ಮೆರೆಮಿಂಡಯ್ಯನ ವಚನದ ಓದು
– ಸಿ.ಪಿ.ನಾಗರಾಜ.
ಅಸಿಯಾಗಲಿ ಕೃಷಿಯಾಗಲಿ
ವಾಚಕ ವಾಣಿಜ್ಯ ಮಸಿಯಾಗಲಿ
ಮಾಡುವಲ್ಲಿ ಹುಸಿಯಿಲ್ಲದಿರಬೇಕು
ಅದು ಅಸಮಾಕ್ಷನ ಬರವು
ಪಶುಪತಿಯ ಇರವು
ಐಘಟದೂರ ರಾಮೇಶ್ವರಲಿಂಗ ತಾನೆ.
ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಮಾಡುವ ದುಡಿಮೆಯು ಯಾವುದೇ ಆಗಿರಲಿ, ಅದು ಎಲ್ಲರಿಗೂ ಪ್ರಯೋಜನಕಾರಿಯಾಗಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.
ಅಸಿ+ಆಗಲಿ; ಅಸಿ=ಕತ್ತಿ; ಕೃಷಿ+ಆಗಲಿ; ಕೃಷಿ=ಆರಂಬ/ಬೇಸಾಯ; ವಾಚಕ=ಲಿಪಿರೂಪದ ಹೊತ್ತಿಗೆಗಳನ್ನು ಓದುವವನು; ವಾಣಿಜ್ಯ=ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ವ್ಯವಹಾರ; ಮಸಿ+ಆಗಲಿ; ಮಸಿ=ಬರೆಯಲು ಬಳಸುವ ಕಪ್ಪು ಬಣ್ಣದ ದ್ರವರೂಪದ ವಸ್ತು/ಶಾಯಿ;
ಅಸಿಯಾಗಲಿ ಕೃಷಿಯಾಗಲಿ ವಾಚಕ ವಾಣಿಜ್ಯ ಮಸಿಯಾಗಲಿ=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ವ್ಯಕ್ತಿಯು ಮಾಡುವ ದುಡಿಮೆ ಇಲ್ಲವೇ ಕಾಯಕವು, ಅದು ರಣರಂಗದಲ್ಲಿ ಕತ್ತಿಯನ್ನು ಹಿಡಿದು ಮಾಡುವ ಹೋರಾಟವಾಗಿರಲಿ—ಬೂಮಿಯನ್ನು ಉತ್ತು ಬಿತ್ತು ಬೆಳೆ ತೆಗೆಯುವ ಬೇಸಾಯವಾಗಿರಲಿ—ಹೊತ್ತಿಗೆಯಲ್ಲಿನ ಲಿಪಿರೂಪದ ನುಡಿರಚನೆಯನ್ನು ಓದಿ ಇತರರಿಗೆ ಹೇಳುವುದಾಗಿರಲಿ—ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ವ್ಯಾಪಾರವಾಗಿರಲಿ—ಮಸಿಯನ್ನು ಬಳಸಿ ಮಾಡುವ ಬರಹವಾಗಿರಲಿ;
ಮಾಡುವಲ್ಲಿ=ದುಡಿಮೆಯನ್ನು ಮಾಡುವ ನೆಲೆಯಲ್ಲಿ; ಹುಸಿ+ಇಲ್ಲದೆ+ಇರಬೇಕು; ಹುಸಿ=ಪೊಳ್ಳು/ ಉಪಯುಕ್ತವಲ್ಲದ್ದು; ಹುಸಿಯಿಲ್ಲದೆ=ಪೊಳ್ಳುತನವಿಲ್ಲದೆ ಅಂದರೆ ಪ್ರಯೋಜನಕ್ಕೆ ಬರುವ ರೀತಿಯಲ್ಲಿ/ಉಪಯೋಗವಾಗುವ ರೀತಿಯಲ್ಲಿ;
ಮಾಡುವಲ್ಲಿ ಹುಸಿಯಿಲ್ಲದಿರಬೇಕು=ವ್ಯಕ್ತಿಯು ಮಾಡುವ ದುಡಿಮೆಯು ಒಂದಲ್ಲ ಒಂದು ಬಗೆಯಲ್ಲಿ ಜನಸಮುದಾಯಕ್ಕೆ ಒಳಿತನ್ನುಂಟು ಮಾಡುವಂತೆ ಇರಬೇಕೆ ಹೊರತು ಕೆಡುಕನ್ನು ಮಾಡಬಾರದು/ಯಾವುದೇ ದುಡಿಮೆಯನ್ನು ಮಾಡಿದರೂ ವ್ಯಕ್ತಿಯು ಒಳ್ಳೆಯ ಉದ್ದೇಶವನ್ನು ಹೊಂದಿರಬೇಕು;
ಅಸಮ=ಸಮವಲ್ಲದಿರುವುದು; ಅಕ್ಷಿ=ಕಣ್ಣು; ಅಕ್ಷ=ಕಣ್ಣುಳ್ಳವನು; ಅಸಮಾಕ್ಷ=ದೇವರಾದ ಶಿವ; ಶಿವನಿಗೆ ಮೂರು ಕಣ್ಣುಗಳಿವೆ ಎಂಬ ಕಲ್ಪನೆಯು ಜನಮನದಲ್ಲಿದೆ. ಶಿವನ ಹಣೆಯಲ್ಲಿ ಮೂರನೆಯ ಕಣ್ಣು ಇರುವುದರಿಂದ ‘ಅಸಮಾಕ್ಷ’ ಎಂಬ ಹೆಸರು ಬಂದಿದೆ.
ಬರವು=ಆಗಮನ; ಅದು ಅಸಮಾಕ್ಷನ ಬರವು=ಜನರು ಮಾಡುವ ದುಡಿಮೆಯಿಂದ ಜನಸಮುದಾಯದ ನಿತ್ಯ ಜೀವನಕ್ಕೆ ಅಗತ್ಯವಾದ “ ಅನ್ನ-ಬಟ್ಟೆ-ವಸತಿ-ವಿದ್ಯೆ-ಆರೋಗ್ಯ” ದೊರೆಯುತ್ತದೆಯೋ ಅಂತಹ ಎಡೆಗೆ ಶಿವನು ಬರುತ್ತಾನೆ; ಪಶುಪತಿ=ಜಗತ್ತಿನ ಎಲ್ಲ ಜೀವಿಗಳ ಒಡೆಯನಾದ ಶಿವ; ಇರವು=ಇರುವಿಕೆ; ಪಶುಪತಿಯ ಇರವು=ಶಿವನು ನೆಲೆಸಿದ್ದಾನೆ;
ಅದು ಅಸಮಾಕ್ಷನ ಬರವು ಪಶುಪತಿಯ ಇರವು=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ದೇಗುಲದಲ್ಲಿರುವ ಕಲ್ಲು/ಮಣ್ಣು/ಮರ/ಲೋಹದ ವಿಗ್ರಹಗಳಲ್ಲಿ ಶಿವನನ್ನು ಕಾಣುತ್ತಿರಲಿಲ್ಲ. ವ್ಯಕ್ತಿಯು ತನಗೆ, ತನ್ನ ಕುಟುಂಬಕ್ಕೆ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತಿರುವ ದುಡಿಮೆಯ ನೆಲೆಗಳಲ್ಲಿ ಶಿವನನ್ನು ಕಾಣುತ್ತಿದ್ದರು;
ಐಘಟದೂರ ರಾಮೇಶ್ವರಲಿಂಗ=ಶಿವನಿಗೆ ಇದ್ದ ಮತ್ತೊಂದು ಹೆಸರು; ಮೆರೆಮಿಂಡಯ್ಯನವರು ಈ ಹೆಸರನ್ನು ತಮ್ಮ ವಚನಗಳ ಅಂಕಿತನಾಮವನ್ನಾಗಿ ಬಳಸಿದ್ದಾರೆ; ತಾನೆ=ಅವನೇ/ ಆ ಶಿವನೇ;
( ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು