ಸರಳವಾದ ಮನೆಮದ್ದುಗಳು-2

– ಶ್ಯಾಮಲಶ್ರೀ.ಕೆ.ಎಸ್.

ಕಂತು-1

(ಈ ಮನೆಮದ್ದುಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ; ಇದನ್ನು ವೈದ್ಯಕೀಯ ಸಲಹೆ ಇಲ್ಲವೇ ವೈದ್ಯಕೀಯ ಸಲಹೆಗೆ ಬದಲಿ ಎಂದು ಪರಿಗಣಿಸಕೂಡದು. ಯಾವುದೇ ಹೊಸ ಚಿಕಿತ್ಸೆಯನ್ನು ಪ್ರಯತ್ನಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್‍ಕಿಸಿ.)

ಹಿಂದಿನ ಕಾಲದಲ್ಲಿ ಇಂದಿನ ದಿನಗಳ ಮಾದರಿಯಲ್ಲಿ ವೈದ್ಯಕೀಯ ವ್ಯವಸ್ತೆ ಇರದಿದ್ದರಿಂದ, ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆ ಮದ್ದುಗಳನ್ನೇ ಜನರು ಬಳಸುತ್ತಿದ್ದರು. ಅಂತಹ ಮನೆ ಮದ್ದುಗಳು ಇಂದಿಗೂ ಸೂಕ್ತ. ಅಂತಹುದೇ ಅಂದಿನ ಮತ್ತು ಇಂದಿನ ಕೆಲವು ಮನೆಮದ್ದುಗಳನ್ನು ನೋಡೋಣ.

1.ಬಾಯಾರಿಕೆ ತಪ್ಪಿಸಲು :

ತೊಳೆದ ಒಂದು ಮಾವಿನಕಾಯಿಯನ್ನು ಸಣ್ಣ ಸಣ್ಣ ತುಂಡು ಮಾಡಿ ಮಿಕ್ಸರ್ ಗೆ ಹಾಕಿ, ಸ್ವಲ್ಪ ಪುದಿನ ಎಲೆ, ಸ್ವಲ್ಪ ಶುಂಟಿ, ಅರ‍್ದ ಚಮಚ ಚಾಟ್ ಮಸಾಲ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ಕುಡಿದರೆ ದೀರ‍್ಗಕಾಲದವರೆಗೂ ಬಾಯಾರಿಕೆ ತಡೆಹಿಡಿಯಲು ಅನುಕೂಲವಾಗುತ್ತದೆ. ಈ ಒಂದು ಮನೆಮದ್ದು ಬೇಸಿಗೆಕಾಲದಲ್ಲಿ ಬಹಳ ಉಪಯೋಗಕ್ಕೆ ಬರುವುದು.

2. ಗಂಟಲು ನೋವು, ಹಲ್ಲು ನೋವುಗಳ ಪರಿಹಾರ :

ಒಂದು ದಾಳಿಂಬೆ ಹಣ್ಣಿನ ಸಿಪ್ಪೆ ಸುಲಿದು ಅದರೊಳಗಿನ ದಿಂಡನ್ನು ಚೂರು ಚೂರು ಮಾಡಿ, ಒಂದು ಗ್ಲಾಸ್ ನೀರಿಗೆ ಹಾಕಿ ಕಾಲು ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿ, ಸ್ವಲ್ಪ ತಣ್ಣಗಾದ ಮೇಲೆ ಆ ನೀರನ್ನು ಕುಡಿದರೆ ಗಂಟಲು ನೋವು, ಹಲ್ಲು ನೋವು ಬೇಗನೆ ಉಪಶಮನವಾಗುತ್ತದೆ. ಬಾಯಿ ಹುಣ್ಣು ಇದ್ದರೂ ಕಡಿಮೆಯಾಗುವುದು.

3.ಶೀತ, ಕೆಮ್ಮು, ಗಂಟಲು ನೋವಿಗೆ :

ಐದಾರು ದೊಡ್ಡ ಪತ್ರೆ ಎಲೆಗಳನ್ನು ತೆಗೆದುಕೊಂಡು, ತೊಳೆದು ಅದನ್ನು ಕೈಯಲ್ಲೇ ಚೂರು ಚೂರು ಮಾಡಿ ಎರಡು ಲೋಟ ಕುದಿಯುವ ನೀರಿಗೆ ಹಾಕಿ, ಸ್ವಲ್ಪ ಶುಂಟಿ, ಅರ‍್ದ ಚಮಚ ಕಾಳು ಮೆಣಸಿನಪುಡಿ ಹಾಕಿ ಕುದಿಸಿಟ್ಟು ಸೋಸಿಡಿ. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಮಳೆಗಾಲದಲ್ಲಿ ಆಗುವ ಶೀತ, ಕೆಮ್ಮು, ಗಂಟಲು ನೋವನ್ನು ಪರಿಹರಿಸಬಹುದು.

4.ಪಿತ್ತ, ವಾಕರಿಕೆ, ಹೊಟ್ಟೆ ಉಬ್ಬರ ತಗ್ಗಿಸಲು :

ಒಂದು ಗ್ಲಾಸ್ ಚೆನ್ನಾಗಿ ಕುದಿಸಿದ ನೀರಿಗೆ ಅರ‍್ದ ನಿಂಬೆ ಹಣ್ಣಿನ ರಸ, ಸ್ವಲ್ಪ ಉಪ್ಪು ಮತ್ತು ಕಾಲು ಚಮಚ ಅಡುಗೆ ಸೋಡ ಬೆರೆಸಿ ಕುಡಿದರೆ ಪಿತ್ತ, ವಾಂತಿ, ಹೊಟ್ಟೆ ಉಬ್ಬರವನ್ನು ತಗ್ಗಿಸಬಹುದು.

5.ಜಂತುಹುಳು ನಾಶಕ್ಕೆ :

ನೂರು ಮಿ.ಲೀ ನೀರಿಗೆ ಒಂದು ಚಮಚ ದನಿಯಾ ಕಾಳುಗಳನ್ನು ಹಾಕಿ, ಅರ‍್ದದಶ್ಟು ನೀರು ಇಂಗುವವರೆಗೂ ಚೆನ್ನಾಗಿ ಕುದಿಸಿ ಆರಿಸಿ. ನಂತರ ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಜಂತು ಹುಳು ನಿರ‍್ಮೂಲನೆಯಾಗುತ್ತದೆ. ಹಾಗೆಯೇ ಹೊಟ್ಟೆ ನೋವು ಶಮನವಾಗುತ್ತೆ.

ಕಂತು-1

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: