ನಾವೇಕೆ ಬಯ್ಯುತ್ತೇವೆ? – 6ನೆಯ ಕಂತು

– ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

‘ಇದ್ದಕ್ಕಿದ್ದಂತೆಯೇ ಬಯ್ಯುವುದು’ ಮತ್ತು ‘ಉದ್ದೇಶಪೂರ‍್ವಕವಾಗಿ ಬಯ್ಯುವುದು’ ಎಂಬ ಎರಡು ಬಗೆಗಳನ್ನು ಬಯ್ಯುವಿಕೆಯಲ್ಲಿ ಗುರುತಿಸಲಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ ನಮಗೆ ಬಯ್ಯಬೇಕು ಎಂದು ಎನಿಸಿದರೂ ಬಹಿರಂಗವಾಗಿ ಬಯ್ಯಲಾಗದೆ, ಮನದಲ್ಲಿಯೇ ಬಯ್ದುಕೊಂಡು ಸುಮ್ಮನಾಗುತ್ತೇವೆ. ಬಯ್ಯುವುದಕ್ಕೆ ಇಲ್ಲವೇ ಬಯ್ಯದಿರುವುದಕ್ಕೆ ಕಾರಣವಾಗುವ ಮೆದುಳಿನ ನರಮಂಡಲದಲ್ಲಿ ನುಡಿಗೆ ಸಂಬಂದಿಸಿದ ನರಕೋಶಗಳ ಪ್ರಕ್ರಿಯೆಗಳನ್ನು ನರವಿಜ್ನಾನಿಗಳು ಅಯ್ದು ಹಂತಗಳಲ್ಲಿ ವಿವರಿಸಿದ್ದಾರೆ.

1. ಪ್ರಚೋದನೆ (Provocation)

ವ್ಯಕ್ತಿಯ ಮನದಲ್ಲಿ ಕೋಪ, ಹತಾಶೆ, ಸಂಕಟ, ಅಚ್ಚರಿ ಮುಂತಾದ ಒಳಮಿಡಿತಗಳು ಮೂಡುವುದಕ್ಕೆ ಇಲ್ಲವೇ ಕೆರಳುವುದಕ್ಕೆ ಕಾರಣವಾಗುವ ಜೀವಿಗಳು, ವಸ್ತುಗಳು ಮತ್ತು ಕ್ರಿಯೆಗಳು.

ಉದಾಹರಣೆ: ವ್ಯಕ್ತಿಯ ಕಯ್ ತಪ್ಪಿ ವಸ್ತುಗಳು ಕೆಳಕ್ಕೆ ಬಿದ್ದು ಹಾಳಾಗುವುದು; ಕಲ್ಲನ್ನು ಎಡಗಿ ಇಲ್ಲವೇ ನೆಲದಲ್ಲಿ ಜಾರಿ ಆಯತಪ್ಪಿ ಕೆಳಕ್ಕೆ ಬೀಳುವುದು; ವ್ಯಕ್ತಿಯು ಮಾಡುವ ಚಲನವಲನಗಳಿಗೆ ಇತರ ಜೀವಿಗಳಿಂದ, ವಸ್ತುಗಳಿಂದ ಮತ್ತು ವ್ಯಕ್ತಿಗಳಿಂದ ಇದ್ದಕ್ಕಿದ್ದಂತೆಯೇ ಅಡ್ಡಿ ಆತಂಕಗಳು ಎದುರಾಗಿ ಅಪಾಯವುಂಟಾಗುವ ಕ್ರಿಯೆಗಳು ಮತ್ತು ದಿನನಿತ್ಯ ಉಂಟಾಗುವ ಯಾವುದೇ ಬಗೆಯ ತೊಂದರೆಗಳು.

2. ಮಯ್ ಮನದಲ್ಲಿ ಕಂಡುಬರುವ ಲಕ್ಶಣಗಳು (Physiological and Psychological Attributions)

ಮೇಲ್ಕಂಡ ಸನ್ನಿವೇಶದಲ್ಲಿ ವ್ಯಕ್ತಿಯ ಮೆದುಳಿನ ನರಮಂಡಲದಲ್ಲಿರುವ ತಮಗೆ ತಾವಾಗಿಯೇ ಕ್ರಿಯಾಶೀಲವಾಗುವ ನರಕೋಶಗಳ ವ್ಯವಸ್ತೆಯು (Autonomous nervous system) ದೇಹಕ್ಕೆ ಮುನ್ನೆಚ್ಚರಿಕೆಯನ್ನು ನೀಡುತ್ತದೆ. ಮರುಗಳಿಗೆಯಲ್ಲಿಯೇ ವ್ಯಕ್ತಿಯ ಅರಿವಿಗೆ ಬರುವುದಕ್ಕೆ ಮುಂಚಿತವಾಗಿಯೇ ಅಂತಹ ಸನ್ನಿವೇಶದಿಂದ ಪಾರಾಗಲು ಇಲ್ಲವೇ ಅದನ್ನು ಎದುರಿಸಲು ದೇಹ ತಯಾರಾಗುತ್ತದೆ.

ಉದಾಹರಣೆ: ಕಾಲ ಮೇಲೆ ಏನೋ ಹರಿದಂತೆ ಆದಾಗ, ಅದು ಏನೆಂದು ನೋಡುವುದಕ್ಕೆ ಮುನ್ನವೇ ಕಾಲನ್ನು ಎತ್ತಿ ಒದರುವುದು. ಇದು ದೇಹಕ್ಕೆ ಸಂಬಂದಿಸಿದ ಪ್ರತಿಕ್ರಿಯೆಯಾದರೆ, ನುಡಿಯ ರೂಪದಲ್ಲಿ ಉದ್ಗಾರ ಸೂಚಕವಾಗಿ ಪ್ರತಿಕ್ರಿಯಾತ್ಮಕ ದನಿಗಳಾದ ‘ ಹಾ… ಹೋ… ಚೇ… ತೂ‘ ಮತ್ತು ‘ದರಿದ್ರದ್ದೆ… ಹಾಳಾದ್ದೆ… ಎಕ್ಕುಟ್ಟೋದ್ದೆ ‘ ಪದರೂಪದ ಬಯ್ಗುಳಗಳು ಹೊರಹೊಮ್ಮುತ್ತವೆ.

ಈ ಬಗೆಯ ಪ್ರತಿಕ್ರಿಯಾತ್ಮಕ ದನಿಗಳು ಮತ್ತು ಬಿಡಿ ಬಿಡಿ ರೂಪದ ಬಯ್ಗುಳಗಳು ಹೊರಹೊಮ್ಮುವುದಕ್ಕೆ ಮೆದುಳಿನ ಬಲ ಅರೆಗೋಳದಲ್ಲಿರುವ ನರಕೋಶಗಳು ಕಾರಣವಾಗಿವೆ.

ಇದ್ದಕ್ಕಿದ್ದಂತೆಯೇ ಬಯ್ಯುವ ಸನ್ನಿವೇಶದ ಈ ಎರಡು ಹಂತಗಳಲ್ಲಿ ಮಾನವನ ಮೆದುಳಿನ ನರಮಂಡಲದ ಬಲ ಅರೆಗೋಳದ ಪಾತ್ರ ದೊಡ್ಡದಾಗಿದೆ. ಏಕೆಂದರೆ ಬಾವನೆಗಳನ್ನು ಹೊರಹಾಕುವ ಉದ್ಗಾರ ಸೂಚಕ ದನಿಗಳ ಮತ್ತು ಬಯ್ಗುಳದ ಪದಗಳ ನರಕೋಶಗಳು ಬಲ ಅರೆಗೋಳದಲ್ಲಿವೆ. ವ್ಯಕ್ತಿಯ ಒಬ್ಬನೇ ಇದ್ದಾಗ ಬಯ್ಯುವ ಪ್ರಸಂಗಗಳಲ್ಲಿ ಇಲ್ಲವೇ ವ್ಯಕ್ತಿಯು ಆಡಿದ ಬಯ್ಗುಳಕ್ಕೆ ಯಾವುದೇ ಪ್ರತಿಕ್ರಿಯೆಯು ಯಾರಿಂದಲೂ ಬಾರದಿದ್ದಾಗ , ಬಯ್ಯುವಿಕೆಯು ಮತ್ತೆ ಮುಂದುವರಿಯುವುದಿಲ್ಲ.

ಉದ್ದೇಶಪೂರ‍್ವಕವಾಗಿ ಬಯ್ಯುವುದಕ್ಕೆ ತೊಡಗುವಾಗ ಅಂದರೆ ಇತರ ವ್ಯಕ್ತಿಗಳ ನಡೆನುಡಿಗಳಲ್ಲಿನ ಅರೆಕೊರೆಗಳನ್ನು ಎತ್ತಿ ಹಿಡಿದು ಹಂಗಿಸುವಾಗ, ತೆಗಳುವಾಗ ಇಲ್ಲವೇ ಇತರರನ್ನು ಮಾತಿನ ದಾಳಿಯ ಮೂಲಕವೇ ಹತೋಟಿಯಲ್ಲಿಟ್ಟುಕೊಳ್ಳಲು ಬಯ್ಗುಳವನ್ನು ಪ್ರಯೋಗಿಸುವಾಗ ವ್ಯಕ್ತಿಯ ಮೆದುಳಿನ ನರಮಂಡಲದಲ್ಲಿ ನಡೆಯುವ ಕ್ರಿಯೆಗಳನ್ನು ನರವಿಜ್ನಾನಿಗಳು ಮುಂದಿನ ಮೂರು ಹಂತಗಳಲ್ಲಿ ವಿವರಿಸಿದ್ದಾರೆ.

3. ತಡೆಯೊಡ್ಡುವುದು (Inhibition)

ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಗೆ ಅನೇಕ ಬಗೆಯ ಎಡರುತೊಡರುಗಳು ಉಂಟಾಗಿ ಮಯ್ ಮನಕ್ಕೆ ಇತರರಿಂದ ಗಾಸಿಯಾದಾಗ, ದೊಡ್ಡ ಪ್ರಮಾಣದಲ್ಲಿ ಕೋಪ , ಹತಾಶೆ ಇಲ್ಲವೇ ಸಂಕಟ ಉಂಟಾಗಿದ್ದರೂ ಕೆಲವೊಮ್ಮೆ ಅದಕ್ಕೆ ಕಾರಣನಾಗಿರುವ ವ್ಯಕ್ತಿಯನ್ನು ಬಯ್ಯಲು ತೊಡಗದೆ, ಬಯ್ಯುವಿಕೆಯನ್ನು ನಿಯಂತ್ರಿಸಿಕೊಳ್ಳುತ್ತಾನೆ.

ಉದ್ದೇಶಪೂರ‍್ವಕವಾಗಿ ಬಯ್ಯುವುದಕ್ಕೆ ಮುನ್ನಿನ ಗಳಿಗೆಯಲ್ಲಿ “ಈ ಬಗೆಯ ಸಾಮಾಜಿಕ ಸನ್ನಿವೇಶದಲ್ಲಿ ಇಂತಹ ವ್ಯಕ್ತಿಯನ್ನು ನಾನು ಬಯ್ಯುವುದು ಸರಿಯಾಗುತ್ತದೆಯೋ ಇಲ್ಲವೇ ತಪ್ಪಾಗುವುದೋ” ಎಂಬುದನ್ನು ವ್ಯಕ್ತಿಯು ತನ್ನ ಮನದಲ್ಲಿಯೇ ಅಳೆದು ಸುರಿದು ನೋಡುತ್ತಾನೆ. ತಾನು ಯಾರಿಗೆ ಬಯ್ಯಬೇಕೆಂದಿರುವನೋ ಆ ವ್ಯಕ್ತಿಯ ದೇಹದ ಕಸುವು ಮತ್ತು ಸಾಮಾಜಿಕ ಅಂತಸ್ತು ಅಂದರೆ ಆ ವ್ಯಕ್ತಿಯ ಜಾತಿ, ಮತ, ಲಿಂಗ, ವರ‍್ಗ ಮತ್ತು ಹೊಂದಿರುವ ಹುದ್ದೆ ಮುಂತಾದ ಸಾಮಾಜಿಕ ಸಂಗತಿಗಳೆಲ್ಲವೂ ಈಗ ಪರಿಗಣನೆಗೆ ಬರುತ್ತವೆ. ಏಕೆಂದರೆ ಬಯ್ಯುವುದರಿಂದ ವ್ಯಕ್ತಿಗೆ ಕೆಲವೊಮ್ಮೆ ತನ್ನ ಮನದ ಆಕ್ರೋಶ ಉಪಶಮನಗೊಂಡು ನಿರಾಳತೆ ಉಂಟಾಗಬಹುದು. ಮತ್ತೆ ಕೆಲವೊಮ್ಮೆ ಬಯ್ಯಿಸಿಕೊಂಡವರು ತಿರುಗಿಬಿದ್ದರೆ ಆಗ ಮಯ್ ಮೇಲೆ ಹಲ್ಲೆ ನಡೆಯಬಹುದು ಇಲ್ಲವೇ ಅದಕ್ಕಿಂತ ದೊಡ್ಡ ಹಾನಿ ಉಂಟಾಗಬಹುದು. ಬಯ್ಯುವುದರಿಂದ ಪ್ರಯೋಜನವಾಗುವಂತಿದ್ದರೆ ಬಯ್ಯುವ ಇಲ್ಲವೇ ಹಾನಿಯಾಗುವಂತಿದ್ದರೆ ಬಯ್ಯದಿರುವ ತೀರ‍್ಮಾನವನ್ನು ವ್ಯಕ್ತಿಯು ಈ ಹಂತದಲ್ಲಿ ಕಯ್ಗೊಳ್ಳುತ್ತಾನೆ.

ಈ ಬಗೆಯ ತೀರ‍್ಮಾನವನ್ನು ವ್ಯಕ್ತಿಯು ಕಯ್ಗೊಳ್ಳುವುದಕ್ಕೆ ಮೆದುಳಿನ ನರಮಂಡಲದ ಮುಂಚೂಣಿಯಲ್ಲಿರುವ ‘ಪ್ರಂಟಲ್ ಲೋಬ್‘ ನರಕೋಶಗಳು ನೆರವಾಗುತ್ತವೆ. ವ್ಯಕ್ತಿಯು ತನ್ನ ದಿನನಿತ್ಯದ ವ್ಯವಹಾರಗಳಲ್ಲಿ “ಯಾವ ಯಾವ ಎಡೆಯಲ್ಲಿ, ಯಾವ ಯಾವ ಸಮಯದಲ್ಲಿ, ಯಾವ ಯಾವ ವ್ಯಕ್ತಿಗಳೊಡನೆ ಹೇಗೆ ನಡೆದುಕೊಳ್ಳಬೇಕು ಇಲ್ಲವೇ ಹೇಗೆ ನಡೆದುಕೊಳ್ಳಬಾರದು” ಎಂಬ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ನೀಡುವಂತಹ ನರಕೋಶಗಳು ‘ಪ್ರಂಟಲ್ ಲೋಬ್’ ನಲ್ಲಿ ಇವೆ.

4. ತಡೆಯಿಲ್ಲದೆ ಮುಂದುವರಿಯುವುದು (Disinhibition)

ಇತರರ ಮೇಲೆ ಮಾತಿನ ದಾಳಿಯನ್ನು ನಡೆಸಬಲ್ಲೆನು ಮತ್ತು ಆ ಬಗೆಯ ಕಸುವು ನನ್ನಲ್ಲಿದೆ ಎಂಬ ತೀರ‍್ಮಾನವನ್ನು ಕಯ್ಗೊಂಡ ವ್ಯಕ್ತಿಯು ಈಗ ಬಯ್ಯುವಿಕೆಯಲ್ಲಿ ತೊಡಗುತ್ತಾನೆ. ನಾನಾ ಬಗೆಯ ಬಯ್ಗುಳಗಳ ಮೂಲಕ ಎದುರಾಳಿಯನ್ನು ಕಂಗೆಡಿಸುವ ಇಲ್ಲವೇ ತನ್ನ ಇಚ್ಚೆಗೆ ತಕ್ಕಂತೆ ಮಣಿಯುವಂತೆ ಹೆದರಿಸಿ ಬೆದರಿಸುವ ಬಯ್ಗುಳಗಳನ್ನು ಆಡತೊಡಗುತ್ತಾನೆ.

ಉದ್ದೇಶಪೂರ‍್ವಕವಾಗಿ ಬಯ್ಯುವಾಗ ಬಾವನೆಗಳನ್ನು ಹೊರಹೊಮ್ಮಿಸುವ ಮೆದುಳಿನ ಬಲ ಅರೆಗೋಳದ ನರಕೋಶಗಳು, ಬಯ್ಗುಳದ ಪದ ಮತ್ತು ವಾಕ್ಯಗಳನ್ನು ನುಡಿಯಲು ನೆರವಾಗುವ ಮೆದುಳಿನ ಎಡ ಅರೆಗೋಳದ ಬ್ರೋಕ ಮತ್ತು ವರ‍್ನಿಕೆಯ ಜಾಗದ ನರಕೋಶಗಳು ಮತ್ತು ವಿವೇಕದ ನಡೆನುಡಿಗಳಿಗೆ ಕಾರಣವಾಗುವ ಪ್ರಂಟಲ್ ಲೋಬಿನ ನರಕೋಶಗಳೆಲ್ಲವೂ ಜತೆಗೂಡಿ ಕ್ರಿಯಾಶೀಲವಾಗಿರುತ್ತವೆ. ಉದ್ದೇಶಪೂರ‍್ವಕವಾಗಿ ಬಯ್ಯುತ್ತಿರುವಾಗ ಮೆದುಳಿನ ಕೇಂದ್ರ ನರಮಂಡಲದ ನರಕೋಶಗಳೆಲ್ಲವೂ (Central Nervous System) ಜತೆಗೂಡಿ ಕೆಲಸ ಮಾಡುತ್ತಿರುತ್ತವೆ.

5. ಪ್ರತೀಕಾರ (Retribution)

‘ಪ್ರತೀಕಾರ‘ ಎಂದರೆ ಬಯ್ಯುವಿಕೆಯ ಪ್ರಸಂಗದಲ್ಲಿ ವ್ಯಕ್ತಿಗಳ ಮಯ್ ಮನದಲ್ಲಿ ಉಂಟಾದ ಪರಿಣಾಮಗಳು ಯಾವುವು ಎಂಬುದನ್ನು ತಿಳಿಯುವುದು. ಬಯ್ದ ಮತ್ತು ಬಯ್ಯಿಸಿಕೊಂಡ ವ್ಯಕ್ತಿಗಳ ಮನಸ್ಸಿನ ಮೇಲೆ ಆ ಸನ್ನಿವೇಶದಲ್ಲಿ ಬಳಕೆಯಾದ ಬಯ್ಗುಳಗಳು ಬಹುಬಗೆಯ ಪರಿಣಾಮಗಳನ್ನು ಬೀರುತ್ತವೆ.

ವ್ಯಕ್ತಿಗಳ ನಡುವೆ ನಡೆದ ಮಾತಿನ ದಾಳಿಯ ಸನ್ನಿವೇಶದಲ್ಲಿ ಬಳಕೆಯಾದ ಬಯ್ಗುಳಗಳಿಂದ ಬಯ್ದವರ ಮತ್ತು ಬಯ್ಯಸಿಕೊಂಡವರ ಮಯ್ ಮನದ ಮೇಲೆ ಉಂಟಾಗುವ ಪರಿಣಾಮವನ್ನು ಹೀಗೆ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅದು ವ್ಯಕ್ತಿಗತವಾದ ನೆಲೆಯಲ್ಲಿ ನಡೆಯುವ ಪ್ರಕ್ರಿಯೆಯಾಗಿರುತ್ತದೆ.

ಬಯ್ದ ವ್ಯಕ್ತಿಗೆ ತನಗೆ ಉಂಟಾಗಿದ್ದ ಕೋಪವನ್ನು ಇಲ್ಲವೇ ಹತಾಶೆಯನ್ನು ಹೊರಹಾಕಿ, ಅದಕ್ಕೆ ಕಾರಣನಾದ ವ್ಯಕ್ತಿಯನ್ನು ಬಯ್ಗುಳದಿಂದಲೇ ಸದೆಬಡಿದ ನೆಮ್ಮದಿ ದೊರಕಬಹುದು. “ಅವನಿಗೆ ಚೆನ್ನಾಗಿ ಅಂದು ಆಡಿ ಅವನ ಮೊಕದ ನೀರ್ ಇಳಿಸ್ಬುಟ್ಟೆ. ಇನ್ನು ಯಾವತ್ತು ಎಲ್ಲೂ ಸರೀಕರ ಮುಂದೆ ಮೊಕ ಎತ್ಕೊಂಡು ತಿರುಗಾಡಬಾರದು ಹಂಗೆ ಬಯ್ದು ಕಳಿಸ್ದೆ“ ಎಂದು ಹೆಮ್ಮೆಯಿಂದ ಇತರರ ಮುಂದೆ ತಾವು ಬಯ್ದ ಪ್ರಸಂಗವನ್ನು ಹೊಗಳಿಕೊಳ್ಳುವವರು ಇದ್ದಾರೆ.

ಕೆಲವೊಮ್ಮೆ ಬಯ್ಯಿಸಿಕೊಂಡ ವ್ಯಕ್ತಿಯು ಪ್ರತಿಯಾಗಿ ಬಯ್ಯಲು ತೊಡಗಿದರೆ, ಆಗ ಸನ್ನಿವೇಶವು ವಿಕೋಪಕ್ಕೆ ತಿರುಗಿ, ಮೊದಲು ಬಯ್ಯಲು ತೊಡಗಿದವನ ಮನಸ್ಸು ಇನ್ನೂ ಹೆಚ್ಚಿನ ಗಾಸಿಗೆ ಒಳಗಾಗಬಹುದು.

ಬಯ್ಯಸಿಕೊಂಡ ವ್ಯಕ್ತಿಯ ಮನಸ್ಸಿನ ಮೇಲೆ ಉಂಟಾದ ಪರಿಣಾಮಗಳು ಬೇರೆ ಬೇರೆ ಬಗೆಯಲ್ಲಿರುತ್ತವೆ. ಬಯ್ದವನ ಮತ್ತು ಬಯ್ಯಸಿಕೊಂಡ ವ್ಯಕ್ತಿಯ ನಡುವಣ ಸಾಮಾಜಿಕ ನಂಟು(Social Relation) ಮತ್ತು ಅದಿಕಾರದ ನಂಟು(Power Relation) ಯಾವ ಬಗೆಯದು ಎಂಬುದರ ನೆಲೆಯಲ್ಲಿ ಪರಿಣಾಮದ ಸ್ವರೂಪ ಇರುತ್ತದೆ. ಬಯ್ಯಿಸಿಕೊಂಡ ವ್ಯಕ್ತಿಯು ತನ್ನ ಸಾಮಾಜಿಕ ಅಂತಸ್ತಿಗೆ ತಕ್ಕಂತೆ ಇಂತಹ ಸನ್ನಿವೇಶಗಳಲ್ಲಿ ತೀರ‍್ಮಾನವನ್ನು ಕಯ್ಗೊಳ್ಳುತ್ತಾನೆ.

ಬಯ್ಯಿಸಿಕೊಂಡ ವ್ಯಕ್ತಿಯು ಪ್ರತಿಯಾಗಿ ಬಯ್ಯಲು ಇಲ್ಲವೇ ಬಯ್ಯದೆ ಸುಮ್ಮನಿರುವ ತೀರ‍್ಮಾನವನ್ನು ಕಯ್ಗೊಳ್ಳಲು ಸಾಮಾಜಿಕ ನಡೆನುಡಿಗಳನ್ನು ನಿಯಂತ್ರಿಸಿ ನಿರ‍್ದೇಶಿಸುವ ‘ಪ್ರಂಟಲ್ ಲೋಬ್’ ನರಕೋಶಗಳು ನೆರವಾಗುತ್ತವೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: