ನುಡಿ=ಮಾತು; ನುಡಿಯಲುಬಾರದು=ಮಾತನಾಡಬಾರದು; ಕೆಟ್ಟ=ಕೆಡುಕನ್ನು ಮಾಡುವ/ಒಳ್ಳೆಯದಲ್ಲದ; ಕೆಟ್ಟನುಡಿ=ಕೆಟ್ಟ ಮಾತು ;
ನುಡಿಯಲುಬಾರದು ಕೆಟ್ಟ ನುಡಿಗಳ=ಸಹಮಾನವರ ಮನಸ್ಸಿಗೆ ನೋವನ್ನುಂಟುಮಾಡುವ ರೀತಿಯಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು / ಜಾತಿ ಮತ ದೇವರ ಹೆಸರಿನಲ್ಲಿ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಜನಮನದಲ್ಲಿ ಪರಸ್ಪರ ಅನುಮಾನ, ಅಸೂಯೆ ಮತ್ತು ಹಗೆತನವನ್ನು ಉಂಟುಮಾಡುವಂತಹ ಇಲ್ಲಸಲ್ಲದ ನುಡಿಗಳನ್ನಾಡಬಾರದು / ಇತರರ ವ್ಯಕ್ತಿತ್ವವನ್ನು ಗಾಸಿಗೊಳಿಸುವಂತಹ ಕೆಟ್ಟ ನುಡಿಗಳನ್ನಾಡಬಾರದು;
ನಡೆ=ನಡತೆ/ನಡವಳಿಕೆ ; ಕೆಟ್ಟ ನಡೆ=ಕೆಟ್ಟ ನಡವಳಿಕೆ;
ನಡೆಯಲುಬಾರದು ಕೆಟ್ಟ ನಡೆಗಳ=ಸಹಮಾನವರ ಬದುಕಿಗೆ ಕೇಡನ್ನು ಬಗೆಯುವ ಮತ್ತು ಸಾವುನೋವನ್ನುಂಟುಮಾಡುವ ಕೆಲಸಗಳನ್ನು ಮಾಡಬಾರದು / ಜನಸಮುದಾಯಕ್ಕೆ ಅತ್ಯಗತ್ಯವಾದ “ ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ ” ಎಲ್ಲರಿಗೂ ದೊರೆಯದಂತೆ ಅಡೆತಡೆಗಳನ್ನು ಒಡ್ಡುವ ಕೆಟ್ಟ ಕೆಲಸಗಳನ್ನು ಮಾಡಬಾರದು;
ನುಡಿದಡೆ+ಏನು; ನುಡಿದಡೆ=ಮಾತನಾಡಿದರೆ; ಏನು=ಯಾವುದು; ನುಡಿಯದೆ+ಇರ್ದಡೆ+ಏನು; ಇರ್ದಡೆ=ಇದ್ದರೆ; ನುಡಿಯದಿರ್ದಡೆ=ಮಾತನಾಡದೆ ಸುಮ್ಮನಿದ್ದರೆ;
ನುಡಿದಡೇನು ನುಡಿಯದಿರ್ದಡೇನು=ಮಾತನಾಡಿದರೇನು, ಮಾತನಾಡದಿದ್ದರೇನು. ಅಂದರೆ ವ್ಯಕ್ತಿಯು ಆಡುವ ಮಾತುಗಳಾಗಲಿ ಇಲ್ಲವೇ ಸುಮ್ಮನಿರುವುದಾಗಲಿ ದೊಡ್ಡ ಸಂಗತಿಯಲ್ಲ. ನಿತ್ಯ ಜೀವನದಲ್ಲಿ ವ್ಯಕ್ತಿಯು ಮಾಡುವ ದುಡಿಮೆ ಮತ್ತು ಅವನು ಇತರರೊಂದಿಗೆ ಪ್ರೀತಿ, ಕರುಣೆ, ಗೆಳೆತನದಿಂದ ನಡೆದುಕೊಳ್ಳುವ ರೀತಿಯು ಒಳ್ಳೆಯತನದಿಂದ ಕೂಡಿರಬೇಕು;
ಹಿಡಿ=ತೊಡಗು; ವ್ರತ=ದೇವರನ್ನು ಪೂಜಿಸುವಾಗ ಹಿಂದಿನಿಂದಲೂ ಬಂದ ಸಂಪ್ರದಾಯದ ಕ್ರಿಯೆಗಳಾದ ಉಪವಾಸ, ದೇವರ ನಾಮ ಸ್ಮರಣೆ, ದಿಂಡುರುಳುವುದು, ನಿದ್ರೆ ಮಾಡದೆ ಇರುಳೆಲ್ಲಾ ಎಚ್ಚರದಿಂದಿರುವುದು ಮತ್ತು ಇನ್ನಿತರ ಆಚರಣೆಗಳು; ಬಿಡದೆ+ಇರಲು; ಬಿಡದಿರಲು=ನಿಲ್ಲಿಸದೆ ನಿರಂತರವಾಗಿ ಮುಂದುವರೆಸಿಕೊಂಡು ಬರುವುದು;
ಹಿಡಿದ ವ್ರತ ಬಿಡದಿರಲು=ವ್ಯಕ್ತಿಯು ಕೆಟ್ಟ ನುಡಿಯನ್ನಾಡಬಾರದು ಮತ್ತು ಕೆಟ್ಟ ಕೆಲಸವನ್ನು ಮಾಡಬಾರದು ಎಂಬ ನಿಲುವನ್ನು ತಳೆದು, ಜೀವನದ ಉದ್ದಕ್ಕೂ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದನ್ನೇ ವ್ರತದಂತೆ ಆಚರಿಸುತ್ತಿರುವುದು ; ಶಿವಶರಣಶರಣೆಯರು ನಿತ್ಯ ಜೀವನದ ಒಳ್ಳೆಯ ನಡೆನುಡಿಗಳಲ್ಲಿ ದೇವರನ್ನು ಕಾಣುತ್ತಿದ್ದರೆ ಹೊರತು, ಕಲ್ಲು/ಮಣ್ಣು/ಮರ/ಲೋಹದಿಂದ ಮಾಡಿದ ವಿಗ್ರಹರೂಪದಲ್ಲಿ ಕಾಣುತ್ತಿರಲಿಲ್ಲ. ಆದ್ದರಿಂದಲೇ ಅವರ ಪಾಲಿಗೆ ವ್ರತವೆಂದರೆ ದೇವರನ್ನು ಪೂಜಿಸುವಾಗ ಮಾಡುವ ಆಚರಣೆಗಳಾಗಿರಲಿಲ್ಲ. ಒಳ್ಳೆಯ ನಡೆನುಡಿಗಳೇ ವ್ರತವಾಗಿದ್ದವು;
ಅದೆ=ಅಂತಹ ಒಳ್ಳೆಯ ನಡೆನುಡಿಗಳೇ; ಮಹಾ=ದೊಡ್ಡದು ; ಜ್ಞಾನದ+ಆಚರಣೆ; ಜ್ಞಾನ=ಅರಿವು ; ಆಚರಣೆ=ಬಹುಬಗೆಯ ಕೆಲಸಗಳನ್ನು ಮಾಡುವುದು ; ಜ್ಞಾನದಾಚರಣೆ=ವ್ಯಕ್ತಿಯು ತಾನು ಪಡೆದ ಅರಿವನ್ನು ತನ್ನ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುವುದು; ಎಂಬೆನು=ಎನ್ನುತ್ತೇನೆ;
ಅದೆ ಮಹಾ ಜ್ಞಾನದಾಚರಣೆ=ಶಿವಶರಣಶರಣೆಯರ ಪಾಲಿಗೆ ಅರಿವು ಮತ್ತು ಆಚರಣೆಗಳೆರಡು ಒಂದಕ್ಕೊಂದು ಎಡೆಬಿಡದೆ ಜತೆಗೂಡಿರುವ ಸಂಗತಿಗಳಾಗಿದ್ದವು. ಕೇವಲ ಅರಿವೇ ದೊಡ್ಡದಲ್ಲ. ಅರಿವು ಎಂಬುದು ನಿತ್ಯ ಜೀವನದಲ್ಲಿ ಆಚರಣೆಗೆ ಬಂದಾಗಲೇ ಅದಕ್ಕೆ ಬೆಲೆ ಬರುತ್ತದೆ ಎಂಬ ನಿಲುವನ್ನು ತಳೆದು ಬಾಳುತ್ತಿದ್ದರು;
ಅಜಗಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ ಮತ್ತು ವಚನಕಾರ. ಈತನು ಮುಕ್ತಾಯಕ್ಕನ ಅಣ್ಣ; ತಂದೆ=ಹಿರಿಯವನು;
ಅಜಗಣ್ಣ ತಂದೆ=ಮುಕ್ತಾಯಕ್ಕನವರು ತಮ್ಮ ವಚನಗಳಲ್ಲಿ ತಮ್ಮ ಅಣ್ಣನ ಹೆಸರನ್ನು ಅಂಕಿತನಾಮವನ್ನಾಗಿ ಬಳಸಿದ್ದಾರೆ.
(ಚಿತ್ರ ಸೆಲೆ: sugamakannada.com)
ಇತ್ತೀಚಿನ ಅನಿಸಿಕೆಗಳು