ಕವಿತೆ: ಹಸಿರುಳಿದು ಬೆಳಗಲಿ ಬಾಳಿನ ಸೊಡರು

– ಶ್ಯಾಮಲಶ್ರೀ.ಕೆ.ಎಸ್.

ಪ್ರಕೃತಿ

ಸೊಗಸಾಗಿದೆ ಪ್ರಕ್ರುತಿಯ ಸೊಬಗು
ಹಚ್ಚಹಸಿರಿನ ಕಾನನದ ಮೆರುಗು
ದೈತ್ಯವಾದ ಗಿರಿಶಿಕರಗಳ ಬೆರಗು
ಹರಿಯುವ ನದಿಸಾಗರಗಳ ಬೆಡಗು

ನಿಸರ‍್ಗದ ಮಡಿಲದು ಸುಂದರ ತಾಣ
ಬೆಳಕ ಸೂಸುವ ಸೂರ‍್ಯನ ಹೊನ್ನಿನ ಕಿರಣ
ಹಾರಾಡುವ ಹಕ್ಕಿಗಳ ಮುಗಿಲೆಡೆಗೆ ಪಯಣ
ಸೊಂಪಾಗಿ ಬೆಳೆದ ಬಳ್ಳಿಗಳ ತೋರಣ

ಸ್ವಚ್ಚಂದವಾಗಿ ಓಡಾಡುವ ಪ್ರಾಣಿ ಸಂಕುಲಗಳು
ಗರಿಬಿಚ್ಚಿ ನಲಿದಾಡುವ ನವಿಲುಗಳು
ಇಂಪಾಗಿ ಕೂಗುವ ಕೋಗಿಲೆಗಳು
ಪರಿಮಳ ಬೀರುವ ಸುಂದರ ಪುಶ್ಪಗಳು

ಮನುಕುಲದ ಸ್ವಾರ‍್ತಕ್ಕೆ ಮಲಿನವಾಗತ್ತಿದೆಯೇ ಪರಿಸರ
ದಿನದಿನವೂ ಕಾಡುತ್ತಿರುವ ಅಶುದ್ದತೆಯ ಬೇಸರ
ತಂಗಾಳಿಗೂ ಬೀಸಲು ಮುಜುಗರ
ಅಪವಿತ್ರದ ಬೇಗೆಯಲ್ಲಿ ಜಲಚರ

ಮಾಯವಾಗುತ್ತಿದೆ ಹಸನಾದ ಹಸಿರು
ಪರಿಸರದ ಸಂರಕ್ಶಣೆಗೆ ಹಸಿರೇ ಉಸಿರು
ಹಸಿರು ಉಳಿದರೆ ಅಡಗುವುದು ಬಂಜರು
ನೀರೆರೆದರೆ ತಂಪಾಗುವುದು ಹಸಿರಿನ ಬೇರು
ಹಸಿರುಳಿದು ಬೆಳಗಲಿ ಬಾಳಿನ ಸೊಡರು

(ಚಿತ್ರ ಸೆಲೆ: stuartwilde.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: