ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 9

ಸಿ. ಪಿ. ನಾಗರಾಜ.

ಉತ್ತರಕುಮಾರನ ಪ್ರಸಂಗ : ನೋಟ – 9

ಇತ್ತಲು ಅರ್ಜುನ ದೇವ ಉತ್ತರೆಯ ಭವನವನು ಸಾರಿದನು. ತಾ ತಂದ ಉತ್ತಮ ಅಂಬರ ವಿವಿಧ ರತ್ನಾಭರಣ ವಸ್ತುಗಳ ಆ ಕನ್ನಿಕೆಗೆ ಇತ್ತನು. ಮುದ ಮಿಗಲು ಉತ್ತರೆಯ ಮನೆಯಿಂದ ಶಶಿಕುಲ ಮತ್ತವಾರಣ ಆ ಭೀಮಾಗ್ರಜನ ಹೊರೆಗೆ ಬಂದನು. ಬಳಿಕ ಕಲಿಭೀಮ ಸಂಕೇತದಲಿ ಭೂಪನ ನಿಳಯವನು ಹೊಕ್ಕನು. ಆ ಕ್ಷಣಕೆ ನಳಿನಮುಖಿ ಸಹದೇವ ನಕುಲರು ಬಂದರು. ಫಲುಗುಣನು ಇಬ್ಬರಿಗೆ ಹೊಡವಂಟನು. ಉಳಿದವರು ಪಾರ್ಥಂಗೆ ವಂದಿಸಲು ಪರಿತೋಷದಲಿ ಸಮಬಲರ  ಒಲಿದು ಬಿಗಿಯಪ್ಪಿದನು. ಕಲಿ ತ್ರಿಗರ್ತರ ಗೆಲಿದ ಪರಿಯನು, ಪಾರ್ಥ ಕೌರವ ಬಲವ ಭಂಗಕೆ ತಂದ ಪರಿಯನು ಉಳಿದ ನಾಲ್ವರು ಹೇಳುತಿರುತಿರಲು… ಬಳಿಕ ರಾಯನ ಹಣೆಯ ಗಾಯವ ಪಾರ್ಥ ನಿಲುಕಿ ಕಂಡನು.

ಪಾರ್ಥ: ಇದೇನು ನೊಸಲಿಂದ ನಸು ರಕ್ತ ಬಿಂದುಗಳು ಇಳಿವುತಿದೆ.

ಧರ್ಮರಾಯ: ಅನವಧಾನದೊಳು ಆಯ್ತು. ಸಾಕು ಅದ ನೆನೆಯಲೇತಕೆ ಮಾಣು.

(ಎನಲು ಮಿಗೆ ಕನಲುತ ಅರ್ಜುನನು ಆ ದ್ರೌಪದಿಯ ಸೂರುಳಿಸಿ ಅರಿದನು. ಮನದಲಿ ಉರಿದೆದ್ದನು.)

ಅರ್ಜುನ: ವಿರಾಟನ ತನುವ ಹೊಳ್ಳಿಸಿ ರಕುತವನು ಶಾಕಿನಿಯರಿಗೆ ಹೊಯಿಸುವೆನು. ಹೊಲ್ಲೆಹವೇನು ಹೇಳು.

ಭೀಮ: ಶಿವ ಶಿವ ಮಹಾದೇವ…ವಿರಾಟನ ತಲೆಯ ಕೀಚಕೇಂದ್ರನ ಬಳಗವು ಇದ್ದಲ್ಲಿಗೆ ಕಳುಹಬೇಕೇ… ಋಣ ಸಾಲಿಗನಲೇ…ರಕ್ತವು ನೆಲದೊಳು ಒಕ್ಕುದೆ. ಅವದಿರ ಕುಲವ ಸವರುವೆನು. ಇವನ ಸೀಳಿದು ಭೂತಗಣಕೆ ಬಲಿಯ ಕೊಡುವೆನು.

(ಎನುತ ಎದ್ದನು ಆ ಭೀಮ.)

ಧರ್ಮರಾಯ: ಹೋ ಹೋ ಸಾಕು ಸಾಕೈ ತಮ್ಮ. ಕಾಕ ಬಳಸಲು ಬೇಡ. ಉದ್ರೇಕವನು ಮಾಣು. ನೆಲ ರಕ್ತ ಕಂಡರೆ ನನ್ನ ಮೇಲಾಣೆ. ಈ ಕಮಲಲೋಚನೆಯ ಸೆರಗಿಗೆ ರಕುತವು ಸೇಕವಾಯಿತು. ಅತಿ ಸವ್ಯಾಕುಲತೆ ಬೇಡ.

(ಎಂದು ಅನಿಲಜನ ಗಲ್ಲವ ಹಿಡಿದನು.)

ಭೀಮ: ಆತನ ಜೀವವನು ಕೊಂಬೆನು. ಪತಿ ಎಂಬ ಗರ್ವವನು ಅವನ ನೆತ್ತಿಯ ತುಂಬಿ ಬಿಡಲು ಎರಗುವೆನು. ಮತ್ಸ್ಯ ಸಂತತಿಯ ತರಿವೆನು. ಕೀಚಕನ ಅಂಬುಜಾಕ್ಷಿಯ ಬೇಳಂಬವು ಈತನ ಕೂಟ. ಭೂತ ಕದಂಬ ತುಷ್ಟಿಯ ಮಾಡಬೇಹುದು, ಸೆರಗ ಬಿಡಿ.

ಧರ್ಮರಾಯ: ಇವನ ನಾವು ಓಲೈಸಿ ಕೈಯೊಡನೆ ಇವಗೆ ಮುನಿದೊಡೆ ಭುವನ ಜನವು ಏನನು ಎಂಬುದು. ಭ್ರಮಿಸದಿರು, ಸೈರಣೆಗೆ ಮನ ಮಾಡು. ಎವಗೆ ನೋವಿನ ಹೊತ್ತು. ದುಷ್ಕೃತ ವಿವರಣದ ಫಲವು. ಇದಕೆ ಲೋಗರನು ಅವಗಡಿಸಿದೊಡೆ  ಎಮಗೆ ಹಾನಿಯು.

ಭೀಮ: ಬರಿಯ ಧರ್ಮದ ಜಾಡ್ಯದಲಿ ಮೈಮರೆದು ವನದಲಿ ಬೇವು ಬಿಕ್ಕೆಯನು ಅರಸಿ ತೊಳಲಿದು ಸಾಲದೇ. ಹದಿಮೂರು  ವತ್ಸರದಿ ಉರುಕುಗೊಂಡೊಡೆ, ರಾಜ ತೇಜವ ಮೆರೆವ ದಿನವು ಎಂದು ಇಹುದು. ನೀವು ಇನ್ನು ಅರಿಯಿರಿ. ಎಮ್ಮನು ಹರಿಯ ಬಿಡಿ ಸಾಕು.

ಧರ್ಮರಾಯ: ಉದಯದಲಿ ನಾವು ಇನಿಬರು ಆತನ ಸದನದಲಿ ನೃಪಪೀಠವನು ಗರ್ವದಲಿ ನೆಮ್ಮುವೆವು. ಆತ ನಮ್ಮಲಿ ಖೋಡಿಯನು ಹಿಡಿಯೆ ಮದಮುಖನನು ಒರಸುವೆವು. ಹರುಷದಲಿ ಇದಿರುಗೊಂಡೊಡೆ ಮನ್ನಿಸುವ ಮಾತು. ಇದುವೆ ಸನ್ಮತವು.

(ಎಂದು ಸಂತೈಸಿದನು ಪವನಜನ.)

ಪದ ವಿಂಗಡಣೆ ಮತ್ತು ತಿರುಳು

ಇತ್ತಲು=ಈ ಕಡೆ; ಭವನ=ಮನೆ/ನಿವಾಸ; ಸಾರು=ಸಮೀಪಿಸು;

ಇತ್ತಲು ಅರ್ಜುನ ದೇವ ಉತ್ತರೆಯ ಭವನವನು ಸಾರಿದನು=ಈ ಕಡೆ ಅರ್‍ಜುನನು ಉತ್ತರೆಯಿದ್ದ ರಾಣಿವಾಸದ ಕೊಟಡಿಗೆ ಬಂದನು; ತಾ=ತಾನು; ಅಂಬರ=ಬಟ್ಟೆ; ರತ್ನ+ಆಭರಣ; ಕನ್ನಿಕೆ=ಕನ್ಯೆ;

ತಾ ತಂದ ಉತ್ತಮ ಅಂಬರ ವಿವಿಧ ರತ್ನಾಭರಣ ವಸ್ತುಗಳ ಆ ಕನ್ನಿಕೆಗೆ ಇತ್ತನು=ಕಾಳೆಗದ ಕಣದಲ್ಲಿ ಮೂರ್‍ಚಿತರಾಗಿ ಬಿದ್ದಿದ್ದ ದುರ್‍ಯೋದನನ ಸೇನೆಯ ವೀರರ ಮಯ್ ಮೇಲಿದ್ದ ಬೆಲೆಬಾಳುವ ಬಟ್ಟೆ ಮತ್ತು ಬಹುಬಗೆಯ ರತ್ನದ ಒಡವೆಗಳನ್ನು ಗೆಲುವಿನ ಉಡುಗೊರೆಯಾಗಿ ಅರ್‍ಜುನನು ಉತ್ತರೆಗೆ ನೀಡಿದನು; ಹಗೆಗಳ ಮಯ್ ಮೇಲಣ ಬೆಲೆಬಾಳುವ ವಸ್ತುಗಳನ್ನು ತನಗೆ ತಂದುಕೊಡಬೇಕೆಂದು ಉತ್ತರೆಯು ಕಾಳೆಗಕ್ಕೆ ಹೋಗುವ ಮುನ್ನ ಬೃಹನ್ನಳೆಯನ್ನು ಕೇಳಿಕೊಂಡಿದ್ದಳು;

ಮುದ=ಆನಂದ/ಹಿಗ್ಗು; ಮಿಗಲು=ಹೆಚ್ಚಾಗಲು; ಶಶಿ=ಚಂದ್ರ; ಕುಲ=ವಂಶ; ಮತ್ತ=ಮದಿಸಿದ/ಸೊಕ್ಕಿದ; ವಾರಣ=ಆನೆ; ಶಶಿಕುಲ ಮತ್ತವಾರಣ=ಅರ್‍ಜುನನಿಗಿದ್ದ ಒಂದು ಬಿರುದು.ಚಂದ್ರವಂಶದ ಮದಿಸಿದ ಆನೆ; ಭೀಮ+ಅಗ್ರಜನ; ಅಗ್ರಜ=ಅಣ್ಣ; ಹೊರೆ=ಸಮೀಪ/ಹತ್ತಿರ;

ಮುದ ಮಿಗಲು ಉತ್ತರೆಯ ಮನೆಯಿಂದ ಶಶಿಕುಲ ಮತ್ತವಾರಣ ಆ ಭೀಮಾಗ್ರಜನ ಹೊರೆಗೆ ಬಂದನು=ಕಾಳೆಗದಲ್ಲಿ ಪಡೆದ ಜಯ ಮತ್ತು ಉತ್ತರೆಯ ಆಸೆಯನ್ನು ಈಡೇರಿಸಿದ್ದರಿಂದ ಅರ್‍ಜುನನ ಆನಂದ ಇಮ್ಮಡಿಗೊಂಡಿರಲು, ಉತ್ತರೆಯ ಮನೆಯಿಂದ ಶಶಿಕುಲ ಮತ್ತವಾರಣನು ಅಣ್ಣನಾದ ಬೀಮನ ಬಳಿಗೆ ಬಂದನು;

ಸಂಕೇತ=ಸೂಚನೆ; ಕಲಿ=ಶೂರ; ಭೂಪ=ರಾಜ/ದರ್‍ಮರಾಯ; ನಿಳಯ=ಮನೆ;

ಬಳಿಕ ಕಲಿಭೀಮ ಸಂಕೇತದಲಿ ಭೂಪನ ನಿಳಯವನು ಹೊಕ್ಕನು=ಅನಂತರ ಕಲಿಬೀಮನ ಸೂಚನೆಯಂತೆ ಇಬ್ಬರೂ ಅರಮನೆಯಲ್ಲಿದ್ದ ದರ್‍ಮರಾಯನ ಕೊಟಡಿಗೆ ಬಂದರು; ಆ ಕ್ಷಣಕೆ=ಅದೇ ಸಮಯಕ್ಕೆ;

ನಳಿನ=ತಾವರೆ; ನಳಿನಮುಖಿ=ತಾವರೆ ಹೂವಿನ ಮೊಗದವಳು/ಸೈರಂದ್ರಿ;

ಆ ಕ್ಷಣಕೆ ನಳಿನಮುಖಿ ಸಹದೇವ ನಕುಲರು ಬಂದರು=ಅದೇ ಸಮಯಕ್ಕೆ ಸೈರಂದ್ರಿ, ಸಹದೇವ ಮತ್ತು ನಕುಲರು ದರ್‍ಮರಾಯನಿದ್ದ ಕೊಟಡಿಗೆ ಬಂದರು;

ಫಲುಗುಣ=ಅರ್‍ಜುನ; ಹೊಡವಡು=ಸಾಶ್ಟಾಂಗ ನಮಸ್ಕಾರ ಮಾಡು/ವಂದಿಸು;

ಫಲುಗುಣನು ಇಬ್ಬರಿಗೆ ಹೊಡವಂಟನು=ಅಣ್ಣಂದಿರಾದ ದರ್‍ಮರಾಯ ಮತ್ತು ಬೀಮಸೇನನಿಗೆ ಅರ್‍ಜುನನು ನಮಸ್ಕರಿಸಿದನು;

ಉಳಿದವರು ಪಾರ್ಥಂಗೆ ವಂದಿಸಲು=ಇನ್ನುಳಿದ ತಮ್ಮಂದಿರಾದ ನಕುಲ ಸಹದೇವರು ಅರ್‍ಜುನನಿಗೆ ನಮಸ್ಕರಿಸಲು;

ಪರಿತೋಷ=ಹೆಚ್ಚಿನ ಆನಂದ; ಒಲಿದು=ಪ್ರೀತಿಯಿಂದ; ಬಿಗಿ+ಅಪ್ಪಿದನು; ಅಪ್ಪು=ಆಲಿಂಗಿಸು/ತಬ್ಬಿಕೊಳ್ಳುವುದು;

ಪರಿತೋಷದಲಿ ಸಮಬಲರ ಒಲಿದು ಬಿಗಿಯಪ್ಪಿದನು=ಅಪಾರವಾದ ಆನಂದದಿಂದ ಸೋದರರನ್ನು ಪ್ರೀತಿಯಿಂದ ಬಿಗಿದಪ್ಪಿದನು;

ಉಳಿದ ನಾಲ್ವರು= ಅರ್‍ಜುನನ್ನು ಹೊರತುಪಡಿಸಿ, ಇನ್ನುಳಿದ ನಾಲ್ವರು ಅಣ್ಣತಮ್ಮಂದಿರಾದ ದರ್‍ಮರಾಯ, ಬೀಮ, ನಕುಲ, ಸಹದೇವ;

ತ್ರಿಗರ್ತರು=ದುರ್‍ಯೋದನನ ಕಡೆಯ ರಾಜರು; ಪರಿ=ರೀತಿ;

ಉಳಿದ ನಾಲ್ವರು ಕಲಿ ತ್ರಿಗರ್ತರ ಗೆಲಿದ ಪರಿಯನು=ದುರ್‍ಯೋದನನ ಸೇನಾನಿಗಳು ಮೊದಲನೆಯ ದಿನ ವಿರಾಟನಗರದ ದಕ್ಶಿಣ ಬಾಗದ ಹೊರವಲಯದಲ್ಲಿದ್ದ ಗೋವುಗಳನ್ನು ಅಪಹರಿಸಿದ್ದರು. ಆಗ ಅರ್‍ಜುನನ್ನು ಹೊರತುಪಡಿಸಿ, ಇನ್ನುಳಿದ ನಾಲ್ವರು ಅಣ್ಣತಮ್ಮಂದಿರು ಮೊದಲ ದಿನ ನಡೆದ ಗೋಗ್ರಹಣದ ಕಾಳೆಗದಲ್ಲಿ ಪಾಲ್ಗೊಂಡು ಹೋರಾಡಿದ್ದರು. ಅಂದು ದುರ್‍ಯೋದನನ ಸೇನೆಯು ಇದ್ದಕ್ಕಿದ್ದಂತೆ ವಿರಾಟನಗರದ ಹೊರವಲಯದಲ್ಲಿದ್ದ ಗೋವುಗಳನ್ನು ಅಪಹರಿಸಿದಾಗ, ವಿರಾಟರಾಜನೊಡನೆ ದುರ್ಯೋದನನ ಸೇನೆಯ ಎದುರು ಹೋರಾಡಲೆಂದು ದರ್‍ಮರಾಯ, ಬೀಮ, ನಕುಲ, ಸಹದೇವರು ಹೋಗಿದ್ದರು. ಕಾಳೆಗದ ಕಣದಲ್ಲಿ ದುರ್ಯೋದನನ ಕಡೆಯ ತ್ರಿಗರ್‍ತ ರಾಜರ ಪರಾಕ್ರಮ ಮೇಲಾಗಿ ವಿರಾಟರಾಜನನ್ನು ಸೆರೆಹಿಡಿದು ಕೊಂಡೊಯ್ಯುತ್ತಿದ್ದಾಗ, ಈ ಪಾಂಡವ ಸೋದರರು ತ್ರಿಗರ್‍ತ ರಾಜರನ್ನು ಸದೆಬಡಿದು, ವಿರಾಟರಾಯನನ್ನು ಮತ್ತು ಗೋವುಗಳನ್ನು ಸೆರೆಯಿಂದ ಬಿಡಿಸಿಕೊಂಡು ಬಂದ ತಮ್ಮೆಲ್ಲರ ಹೋರಾಟದ ಕೆಚ್ಚಿನ ರೀತಿಯನ್ನು ಅರ್‍ಜುನನಿಗೆ ಹೇಳಿದರು; ಭಂಗ=ಸೋಲು;

ಪಾರ್ಥ ಕೌರವ ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು=ಎರಡನೆಯ ದಿನ ಮತ್ತೆ ದುರ್‍ಯೋದನನ ಚತುರಂಗಬಲದವರು ವಿರಾಟನಗರದ ಉತ್ತರದ ಕಡೆಯಿಂದ ಆಕ್ರಮಣ ಮಾಡಿ, ಗೋವುಗಳನ್ನು ಅಪಹರಿಸಿ , ಗೊಲ್ಲನೊಬ್ಬನಿಗೆ ಅಪಮಾನ ಮಾಡಿ ಕಳುಹಿಸಿದ್ದಾಗ ಉತ್ತರಕುಮಾರನೊಡನೆ ಸಾರತಿಯಾಗಿ ತೆರಳಿದ್ದ ಅರ್‍ಜುನನು ತಾನು ಹೇಗೆ ದುರ್‍ಯೋದನನ ಸೇನೆಯನ್ನು ಸದೆಬಡಿದು ಸೋಲಿಸಿ, ಗೆದ್ದುಬಂದ ಬಗೆಯನ್ನು ತನ್ನ ಅಣ್ಣತಮ್ಮಂದಿರಿಗೆ ವಿವರಿಸುತ್ತಿರಲು; ಈ ರೀತಿ ಎರಡು ದಿನ ಗೋಗ್ರಹಣದ ಕಾಳೆಗದ ಹೋರಾಟದ ಪ್ರಸಂಗಗಳನ್ನು ಅಣ್ಣತಮ್ಮಂದಿರು ಪರಸ್ಪರ ಹೇಳಿಕೊಂಡು ಸಂತಸಪಡುತ್ತಿರುವಾಗ;

ನಿಲುಕು=ಕಾಣಿಸು/ಗೋಚರವಾಗು;

ಬಳಿಕ ರಾಯನ ಹಣೆಯ ಗಾಯವ ಪಾರ್ಥ ನಿಲುಕಿ ಕಂಡನು=ಸೋದರರು ಮಾತಿನಲ್ಲಿ ತೊಡಗಿದ್ದಾಗ ಅರ್‍ಜುನನ ಕಣ್ಣಿಗೆ ದರ್‍ಮರಾಯ ಹಣೆಯಲ್ಲಿ ಆಗಿದ್ದ ಗಾಯ ಗೋಚರಿಸಿತು;

ನೊಸಲು=ಹಣೆ; ನಸು=ಸ್ವಲ್ಪ/ತುಸು; ಬಿಂದು=ಹನಿ;

ಇದೇನು ನೊಸಲಿಂದ ನಸು ರಕ್ತ ಬಿಂದುಗಳು ಇಳಿವುತಿದೆ=ಇದೇನು ಹಣೆಯಿಂದ ರಕ್ತದ ಹನಿಗಳು ಸೋರುತ್ತಿದೆಯಲ್ಲ;

ಅವಧಾನ=ಎಚ್ಚರಿಕೆ; ಅನವಧಾನ=ಎಚ್ಚರಿಕೆಯಿಲ್ಲದೆ/ಮಯ್ ಮರೆಯುವಿಕೆ;

ಅನವಧಾನದೊಳು ಆಯ್ತು=ಎಚ್ಚರಿಕೆಯಿಲ್ಲದೆ ಆಯಿತು; ನೆನೆಯಲು+ಏತಕೆ; ಮಾಣು=ಬಿಡು; ಸಾಕು ಅದ ನೆನೆಯಲೇತಕೆ ಮಾಣು ಎನಲು=ಸಾಕು, ಅದನ್ನು ಈಗೇಕೆ ನೆನೆಸಿಕೊಳ್ಳಬೇಕು ಬಿಡು ಎಂದು ದರ್‍ಮರಾಯನು ಹೇಳಲು; ಮಿಗೆ=ಅತಿ ಹೆಚ್ಚಾಗಿ;

ಕನಲು=ಕೋಪಗೊಳ್ಳು/ಸಿಟ್ಟಿಗೇಳು; ಸೂರುಳ್=ಆಣೆಯಿಡು; ಅರಿ=ತಿಳಿ;

ಮಿಗೆ ಕನಲುತ ಅರ್ಜುನನು ಆ ದ್ರೌಪದಿಯ ಸೂರುಳಿಸಿ ಅರಿದನು=ತುಂಬಾ ಕೋಪಗೊಂಡ ಅರ್‍ಜುನನು ದ್ರೌಪದಿಯನ್ನು ಒತ್ತಾಯಮಾಡಿ, ನಿಜವನ್ನು ಹೇಳಲೇಬೇಕೆಂದು ಅವಳಿಂದ ಆಣೆಯಿಡಿಸಿ, ನಡೆದಿದ್ದ ಪ್ರಮಾದವನ್ನು ತಿಳಿದುಕೊಂಡನು;

ಉರಿದು+ಎದ್ದನು; ಉರಿದೇಳು=ಇದೊಂದು ನುಡಿಗಟ್ಟು. ಅತಿ ಹೆಚ್ಚಿನ ಕೋಪೋದ್ರೇಕಕ್ಕೆ ಒಳಗಾಗುವುದು;

ಮನದಲಿ ಉರಿದೆದ್ದನು=ವಿರಾಟರಾಜನಿಂದ ತನ್ನ ಅಣ್ಣ ದರ್‍ಮರಾಯನಿಗೆ ಆಗಿರುವ ಪೆಟ್ಟು ಮತ್ತು ಅಪಮಾನದಿಂದ ಅರ್‍ಜುನನು ಮನದಲ್ಲಿ ತೀವ್ರವಾದ ಆಕ್ರೋಶಕ್ಕೆ ಗುರಿಯಾದನು;

ತನು=ದೇಹ/ಮಯ್; ಹೊರಳಿಸಿ-ಹೊಳ್ಳಿಸಿ; ಹೊರಳು=ಉರುಳಿ ಬೀಳು/ಉರುಳಾಡು; ಹೊಳ್ಳಿಸಿ=ಕೆಳಕ್ಕೆ ಹಾಕಿಕೊಂಡು ಉರುಳಾಡಿಸಿ ತುಳಿದು; ಶಾಕಿನಿಯರು=ಮಾನವರ ರಕ್ತಮಾಂಸಗಳನ್ನು ಸೇವಿಸುವ ದೇವತೆಯರು; ಹೊಯ್=ಕೊಡು/ಎರೆ;

ವಿರಾಟನ ತನುವ ಹೊಳ್ಳಿಸಿ ರಕುತವನು ಶಾಕಿನಿಯರಿಗೆ ಹೊಯಿಸುವೆನು=ವಿರಾಟರಾಜನನ್ನು ಉರುಳಾಡಿಸಿ ಕೊಂದು, ಅವನ ರಕ್ತವನ್ನು ಶಾಕಿನಿಯರಿಗೆ ಉಣಬಡಿಸುತ್ತೇನೆ;

ಹೊಲ್ಲೆಹ+ಏನು; ಹೊಲ್ಲೆಹ=ತಪ್ಪು/ಅಪರಾದ;

ಹೊಲ್ಲೆಹವೇನು ಹೇಳು=ನಿನ್ನನ್ನು ಅಪಮಾನಪಡಿಸಿರುವ ರಾಜ ವಿರಾಟನನ್ನು ನಾನು ಕೊಲ್ಲುವುದು ತಪ್ಪೇನು ಎಂದು ಅರ್‍ಜುನನು ದರ್‍ಮರಾಯನನ್ನೇ ಪ್ರಶ್ನಿಸಿದ;

ಶಿವ ಶಿವ ಮಹಾದೇವ=ಏನಾದರೂ ಆಗಬಾರದ ಹಾನಿ ಇಲ್ಲವೇ ಕೇಡು ಉಂಟಾದಾಗ ವ್ಯಕ್ತಿಗಳ ಬಾಯಿಂದ ಹೊರಡುವ ದೇವರ ಹೆಸರಿನ ಉದ್ಗಾರ; ಅಣ್ಣ ದರ್‍ಮರಾಯನಿಗೆ ಈ ರೀತಿ ವಿರಾಟರಾಜನಿಂದ ಪೆಟ್ಟಾಗಿರುವ ಸಂಗತಿಯು ಬೀಮನಿಗೆ ಇದುವರೆಗೂ ತಿಳಿದಿರಲಿಲ್ಲ. ಈಗ ತಿಳಿದ ಕೂಡಲೇ ಅವನ ಬಾಯಿಂದ ಕೋಪೋದ್ರೇಕದ ಸಂಕೇತವಾಗಿ ಉದ್ಗಾರದ ನುಡಿಗಳು ಹೊರಹೊಮ್ಮಿದವು; ಕೀಚಕ+ಇಂದ್ರ; ಇಂದ್ರ=ಒಡೆಯ/ಯಜಮಾನ; ಬಳಗ=ಒಂದೇ ವಂಶಕ್ಕೆ ಸೇರಿದ ವ್ಯಕ್ತಿಗಳ ಸಮೂಹ; ಕೀಚಕೇಂದ್ರನ ಬಳಗ=ಕೀಚಕ ಮತ್ತು ಕೀಚಕನ ನೂರು ಮಂದಿ ತಮ್ಮಂದಿರು;

ವಿರಾಟನ ತಲೆಯ ಕೀಚಕೇಂದ್ರನ ಬಳಗವು ಇದ್ದಲ್ಲಿಗೆ ಕಳುಹಬೇಕೇ=ವಿರಾಟನ ತಲೆಯನ್ನು ಕಡಿದು ಕೀಚಕ ಮತ್ತು ಕೀಚಕನ ತಮ್ಮಂದಿರು ಇರುವ ಸಾವಿನ ಮನೆಗೆ ಕಳುಹಿಸಬೇಕೇ: ಬೀಮನು ಅಣಕದ ನುಡಿಯಿಂದ ವಿರಾಟ ಮತ್ತು ಕೀಚಕನ ಬಳಗವನ್ನು ಹಂಗಿಸಿ ನುಡಿಯುತ್ತಿದ್ದಾನೆ. ಆದ್ದರಿಂದಲೇ ತನ್ನಿಂದ ಕೊಲೆಯಾದ ಕೀಚಕನನ್ನು ‘ಕೀಚಕೇಂದ್ರ’ ಎಂದು ವ್ಯಂಗ್ಯವಾಡುತ್ತಿದ್ದಾನೆ;

ಋಣ=ಸಾಲ/ಹಂಗು; ಸಾಲಿಗ=ಸಾಲವನ್ನು ನೀಡಿದವನು/ಸಾಲಗಾರ;

ಋಣ ಸಾಲಿಗನಲೇ=ವಿರಾಟರಾಯನು ಕೀಚಕನ ರುಣದಲ್ಲಿಯೇ ಬದುಕಿದ್ದವನಲ್ಲವೇ; ಅಂದರೆ ಕೀಚಕನ ಬಲದಿಂದಲೇ ವಿರಾಟರಾಯನ ರಾಜ್ಯ ನಡೆಯುತ್ತಿತ್ತು;

ಒಕ್ಕು=ಹರಿ/ಪ್ರವಹಿಸು;

ರಕ್ತವು ನೆಲದೊಳು ಒಕ್ಕುದೆ=ರಕ್ತವು ನೆಲದಲ್ಲಿ ಹರಿಯಿತೇ;

ಕುಲ=ವಂಶ/ಮನೆತನ; ಸವರು=ನಾಶಗೊಳಿಸು;

ಅವದಿರ ಕುಲವ ಸವರುವೆನು=ವಿರಾಟರಾಯನ ರಾಜವಂಶವನ್ನೇ ಸಂಪೂರ್‍ಣವಾಗಿ ನಾಶಮಾಡುತ್ತೇನೆ; ಭೂತ=ದೆವ್ವ; ಗಣ=ಸಮೂಹ/ಗುಂಪು; ಬಲಿ=ಆಹುತಿ;

ಇವನ ಸೀಳಿದು ಭೂತಗಣಕೆ ಬಲಿಯ ಕೊಡುವೆನು ಎನುತ ಎದ್ದನು ಆ ಭೀಮ=ವಿರಾಟರಾಯನನ್ನು ಸೀಳಿ ದೆವ್ವಗಳಿಗೆ ಬಲಿಕೊಡುತ್ತೇನೆ ಎಂದು ಅಬ್ಬರಿಸುತ್ತ ಬೀಮನು ಮೇಲೆದ್ದನು; ಹೋ… ಹೋ=ಆತಂಕ ಮತ್ತು ಹೆದರಿಕೆಯುಂಟಾದಾಗ ವ್ಯಕ್ತಿಯ ಬಾಯಿಂದ ಹೊರಡುವ ಉದ್ಗಾರದ ದನಿಗಳು;

ಹೋ ಹೋ ಸಾಕು ಸಾಕೈ ತಮ್ಮ=ವಿರಾಟರಾಜನನ್ನು ಕೊಲ್ಲುವುದಾಗಿ ಹೇಳುತ್ತಿರುವ ಬೀಮನ ಮಾತುಗಳನ್ನು ಕೇಳುತ್ತಿದ್ದಂತೆಯೇ ದರ್‍ಮರಾಯನು ಆತಂಕ ಮತ್ತು ಏನಾದರೂ ಅನಾಹುತವಾಗುವುದೆಂಬ ಹೆದರಿಕೆಯಿಂದ “ಹೋ… ಹೋ… ಸಾಕು ಸಾಕು ನಿಲ್ಲಿಸು ತಮ್ಮ”;

ಕಾಕು=ಕೊಂಕು ನುಡಿ; ಕಾಕ ಬಳಸು=ಕೆಟ್ಟ ಮಾತಾಡು/ವಕ್ರವಾಗಿ ನುಡಿ;

ಕಾಕ ಬಳಸಲು ಬೇಡ=ವಿರಾಟರಾಜನ ಬಗ್ಗೆ ಇಂತಹ ಕೆಟ್ಟ ಮಾತನ್ನಾಡಬೇಡ/ಕೊಂಕು ನುಡಿಯನ್ನಾಡಬೇಡ; ಉದ್ರೇಕ=ದುಡುಕು/ಉದ್ವೇಗ; ಮಾಣು=ಬಿಡು;

ಉದ್ರೇಕವನು ಮಾಣು=ದುಡುಕುತನದ ನಡೆನುಡಿಯನ್ನು ಬಿಡು;

ನೆಲ ರಕ್ತ ಕಂಡರೆ ನನ್ನ ಮೇಲಾಣೆ=ನನ್ನಾಣೆಯಾಗಿಯೂ ಹೇಳುತ್ತಿದ್ದೇನೆ. ಆಗ ನನ್ನ ಹಣೆಯಿಂದ ತೊಟ್ಟಿಕ್ಕಿದ ರಕ್ತ ನೆಲದ ಮೇಲೆ ಬೀಳಲಿಲ್ಲ; ದರ್‍ಮರಾಯನು ಆಣೆಯಿಡುವುದರ ಮೂಲಕ ಉದ್ರಿಕ್ತಗೊಂಡಿರುವ ಬೀಮನನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಿದ್ದಾನೆ;

ಲೋಚನ=ಕಣ್ಣು; ಕಮಲಲೋಚನೆ=ತಾವರೆಯ ಹೂವಿನಂತಹ ಕಣ್ಣುಳ್ಳವಳು/ಸೈರಂದ್ರಿ; ಸೇಕ=ಬಳಿ/ಒರೆಸು/ಸವರು;

ಈ ಕಮಲಲೋಚನೆಯ ಸೆರಗಿಗೆ ರಕುತವು ಸೇಕವಾಯಿತು=ಈ ಸೈರಂದ್ರಿಯ ಸೆರಗಿನಿಂದ ಬೀಳುತ್ತಿದ್ದ ರಕ್ತವನ್ನು ತಡೆದು ಒರೆಸಲಾಯಿತು. ಸೈರಂದ್ರಿಯ ಸೆರಗಿನ ಬಟ್ಟೆಯು ರಕ್ತವನ್ನು ಹೀರಿಕೊಂಡಿತು; ನನ್ನ ಹಣೆಯಿಂದ ಒಂದು ತೊಟ್ಟು ರಕ್ತವೂ ನೆಲದ ಮೇಲೆ ಬೀಳಲಿಲ್ಲ;

ಸವ್ಯಾಕುಲ=ವ್ಯಾಕುಲಗೊಂಡವನು; ವ್ಯಾಕುಲ=ಸಂಕಟದಿಂದ ಕಂಗೆಟ್ಟವನು; ಅನಿಲ=ವಾಯುದೇವ; ಜ=ಜನಿಸಿದವನು; ಅನಿಲಜ=ವಾಯುದೇವನ ಅನುಗ್ರಹದಿಂದ ಹುಟ್ಟಿದವನು/ಬೀಮ;

ಅತಿ ಸವ್ಯಾಕುಲತೆ ಬೇಡ ಎಂದು ಅನಿಲಜನ ಗಲ್ಲವ ಹಿಡಿದನು= ಪ್ರೀತಿಯ ನಡೆನುಡಿಯಿಂದಲೇ ಬೀಮನನ್ನು ಸಮಾದಾನಪಡಿಸಲೆಂದು “ ಅತಿಯಾದ ಸಂಕಟದಿಂದ ನೋಯಬೇಡ” ಎನ್ನುತ್ತ… ಬೀಮನ ಗಲ್ಲವನ್ನು ಹಿಡಿದುಕೊಂಡು ದರ್‍ಮರಾಯನು ಮುದ್ದುಮಾಡಿದನು;

ಆತನ ಜೀವವನು ಕೊಂಬೆನು=ಆತನ ಪ್ರಾಣವನ್ನು ತೆಗೆಯುತ್ತೇನೆ;

ಪತಿ=ಒಡೆಯ/ಯಜಮಾನ/ದೊರೆ; ಗರ್ವ=ಸೊಕ್ಕು/ಮದ; ಎರಗು=ಮೇಲೆ ಬಿದ್ದು ಹೊಡೆ/ಬಡಿ;

ಪತಿ ಎಂಬ ಗರ್ವವನು ಅವನ ನೆತ್ತಿಯ ತುಂಬಿ ಬಿಡಲು ಎರಗುವೆನು=ನಮ್ಮೆಲ್ಲರಿಗೂ ತಾನು ಯಜಮಾನನೆಂಬ ಸೊಕ್ಕು ವಿರಾಟರಾಯನ ತಲೆಯಲ್ಲಿ ತುಂಬಿಕೊಂಡಿದೆ. ಅವನ ಸೊಕ್ಕು ಅಡಗುವಂತೆ ಮೇಲೆ ಬಿದ್ದು ಬಡಿಯುತ್ತೇನೆ; ಸಂತತಿ=ವಂಶ; ಮತ್ಸ್ಯ ಸಂತತಿ=ವಿರಾಟರಾಯನ ವಂಶದ ಹೆಸರು; ವಿರಾಟರಾಯನು ಆಳುತ್ತಿದ್ದ ದೇಶದ ಹೆಸರು: ಮತ್ಸ್ಯದೇಶ; ತರಿ=ಕಡಿ/ಕತ್ತರಿಸು;

ಮತ್ಸ್ಯ ಸಂತತಿಯ ತರಿವೆನು=ವಿರಾಟರಾಯನ ವಂಶವನ್ನೇ ಕಡಿದು ನಾಶಮಾಡುತ್ತೇನೆ;

ಅಂಬುಜ+ಅಕ್ಷಿ; ಅಂಬುಜ=ತಾವರೆಯ ಹೂವು; ಅಕ್ಷಿ=ಕಣ್ಣು; ಅಂಬುಜಾಕ್ಷಿ=ತಾವರೆಯ ಕಣ್ಣಿನವಳು/ದ್ರೌಪದಿ; ಬೇಳಂಬ=ಕೇಡು/ವಿಪತ್ತು; ಕೂಟ=ಜತೆ/ಸಂಗ;

ಕೀಚಕನ ಅಂಬುಜಾಕ್ಷಿಯ ಬೇಳಂಬವು ಈತನ ಕೂಟ=ಈ ವಿರಾಟರಾಯನ ಕುಮ್ಮಕ್ಕಿನಿಂದಲೇ ಕೀಚಕನು ದ್ರೌಪದಿಗೆ ಕೇಡನ್ನು ಬಗೆಯಲು ಪ್ರಯತ್ನಿಸಿದ್ದನು; ಕದಂಬ=ಗುಂಪು; ತುಷ್ಟಿ=ತಣಿವು/ತ್ರುಪ್ತಿ; ಸೆರಗು=ಬಾಹುಗಳ ಮೇಲೆ ಹಾಕಿಕೊಂಡಿರುವ ಉತ್ತರೀಯ/ಶಲ್ಯದ ಅಂಚು;

ಭೂತ ಕದಂಬ ತುಷ್ಟಿಯ ಮಾಡಬೇಹುದು, ಸೆರಗ ಬಿಡಿ=ವಿರಾಟರಾಯನನ್ನು ಕೊಂದು ದೆವ್ವಗಳ ರಕ್ತದಾಹವನ್ನು ಹಿಂಗಿಸಬೇಕು… ನನ್ನ ಸೆರಗನ್ನು ಬಿಡಿ;

ದರ್‍ಮರಾಯನು ಬೀಮನ ಗಲ್ಲವನ್ನು ಹಿಡಿದುಕೊಂಡು ಪ್ರೀತಿಯನ್ನು ತೋರಿಸುತ್ತಿರುವಾಗಲೇ, ಕೋಪೋದ್ರೇಕದಿಂದ ಕೂಡಿರುವ ಬೀಮನು ಅತ್ತಿತ್ತ ನುಗ್ಗದಂತೆ ಅವನ ಶಲ್ಯದ ಸೆರಗನ್ನೂ ದರ್‍ಮರಾಯನು ಹಿಡಿದುಕೊಂಡಿದ್ದನು;

ಓಲೈಸು=ಸೇವೆಮಾಡು/ಆಶ್ರಯ ಪಡೆದಿರು; ಕೈಯೊಡನೆ=ನಮ್ಮ ಉದ್ದೇಶ ಮುಗಿದ ನಂತರ; ಇವಗೆ=ಇವನಿಗೆ; ಮುನಿ=ಕೋಪಗೊಳ್ಳು/ಇದಿರುಬೀಳು; ಭುವನ=ಜಗತ್ತು;

ಇವನ ನಾವು ಓಲೈಸಿ ಕೈಯೊಡನೆ ಇವಗೆ ಮುನಿದೊಡೆ ಭುವನ ಜನವು ಏನನು ಎಂಬುದು=ಅಜ್ನಾತವಾಸಕ್ಕಾಗಿ ಇದುವರೆಗೆ ವಿರಾಟರಾಯನ ಆಶ್ರಯದಲ್ಲಿದ್ದ ನಾವು, ಈಗ ನಮ್ಮ ಉದ್ದೇಶ ಈಡೇರಿದ ನಂತರ, ಇವನಿಗೆ ಇದಿರುಬಿದ್ದರೆ ಲೋಕದ ಜನ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ. ಪಾಂಡವರು ಉಪಕಾರ ಸ್ಮರಣೆಯಿಲ್ಲದವರು ಎಂದು ನಿಂದಿಸುವುದಿಲ್ಲವೇ;

ಭ್ರಮೆ=ತಪ್ಪು ಆಲೋಚನೆ/ಗ್ರಹಿಕೆ; ಸೈರಣೆ=ತಾಳ್ಮೆ/ಸಹನೆ;

ಭ್ರಮಿಸದಿರು, ಸೈರಣೆಗೆ ಮನ ಮಾಡು=ತಪ್ಪು ಕಲ್ಪನೆಗೆ ಒಳಗಾಗಬೇಡ. ತಾಳ್ಮೆಯಿಂದ ನಡೆದುಕೊಳ್ಳಲು ಮನಸ್ಸು ಮಾಡು;

ಎವಗೆ=ನಮಗೆ;

ಎವಗೆ ನೋವಿನ ಹೊತ್ತು=ಪಾಂಡವರಾದ ನಮ್ಮೆಲ್ಲರಿಗೂ ಇದು ಬಹಳ ಸಂಕಟದ ಸಮಯ;

ದುಷ್ಕೃತ=ಕೆಟ್ಟಕೆಲಸ/ಪಾಪ; ವಿವರಣ=ಪ್ರಕಟಗೊಳಿಸುವುದು/ವ್ಯಕ್ತಪಡಿಸುವುದು; ಫಲ=ಕಾರ್‍ಯದಪರಿಣಾಮ;

ದುಷ್ಕೃತ ವಿವರಣದ ಫಲವು=ನಾವು ಮಾಡಿದ ಪಾಪದ ಪಲವಿದು; ವ್ಯಕ್ತಿಯ ಜೀವನದಲ್ಲಿ ಉಂಟಾಗುವ ಒಳಿತು ಕೆಡುಕಿಗೆ ಹಿಂದಿನ ಜನ್ಮದಲ್ಲಿ ಇಲ್ಲವೇ ಈ ಜನ್ಮದಲ್ಲಿ ವ್ಯಕ್ತಿಯು ಮಾಡಿರುವ ಪಾಪಪುಣ್ಯಗಳೇ ಕಾರಣವೆಂಬ ನಂಬಿಕೆಯು ಜನಮನದಲ್ಲಿದೆ; ಅಂತೆಯೇ ದರ್‍ಮರಾಯನ ಮನದಲ್ಲಿಯೂ ಒಳಿತನ್ನು ಮಾಡಿದ್ದರೆ ಪುಣ್ಯಪಲವನ್ನು-ಕೆಟ್ಟದ್ದನ್ನು ಮಾಡಿದ್ದರೆ ಕೇಡಿನ ಪಲವನ್ನು ಉಣ್ಣಲೇಬೇಕು ಎಂಬ ಬಾವನೆಯು ನೆಲೆಗೊಂಡಿದೆ;

ಇದಕೆ=ಈಗ ನಮಗೆ ಬಂದಿರುವ ಸಂಕಟಕ್ಕೆ; ಲೋಗರು=ಲೋಕದ ಜನರು; ಅವಗಡಿಸು=ಪ್ರತಿಬಟಿಸು/ವಿರೋದಿಸು;

ಇದಕೆ ಲೋಗರನು ಅವಗಡಿಸಿದೊಡೆ ಎಮಗೆ ಹಾನಿಯು=ಈಗ ನಾವು ವಿರಾಟರಾಯನಿಗೆ ಹಾನಿ ಮಾಡಿದರೆ ಮತ್ಸ್ಯದೇಶದ ಪ್ರಜೆಗಳನ್ನು ಎದುರುಹಾಕಿಕೊಂಡಂತಾಗುತ್ತದೆ. ಅದರಿಂದ ನಮಗೆ ಕೇಡಾಗುತ್ತದೆ;

ಬರಿಯ=ಕೇವಲ/ಉಪಯುಕ್ತವಲ್ಲದ; ಜಾಡ್ಯ=ರೋಗ/ಬೇನೆ; ಮೈಮರೆ=ಎಚ್ಚರತಪ್ಪು. ರಾಜಪದವಿಯಲ್ಲಿದ್ದವರು ಹೇಗೆ ಬಾಳಬೇಕೆಂಬುದನ್ನೇ ಮರೆತು; ವನ=ಕಾಡು; ಬಿಕ್ಕೆ=ಒಂದು ಬಗೆಯ ಕಾಡುಮರ ಮತ್ತು ಅದರ ಹಣ್ಣು; ಅರಸು=ಹುಡುಕು; ತೊಳಲು=ಅಲೆದಾಡು;

ಬರಿಯ ಧರ್ಮದ ಜಾಡ್ಯದಲಿ ಮೈಮರೆದು ವನದಲಿ ಬೇವು ಬಿಕ್ಕೆಯನು ಅರಸಿ ತೊಳಲಿದು ಸಾಲದೇ=ಬರಿಯ ದರ್‍ಮದ ಹೆಸರಿನ ರೋಗದಲ್ಲಿ ಎಚ್ಚರತಪ್ಪಿ ಹನ್ನೆರಡು ವರುಶಗಳ ಕಾಲ ಹೊಟ್ಟೆಪಾಡಿಗಾಗಿ ಕಾಡಿನ ಮರಗಿಡಗಳ ಹಣ್ಣುಕಾಯಿಯನ್ನು ಹುಡುಕಿಕೊಂಡು ಅಲೆದಾಡಿದ್ದು ಸಾಕಾಗಿಲ್ಲವೇ; ಅಣ್ಣ ದರ್‍ಮರಾಯನೇ… ಅಂತಹ ಕೀಳಾದ ಬಾಳು ನಿನಗೆ ಸಂಕಟವನ್ನಾಗಲಿ ಇಲ್ಲವೇ ದುರ್‍ಯೋದನನ ಬಗ್ಗೆ ಆಕ್ರೋಶವನ್ನಾಗಿ ಮೂಡಿಸಲಿಲ್ಲವೇ;

ವತ್ಸರ=ವರುಶ; ಉರುಕು=ನಡುಕ/ಹೆದರಿಕೆ; ಉರುಕುಗೊಳ್ಳು=ಹೆದರು/ನಡುಗು; ತೇಜ=ಏಳಿಗೆ/ಶ್ರೇಯಸ್ಸು; ಮೆರೆ=ಪ್ರದರ್‍ಶಿಸು/ತೋರಿಸು/ಶೋಬಿಸು;

ಹದಿಮೂರು ವತ್ಸರದಿ ಉರುಕುಗೊಂಡೊಡೆ ರಾಜ ತೇಜವ ಮೆರೆವ ದಿನವು ಎಂದು ಇಹುದು=ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶದ ಅಜ್ನಾತವಾಸದುದ್ದಕ್ಕೂ ಹೆದರಿಕೆಯಿಂದಲೇ ತತ್ತರಿಸುತ್ತಿದ್ದರೆ, ಪಾಂಡುರಾಜನ ಮಕ್ಕಳಾದ ನಾವು ರಾಜತೇಜಸ್ಸಿನಿಂದ ಮೆರೆಯುವ ದಿನ ಯಾವಾಗ ಬರುವುದು;

ನೀವು ಇನ್ನು ಅರಿಯಿರಿ=ನೀವು ರಾಜಕಾರಣದ ಒಳಸುಳಿಗಳನ್ನು ಇನ್ನೂ ಸರಿಯಾಗಿ ತಿಳಿದಿಲ್ಲ ಎಂದು ಬೀಮನು ದರ್‍ಮರಾಯನ ಸಾಂತ್ವನದ ನುಡಿಗಳನ್ನು ತಿರಸ್ಕರಿಸುತ್ತ;

ಎಮ್ಮನು ಹರಿಯ ಬಿಡಿ ಸಾಕು=ವಿರಾಟರಾಯನನ್ನು ಕೊಲ್ಲಲು ನನ್ನನ್ನು ಬಿಡಿ. ಅಣ್ಣನಾದ ನೀನು ನನಗೆ ಅಂತಹ ಸ್ವಾತಂತ್ರ್ಯವನ್ನು ಕೊಟ್ಟರೆ ಅದೇ ಸಾಕು;

ಉದಯ=ಹುಟ್ಟು; ಇನಿಬರು=ಇವರೆಲ್ಲರೂ; ಸದನ=ಅರಮನೆ; ನೃಪಪೀಠ=ಸಿಂಹಾಸನ; ಗರ್ವ=ಹೆಮ್ಮೆ; ನೆಮ್ಮು=ಆಕ್ರಮಿಸು/ಆವರಿಸು;

ಉದಯದಲಿ ನಾವು ಇನಿಬರು ಆತನ ಸದನದಲಿ ನೃಪಪೀಠವನು ಗರ್ವದಲಿ ನೆಮ್ಮುವೆವು=ನಾಳೆ ಬೆಳಗ್ಗೆ ನಾವೆಲ್ಲರೂ ಜತೆಗೂಡಿ ವಿರಾಟರಾಜನ ಅರಮನೆಯಲ್ಲಿರುವ ಸಿಂಹಾಸನವನ್ನು ವಶಪಡಿಸಿಕೊಂಡು, ಹೆಮ್ಮೆಯಿಂದ ಅದರ ಮೇಲೆ ಕುಳಿತುಕೊಳ್ಳೋಣ;

ಖೋಡಿ=ತಪ್ಪು/ಅಪರಾದ; ಮದಮುಖನು=ಸೊಕ್ಕಿನವನು; ಒರಸು=ಅಳಿಸು/ನಾಶಗೊಳಿಸು;

ಆತ ನಮ್ಮಲಿ ಖೋಡಿಯನು ಹಿಡಿಯೆ ಮದಮುಖನನು ಒರಸುವೆವು=ಆಗ ವಿರಾಟರಾಯನು ನಮ್ಮಲ್ಲಿ ತಪ್ಪನ್ನು ಹಿಡಿದು ನಮ್ಮನ್ನು ಸಿಂಹಾಸನದಿಂದ ಹೊರತಳ್ಳಲು ಮುನ್ನುಗ್ಗಿದರೆ, ಸೊಕ್ಕಿನಿಂದ ಮೆರೆಯುತ್ತಿರುವ ಅವನನ್ನು ಕೊಲ್ಲೋಣ; ಮನ್ನಿಸು=ವ್ಯಕ್ತಿಯು ಮಾಡಿದ ತಪ್ಪನ್ನು ಮರೆತು, ವ್ಯಕ್ತಿಯನ್ನು ಆದರಿಸುವುದು;

ಹರುಷದಲಿ ಇದಿರುಗೊಂಡೊಡೆ ಮನ್ನಿಸುವ ಮಾತು=ಅವನ ಸಿಂಹಾಸನದಲ್ಲಿ ಕುಳಿತಿರುವ ನಮ್ಮನ್ನು ನೋಡಿ, ನಾವು ಯಾರೆಂಬುದನ್ನು ತಿಳಿದುಕೊಂಡು ಆನಂದದಿಂದ ನಮ್ಮನ್ನು ಎದುರುಗೊಂಡು ಆದರಿಸಿದರೆ , ಆಗ ಅವನು ನನಗೆ ಹೊಡೆದಿರುವ ತಪ್ಪನ್ನು ಮನ್ನಿಸೋಣ. ಇದೇ ನನ್ನ ಕಡೆಯ ಮಾತು; ಸನ್ಮತ=ಒಳ್ಳೆಯ ಉದ್ದೇಶ/ಒಳ್ಳೆಯ ಆಶಯ; ಪವನ=ವಾಯದೇವ; ಜ=ಜನಿಸಿದವನು; ಪವನಜ=ವಾಯುದೇವನ ಅನುಗ್ರಹದಿಂದ ಜನಿಸಿದವನು/ಬೀಮ;

ಇದುವೆ ಸನ್ಮತವು ಎಂದು ಪವನಜನ ಸಂತೈಸಿದನು=ಎಲ್ಲರ ಒಳಿತಿಗಾಗಿ ಈಗ ನಾನು ತೆಗೆದುಕೊಂಡಿರುವ ನಿಲುವು ಒಳ್ಳೆಯ ಉದ್ದೇಶದಿಂದ ಕೂಡಿದೆಯೆಂದು ನುಡಿದು ಉದ್ರಿಕ್ತನಾಗಿದ್ದ ಬೀಮನನ್ನು ದರ್‍ಮರಾಯನು ಸಮಾದಾನಪಡಿಸಿದನು.
(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks