ಬರ‍್ಕತ್ ಇನ್ ಬೆಂಗ್ಳೂರ್!
ಕರ‍್ಟನ್ ಸರ‍್ಸಿ ಕಾಂತಿ… ಇನ್ನು ಸಮ ಬೆಳ್ಕ್ ಹರಿಲ್ಲಾ. ಎಡ್ದ ಬದಿಯಗೆ ಮೆಟ್ರೋ ಪ್ಲೈ ಓವರ್ ತೋರ‍್ತಾ ಇತ್ತ್. ಯಶವಂತಪುರ ಹತ್ರ ಹತ್ರ ಬಂತ್ ಅಂದೇಳಿ ಇನ್ ಎಂತಾ ನೆದ್ರಿ ಅಂಸ್ತ್. ಸೀಟ್ ಸ್ಲೀಪರ್ ಆರೂ ಹಾಂಗೆ ಬೆನ್ನ್ ಒಂಚೂರ್ ಮೇಲ್ ಎಳ್ಕಂಡ್ ಕೂಕಂಡೆ. ಮೊಬೈಲ್ ಕಾಂಬೋ ಅಂದೇಳಿ. ನಮ್ಮನಿ ವಾಟ್ಸಾಪ್ ಗ್ರೂಪ್ – ‘ಬೆಳ್ಳಾಲ ಅರಿಕಲ್ಲುಮನೆ ಪ್ಯಾಮಿಲಿ ರಾಕ್ಸ್’ ಗ್ರೂಪ್ ಓಪನ್ ಮಾಡ್ದೆ. “ಇವತ್ತು ಜಂಬೂಸವಾರಿದಿಣ್ಣೆಯಲ್ಲಿ ಶುಬಾರಂಬಗೊಳ್ಳುತ್ತಿರುವ ಶ್ರೀ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ ನ ಆರನೇ ಬ್ರಾಂಚ್ ಗೆ ಶುಬ ಕೋರುವ” ಅಂದೇಳಿ. ನನ್ ಅಂಗಡಿ ಎದ್ರ್ ನಾನ್ ನಿಂತ್ಕಂಡದ್ದ್ ಪೋಟೋ ತೋರ‍್ತ್. ಸಮ ಕಂಡ್ರೆ ನನ್ ಮಾಯಿ ಮಗ ಅತೀತ್ ಹಾಕದ್ದ್ ಪೋಸ್ಟ್! ಈ ಗಂಡಿನೋಳ್ಗ್ ಆಯಿಲ್ಲಾ!! ಅದಕ್ಕೆ ಸುಮಾರ್ ಹೆಬ್ಬೆಟ್ಟ್, ಹಾರ‍್ಟ್ ಸಿಂಬಲ್ ಬೇರೆ ಇತ್ತ್! ರಿಪ್ಲೈ ಕೂಡ ಸುಮಾರ್. ಅದರಾಗೆ ಹೆರಾಬಿ ಮಕ್ಕಳ್. ಸುಜಾತಕ್ಕ ಮತ್ತ್ ಸುಮತಿಯಕ್ಕನೂ ಹಾಕಿರ್. “ರವಿರಾಜನಿಗೆ ಒಳ್ಳೆದಾಯ್ಲಿ. ಹಾರ‍್ಡ್‌ವರ‍್ಕ್ ವಿನ್ಸ್ ಅಂದೇಳಿ. ಮೂರ‍್ನಾಕ್ ಚಪ್ಪಾಳಿ…” ಕಂಡ್ ಕುಶಿ ಆಯ್ತ್.
