ನಾ ನೋಡಿದ ಸಿನೆಮಾ: ತೂತು ಮಡಿಕೆ
ಸಿನೆಮಾ ಎಂದರೆ ಅದು ಬಣ್ಣದ ಲೋಕ. ಅಲ್ಲಿ ನಿಜ ಬದುಕಿಗೆ ಹತ್ತಿರವಾದ ಇಲ್ಲವೇ, ವಾಣಿಜ್ಯ ಲೆಕ್ಕಾಚಾರ ಬಿಟ್ಟು ಸಿನೆಮಾ ಹೆಣೆಯಲು ಹೋದದ್ದು ಕಡಿಮೆಯೇ, ಅದರಲ್ಲೂ ಬಡತನ ಗೆರೆಯ ಅಡಿಯಲ್ಲಿ ಬರುವ ಮಂದಿಯ ಬದುಕಿನ ಬಗ್ಗೆ ಕಟ್ಟಿ ಕೊಟ್ಟ ಸಿನೆಮಾಗಳು ನಮ್ಮಲ್ಲಿ ಕಡಿಮೆ ಎಂದೇ ಹೇಳಬಹುದು. ಇದಕ್ಕೆ ಏನೇ ಕಾರಣಗಳಿದ್ದರೂ ಒಂದು ವರ‍್ಗದ ಬದುಕಿನ ಚಿತ್ರಣಗಳು ಇಂದಿಗೂ ಬದಲಾಗದೇ ಹಾಗೆ ಇದ್ದರೂ ಅದರ ಬಗೆಗೆ ಹೆಚ್ಚಿನ ಬೆಳಕು ಚೆಲ್ಲದೇ ಇರುವುದಂತೂ ನಿಜ. ಅದನ್ನ ಅಲ್ಲೊಂದು ಇಲ್ಲೊಂದು ಸಿನೆಮಾಗಳು ತೋರಿಸಿದ್ದುಂಟು. ಎತ್ತುಗೆಗೆ ಕೇರ್ ಆಪ್ ಪುಟ್ಪಾಟ್. ಇವೆಲ್ಲಾ ಒಂದು ಮಟ್ಟಕ್ಕೆ ಪ್ರಶಸ್ತಿ ಪಡೆದ ಸಿನೆಮಾಗಳು ಎಂಬ “ಹಣೆಪಟ್ಟಿ” ಬಿಟ್ಟರೆ ಮಂದಿಯನ್ನು ಮುಟ್ಟಿದ ಸಿನೆಮಾಗಳು ಎನ್ನಲಾಗದು. ಹೇಗೆ ಈ ಮಂದಿ ಆಳ್ಮೆಗಾರರ ನೋಟದಿಂದ ವಂಚಿತರೋ ಹಾಗೇ ಸಿನೆಮಾದವರ ನೋಟದಿಂದಲೂ ವಂಚಿತರೆ. ಇದರ ಬಗ್ಗೆ ದನಿ ಎತ್ತುವವರು ಇಲ್ಲವೇ ಇದರ ಬಗೆಗೆ ಸಿನೆಮಾಗಳು ಬರಲಿ ಎಂದು ಹಾತೊರೆಯುವ ಮನಗಳಿಗೆ ಹೊಸ ಹುರುಪಿನ ತಂಡವೊಂದು ಸಿನೆಮಾವನ್ನು ಕಟ್ಟಿ ನೋಡುಗರ ಮುಂದಿಟ್ಟಿದೆ ಅದೇ “ತೂತು ಮಡಿಕೆ”.
ನಾಳಿನ ಚಿಂತೆಯಿಲ್ಲದೆ (ಚಿಂತಿಸಿ ಸಿಗುವುದೇನು ಇಲ್ಲ ಎಂದು ಅರಿತು) ಕೊಳಗೇರಿಯಲ್ಲಿ ಬದುಕುತ್ತಿರುವ ಹಲವಾರು ಕುಟುಂಬಗಳು. ಎಲ್ಲಾ ಕಡೆಯಂತೆ ಎಲ್ಲಾ ಕುಟುಂಬದ್ದೂ ಒಂದೊಂದು ಕತೆ. ಪಡ್ಡೆ ಹುಡುಗರ ಗುಂಪು, ಚಿಕ್ಕ ಮಕ್ಕಳ ಗುಂಪು, ಮನೆ ನಡೆಸಲು ತಾವೇ ದುಡಿಯಬೇಕಾದ ಹೆಂಗಳೆಯರ ಗುಂಪು, ಹೀಗೆ ಬದುಕಿನ ಜಂಜಾಟದಲ್ಲಿ ಮುನ್ನಡೆಯುತ್ತಿರುವ ಒಂದು ಕೊಳಗೇರಿಯ ಮಂದಿಯ ಬದುಕು ತೆರೆದುಕೊಳ್ಳುತ್ತದೆ. ಅಲ್ಲೇ ಪುಟ್ಟದೊಂದು ಒಲವಿನ ಮಿಡಿತ. ಇನ್ನೊಂದೆಡೆ ಆಳ್ಮೆಗಾರಿಕೆ, ಅದಕ್ಕಾಗಿ ನಡೆಯುವ ನಾಟಕಗಳು, ನಡು ವರ‍್ಗದ ಬದುಕು, ಮಹತ್ವಾಕಾಂಕ್ಶೆಗಳು, ಇದರೊಟ್ಟಿಗೆ ಸೇರಿಕೊಳ್ಳುವ ಕಳ್ಳಸಾಗಾಣಿಕೆ ತಂಡ. ತಾನೇ ಕಶ್ಟದಲ್ಲಿದ್ದರೂ ತನ್ನ ಜೊತೆಗಿರುವವರ ಕಶ್ಟಕ್ಕೂ ಮಿಡಿಯುವ ಪುಟ್ಟ ಹುಡುಗ. ಇವೆಲ್ಲಾ ಸೇರಿ ಎಲ್ಲರ ಬದುಕುಗಳು ಹೇಗೆ ಬದಲಾಗುತ್ತವೆ ಎಂಬುದೇ ಕತೆ.
ಕತೆಯ ಎಳೆ ಅಶ್ಟೊಂದು ಹೊಸತೇನು ಅಲ್ಲ ಎಂದೆನಿಸಿದರೂ, ಕತೆಯನ್ನು ಕೊಂಡೊಯ್ದಿರುವ ಬಗೆ ಚೆನ್ನಾಗಿದೆ. ಮುಕ್ಯ ತಾರಾಗಣದಲ್ಲಿ ಚಂದ್ರ ಕೀರ‍್ತಿ, ಪ್ರಮೋದ್ ಶೆಟ್ಟಿ, ಶಂಕರ್ ಅಶ್ವತ್ ಹಾಗೂ ಸ. ಹಿ. ಪ್ರಾ. ಶಾಲೆ ಕಾಸರಗೋಡು ಕ್ಯಾತಿಯ ಮಾಸ್ಟರ್ ಸಂಪತ್ ಅವರು ನಟಿಸಿದ್ದರೆ, ಸಹ ಕಲಾವಿದರಾಗಿ ಪಾವನ, ಗಿರೀಶ್ ಶಿವಣ್ಣ, ನರೇಶ್ ಬಟ್ ಹಾಗೂ ಉಳಿದವರು ನಟಿಸಿದ್ದಾರೆ. ತೆರೆಯ ಹಿಂದಿನ ತಂಡದ ಬಗ್ಗೆ ಹೇಳುವುದಾದರೆ ಒಂದು ವಿಶೇಶತೆ ಇದೆ. ಮುಕ್ಯ ಪಾತ್ರದಲ್ಲಿ ನಟಿಸಿರುವ ಚಂದ್ರ ಕೀರ‍್ತಿ ಅವರೇ ಕತೆ, ಚಿತ್ರಕತೆ ಹಾಗೂ ನಿರ‍್ದೇಶನದ ಹೊಣೆ ಹೊತ್ತಿರುವುದೇ ಆ ವಿಶೇಶತೆ. ಒಂದು ಕಳ್ಳಸಾಗಾಣಿಕೆಯ ವಿಶಯವನ್ನು ಇಟ್ಟುಕೊಂಡು ಹಲವರ ಬದುಕನ್ನು ಬೆಸೆಯುತ್ತಾರೆ ನಿರ‍್ದೇಶಕ ಚಂದ್ರ ಕೀರ‍್ತಿ. ಇನ್ನುಳಿದಂತೆ ಸ್ವಾಮಿನಾತನ್ ಅವರ ಸಂಗೀತ ಹಾಗೂ ನವೀನ್ ಚಲ್ಲ ಅವರ ಸಿನೆಮಾಟೋಗ್ರಪಿ ಇದ್ದು, ಮದುಸೂದನ್ ರಾವ್ ಹಾಗೂ ಶಿವಕುಮಾರ್ ಅವರು ಸಿನೆಮಾದ ನಿರ‍್ಮಾಣದ ಹೊಣೆ ಹೊತ್ತಿದ್ದಾರೆ. ಸಿನೆಮಾದ ಚಿತ್ರೀಕಣ ಪೂರ‍್ತಿ ಬೆಂಗಳೂರಿನಲ್ಲೆ ನಡೆದಿದ್ದು, ಕೋವಿಡ್ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಯಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನೆಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿರುವುದು ಒಂದು ರೀತಿಯಲ್ಲಿ ಜಾಣ ನಡೆ ಎಂದರೆ ತಪ್ಪಾಗಲಾರದು. ಈ ಸಿನೆಮಾವು ವೂಟ್ ನಲ್ಲಿದ್ದು, ಕುಟುಂಬ ಸಮೇತ ಕೂತು ನೋಡಲು ಅಡ್ಡಿಯಿಲ್ಲ.
(ಚಿತ್ರ ಸೆಲೆ: facebook.com )
ಇತ್ತೀಚಿನ ಅನಿಸಿಕೆಗಳು