ವಚನ: ಮನ ತುಂಬಿದ ಬಳಿಕ ನೆನೆಯಲಿಲ್ಲ

– .

ಬಸವಣ್ಣ,, Basavanna

“ಕಂಗಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಂತ ಕೂಡಲ ಸಂಗಮ”

ಈ ಪ್ರವ್ರುತ್ತಿ ನಮ್ಮ ಬದುಕಲ್ಲೂ ಹಾಸುಹೊಕ್ಕಾಗಿದೆ. ಕೆಲಸ ಸಿಗದಿದ್ದಾಗ ನಿತ್ಯ ದೇವರಲ್ಲಿ ಮೊರೆಯಿಡುವ ನಾವು ಒಂದು ಉತ್ತಮ ಕೆಲಸ ಸಿಕ್ಕಾಗ ದೇವರನ್ನು ನೆನೆಯುವುದು ನಿಲ್ಲಿಸಿ ಬಂದ ಸಂಬಳದಿಂದ ಮೋಜುಮಸ್ತಿಗೆ ನಿಂತು ಬಿಡುತ್ತೇವೆ. ಮನುಶ್ಯ ತನಗೆ ತಾನಂದುಕೊಂಡದ್ದು ಸಿಕ್ಕ ಮೇಲೆ, ತನ್ನ ಕಣ್ಣಿಗೆ ಅಹಂನ ಪೊರೆ ಕಟ್ಟಿ ಅದಕ್ಕಾಗಿ ಪಟ್ಟ ಕಶ್ಟವಾಗಲಿ, ಸಹಕರಿಸಿದವರನ್ನಾಗಲಿ ಮರೆತು ತನ್ನ ಅಹಂಕಾರದ ಕೋಟೆಯಲ್ಲಿಯೇ ನೆಲೆಸುತ್ತಾನೆ. ಇದನ್ನೇ ಸರಳವಾಗಿ ಬಸವಣ್ಣನವರು ತಮ್ಮ ವಚನದಲ್ಲಿ; ನೋಡಬೇಕೆನುವ ಆಸೆ ಕಂಗಳು ತುಂಬಿಕೊಂಡಾಗ ಮತ್ತೆ ನೋಡಲಿಲ್ಲವೆಂದು; ಕೇಳುವ, ಕೇಳಿ ಅರಿಯುವ, ಅಗಾದ ಬಯಕೆಯಿಂದ ಕೇಳಿ ಕಿವಿ ತುಂಬಿಕೊಂಡ ಮೇಲೆ ನಾವು ಮತ್ತೆ ಕೇಳಿಸಿಕೊಳ್ಳದೆ ಕಿವುಡರಾಗಿ ಉಳಿಯುತ್ತೇವೆಂದು ಹೇಳಿದ್ದಾರೆ. ಅಲ್ಲದೆ, ಹಣವಿಲ್ಲದೆ ಬಡತನ ಅನುಬವಿಸುವಾಗ, ನಿತ್ಯ ದೇವರನ್ನು ಪೂಜಿಸಿ‌ ಆತನಲ್ಲಿ ಸುಕದ‌ ದಾರಿ ತೋರಿಸೆಂದು‌ ಮೊರೆಯಿಡುವ ನಾವು, ಅದೇ ಕೈತುಂಬ ದನಕನಕಗಳು ಬಂದು ಸೇರಿದಾಗ ದೇವರನ್ನು ಪೂಜಿಸುವುದೆ ಮರೆತು ಬಿಡುತ್ತೇವಲ್ಲ!. ಮನವು ಎಲ್ಲ ರೀತಿಯಲ್ಲೂ ಸಂತ್ರುಪ್ತಿ ಹೊಂದಿ ಬೀಗುವಾಗ ನಾವು ನಮ್ಮ ಕಶ್ಟ ಕಾಲದಲ್ಲಿ ಆದವರಿಂದ ಹಿಡಿದು, ದೇವರತನಕ ಎಲ್ಲರನ್ನೂ, ಎಲ್ಲವನ್ನೂ ನೆನೆಯುವುದ ಮರೆಯುತ್ತೇವೆ ಎಂಬ ಸಾರವನ್ನು ಈ ವಚನದಲ್ಲಿ ಅಡಕವಾಗಿಸಿದ್ದಾರೆ. “ಗರ ಬಡಿದವರನ್ನು ಮಾತನಾಡಿಸ ಬಹುದು ಆದರೆ ಸಿರಿಯ ಗರ ಬಡಿದವರನ್ನು ಮಾತನಾಡಿಸುವುದು ಕಶ್ಟ” ಎಂಬ ಮಾತು ಇಲ್ಲಿ ಹೆಚ್ಚು ಪ್ರಸ್ತುತ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: