ಸಮಯ ಸರಿಯುತಿದೆ

– .

“Time and Tide wait for none”– ಸಮಯವಾಗಲಿ ಸಮುದ್ರದಲೆಯಾಗಲಿ ಯಾರನ್ನು ಕಾಯುವುದಿಲ್ಲ. ಬಾರತದ ಪ್ರತಮ ಪ್ರಜೆ ನಡೆದು ಬರುತಿದ್ದಾರೆ ಒಂದೆರಡು ನಿಮಿಶ ನಿಲ್ಲು ಎಂದರೂ ಅದು ಯಾರ ಮುಲಾಜಿಗೂ ಒಳಗಾಗದೆ ಸಮಯ ತನ್ನ ಓಡುವ ಕೆಲಸ, ತೆರೆಗಳು ದಡಕ್ಕೆ ಬಂದು ಅಪ್ಪಳಿಸುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತವೆ. ಕೆಲವರು ಉಡಾಪೆಯಾಗಿ “ಸಮಯದ ಹಿಂದೆ ನಾವು ಹೋಗುವುದಿಲ್ಲ, ಸಮಯವೇ ನಮ್ಮ ಹಿಂದೆ ಬರಬೇಕು” ಎಂಬ ಅಹಂಕಾರದ ಮಾತನ್ನು ಹೇಳುವುದು ಕೇಳಿದ್ದೇನೆ. ಇಂತಹವರು ಶುದ್ದ ಸೋಮಾರಿಗಳೆ ಆಗಿರಬೇಕು! ‘ಪ್ರತಿ ದಿನವು ಬಾನುವಾರವಾಗಲು ಸಾದ್ಯವಿಲ್ಲ’! ಯಾವುದೋ ಗಳಿಗೆಯಲ್ಲಿ ಒಂದೆರಡು ಕೆಲಸ, ಮತ್ತದರ ಪಲ ತಾವು ಪ್ರಯತ್ನಿಸದೆ ಅವೇ ಕಾಲಿಗೆ ಬಂದೆರಗಿರಬಹುದು. ಅದೇ ಗುಂಗಿನಲ್ಲಿ ಮನಸ್ಸು ಉಡಾಪೆಯಾಗಿ ವರ‍್ತಿಸುತ್ತಿರಬಹುದು? ಇವರ ಮನೋಸ್ತಿತಿ ಹೀಗೆ ಮುಂದುವರೆದಲ್ಲಿ ಕಾಲ ಸರಿಯಾಗಿ ಪಾಟ ಕಲಿಸುತ್ತದೆ. ಸಮಯ ಸರಿಯುತ್ತದೆ, ನಿತ್ಯ ರವಿ ಮೂಡಣದಿ ಉದಯಿಸುತ್ತಾನೆ, ಆ ಸಮಯದಲ್ಲಿ ಮರಗಿಡಗಳು ಮೆಲುಗಾಳಿಗೆ ತೊನೆಯುತ್ತವೆ, ರವಿ ಹೊಂಗಿರಣವನ್ನು ಪ್ರಕ್ರುತಿಯ ಮೇಲೆ ಚೆಲ್ಲಿ ರಂಗುರಂಗಾಗಿಸುತ್ತಾನೆ. ತಂಗಾಳಿಗೆ ಅತ್ತಿತ್ತ ಚಾಮರದಂತೆ ಬೀಸುವ ಮರಗಿಡಗಳ ಎಲೆಗಳ ಮೇಲೆ ತನ್ನ ಹೊಂಗಿರಣ ಸೋಕಿ ಸ್ವರ‍್ಣ ಪ್ರಬೆಯಿಂದ ಹೊಳೆಹೊಳೆದು ನೋಡುಗರ ಕಣ್ಣಿಗೆ ಹಬ್ಬವಾಗಿಸುತ್ತಾನೆ. ಅಲ್ಲಿ ರವಿ ತಮ ಕಳೆದು ಜೀವಕಳೆ ತುಂಬಿಸುತ್ತಾನೆ. ಅದೇ ಕಾಲದಲ್ಲಿ ಹಣ್ಣೆಲೆಯೂ ಕೂಡ ರವಿಯ ಹೊಂಗಿರಣದ ಸೊಬಗಲ್ಲಿ ಮಿಂದು ಮರದಿಂದ ಉರುಳಿ ಕಳೆಬರದಂತೆ ಮಣ್ಣಲ್ಲಿ ಮಣ್ಣಾಗುವುದು ಪ್ರಕ್ರುತಿ ವಿಸ್ಮಯದ ಸೊಬಗಾಗಿಸಿ ಬಿಡುತ್ತಾನೆ. ‘ಕಾಲವೊಂದೆ ಆದರೆ… ಅಲ್ಲಿ ಹುಟ್ಟಿನಂತೆ ಸಂಬ್ರಮವಿದೆ, ಸಾವಿನಂತೆ ಸುಂದರ ಅಂತ್ಯವಿದೆ. ಇದನ್ನೇ “ಕಾಲಾಯ ತಸ್ಮೈ ನಮಹ” ಎನ್ನುವುದು.

ಸಮಯ ಸರಿಯುತ್ತಿದೆ ನಮ್ಮ ವಯಸ್ಸು ಕಳೆಯುತ್ತಿದೆ, ನಮ್ಮ ಕಡೆಯ ದಿನಗಳಲ್ಲಿನ ಒಂದೊಂದು ನಿಮಿಶ, ಒಂದೊಂದು ಗಳಿಗೆ, ಒಂದೊಂದು ದಿನ ಕರಗಿಹೊಗುತ್ತಿದೆ ಎಂಬ ಆತಂಕದಲ್ಲಿದ್ದೇವೆ. ನಮ್ಮ ಬದುಕಿನ ಕೊರಗು ನಿಂತಿಲ್ಲ…!  ವಯಸ್ಸು ಸರಿಯುತ್ತಿದೆ; ಮಗಳಿಗೆ ಸೂಕ್ತ ವರ ಬಂದಿಲ್ಲ, ಮಗನ ಓದಿಗೆ ತಕ್ಕನಾದ ಕೆಲಸ ಸಿಕ್ಕಿಲ್ಲ, ವಯಸ್ಸಾಯ್ತು ನಮಗೆ ಆರೋಗ್ಯ ಕೈಕೊಡುತ್ತಿದೆ. ನಮ್ಮ ನಿವ್ರುತ್ತ ಜೀವನವನ್ನು ಸರಿಯಾಗಿ ಯೋಜಿಸಿಲ್ಲ, ಆರ‍್ತಿಕ ಮುಗ್ಗಟ್ಟು ಕಾಡುತ್ತಿದೆ. ನನ್ನ ವ್ಯವಾಹಾರದಲ್ಲಿ ಲಾಬಕ್ಕಿಂತ ನಶ್ಟವೇ ಹೆಚ್ಚಾಗಿದೆ, ಸ್ಪರ‍್ದೆಗಳು ಹೆಚ್ಚಾಗಿ ವ್ಯಾಪಾರ ವ್ಯವಹಾರ ಮಾಡುವುದು ದುಸ್ತರವಾಗುತ್ತಿದೆ. ಈ ಬಾರಿ ಸರಿಯಾಗಿ ಮಳೆಯಾಗಿಲ್ಲ, ಹೊಲದಲ್ಲಿ ಬಿತ್ತಿದ ಬೆಳೆ ಒಣಗುತ್ತಿದೆ, ಅತಿಯಾದ ಮಳೆಯಿಂದ ಪ್ರವಾಹಕ್ಕೆ ಬಲಿಯಾಗಿ ಹೊಲದ ಬೆಳೆಯೆಲ್ಲ ಕೊಳೆತು ಸರ‍್ವನಾಶವಾಗಿದೆ”. ಹೀಗೆ ಬೆಂಬಿಡದೆ ಕಾಡುವ ಸಂಕಶ್ಟಗಳಿಂದ ಹೈರಾಣಾಗುವ ಮನುಶ್ಯ ಚಿಂತೆಯ ಕಂತೆಯಲಿ ನಗುವುದನ್ನು ಮರೆಯುತ್ತಿದ್ದಾನೆ. ಕಾಲ ಸರಿಯುತ್ತಿದೆ, ಆಯಸ್ಸಿನ ವ್ಯಾಪ್ತಿ ಕಿರಿದಾಗುತ್ತ ನಡೆದಿದೆ. ಮನುಶ್ಯರಾದ ನಾವು ಹಿಂದಿನ ಮತ್ತು ಮುಂದಿನ ಬದುಕಿನ ಚಿಂತೆಗಳಲ್ಲಿ ವಾಸ್ತವದ ಬದುಕು ಮರೆತು ನಡೆಯುತಿದ್ದೇವೆ. ‘ನಿನ್ನೆ ಮುಗಿದಿದೆ, ನಾಳೆ ಇನ್ನೂ ಹುಟ್ಟಿಲ್ಲ, ಇಂದು ನಮ್ಮ ಮುಂದಿದೆ’– ಆ ‘ಇಂದಿನ ದಿನದ’ ಪ್ರತಿಕ್ಶಣವೂ ನಮ್ಮದಾಗಿಸಿಕೊಂಡು ಅದರೊಳಗೆ ಸಂತಸ ಪಡುವ ಕಲೆ ನಾವು ಇತ್ತೀಚಿಗೆ ಮರೆತಂತೆ ಕಾಣುತ್ತಿದೆ.

