ಕಿರು ಬರಹ: ಪ್ರಕ್ರುತಿ ವಿಕೋಪ ಮನುಶ್ಯನಿಗೊಂದು ಎಚ್ಚರಿಕೆ
“ಮಾಡಿದ್ದುಣ್ಣೋ ಮಹಾರಾಯ” ಈ ನಾಣ್ನುಡಿ ಪ್ರಸ್ತುತ ಜಗತ್ತಿಗೆ ಹೆಚ್ಚು ಅನ್ವಯಿಸುವಂತಿದೆ. ಇಡೀ ಜಗತ್ತಿನಲ್ಲಿ ಮನುಶ್ಯನಶ್ಟು ಸ್ವಾರ‍್ತಿ ಬೇರೆ ಯಾವ ಪ್ರಾಣಿ ಪಕ್ಶಿಗಳೂ ಇಲ್ಲ. ಇರುವುದೊಂದು ಜನ್ಮಕ್ಕೆ ಬೆಟ್ಟದಶ್ಟು ಆಸೆ. ತಿನ್ನುವುದಕ್ಕೆ ಒಂದೇ ಬಾಯಿದ್ದರೂ ಎಲ್ಲವನ್ನು ಬಾಚಿ ಬಡಿದು ಬಾಯಿಗೆ ಹಾಕಿಕೊಳ್ಳುವ ಆಸೆ ಈ ಮನುಶ್ಯರದ್ದು. ಈ ಅತಿಯಾದ ಆಸೆಯಿಂದಲೇ ನಾವು ಪ್ರಕ್ರುತಿಯನ್ನು ವಿಕ್ರುತಿ ಮಾಡುತಿದ್ದೇವೆ ಮತ್ತು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತಿದ್ದೇವೆ.
ಪ್ರಕ್ರುತಿ ಮನುಶ್ಯ ಸಂಕುಲದಿಂದ ಹಿಡಿದು ಸಕಲ ಜೀವರಾಶಿಗಳಿಗೆ ಬದುಕಲು ಸೂಕ್ತವಾದ ಪರಿಸರ ನಿರ‍್ಮಿಸಿಕೊಟ್ಟಿದೆ. ಜೀವಕ್ಕೆ ಅವಶ್ಯಕವಾದ ಗಾಳಿ, ನೀರು ಪುಕ್ಕಟೆಯಾಗಿ ಕೊಟ್ಟಿದೆ. ನದಿ,ಕೆರೆ,ತೊರೆ, ಮಳೆ, ಬಿಸಿಲು, ಹಸಿರು ನಮಗಾಗಿ ಸ್ರುಶ್ಟಿಸಿದೆ, ಅನ್ನದಿಂದ ಹಿಡಿದು ಚಿನ್ನದವರೆಗೂ ಪ್ರಕ್ರುತಿ ನಮಗೆ ಕೊಡುಗೆಯಾಗಿ ಕೊಟ್ಟರೂ ಮತ್ತಶ್ಟು ಮಗದಶ್ಟು ಬೇಕು ಎನ್ನುವ ಅತಿಯಾಸೆಯಿಂದ ಚಿನ್ನದ ಮೊಟ್ಟೆಯಿಡುವ ಪ್ರಕ್ರುತಿಯ ಒಡಲಿಗೆ ಚೂರಿ ಹಾಕುತ್ತಿದ್ದೇವೆ. ನಾವು ಅಬಿವ್ರುದ್ದಿ ಎನ್ನುವ ಹೆಸರಲ್ಲಿ ಪ್ರಕ್ರುತಿಯ ಮೇಲೆ ಅತ್ಯಾಚಾರವೆಸಗುತ್ತಿದ್ದೇವೆ. ಪ್ರಕ್ರುತಿ ತನ್ನ ರುತುಮಾನವನ್ನು ಸರಿಯಾಗಿ ಕಾಪಿಟ್ಟುಕೊಂಡು ಬಂದು ಮಳೆಗಾಲ, ಚಳಿಗಾಲ, ಬೇಸಿಗೆಗಾಲದ ಸಮತೋಲನತೆ ಕಾಪಾಡಿಕೊಂಡಿತ್ತು. ಇದರಿಂದ ನದಿ ಕೆರೆಕಟ್ಟೆಗಳು ತುಂಬುತಿದ್ದವು. ಇಂದು ನಾವು ಗಣಿಗಾರಿಕೆಯ ಹೆಸರಲ್ಲಿ, ಮೋಜುಮಸ್ತಿಗಾಗಿ ರೆಸಾರ‍್ಟ್ ಹೆಸರಲ್ಲಿ ಕಾಡು ಕಡಿದು ನಾಶ ಮಾಡಿದ್ದೇವೆ. ಹಸಿರಿನ ನಾಶದಿಂದ ಬೂಮಿ ಸಮತೋಲನತೆ ಕಳೆದುಕೊಂಡು ತೀವ್ರ ಉಶ್ಣತೆಯ ಪರಿಣಾಮ ಎದುರಿಸುತ್ತಿದೆ. ಇದನ್ನೆ ನಾವು ‘ಗ್ಲೋಬಲ್ ವಾರ‍್ಮಿಂಗ್’ ಎನ್ನುತಿದ್ದೇವೆ. ಇದರ ಪರಿಣಾಮವಾಗಿ ಬೂಮಿ ಅತಿಯಾದ ಉಶ್ಣತೆ ಎದುರಿಸಿ ಪ್ರಕರವಾದ ಬಿಸಿಲು, ಅಕಾಲಿಕ ಮಳೆ, ಅತಿವ್ರುಶ್ಟಿ, ಅನಾವ್ರುಶ್ಟಿ, ಬೂಕುಸಿತ, ಗುಡ್ಡಜರಿತ, ಬೂಕಂಪ, ಸುನಾಮಿಯಂತಹ ಬೀಕರತೆಗೆ ಆಹ್ವಾನವಿತ್ತಿದ್ದೇವೆ. ಪ್ರಕ್ರುತಿಯ ಮುನಿಸಿನಿಂದಾಗಿ ಮನೆಮಟ ನಾಶಹೊಂದಿ ಮನುಶ್ಯರು ಕ್ರಿಮಿಕೀಟಗಳಂತೆ ಪಟಪಟನೆ ಸಾಯುವ ಪರಿಸ್ತಿತಿಯನ್ನು ನಾವೇ ನಿರ‍್ಮಾಣ ಮಾಡಿಕೊಂಡಿದ್ದೇವೆ.
ಈ ಬೇಸಿಗೆಯಲ್ಲಿ ಉಶ್ಣತೆ ಕೆಲವು ಕಡೆ 40°ಡಿಗ್ರಿ ಸೆಲ್ಸಿಯಸ್ ತಲುಪಿದ್ದನ್ನು ನಾವು ಕಂಡಿದ್ದೇವೆ. ಅತಿಯಾದ ತಾಪಮಾನದಿಂದ ವಿಲವಿಲ ಒದ್ದಾಡಿದ್ದೇವೆ. ಬೂಮಿಯ ಒಡಲಲ್ಲಿ ನೀರು ಬರಿದಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಬರ ಎದುರಿಸಿದ್ದೇವೆ. ಜೂನ್ ಜುಲೈ ತಿಂಗಳಲ್ಲಿ ಬಿಡದೆ ಸುರಿದ ಮಳೆಯಿಂದಾಗಿ ನದಿ, ಆಣೆಕಟ್ಟು ಎಲ್ಲ ತುಂಬಿ ಹರಿದು ಪ್ರವಾಹದ ಸಂಕಶ್ಟವನ್ನು ಎದುರಿಸಿದ್ದೇವೆ. ಕೇರಳದ ವಯನಾಡಿನಲ್ಲಿ ಒಂದೆ ದಿನ 500 ಸೆಂಟಿಮೀಟರಿಗೂ ಹೆಚ್ಚು ಮಳೆ ಸುರಿದಿದೆ. ಪ್ರಾಕ್ರುತಿಕ ಸೌಂದರ‍್ಯದ ಸ್ತಳವಾದ ವಯನಾಡು ಕಾಪಿ, ಟೀ ಬೆಳೆಗಳಿಂದ ಸದಾ ನಳನಳಿಸುತ್ತಿತ್ತು. ದಟ್ಟವಾದ ಕಾಡು, ಬೆಟ್ಟಗುಡ್ಡ, ನದಿ ಜಲಪಾತಗಳನ್ನು ಹೊಂದಿ ಸದಾ ಹಸಿರು ಹೊದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತಿತ್ತು, ಅಂತಹ ಪ್ರಕ್ರುತಿಯ ಸೌಂದರ‍್ಯದ ನಾಡು ಬೂಕುಸಿತದಿಂದಾಗಿ ಅಕ್ಶರಸಹ ಸ್ಮಶಾನವಾಗಿದೆ. ದೊಡ್ಡ ದೊಡ್ಡ ಮರಗಳು ನಾಶವಾದಂತೆ ಬೂಮಿ ಸಡಿಲವಾಗುತ್ತ ಹೋಗಿ ಹೆಚ್ಚು ಮಳೆಯಾದಾಕ್ಶಣ ಬೂಕುಸಿತ, ಗುಡ್ಡ ಜರಿತದಂತಹ ಅನಾಹುತ ಎದುರಾಗುತ್ತದೆ. ಹಿಂದೆ ಕೊಡಗಿನಲ್ಲಿ ಆಗಿದ್ದು, ಇಂದು ವಯನಾಡಿನಲ್ಲಿ ಮರುಕಳಿಸಿದೆ.
ಮುಂದಿನ ಪೀಳಿಗೆಗೆ ನಾವು ಸ್ವಸ್ತ ಹಾಗೂ ಸದ್ರುಡ ಬೂಮಿ ಬಿಟ್ಟು ಹೋಗಬೇಕೆಂದರೆ ನಾವೀಗಲೆ ಎಚ್ಚೆತ್ತುಕೊಳ್ಳಬೇಕು. ಅಬಿವ್ರುದ್ದಿಯ ಹೆಸರಲ್ಲಿ ಆಗುತ್ತಿರುವ ಕಾಡುನಾಶ ತಡೆಯಬೇಕು. ಬೆಟ್ಟಗುಡ್ಡಗಳ ಕೊರೆತ ನಿಲ್ಲಬೇಕು. ಸಸಿ ನೆಟ್ಟು ಗಿಡಮರ ಬೆಳೆಸುವ ಕೈಂಕರ‍್ಯ ಪ್ರತಿಯೊಬ್ಬನದು ಆಗಬೇಕು. ಇದ್ದಿದ್ದರಲ್ಲೆ ಸಂತ್ರುಪ್ತ ಜೀವನ ನಡೆಸುವುದನ್ನು ಕಲಿಯಬೇಕು. ಇದಾಗದಿದ್ದಲ್ಲಿ ನಾವು ಸ್ವಸ್ತ ಬೂಮಿಯನ್ನು ಕಳೆದುಕೊಂಡು ಪಶ್ಚತಾಪ ಪಡುವ ಕಾಲ ಬಹಳ ದೂರವಿಲ್ಲ. ‘ಕಾಡು ಬೆಳೆಸಿ ನಾಡು ಉಳಿಸಿ’
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು