ಕಾದಿ – ದೇಶಪ್ರೇಮದ ಕುರುಹು
ನನಗೆ ನೆನಪಿರುವಂತೆ ಚಿಕ್ಕಂದಿನಲ್ಲಿ ನನ್ನ ಅಜ್ಜನ ಉಡುಗೆ ತೊಡುಗೆ ಬಗೆಗೆ ಬಹಳಶ್ಟು ಕುತೂಹಲ ಕಾಡುತ್ತಿತ್ತು. ಶಾಲಾ ಶಿಕ್ಶಕರಾಗಿದ್ದ ಅವರು ಸದಾ ಕಾದಿ ಮೇಲಂಗಿ(ಜುಬ್ಬಾ), 9 ಮೊಳ ಉದ್ದದ ಕಾದಿ ಕಚ್ಚೆ ಪಂಚೆ, ಕಾದಿ ಶಲ್ಯಗಳನ್ನೇ ದರಿಸುತ್ತಿದ್ದರು. ನಿವ್ರುತ್ತಿ ಆದ ಮೇಲೂ ಕಡೆವರೆಗೂ ಎಂದಿಗೂ ಅವರ ಉಡುಪಿನಲ್ಲಿ ವ್ಯತ್ಯಾಸ ಕಾಣಲಿಲ್ಲ. ನಾವು ಮೊಮ್ಮಕ್ಕಳೆಲ್ಲಾ ಹುರುಪಿನಿಂದ ಅವರ ಉಡುಪಿನ ಬಗ್ಗೆ ವಿಚಾರಿಸುತ್ತಿದ್ದಾಗ, ಅವರ ಉತ್ತರ ಹೀಗಿರುತ್ತಿತ್ತು. ಗಾಂದೀಜಿ ಯವರ ಅಂದಿನ ಪರಮಾಪ್ತ ಶಿಶ್ಯರಾಗಿದ್ದ ಬೂದಾನ ಚಳುವಳಿಯ ಹರಿಕಾರರೆನಿಸಿದ ವಿನೋಬಾ ಬಾವೆ ಅವರು ಚಳುವಳಿಯನ್ನು ಆರಂಬಿಸಿ ಕಾಲ್ನಡಿಗೆಯಲ್ಲಿಯೇ ಸ್ವತಂತ್ರ ಬಾರತದ ಮೂಲೆ ಮೂಲೆಗೂ ತಲುಪಿದ್ದದು. ನಮ್ಮ ಕರ‍್ನಾಟಕ, ಅಂದರೆ ಆಗಿನ ಮೈಸೂರು ಸಂಸ್ತಾನವೂ ಇದಕ್ಕೆ ಹೊರತಾಗಿರಲಿಲ್ಲ. ವಿನೋಬಾ ಬಾವೆಯವರ ಬೂದಾನ ಚಳುವಳಿಯಲ್ಲಿ ಬಾಗಿಯಾಗಿದ್ದ ಆಗಿನ ಅನೇಕ ಯುವಮಂದಿ ವಿನೋಬಾ ಬಾವೆ ಅವರ ಶಿಸ್ತು, ಮಾತುಗಾರಿಕೆ, ದೇಶಪ್ರೇಮ, ವ್ಯಕ್ತಿತ್ವ, ಕಾದಿ ಉಡುಪು ಹೀಗೆ ಎಲ್ಲದರಿಂದ ಪ್ರಬಾವಿತರಾಗಿದ್ದರು. ಇದರೊಟ್ಟಿಗೆ ಅವರ ಅನುಯಾಯಿಗಳೆಲ್ಲರು ಸ್ವತಹ ಕಾದಿ ದರಿಸಲು ಮುಂದಾದರು . ಹೀಗೆ ಕಾದಿಯೊಂದಿಗಿನ ಪಯಣ ಶುರುವಾದುದರ ಬಗೆಗಿನ ನೆನಪುಗಳನ್ನು ನಮ್ಮೊಡನೆ ಮೆಲುಕು ಹಾಕುತ್ತಿದ್ದರು. ನಮ್ಮ ಸುತ್ತಮುತ್ತ ಆಗಿನ ಕಾಲದ ಎಶ್ಟೋ ಮಂದಿ ಸಾಮಾನ್ಯವಾಗಿ ಕಾದಿ ಬಟ್ಟೆಯನ್ನು ದರಿಸಿರುವುದು ಗಮನಕ್ಕೆ ಬಂದಿರಬಹುದು.ಕಾಲಕ್ಕೆ ತಕ್ಕಂತೆ ಕಾದಿಯ ಸಿದ್ದ ಉಡುಪುಗಳು ಬಾರತದೆಲ್ಲೆಡೆ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಕಾದಿ ಉಡುಪನ್ನು ಮೊದಲು ಪರಿಚಯಿಸಿದ ಕೀರ‍್ತಿ ಮಹಾತ್ಮ ಗಾಂದೀಜಿಯವರಿಗೆ ಸಲ್ಲುತ್ತದೆ. ಶಾಂತಿ, ಸರಳತೆ, ಅಹಿಂಸಾ ತತ್ವಗಳನ್ನೇ ಪರಮ ಗುರಿಯಾಗಿಸಿಕೊಂಡಿದ್ದ ಗಾಂದೀಜಿಯವರು ತಾವೇ ಕುದ್ದಾಗಿ ಚರಕದಿಂದ ತಮ್ಮ ಕಾದಿ ಬಟ್ಟೆಗೆ ಅಗತ್ಯವಾದ ನೂಲನ್ನು ತೆಗೆಯುತ್ತಿದ್ದುದರ ಬಗೆಗೆ ಅನೇಕ ಬಾರಿ ಕೇಳಿದ್ದೇವೆ. ಈ ಮೂಲಕ ಅವರು ಬಾರತವನ್ನು ಸ್ವಾವಲಂಬಿ ಮತ್ತು ಸ್ವತಂತ್ರವಾಗಿಸಲು 1921 ರ ಸೆಪ್ಟೆಂಬರ್ ತಿಂಗಳಲ್ಲಿ ಕಾದಿ ಬಟ್ಟೆಗಳನ್ನು ಉತ್ತೇಜಿಸಿದರು. ಇದರ ಸಲುವಾಗಿ ಸ್ವದೇಶಿ ಚಳುವಳಿಗಳಿಗೆ ನಾಂದಿ ಹಾಡಿದರು. ಬಾರತದ ಅಂದಿನ ಬಹುತೇಕ ಬಡಜನತೆಯ ನಡುವೆ ಕಾದಿಯಿಂದ ಮಾಡಿದ ದೋತಿ ಮತ್ತು ಶಾಲನ್ನು ದರಿಸಿ ತಮ್ಮನ್ನು ಗುರುತಿಸಿಕೊಳ್ಳಲು ಮುಂದಾದರು. ಸರಳೆತೆಗೆ ಸಾಕ್ಶಿಯಾದರು. ಇದರಿಂದ ಬ್ರಿಟಿಶರಿಂದ ತಯಾರಾದ ಜವಳಿಗಳಿಗೆ ಪೆಟ್ಟು ಬಿದ್ದಂತಾಯಿತು. ಆದ್ದರಿಂದ ಕಾದಿ ಬಾರತದ ಆಗಿನ ಸ್ವಾತಂತ್ರ‍್ಯ ಹೋರಾಟದಲ್ಲಿ ಒಂದು ಪ್ರಮುಕ ಬಾಗವಾಗಿತ್ತು . ಇದೊಂದು ದೇಶಪ್ರೇಮದ ಸಂಕೇತವೆನಿಸಿತು. ಕಾದಿಯು ದೇಸೀ ಉಡುಪುಗಳ ಪಟ್ಟಿಗೆ ಸೇರಿತು. ಸ್ವಾತಂತ್ರ‍್ಯ ನಂತರದ ಬಾರತದಲ್ಲಿ ಕಾದಿ ಬಟ್ಟೆಗೆ ಇನ್ನಶ್ಟು ಪ್ರಾದಾನ್ಯತೆ ಸಿಕ್ಕಿತು. ಹಿರಿಯ ಕಿರಿಯ ಹೋರಾಟಗಾರರು, ರಾಜಕೀಯ ಮುತ್ಸದ್ದಿಗಳು ಕಾದಿಗೆ ಮಾರುಹೋದರು. ಹಲವು ಕಾದಿ ಗ್ರಾಮೋದ್ಯೋಗ ಸಂಸ್ತೆಗಳು ತಲೆಯೆತ್ತಿದವು. ಆಗಿನ ಕಾದಿ ಬಟ್ಟೆಗಳು ಈಗಿನಶ್ಟು ಹೊಳಪಾಗಿರಲಿಲ್ಲ. ಮೊಬ್ಬಾಗಿರುತ್ತಿದ್ದವು. ಕಾಲಕ್ರಮೇಣ ಕೈಗಾರಿಕೆಗಳು ಮುಂದುವರೆದು ಹತ್ತಿಯ ನೂಲುಗಳಿಗೆ ಬ್ಲೀಚ್ ಮಾಡಿ ಶುಬ್ರವಾದ ಬಿಳುಪಾದ ಕಾದಿ ಬಟ್ಟೆಗಳನ್ನು ತಯಾರಿಸಲು ಆರಂಬಿಸಿದರು. ಮೊದಲೆಲ್ಲಾ ಹತ್ತಿಯಿಂದ ಮಾತ್ರ ತಯಾರಾಗುತ್ತಿದ್ದ ಕಾದಿ ಬಟ್ಟೆಗಳು, ಕಾದಿ ರೇಶ್ಮೆ ಹಾಗೂ ಕಾದಿ ಉಣ್ಣೆಗಳೆವರೆಗೂ ವಿಸ್ತಾರವಾಗಿವೆ.
ಸ್ವಾತಂತ್ರ‍್ಯ ನಂತರ ಬಾರತ ಸರ‍್ಕಾರವು ಅಕಿಲ ಬಾರತ ಕಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ರಚಿಸಿತು. ಮುಂದೆ 1957 ರಲ್ಲಿ ಕಾದಿ ಗ್ರಾಮ ಮತ್ತು ಕೈಗಾರಿಕಾ ಆಯೋಗ (KVIC) ಎಂದು ಮರುನಾಮಕರಣ ಮಾಡಲಾಯಿತು. ಪುರಾತತ್ವ ಶಾಸ್ತ್ರಜ್ನರ ಪ್ರಕಾರ ಕಾದಿ ಬಟ್ಟೆಗಳು ಕ್ರಿಸ್ತ ಪೂರ‍್ವ 2800ರಲ್ಲಿ ಸಿಂದೂ ನಾಗರೀಕತೆಯಲ್ಲಿ ಕಂಡುಬಂದಿವೆಯಂತೆ. ಮೊಹೆಂಜೊದಾರೊ ಪ್ರೀಸ್ಟ್ ಕಿಂಗ್ ಶಿಲ್ಪಗಳಲ್ಲಿ ಬುಜದ ಮೇಲೆ ಈಗಿನ ಸಿಂದ್, ಗುಜರಾತ್ ಪ್ರಾಂತ್ಯಗಳಲ್ಲಿ ದರಿಸುವ ನಿಲುವಂಗಿಗಳ ಮಾದರಿಗಳು ಕಂಡುಬಂದವೆಂದು ಪುರಾತತ್ವ ಶಾಸ್ತ್ರಗಳು ಹೇಳುತ್ತವೆ. ಚರಕ ಒಂದು ನೂಲುವ ಚಕ್ರ. ಇದು ವೇದಗಳ ಕಾಲದಲ್ಲಿಯೇ ಅಸ್ತಿತ್ವ ದಲ್ಲಿತ್ತಂತೆ. ಇದನ್ನು ಕಾದಿಯನ್ನು ನೂಲಲು ಬಳಸಲಾಗತಿತ್ತು. ಮೌರ‍್ಯ, ಗುಪ್ತರ ಕಾಲದಲ್ಲಿ ಕಾದಿಯ ಉತ್ಪಾದನೆಗೆ ಮನ್ನಣೆ ಸಿಕ್ಕಿತ್ತು. ಮೊಗಲರ ಅವದಿಯಲ್ಲಿ ಇದರ ಬೇಡಿಕೆಯ ಮಹತ್ವ ಇನ್ನೂ ಏರಿತೆಂಬ ಊಹಾಪೋಹಗಳು ಕೇಳಿ ಬಂದಿವೆ. ಬ್ರಿಟೀಶರ ಹಾವಳಿಗೋ ಏನೋ ಸುಮಾರು ವರ‍್ಶಗಳ ಕಾಲ ಕಾದಿಯ ಅಸ್ತಿತ್ವ ನೆಲಕಚ್ಚಿತ್ತಾದರೂ ಗಾಂದೀಜಿಯವರ ನೇತ್ರುತ್ವದಲ್ಲಿ ಕಣ್ಮರೆಯಾಗಿದ್ದ ಕಾದಿಯ ಉತ್ಪಾದನೆಗೆ ಮತ್ತೆ ಮರುಜೀವ ಬಂದಿತು ಎನ್ನಬಹುದು.
ಕಾದಿಯ ಜನಮನ್ನಣೆ
ಕಾದಿ ಎನ್ನುವ ಪದ, ‘ಕದ್ದರ್’ ಎಂಬ ಪದದಿಂದ ಬಂದಿದ್ದಾಗಿದೆ. ಇದನ್ನು ಪರಿಸರ ಸ್ನೇಹಿ ಎಂದು ಬಣ್ಣಿಸಲಾಗಿದೆ. ಪರಿಸರದಲ್ಲಿ ಸಹಜವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಇದು ತಯಾರಾಗುತ್ತದೆ. ಕಾದಿ ಬಟ್ಟೆಯನ್ನು ಸಾಮಾನ್ಯವಾಗಿ ಹತ್ತಿ, ರೇಶ್ಮೆ ಮತ್ತು ಉಣ್ಣೆ ಯನ್ನು ಬಳಸಿ ಸಿದ್ದಪಡಿಸಲಾಗುತ್ತದೆ. ಇಂದನದ ಸಹಾಯವೂ ಬೇಕಿಲ್ಲ. ಮಾನವರ ಶ್ರಮದಿಂದಲೇ ತಯಾರಾಗುತ್ತವೆ. ಇದು ಮರುಬಳಕೆಯಾಗಿ ಬೂಮಿ ಸೇರಿದ ಮೇಲೂ ಬೂಮಿಯಲ್ಲಿ ಕರಗುತ್ತದೆ. ನೈಲಾನ್, ಪ್ಲಾಸ್ಟಿಕ್ ಮೂಲವಸ್ತು ಇರುವ ಬಟ್ಟೆಗಳು ಬೂಮಿಯಲ್ಲಿ ಕರಗುವುದಿಲ್ಲ. ಪರಿಸರಕ್ಕೂ ಹಾನಿ.ಕಾದಿ ಒಂದು ಬಗೆಯ ಒರಟಾದ ಬಟ್ಟೆಯಾದರೂ ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ ಮತ್ತು ಬೇಸಿಗೆಯಲ್ಲಿ ದಗೆಯಿಂದ ರಕ್ಶಿಸುತ್ತದೆ. ಆದ್ದರಿಂದ ಕಾದಿ ಬಟ್ಟೆಯನ್ನು ಪರಿಸರ ಸ್ನೇಹಿ ಎಂದು ಹೇಳಲಾಗುತ್ತದೆ. ಕಾಲಕ್ರಮೇಣ ಈಗ ದೇಶದೆಲ್ಲೆಡೆ ಕಾದಿಯ ಉಡುಗೆಗಳು ಹಲವು ವಿನ್ಯಾಸಗಳಲ್ಲಿ ಮೂಡಿ ಬರುತ್ತಿದ್ದು ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ವರ‍್ಶ ರಾಶ್ಟ್ರೀಯ ಹಬ್ಬಗಳ ವೇಳೆ ಆಯೋಗದ ಮೂಲಕ ಹಲವೆಡೆ ಕಾದಿ ಮೇಳದಲ್ಲಿ ಕಾದಿ ಉತ್ಪನ್ನಗಳ ಪ್ರದರ‍್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು