ಚೆಟ್ಟಿನಾಡು ಕೋಳಿ ಹುರುಕುಲು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ – 1 ಕೆ.ಜಿ.
  • ಚಕ್ಕೆ – 2 ಇಂಚು
  • ಲವಂಗ – 6
  • ಏಲಕ್ಕಿ – 4
  • ಸ್ಟಾರ್ ಮೊಗ್ಗು – 1
  • ಲವಂಗದ ಎಲೆ – 1
  • ಕಾಳುಮೆಣಸು – 1/2 ರಿಂದ 1 ಚಮಚ
  • ಒಣಮೆಣಸು – 8
  • ಕೊತ್ತಂಬರಿ ಬೀಜ – 3 ಚಮಚ
  • ಸೋಂಪು – 1 ಚಮಚ
  • ಜೀರಿಗೆ – 1 ಚಮಚ
  • ಹಸಿಮೆಣಸು – 3
  • ಉಪ್ಪು/ಕಲ್ಲುಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ – ಅರ‍್ದ ಚಮಚ
  • ಕಾರದ ಪುಡಿ – 1 ಚಮಚ
  • ಶುಂಟಿ ಬೆಳ್ಳುಳ್ಳಿ ಹೂರ‍್ಣ/ಪೇಸ್ಟ್ – 1 ಚಮಚ
  • ಈರುಳ್ಳಿ – 2
  • ಮೆಂತೆ – ಅರ‍್ದ ಚಮಚ
  • ಉದ್ದಿನಬೇಳೆ – 1 ಚಮಚ
  • ಗೋಡಂಬಿ – 10-12
  • ಎಣ್ಣೆ – 5 ರಿಂದ 6 ಚಮಚ
  • ನಿಂಬೆ ರಸ – 1 ಹಣ್ಣಿನದ್ದು
  • ಕೊತ್ತಂಬರಿ ಸೊಪ್ಪು – ಚೆಂದಕಾಣಿಸಲು ಸ್ವಲ್ಪ
  • ಕರಿಬೇವಿನ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಕಾವಲಿಗೆ ಚಕ್ಕೆ,ಲವಂಗ,ಲವಂಗದ ಎಲೆ, ಏಲಕ್ಕಿ, ಸ್ಟಾರ್ ಮೊಗ್ಗು, ಕಾಳುಮೆಣಸು, ಜೀರಿಗೆ, ಸೋಂಪು, ಕೊತ್ತಂಬರಿ ಬೀಜ ಮತ್ತು ಒಣಮೆಣಸು ಇಶ್ಟನ್ನು ಹಾಕಿ ಹುರಿದುಕೊಳ್ಳಿರಿ. ಆಮೇಲೆ ಇದು ತಣ್ಣಗಾದ ಮೇಲೆ ಇದನ್ನು ನುಣ್ಣಗೆ ರುಬ್ಬಿ ಪುಡಿಮಾಡಿಕೊಳ್ಳಿರಿ. ಈಗ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಕಾಯಲು ಇಡಿ. ಈಗ ಇದಕ್ಕೆ ಮೆಂತೆ,ಉದ್ದಿನಬೇಳೆ, ಗೋಡಂಬಿ ಹಾಕಿ ನಡು ಉರಿಯಲ್ಲಿ ಹುರಿಯಿರಿ. ಗೋಡಂಬಿ ಕೆಂಪು ಬಣ್ಣಕ್ಕೆ ತಿರುಗಿದೊಡನೆ, ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಈರುಳ್ಳಿ, ಕರಿಬೇವು ಹಾಕಿರಿ. ಆಮೇಲೆ ಇದಕ್ಕೆ ಹಸಿಮೆಣಸು, ಶುಂಟಿ ಬೆಳ್ಳುಳ್ಳಿ ಹೂರ‍್ಣ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ತೊಳೆದಿಟ್ಟ ಕೋಳಿ ತುಂಡುಗಳನ್ನು ಹಾಕಿ ಇದರ ಮೇಲೆ ಉಪ್ಪು, ಅರಿಶಿಣ ಪುಡಿ, ಕಾರದ ಪುಡಿ ಹಾಕಿ ಒಂದು ಹದಿನೈದರಿಂದ ಇಪ್ಪತ್ತು ನಿಮಿಶ ಬೇಯಿಸಿ(ಕೋಳಿ ನೀರುಬಿಟ್ಟು,ಆರುವ ವರೆಗೆ). ಈಗ ಇದಕ್ಕೆ ಪುಡಿಮಾಡಿಟ್ಟುಕೊಂಡ ಮಸಾಲೆಯಲ್ಲಿ ಅರ‌್ದದಶ್ಟು ಇದರ ಮೇಲೆ ಉದುರಿಸಿ, ಅಲ್ಲಾಡಿಸಿ ಒಂದೈದು ನಿಮಿಶ ಬೇಯಿಸಿ. ಆಮೇಲೆ ಇದಕ್ಕೆ ನಿಂಬೆ ಹುಳಿಯನ್ನು ಹಾಕಿ, ಉಳಿದ ಹುರಿದಿಟ್ಟ ಮಸಾಲೆಯನ್ನು ಹಾಕಿ, ಹುರಿಯಿರಿ. ಈಗ ಚೆಟ್ಟಿನಾಡು ಮಾದರಿ ಕೋಳಿ ಹುರುಕುಲು ತಯಾರಿದ್ದು, ಇದನ್ನು ಚೆಂದಕಾಣಿಸಲು ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿಕೊಳ್ಳಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: