ದೀಪಗಳ ಸಾಲಿನ ದೀಪಾವಳಿ
ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ ಬಾಳಿನ ಕತ್ತಲನ್ನು ಹೋಗಲಾಡಿಸಿ, ಬಾಳಿನಲ್ಲಿ ಬೆಳಕನು ತರುವ ದೀಪಾವಳಿಗೆ ವಿಶೇಶ ಸ್ತಾನವಿದೆ.
ಪುರಾಣಗಳ ಪ್ರಕಾರ ಲೋಕರಕ್ಶಕ ಶ್ರೀವಿಶ್ಣುವು ವಾಮನನ ಅವತಾರವನೆತ್ತಿ ಬಲಿ ಚಕ್ರವರ‍್ತಿಯನ್ನು ತ್ರಿವಿಕ್ರಮನಾಗಿ ಪಾತಾಳಕ್ಕೆ ಕಳಿಸಿದ ಶುಬದಿನವು, ದಾಶರತಿಯು ದಶಕಂಟನ ಸಂಹರಿಸಿ ಅಯೋದ್ಯೆಗೆ ಮರಳಿದ ಶುಬಗಳಿಗೆಯೂ, ಗೋಕುಲ ನಂದನ ಕ್ರಿಶ್ಣನು ಗೋವರ‍್ದನ ಗಿರಿಯನ್ನು ಕಿರುಬೆರಳನಿಂದೆತ್ತಿ ನಂದಗೋಕುಲದ ಜನರನ್ನು ಇಂದ್ರನಿಂದ ರಕ್ಶಿಸಿದ ಸಮಯವು, ನೀಲಮೇಗಶ್ಯಾಮನು ನರಕಾಸುರನ ನರಕಕ್ಕೆ ಅಟ್ಟಿ, ಹದಿನಾರು ಸಾವಿರ ನಾರಿಯರ ಬಂದನದಿಂದ ಮುಕ್ತಗೊಳಿಸಿದ ಕ್ಶಣಗಳನು ಮೆಲುಕು ಹಾಕುತ್ತ, ನಮ್ಮ ಪೂರ‍್ವಜರ ಸ್ಮರಣೆ ಮಾಡುತ, ಶ್ರೀಲಕ್ಶ್ಮಿಯ ಕ್ರುಪಾ ಕಟಾಕ್ಶವು ನಮಗೆ ಸಿಗಲೆಂದು ಬೇಡುತ, ದುಶ್ಟ ಮನೋವಿಕಾರಗಳನು ಸುಟ್ಟು ಹಾಕುತ, ದೀಪಗಳ ಬೆಳಕು ಬಾಳಲಿ ಸಂತೋಶ, ಸಮ್ರುದ್ದಿ, ಶಾಂತಿಯ ತರಲೆಂದು ಆಚರಿಸುವ ಹಬ್ಬವೇ ದೀಪಾವಳಿ.
ಮಣ್ಣಿನ ದೀಪಗಳನ್ನು ಹಚ್ಚುವ ಮೂಲಕ ಮನದ ಮನೆಯ ಅಂದಕಾರವೆಲ್ಲಾ ಕಳೆಯುವ ಹಬ್ಬವು ದೀಪಾವಳಿ. ಆದರೆ ದೀಪಗಳ ಸಾಲುಗಳನ್ನ ಜೋಡಿಸುವ ಜೊತೆ ಜೊತೆಯಲ್ಲಿಯೇ ಪಟಾಕಿಗಳ ಸುಡುವ ಆಚರಣೆಯೂ ಆರಂಬವಾದ ನಂತರ ಪರಿಸರದ ಮೇಲೆ ವ್ಯತಿರಿಕ್ತವಾದ ಪರಿಣಾಮಗಳು ಉಂಟಾಗತೊಡಗಿದವು. ಬೆಳಕಿನ ಹಬ್ಬ ಜೀವನದಲ್ಲಿ ಬೆಳಕನ್ನು ತರುವ ಬದಲಾಗಿ ಸಾವಿರಾರು ಜನರ ಬಾಳನು ಅಂದಕಾರದಲ್ಲಿ ಕಳೆಯುವಂತೆ, ಪ್ರಾಣಿ ಪಕ್ಶಿಗಳ ಸಂಕಟಕ್ಕೆ, ಬೆಂಕಿ ಅವಗಡಗಳಿಗೆ ಕಾರಣವಾಗಿದ್ದೂ ಇದೆ. ಸರ‍್ಕಾರವು ಪರಿಸರ ಹಾಗೂ ಜನರ ಹಿತದ್ರುಶ್ಟಿಯಿಂದ 125 ಡೆಸಿಬಲ್ ಸಾಮರ‍್ತ್ಯಕ್ಕಿಂತ ಹೆಚ್ಚಿನ ಪಟಾಕಿಗಳನ್ನು ಮಾರಾಟ ಮತ್ತು ಬಳಸುವುದನ್ನು ನಿಶೇದಿಸಿದೆ. ಪರಿಸರ ಸ್ನೇಹಿ ದೀಪಾವಳಿಯ ಆಚರಣೆಯನ್ನು ನಾವು ಜನರಲ್ಲಿ ಜಾಗ್ರುತಿ ಮೂಡಿಸುವ ಮೂಲಕ ಆಚರಿಸಬೇಕಾಗಿದೆ. ಏಕೆಂದರೆ ದೀಪಾವಳಿಯ ಸಮಯದಲ್ಲಿ ಆಗುವ ಪಟಾಕಿಗಳ ಅನಾಹುತಗಳು ಹಲವಾರು. ಪಟಾಕಿ ತಯಾರಿಸುವ ಕಾರ‍್ಕಾನೆಗಳಲ್ಲಿ ಕಾರ‍್ಯ ನಿರ‍್ವಹಿಸುವ ಲಕ್ಶಾಂತರ ಜನರು ರೋಗಗಳಿಗೆ ಹಾಗೂ ಕೆಲವೂಮ್ಮೆ ಅಗ್ನಿ ದುರಂತಗಳಿಗೆ ಬಲಿಯಾಗುತ್ತಿದ್ದಾರೆ.
ದೀಪಾವಳಿಯ ದಿನದಂದು, ಪಟಾಕಿ ಸಿಡಿಸುವಾಗ ಎಚ್ಚರವಹಿಸದೇ ಕಣ್ಣುಗಳನ್ನು ಕಳೆದುಕೊಂಡಂತಹ ಚಿಕ್ಕ ಮಕ್ಕಳನ್ನು ನೋಡಿದ್ದೇವೆ. ಪಟಾಕಿಗಳ ಅಬ್ಬರದಿಂದ ಚಿಕ್ಕ ಮಕ್ಕಳು ಬಯಗೊಳ್ಳುವರು. ಪಟಾಕಿಗಳ ಸುಡುವಿಕೆ ಮತ್ತು ಸದ್ದು ಹ್ರುದಯ ರೋಗಿಗಳ, ಬಾಣಂತಿಯರು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಾಣಿ ಪಕ್ಶಿಗಳು ಕಿವುಡುತನಕ್ಕೆ ಒಳಗಾಗುತ್ತವೆ. ಗಾಳಿ, ಶಬ್ದ ಮಾಲಿನ್ಯವಾಗುವುದರ ಜೊತೆಗೆ ಪಟಾಕಿಗಳ ತ್ಯಾಜ್ಯದಿಂದ ವಾತಾವರಣ ಕಲುಶಿತಗೊಳ್ಳುತ್ತದೆ. ಬಾಣ ಬಿರುಸಿನ ಪಟಾಕಿಗಳಿಂದ ರೈತರ ಬಣವಿ, ದಾಸ್ತಾನು ಕೊಟಡಿ, ಮನೆಗಳು ಬೆಂಕಿಗೆ ಬಲಿಯಾಗುವುದೂ ಉಂಟು.
ನಾವು ಆಚರಿಸುವ ಹಬ್ಬಗಳು ಪರಿಸರಕ್ಕೆ ಮಾರಕವಾಗುವ ಬದಲು ಪರಿಸರ ಸ್ನೇಹಿಯಾಗುವಂತೆ ಆಚರಿಸುವ ಮೂಲಕ ಹಬ್ಬಗಳ ಸಂಬ್ರಮವನ್ನು ಸವಿಯಬೇಕು. ಇದಕ್ಕಾಗಿ ನಾವುಗಳು 125 ಡೆಸಿಬೆಲ್ ಸಾಮರ‍್ತ್ಯಕ್ಕಿಂತ ಕಡಿಮೆಯ ಪಟಾಕಿಗಳನ್ನು ಮಾತ್ರ ಸಿಡಿಸುವ. ರೋಗಿಗಳು ಬಾಣಂತಿಯರು, ವ್ರುದ್ದರು, ಮಕ್ಕಳು, ಪ್ರಾಣಿ ಪಕ್ಶಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ. ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಜೊತೆಯಲ್ಲಿರುವ. ಮಣ್ಣಿನ ಹಣತೆಗಳನ್ನು ಹೆಚ್ಚಾಗಿ ಬಳಸುವ, ಪಟಾಕಿ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಪಟಾಕಿಗಳನ್ನು ಸುಡದಂತೆ ತೀರ‍್ಮಾನಿಸುವ. ಆಸ್ಪತ್ರೆ, ಹುಲ್ಲಿನ ಬಣವಿ, ಗುಡಿಸಲು, ಜನಜಂಗುಳಿಗಳಿಂದ ದೂರದಲ್ಲಿ ಪಟಾಕಿ ಹಚ್ಚುವ. ಸ್ವದೇಶಿ ಪಟಾಕಿಗಳನ್ನ ಮಾತ್ರ ಬಳಸುವ. ಪ್ಲಾಸ್ಟಿಕ್ ಪ್ಯಾಕಿಂಗ್ ಉಡುಗೊರೆಗಳ ಬದಲಾಗಿ ನೈಸರ‍್ಗಿಕ ಹಾಗೂ ಪರಿಸರ ಸ್ನೇಹಿ ಉಡುಗೊರೆಗಳನ್ನು ನೀಡುವ. ಅನಾತರು, ವ್ರುದ್ದರು, ಬಡವರಿಗೆ ಬಟ್ಟೆಗಳನ್ನು ಕೊಡಿಸುವ ಮೂಲಕ ನಾವೆಲ್ಲರೂ ದೀಪಗಳ ಹಬ್ಬವನ್ನು ಅರ‍್ತಪೂರ‍್ಣವಾಗಿ ಆಚರಿಸೋಣ.
ಮಾನವೀಯತೆಯೆಂಬ ಮಣ್ಣಿನ ಹಣತೆಯಲ್ಲಿ, ಸಹಬಾಳ್ವೆ ಪ್ರೀತಿಯ ಎಳ್ಳಿನ ತೈಲವನ್ನು ಹಾಕಿ, ಸ್ನೇಹ ಸಹೋದರತ್ವವ ಬತ್ತಿಯನ್ನಿಟ್ಟು, ಸಂಸ್ಕಾರ ಸಂಸ್ಕ್ರುತಿಯ ಬೆಳಕನ್ನು ಹಂಚುವ. ಪ್ರಾಣಿ ಪಕ್ಶಿಗಳ ಉಳಿವಿಗಾಗಿ ಚಿಂತಿಸುತ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ.
(ಚಿತ್ರಸೆಲೆ :pixahive.com)
ಇತ್ತೀಚಿನ ಅನಿಸಿಕೆಗಳು