ಕಿರು ಬರಹ: ಸಂಗತಿ

– .

ಸಂಗತಿ ನೆನೆದು ಕೂಡಿ ನಗಲು ಗೆಳೆಯ ಇಂದು ನನ್ನೊಡನಿಲ್ಲ…

ಗೆಳೆತನವೆಂಬುದು ಜಗತ್ತಿನ ಎಲ್ಲಾ ಸಂಬಂದಗಳಿಗಿಂತ ಮಿಗಿಲು. ಗೆಳೆಯರು ಎಂದರೆ ಅದು ಉಲ್ಲಾಸ, ಸಂತೋಶ, ಸ್ವಚ್ಚಂದ, ಸ್ವಾತಂತ್ರ‍್ಯ. ಹಲವು ದಶಕಗಳ ಮಾತು. ನನ್ನ ಗೆಳೆಯನ ಶಿಕ್ಶಣ ಪಿಯುಸಿಗೆ ಕಡಿತಗೊಂಡಿತ್ತು ಹಾಗೂ ಅವರ ಮನೆಯ ಪರಿಸ್ತಿತಿಯಿಂದಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಾನು ಪದವಿ ಶಿಕ್ಶಣಕ್ಕೆ ಬೇರೆ ಊರಲ್ಲಿ ತೆರಳಿ, ಕಾಲೇಜು ರಜೆಯಿದ್ದಾಗ ಊರಿಗೆ ಬಂದಾಗ ಪರಸ್ಪರ ಬೇಟಿಯಾಗುತಿದ್ದೆವು. ಗೆಳೆಯನಿಗೆ ಮಂಗಳವಾರ ರಜಾ ದಿನವಾಗಿರುತಿತ್ತು.

ಆ ಸಮಯದಲ್ಲಿ ಆತನ ಸೈಕಲ್‌ ಏರಿ ಡಬ್ಬಲ್ ರೈಡಿಂಗ್ ನಲ್ಲಿ ಎಂಟು ಕಿಲೋಮಿಟ‍ರ್ ದೂರದ ಮಾರ‍್ಕಾಂಡೆಯ ದೇವಸ್ತಾನಕ್ಕೆ ಹೋಗುತ್ತಿದ್ದೆವು. ಅಲ್ಲಿಗೆ ಹೋಗಲು ಸುಮಾರು ನಾಲ್ಕೈದು ಕಿಲೋಮಿಟರ್ ರಸ್ತೆಯ ಇಬ್ಬದಿಯಲ್ಲೂ ಕಾಪಿ ತೋಟ, ನಡುವೆ ಕಿರಿದಾದ ಇಳಿಜಾರಿನ ರಸ್ತೆ. ನಮ್ಮ ಹಳೆಯ ಅಟ್ಲಾಸ್ ಸೈಕಲ್ ಇಳಿಜಾರಿನಲ್ಲಿ ಸ್ಪೀಡಾಗಿ ಡಬ್ಬಲ್ ರೈಡಿನಲ್ಲಿ ಓಡುತ್ತಿರುವಾಗ ಅದೆಲ್ಲಿತ್ತೋ ದೊಡ್ಡ ಗಾತ್ರದ ಕಡವೆಯೊಂದು ಆ ಬದಿಯಿಂದ ಈ ಬದಿಗೆ ಚಂಗನೆ ಜಿಗಿದೋಡುವಾಗ ಅದಕ್ಕೆ ಸೈಕಲ್ ಗುದ್ದುವುದನ್ನು ತಪ್ಪಿಸಲು ಸಡನ್ ಬ್ರೇಕ್ ಹಾಕಿದ ಗೆಳೆಯ, ಇಳಿಜಾರಿನಲ್ಲಿ ಕಂಟ್ರೋಲ್ ಸಿಗದೆ ನಮ್ಮ ಸೈಕಲ್ ಜಾರಿಕೊಂಡು ಸೀದಾ ಕಮರಿಗೆ ಬಿದ್ದೆವು. ಸುಮಾರು ಹತ್ತು ಅಡಿಯ ಆಳದ ಕಮರಿಯಿಂದ ಹರ ಸಾಹಸ ಪಟ್ಟಕೊಂಡು ಸೈಕಲ್ ಸಮೆತ ಮೇಲೆದ್ದು ಬರುವಶ್ಟರಲ್ಲಿ ನಮ್ಮ ಮೈಕೈಯೆಲ್ಲಾ ತರಚಿ ಗಾಯವಾಗಿತ್ತು.

ಅಂತ ನೋವಿನಲ್ಲೆ ಮಾರ‍್ಕಾಂಡೆಯ ದೇವಸ್ತಾನದ ಹಿಂಬಂದಿಯಲ್ಲಿ ಹರಿಯುವ ಬದ್ರಾ ನದಿಗೆ ಹೋಗಿ ನಮ್ಮ ಗಾಯಗಳೆಲ್ಲವನ್ನು ನೀರಿನಲ್ಲಿ ತೊಳೆದುಕೊಂಡು ದಣಿವಾರಿಸಿಕೊಂಡು ದೇವಸ್ತಾನಕ್ಕೆ ಹೋಗಿ ದೇವರಿಗೆ ಕೈ ಮುಗಿಯುವಾಗ ಕೈ ಮೇಲೆತ್ತಲು ಬರುತ್ತಿಲ್ಲ. ಹಾಗೆ ಕಿರಿದಾದ ನಮಸ್ಕಾರ ಮಾಡಿ ಹೊರ ಬಂದಾಗ ಹೊಟ್ಟೆ ಕೂಡ ಹಸಿಯುತ್ತಿದೆ, ಯಾರೋ ಬಕ್ತರು ಹಣ್ಣುಕಾಯಿ ಮಾಡಿಸಿ ಪ್ರಸಾದ ಹಂಚುತಿದ್ದರು ನಾವು ಒಂದಿಶ್ಟು ಕಾಯಿ ಚೂರು, ಬಾಳೆಹಣ್ಣು ತಿಂದು ಸೈಕಲ್ ಕಡೆ ತಿರುಗಿದಾಗ, ಸೈಕಲ್ ಸರಿಯಾಗಿ ತಿರುಗದೆ, ಬ್ರೇಕ್ ಕೆಲಸ ಮಾಡದೆ ಮುಶ್ಕರ ಹೂಡಿತ್ತು. ಇನ್ನೇನು ಮಾಡುವುದು ವಿದಿಯಿಲ್ಲದೆ ಲಟಗಾಸ್ ಸೈಕಲ್ ತಳ್ಳಿಕೊಂಡು, ತಳ್ಳಿಕೊಂಡು ಏನು ಚಕ್ರ ಸರಿಯಾಗಿ ತಿರುಗದೆ ಇದ್ದದ್ದರಿಂದ ಹೆಚ್ಚು ಕಡಿಮೆ ಹೊತ್ತುಕೊಂಡೇ ಎಂಟು ಕಿಲೋಮಿಟ‍ರ್ ಸವೆಸಿ ಮನೆ ಸೇರಿದೆವು. ಆದರೆ ನಾವು ಬಿದ್ದು ಬಂದ ಸುದ್ದಿಯನ್ನು ಮನೆಯವರಿಗೆ ಹೇಳದೆ, ದೇಹಕ್ಕೆ ಆದ ನೋವನ್ನು ಒಳಗೇ ಅನುಬವಿಸಿದೆವು. ನಾವು ಸುದಾರಿಸಿಕೊಳ್ಳಲು ಒಂದೆರಡು ದಿನಗಳೆ ಬೇಕಾಯ್ತು. ನಾನು ನನ್ನ ಗೆಳೆಯ ಸೇರಿದಾಗಲೆಲ್ಲ ಈ ಸಂಗತಿಯನ್ನು ನೆನೆದು ನಕ್ಕು ನಕ್ಕು ಇಡುತಿದ್ದೆವು. ಆದರೆ ಈಗ ಈ ಸಂಗತಿ ನೆನೆದು, ಕೂಡಿ ನಗಲು ನನ್ನ ಗೆಳೆಯ ಈಗ ಜೀವಂತವಿಲ್ಲ. ಆತನ ಅಗಲುವಿಕೆಯ ನೋವು ನನ್ನ ಮನದಿಂದ ಇನ್ನೂ ಮಾಸಿಲ್ಲ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks