ಪರ ಚಿಂತೆ ನಮಗೇಕೆ?
ಪರ ಚಿಂತೆ ಎನಗೇಕಯ್ಯಾ, ನಮ್ಮ ಚಿಂತೆ ನಮಗೆ ಸಾಲದೆ?
ʼಕೂಡಲಸಂಗಯ್ಯ ಒಲಿದಾನೊ ಒಲಿಯನೊʼ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು!
ಈ ಮೇಲಿನ ವಚನದ ಬಾವಾರ್‍ತ ಹೀಗಿದೆ.
ಬಹುಶಹ ಮನುಶ್ಯರ ದೌರ‍್ಬಲ್ಯವೋ ಏನೋ ನಮ್ಮ ಎಡೆಯಲ್ಲಿ ಆನೆಯೇ ಸತ್ತು ಬಿದ್ದಿದ್ದರೂ ನಾವು ಪಕ್ಕದವರ ಎಡೆಯೊಳಗಿನ ನೊಣ ಹುಡುಕುವವರು. ಇದಕ್ಕಾಗಿಯೇ ಏನೋ “ಊರಿನ ಉಸಾಬರಿ ಕಟ್ಟಿಕೊಂಡು ಮುಲ್ಲಾ ಸಾಹೇಬರು ಸೊರಗಿದರು” ಎಂಬ ಆಡು ಮಾತು ಹೆಚ್ಚು ಪ್ರಚಲಿತದಲ್ಲಿದೆ. ಬಸವಣ್ಣನವರ ಈ ಮೇಲಿನ ವಚನದಲ್ಲಿಯೂ ಕೂಡ ಅದೇ ಬಾವವನ್ನು ಪ್ರಸ್ತಾಪಿಸಿದ್ದಾರೆ. ನಮ್ಮದೇ ಚಿಂತೆಗಳು ಸಾಕಶ್ಟು ಇರುವಾಗ ಪರ ಚಿಂತೆ ಮಾಡವುದು ವ್ಯರ‍್ತ. ‘ಮೊದಲು ಮನೆಗೆದ್ದು, ನಂತರ ಮಾರು ಗೆಲ್ಲಬೇಕು’ ಅದೇ ಸರಿಯಾದ ಕ್ರಮ. ನಮ್ಮ ಚಿಂತೆಗಳ ಬಗ್ಗೆ ಆಲೋಚಿಸದೆ ಇತರರ ಸಮಸ್ಯೆಗಳ ಬಗ್ಗೆ ಚಿಂತಿಸುವುದರಿಂದ ನಮ್ಮ ಬದುಕು ಕಂಗಾಲಾಗುತ್ತದೆ. ಹೀಗೆ ಪರ ಚಿಂತೆ ಮಾಡದೆ ನಮ್ಮ ಚಿಂತೆಯೇ ನಮಗೆ ಅಪಾರವಾಗಿದೆ ಎನ್ನುತ್ತಾರೆ ಬಸವಣ್ಣನವರು. ಯಾವ ಚಿಂತೆ ಇಲ್ಲದಿದ್ದರೂ ನಮಗೆ ಕೂಡಲ ಸಂಗಮದೇವ ಒಲಿಯುತ್ತಾನೋ ಒಲಿಯುವುದಿಲ್ಲವೋ ಎಂಬ ಚಿಂತೆ ಹಾಸಿ ಹೊದೆಯುವಶ್ಟು ಇದೆ. ನಾವ್ಯಾರು ನಮ್ಮ ಚಿಂತೆಗಳಿಂದ ಮುಕ್ತವಾಗಿ ಕಾಲಿ ಕುಳಿತಿಲ್ಲ ಎನ್ನುವುದು ನಿತ್ಯ ಮನುಜರ ಬದುಕಿನ ಸತ್ಯವನ್ನು ತೆರೆದಿಡುತ್ತದೆ. ಇದು ಎಲ್ಲರ ಬದುಕಿನಲ್ಲೂ ಗಟಿಸಿದ, ಸತ್ಯವೂ ಕೂಡ.
(ಚಿತ್ರಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು