ನಾ ನೋಡಿದ ಸಿನೆಮಾ: ಹೊಂದಿಸಿ ಬರೆಯಿರಿ

– ಕಿಶೋರ್ ಕುಮಾರ್.

ಕಾಲೇಜಿನ ದಿನಗಳಿಂದ ಮೊದಲಾಗಿ, ಒಲವಿನೊಂದಿಗೆ ಸಾಗಿ, ಮುಂದೆ ಬದುಕಿನ ಜಂಜಾಟದಲ್ಲಿ ಕೊನೆಗೊಳ್ಳುವ ಸಿನೆಮಾಗಳು ಕನ್ನಡಿಗರಿಗೆ ಹೊಸತೇನಲ್ಲ. ಆದರೆ ಇದರಲ್ಲೂ ಹೊಸತನವನ್ನು ತಂದಿರುವ ಸಿನೆಮಾ ಹೊಂದಿಸಿ ಬರೆಯಿರಿ.

ಕನಸುಗಳನ್ನು ಹೊತ್ತು, ದೂರದ ಊರುಗಳಿಂದ ಎಂಜಿನಿಯರಿಂಗ್ ಕಾಲೇಜಿಗೆ ಬರುವ ಮುಕ್ಯ ಪಾತ್ರಗಳು. ಕಾಲೇಜಿನಲ್ಲಿ ನಡೆಯುವ ತರಲೆ, ರ್‍ಯಾಗಿಂಗ್, ಸಹಪಾಟಿಯೊಡನೆ ಮೂಡುವ ಒಲವು ಹೀಗೆ ಮೊದಲಾಗುವ ಕತೆ, ಎಂಜಿನಿಯರಿಂಗ್ ಮುಗಿಸಿ ಹೇಗಾದರೂ ಒಂದು ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎನ್ನುವ ಮದ್ಯಮ ವರ‍್ಗದ ಪಾತ್ರ, ಈ ಜೀವನದ ಹೋರಾಟದಲ್ಲಿ ನಡೆದು ಹೋಗುವ ಕಹಿ ಗಟನೆ. ಹೀಗೆ ಮುಗಿಯುವ ಕಾಲೇಜು ದಿನಗಳು.

ಕಾಲೇಜಿನಿಂದ ಹೊರಬಂದು, ಜೀವನದ ಆಗುಹೋಗುಗಳ ನಡುವೆ ತಮ್ಮ ಜೀವನವನ್ನು ಕಟ್ಟಿಕೊಳ್ಳುವ 4 ಜೋಡಿಗಳ ಬದುಕಿನ ಪಯಣಕ್ಕೆ ತೆರೆದುಕೊಳ್ಳುವ ಕತೆ, ಒಂದೊಂದೇ ಪಾತ್ರದ ನೋವು ನಲಿವುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಕಾಲೇಜಿನಲ್ಲೆ ಪ್ರೀತಿಸಿ, ನಂತರ ಒಂದೇ ಕಡೆ ಕೆಲಸ ಹುಡುಕಿ, ದೂರದ ಚೆನ್ನೈ ನಲ್ಲಿ ಬದುಕು ಕಟ್ಟಿಕೊಳ್ಳುವ ಜೋಡಿ. ಒಲವು ಮೊದಲಾದಾಗ ಇದ್ದ ಅಕ್ಕರೆ, ಒಲವು ಮದುವೆ ನಂತರ ಮರೆಯಾದಾಗ ಉಂಟಾಗುವ ಜಗಳ, ಮುನಿಸು ಹೀಗೆ ಒಂದು ಮದುವೆಯಾದ ಜೋಡಿಯ ಜೀವನವನ್ನು ತುಂಬಾ ಸೊಗಸಾಗಿ ಮುಂದಿಡುತ್ತಾರೆ ನಿರ‍್ದೇಶಕರು. ಎಂದಿನಂತೆ ತಮ್ಮ ಇಂಪಾದ ದನಿ ಹಾಗೂ ಮುದ್ದಾದ ನಟನೆಯಿಂದ ಮನಗೆಲ್ಲುತ್ತಾರೆ ಐಶಾನಿ ಶೆಟ್ಟಿ. ಹಲವು ದಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಮಹಾದೇವ್ ಅವರು ಇಲ್ಲಿ ಐಶಾನಿ ಅವರ ಜೋಡಿಯಾಗಿದ್ದಾರೆ.

ಪ್ರೀತಿಯನ್ನ ಗಂಬೀರವಾಗಿ ಪರಿಗಣಿಸುವ ಪಾತ್ರದಲ್ಲಿ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಕ್ಯಾತಿಯ ಪ್ರವೀಣ್ ತೇಜ್ ಅವರು ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಬಾವನ ರಾವ್ ಅವರು ನಟಿಸಿದ್ದಾರೆ. ಮದುವೆಗೂ ಮುನ್ನ ಪ್ರೀತಿಸಿದ ಹುಡುಗನನ್ನು ಮರೆಯಲಾಗದೆ, ಮದುವೆಯನ್ನು ಸಹ ಸ್ವೀಕರಿಸಲಾಗದೆ ಪರಿತಪಿಸುತ್ತಾ, ಮೌನಕ್ಕೆ ಶರಣಾಗುವ ಬಾವನಾ ರಾವ್ ಅವರ ಪಾತ್ರ ಇನ್ನುಳಿದ ಪಾತ್ರಗಳನ್ನು ಬೇಟಿಯಾದಾಗ ಆಗುವ ಬದಲಾವಣೆ ಮುಂದೆ ಈ ಜೋಡಿಯ ಬದುಕಿನಲ್ಲಿ ತರುವ ಸಾಮರಸ್ಯ ಹಿಡಿಸುತ್ತದೆ.

ಕಾಲೇಜಿನ ತುಂಟಾಟದ ದಿನಗಳಲ್ಲಿ ನಗಿಸುವುದಲ್ಲದೆ, ಕಾಲೇಜು ಮುಗಿಸಿ ಕೆಲಸ ಹುಡುಕುವ ಪರದಾಟದ ಕೊನೆಯ ತಾಣವಾದ ಕಾಲ್ ಸೆಂಟರ್ ನಲ್ಲಿ ಬದುಕು ಕಟ್ಟಿಕೊಂಡು ಅಲ್ಲೇ ಪ್ರೀತಿಸಿ ಅದನ್ನು ಮನೆಯವರಿಗೆ ತಿಳಿಯಪಡಿಸುವ ಮಂಡ್ಯದ ಹುಡುಗನ (ಟೈಗರ್) ಪಾತ್ರದಲ್ಲಿ ಅನಿರುದ್ ಆಚಾರ‍್ಯ ನೋಡುಗರನ್ನು ನಗಿಸುತ್ತಾರೆ.

ಕಾಲೇಜಿನ ದಿನಗಳಿಂದಲೂ ಇತರರೊಡನೆ ಬೆರೆಯದ, ಆದರೆ ಇದ್ದಕ್ಕಿದ್ದಹಾಗೇ ಗೆಳೆಯರ ಕಶ್ಟಕಾಲದಲ್ಲಿ ಅವರೊಂದಿಗೆ ನಿಲ್ಲುವ, ಎಲ್ಲರ ಮನದಲ್ಲೂ ಸ್ತಾನ ಪಡೆದು, ಇದ್ದಕ್ಕಿದ್ದಂತೆ ಒಮ್ಮೆ ಹೇಳದೇ ದೂರವಾಗುವ ಪಾತ್ರದಲ್ಲಿ ಗುಲ್ಟು ಕ್ಯಾತಿಯ ನವೀನ್ ಶಂಕರ್ ಹಾಗೂ ಮುಂದೊಮ್ಮೆ ಇವರಿಗೆ ಜೋಡಿಯಾಗುವ ಕೆ.ಜಿ.ಎಪ್ ಕ್ಯಾತಿಯ ಅರ‍್ಚನಾ ಜೋಯಿಸ್. ಈ ಜೋಡಿ ಎಲ್ಲರ ಮನವನ್ನು ಗೆಲ್ಲುತ್ತದೆ. ಇಡೀ ಸಿನೆಮಾದ ಪಾತ್ರ/ಜೋಡಿಗಳು ಒಂದು ತೂಕವಾದರೇ, ಈ ಜೋಡಿಯೇ ಒಂದು ತೂಕ ಹಾಗೂ ಚಿತ್ರದ ಹೈಲೈಟ್ ಎಂದರೆ ತಪ್ಪಾಗಲಾರದು. ನವೀನ್ ಶಂಕರ್ ಅವರ ಪಾತ್ರದ ಪಯಣ ನೋಡುಗರನ್ನ ಬದುಕಿನ ಒಂದು ಪಯಣಕ್ಕೆ ಕರೆದೊಯ್ಯುವುದಂತೂ ಕಂಡಿತ. ಅರ‍್ಚನಾ ಜೋಯಿಸ್ ಅವರದ್ದೂ ಸಹ ಅಶ್ಟೇ ಪ್ರಬುದ್ದ ನಟನೆ.

ಹಲವಾರು ಪಾತ್ರಗಳ ಬದುಕನ್ನು ಒಂದು ಸಿನೆಮಾದಲ್ಲಿ ಚೆನ್ನಾಗಿ ಅನಾವರಣಗೊಳಿಸಿದ್ದಾರೆ ನಿರ‍್ದೇಶಕ ರಾಮೇನಹಳ್ಳಿ ಜಗನ್ನಾತ. ಚಿತ್ರದುದ್ದಕ್ಕೂ ನೋಡುಗರನ್ನ ಹಿಡಿದಿಡುವುದರಲ್ಲಿ ಗೆದ್ದಿದ್ದಾರೆ. ಇನ್ನುಳಿದಂತೆ ಜೋಯ್ ಕೋಸ್ಟಾ ಅವರ ಸಂಗೀತ, ಶಾಂತಿ ಸಾಗರ್ ಅವರ ಸಿನೆಮಾಟೋಗ್ರಪಿ ಹಾಗೂ ಅಕ್ಶಯ್ ಪಿ ರಾವ್ ಅವರ ಸಂಕಲನ ಈ ಚಿತ್ರಕ್ಕಿದೆ. ಒಂದೊಳ್ಳೆ ಸಿನೆಮಾವನ್ನು ನೋಡುಗರಿಗೆ ಕಟ್ಟಿಕೊಟ್ಟಿದೆ ಸಿನೆಮಾ ತಂಡ. ಚಿತ್ರಮಂದಿರದಲ್ಲಿರುವಶ್ಟು ಹೊತ್ತು ನೋಡುಗರನ್ನು ರಂಜಿಸಿ, ಎಲ್ಲಾ ಪಾತ್ರಗಳನ್ನು ಹೊಂದಿಸಿ ಬರೆದಿದೆ ಚಿತ್ರತಂಡ.

(ಚಿತ್ರ ಸೆಲೆ: facebook.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *