ಕಣ್ಮನ ಸೆಳೆಯುವ ಕಾಕ್ಕು ಪಗೋಡಗಳು

– .

ಮಯನ್ಮಾರ್ ನ ಅತ್ಯಂತ ಅದ್ಬುತವಾದ ಸ್ಮಾರಕಗಳಲ್ಲಿ ಕಾಕ್ಕು ಪಗೋಡಗಳು ಒಂದು. ಇಲ್ಲಿನ ಶಾನ್ ರಾಜ್ಯದ 1 ಚದರ ಕಿಲೋಮೀಟರ್ ಪ್ರದೇಶದಲ್ಲಿ 2,478 ಸ್ತೂಪಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಮಯನ್ಮಾರ್ ನ, ಶಾನ್ ರಾಜ್ಯದ, ಎರಡನೇ ಅತಿದೊಡ್ಡ ಜನಾಂಗೀಯ ಗುಂಪು ಪಾವೋ. ಕಾಕ್ಕೂ ಈ ಜನಾಂಗದವರಿಗೆ ದಾರ‍್ಮಿಕ ಹಾಗೂ ಬಕ್ತಿಯ ಪವಿತ್ರ ಸ್ತಳವಾಗಿದೆ. ಇತ್ತೀಚಿನ ವರ‍್ಶಗಳಲ್ಲಿ ನೈಸರ‍್ಗಿಕ ವಿಕೋಪಕ್ಕೆ ತುತ್ತಾಗಿ ಕಾಕ್ಕೂ ಪಗೋಡಗಳು ಪದೇ ಪದೇ ವ್ಯಾಪಕವಾಗಿ ಹಾನಿಗೆ ಒಳಗಾಗಿದ್ದವು. ಹಾನಿಗೊಳಗಾದ ಬಾಗವನ್ನು ಮತ್ತೆ ಮತ್ತೆ ಪುನರ‍್ನಿರ‍್ಮಿಸಲಾಯಿತು.

ಮಯನ್ಮಾರ್ ನ ಅತ್ಯಂತ ಸುಂದರ ತಾಣಗಳಲ್ಲಿ ಒಂದಾದ ಕಾಕ್ಕೂ, ಮೇಲೆ ತಿಳಿಸಿದಂತೆ 2,478 ಸ್ತೂಪಗಳ ಅಗಾದ ಸಂಗ್ರಹವಾಗಿದೆ. 2000 ವರ‍್ಶಗಳ ಹಿಂದೆ ಬಾರತವನ್ನು ಆಳುತ್ತಿದ್ದ ಅಶೋಕ ಚಕ್ರವರ‍್ತಿ ಇದನ್ನು ನಿರ‍್ಮಿಸಿದ ಎಂದು ಬಾವಿಸಲಾಗಿದೆ. ಇದರಲ್ಲಿನ ಕೆಲವು ಪಗೋಡಗಳು, ಕ್ರಿಸ್ತಪೂರ‍್ವ ಮೂರನೇ ಶತಮಾನದಶ್ಟು ಹಿಂದಿನವು ಎಂದು ತಿಳಿದು ಬಂದಿವೆ. 12ನೇ ಶತಮಾನದಲ್ಲಿ ಬಗಾನ್ ರಾಜ್ಯವನ್ನು ಆಳುತ್ತಿದ್ದ ಕಿಂಗ್ ಅಲೌಂಗ್ಸಿತು ಮೂಲ ಪಗೋಡಗಳ ಶ್ರೇಣಿಯನ್ನು ವಿಸ್ತರಿಸಿದನು. ನಂತರ 17ನೇ ಮತ್ತು 18ನೇ ಶತಮಾದಲ್ಲಿ ಅದು ಇನ್ನೂ ವಿಸ್ತಾರಗೊಂಡಿತು. ಮಯನ್ಮಾರ್ ದೇಶದ ಶಾನ್ ರಾಜ್ಯದ ಹೆಮ್ಮೆ ಈ ಕಾಕ್ಕೂ ಪಗೋಡಗಳು. ಇಂದಿಗೂ ಈ ಪಗೋಡಗಳು ಮುಗಿಲೆತ್ತರಕ್ಕೆ ನಿಂತು ಪ್ರವಾಸಿಗರನ್ನು ಆಕರ‍್ಶಿಸುತ್ತಿವೆ. ಅದರಲ್ಲೂ ಆಕಾಶದಿಂದ ನೋಡಿದಲ್ಲಿ ಅದ್ಬುತ ಚಿತ್ರಣ ಕಾಣಬರುತ್ತದೆ.

ಬರ‍್ಮೀಸ್ ಕ್ಯಾಲೆಂಡರಿನ ಹನ್ನೆರೆಡನೇ ಮಾಸದಲ್ಲಿ ಕಾಕ್ಕೂ ಪಗೋಡದ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಹವಾಮಾನ ಸಹ ತಂಪಾಗಿದ್ದು ಇದು ನಮ್ಮ ಮಾರ‍್ಚ್ ತಿಂಗಳಿನಲ್ಲಿ ಬರುತ್ತದೆ. ಈ ಉತ್ಸವದ ಸಮಯದಲ್ಲಿ ಅಸಂಕ್ಯಾತ ಜನರು ಕಾಕ್ಕೂ ಪಗೋಡಗಳಲ್ಲಿ ಗೌರವ ಸಲ್ಲಿಸಲು ಬರುತ್ತಾರೆ, ಅವರೆಲ್ಲಾ ಸಾಂಪ್ರದಾಯಿಕ ವೇಶಬೂಶಣಗಳನ್ನು ದರಿಸುವುದರೊಂದಿಗೆ ನ್ರುತ್ಯಗಳನ್ನು ಮಾಡುತ್ತಾ ವಿವಿದ ರೀತಿಯ ನೈವೇದ್ಯಗಳನ್ನು ತಯಾರಿಸಿಕೊಂಡು ಬಂದು ಅರ‍್ಪಿಸುತ್ತಾರೆ.

ಈ ಪಗೋಡಗಳ ನಡುವೆ ಮುಕ್ಯ ಪಗೋಡವಿದೆ. ಇದು 40 ಮೀಟರ್ ಎತ್ತರವಿದೆ. ಇದರ ಸುತ್ತಲೂ ಅದಕ್ಕಿಂತಲೂ ಕಿರಿದಾದ ಪಗೋಡಗಳ ಸಾಲುಗಳನ್ನು ಕಾಣಬಹುದು. ಕೆಲವೊಂದರಲ್ಲಿ ಅಲಂಕಾರಿಕ ಚಿತ್ರಗಳೂ ಸಹ ಇವೆ. ಶತಮಾನಗಳಶ್ಟು ಹಳೆಯದಾದ ಈ ಪಗೋಡಗಳು, ನಿರ‍್ವಹಣೆಯ ಕೊರತೆಯಿಂದ ಶಿತಿಲಗೊಂಡಂತೆ ಕಾಣುತ್ತವೆ. ಕೆಲವು ಪಗೋಡಗಳ ಮೇಲೆ ಗಿಡಗಂಟೆಗಳು ಬೆಳೆದಿರುವುದೇ ಇದಕ್ಕೆ ಸಾಕ್ಶಿ. ಇಲ್ಲಿನ ಹಲವಾರು ಪಗೋಡಗಳ ಮೇಲೆ ಬುದ್ದ, ಹಲವು ದೇವತೆಗಳು, ನ್ರುತ್ಯಗಾರರು, ಪೌರಾಣಿಕ ಪ್ರಾಣಿಗಳು ಸೇರಿದಂತೆ ಆಸಕ್ತಿದಾಯಕ ವ್ಯಕ್ತಿಗಳ ಚಿತ್ರಗಳಿಂದ ಅಲಂಕರಿಸಲ್ಪಟ್ಟಿವೆ. ಅದೇನೆ ಆದರೂ ನೋಡಲು ಇದು ಅತ್ಯಂತ ಆಕರ‍್ಶಕ, ರಮಣೀಯ ತಾಣ.

ಇಶ್ಟೆಲ್ಲಾ ಅದ್ಬುತಗಳಿಂದ ಕೂಡಿದ್ದರೂ, ಈ ಪಗೋಡಗಳ ಸಂಕೀರ‍್ಣ ಜನರನ್ನು ಆಕರ‍್ಶಿಸುವಲ್ಲಿ ಸೋತಿದೆ. ಏಕೆಂದರೆ ಮೊದಲನೆಯದಾಗಿ ಅವುಗಳ ನಿರ‍್ವಹಣೆ ಅತ್ಯಂತ ಕೆಟ್ಟದಾಗಿರುವುದು ಮತ್ತು ಅಲ್ಲಿಗೆ ತಲುಪುವುದಕ್ಕೆ ಕೊಂಚ ಪ್ರಯತ್ನದ ಅಗತ್ಯತೆ. ಇಲ್ಲಿಗೆ ತಲುಪಲು ಹಳ್ಳಿಯ ಅಂಕುಡೊಂಕಾದ ರಸ್ತೆಯನ್ನು ಹಾದು ಹೋಗಬೇಕಾಗುತ್ತದೆ. ಕೊಂಚ ಸಂಯಮದಿಂದ ಕಾಕ್ಕೂ ಪಗೋಡಗಳನ್ನು ನೋಡಲು ಹೊರಟರೆ, ಅತ್ಯಂತ ಅದ್ಬುತ ರಮಣೀಯ ಪ್ರಾಕ್ರುತಿಕ ಸೌಂದರ‍್ಯವನ್ನು ಆಸ್ವಾದಿಸಬಹುದು. ದೇವಾಲಯದ ಸಂಕೀರ‍್ಣವು ಇನ್ಲೇ ಸರೋವರದ ಆಗ್ನೇಯ ದಿಕ್ಕಿನಲ್ಲಿರುವ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಶಾನ್ ರಾಜ್ಯದ ರಾಜದಾನಿ ಟೌಂಗಿಯಿಂದ ಇಲ್ಲಿಗೆ ಸುಮಾರು 33 ಕಿಲೋಮೀಟರ್ ದೂರವಿದ್ದು, ಇಶ್ಟು ದೂರವನ್ನು ಕ್ರಮಿಸಲು ಎರಡು ಗಂಟೆಗಳ ಅವದಿಯ ಪ್ರಯಾಣ ಅವಶ್ಯಕ. ಇದಕ್ಕೆ ಮೂಲ ಕಾರಣ ಹಾಳಾದ ರಸ್ತೆಗಳು.

(ಮಾಹಿತಿ ಮತ್ತು ಚಿತ್ರ ಸೆಲೆ: awe-inspiringplaces.com, timesofindia.indiatimes.com, atlasobscura.com, bemytravelmuse.com, thewholeworldisaplayground.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: