ಬಾಚಣಿಗೆ ಬಗ್ಗೆ ನಿಮಗೆಶ್ಟು ಗೊತ್ತು?
ಪ್ರತಿಯೊಬ್ಬರೂ ತಮ್ಮ ತಮ್ಮ ಅಬಿರುಚಿಗೆ ತಕ್ಕಂತೆ ಕೂದಲ ಅಲಂಕಾರ ಮಾಡಿಕೊಳ್ಳುವುದು ಸಹಜ. ಇದು ಕೇವಲ ಇತ್ತೀಚಿನ ಪದ್ದತಿಯಲ್ಲ. ಅನಾದಿ ಕಾಲದಿಂದಲೂ ಕಾಲಕ್ಕೆ ತಕ್ಕಂತೆ ತಮ್ಮ ಕೂದಲ ಅಲಂಕಾರದ ಕೌಶಲ್ಯವನ್ನು ಹೆಂಗಳೆಯರು ತೋರುತ್ತಾ ಬಂದಿದ್ದಾರೆ. ಇದಕ್ಕೆ ಗಂಡಸರೂ ಕೂಡ ಹೊರತಲ್ಲ. ಹೆಣ್ಣಿನ ಸೌಂದರ‍್ಯ ಅವಳ ಕೂದಲಲ್ಲಿ ಅಡಗಿದೆ ಎನ್ನುತ್ತಾರೆ ತಿಳಿದವರು. ಹೆಣ್ಣು ಮಕ್ಕಳು ಮುಡಿ ಕಟ್ಟುವುದು, ಜಡೆ ಹೆಣೆಯುವುದು ಹಳೆ ಕಾಲದಿಂದಲೂ ರೂಡಿಯಲ್ಲಿದೆ.
ಕವಿಯೊಬ್ಬರು ಹೆಣ್ಣಿನ ಜಡೆಯನ್ನು ಹಾವಿನ ಆಕಾರಕ್ಕೆ ಹೋಲಿಸಿ ನಾಗವೇಣಿ, ಕ್ರಿಶ್ಣವೇಣಿ ಅಂತೆಲ್ಲಾ ಹೊಗಳಿದ್ದಾರೆ.
ಕವಿ ಜಿ. ಎಸ್ ಶಿವರುದ್ರಪ್ಪ ಅವರು ಹೆಣ್ಣಿನ ಜಡೆಯನ್ನು ಕವಿತೆ ಮೂಲಕ ವರ‍್ಣಿಸಿದ್ದಾರೆ. ಅದರ ಕೆಲ ಸಾಲುಗಳು ಇಂತಿವೆ
ಲಲನೆಯರ ಬೆನ್ನೆನೆಡೆ
ಹಾವಿನೊಲು ಜೋಲ್ವ ಜಡೆ
ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ.
ಕವಿ ಕೆ. ಎಸ್. ನರಸಿಂಹಸ್ವಾಮಿಯವರು ಹೆಣ್ಣಿನ ಕೂದಲನ್ನು
‘ದೂರದಲಿ ಗಿರಿಯ ಮೇಲೆ
ಇಳಿದಂತೆ ಮುಗಿಲ ಮಾಲೆ’ ಎಂದು ಸುಂದರವಾಗಿ ಬಿಂಬಿಸಿದ್ದಾರೆ.
ಹಿಂದೆ ಕೇವಲ ಹೆಣ್ಣು ಮಕ್ಕಳಶ್ಟೆ ಅಲ್ಲ, ಗಂಡಸರೂ ಸಹ ನೀಳವಾದ ಕೂದಲನ್ನು ಬಿಡುವ ವಾಡಿಕೆ ಇತ್ತು. ಈಗಲೂ ಉದ್ದ ಕೂದಲು ಬಿಡುವ ಗಂಡುಮಕ್ಕಳಿಗೆ ಹಳ್ಳಿ ಕಡೆ ಜಡೆ ಸಿದ್ದಯ್ಯ ಎಂದು ನಗೆ ಚಟಾಕಿ ಹಾರಿಸುತ್ತಾರೆ. ತಾಯಂದರಿಗೆ ತಮ್ಮ ಪುಟ್ಟ ಮಕ್ಕಳಿಗೆ ಕ್ರಿಶ್ಣನ ಜಡೆ, ಮೊಗ್ಗಿನ ಜಡೆ ಹಾಕಿ ಪೋಟೋ ತೆಗೆಸುವುದೇ ಒಂದು ಕುಶಿ. ಈಗಿನ ಕಾಲಕ್ಕೆ ತಕ್ಕಂತೆ ಕೂದಲ ವಿನ್ಯಾಸದಲ್ಲಿ ಬದಲಾವಣೆ ಅನುಸರಿಸುವವರಿದ್ದರೂ, ಸಾಂಪ್ರದಾಯಿಕವಾಗಿ ಬಂದಿರುವ ಕೂದಲಿನ ಅಲಂಕಾರಕ್ಕೆ ಪೆಟ್ಟು ಬಿದ್ದಂತಿಲ್ಲ. ಯಾವುದೇ ನಮೂನೆಯ ಕೂದಲಿನ ಅಲಂಕಾರವಿರಲಿ, ತಲೆಯ ಕೂದಲನ್ನು ಬಾಚಿಕೊಳ್ಳುವುದಕ್ಕೆ ‘ಬಾಚಣಿಗೆ’ ಎನ್ನುವ ಸಾದನ ನಮಗೆ ಬೇಕೆ ಬೇಕು. ಈ ಬಾಚಣಿಗೆ ಅನ್ನೋದು ಇರದಿದ್ದರೆ ನಮ್ಮೆಲ್ಲರ ತಲೆಯಾದರೂ ನೋಡಲು ಹೇಗಿರುತ್ತಿತ್ತು, ನಾವು ಹೇಗೆ ಕಾಣುತ್ತಿದ್ದೆವು ಎಂಬುದನ್ನು ಊಹಿಸಿಕೊಂಡರೆ ನಗು ಬರದೇ ಇರುವುದಿಲ್ಲ.
ಅಂದ ಹಾಗೆ ಬಾಚಣಿಗೆ ಬಳಕೆ ಇಂದು ನೆನ್ನೆಯದಲ್ಲ. ನಮ್ಮ ಅಜ್ಜಿ ತಾತಂದಿರು ಬಳಸುತ್ತಿದ್ದುದ್ದೆಲ್ಲಾ ಮರದ ಹಣಿಗೆ (ಬಾಚಣಿಗೆ). ಈಗ ಬಳಕೆಯಲ್ಲಿರುವುದು ಹಲವು ಮಾದರಿಯ ಪ್ಲಾಸ್ಟಿಕ್ ಬಾಚಣಿಗೆಗಳು. ಬಾಚಣಿಗೆಯ ಮೊದಲ ರೂವಾರಿ ಪರ‍್ಶಿಯನ್ ರಾಣಿ ಡೆರ‍್ಕಾ ಎಂಬುವರು. ಪ್ರಾಣಿ ಪ್ರಿಯಳಾಗಿದ್ದ ಆಕೆ ಕುದುರೆಗಳ ಬಾಲದ ಕೂದಲ ಸಿಕ್ಕುಗಳನ್ನು ಬಿಡಿಸಲು ಮೀನಿನ ಎಲುಬನ್ನು ಬಳಸಿದ್ದಳಂತೆ. ಅದೇ ರೀತಿ ಆಕೆಯ ಕೂದಲ ಮೇಲೂ ಪ್ರಯೋಗ ನಡೆಸಿದ ಮೇಲೆ ಆಗಿನ ಬಾಚಣಿಗೆಗಳು ರೂಪಗೊಂಡವು ಎಂಬ ಮಾತಿದೆ. ಹಿಂದೆಲ್ಲಾ ಬಾಚಣಿಗೆಗಳನ್ನು ಕಬ್ಬಿಣ, ಮೂಳೆ, ದಂತ, ಮರದಿಂದ ತಯಾರಿಸಲಾಗುತ್ತಿತ್ತು. ಈಗ ನಾವು ಬಳಸುತ್ತಿರುವುದು ಪ್ಲಾಸ್ಟಿಕ್ ಆದರೂ, ಮರದ ಬಾಚಣಿಗೆಗಳು ಈಗಲೂ ಅಸ್ತಿತ್ವದಲ್ಲಿವೆ.
ನಮ್ಮ ಪೂರ‍್ವಿಕರು ಬಳಸುತ್ತಿದ್ದ ಮರದ ಹೆಣಿಗೆಗಳು, ತಲೆ ಮತ್ತು ಕೂದಲಿನ ಆರೋಗ್ಯ ದ್ರುಶ್ಟಿಯಿಂದ ಒಳಿತು ಎನ್ನುತ್ತವೆ ಸಂಶೋದನೆಗಳು.
ಮರದ ಬಾಚಣಿಗೆಗಳು ಪರಿಸರ ಸ್ನೇಹಿ ಬಾಚಣಿಗೆಗಳಾದ್ದರಿಂದ ತಲೆ ತುರಿಕೆ, ಅಲರ‍್ಜಿ ಅಂತಹ ಯಾವುದೇ ಅಡ್ಡ ಪರಿಣಾಮಗಳು ಕಡಿಮೆ. ಪ್ಲಾಸ್ಟಿಕ್ ಬಾಚಣಿಗೆಗಳು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟವು. ನಿದಾನವಾಗಿ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ಕೂದಲು ಮತ್ತು ತಲೆಬುರುಡೆಗೆ ಸಮಸ್ಯೆ ಒಡ್ಡಬಹುದು. ಬೇವಿನ ಮರದ ಹಲ್ಲಿನ ಬಾಚಣಿಗೆಗಳು ಇನ್ನೂ ಒಳ್ಳೆಯದು ಎನ್ನುತ್ತಾರೆ ತಗ್ನರು.
ನಾವು ನಿತ್ಯ ಬಳಸುವ ಬಾಚಣಿಗೆಯಂತಹ ಸಣ್ಣ ಪುಟ್ಟ ವಸ್ತುಗಳಲ್ಲಿಯೂ ನಮಗೆ ಗೊತ್ತಿರದ ಅದರದೇ ಆದ ವೈಶಿಶ್ಟ್ಯತೆಗಳು ಇರುವುದು ಒಂದು ಸೋಜಿಗವೇ ಹೌದು.
(ಚಿತ್ರಸೆಲೆ: amazon.in )
ಇತ್ತೀಚಿನ ಅನಿಸಿಕೆಗಳು