ಹಾಂಗೆ… ಹಳಿ ನೆನಪ್ ಒಂದ್ ತಲಿಗೆ ಬಂತ್… ಕೆಲ ವರ‍್ಶದ್ ಹಿಂದೆ SSLC ಯಾಗೆ ಹಿಂದಿಯಗೆ ಪೈಲ್ ಆಯಿ ಮನಿಯಗೆ ನಾ ಕೂಕಂಡ್ ಇದ್ದಿದೆ. ಹೊರ‍್ಗೆ ಜೋರ್ ಮಳಿ… ನಟ್ಟಿ ಶುರು ಆಯ್ ಇದ್ದಿತ್ ಅಶ್ಟೇ… ಅದೆಂತದೋ ಅಗಿ ಹಂಚ್ಕಂಬ್ ವಿಚಾರ‍್ದಗೆ ನನ್ ಅಬ್ಬಿಗೂ ಹೆರಾಬ್ಬಿಗೂ ಜೋರ್ ಜಗ್ಳಾ. ನನ್ ಅಬ್ಬಿ ಸಿಟ್ಟಗೆ “ನಿನ್ ಜವನ್ತಿಯರನ್ನ ಯಾರ್ ಕಟ್ಕಂಡ್ ಹೊತ್ರ್ ಕಾಂತೆ… ನೊಗ ಕಟ್ಟು ಕಾಲ ಬತತ್ತ್ “ಅಂದೇಳಿ ಕೂಗ್ದಳ್. ಅದಕ್ಕೆ ಹೆರಾಬ್ಬಿ ಹೆರಾಬ್ಬಿಯಲ್ದಾ? “ಕಟ್ಟು ದಿನ ಮುಂದ್ ಬಂದ್ರ್ ಕಾಂಬೋ… ಮೊದ್ಲ್ ನಿನ್ ಕಳ್ಸಿಗಿ ಕೂಳ್ ತಿಂಬನ್. ಹೋರಿ ಮಾಬ್ಲ ಮಗ ಇದ್ನಲೇ… ಶಾಲಿಯಗೆ ಹೂಡ್ ಹೊಯ್ದ್ ಮನಿಯಗೆ ಕೂತಿನಲೆ… ಅವನಿಗೆ ನೊಗ ಕಟ್ಟ್… ಅದರಗಾರೂ ಬರ‍್ಕತ್ತ್ ಆಯ್ಲಿ… ಹುಂಟಿಯಾರು ಮಾಡ್ಲಿ” ಅಂದಳ್. ಆ ಮಾತ್ ಸುಜಾತಕ್ಕನಿಗೂ ಬೇಜಾರ್ ಆಯ್ತ್. ಸುಮತಿಯಕ್ಕನಿಗೂ… ನಂಗ್ ಕಣ್ಣಗೆ ಬಳ ಬಳ… ಅಮ್ಮನಿಗೆ ಇದೆಲ್ಲ ಗೊತ್ತಾಯ್ಲ… ಅವಳ್ ಇನ್ನೂ ಕೂಗ್ತಾನೆ ಇದ್ದಳ್.
ಕಶ್ಟದಗೆ ಇಪ್ಪರಿಗೆ ಹಿಂದಿನ ಕಶ್ಟದ್ ದಿನಗಳ್ ನೆನಪ್ ಮಾಡ್ಕಂಬುಕೆ ಕುಶಿ ಆತ್ತೋ ಏನೋ!? ಗೊತ್ತಿಲ್ಲ… ಆದ್ರೆ ಸ್ವಲ್ಪ ಸ್ತಿತಿ ಬಂದ್ರ್ ಮೇಲೆ ಹಳಿ ಕಶ್ಟದ್ ದಿನಗಳನ್ನ್ ವಾಪಾಸ್ ವಾಪಾಸ್ ಹಂಬ್ಲ್ ಮಾಡ್ಕಂಬುಕೆ. ಅದನ್ನೇ ರಿವೈನ್ಡ್ ಮಾಡುಕೆ. ಮನ್ಸಿಗೆ ಒಂದ್ ನಮ್ನಿ ಕುಶಿ ಕೊಡತ್ತ್… ಹ್ಯಾಂಗೂ ಈ ಜಂಪ್ ಗೆ ಮೊಬೈಲ್ ಕಾಂಬುಕೆ ಆತಿಲ್ಲ ಅಂದೇಳಿ ಚಾರ‍್ಜಿಗೆ ಹಾಕಿ ಪ್ಲೈ ಓವರ್ ಕಾಂತ ಹಿಂದಕ್ಕೆ ಹೋದೆ.
”ಅದರಗಾರೂ ಬರ‍್ಕತ್ತ್ ಆಯ್ಲಿ… ” ಅಂದ್ ಮಾತ್ ಮನ್ಸಿಗೆ ಮಸ್ತ್ ತಾಂಗ್ತ್ ನಂಗೆ. ನಾ ಬರ‍್ಕತ್ ಆಯ್ದೆ ಇಪ್ಪುದ್ ಅಂದ್ರೆ ಬೇರೆ ಬೇರೆ ರೀತಿಯಗೆ ನಂಗೆ, ಮನಿಯರಿಗೆ ಅವಮಾನವಾ? ಕಶ್ಟ ವಾ? ಅಂದೇಳಿ… ಒಂದ್ ನಮ್ನಿ ಮೆದ್ಲಿಗೆ ಕೈ ಹಾಕ್ದಂಗೆ ಆಯ್ತ್. ಹೆದರ‍್ಸ್ತ್…! ನಾಕ್ ದಿನ ಮಾತೆ ಕಮ್ಮಿ ಮಾಡ್ತ್ , ಆ ಒಂದ್ ಮಾತ್!
ಸಪ್ಲಿಮೆಂಟರಿಯಗೆ ಪಾಸ್ ಮಾಡ್ಕಂಡ್ರ್ ಸೈ ಅಂದೇಳಿ ನಾ ಬೆಂಗಳೂರಿಗೆ ಹೋತೇ. ನಮ್ ಕೆರಾಡಿಯರ್, ವಂಡ್ಸಿ ಬದಿಯರ್ ಮಸ್ತ್ ಜನ ಬೆಂಗ್ಳೂರಗೆ ಇದ್ರ್ ಅಂದೇಳಿ ಅಬ್ಬಿ ಹತ್ರ ಹೇಳ್ದೆ. “ಎಲ್ಲರ ಮುಂದ್ ಶಾಪ ಹಾಕಿ ನನ್ ಮಗ ಊರ್ ಬಿಡುವಂಗೆ ಮಾಡ್ದಳ್… ಹೊನ್ನ್ ಒಡು ಅವಳ್” ಅಂದೇಳಿ ಅಬ್ಬಿ ಮರ‍್ಕ್ತಾ ಪಸ್ಟ್ ಟೈಮ್ ಬೆಂಗಳೂರಿಗೆ ಬಪ್ಪುವ ಮುಂಚಿನ್ ದಿನ ವರ‍್ಶದ್ದ್ ಕೀಳಿ ಕೊಯ್ಯುವ ಕೋಳಿ ಕೊಯ್ದ್ ಅವಳಿಗೆ ಉಂಬುಕೆ ಮನ್ಸಿಲ್ದೆ ನಂಗೋಸ್ಕರ ಒಣ್ಕಟಿ ಚಾಟಿ ಮೀನಿನ್ ಉಪ್ಪಿನೊಡಿ ಒಂದ್ ಡಬ್ಬಿ ಹಾಕಿ ಕಳ್ಸಿಕೊಟ್ಟ್ ನೆನಪ್.
2005 ರಗೆ ಮತ್ತಿಕೆರೆಯಗೆ ನಮ್ಮೂರಿನ ಕನ್ನಂತರ ಬಾವನೆಂಟಾ ರಗು ನಾಯ್ಕರ್ ಬೇಕರಿಯಗೆ ಕೆಲಸಕ್ಕೆ ಸೇರ‍್ಕಂಡೇ. ಬೆಳಿಗ್ಗೆ ಬಾಗ್ಲ್ ತೆಗೆದ್ ನಿಂತ್ಕಂಡ್ರೆ. ರಾತ್ರಿ ಹನ್ನೊಂದ್ ಆಪೋಲರಿಗೂ ನಿಂತ್ಕಂಡೇ ಇರ‍್ಕ್. ಉಂಬುದ್ ಸತೆ ಕೆಲೊ ಸರ‍್ತಿ ನಿತ್ಕಂಡೇ. ಊರಿಗೆ ಪೋನ್ ಮಾಡದಲ್ ಅಮರ್ ಬೈಂದೂರ್ ಕಾಲೇಜ್ ಗೆ ಸೇರ‍್ದ. ಶ್ರೀನಿವಾಸ ಕುಂದಾಪ್ರ ಕಾಲೇಜ್ ಗೆ ಸೇರ‍್ದ. ಅಂದೇಳಿ ಅಬ್ಬಿ ಹೇಳೋತಿಗೆ ಅವರೆಲ್ಲ ಬರ‍್ಕತ್ ಆತ ಇದ್ರ್. ನಾ ಎಂತ ಆತೆ ಅಂದೇಳಿ ಹೆದ್ರಿಕಿ ಆತಿದಿತ್. ಸಿಂಕಗೆ ಚಾ ಹೊಡಿ ಸಿಕ್ಕ್ ಹೈಕಂಡ್ ನೀರ್ ತುಂಬಿ, ಬೇಕರಿಯರ್ ಎಲ್ಲಾ ಊಟ ಮಾಡದ್ದ್ ತಟ್ಟಿ ಮದ್ಯ ಕೈ ಹಾಕಿ ಕ್ಲೀನ್ ಮಾಡೋತಿಗೆ ಕಣ್ಣಿಂದ್ ಸುಮಾರ್ ಹನಿ ಬಿದ್ದದ್ ಇತ್ತ್. ಊರಿಂದ ಯಾರಾರು ಬಪ್ಪೋತಿಗೆ ಅವರ್ ಕೈಯಗೆ ಮಾರಣಕಟ್ಟಿಯಗೆ ರಂಗ್ ಪೂಜೆ ಮಾಡ್ಸಿ ಅಬ್ಬಿ ಪ್ರಸಾದ ಕಟ್ಟಿ ಕೊಡಿಸ್ತಿದಿದಳ್. ಅದನ್ನೆಲ್ಲ ಓಪನ್ ಮಾಡೋತಿಗೆ ಅಬ್ಬಿಗೋಸ್ಕರ ಆರೂ ಕನಸ್ ಕಾಣ್ಕ್ ಅಂದೇಳಿ ಅನ್ಸುಕೆ ಶುರು ಆಯ್ತ್…
“ಎಲ್ ಇಳಿತ್ರಿ…?”
“ಕೋಣನಕುಂಟೆ ಕ್ರಾಸ್ ಹೋಗುತ್ತಾ?”
“ಹಾಂ… ಹೋಗತೈತಿ”, ಅಂದೇಳಿ ಗಟ್ಟದ್ ಬಾಶಿಯಗೆ ಹೇಳ್ದ.
ವಾಪಸ್ ಕಿಟಕಿ ಆಚಿ ಕಾಂಬುಕೆ ಶುರು ಮಾಡ್ದೆ… ಕಾರ‍್ಪೊರೇಶನ್ ಸರ‍್ಕಲ್ ಪಾಸ್ ಆತ ಇತ್ತ್ ಅಂದೇಳಿ ಗೊತ್ತಾಯ್ತ್. ಶಬರಿ ಬೇಕರಿ ಅಂದೇಳಿ ಬೋರ‍್ಡ್ ಇಪ್ಪ ಅಂಗಡಿದ್ ಶಟರ್ ಯಾರೋ ಓಪನ್ ಮಾಡ್ತಾ ಇದ್ದಿರ್. ಅವರಿಗೂ ರಗು ನಾಯ್ಕರ್ ತರಹ ಯಾರೋ ಬರ‍್ಕತ್ತ್ ಆಪುಕೆ ಸಹಾಯ ಮಾಡಿರೋ ಏನೋ ಅಂಸ್ತ್. “ಅಂಗಡಿ ನಡ್ಸುದ್ ಅಂದ್ರ್ ಎಲ್ಲಾ ಕೆಲಸವೂ ಮಾಡುದ್ ಕಲಿಕ್. ನಾಕ್ ಜನರ ಹತ್ರ ಕೆಲಸ ತೆಗ್ಸುದ್ ಕೂಡ ಕಲಿಕ್. ” ಅಂದೇಳಿ ನಾಯ್ಕ್ರ್ ಮೂರ್ ವರ‍್ಶ ಅವರೊಟ್ಟಿಗೆ ಕೆಲಸ ಮಾಡೊತಿಗೆ ನೂರ್ ಸರ‍್ತಿ ಹೇಳಿರೇನೋ. “ಎಲ್ಲಾ ಕೆಲಸವೂ ಒಂದ್ ನಮ್ನಿ ಏಣಿ ಇದ್ದಂಗೆ… ವರ‍್ಶ ವರ‍್ಶವೂ ಮೇಲ್ ಹತ್ತತ ಹೊಯ್ಕ್… ಹೋದ್ ವರ‍್ಶ ಮಾಡದ್ದ್ ಕೆಲಸ ಈ ವರ‍್ಶ ಮಾಡುಕಾಗ… ಇನ್ನೊಬ್ರ ಹತ್ರ ಮಾಡುಸುವ ಲೆವೆಲ್ ಗೆ ಹೊಯ್ಕ್ …”, ಅಂದೇಳಿ ಎಗಳಿಗೂ ಹೇಳೋರ್. ”ನಿನ್ ಕೈ ಕೆಳ್ಗೆ ಮಸ್ತ್ ಕೆಲ್ಸ ಆಪುದ್ ಕಾಣ್ಕ್… ಮಸ್ತ್ ಕಾಸ್ ಅದಾಯೇ ಆತ್ತ್ ಅಂದೇಳಿ, ಕಾಯಕವೇ ಕೈಲಾಸ ಅಂಬುದ್ ಯಾವೊತ್ತು ಮರೀಬೇಡ, ದೇವರ ಪೋಟೋದೊಟ್ಟಿಗೆ ಹಾಂಗೆ ಬರದ್ದ್ ಬಸವಣ್ಣ ಪೋಟೋ ಇಟ್ಕೋ”, ಅಂದೇಳಿ ಪಸ್ಟ್ ಬೇಕರಿಗೆ ಅವರೇ ಅಂತದೇ ಪೋಟೋ ಗಿಪ್ಟ್ ಮಾಡಿದ್ದಿರ್. ಮುಂದಿನ್ ಯಾವ್ ಬೇಕರಿಯಗೂ ಆ ಪೋಟೋ ಮಿಸ್ ಆದ್ದೇ ಇಲ್ಲ.
ಹೈಸ್ಕೂಲ್ ಗ್ರೂಪೆಗೂ ಅತೀತ್ ಹಾಕದ್ದ್ ಪೋಟೋ ತೋರ‍್ತ್… ಅಮರ್ ಹಾಕದ್ದ್… ”ಆರ‍್ಬೇಕರಿ ಅರವತ್ತು ಆಯ್ಲಿ…”, “ನಮ್ಮೂರಿನ ಸಾಹುಕಾರ ರವಿರಾಜ” ಅಂದೇಳಿ. ಎಲ್ಲಾ ಕುಶಾಲ್ ಮಾಡಿ ಹಾಕಿದ್ದಿರ್. ಎಲ್ಲರಿಗೂ ತ್ಯಾಂಕ್ಸ್ ಹಾಕ್ದೆ. ಇನ್ನೇನ್ ಸಾರಕ್ಕಿ ಸಿಗ್ನಲ್ ಬಂತ್. ಏಣಿಯಗೆ ಸುಮಾರ್ ಮೇಲ್ ಬಂದಿದೆ ಅಂದೇಳಿ ಕುಶಿ ಇತ್ತ್. ಈ ಬೆಂಗಳೂರ್ ಅದೆಶ್ಟ್ ಸಾವಿರಾರು ಪೈಲ್ ಆದರನ್ನ ಬರ‍್ಕತ್ತ್ ಮಾಡುಕೆ ಕೈ ಬೀಸಿ ಕರ‍್ಸಕಂತತ್ತೊ…!!! ಆರೇ ಎಲ್ಲರಿಗೂ ನನ್ ಅಬ್ಬಿಯ ಕಣ್ಣೀರ್ ಒರ‍್ಸುವ ಗುರಿ ಮತ್ತ್ ರಗು ನಾಯ್ಕ್ರ್ ತರ ಗುರು ಸಿಕ್ತ್ರಾ? ಕಶ್ಟ…
(ಪದಗಳ ಹುರುಳು: ಬರ‍್ಕತ್ತ್ = ಉದ್ದಾರ / ಏಳಿಗೆ, ಅಗಿ = ಬತ್ತದ ಸಸಿ; ಹೆರಾಬ್ಬಿ = ಅಮ್ಮನ ಅಕ್ಕ; ಜವನ್ತಿ = ರುತುಮತಿಯಾದ ಯುವತಿ; ನೊಗ = ಊಳುವಾಗ ಎತ್ತು / ಕೋಣಗಳ ಕುತ್ತಿಗೆಯ ಮೇಲಿಡುವ ಮರದ ದಿಂಬು; ಕಳ್ಸಿಗಿ = ದಾನ್ಯಗಳನ್ನು ಅಳೆಯುವ 14 ಸೇರುಗಳ ಅಳತೆ ಪಾತ್ರ; ಹುಂಟಿ = ಉಳುಮೆ; ಹೊನ್ನ್ ಒಡು = ಕೆಟ್ಟ ವ್ಯಕ್ತಿ; ಕೀಳ್ = ನಂಬಿದ ಬೂತ/ ದೈವ; ಕುಶಾಲ್ = ತಮಾಶೆ)
(ಚಿತ್ರ ಸೆಲೆ: copilot.microsoft.com)
ಇತ್ತೀಚಿನ ಅನಿಸಿಕೆಗಳು