ರಾಶ್ಟ್ರ ನಿರ‍್ಮಾತ್ರು – ಗುರುಗಳು
||ವಿದ್ಯೆ ಕಲಿಸಿದ ತಂದೆ, ಬುದ್ದಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿಯು ಶುದ್ದ ವೈರಿಗಳು ಸರ‍್ವಜ್ನ||
ಎಂಬ ತ್ರಿಪದಿಯಲ್ಲಿ ಬುದ್ದಿ ಹೇಳದ ಗುರುವು ಶುದ್ದ ವೈರಿಯೇ ಆಗಿರುತ್ತಾರೆ. ಸುಬದ್ರ ದೇಶ ಕಟ್ಟುವಲ್ಲಿ ಶಿಕ್ಶಕರ ಪಾತ್ರ ಬಹಳ ಮಹತ್ವದ್ದಾಗಿದೆ. ನಾವು ಇಂದಿನ ಮಕ್ಕಳು ನಾಳಿನ ದೇಶದ ಬವಿಶ್ಯ ಬರೆಯುವವರು. ಸುರಕ್ಶಿತ, ಸುಬದ್ರ ದೇಶ ನಿರ‍್ಮಾಣಕ್ಕೆ ಸುಶೀಲ, ಸುಸಂಸ್ಕ್ರುತ, ಕ್ರಿಯಾಶೀಲ, ಜವಾಬ್ದಾರಿಯುತ ಸುಶಿಕ್ಶಿತ ಯುವ ಪೀಳಿಗೆಯ ಅಗತ್ಯ ಬಹಳಶ್ಟಿದೆ. ಅಂತಹ ಪೀಳಿಗೆಯನ್ನು ಸ್ರುಶ್ಟಿಸುವಲ್ಲಿ ಶಿಕ್ಶಕರದ್ದು ದೊಡ್ಡ ಪಾತ್ರವಿದೆ. ಅದಕ್ಕಾಗಿಯೇ ಸರ‍್ವಜ್ನ ತಮ್ಮ ತ್ರಿಪದಿಯಲ್ಲಿ ಬುದ್ದಿ ಹೇಳದ ಗುರು ಶುದ್ದ ವೈರಿ ಎಂದು ಹೇಳಿದ್ದಾರೆ. ಅಕಸ್ಮಾತ್ ಬೇಜವಾಬ್ದಾರಿಯಿಂದ ವಿದ್ಯಾರ‍್ತಿಗಳು ದಾರಿ ತಪ್ಪಿ ನಡೆದರೆ ಅವರನ್ನು ಸರಿ ದಾರಿಯಲ್ಲಿ ನಡೆಸಿ ಉತ್ತಮ ಗುಣ, ನಡತೆಗಳನ್ನು ರೂಡಿಸಿಕೊಂಡು ಹೋಗುವಂತೆ ತಿದ್ದಿ, ಬುದ್ದಿ ಹೇಳಿ ಒಬ್ಬ ಸಂಪನ್ನ ವ್ಯಕ್ತಿಯನ್ನಾಗಿ ಮಾಡಿ ದೇಶಕ್ಕೆ ಕೊಡುಗೆಯಾಗಿ ನೀಡುವ ಗುರುತರವಾದ ಜವಾಬ್ದಾರಿ ಗುರುಗಳ ಮೇಲಿದೆ. ಗುರುಗಳು ಕಂಡಿತವಾಗಿಯೂ ವಿದ್ಯಾರ‍್ತಿಗಳನ್ನು ಕಟೆದು ಉತ್ಕ್ರುಶ್ಟ ಮೂರ‍್ತಿಯನ್ನಾಗಿಸುವ ಶಿಲ್ಪಿ.
ನಾವು ವಿದ್ಯಾರ‍್ತಿಗಳಾಗಿದ್ದಾಗ ಗುರುಗಳು ಹೇಳಿದ್ದೇ ವೇದ ವಾಕ್ಯವೆಂದೇ ಪರಿಗಣಿಸುತಿದ್ದೆವು. ಏಕೆಂದರೆ ನಮ್ಮ ಅಬಿಪ್ರಾಯದಂತೆ ಗುರುಗಳು ಜ್ನಾನಿಗಳು, ಅವರು ಸರ‍್ವಜ್ನರು, ಅವರೆಂದೂ ಸುಳ್ಳಾಡುವುದಿಲ್ಲ ಎಂಬ ಗೌರವ ಮನೋಬಾವ ಹೊಂದಿದ್ದೆವು. ಅವರ ಮೌಲ್ಯಾದಾರಿತ ವಿಚಾರದಾರೆಗಳು ನಮಗೆಂದೂ ಆದರ‍್ಶವಾಗಿರುತಿದ್ದವು. ಶಿಕ್ಶಕರು ತಮ್ಮ ನೈತಿಕ ಹೊಣೆಯ ನಿಬಾವಣೆಯನ್ನು ಎಂದಿಗೂ ಚ್ಯುತಿ ಬರದಂತೆ ನಿರ‍್ವಹಿಸುವ ಸೂಕ್ಶ್ಮಮತಿಗಳಾಗಿದ್ದನ್ನು ನಾವು ಕಂಡಿದ್ದೇವೆ; ಹಾಗೆಂದ ಮಾತ್ರಕ್ಕೆ ನರ ಮನುಶ್ಯರಾದ ಶಿಕ್ಶಕರು ಎಂದೂ ತಪ್ಪೇ ಮಾಡುವುದಿಲ್ಲ ಎನ್ನುವುದು ಅತಿಶಯವೆನಿಸುತ್ತದೆ. ದೌರ‍್ಬಲ್ಯಗಳುಳ್ಳ ಶಿಕ್ಶಕರನ್ನು ನಾವು ಕಾಣಬಹುದು. ಅಂತಹವರು ಕಂಬದ ಮರೆಯಲ್ಲಿ, ಗಿಡದ ಮರೆಯಲ್ಲಿ ನಿಂತು ಬೀಡಿ, ಚುಟ್ಟ, ಸಿಗರೇಟು ಸೇದುವುದನ್ನು, ಕ್ಲಬ್‌ಗಳಲ್ಲಿ ಕುಳಿತು ಇಸ್ಪೀಟ್ ಆಡುವುದನ್ನು, ಮದ್ಯಪಾನ ಮಾಡುವುದನ್ನು ನೋಡಿದ್ದೇವೆ. ಇವರು ಅಪವಾದವೆಂಬಂತೆ ಬೆರಳೆಣಿಕೆಯ ಶಿಕ್ಶಕರಾಗಿದ್ದಾರೆ. ಅಂತಹ ಕೆಲವೇ ಕೆಲವು ಶಿಕ್ಶಕರಿಂದ ಮೌಲ್ಯಾದಾರಿತ ಶಿಕ್ಶಕರಿಗೆಂದೂ ಕುಂದು ಬರದು. ಅಪರಂಜಿ ಎಂದಿದ್ದರೂ ಅಪರಂಜಿಯೇ. ಈ ಅಪರಂಜಿಗಳನ್ನು ಕಾಗೆ ಬಂಗಾರಕ್ಕೆ ಹೋಲಿಸಲಾಗದು.
ನಮ್ಮ ಶಾಲಾ ದಿನಗಳಲ್ಲಿ ನಮ್ಮ ಗೌರವಾನ್ವಿತ ಶಿಕ್ಶಕರು ನಮಗೆ ತಿದ್ದಿ, ಬುದ್ದಿ ಹೇಳಿ, ಪಾಟ ಕಲಿಸಿ ನಮ್ಮನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ನಿರ‍್ಮಾಣ ಮಾಡಿದ್ದಾರೆ. ಪ್ರಾತಮಿಕ ಹಂತದ ಶಿಕ್ಶಣದಲ್ಲಿ ಮುಕ್ಯ ಶಿಕ್ಶಕಿ ಸುಶೀಲಾ ಬಾಯಿ ನಮಗೆ ತೇಟ್ ಮದರ್ ತೆರೇಸರಂತೆ ಕಂಡು ಅವರ ಮೇಲೆ ಅಪಾರ ಗೌರವ ಮೂಡುತಿತ್ತು. ಅವರು ಶಾಂತ ಮೂರ‍್ತಿಯಾಗಿದ್ದು, ಸಹನೆ, ತಾಳ್ಮೆ ಎಲ್ಲವೂ ಅವರ ಮುಕ ಚಹರೆಯ ಮೇಲೆ ಮೇಳೈಸಿ ಮಕ್ಕಳಿಗೆ ಅವರ ಮೇಲೆ ಅಪಾರ ಪ್ರೀತಿ ಉಕ್ಕುವಂತಿರುತಿತ್ತು. ಅವರು ಮಕ್ಕಳಿಗೆ ಜೋರಾಗಿ ಗದರಿದ್ದಾಗಲಿ, ಕೋಲಿನಿಂದ ಹೊಡೆದಿದ್ದಾಗಲಿ ನಾವೆಂದು ಕಾಣಲೇ ಇಲ್ಲ. ಅವರು ಪಾಟ ಮಾಡುವ ಶೈಲಿಯೂ ಅತ್ಯಂತ ಅರ‍್ತಪೂರ‍್ಣವಾಗಿಯೂ, ಮಕ್ಕಳ ಮನ ಮುಟ್ಟುವಂತೆ ಇರುತಿತ್ತು. ಮಕ್ಕಳ ಪಟ್ಯೇತರ ಚಟುವಟಿಕೆಯಲ್ಲೂ ಅವರು ಅತ್ಯಂತ ಆಸಕ್ತಿದಾಯಕರಾಗಿ ಕಲಿಸುತಿದ್ದರು. ಆಟೋಟಗಳಿಗೂ ಹೆಚ್ಚಿನ ಪ್ರಾಶಸ್ತ್ಯ ಕೊಡುತಿದ್ದರು. ಕೆಲವೊಂದು ಮಾದರಿಗಳನ್ನು ತಾವೇ ಸ್ವಯಂ ಆಸಕ್ತಿಯಿಂದ ಮನೆಯಲ್ಲೇ ತಯಾರಿಸಿ ತಂದು ಮಕ್ಕಳಿಗೆ ತೋರಿಸಿ ಅವರ ಆಸಕ್ತಿಯನ್ನು ಇನ್ನಶ್ಟು ಕೆರಳಿಸುತಿದ್ದರು. ಅಂದಿನ ಸರ‍್ಕಾರ ಮಕ್ಕಳಿಗೆ ಮದ್ಯಾಹ್ನ ಬಿಸಿ ಉಪ್ಪಿಟ್ಟು ತಯಾರಿಸಿ ಕೊಡುವ ಯೋಜನೆ ಜಾರಿಗೆ ತಂದಿದ್ದರಿಂದ ಸುಶೀಲಾ ಬಾಯಿ ಮೇಡಂ ತಾವೇ ಮುಂದೆ ನಿಂತು ಅತ್ಯಂತ ಮುತುವರ‍್ಜಿಯಿಂದ ಉಪ್ಪಿಟ್ಟು ತಯಾರಿಕೆಯ ಮೇಲುಸ್ತುವಾರಿ ವಹಿಸಿ ಮಕ್ಕಳಿಗೆ ತಿನ್ನಲು ಬಿಸಿ ಬಿಸಿ ಉಪ್ಪಿಟ್ಟು ಬಡಿಸುವಂತೆ ನೋಡಿಕೊಳ್ಳುತಿದ್ದರು. ಅವರು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯುತವಾಗಿ ಪ್ರತಿ ಕೆಲಸಗಳನ್ನು, ಪ್ರತಿ ಹಂತದಲ್ಲೂ ನಿಬಾಯಿಸುತಿದ್ದರು. ಮಕ್ಕಳಲ್ಲಿರುವ ವಿಶೇಶ ಪ್ರತಿಬೆಯನ್ನು ಗುರುತಿಸಿ ಅವರ ಪ್ರತಿಬೆಯನ್ನು ಹೊರಹಾಕಲು ಸೂಕ್ತ ವೇದಿಕೆಯನ್ನು ನಿರ‍್ಮಾಣ ಮಾಡಿಕೊಡುವುದರ ಜೊತೆಗೆ ಪ್ರಶಸ್ತಿಗಳಿಗೆ ಬಾಜನರಾಗುವಂತೆ ಮಾಡುತಿದ್ದರು. ಹೀಗೆ ಅವರ ಹತ್ತು ಹಲವು ಒಳ್ಳೆಯ ಗುಣಗಳು ವಿದ್ಯಾರ‍್ತಿಗಳ ಮನಸ್ಸಿನ ಮೇಲೆ ಪ್ರಬಾವ ಬೀರಿ ಅವರ ಬಗ್ಗೆ ಮಕ್ಕಳಿಗೆ ಅಪಾರ ಪ್ರೀತಿ ಗೌರವ ತಂತಾನೆ ಮನದಲ್ಲಿ ಮೂಡುತಿತ್ತು. ಹಾಗಾಗಿಯೇ ಶಿಕ್ಶಕಿ ಸುಶೀಲಾ ಬಾಯಿ ನಾಲ್ಕೈದು ದಶಕ ಕಳೆದರೂ ನಮ್ಮ ಮೇಲೆ ಗಾಡವಾದ ಪರಿಣಾಮ ಬೀರಿ ನಮ್ಮ ಮನದಲ್ಲಿ ಇನ್ನೂ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಈ ಶಿಕ್ಶಕರ ದಿನಾಚರಣೆಯಂದು ಅವರ ಸ್ಮರಣೆ ಸೂಕ್ತವೆನಿಸಿ ಅವರನ್ನಿಲ್ಲಿ ನೆನೆಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ನನ್ನ ವ್ಯಕ್ತಿತ್ವ ನಿರ‍್ಮಾಣಕ್ಕೆ ಕೊಡುಗೆ ಕೊಟ್ಟ ಇತರೆ ಹಲವಾರು ಶಿಕ್ಶಕರ ವ್ರುಂದವನ್ನು ಗೌರವದಿಂದ ನೆನೆಸಿಕೊಳ್ಳುತ್ತ ಅವರೆಲ್ಲರಿಗೂ ಶಿಕ್ಶಕರ ದಿನಾಚರಣೆಯ ಹಾರ‍್ದಿಕ ಶುಬಾಶಯಗಳನ್ನು ಕೋರುತ್ತೇನೆ.
(ಚಿತ್ರ ಸೆಲೆ: publicdomainvectors.com)
ಇತ್ತೀಚಿನ ಅನಿಸಿಕೆಗಳು