ನಾನು ಪ್ರಾರಂಬದಲ್ಲಿ ಹೇಳಿದಂತೆ ಕಾಲ ಕಂಡಿತ ಸರಿದು ಹೋಗುತ್ತಿರುತ್ತದೆ. ನಮ್ಮ ಜೀವನದ ಸಮಯ ಕಿರಿದಾಗುತ್ತ ಹೋಗುತ್ತಿರುತ್ತದೆ. ಆ ಕಿರಿದಾದ ನಮ್ಮ ಜೀವನದ ಸಮಯವನ್ನು ಸದುಪಯೋಗ ಮಾಡಿಕೊಂಡು, ಸಕಾಲಕ್ಕೆ ಸಾದಿಸಿ, ನಮ್ಮ ಇಳಿ ವಯಸ್ಸನ್ನು ಸಂತ್ರುಪ್ತಿಯಾಗಿ ಕಳೆದು ಮುಕ್ತಿ ಹೊಂದುವುದು ಪ್ರತಿಯೊಬ್ಬ ಮನುಶ್ಯನ ಗುರಿಯಾಗಿದ್ದರೆ ಚೆನ್ನ. ಆದರೆ ಎಲ್ಲರ ಜೀವನ ಒಂದೇ ತೆರನಾಗಿರದೆ ಅದ್ರುಶ್ಟವೂ ಕೈಕೊಟ್ಟಿರುತ್ತದೆ ಎನ್ನುವುದೂ ಸತ್ಯ. ಇದನ್ನು “ತಾನೊಂದು ಬಗೆದರೆ ಮಾನವ, ಬೇರೊಂದು ಬಗೆಯಿತು ದೈವ” ಎಂದು ನಮ್ಮನ್ನೆ ನಾವು ಹಳಿದುಕೊಳ್ಳುವುದಾಗಿದೆ!

ಅದೇನೆ ಇರಲಿ; ನಮ್ಮ ಬದುಕಿನಲ್ಲಿ ಅಲ್ಪಸ್ವಲ್ಪವಾದರೂ ಸಂತಸ, ಸಂತ್ರುಪ್ತಿ, ಸಮಾದಾನ ಕಂಡುಕೊಳ್ಳಬೇಕಾದರೆ ‘ರೈಲು ಹೋದ ಮೇಲೆ ಟಿಕೇಟು ಪಡೆಯುವ’ ಚಾಳಿ ಬಿಟ್ಟು, ಸರಿಯಾದ ಸಮಯಕ್ಕೆ, ಸರಿಯಾದ ವಯಸ್ಸಿನಲ್ಲಿ, ಸರಿಯಾಗಿ ಯೋಚಿಸಿ ಕಾರ‍್ಯಪ್ರವ್ರುತ್ತರಾಗಿ ಸಾದಿಸುವುದರಿಂದ ಸಕಾಲಕ್ಕೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಆಗ ಕಾಲ ಸರಿಯುತ್ತಿದೆ ಎಂಬ ಆಂತಕ ಕಡಿಮೆಯಾಗುತ್ತದೆ. ಈ ಕಾಲ ಸರಿಯುತ್ತಿದೆ ಎಂಬ ಆತಂಕವನ್ನು ಆಂಗ್ಲ ಕವಿ ‘ರಾಬರ‍್ಟ್ ಪ್ರಾಸ್ಟ್’ ತನ್ನ ಕವಿತೆ “Stopping by Woods on a snowy evening” ನ ಕೊನೆಯ ಸಾಲಿನಲ್ಲಿ ಬಹಳ ಸಮರ‍್ಪಕವಾಗಿ ವಿವರಿಸಿದ್ದಾರೆ. ಆ ಕವಿತೆಯ ಸಾಲುಗಳು;

The woods are lovely, dark and deep,
But I have promises to keep,
And miles to go before I sleep,
And miles to go before I sleep.

ಎಂಬುದಾಗಿದೆ. ಇಲ್ಲಿ ಕವಿಯ ಆತಂಕವೇನೆಂದರೆ; ಕಾನನವೇನೋ ಆಳವಾಗಿ ಕತ್ತಲಿಗೆ ಸರಿಯುತ್ತ ಸುಂದರವಾಗಿ ತೋರುತ್ತಿದೆ ಆದರೆ; ನನ್ನ ಮಾತಿನ ಬರವಸೆಯನ್ನು ಉಳಿಸಿಕೊಳ್ಳಲು; ಸಂಪೂರ‍್ಣ ಕತ್ತಲು ಆವರಿಸಿಕೊಂಡು ನಾನು ನಿದ್ರೆಗೆ ಜಾರುವ ಮುನ್ನ ಮೈಲಿಗಟ್ಟಲೆ ನಡೆಯಬೇಕಿದೆ- ಅಂದರೆ ಈ ಕವಿ ತನ್ನ ಕವಿತೆಯ ಒಳಾರ‍್ತದಲ್ಲಿ “ನನಗೆ ಸಾವು ಬಂದಪ್ಪುವ ಮುನ್ನ ನಾನು ಸಾದಿಸಬೇಕಾದದ್ದು ಬೇಕಾದಶ್ಟಿದೆ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ.

(ಚಿತ್ರ ಸೆಲೆ: byrslf.co)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks