ಜೋಳದ ಹಿಟ್ಟಿನ ಕೇಕ್

– ಸವಿತಾ.

 

ಬೇಕಾಗುವ ಸಾಮಾನುಗಳು

ಜೋಳದ ಹಿಟ್ಟು – ಒಂದೂವರೆ ಲೋಟ
ಮೊಸರು – 4 ಟೇಬಲ್ ಚಮಚ
ತುಪ್ಪ – 6 ಚಮಚ
ಬೆಲ್ಲ/ಸಕ್ಕರೆ – 1 ಲೋಟ
ಹಾಲು – 3/4 (ಮುಕ್ಕಾಲು) ಲೋಟ
ಅಡುಗೆ ಸೋಡಾ – 1/2 ಚಮಚ
ಒಣ ದ್ರಾಕ್ಶಿ – 20
ಏಲಕ್ಕಿ – 2
ಚಕ್ಕೆ – 1/2 ಇಂಚು

ಮಾಡುವ ಬಗೆ

ಜೋಳದ ಹಿಟ್ಟು ಹುರಿದು ತೆಗೆದು ಇಡಿರಿ. ಬೆಲ್ಲ ಜಜ್ಜಿ ಪುಡಿ ಮಾಡಿಕೊಳ್ಳಿ. ಸಕ್ಕರೆ ಬಳಸುವುದಾದರೆ ಮಿಕ್ಸರ್ ನಲ್ಲಿ ಪುಡಿ ಮಾಡಿ ಒಂದು ಪಾತ್ರೆ ಯಲ್ಲಿ ಹಾಕಿರಿ. ಮತ್ತೊಂದು ಪಾತ್ರೆಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಉಳಿದ ತುಪ್ಪ, ಮೊಸರು, ಅಡುಗೆ ಸೋಡಾ, ಸಕ್ಕರೆ/ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ. ನಂತರ ಸ್ವಲ್ಪ ಹಾಲು, ಸ್ವಲ್ಪ ಹುರಿದಿಟ್ಟ ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ.

ಎಲ್ಲಾ ಹಿಟ್ಟು ಹಾಲು ಸೇರಿಸಿಯಾದ ಮೇಲೆ ಏಲಕ್ಕಿ, ಚಕ್ಕೆ ಕುಟ್ಟಿ ಪುಡಿ ಮಾಡಿ ಹಾಕಿ ಮತ್ತು ಒಣ ದ್ರಾಕ್ಶಿ ಹಾಕಿ ಇನ್ನೊಮ್ಮೆ ಚೆನ್ನಾಗಿ ಕಲಸಿ. ಕಲಸಿದ ಹಿಟ್ಟು ಮದ್ಯಮ ಹದ ಇರಬೇಕು. ಗಟ್ಟಿ, ತೆಳುವು ಇರಬಾರದು, ಬೇಕಾದರೆ ಹಾಲು ಸೇರಿಸಿಕೊಳ್ಳಿ. ಮಿಶ್ರಣವನ್ನು ತುಪ್ಪ ಹಚ್ಚಿದ ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ.

ಕುಕ್ಕರ್ ನಲ್ಲಿ ಉಸುಕು ( ಮರಳು ) ಹಾಕಿ. ರಬ್ಬರ್ ಗ್ಯಾಸ್ಕೆಟ್ ಮತ್ತು ಸೀಟಿ ತೆಗೆದು ಮುಚ್ಚಳ ಹಾಕಿ, ಹತ್ತು ನಿಮಿಶ ಜೋರು ಉರಿಯಲ್ಲಿ ಬಿಸಿ ಮಾಡಿ ಒಲೆ ಆರಿಸಿ ಇಟ್ಟಿರಿ. ಈಗ ಹಿಟ್ಟು ಹಾಕಿದ ಪಾತ್ರೆ ಕುಕ್ಕರ್ ನಲ್ಲಿ ಇಟ್ಟು ಒಲೆ ಹಚ್ಚಿ, ಮುಚ್ಚಳ ಮುಚ್ಚಿ ಮದ್ಯಮ ಉರಿಯಲ್ಲಿ 45 ರಿಂದ 50 ನಿಮಿಶ ಬೇಯಿಸಿ.

ಕೇಕ್ ಪರಿಮಳ ಬರುತ್ತದೆ ಮತ್ತು ಪೋರ‍್ಕ್ ಹಾಕಿ ಚೆಕ್ ಮಾಡ ಬಹುದು. ಬೆಂದಿಲ್ಲ ಅಂದರೆ ಮಾತ್ರ ಇನ್ನೂ 5 ನಿಮಿಶ ಬೇಯಿಸಿ ತೆಗೆಯಿರಿ. ಒಲೆ ಆರಿಸಿ ಅರ‍್ದ ಗಂಟೆ ಆರಲು ಬಿಡಿ. ಪಾತ್ರೆ ಬದಿ ಚಾಕುವಿನಿಂದ ಸಡಿಲಿಸಿ ತಿರುಗಿ ಹಾಕಿ. ಈಗ ಜೋಳದ ಹಿಟ್ಟಿನ ಕೇಕ್ ಸವಿಯಲು ಸಿದ್ದ. ಆರೋಗ್ಯಕರ ಕೇಕ್ ಕತ್ತರಿಸಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks