ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 10
ಉತ್ತರಕುಮಾರನ ಪ್ರಸಂಗ: ನೋಟ – 10
ಕೇಳು ಜನಮೇಜಯ ಧರಿತ್ರೀಪಾಲ. ಚರಿತ ಅಜ್ಞಾತವಾಸವ ಬೀಳುಕೊಟ್ಟರು. ಬಹಳ ಹರುಷದಲಿ ಇರುಳ ನೂಕಿದರು.
ಮೇಲಣ ಅವರ ಅಭ್ಯುದಯವನು ಕೈಮೇಳವಿಸಿ ಕೊಡುವಂತೆ ಮೂಡಣ ಶೈಲಮುಖದಲಿ ಭಾನುಮಂಡಲದ ಕೆಂಪು ಸುಳಿದುದು. ಏಳು ಕುದುರೆಯ ಖುರಪುಟದ ಕೆಂದೂಳಿಯೋ… ಕುಂತೀ ಕುಮಾರಕರ ಏಳಿಗೆಯ ತನಿರಾಗರಸ ಉಬ್ಬರಿಸಿ ಪಸರಿಸಿತೊ… ಹೇಳಲೇನು… ಮಹೇಂದ್ರ ವರ ದಿಗ್ಬಾಲಕಿಯ ಬೈತಲೆಯ ಕುಂಕುಮಜಾಲವೋ… ಹೇಳೆನಲು… ದಿನಪನ ಚೂಣಿ ರಂಜಿಸಿತು. ಮೂಡಣಾದ್ರಿಯೊಳು ರವಿ ಓಲಗವ ಇತ್ತನು. ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು… ಚಂದ್ರಕಾಂತಕೆ ಬೆರಗನಿತ್ತನು… ಜಕ್ಕವಕ್ಕಿಯ ಸೆರೆಯ ಬಿಡಿಸಿದನು… ಕೆರಳಿ ನೈದಿಲ ಸಿರಿಯ ಸೂರೆಯ ತರಿಸಿದನು… ರಿಪುರಾಯ ರಾಜ್ಯವನು ಒರಸಿದನು.
“ಹರಹರ… ಶ್ರೀಕಾಂತ ” ಎನುತ ಐವರು ಕುಮಾರಕರು ಉಪ್ಪವಡಿಸಿದರು. ಅರಿವಿದಾರರು ಮಾಂಗಲ್ಯ ಮಜ್ಜನವ ಮಾಡಿದರು. ವರ ವಿಭೂಷಣ ಗಂಧ ಮಾಲ್ಯ ಅಂಬರದಿ ಪರಿವೃತರಾದರು. ಅವನೀ ಸುರರಿಗೆ ಧೇನು ಮಣಿ ಕನಕಾದಿ ವಸ್ತುಗಳ ಇತ್ತರು. ತಮದ ಗಂಟಲನು ಒಡೆದ ಹರುಷ ದ್ಯುಮಣಿಮಂಡಲದಂತೆ ಜೀವಭ್ರಮೆಯ ಕವಚವ ಕಳೆದು ಹೊಳೆ ಹೊಳೆವ ಆತ್ಮನ ಅಂದದಲಿ ವಿಮಲ ಬಹಳ ಕ್ಷತ್ರರಶ್ಮಿಗಳು ಅಮರಿ ದೆಸೆಗಳ ಬೆಳಗೆ, ರಾಜೋತ್ತಮ ಯುಧಿಷ್ಠಿರ ದೇವನು ರಾಜ ತೇಜದಲಿ ಎಸೆದನು. ಪರಮ ಸತ್ಯವ್ರತ ಮಹಾಕ್ರತು ವರದಲಿ ಅವಭೃತ ಮಜ್ಜನವ ವಿಸ್ತರಿಸಿ ಭೀಮಾದಿಗಳು ಸಹಿತ ವಿರಾಟನ ಅರಮನೆಗೆ ಅರಸ ಬಂದನು. ಮಣಿಖಚಿತ ಕೇಸರಿಯ ಪೀಠವನು ಅಡರಿದನು. ಒಡಹುಟ್ಟಿದರು ಪರುಟವಿಸಿ ನಿಜ ಚರಣ ಸೇವೆಯಲಿ ಎಸೆದರು. ಕಂಚುಕಿಗಳು ಐತಂದು ಇವರನು ಈಕ್ಷಿಸಿ…
ಕಂಚುಕಿಗಳು: ಅವನಿಪನ ಸಿಂಹಾಸನವನು ಏರುವ ಸಗರ್ವಿತರು ಆರು. ನೋಡಿದಡೆ ಎವೆಗಳು ಉರಿವುದು ಹಾಯ್…
(ಎನುತ ಕ್ಷಾತ್ರ ತೇಜವನು ಅವಗಡಿಸಲು ಅಂಜಿದರು. ಅವದಿರು ಹರಿತಂದು ಎಬ್ಬಿಸಿ ಮತ್ಸ್ಯಭೂಪತಿಗೆ ಬಿನ್ನವಿಸಿದರು.)
ಕಂಚುಕಿ: ಜೀಯ, ಸಿಂಹಾಸನಕೆ ದಿವಿಜರ ರಾಯನೋ… ಶಂಕರನೊ ಮೇಣ್ ನಾರಾಯಣನೊ… ನರರಲ್ಲ. ದೇವರು ಬಂದು ನೋಡುವುದು. ಎಮಗೆ ಕಾಯಲು ಅಸದಳವು.
ವಿರಾಟರಾಯ: ನಿರ್ದಾಯದಲಿ ನೆಲೆಗೊಂಡ ನಿರ್ಜರರಾಯನು ಆರು?
(ಎಂದೆನುತಲು ಆಗ ವಿರಾಟ ಚಿಂತಿಸಿದ. ಉತ್ತರನನು, ಅಖಿಲ ಮಹಾ ಪ್ರಧಾನರನು, ಪುರೋಹಿತನನು ಕರೆಸಿಕೊಂಡು ಅರಮನೆಯ ಹೊರವಂಟು ಓಲಗಶಾಲೆಗೆ ನೃಪತಿ ಐತರುತ ದೂರದಲಿ ಚಂದ್ರ ಬಿಂಬದ ಕಿರಣ ಕರಗಿ ಸೂಸಿದ ಲಹರಿಗಳು ಎನಲು ವಿವಿಧ ಆಭರಣ ಮುಕ್ತ ಪ್ರಭೆಯ ಕಂಡನು. ಹರನ ನಾಲುಕು ಮುಖದ ಮಧ್ಯ ಸ್ಫುರಿತದ ಈಶಾನದವೊಲು ಆ ಸೋದರ ಚತುಷ್ಟಯ ಮಧ್ಯದಲಿ ಯುಧಿಷ್ಠಿರನ ಕಂಡನು. ವಾಮದಲಿ ಅರಸಿಯನು ವಿವಿಧ ಆಭರಣ ಮಣಿ ರಶ್ಮಿಗಳ ಹೊದರಿನ ಹೊರಳಿಯಲಿ ಕಂಡನು. ನಿಮಿಷದಲಿ ಕಣ್ಣಾಲಿ ಕೋರೈಸಿದವು.)
ವಿರಾಟರಾಯ: ಮೇಳವೇ ಫಡ, ಮನದ ಮತ್ಸರ ಕಾಲಿಡಲು ತೆರಹಿಲ್ಲ. ಮನುಜರ ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು. ಆಲಿಗಳು ಮೇಲಿಕ್ಕಲಮ್ಮವು. ಶೂಲಪಾಣಿಯ ಪರಮ ತೇಜದ ಚೂಳಿಯೋ… ಶಿವ ಶಿವ…
(ಎನುತ್ತ ವಿರಾಟ ಬೆರಗಾದ)
ಕೆಲಬರು: ವಲಲ… ಕಂಕ… ಬೃಹನ್ನಳೆಯ ಮೈಸುಳಿವ ಹೋಲುವರು. ಮತ್ತೆ ಕೆಲಬರು: ಇದೆತ್ತಣ ನರರು ತೆಗೆ. ಸುರಲೋಕ ಪಾಲಕರು. ಎಮಗೆ ತಿಳಿಯಲು ಅರಿದು .
(ಎಂದು ಕೆಲಬರು ತಳವೆಳಗುಗೊಳುತಿರಲು, ಉತ್ತರನು ಮಂದಿಯ ಕೆಲಕೆ ನೂಕಿಯೆ ತಂದೆಗೆ ನಗುತ ಕೈಮುಗಿದ.)
ಉತ್ತರಕುಮಾರ: ತಾತ ಬಿನ್ನಹ. ಈ ತೋರ್ಪಾತನು ನಿನ್ನೆ ವೈರಿವ್ರಾತವನು ಗೆಲಿದಾತನು. ಈತನ ಮುಂದೆ ಮೆರೆವವ ಕೀಚಕಾಂತಕನು. ಈತ ನಕುಲನು. ವಾಮದಲಿ ನಿಂದಾತ ಸಹದೇವಾಂಕನು. ಅನಿಬರಿಗೆ ಈತ ಹಿರಿಯನು ಧರ್ಮನಂದನನು.
(ಎಂದು ತೋರಿಸಿದ.)
ಕೆಲದಲಿ ಕಮಲಮುಖಿಯನು ನೋಡು… ಈಕೆ ಐವರಿಗೆ ರಮಣಿ. ತಾವು ಇವರು ಪಾಂಡುನಂದನರು. ಅಮಳ ಗುಣ ಗಂಭೀರ ರಾಯರು. ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆ ಯಾಯ್ತು. ಇನ್ನೇನು ನಡೆ ನಡೆ ನೃಪಪದ ಕಮಲದಲಿ ಬೀಳುವೆವು. ಧನ್ಯರು ಅಹೆವು.
ವಿರಾಟರಾಯ: ಈತನೇ ಧರ್ಮಜನು ದಿಟ. ತಾನೀತನೆ ಪವನಜನು ನಿಶ್ಚಯ. ಈತನೇ ಫಲುಗುಣನು. ಇವರು ಮಾದ್ರೀ ತನುಜರೇ. ದ್ರುಪದ ಸುತೆಯೇ ಈ ತಳೋದರಿ. ಕೌತುಕವಲೇ ಭುವನಜನ ವಿಖ್ಯಾತರು ಎಲ್ಲಿಂದೆಲ್ಲಿ ಮೂಡಿದರು.
(ಎನುತ ಬೆರಗಾದ.)
ಉತ್ತರಕುಮಾರ: ವರುಷವೊಂದು ಅಜ್ಞಾತ ವಾಸವನು ಇರದೆ ಇಲ್ಲಿ ನೂಕಿದರು. ಬಳಕೆಯ ಹೊರೆಯ ಹೆಸರು ಅವು ಬೇರೆ, ನಡವಳಿಯ ಅಂಗವದು ಬೇರೆ. ಮರುಳನಂತಿರೆ ಜಗಕೆ ತೋರನೆ ಪರಮ ತತ್ವಜ್ಞಾನಿ. ನಮ್ಮ ಈ ಅರಸುತನ ಫಲವಾಯ್ತು ನಡೆ.
(ಎಂದನು ಕುಮಾರಕನು. ದರುಶನಕೆ ಮಣಿ ರತುನ ಕನಕವ ತರಿಸಿ, ಮುದದಲಿ ಮುಳುಗಿ,ನಿಜ ಪರಿಕರ ಸಹಿತ ಮೈಯಿಕ್ಕಿದನು… ಕಾಣಿಕೆಯನು ಒಪ್ಪಿಸಿದ.)
ವಿರಾಟರಾಯ: ವರನೃಪಾಲ ತ್ರಾಹಿ ಭುವನೇಶ್ವರ ಪರಿತ್ರಾಯಸ್ವ ಕರುಣಿಸು… ಕರುಣಿಸು.
(ಎಂದು ಮತ್ಸ್ಯ ಭೂಪಾಲ ಅಂಘ್ರಿಗಳ ಹಿಡಿದನು.)
ಅಪರಾಧವನು ಬಗೆದೆನು. ನೀನು ಕರುಣಾಳುಗಳ ಬಲ್ಲಹ. ನಿನ್ನ ಅಂಘ್ರಿಗಳಿಗೆ ಈ ತಲೆ ಬಂಟ. ನೀನು ಇದ ಕಾಯಬೇಕು.
(ಎನುತ ಮಿಗೆ ಭಕುತಿ ಭಾವದಲಿ ನಿಜ ಮಂತ್ರಿಗಳು ಮಕ್ಕಳು ಸಹಿತ ಮಹೀಶರ ಇದಿರಿನಲಿ ಮತ್ಸ್ಯಭೂಪ ಮನ ನಂಬುಗೆಯ ಮೆರೆದನು. ಆ ಸುದೇಷ್ಣೆ ಕುಮಾರಿಯೊಡನೆ ವಿಳಾಸಿನೀಜನ ಸಹಿತ ರಾಣೀವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು, ಆ ಸಕಲ ಪರಿವಾರ ಪುರಜನ ದೇಶಜನ ಹಳ ಹರುಷದಲಿ ಮಹೀಶನಿಗೆ ಮೈಯಿಕ್ಕಿ ಕಾಣಿಕೆಯನು ಇತ್ತು ಕಂಡುದು. ಅವನಿಪತಿ ಮುಗುಳು ನಗೆಯಲಿ ಭೀಮ ಪಾರ್ಥರ ಮೊಗವ ನೋಡಿದನು. ತಮ್ಮಂದಿರು ಕೈಮುಗಿದು ತಲೆವಾಗಿದರು. ಮಹೀಪತಿಗೆ ಕಾಣಿಕೆಯನು ತೆಗೆಸಿದರು. ಆ ಮಂತ್ರಿಗಳನು ಆ ಪರಿವಾರವನು ದೃಗುಯುಗದ ಕರುಣಾರಸದಲಿ ಅನಿಬರ ಹೊರೆದು ಮನ್ನಿಸಿದ. ಶಿರವನು ಎತ್ತಿ ವಿರಾಟ ಭೂಪನ ಕರೆದು ಹತ್ತಿರ ಪೀಠದಲಿ ಕುಳ್ಳಿರಿಸಲು ಕೆಲದಲಿ ಗದ್ದುಗೆಯ ಸರಿದು ಒಡೆಮುರಿಚಿದನು.)
ವಿರಾಟರಾಯ: ಪರಮ ಸುಕೃತವಲಾ, ಧರಾಧೀಶ್ವರನ ದರುಶನವಾಯ್ತು. ಧರೆಯೊಳು ಧನ್ಯರು ಎಮಗೆ ಇನ್ನಾರು ಸರಿ. ದೇಶ ನಿಮ್ಮದು. ನಗರ ಹೆಚ್ಚಿದ ಕೋಶ ನಿಮ್ಮದು. ನನ್ನ ಜೀವ ವಿಳಾಸ ನಿಮ್ಮದು. ಸಲಹಬೇಹುದು ಬಿನ್ನಹದ ಹದನ. ಚಿತ್ತೈಸು , ಈ ಸಮಂಜಸ ದಿವಸದಲಿ ಸಿಂಹಾಸನದಲಿ ಅಭಿಷೇಕವನು ಭೂಮೀಶ ವಿಸ್ತರಿಸುವೆನು.
(ಎಂದನಾ ಭೂಪ. ಎನಲು ಧರ್ಮರಾಯನು ನಗುತ… )
ಧರ್ಮರಾಯ: ಮಹೀಪತಿ ವಿನಯ ಮಧುರ ರಸಾಭಿಷೇಕವನು ಎನಗೆ ಮಾಡಿದೆ. ಧರಿತ್ರಿಯಿದು ಎಮ್ಮದು ಎಂಬ ಈ ನೆನಹು ತಾನು ಸಾಕು. ಪುನರುಕ್ತಾಭಿಷೇಕವದು. ಜನವಿದು ಎಮ್ಮದು. ನೀನು ನಮ್ಮಾತನು. ನಮಗೇಕೆ ಉಪಚಾರ. ಭೀಮಾರ್ಜುನರು ನೊಂದವರು. ಹಗೆಯಿಂದ ಹಳುವವ ಹೊಕ್ಕು ಮನಸಿನ ಕಂದು ಕಸರಿಕೆ ಹೋಗದು. ಆ ದುರ್ಯೋಧನಾದಿಗಳ ಕಳದಲಿ ಕೊಂದು, ಮತ್ತೆ ಗಜಪುರಿಗೆ ಎಂದು ಗಮಿಸುವೆವು ಎಂಬ ತವಕಿಗರು. ಇಂದು ತಾನೇ ಬಲ್ಲರು.
(ಎಂದನು ಧರ್ಮನಂದನನು.)
ಉತ್ತರಕುಮಾರ: (ಅರಸನ ಅಂಘ್ರಿಯೊಳು ಅಂದು ಮಕುಟವ ಚಾಚಿ)
ಬಿನ್ನಹವು ಇಂದು. ನೇಮವ ಕೊಡಿ. ಅರ್ಜುನಗೆ ಕುಮಾರಿಯನು ಈವೆನು.
(ಎಂದಡೆ… )
ಯುಧಿಷ್ಠಿರ: ಏಳು ಏಳು…
(ಎಂದು ನಸುನಗೆಯಿಂದ ಯುಧಿಷ್ಠಿರನು ಪಾರ್ಥನ ನೋಡೆ, ಆತನು ಯುಧಿಷ್ಠಿರಗೆ ಕೈಮುಗಿದು ಮನದ ನಿಶ್ಚಯವನು ಎಂದನು.)
ಅರ್ಜುನ: ಇವಳಲಿ ವರುಷವು ನಾಟ್ಯ ವಿದ್ಯೆಯ ಪರುಟವಿಸಿದೆನು. ಆ ಪ್ರಕಾರ ರಹಸ್ಯ ದೇಶದಲಿ ಈ ತರುಣಿ ತಂದೆಯಂತೆ ಭಜಿಸಿದಳು. ಗುರುತನದ ಗರುವಾಯಿ ಎತ್ತಲು… ಅರಸಿಯೆಂಬುದು ಇದಾವ ಮತವು. ಈ ವರ ಕುಮಾರಿಯನು ಈವಡೆ ಅಭಿಮನ್ಯುವಿಗೆ ಕೊಡಲಿ.
ವಿರಾಟರಾಯ: ಎವಗೆ ನೀವೇನು ಆತನೇನು. ಉತ್ಸವದೊಳು ಆಗಲಿ.
(ಎನೆ ವಿರಾಟನನ್ ಅವನಿಪತಿ ಮನ್ನಿಸಿದನು. ವೀಳೆಯವ ನಗುತ ಇತ್ತನು.)
ಯುಧಿಷ್ಠಿರ: ಎವಗೆ ಪರಮಸ್ವಾಮಿ. ಎಮ್ಮ ಉತ್ಸವದ ನೆಲೆ. ಎಮ್ಮೈವರಸು ಯಾದವ ಶಿರೋಮಣಿ ಕೃಷ್ಣನ ಅಭಿಮತವು ಎಮ್ಮ ಮತ. ಎಮಗೆ ಪೊಡವಿಯೊಡೆತನ. ಕೃಷ್ಣನು ಮಿಗೆ ಕಟ್ಟೊಡೆಯ. ಕೃಷ್ಣನು ಒಡಬಟ್ಟೊಡೆ ವಿವಾಹ ನಿರಂತರಾಯವು. ಚಿಂತೆ ಬೇಡ.
(ಎನಲು… )
ವಿರಾಟರಾಯ: ಒಡಬಡಲಿ ಮೇಣ್ ಇರಲಿ… ಗುರು ನಿಮ್ಮಡಿ ಮುರಾರಿಯ ತೋರಿಸುವಿರಾದೊಡೆ ಕೃತಾರ್ಥನು ತಾನು.
(ಎನುತಮತ್ಸ್ಯನೃಪಹಿಗ್ಗಿದನು. ಅನಂತರ ದ್ವಾರಕಾವತಿಯಲ್ಲಿದ್ದ ಕೃಷ್ಣನನ್ನು ಪಾಂಡವರು ವಿರಾಟನಗರಿಗೆ ಕರೆಸಿಕೊಂಡು, ಮದುವೆಗೆ ಕೃಷ್ಣನ ಒಪ್ಪಿಗೆಯನ್ನು ಪಡೆದು ಪಾಂಡವರು, ಯಾದವರು ಮತ್ತು ವಿರಾಟರಾಯನ ಕಡೆಯವರೆಲ್ಲರೂ ಜತೆಗೂಡಿ ಸಡಗರದಿಂದ ಅಭಿಮನ್ಯು ಮತ್ತು ಉತ್ತರೆಯ ಮದುವೆಯನ್ನು ಮಾಡುತ್ತಾರೆ.)
ಪದ ವಿಂಗಡಣೆ ಮತ್ತು ತಿರುಳು
ಧರಿತ್ರೀ=ಬೂಮಿ; ಪಾಲ=ಪಾಲಿಸುವವನು; ಧರಿತ್ರೀಪಾಲ=ರಾಜ;
ಕೇಳು ಜನಮೇಜಯ ಧರಿತ್ರೀಪಾಲ=ವೈಶಂಪಾಯನ ಮುನಿಯು ವ್ಯಾಸರು ರಚಿಸಿದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಪಾಂಡುವಂಶದ ಅರಸನಾದ ಜನಮೇಜಯನಿಗೆ ಹೇಳತೊಡಗಿದ್ದಾನೆ;
ಚರಿತ=ನಿಯಮ/ನೆರವೇರಿಸಿದ; ಅಜ್ಞಾತವಾಸ=ತಮ್ಮ ನಿಜವಾದ ಗುರುತು ಯಾರಿಗೂ ಗೊತ್ತಾಗದಂತೆ ಜೀವನವನ್ನು ನಡೆಸುವುದು; ಬೀಳ್ಕೊಡು=ಹೋಗಲು ಬಿಡು;
ಚರಿತ ಅಜ್ಞಾತವಾಸವ ಬೀಳುಕೊಟ್ಟರು=ದುರ್‍ಯೋದನನೊಡನೆ ಆಡಿದ ಜೂಜಿನ ನಿಯಮದಂತೆ ಪಾಂಡವರು ಹನ್ನೆರಡು ವರುಶ ವನವಾಸದ ನಂತರ, ಒಂದು ವರುಶ ಅಜ್ನಾತವಾಸವನ್ನು ವಿರಾಟನಗರಿಯಲ್ಲಿ ಸಂಪೂರ್‍ಣವಾಗಿ ಮಾಡಿ ಮುಗಿಸಿದರು;
ಇರುಳು=ರಾತ್ರಿ;
ಬಹಳ ಹರುಷದಲಿ ಇರುಳ ನೂಕಿದರು=ಬಹಳ ಆನಂದದಿಂದ ರಾತ್ರಿಯನ್ನು ಕಳೆದರು;
ಮೇಲಣ=ಮುಂದಿನ; ಅಭ್ಯುದಯ=ಏಳಿಗೆ/ಶ್ರೇಯಸ್ಸು; ಕೈಮೇಳವಿಸು=ನೆರವೇರು/ಈಡೇರು;
ಮೇಲಣ ಅವರ ಅಭ್ಯುದಯವನು ಕೈಮೇಳವಿಸಿ ಕೊಡುವಂತೆ=ಮುಂದಿನ ದಿನಗಳಲ್ಲಿ ಪಾಂಡವರ ಏಳಿಗೆಯನ್ನು ನೆರವೇರಿಸಿಕೊಡುವಂತೆ;
ಮೂಡಣ=ಪೂರ್‍ವ ದಿಕ್ಕಿನ; ಶೈಲ=ಬೆಟ್ಟ; ಮುಖ=ಮಗ್ಗಲು/ಬದಿ; ಶೈಲಮುಖ=ಬೆಟ್ಟದ ಎಡೆ; ಭಾನು=ಸೂರ್‍ಯ; ಮಂಡಲ=ವಲಯ/ದುಂಡಾಗಿರುವುದು; ಸುಳಿ=ಕಾಣಿಸಿಕೊಳ್ಳುವುದು;
ಮೂಡಣ ಶೈಲಮುಖದಲಿ ಭಾನುಮಂಡಲದ ಕೆಂಪು ಸುಳಿದುದು=ಮೂಡಣ ದಿಕ್ಕಿನಲ್ಲಿದ್ದ ಬೆಟ್ಟದೆಡೆಯಿಂದ ಮೂಡುತ್ತಿರುವ ರವಿಯ ಕೆಂಪನೆಯ ಕಿರಣಗಳು ಕಾಣತೊಡಗಿದವು;
ಖುರಪುಟ=ಕುದುರೆಯ ಕಾಲಿನ ಗೊರಸು; ಕೆಂದೂಳಿ=ಕೆಂಪನೆಯ ದೂಳು;
ಏಳು ಕುದುರೆಯ ಖುರಪುಟದ ಕೆಂದೂಳಿಯೋ=ರವಿಯ ತೇರನ್ನೆಳೆಯುತ್ತಿರುವ ಏಳು ಕುದುರೆಗಳ ಗೊರಸಿನಿಂದೆದ್ದ ಕೆಂದೂಳಿಯೋ ಎನ್ನುವಂತೆ ಮೂಡಣ ದಿಕ್ಕಿನ ಗಗನದಲ್ಲಿ ಕೆಂಪನೆಯ ಕಿರಣಗಳು ತುಂಬಿಕೊಂಡಿವೆ. ಸೂರ್‍ಯನ ತೇರನ್ನು ಏಳು ಕುದುರೆಗಳು ಎಳೆಯುತ್ತವೆ ಎಂಬ ಕಲ್ಪನೆಯು ಜನಮನದಲ್ಲಿದೆ;
ತನಿ=ಸವಿಯಾದ; ರಾಗ=ಪ್ರೀತಿ/ಒಲುಮೆ; ತನಿರಾಗರಸ=ಇದೊಂದು ನುಡಿಗಟ್ಟು. ಒಲವು ನಲಿವು ಗೆಲವನ್ನು ಉಂಟುಮಾಡುವ ಸಂಗತಿ ಎಂಬ ರೂಪಕದ ತಿರುಳಿನಲ್ಲಿ ಈ ಬಳಕೆಗೊಂಡಿದೆ; ಉಬ್ಬರ=ಅತಿಶಯ/ಏರಿಕೆ; ಪಸರಿಸು=ಹರಡು/ವ್ಯಾಪಿಸು;
ಕುಂತೀ ಕುಮಾರಕರ ಏಳಿಗೆಯ ತನಿರಾಗರಸ ಉಬ್ಬರಿಸಿ ಪಸರಿಸಿತೊ=ಪಾಂಡವರ ಮುಂದಿನ ಜೀವನದಲ್ಲಿ ಒಲವು ನಲಿವು ಗೆಲವಿನ ಏಳಿಗೆಯು ಅತಿಶಯವಾಗಿ ಹರಡಿಕೊಳ್ಳುವುದನ್ನು ಸೂಚಿಸುತ್ತಿದೆಯೋ ಎನ್ನುವಂತೆ ರವಿಯ ಹೊಂಗಿರಣಗಳ ಕಾಂತಿ ಎಲ್ಲೆಡೆ ಹರಡುತ್ತಿದೆ;
ಹೇಳಲೇನು=ಸೂರ್‍ಯೋದಯದ ಚೆಲುವನ್ನು ಏನೆಂದು ಬಣ್ಣಿಸಲಿ;
ಮಹೇಂದ್ರ=ದೇವೇಂದ್ರ; ವರ=ಉತ್ತಮವಾದ; ದಿಕ್+ಬಾಲಕಿ; ಮಹೇಂದ್ರ ವರ ದಿಕ್ಕು=ಪೂರ್‍ವ ದಿಕ್ಕನ್ನು ‘ಇಂದ್ರನ ದಿಕ್ಕು’ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ; ಬಾಲಕಿ=ಹುಡುಗಿ; ಬೈತಲೆ=ತಲೆಗೂದಲನ್ನು ನೆತ್ತಿಯ ನಡುಬಾಗದಲ್ಲಿ ವಿಂಗಡಿಸಿ ಬಾಚಿದಾಗ, ನಡುವೆ ಕಾಣುವ ಉದ್ದನೆಯ ಗೆರೆ;
ಮಹೇಂದ್ರ ವರ ದಿಗ್ಬಾಲಕಿಯ ಬೈತಲೆಯ ಕುಂಕುಮಜಾಲವೋ ಹೇಳೆನಲು=ಮೂಡಣದ ಸುಂದರ ಬಾಲೆಯ ಬಯ್ತಲೆಯಲ್ಲಿ ಕಂಗೊಳಿಸುತ್ತಿರುವ ದಟ್ಟವಾದ ಕುಂಕುಮವೋ ಎನ್ನುವಂತೆ;
ದಿನಪ=ಸೂರ್‍ಯ/ರವಿ; ಚೂಣಿ=ಮುಂದಿನ ಸಾಲು; ರಂಜಿಸು=ಹೊಳೆ/ಪ್ರಕಾಶಿಸು/ಬೆಳಗು;
ದಿನಪನ ಚೂಣಿ ರಂಜಿಸಿತು=ಉದಯಿಸುತ್ತಿರುವ ಸೂರ್‍ಯನ ಹೊಂಗಿರಣಗಳ ಬೆಳಗು ಕಂಗೊಳಿಸಿತು;
ಮೂಡಣ+ಅದ್ರಿಯೊಳು; ಅದ್ರಿ=ಬೆಟ್ಟ; ಓಲಗ=ದರ್‍ಬಾರು;
ಮೂಡಣಾದ್ರಿಯೊಳು ರವಿ ಓಲಗವ ಇತ್ತನು=ಮೂಡಣದ ಬೆಟ್ಟದಿಂದ ಸೂರ್‍ಯನು ನಿಸರ್‍ಗದಲ್ಲಿ ತನ್ನ ದರ್‍ಬಾರನ್ನುನಡೆಸತೊಡಗಿದನು. ಸೂರ್‍ಯೋದಯ ದಿಂದಾಗಿ ನಿಸರ್‍ಗದಲ್ಲಿ ಅನೇಕ ಬಗೆಯ ಬದಲಾವಣೆಗಳು ಕಂಡುಬರತೊಡಗಿದವು;
ಸರಸಿಜ=ತಾವರೆ; ಸರಸಿ=ಕೊಳ/ಸರೋವರ; ಜ=ಹುಟ್ಟಿದ್ದು; ಪರಿಮಳ=ಸುವಾಸನೆ; ಬರವಕೊಟ್ಟನು=ಆಹ್ವಾನಿಸಿದನು;
ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು=ತನ್ನ ಹೊಂಗಿರಣಗಳ ತಾಕುವಿಕೆಯಿಂದ ಅರಳತೊಡಗಿದ ತಾವರೆಯ ಹೂವಿನ ಸುವಾಸನೆಯ ಬಂಡನ್ನು ಸವಿಯಲು ತುಂಬಿಗೆ ಆಹ್ವಾನವನ್ನು ನೀಡಿದನು;
ಚಂದ್ರಕಾಂತ=ಚಂದ್ರನ ಬೆಳುದಿಂಗಳ ಕಾಂತಿಯಂತೆ ಹೊಳೆಯುವ ಒಂದು ಬಗೆಯ ಕಲ್ಲು; ಇದು ಇರುವ ಕಡೆಯಲ್ಲಿ ಪರಿಸರ ತಂಪಾಗಿರುತ್ತದೆ; ಬೆರಗನು+ಇತ್ತನು; ಬೆರಗು=ತಲ್ಲಣ/ತಳಮಳ;
ಚಂದ್ರಕಾಂತಕೆ ಬೆರಗನಿತ್ತನು=ಸೂರ್‍ಯನ ಹೊಂಗಿರಣಗಳ ಬಿಸಿಯಿಂದ ತಂಪಾಗಿದ್ದ ಚಂದ್ರಕಾಂತ ಶಿಲೆಯ ತಂಪು ಅಡಗಿತು;
ಜಕ್ಕವಕ್ಕಿ=ಇರುಳೆಲ್ಲವೂ ಬೇರೆಬೇರೆಯಾಗಿದ್ದು ಸೂರ್‍ಯೋದಯವಾಗುತ್ತಿದ್ದಂತೆಯೇ ಜತೆಗೂಡುವ ಜೋಡಿಹಕ್ಕಿಗಳು;
ಜಕ್ಕವಕ್ಕಿಯ ಸೆರೆಯ ಬಿಡಿಸಿದನು=ಒಂದನ್ನೊಂದು ಅಗಲಿದ್ದ ಜಕ್ಕವಕ್ಕಿಗಳನ್ನು ಮತ್ತೆ ಜತೆಗೂಡಿಸಿದನು;
ನೈದಿಲೆ=ಕಡು ನೀಲಿ ಬಣ್ಣದ ತಾವರೆಯ ಹೂವು. ಇದು ರಾತ್ರಿಯ ವೇಳೆ ಅರಳುತ್ತದೆ. ಹಗಲಿನಲ್ಲಿ ಮುದುಡಿಕೊಳ್ಳುತ್ತದೆ; ನೈದಿಲ ಸಿರಿ=ಕತ್ತಲಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅರಳಿದ್ದ ನೀಲಿ ತಾವರೆಹೂಗಳ ಗುಂಪು; ಸೂರೆ=ಲೂಟಿ; ಕೆರಳು=ಕೋಪಗೊಂಡು;
ಕೆರಳಿ ನೈದಿಲ ಸಿರಿಯ ಸೂರೆಯ ತರಿಸಿದನು=ಸೂರ್‍ಯನು ತನ್ನ ಹೊಂಗಿರಣಗಳ ಬಿಸಿಯಿಂದ ನೈದಿಲೆಯ ಹೂವುಗಳೆಲ್ಲವೂ ಮುದುಡಿಕೊಳ್ಳುವಂತೆ ಮಾಡಿದನು;
ರಿಪು=ಹಗೆ/ಶತ್ರು; ರಿಪುರಾಯ ರಾಜ್ಯ=ಹಗಲಿನ ರಾಜ್ಯಕ್ಕೆ ಹಗೆಯಾಗಿರುವುದು ಕತ್ತಲರಾಜ್ಯ; ಒರಸು=ನಾಶಗೊಳಿಸು;
ರಿಪುರಾಯ ರಾಜ್ಯವನು ಒರಸಿದನು=ಕತ್ತಲೆಯನ್ನು ಸಂಪೂರ್‍ಣವಾಗಿ ತೊಲಗಿಸಿ ಬೆಳಕನ್ನು ಚೆಲ್ಲಿದನು;
ಹರ=ಶಿವ; ಶ್ರೀಕಾಂತ=ವಿಶ್ಣು; ಉಪ್ಪವಡಿಸು=ನಿದ್ರೆಯಿಂದ ಏಳು;
“ಹರಹರ… ಶ್ರೀಕಾಂತ” ಎನುತ ಐವರು ಕುಮಾರಕರು ಉಪ್ಪವಡಿಸಿದರು=ಅಯ್ದು ಮಂದಿ ಪಾಂಡವರು ಅಂದು ಬೆಳಗಿನ ಜಾವ ನಿದ್ರೆಯಿಂದ ಎಚ್ಚರಗೊಂಡು “ಹರ ಹರ… ಶ್ರೀಕಾಂತ” ಎಂದು ದೇವರ ನಾಮಸ್ಮರಣೆ ಮಾಡುತ್ತ ಮೇಲೆದ್ದರು;
ಅರಿ=ಹಗೆ; ವಿದಾರಕ=ಸೀಳುಮಾಡುವ/ನಾಶಮಾಡುವ; ಅರಿವಿದಾರ=ಹಗೆಯನ್ನು ಸೀಳುವವನು; ಮಾಂಗಲ್ಯ=ಮಂಗಳಕರವಾದುದು; ಮಜ್ಜನ=ಸ್ನಾನ;
ಅರಿವಿದಾರರು ಮಾಂಗಲ್ಯ ಮಜ್ಜನವ ಮಾಡಿದರು=ಹಗೆಗಳನ್ನು ನಾಶಪಡಿಸುವ ಶಕ್ತಿಯುಳ್ಳ ಪಾಂಡವರು ಮಂಗಳಕರವಾದ ಸ್ನಾನವನ್ನು ಮಾಡಿದರು;
ವರ=ಉತ್ತಮ; ವಿಭೂಷಣ=ಒಡವೆ; ಗಂಧ=ಚಂದನದ ಕೊರಡನ್ನು ನೀರಿನಲ್ಲಿ ಅರೆದು ಮಾಡಿದ ವಸ್ತು; ಮಾಲ್ಯ=ಹೂವಿನ ಹಾರ; ಅಂಬರ=ಬಟ್ಟೆ; ಪರಿವೃತ=ಆವರಿಸಿದ/ಸುತ್ತುವರಿದ;
ವರ ವಿಭೂಷಣ ಗಂಧ ಮಾಲ್ಯ ಅಂಬರದಿ ಪರವೃತರಾದರು=ಉತ್ತಮವಾದ ಬಟ್ಟೆಗಳನ್ನು ಉಟ್ಟು, ಒಡವೆಗಳನ್ನು ತೊಟ್ಟು, ಹೂಮಾಲೆಯನ್ನು ಹಾಕಿಕೊಂಡು, ಗಂದವನ್ನು ಲೇಪಿಸಿಕೊಂಡು ಸಿಂಗಾರಗೊಂಡರು;
ಅವನೀಸುರ=ಬೂಮಿಯ ಮೇಲೆ ಇರುವ ದೇವತೆ/ಬ್ರಾಹ್ಮಣ; ಧೇನು=ಹಸು; ಮಣಿ=ನವ ರತ್ನಗಳು; ಕನಕ+ಆದಿ; ಕನಕ=ಚಿನ್ನ; ಆದಿ=ಮೊದಲು; ಅವನೀ=ಬೂಮಿ; ಸುರ=ದೇವತೆ;
ಅವನೀಸುರರಿಗೆ ಧೇನು ಮಣಿ ಕನಕಾದಿ ವಸ್ತುಗಳ ಇತ್ತರು=ಬ್ರಾಹ್ಮಣರಿಗೆ ಹಸು, ನವರತ್ನ, ಚಿನ್ನ ಮೊದಲುಗೊಂಡು ಅನೇಕ ಬಗೆಯ ವಸ್ತುಗಳನ್ನು ದಾನವಾಗಿ ನೀಡಿದರು;
ತಮ=ಕತ್ತಲು; ದ್ಯುಮಣಿ=ಸೂರ್‍ಯ;
ತಮದ ಗಂಟಲನು ಒಡೆದ ಹರುಷ ದ್ಯುಮಣಿಮಂಡಲದಂತೆ=ಕತ್ತಲಿನ ಗಂಟಲನ್ನು ಸೀಳಿದ ಹೊಂಗಿರಣದ ಸೂರ್‍ಯಮಂಡಲದಂತೆ;
ಜೀವಭ್ರಮೆ=ಮಾನವ ದೇಹ ಮತ್ತು ಆತ್ಮದ ಬಗೆಗಿರುವ ತಪ್ಪು ಕಲ್ಪನೆಗಳು; ಕವಚ=ಹೊದಿಕೆ; ಕಳೆದು=ತೆಗೆದುಹಾಕಿ; ಹೊಳೆಹೊಳೆವ=ಅತ್ಯಂತ ಪ್ರಕಾಶಮಾನವಾದ; ಆತ್ಮ=ಚೇತನ; ಅಂದ=ರೀತಿ;
ಜೀವಭ್ರಮೆಯ ಕವಚವ ಕಳೆದು ಹೊಳೆ ಹೊಳೆವ ಆತ್ಮನ ಅಂದದಲಿ=ಅಳಿಯುವ ದೇಹದ ಬಗೆಗಿನ ತಪ್ಪುಕಲ್ಪನೆಯನ್ನು ಹೋಗಲಾಡಿಸಿ, ಎಂದೆಂದಿಗೂ ಪ್ರಕಾಶಮಾನವಾಗಿ ಬೆಳಗುತ್ತ ಚಿರವಾಗಿ ಉಳಿಯುವ ಆತ್ಮದ ರೀತಿಯಲ್ಲಿ;
ವಿಮಲ=ಪವಿತ್ರವಾದ/ಪರಿಶುದ್ದವಾದ; ಕ್ಷತ್ರ=ಕ್ಷತ್ರಿಯ ತೇಜಸ್ಸು; ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕು ವರ್‍ಣಗಳು; ರಶ್ಮಿ=ಕಿರಣ; ಕ್ಷತ್ರ ರಶ್ಮಿ=ರಾಜತೇಜಸ್ಸು; ಅಮರು=ಕೂಡಿಸು; ದೆಸೆ=ದಿಕ್ಕು;
ವಿಮಲ ಬಹಳ ಕ್ಷತ್ರ ರಶ್ಮಿಗಳು ಅಮರಿ ದೆಸೆಗಳ ಬೆಳಗೆ=ಪರಿಶುದ್ದವಾದ ಮತ್ತು ಅತಿಶಯವಾದ ರಾಜ ತೇಜಸ್ಸು ಕೂಡಿಕೊಂಡು ದಿಕ್ಕುಗಳನ್ನು ಬೆಳಗುತ್ತಿರಲು;
ರಾಜ+ಉತ್ತಮ; ಎಸೆ=ಶೋಬಿಸು/ಕಂಗೊಳಿಸು;
ರಾಜೋತ್ತಮ ಯುಧಿಷ್ಠಿರ ದೇವನು ರಾಜ ತೇಜದಲಿ ಎಸೆದನು=ರಾಜರಲ್ಲಿಯೇ ಉತ್ತಮನಾಗಿರುವ ದರ್‍ಮರಾಯನು ರಾಜತೇಜಸ್ಸಿನಿಂದ ಕಂಗೊಳಿಸುತ್ತಿದ್ದನು;
ಪರಮ=ಅತ್ಯುತ್ತಮವಾದ; ಕ್ರತು=ಯಾಗ; ವರ=ಉತ್ತಮವಾದುದು; ಮಜ್ಜನ=ಸ್ನಾನ; ಅವಭೃತ ಮಜ್ಜನ=ಯಾಗದ ಆಚರಣೆಯ ಮುಕ್ತಾಯದ ಹಂತದಲ್ಲಿ ಮಾಡುವ ಸ್ನಾನ; ವಿಸ್ತರಿಸಿ=ಸಜ್ಜುಗೊಳಿಸಿ/ಅಣಿಮಾಡಿ;
ಪರಮ ಸತ್ಯವ್ರತ ಮಹಾಕ್ರತು ವರದಲಿ ಅವಭೃತ ಮಜ್ಜನವ ವಿಸ್ತರಿಸಿ ಭೀಮಾದಿಗಳು ಸಹಿತ ವಿರಾಟನ ಅರಮನೆಗೆ ಅರಸ ಬಂದನು=ಪರಮ ಸತ್ಯವ್ರತವೆಂಬ ಹೆಸರಿನ ಮಹಾಯಾಗವನ್ನು ಮಾಡಿ, ಯಾಗದ ಕೊನೆಯಲ್ಲಿ ಸ್ನಾನವನ್ನು ಮಾಡಿಕೊಂಡು ಬೀಮ ಮತ್ತು ಇತರ ಸಹೋದರರು ಹಾಗೂ ದ್ರೌಪದಿಯ ಜತೆಗೂಡಿ ದರ್‍ಮರಾಯನು ವಿರಾಟರಾಯನ ಅರಮನೆಯ ರಾಜಸಬಾಂಗಣಕ್ಕೆ ಬಂದನು;
ಮಣಿ=ನವರತ್ನಗಳು; ಖಚಿತ=ಕೂಡಿಸಿದ; ಕೇಸರಿ=ಸಿಂಹ; ಪೀಠ=ಗದ್ದುಗೆ; ಕೇಸರಿಯ ಪೀಠ=ಸಿಂಹಾಸನ; ಅಡರು=ಏರು/ಮೇಲಕ್ಕೆ ಹತ್ತು;
ಮಣಿಖಚಿತ ಕೇಸರಿಯ ಪೀಠವನು ಅಡರಿದನು=ನವರತ್ನಗಳನ್ನು ಜೋಡಿಸಿ ಸಿದ್ದಪಡಿಸಿರುವ ಸಿಂಹಾಸನವನ್ನೇರಿ ಕುಳಿತುಕೊಂಡನು;
ಪರುಟವಿಸು=ಆವರಿಸು/ಸುತ್ತುವರಿದು; ಚರಣ=ಪಾದ;
ಒಡಹುಟ್ಟಿದರು ಪರುಟವಿಸಿ ನಿಜ ಚರಣ ಸೇವೆಯಲಿ ಎಸೆದರು=ಒಡವುಟ್ಟಿದ ನಾಲ್ಕುಮಂದಿ ತಮ್ಮಂದಿರು ದರ್‍ಮರಾಯನನ್ನುಸುತ್ತುವರಿದು, ಅವನ ಪಾದಸೇವೆಯಲ್ಲಿ ತೊಡಗಿದರು;
ಕಂಚುಕಿ=ರಾಣಿವಾಸದ ಉಸ್ತುವಾರಿಯ ಅದಿಕಾರಿ; ಐತಂದು=ಆಗಮಿಸಿ; ಈಕ್ಷಿಸು=ನೋಡು;
ಕಂಚುಕಿಗಳು ಐತಂದು ಇವರನು ಈಕ್ಷಿಸಿ=ರಾಜಸಬಾಂಗಣಕ್ಕೆ ಬಂದ ಕಂಚುಕಿಗಳು ಸಿಂಹಾಸನವನ್ನು ಆಕ್ರಮಿಸಿಕೊಂಡಿರವ ಇವರನ್ನು ನೋಡಿ;
ಅವನಿಪ=ರಾಜ; ಸಗರ್ವಿತ=ಮಹಾಸೊಕ್ಕಿನವನು; ಆರು=ಯಾರು;
ಅವನಿಪನ ಸಿಂಹಾಸನವನು ಏರುವ ಸಗರ್ವಿತರು ಆರು=ವಿರಾಟರಾಯನ ಸಿಂಹಾಸನವನ್ನೇ ಏರಿಕುಳಿತಿರುವ ಮತ್ತು ಸುತ್ತುವರಿದಿರುವ ಮಹಾಸೊಕ್ಕಿನವರಾದ ಇವರು ಯಾರು;
ಎವೆ=ಕಣ್ಣಿನ ರೆಪ್ಪೆ; ಉರಿ=ಸುಡು/ಜ್ವಲಿಸು; ಹಾಯ್=ಸಂಕಟ ಉಂಟಾದಾಗ ಬಾಯಿಂದ ಹೊರಹೊಮ್ಮುವ ಉದ್ಗಾರದ ದನಿ;
ನೋಡಿದಡೆ ಎವೆಗಳು ಉರಿವುದು ಹಾಯ್ ಎನುತ=ಇವರನ್ನು ನೋಡುತ್ತಿದ್ದರೆ ನಮ್ಮ ಕಣ್ಣಿನ ರೆಪ್ಪೆಗಳೇ ಸುಟ್ಟುಹೋಗುತ್ತಿವೆ… ಹಾಯ್ ಎನ್ನುತ್ತ;
ಕ್ಷಾತ=ಕ್ಷತ್ರಿಯ; ಕ್ಷಾತ್ರತೇಜ=ರಾಜತೇಜಸ್ಸು; ಅವಗಡಿಸು=ವಿರೋದಿಸು;
ಕ್ಷಾತ್ರ ತೇಜವನು ಅವಗಡಿಸಲು ಅಂಜಿದರು=ಕ್ಶತ್ರಿಯ ತೇಜೋಬಲದಿಂದ ಕೂಡಿರುವ ಅವರನ್ನು ವಿರೋದಿಸಲು ಹೆದರಿದರು;
ಅವದಿರು=ಅವರು/ಕಂಚುಕಿಗಳು; ಹರಿತಂದು=ಓಡೋಡಿ ಬಂದು; ಎಬ್ಬಿಸಿ=ನಿದ್ರೆಯಲ್ಲಿದ್ದ ರಾಜನನ್ನು ಎಚ್ಚರಗೊಳಿಸಿ; ಮತ್ಸ್ಯಭೂಪತಿ=ಮತ್ಸ್ಯವೆಂಬ ಹೆಸರಿನ ದೇಶದ ರಾಜ ವಿರಾಟರಾಯ; ಬಿನ್ನವಿಸು=ಅರಿಕೆ ಮಾಡು/ತಿಳಿಸು;
ಅವದಿರು ಹರಿತಂದು ಎಬ್ಬಿಸಿ ಮತ್ಸ್ಯಭೂಪತಿಗೆ ಬಿನ್ನವಿಸಿದರು=ಕಂಚುಕಿಗಳು ರಾಜಸಬಾಂಗಣದಿಂದ ಓಡೋಡಿ ಬಂದು, ನಿದ್ರೆಯಲ್ಲಿದ್ದ ವಿರಾಟರಾಯನ್ನು ಎಬ್ಬಿಸಿ, ಅಲ್ಲಿ ತಾವು ಕಂಡ ನೋಟವನ್ನು ಅರಿಕೆ ಮಾಡಿಕೊಂಡರು;
ಜೀಯ=ಒಡೆಯ/ಯಜಮಾನ; ದಿವಿಜ=ದೇವತೆ; ರಾಯ=ರಾಜ; ದಿವಿಜರಾಯ=ದೇವೇಂದ್ರ; ಮೇಣ್=ಇಲ್ಲವೇ; ನರ=ಮಾನವ;
ಜೀಯ, ಸಿಂಹಾಸನಕೆ ದಿವಿಜರ ರಾಯನೋ… ಶಂಕರನೊ ಮೇಣ್ ನಾರಾಯಣನೊ… ನರರಲ್ಲ=ಒಡೆಯ, ನಿನ್ನ ಸಿಂಹಾಸನದ ಮೇಲೆ ಯಾರೋ ಬಂದು ಕುಳಿತಿದ್ದಾನೆ. ಅವನು ದೇವೇಂದ್ರನೋ… ಶಂಕರನೊ ಇಲ್ಲವೇ ನಾರಾಯಣನೋ ಹೇಳಲಾಗದು. ಅಂತು ಸಿಂಹಾಸನವನ್ನೇರಿ ಕುಳಿತಿರುವವನು ನರನಲ್ಲ;
ದೇವರು ಬಂದು ನೋಡುವುದು=ಅಲ್ಲಿಗೆ ಬಂದು ನೀವೇ ನೋಡಿರಿ;
ಕಾಯ್=ಕಾಪಾಡು; ಅಸದಳ=ಅಸಾದ್ಯ/ಆಗುವುದಿಲ್ಲ;
ಎಮಗೆ ಕಾಯಲು ಅಸದಳವು=ಸಿಂಹಾಸನದಲ್ಲಿ ಕುಳಿತಿರುವವನನ್ನು ಹೊರಹಾಕಿ, ಗದ್ದುಗೆಯನ್ನು ಕಾಪಾಡಿಕೊಳ್ಳಲು ನಮ್ಮಿಂದ ಆಗದು;
ನಿರ್ದಾಯ=ನಿಶ್ಚಯ/ನಿಜ; ನೆಲೆಗೊಳ್ಳು=ತಳವೂರು/ಬಂದು ನೆಲಸು; ನಿರ್ಜರ=ದೇವತೆ; ನಿರ್ಜರರಾಯ=ದೇವತೆಗಳ ಒಡೆಯ; ಆರು=ಯಾರು;
ನಿರ್ದಾಯದಲಿ ನೆಲೆಗೊಂಡ ನಿರ್ಜರರಾಯನು ಆರುಎಂದೆನುತಲು ಆಗ ವಿರಾಟ ಚಿಂತಿಸಿದ=ನಿಶ್ಚಯದ ಮನದಿಂದ ನನ್ನ ಸಿಂಹಾಸನವನ್ನೇರಿ ಕುಳಿತಿರುವ ದೇವತೆಗಳ ಒಡೆಯ ಯಾರಿರಬಹುದು ಎಂದುಕೊಳ್ಳುತ್ತ, ಆಗ ವಿರಾಟರಾಜನು ಚಿಂತೆಗೊಳಗಾದನು;
ಅಖಿಲ=ಎಲ್ಲ/ಸಮಸ್ತ; ಪ್ರಧಾನ=ಮಂತ್ರಿ; ಓಲಗಶಾಲೆ=ರಾಜಸಬಾಂಗಣ; ನೃಪತಿ=ರಾಜ; ಐತರು=ಆಗಮಿಸು;
ಉತ್ತರನನು ಅಖಿಲ ಮಹಾ ಪ್ರಧಾನರನು ಪುರೋಹಿತನನು ಕರೆಸಿಕೊಂಡು ಅರಮನೆಯ ಹೊರವಂಟು ಓಲಗಶಾಲೆಗೆ ನೃಪತಿ ಐತರುತ ದೂರದಲಿ=ವಿರಾಟರಾಯನು ಉತ್ತರಕುಮಾರನನ್ನು, ತನ್ನೆಲ್ಲಾ ಮಹಾಮಂತ್ರಿಗಳನ್ನು ಮತ್ತು ಪುರೋಹಿತನನ್ನು ಕರೆಸಿಕೊಂಡು ಅವರೆಲ್ಲರ ಜತೆಗೂಡಿ ತನ್ನ ಅರಮನೆಯಿಂದ ಓಲಗಶಾಲೆಯ ಒಳಕ್ಕೆ ಬರುತ್ತಿದ್ದಂತೆಯೇ ದೂರದಲ್ಲಿ;
ಕಿರಣ=ರಶ್ಮಿ/ಬೆಳಕು; ಸೂಸು=ಹರಡು; ಲಹರಿ=ಅಲೆ/ತರಂಗ;
ಚಂದ್ರ ಬಿಂಬದ ಕಿರಣ ಕರಗಿ ಸೂಸಿದ ಲಹರಿಗಳು ಎನಲು=ಚಂದ್ರಬಿಂಬದ ಬೆಳುದಿಂಗಳ ಕಿರಣಗಳು ಕರಗಿ ಹರಡಿಕೊಂಡಿರುವ ಬೆಳಕಿನ ಅಲೆಗಳೋ ಎನ್ನುವಂತೆ; ಆಭರಣ=ಒಡವೆ; ಮುಕ್ತ=ಎಸೆದ/ತೂರಿದ; ಪ್ರಭೆ=ಕಾಂತಿ/ಬೆಳಕು; ಮುಕ್ತಪ್ರಭೆ=ಎಲ್ಲೆಡೆ ಹರಡಿಕೊಂಡಿರುವ ಬೆಳಕು;
ವಿವಿಧ ಆಭರಣ ಮುಕ್ತ ಪ್ರಭೆಯ ನೃಪತಿ ಕಂಡನು=ವಿರಾಟರಾಯನು ಸಿಂಹಾಸನವಿರುವ ಎಡೆಯಲ್ಲಿ ಬಹುಬಗೆಯ ಒಡವೆಗಳ ಕಾಂತಿಯ ಬೆಳಕು ಹರಡಿಕೊಂಡಿರುವುದನ್ನು ಕಂಡನು;
ಹರ=ಶಿವ; ಸ್ಫುರಿತ=ಹೊಳೆಯುವ; ಈಶಾನ=ಶಿವನ ಪಂಚಮುಕಗಳಲ್ಲಿ ಒಂದು; ಚತುಷ್ಟಯ=ನಾಲ್ಕು ಮಂದಿ;
ಹರನ ನಾಲುಕು ಮುಖದ ಮಧ್ಯ ಸ್ಫುರಿತದ ಈಶಾನದವೊಲು ಆ ಸೋದರ ಚತುಷ್ಟಯ ಮಧ್ಯದಲಿ ಯುಧಿಷ್ಠಿರನ ಕಂಡನು=ಪಂಚಮುಕವುಳ್ಳ ಶಿವನಲ್ಲಿ ಅತ್ತ ಎರಡು ಮುಕ… ಇತ್ತ ಎರಡ ಮುಕದ ನಡುವೆ ಹೊಳೆಯುತ್ತಿರುವ ಈಶಾನದಂತೆ ನಾಲ್ಕು ಮಂದಿ ತಮ್ಮಂದಿರ ನಡುವೆ ಸಿಂಹಾಸನದ ಮೇಲೆ ಕಂಗೊಳಿಸುತ್ತಿರುವ ದರ್‍ಮರಾಯನನ್ನುವಿರಾಟರಾಯನು ಕಂಡನು;
ವಾಮ=ಎಡಗಡೆ; ಅರಸಿ=ಸೈರಂದ್ರಿ; ರಶ್ಮಿ=ಕಿರಣ; ಹೊದರು=ಸಮೂಹ; ಹೊರಳಿ=ಹೆಚ್ಚಳ;
ವಾಮದಲಿ ಅರಸಿಯನು ವಿವಿಧ ಆಭರಣ ಮಣಿ ರಶ್ಮಿಗಳ ಹೊದರಿನ ಹೊರಳಿಯಲಿ ಕಂಡನು=ದರ್‍ಮರಾಯನ ಎಡಬಾಗದಲ್ಲಿ ಬಹುಬಗೆಯ ಒಡವೆಗಳಲ್ಲಿನ ನವರತ್ನಗಳ ಕಾಂತಿಯ ಹೆಚ್ಚಳದಿಂದ ತೊಳಗಿಬೆಳಗುತ್ತಿರುವ ಸೈರಂದ್ರಿಯನ್ನು ಕಂಡನು;
ಕಣ್ಣು+ಆಲಿ; ಕಣ್ಣಾಲಿ=ಕಣ್ಣುಗುಡ್ಡೆಗಳು; ಕೋರೈಸು=ಅತಿಯಾದ ಪ್ರಕಾಶದಿಂದ ಕಣ್ಣನ್ನು ಕುಕ್ಕುವುದು;
ನಿಮಿಷದಲಿ ಕಣ್ಣಾಲಿ ಕೋರೈಸಿದವು=ನೋಡನೋಡುತ್ತಿದ್ದಂತೆಯೇ ಒಂದು ಗಳಿಗೆಯಲ್ಲಿಯೇ ವಿರಾಟರಾಯನ ಕಣ್ಣುಗಳನ್ನು ಕುಕ್ಕುವಂತೆ ಸಿಂಹಾಸನದ ಎಡೆಯಲ್ಲಿನ ಪ್ರಕಾಶಮಾನದ ಬೆಳಕು ಕಂಗೊಳಿಸಿದವು;
ಮೇಳ=ಸ್ಪರ್‍ದೆ/ಸೆಣೆಸಾಟ; ಫಡ=ಬಿಡು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ಉದ್ಗಾರ;
ಮೇಳವೇ ಫಡ=ಇವರೊಡನೆ ನನಗೆ ಸ್ಪರ್‍ದೆಯೇ… ಬಿಡು… ಬಿಡು;
ಕಾಲಿಡು=ಪ್ರವೇಶಿಸು/ಉಂಟಾಗು; ತೆರಹು+ಇಲ್ಲ; ತೆರಹು=ಅವಕಾಶ;
ಮನದ ಮತ್ಸರ ಕಾಲಿಡಲು ತೆರಹಿಲ್ಲ=ಇವರನ್ನು ನೋಡುತ್ತಿದ್ದರೆ ನನ್ನ ಮನದಲ್ಲಿ ಹೊಟ್ಟೆಕಿಚ್ಚು ಉಂಟಾಗುತ್ತಿಲ್ಲ;
ನಿರ್ಜರ=ದೇವತೆ; ಮಂಡಲೇಶ್ವರ=ಒಂದು ಪ್ರಾಂತ್ಯದ ಒಡೆಯರು;
ಮನುಜರ ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು=ಮಾನವರನ್ನೇ ಹೋಲುತ್ತಿರುವ ಈ ಮಂಡಲೇಶ್ವರರು ನಾಟಕದ ದೇವತೆಗಳಂತೆ ಕಂಡುಬರುತ್ತಿದ್ದಾರೆ;
ಆಲಿ=ಕಣ್ಣು; ಮೇಲೆ+ಇಕ್ಕಲು+ಅಮ್ಮವು; ಇಕ್ಕು=ಇಡು; ಅಮ್ಮವು=ಆಗುತ್ತಿಲ್ಲ;
ಆಲಿಗಳು ಮೇಲಿಕ್ಕಲಮ್ಮವು=ತೇಜಸ್ಸಿನಿಂದ ಬೆಳಗುತ್ತಿರುವ ಅವರನ್ನು ಕಣ್ಣುಗಳಿಂದ ನೋಡಲಾಗುತ್ತಿಲ್ಲ;
ಶೂಲಪಾಣಿ=ಶಿವ; ಚೂಳಿ=ಮುಂಬಾಗ/ಮುಂದಿನ ಸಾಲು;
ಶೂಲಪಾಣಿಯ ಪರಮ ತೇಜದ ಚೂಳಿಯೋ ಶಿವ ಶಿವ… ಎನುತ್ತ ವಿರಾಟ ಬೆರಗಾದ=ಶಿವನ ಪರಮ ತೇಜಸ್ಸಿನ ಮುಂಬೆಳಕೋ ಎನ್ನುವಂತೆ ಕಂಗೊಳಿಸುತ್ತಿದ್ದಾರೆ… ಶಿವ ಶಿವ ಎನ್ನುತ್ತ ವಿರಾಟರಾಯನು ಬೆರಗಾದನು;
ಸುಳಿವು=ಗುರುತು; ಮೈಸುಳಿವು=ದೇಹದ ಆಕಾರ/ಗುರುತು;
ವಲಲ… ಕಂಕ… ಬೃಹನ್ನಳೆಯ ಮೈಸುಳಿವ ಹೋಲುವರು=ಅರಮನೆಯಲ್ಲಿ ಬಾಣಸಿಗನಾಗಿದ್ದ ವಲಲನ ರೂಪವನ್ನು, ವಿರಾಟರಾಯನಿಗೆ ಸಹಾಯಕನಾಗಿದ್ದ ಕಂಕಬಟ್ಟನ ರೂಪವನ್ನು, ರಾಣಿವಾಸದಲ್ಲಿ ನಾಟ್ಯವಿದ್ಯೆಯನ್ನು ಹೇಳಿಕೊಡುತ್ತಿದ್ದ ಬೃಹನ್ನಳೆಯ ದೇಹದ ರೂಪವನ್ನು ಇವರಲ್ಲಿ ಕೆಲವರು ಹೋಲುತ್ತಿದ್ದಾರೆ;
ಇದು+ಎತ್ತಣ; ಎತ್ತಣ=ಯಾವ ಕಡೆಯ;
ಇದೆತ್ತಣ ನರರು ತೆಗೆ=ಇವರು ಯಾವ ರೀತಿಯಿಂದಲೂ ಮಾನವರಂತೆ ಕಾಣುತ್ತಿಲ್ಲ;
ಸುರಲೋಕ=ದೇವಲೋಕ; ಅರಿದು=ಆಗುತ್ತಿಲ್ಲ; ತಳವೆಳಗಾಗು=ಅಚ್ಚರಿಗೊಳ್ಳು/ವಿಸ್ಮಯಪಡು;
ಸುರಲೋಕ ಪಾಲಕರು=ದೇವಲೋಕದ ಒಡೆಯರು;
ಎಮಗೆ ತಿಳಿಯಲು ಅರಿದು ಎಂದು ತಳವೆಳಗುಗೊಳುತಿರಲು=ನಮಗೆ ಇವರು ಯಾರೆಂಬುದನ್ನು ತಿಳಿಯಲಾಗುತ್ತಿಲ್ಲ ಎಂದು ಅಚ್ಚರಿಗೊಳ್ಳುತ್ತಿರಲು;
ಉತ್ತರ ಮಂದಿಯ ಕೆಲಕೆ ನೂಕಿಯೆ ತಂದೆಗೆ ನಗುತ ಕೈಮುಗಿದ=ಗುಂಪಿನ ಮುಂದಕ್ಕೆ ಬಂದು ಕೆಲವರನ್ನು ಪಕ್ಕಕ್ಕೆ ನೂಕಿ, ತಂದೆಯನ್ನು ನೋಡಿ ನಗುತ್ತ ಕಯ್ ಮುಗಿದು ಮಾತನಾಡತೊಡಗಿದ;
ತಾತ=ಅಪ್ಪ; ಬಿನ್ನಹ=ಅರಿಕೆ;
ತಾತ ಬಿನ್ನಹ=ಅಪ್ಪ, ಈಗ ನಿಮ್ಮಲ್ಲಿ ಒಂದು ಸಂಗತಿಯನ್ನು ಅರಿಕೆಮಾಡಿಕೊಳ್ಳುತ್ತೇನೆ. ದರ್‍ಮರಾಯನು ಕುಳಿತಿದ್ದ ಸಿಂಹಾಸನದ ಅಕ್ಕಪಕ್ಕದಲ್ಲಿದ್ದವರನ್ನು ಉತ್ತರನು ವಿರಾಟರಾಯನಿಗೆ ತೋರಿಸುತ್ತ, ಅವರ ಬಗೆಗಿನ ಮಾಹಿತಿಯನ್ನು ನೀಡತೊಡಗುತ್ತಾನೆ;
ವ್ರಾತ=ಸಮೂಹ/ಗುಂಪು; ವೈರಿವ್ರಾತ=ಶತ್ರುಸೇನಾಪಡೆ;
ಈ ತೋರ್ಪಾತನು ನಿನ್ನೆ ವೈರಿವ್ರಾತವನು ಗೆಲಿದಾತನು=ಇಲ್ಲಿ ಕಾಣುತ್ತಿರುವವನು ನಿನ್ನೆಯ ಕಾಳೆಗದಲ್ಲಿ ದುರ್‍ಯೋದನನ ಚತುರಂಗಬಲವನ್ನು ಗೆದ್ದವನು;
ಮೆರೆ=ಎದ್ದುತೋರು/ಶೋಬಿಸು; ಕೀಚಕ+ಅಂತಕ; ಅಂತಕ=ಯಮ; ಕೀಚಕಾಂತಕ=ಕೀಚಕನನ್ನು ಕೊಂದವನು;
ಈತನ ಮುಂದೆ ಮೆರೆವವ ಕೀಚಕಾಂತಕನು=ಈತನ ಮುಂದೆ ಎದ್ದುಕಾಣುತ್ತಿರುವವನು ಕೀಚಕನನ್ನು ಕೊಂದವನು;
ಈತ ನಕುಲನು=ಇವನು ನಕುಲ;
ವಾಮ=ಎಡಗಡೆ; ಸಹದೇವ+ಅಂಕನು; ಅಂಕ=ಹೆಸರು;
ವಾಮದಲಿ ನಿಂದಾತ ಸಹದೇವಾಂಕನು=ಸಿಂಹಾಸನದ ಎಡಬದಿಯಲ್ಲಿ ನಿಂತಿರುವವನು ಸಹದೇವನೆಂಬ ಹೆಸರಿನವನು;
ಅನಿಬರಿಗೆ=ಅವರೆಲ್ಲರಿಗೂ;
ಅನಿಬರಿಗೆ ಈತ ಹಿರಿಯನು ಧರ್ಮನಂದನನು ಎಂದು ತೋರಿಸಿದ=ಅವರೆಲ್ಲರಿಗೂ ಸಿಂಹಾಸನದಲ್ಲಿ ಕುಳಿತಿರುವ ಈತನೇ ಹಿರಿಯನಾದ ದರ್‍ಮರಾಯನು ಎಂದು ಪಾಂಡುನಂದನರನ್ನು ತೋರಿಸಿದ;
ಕೆಲ=ಪಕ್ಕ/ಮಗ್ಗುಲು; ಕಮಲಮುಖಿ=ಕಮಲದ ಹೂವಿನಂತಹ ಮೊಗವುಳ್ಳವಳು/ಸುಂದರಿ; ರಮಣಿ=ಹೆಂಡತಿ;
ಕೆಲದಲಿ ಕಮಲಮುಖಿಯನು ನೋಡು… ಈಕೆ ಐವರಿಗೆ ರಮಣಿ=ಪಕ್ಕದಲ್ಲಿರುವ ಸುಂದರಿಯನ್ನು ನೋಡು. ಈಕೆಯು ಅಯ್ದುಮಂದಿಗೆ ಹೆಂಡತಿ;
ತಾವು ಇವರು ಪಾಂಡುನಂದನರು=ಈ ಅಯ್ದು ಮಂದಿಯು ಹಸ್ತಿನಾವತಿಯ ಪಾಂಡುರಾಜನ ಮಕ್ಕಳು;
ಅಮಳ=ನಿರ್‍ಮಲವಾದ/ಪರಿಶುದ್ದವಾದ; ಗಂಭೀರ=ಗಹನವಾದ/ಮಹತ್ತರವಾದ;
ಅಮಳ ಗುಣ ಗಂಭೀರ ರಾಯರು=ಒಳ್ಳೆಯ ನಡೆನುಡಿಯಿಂದ ಕೂಡಿದ ದೊಡ್ಡ ಗುಣವಂತರಾದ ರಾಜರು;
ಭಾರಿ=ಹೆಚ್ಚಾದ/ಅತಿಶಯವಾದ; ಭಾಗ್ಯಲಕ್ಷ್ಮಿ=ಸಂಪತ್ತಿನ ದೇವತೆ; ಮಮತೆ+ಆಯ್ತು; ಮಮತೆ=ಪ್ರೀತಿ/ವಾತ್ಸಲ್ಯ;
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆಯಾಯ್ತು=ಇವರು ಇಲ್ಲಿರುವುದರಿಂದ ನಮಗೆ ದೊಡ್ಡ ಸಂಪತ್ತಿನ ದೇವತೆಯೇ ಒಲಿದು ಬಂದಂತಾಯಿತು;
ಇನ್ನೇನು ನಡೆ ನಡೆ=ನಿನ್ನ ಸಿಂಹಾಸನವನ್ನು ಏರಿಕುಳಿತವನು ಮತ್ತು ಅವನನ್ನು ಸುತ್ತುವರಿದವರು ಯಾರು ಎಂಬುದು ತಿಳಿದ ನಂತರವೂ ತಡಮಾಡಬೇಡ. ಅವರತ್ತ ಹೋಗೋಣ ನಡೆ… ನಡೆ;
ನೃಪ=ರಾಜ; ಪದ=ಪಾದ/ಚರಣ; ಪದಕಮಲ=ಇದೊಂದು ನುಡಿಗಟ್ಟು. ವ್ಯಕ್ತಿಗೆ ಅಪಾರವಾದ ಪ್ರೀತಿ ಮತ್ತು ವಿನಯವನ್ನು ತೋರಿಸುವಾಗ, ಅವನ ಪಾದವನ್ನು ಪವಿತ್ರವೆಂದು ತಿಳಿಯುವುದು; ಬೀಳುವೆವು=ಬೀಳುತ್ತೇವೆ;
ನೃಪ ಪದಕಮಲದಲಿ ಬೀಳುವೆವು=ರಾಜ ದರ್‍ಮರಾಯನ ಪಾದಕಮಲಗಳಿಗೆ ನಮಿಸೋಣ;
ಧನ್ಯ=ಪುಣ್ಯಶಾಲಿ; ಅಹೆವು=ಆಗುವೆವು;
ಧನ್ಯರು ಅಹೆವು=ಪುಣ್ಯಶಾಲಿಗಳಾಗೋಣ;
ಈತನೇ ಧರ್ಮಜನು ದಿಟ=ನಿಜವಾಗಿಯೂ ಈತನೇ ದರ್‍ಮರಾಯ;
ತಾನು+ಈತನೆ; ಪವನಜ=ವಾಯುಪುತ್ರ/ಬೀಮ; ನಿಶ್ಚಯ=ನಿಜ/ದಿಟ;
ತಾನೀತನೆ ಪವನಜನು ನಿಶ್ಚಯ=ನಿಜವಾಗಿಯೂ ಈತ ಬೀಮಸೇನ;
ಈತನೇ ಫಲುಗುಣನು=ಇವನೇ ಅರ್‍ಜುನ;
ಇವರು ಮಾದ್ರೀತನುಜರೇ=ಇವರೇ ಮಾದ್ರಿಯ ಮಕ್ಕಳಾದ ನಕುಲ ಸಹದೇವ;
ತಳ+ಉದರಿ; ತಳ=ತೆಳುವಾದ; ಉದರ=ಹೊಟ್ಟೆ; ತಳೋದರಿ=ತೆಳುವಾದ ಹೊಟ್ಟೆಯುಳ್ಳವಳು/ಸುಂದರಿ; ಸುತೆ=ಮಗಳು; ದ್ರುಪದ ಸುತೆ=ದ್ರುಪದರಾಜನ ಮಗಳು ದ್ರೌಪದಿ;
ಈ ತಳೋದರಿ ದ್ರುಪದ ಸುತೆಯೇ=ಈ ಸುಂದರಿಯೇ ದ್ರುಪದನ ಮಗಳಾದ ದ್ರೌಪದಿ;
ಕೌತುಕವಲೇ=ನಿಜಕ್ಕೂ ನನಗೆ ಇದೆಲ್ಲವೂ ಅಚ್ಚರಿಯನ್ನು ಮೂಡಿಸುತ್ತಿದೆ;
ಭುವನ=ಲೋಕ/ಜಗತ್ತು; ಭುವನಜನ=ಲೋಕದ ಜನರು; ವಿಖ್ಯಾತ=ಹೆಸರುವಾಸಿಯಾದ; ಎಲ್ಲಿಂದ+ಎಲ್ಲಿ; ಮೂಡು=ಹುಟ್ಟು;
ಭುವನಜನ ವಿಖ್ಯಾತರು ಎಲ್ಲಿಂದೆಲ್ಲಿ ಮೂಡಿದರು ಎನುತ ಬೆರಗಾದ=ಲೋಕದ ಜನತೆಯಲ್ಲಿ ಕೀರ್‍ತಿವಂತರಾದ ಇವರು ಎಲ್ಲಿಂದ ಎಲ್ಲಿಗೆ ಈ ರೀತಿ ಬಂದರು ಎನ್ನುತ್ತ ಅಚ್ಚರಿಗೊಂಡ. ಜೂಜಿನಲ್ಲಿ ಸೋತು ಹಸ್ತಿನಾವತಿಯಿಂದ ಹನ್ನೆರಡು ವರುಶ ಕಾಡುಪಾಲಾಗಿದ್ದ ಮತ್ತು ಒಂದು ವರುಶದ ಕಾಲ ತಲೆಮರೆಸಿಕೊಂಡಿದ್ದ ಈ ಪಾಂಡವರು ಇಲ್ಲಿಗೆ ಹೇಗೆ ಬಂದರು ಎಂದು ವಿರಾಟರಾಯನು ಅಚ್ಚರಿಗೊಂಡು ಉತ್ತರಕುಮಾರನನ್ನು ಈ ಬಗ್ಗೆ ಪ್ರಶ್ನಿಸಿದ;
ಇರು=ನೆಲಸು;
ವರುಷವೊಂದು ಅಜ್ಞಾತ ವಾಸವನು ಇರದೆ ಇಲ್ಲಿ ನೂಕಿದರು=ಒಂದು ವರುಶದ ಅಜ್ನಾತವಾಸವನ್ನು ಬೇರೆ ಪ್ರಾಂತ್ಯಕ್ಕೆ ಹೋಗದೆ, ಇಲ್ಲಿ ನಮ್ಮ ವಿರಾಟನಗರಿಯಲ್ಲಿ ಮಾಡಿದರು;
ಬಳಕೆಯ ಹೊರೆಯ ಹೆಸರು ಅವು ಬೇರೆ=ನಿಜ ಜೀವನದ ವ್ಯವಹಾರದಲ್ಲಿ ಇವರಿಗಿದ್ದ ಹೆಸರು ಬೇರೆ;
ನಡವಳಿ=ನಡವಳಿಕೆ/ವರ್‍ತನೆ; ಅಂಗ=ರೀತಿ;
ನಡವಳಿಯ ಅಂಗವದು ಬೇರೆ=ವ್ಯಕ್ತಿಗತವಾದ ನಡವಳಿಕೆಯ ರೀತಿಯೇ ಬೇರೆ. ಪಾಂಡವರು ತಾವು ರಾಜಕುಮಾರರಾಗಿದ್ದರೂ ತಮ್ಮ ನಿಜಜೀವನದ ಹೆಸರನ್ನು ಮರೆಮಾಚಿಕೊಂಡು, ಇಲ್ಲಿ ವಿರಾಟನಗರದ ನಮ್ಮ ಅರಮನೆಯಲ್ಲಿ ಸಾಮಾನ್ಯರಂತೆ ಸೇವೆಯನ್ನು ಮಾಡಿದರು;
ಪರಮ=ಉತ್ತಮ; ತತ್ವಜ್ಞಾನಿ=ಸತ್ಯವನ್ನು ಅರಿತವನು; ಮರುಳನಂತೆ+ಇರೆ; ಮರುಳ=ದಡ್ಡ; ತೋರನೆ=ಕಂಡುಬರುವುದಿಲ್ಲವೇ;
ಪರಮ ತತ್ವಜ್ಞಾನಿ ಮರುಳನಂತಿರೆ ಜಗಕೆ ತೋರನೆ=ಕೆಲವೊಮ್ಮೆ ಪರಮ ತತ್ವಜ್ನಾನಿಯಾದವನೂ ಕೂಡ ಏನೂ ತಿಳಿಯದವನಂತೆ ಜಗತ್ತಿನ ಜನರ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲವೇ; ಪಾಂಡವರೆಲ್ಲರೂ ತಮ್ಮ ನಿಜಸ್ವರೂಪ ಮತ್ತು ಶಕ್ತಿಯನ್ನು ಮರೆಮಾಡಿಕೊಂಡು, ಅತಿಸಾಮಾನ್ಯರಂತೆ ನಮ್ಮ ಅರಮನೆಯಲ್ಲಿದ್ದರು;
ನಮ್ಮ ಈ ಅರಸುತನ ಫಲವಾಯ್ತು ನಡೆ ಎಂದನು ಕುಮಾರಕನು=ಜಗತ್ತಿನಲ್ಲಿಯೇ ಕೀರ್‍ತಿವಂತರಾದ ಪಾಂಡವರು ವಿರಾಟನಗರಿಯಲ್ಲಿದ್ದುದರಿಂದ ನಮ್ಮ ಅರಸುತನಕ್ಕೆ ದೊಡ್ಡ ಹೆಸರು ಮತ್ತು ಒಳ್ಳೆಯ ಪಲದೊರಕುವಂತಾಯಿತು. ಇನ್ನು ನಡೆ ಅವರನ್ನು ಆದರಿಸಿ ಸತ್ಕರಿಸೋಣ ಎಂದು ಉತ್ತರಕುಮಾರನು ವಿರಾಟರಾಯನಿಗೆ ಹೇಳಿದನು;
ಮಣಿ=ಬೆಲೆಬಾಳುವ ಹರಳು, ಮುತ್ತು, ವಜ್ರ ಮುಂತಾದುವು; ಕನಕ=ಚಿನ್ನ;
ದರುಶನಕೆ ಮಣಿ ರತುನ ಕನಕವ ತರಿಸಿ=ಪಾಂಡವರನ್ನು ನೋಡಿ ಸತ್ಕರಿಸಲೆಂದು ಮುತ್ತು, ರತ್ನ, ಚಿನ್ನದ ಒಡವೆಗಳನ್ನು ತರಿಸಿ;
ಮುದ=ಆನಂದ/ಹಿಗ್ಗು;
ಮುದದಲಿ ಮುಳುಗಿ=ಆನಂದಿಂದ ಕೂಡಿದವನಾಗಿ;
ನಿಜ=ತನ್ನ; ಪರಿಕರ=ಪರಿವಾರ/ಸುತ್ತಮುತ್ತಲಿನ ಜನ; ಸಹಿತ=ಜತೆಗೂಡಿ; ಮೈಯಿಕ್ಕು=ದೇಹವನ್ನು ನೆಲದ ಮೇಲೆ ಬಾಗಿಸಿ ನಮಿಸುವುದು/ಅಡ್ಡಬೀಳು; ಕಾಣಿಕೆ=ಉಡುಗೊರೆ;
ನಿಜ ಪರಿಕರ ಸಹಿತ ಮೈಯಿಕ್ಕಿದನು… ಕಾಣಿಕೆಯನು ಒಪ್ಪಿಸಿದ=ವಿರಾಟರಾಯನು ತನ್ನ ಪರಿವಾರ ಸಮೇತ ದರ್‍ಮರಾಯನಿಗೆ ಮೆಯ್ಯಿಕ್ಕಿ, ಕಾಣಿಕೆಯನ್ನು ಸಲ್ಲಿಸಿದನು;
ವರ=ಉತ್ತಮ; ನೃಪಾಲ=ರಾಜ; ತ್ರಾಹಿ=ಕಾಪಾಡು; ಭುವನ+ಈಶ್ವರ; ಭುವನ=ಲೋಕ/ಜಗತ್ತು; ಈಶ್ವರ=ಒಡೆಯ; ಭುವನೇಶ್ವರ=ಲೋಕದ ಒಡೆಯ; ಪರಿತ್ರಾಣ=ಕಾಪಾಡುವಿಕೆ; ಕರುಣಿಸು=ಅನುಗ್ರಹಿಸು/ದಯಪಾಲಿಸು; ಮತ್ಸ್ಯಭೂಪಾಲ=ಮತ್ಸ್ಯದೇಶದ ರಾಜನಾದ ವಿರಾಟರಾಯ; ಅಂಘ್ರಿ=ಪಾದ;
ವರನೃಪಾಲ ತ್ರಾಹಿ ಭುವನೇಶ್ವರ ಪರಿತ್ರಾಯಸ್ವ ಕರುಣಿಸು ಕರುಣಿಸು ಎಂದು ಮತ್ಸ್ಯ ಭೂಪಾಲ ಅಂಘ್ರಿಗಳ ಹಿಡಿದನು=ಉತ್ತಮನಾದ ರಾಜನೇ ಕಾಪಾಡು. ಲೋಕದ ಒಡೆಯನೇ ಕಾಪಾಡು… ಕರುಣೆಯನ್ನು ತೋರಿ ಅನುಗ್ರಹಿಸು ಎಂದು ವಿರಾಟರಾಯನು ಮೊರೆಯಿಡುತ್ತ ದರ್‍ಮರಾಯನಪಾದಗಳನ್ನು ಹಿಡಿದುಕೊಂಡನು;
ಅಪರಾಧವನು ಬಗೆದೆನು=ತಪ್ಪನ್ನು ಮಾಡಿದೆನು; ಕರುಣಾಳು=ಕನಿಕರವುಳ್ಳವನು/ದಯಾಳು;
ಬಲ್ಲಹ=ಒಡೆಯ/ಯಜಮಾನ;
ನೀನು ಕರುಣಾಳುಗಳ ಬಲ್ಲಹ=ಕರುಣೆಯ ನಡೆನುಡಿಯಲ್ಲಿ ನೀನು ಬಹಳ ದೊಡ್ಡವನು;
ಬಂಟ=ದಾಸ/ಸೇವಕ; ತಲೆಬಂಟ=ಪಾದಸೇವಕ;
ನಿನ್ನ ಅಂಘ್ರಿಗಳಿಗೆ ಈ ತಲೆ ಬಂಟ=ನಿನ್ನ ಪಾದಗಳಿಗೆ ನಾನು ತಲೆಬಾಗಿದ ಸೇವಕ;
ನೀನು ಇದ ಕಾಯಬೇಕು ಎನುತ=ಪಾದಸೇವಕನಾದ ನನ್ನನ್ನು ಮತ್ತು ನನ್ನ ಪರಿವಾರವನ್ನು ಕಾಪಾಡಬೇಕು ಎನ್ನುತ್ತ;
ಮಿಗೆ ಭಕುತಿ ಭಾವದಲಿ=ಹೆಚ್ಚಿನ ಒಲುವು ನಲಿವು ವಿನಯದ ಬಾವದಿಂದ ಕೂಡಿದವನಾಗಿ; ಮಹೀಶ=ರಾಜನಾದ ದರ್‍ಮರಾಯ;
ಮನ ನಂಬುಗೆ=ಮನವೊಲಿಸಿಕೊಳ್ಳುವುದು/ನಂಬಿಕೆ ಮೂಡುವಂತೆ ನಡೆದುಕೊಳ್ಳುವುದು; ಮೆರೆ=ಎದ್ದುತೋರು/ಕಾಣಿಸಿಕೊಳ್ಳು;
ನಿಜ ಮಂತ್ರಿಗಳು ಮಕ್ಕಳು ಸಹಿತ ಮಹೀಶರ ಇದಿರಿನಲಿ ಮತ್ಸ್ಯಭೂಪ ಮನ ನಂಬುಗೆಯ ಮೆರೆದನು=ವಿರಾಟರಾಯನು ತನ್ನ ಮಂತ್ರಿ ಮಕ್ಕಳು ಸಹಿತ ಒಲವು ನಲಿವು ವಿನಯದ ನಡೆನುಡಿಯಿಂದ ದರ್‍ಮರಾಯನ ಮನಸ್ಸನ್ನು ಒಲಿಸಿಕೊಳ್ಳುವಂತೆ ನಡೆದುಕೊಂಡನು;
ವಿಳಾಸಿನಿ=ದಾಸಿ/ಸಕಿ; ರಾಣಿವಾಸದಲ್ಲಿಗೆ=ದ್ರೌಪದಿಯಿದ್ದ ಕಡೆಗೆ; ಪೊಡವಡು=ಸಾಶ್ಟಾಂಗ ನಮಸ್ಕಾರ ಮಾಡು/ನಮಿಸು;
ಆ ಸುದೇಷ್ಣೆ ಕುಮಾರಿಯೊಡನೆ ವಿಳಾಸಿನೀಜನ ಸಹಿತ ರಾಣೀವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು=ವಿರಾಟರಾಯನ ಹೆಂಡತಿಯಾದ ರಾಣಿ ಸುದೇಶ್ಣೆಯು ತನ್ನ ಮಗಳು ಉತ್ತರೆ ಮತ್ತು ದಾಸಿಯರ ಜತೆಗೂಡಿ ದ್ರೌಪದಿಯ ಬಳಿಗೆ ಬಂದು ಕಾಣಿಕೆಯನ್ನು ಕೊಟ್ಟು ನಮಿಸಿದಳು;
ಮಹೀಶ=ರಾಜ; ಮೈಯಿಕ್ಕು=ನಮಿಸು/ವಂದಿಸು;
ಆ ಸಕಲ ಪರಿವಾರ ಪುರಜನ ದೇಶಜನ ಬಹಳ ಹರುಷದಲಿ ಮಹೀಶನಿಗೆ ಮೈಯಿಕ್ಕಿ ಕಾಣಿಕೆಯನು ಇತ್ತು ಕಂಡುದು=ಅಲ್ಲಿದ್ದ ರಾಜಪರಿವಾರದವರು, ಪುರಜನರು ಮತ್ತು ದೇಶದ ಜನರೆಲ್ಲರೂ ರಾಜ ದರ್‍ಮರಾಯನಿಗೆ ನಮಸ್ಕರಿಸಿ ಬಹಳ ಹರುಶದಿಂದ ಕಾಣಿಕೆಯನು ನೀಡಿ, ಪಾಂಡವರ ದರ್‍ಶನ ವನ್ನು ಪಡೆದರು;
ಅವನಿಪತಿ ಮುಗುಳು ನಗೆಯಲಿ ಭೀಮ ಪಾರ್ಥರ ಮೊಗವ ನೋಡಿದನು=ವಿರಾಟರಾಯ ಮತ್ತು ವಿರಾಟರಾಯನ ಪರಿವಾರದವರ ವಿನಯಶೀಲವಾದ ವರ್‍ತನೆಯನ್ನು ನೋಡಿ ಆನಂದಗೊಂಡ ದರ್‍ಮರಾಯನು ಮುಗುಳು ನಗುತ್ತ ಬೀಮನ ಮತ್ತು ಅರ್‍ಜುನನ ಮೊಗವನ್ನು ನೋಡಿದನು;
ತಮ್ಮಂದಿರು ಕೈಮುಗಿದು ತಲೆವಾಗಿದರು=ತಮ್ಮಂದಿರು ಕಯ್ ಮುಗಿದು ತಲೆಬಾಗಿದರು;
ಮಹೀಪತಿಗೆ ಕಾಣಿಕೆಯನು ತೆಗೆಸಿದರು=ದರ್‍ಮರಾಯನಿಗೆ ನೀಡಿದ್ದ ಉಡುಗೊರೆಗಳೆಲ್ಲವನ್ನೂ ಪಕ್ಕಕ್ಕೆ ತೆಗೆಸಿ ಇಡಿಸಿದರು;
ದೃಕ್=ಕಣ್ಣು; ಯುಗ=ಎರಡು/ಜೋಡಿ; ದೃಗುಯುಗ=ಎರಡು ಕಣ್ಣುಗಳು; ಕರುಣಾರಸ=ಒಲವು ನಲಿವು ಕರುಣೆಯಿಂದ ಕೂಡಿದ ಒಳಮಿಡಿತಗಳು; ಅನಿಬರ=ಅವರೆಲ್ಲರನ್ನೂ; ಹೊರೆ=ಸಲಹು/ಕಾಪಾಡು; ಮನ್ನಿಸು=ಮರ್‍ಯಾದೆ ಮಾಡು/ಆದರಿಸು;
ಆ ಮಂತ್ರಿಗಳನು ಆ ಪರಿವಾರವನು ದೃಗುಯುಗದ ಕರುಣಾರಸದಲಿ ಅನಿಬರ ಹೊರೆದು ಮನ್ನಿಸಿದ=ದರ್‍ಮರಾಯನು ವಿರಾಟರಾಜನ ಮಂತ್ರಿಗಳನ್ನು ಮತ್ತು ರಾಜಪರಿವಾರದವರನ್ನು ಸಲಹುವಂತೆ ಒಲವು ನಲಿವು ಕರುಣೆಯ ನೋಟವನ್ನು ಬೀರುತ್ತ, ಅವರೆಲ್ಲರನ್ನು ಆದರಿಸಿದನು;
ಶಿರವನು ಎತ್ತಿ ವಿರಾಟ ಭೂಪನ ಕರೆದು ಹತ್ತಿರ ಪೀಠದಲಿ ಕುಳ್ಳಿರಿಸಲು=ತಲೆಯನ್ನು ತಗ್ಗಿಸಿಕೊಂಡು ತನ್ನ ಮುಂದೆ ನಿಂತಿದ್ದ ವಿರಾಟರಾಯನನ್ನು ದರ್‍ಮರಾಯನು ಕರೆದು ಸಿಂಹಾಸನ ಹತ್ತಿರದ ಗದ್ದುಗೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲು;
ಕೆಲ=ಪಕ್ಕ; ಸರಿ=ಜರುಗು; ಒಡೆ=ಕೂಡಲೇ/ಬೇಗ; ಮುರಿಚು=ನುಣುಚಿಕೊಳ್ಳುವುದು;
ಗದ್ದುಗೆಯ ಕೆಲದಲಿ ಸರಿದು ಒಡೆಮುರಿಚಿದನು=ಸಿಂಹಾಸನದ ಪಕ್ಕಕ್ಕೆ ಸರಿದು ಕೂಡಲೇ ನುಣುಚಿಕೊಂಡನು;
ಪರಮ=ಉತ್ತಮ; ಸುಕೃತ=ಪುಣ್ಯ; ಧರಾಧೀಶ್ವರ=ಬೂಮಂಡಲದ ಒಡೆಯ/ರಾಜ;
ಪರಮ ಸುಕೃತವಲಾ, ಧರಾಧೀಶ್ವರನ ದರುಶನವಾಯ್ತು=ಪರಮ ಪುಣ್ಯವಲ್ಲವೇ… ಆ ಪುಣ್ಯದಿಂದಲೇ ಬೂಮಂಡಲದ ಒಡೆಯನಾದ ನಿಮ್ಮ ದರ್‍ಶನವಾಯಿತು;
ಧರೆಯೊಳು ಧನ್ಯರು ಎಮಗೆ ಇನ್ನಾರು ಸರಿ=ಜಗತ್ತಿನಲ್ಲಿ ನಮಗೆ ಸರಿಸಾಟಿಯಾದ ಪುಣ್ಯವಂತರು ಯಾರಿದ್ದಾರೆ;
ಹೆಚ್ಚಿದ=ತುಂಬಿರುವ; ಕೋಶ=ಹಣ ಒಡವೆ ವಸ್ತುಗಳಿಂದ ತುಂಬಿರುವ ಬೊಕ್ಕಸ;
ದೇಶ ನಿಮ್ಮದು. ನಗರ ಹೆಚ್ಚಿದ ಕೋಶ ನಿಮ್ಮದು=ಈ ಮತ್ಸ್ಯದೇಶ ನಿಮ್ಮದು. ವಿರಾಟನಗರದ ತುಂಬಿದ ರಾಜಬೊಕ್ಕಸ ನಿಮ್ಮದು;
ವಿಳಾಸ=ಉಲ್ಲಾಸ/ನಲಿವು;
ನನ್ನ ಜೀವ ವಿಳಾಸ ನಿಮ್ಮದು=ನನ್ನ ಜೀವನದ ಉಲ್ಲಾಸವು ನಿಮ್ಮದು;
ಸಲಹಬೇಹುದು=ನಮ್ಮನ್ನು ನೀವೇ ಕಾಪಾಡಬೇಕು;
ಬಿನ್ನಹ=ಅರಿಕೆ/ಕೋರಿಕೆ; ಹದನ=ನಿಲುವು/ಅಬಿಪ್ರಾಯ; ಚಿತ್ತೈಸು=ಕೇಳು/ಮನವಿಟ್ಟು ಆಲಿಸು;
ಬಿನ್ನಹದ ಹದನ ಚಿತ್ತೈಸು=ನನ್ನದೊಂದು ಕೋರಿಕೆಯನ್ನು ನಿನ್ನ ಮುಂದೆ ಈಗ ಹೇಳಲಿದ್ದೇನೆ. ಮನವಿಟ್ಟು ಕೇಳು;
ಸಮಂಜಸ=ಸೂಕ್ತವಾದ/ಯೋಗ್ಯವಾದ; ಅಭಿಷೇಕ=ವ್ಯಕ್ತಿಗೆ ರಾಜಪಟ್ಟವನ್ನು ಕಟ್ಟುವಾಗ ಮಾಡುವ ಆಚರಣೆ/ಮಂಗಳ ಸ್ನಾನ; ಭೂಮೀಶ=ಬೂಮಿಗೆ ಒಡೆಯ/ರಾಜ; ವಿಸ್ತರಿಸು=ನೆರವೇರಿಸು;
ಈ ಸಮಂಜಸ ದಿವಸದಲಿ ಸಿಂಹಾಸನದಲಿ ಅಭಿಷೇಕವನು ಭೂಮೀಶ ವಿಸ್ತರಿಸುವೆನು ಎಂದನಾ ಭೂಪ=ಯೋಗ್ಯವಾದ ಈ ದಿನದಂದು ಸಿಂಹಾಸನದಲ್ಲಿ ಕುಳಿತಿರುವ ನಿನಗೆ ರಾಜಪಟ್ಟವನ್ನು ಕಟ್ಟುತ್ತೇನೆ ಎಂದು ವಿರಾಟರಾಯನು ವಿನಂತಿಸಿಕೊಂಡನು;
ಎನಲು ಧರ್ಮರಾಯನು ನಗುತ=ಮತ್ಸ್ಯದೇಶದ ರಾಜನಾದ ವಿರಾಟರಾಯನ ಮಾತುಗಳನ್ನು ಕೇಳಿ ದರ್‍ಮರಾಯನು ನಗುತ್ತ;
ಮಹಿ=ಬೂಮಿ; ಪತಿ=ಒಡೆಯ; ಮಹೀಪತಿ=ರಾಜ; ಮಧುರ=ಸಿಹಿಯಾದುದು; ರಸಾಭಿಷೇಕ=ಬಹುಬಗೆಯ ಹಣ್ಣುಗಳ ರಸವನ್ನು ದೇವರ ವಿಗ್ರಹದ ಮೇಲೆ ಸುರಿಯುವ ಆಚರಣೆ; ಮಧುರ ರಸಾಭಿಷೇಕ=ನುಡಿಗಟ್ಟಿನ ತಿರುಳಿನಲ್ಲಿ ಬಳಕೆಗೊಂಡಿದೆ; ದೇವರ ವಿಗ್ರಹಕ್ಕೆ ಮಾಡುವ ಅಬಿಶೇಕದಂತೆಯೇ ವ್ಯಕ್ತಿಯ ಮನಸ್ಸನ್ನು ಮುದಗೊಳಿಸುವ ನಡೆನುಡಿ;
ಮಹೀಪತಿ ವಿನಯ ಮಧುರ ರಸಾಭಿಷೇಕವನು ಎನಗೆ ಮಾಡಿದೆ=ವಿರಾಟರಾಯನೇ, ರಾಜ್ಯದ ಪಟ್ಟಾಬಿಶೇಕಕ್ಕಿಂತ ಮಿಗಿಲಾಗಿ ವಿನಯದ ನಡೆನುಡಿಯಿಂದ ನನ್ನ ಮನಸ್ಸಿಗೆ ಆನಂದವನ್ನುಂಟುಮಾಡಿರುವೆ;
ಧರಿತ್ರಿ=ಬೂಮಿ; ನೆನಹು=ನೆನಪು; ಪುನರ್+ಉಕ್ತ+ಅಭಿಷೇಕ+ಅದು; ಪುನರ್=ಮತ್ತೆ/ಪುನಹ; ಉಕ್ತ=ಹೇಳಿದ/ಮಾತು;
ಧರಿತ್ರಿಯಿದು ಎಮ್ಮದು ಎಂಬ ಈ ನೆನಹು ತಾನು ಸಾಕು. ಪುನರುಕ್ತಾಭಿಷೇಕವದು=ಮತ್ಸ್ಯದೇಶಕ್ಕೆ ದರ್‍ಮರಾಯನಾದ ನಾನು ಒಡೆಯನೆಂಬ ನೆನಪು ನನಗೆ ಸಾಕು. ನೀನು ಹೇಳಿದ ಮಾತುಗಳೇ ನನಗೆ ಈ ರಾಜ್ಯದ ಪಟ್ಟವನ್ನು ಮತ್ತೆ ಕಟ್ಟಿದಂತಿದೆ;
ಜನವಿದು ಎಮ್ಮದು=ನಿನ್ನ ಪ್ರಜೆಗಳೇ ನನ್ನ ಪ್ರಜೆಗಳು;
ನೀನು ನಮ್ಮಾತನು=ನೀನು ನಮ್ಮವನು; ಉಪಚಾರ=ಸತ್ಕಾರ/ಸೇವರ;
ನಮಗೇಕೆ ಉಪಚಾರ=ನಮಗೇಕೆ ಸತ್ಕಾರವನ್ನು ಮಾಡುವೆ. ನಾವು ನೀವೆಲ್ಲರೂ ಸಮಾನರು;
ಭೀಮ+ಅರ್ಜುನರು;
ಭೀಮಾರ್ಜುನರು ನೊಂದವರು=ನನ್ನ ತಮ್ಮಂದಿರಾದ ಬೀಮ ಮತ್ತು ಅರ್‍ಜುನ ಜೀವನದಲ್ಲಿ ತುಂಬಾ ನೊಂದಿದ್ದಾರೆ;
ಹಗೆ=ಶತ್ರು; ಹಳುವ=ಕಾಡು; ಕಂದು=ಕಳೆಗುಂದು; ಕಸರಿಕೆ=ಸೊರಗುವಿಕೆ/ಅಸಮಾದಾನ/ಮುಜುಗರ; ಮನಸಿನ ಕಂದುಕಸರಿಕೆ=ಇದೊಂದು ನುಡಿಗಟ್ಟಿನ ತಿರುಳಿನಲ್ಲಿ ಬಳಕೆಯಾಗಿದೆ; ಹಸಿವು, ಅಪಮಾನ, ಆಕ್ರೋಶ, ಅಸಹಾಯಕತೆ ಮತ್ತು ಸೇಡಿನ ಒಳಮಿಡಿತಗಳಿಂದ ಮನಸ್ಸಿನಲ್ಲಿ ಉಂಟಾಗಿರುವ ನೋವು;
ಹಗೆಯಿಂದ ಹಳುವವ ಹೊಕ್ಕು ಮನಸಿನ ಕಂದು ಕಸರಿಕೆ ಹೋಗದು=ದುರ್‍ಯೋದನನು ಮಾಡಿದ ಮೋಸದ ಜೂಜಾಟದಿಂದಾಗಿ ಕಾಡಿಗೆ ಬಂದು ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶ ಅಜ್ನಾತವಾಸವನ್ನು ಮಾಡುವಾಗ ಪಟ್ಟ ಪರಿತಾಪ ಮತ್ತು ಅಪಮಾನದ ಸಂಗತಿಗಳೆಲ್ಲವೂ ಬೀಮ ಮತ್ತು ಅರ್‍ಜುನನರ ಮನದಲ್ಲಿ ಅಪಾರವಾದ ನೋವನ್ನುಂಟು ಮಾಡಿದೆ. ಆ ಅಪಮಾನದ ಕಹಿ ಅನುಬವಗಳು ಅವರ ಮನಸ್ಸಿನಿಂದ ಹೋಗುವುದಿಲ್ಲ;
ದುರ್ಯೋಧನ+ಆದಿಗಳ; ಆದಿ=ಮೊದಲು; ದುರ್ಯೋಧನಾದಿಗಳು=ದುರ್‍ಯೋದನ, ಅವನ ನೂರು ಮಂದಿ ತಮ್ಮಂದಿರು, ಅವನ ಕೇಡಿನ ಕೆಲಸಕ್ಕೆ ಬೆಂಬಲವಾಗಿ ನಿಂತ ನೀಚರೆಲ್ಲರನ್ನೂ; ಕಳ=ರಣರಂಗ/ಕಾಳೆಗದ ನೆಲ; ಗಜಪುರಿ=ಹಸ್ತಿನಾವತಿ; ಗಮಿಸು=ಹೋಗು; ತವಕ=ಅತಿಯಾದ ಬಯಕೆ/ಆತುರ/ಉತ್ಸುಕತೆ;
ಆ ದುರ್ಯೋಧನಾದಿಗಳ ಕಳದಲಿ ಕೊಂದು, ಮತ್ತೆ ಗಜಪುರಿಗೆ ಎಂದು ಗಮಿಸುವೆವು ಎಂಬ ತವಕಿಗರು=ಆ ದುರ್‍ಯೋದನನ್ನುಒಳಗೊಂಡಂತೆ ಅವನ ಕಡೆಯವರೆಲ್ಲರನ್ನೂ ಕಾಳೆಗದ ಕಣದಲ್ಲಿ ಕೊಂದು, ಮತ್ತೆ ಹಸ್ತಿನಾವತಿಗೆ ಯಾವಾಗ ಹೋಗುತ್ತೇವೆ ಎಂಬ ರಣೋತ್ಸಾಹದಿಂದ ಬೀಮ ಮತ್ತು ಅರ್‍ಜುನ ತವಕಿಸುತ್ತಿದ್ದಾರೆ;
ಇಂದು ತಾನೇ ಬಲ್ಲರು ಎಂದನು ಧರ್ಮನಂದನನು=ಇನ್ನು ಮುಂದೆ ಪಾಂಡವರಾದ ನಾವು ಏನು ಮಾಡಬೇಕೆಂಬುದನ್ನು ಅವರೇ ತಿಳಿದಿದ್ದಾರೆ ಎಂದು ದರ್‍ಮರಾಯನು ನುಡಿದನು;
ಅಂಘ್ರಿ=ಪಾದ; ಅಂದು=ಆಗ; ಮಕುಟ=ಕಿರೀಟ/ತಲೆ; ಚಾಚು=ಮುಂದೆ ಒಡ್ಡು; ಬಿನ್ನಹ=ಕೋರಿಕೆ; ನೇಮ=ಅನುಮತಿ/ಒಪ್ಪಿಗೆ; ಈವೆನು=ಕೊಡುವೆನು;
ಅರಸನ ಅಂಘ್ರಿಯೊಳು ಅಂದು ಮಕುಟವ ಚಾಚಿ ಬಿನ್ನಹವು ಇಂದು. ನೇಮವ ಕೊಡಿ. ಅರ್ಜುನಗೆ ಕುಮಾರಿಯನು ಈವೆನು ಎಂದಡೆ=ಉತ್ತರಕುಮಾರನು ದರ್‍ಮರಾಯನ ಪಾದಗಳಿಗೆ ತಲೆಬಾಗಿ ನಮಿಸಿ, ನಿಮ್ಮಲ್ಲಿ ನನ್ನದೊಂದು ಕೋರಿಕೆ. ನಿಮ್ಮ ಒಪ್ಪಿಗೆಯನ್ನು ನೀಡಿ. ಅರ್‍ಜುನನಿಗೆ ನನ್ನ ತಂಗಿಯಾದ ಉತ್ತರೆಯನ್ನು ನೀಡುವೆನು, ಅರ್‍ಜುನ ಮತ್ತು ಉತ್ತರೆಯ ಮದುವೆಗೆ ನಿಮ್ಮ ಅನುಮತಿಯನ್ನು ನೀಡಿ ಎಂದು ಕೇಳಿಕೊಂಡನು;
ಏಳು ಏಳು ಎಂದು ನಸುನಗೆಯಿಂದ ಯುಧಿಷ್ಠಿರನು ಪಾರ್ಥನ ನೋಡೆ=ಆಗ ದರ್‍ಮರಾಯನು ಉತ್ತರಕುಮಾರನ ಕೋರಿಕೆಯನ್ನು ಕೇಳಿ ಮುಗುಳು ನಗುತ್ತ “ಏಳು ಏಳು” ಎಂದು ಅವನಿಗೆ ಹೇಳುತ್ತ, ಅರ್‍ಜುನನನತ್ತ ನೋಡಲು;
ನಿಶ್ಚಯ=ಗಟ್ಟಿಯಾದ ನಿಲುವು/ಅಚಲವಾದ ಅಬಿಪ್ರಾಯ;
ಅವನು ಯುಧಿಷ್ಠಿರಗೆ ಕೈಮುಗಿದು ಮನದ ನಿಶ್ಚಯವನು ಎಂದನು=ಅರ್‍ಜುನನು ದರ್‍ಮರಾಯನಿಗೆ ಕಯ್ ಮುಗಿದು ಉತ್ತರಕುಮಾರನು ಪ್ರಸ್ತಾಪಿಸಿದ ಮದುವೆಯ ಬಗ್ಗೆ ತನ್ನ ಮನದಲ್ಲಿದ್ದ ಅಚಲವಾದ ನಿಲುವನ್ನು ಹೇಳಿದನು;
ಪರುಟವಿಸು=ವಿವರವಾಗಿ ಹೇಳು;
ಇವಳಲಿ ವರುಷವು ನಾಟ್ಯ ವಿದ್ಯೆಯ ಪರುಟವಿಸಿದೆನು=ಉತ್ತರೆಗೆ ಒಂದು ವರುಶದ ಕಾಲ ನಾಟ್ಯವಿದ್ಯೆಯನ್ನು ಕಲಿಸಿದ್ದೇನೆ;
ಆ ಪ್ರಕಾರ=ಅದಕ್ಕೆ ಅನುಗುಣವಾಗಿ; ರಹಸ್ಯ ದೇಶದಲಿ=ಇದೊಂದು ನುಡಿಗಟ್ಟಿನ ತಿರುಳಿನಲ್ಲಿ ಬಳಕೆಗೊಂಡಿದೆ. ನಾನು ಮತ್ತು ಉತ್ತರೆಯ ಏಕಾಂತದಲ್ಲಿದ್ದಾಗ; ಭಜಿಸು=ಪೂಜಿಸು/ಸೇವಿಸು;
ಆ ಪ್ರಕಾರ ರಹಸ್ಯ ದೇಶದಲಿ ಈ ತರುಣಿ ತಂದೆಯಂತೆ ಭಜಿಸಿದಳು=ನಾಟ್ಯವಿದ್ಯೆಯನ್ನು ನಾನು ಆಕೆಗೆ ಕಲಿಸುವಾಗ ಅದಕ್ಕೆ ಅನುಗುಣವಾಗಿ ಅವಳು ನನ್ನನ್ನು ತಂದೆಯಂತೆ ಕಂಡು ಉಪಚರಿಸಿದಳು; ಆಕೆಯು ನನ್ನ ಪಾಲಿಗೆ ಮಗಳಾಗಿದ್ದಾಳೆ;
ಗರುವಾಯಿ=ದೊಡ್ಡತನ; ಎತ್ತಲು=ಯಾವ ಕಡೆಯದು; ಅರಸಿ+ಎಂಬುದು; ಇದು+ಆವ; ಮತ=ಆಶಯ/ಉದ್ದೇಶ;
ಗುರುತನದ ಗರುವಾಯಿ ಎತ್ತಲು… ಅರಸಿಯೆಂಬುದು ಇದಾವ ಮತವು=ಗುರುತನದ ದೊಡ್ಡ ವ್ಯಕ್ತಿತ್ವ ಎಲ್ಲಿ… ವಿದ್ಯೆ ಕಲಿಸಿದ ಗುರುವಿಗೆ ಶಿಶ್ಯೆಯನ್ನೇ ಹೆಂಡತಿಯನ್ನಾಗಿ ಮಾಡಿಕೊಳ್ಳಿ ಎಂಬ ಈ ಕೋರಿಕೆ ಹೇಗೆ ತಾನೆ ಸರಿಯಾಗುತ್ತದೆ;
ವರ=ಉತ್ತಮ; ಈವಡೆ=ಕೊಡುವುದಾರೆ;
ಈ ವರ ಕುಮಾರಿಯನು ಈವಡೆ ಅಭಿಮನ್ಯುವಿಗೆ ಕೊಡಲಿ=ಪಾಂಡವರಾದ ನಮ್ಮ ಕುಟುಂಬದೊಡನೆ ನಂಟನ್ನು ಪಡೆಯಬೇಕೆಂಬ ಆಸೆಯಿದ್ದರೆ ಉತ್ತಮಳಾದ ಈ ಕುಮಾರಿಯನ್ನು ನನ್ನ ಮಗನಾದ ಅಬಿಮನ್ಯುವಿಗೆ ಕೊಟ್ಟು ಮದುವೆಯನ್ನು ಮಾಡಲಿ;
ಎವಗೆ=ಎಮಗೆ; ಉತ್ಸವ=ಸಡಗರ;
ಎವಗೆ ನೀವೇನು ಆತನೇನು. ಉತ್ಸವದೊಳು ಆಗಲಿ ಎನೆ=ನಮ್ಮ ಪಾಲಿಗೆ ನೀವೇನು ಆ ಅಬಿಮನ್ಯವೇನು ಬೇರೆಬೇರೆಯಲ್ಲ; ನಮಗೆ ಇಬ್ಬರೂ ಒಂದೇ; ನೀವು ಹೇಳಿದಂತೆಯೇ ಉತ್ತರೆ ಮತ್ತು ಅಬಿಮನ್ಯು ಮದುವೆ ನಡೆಯಲಿ ಎಂದು ವಿರಾಟರಾಯನು ಸಡಗರದಿಂದ ಒಪ್ಪಿಗೆಯನ್ನು ನೀಡಲು;
ಅವನಿಪತಿ=ದರ್‍ಮರಾಯ;
ವಿರಾಟನನ್ ಅವನಿಪತಿ ಮನ್ನಿಸಿದನು=ವಿರಾಟರಾಯನನ್ನು ದರ್‍ಮರಾಯನು ಆದರಿಸಿದನು;
ವೀಳೆಯವ ನಗುತ ಇತ್ತನು=ಮಂಗಳದ ಸಂಕೇತವಾಗಿ ವೀಳೆಯವನ್ನು ವಿರಾಟರಾಯನಿಗೆ ದರ್‍ಮರಾಯನು ಮುಗುಳು ನಗುತ್ತ ನೀಡಿದನು;
ಎವಗೆ=ನಮಗೆ; ಪರಮ=ಉತ್ತಮ; ಸ್ವಾಮಿ=ಒಡೆಯ;
ಎವಗೆ ಪರಮಸ್ವಾಮಿ=ನಮಗೆ ಉತ್ತಮ ಒಡೆಯ; ಉತ್ಸವ=ಸಡಗರ;
ಎಮ್ಮ ಉತ್ಸವದ ನೆಲೆ=ನಮ್ಮ ಜೀವನದ ಒಲವು ನಲಿವು ಗೆಲುವಿನ ಸಡಗರಕ್ಕೆ ನೆಲೆಯಾದವನು;
ಎಮ್ಮೈವರಸು=ನಾವು ಅಯ್ದು ಮಂದಿ ಪಾಂಡವರ ರಾಜ;
ಯಾದವ=ಯದು ಕುಲ; ಶಿರೋಮಣಿ=ತಲೆಯ ಮುಡಿಯಲ್ಲಿ ತೊಡುವ ರತ್ನದ ಒಡವೆ; ಯಾದವ ಶಿರೋಮಣಿ=ಒಂದು ಬಿರುದು. ಯದುಕುಲದಲ್ಲಿ ಅತ್ಯುತ್ತಮನಾದ ವ್ಯಕ್ತಿ; ಅಭಿಮತ=ಅಬಿಪ್ರಾಯ/ನಿಲುವು; ಮತ=ಅಬಿಪ್ರಾಯ;
ಯಾದವ ಶಿರೋಮಣಿ ಕೃಷ್ಣನ ಅಭಿಮತವು ಎಮ್ಮ ಮತ=ಯಾದವ ಶಿರೋಮಣಿ ಕ್ರಿಶ್ಣನ ಅಬಿಪ್ರಾಯವೇ ನಮ್ಮ ಅಬಿಪ್ರಾಯ;
ಪೊಡವಿ+ಒಡೆತನ; ಪೊಡವಿ=ಬೂಮಿ; ಒಡೆತನ=ಹಕ್ಕುದಾರಿಕೆ/ಯಜಮಾನಿಕೆ; ಮಿಗೆ=ಅತಿಶಯವಾಗಿ; ಕಟ್ಟೊಡೆಯ=ದೊಡ್ಡ ಯಜಮಾನ;
ಎಮಗೆ ಪೊಡವಿಯೊಡೆತನ… ಕೃಷ್ಣನು ಮಿಗೆ ಕಟ್ಟೊಡೆಯ=ನಮಗೆ ಬೂಮಿಯ ಒಡೆತನ ದೊರೆತಿರುವುದು ಕ್ರಿಶ್ಣನಿಂದ… ಕ್ರಿಶ್ಣನೇ ನಮಗೆ ಎಲ್ಲ ರೀತಿಯಿಂದಲೂ ದೊಡ್ಡ ಯಜಮಾನ;
ಒಡಬಡು=ಒಪ್ಪು/ಅನುಮತಿಕೊಡು; ನಿರಂತರಾಯ=ಅಡೆತಡೆಯಿಲ್ಲದ/ಸುಸೂತ್ರತೆ;
ಕೃಷ್ಣನು ಒಡಬಟ್ಟೊಡೆ ವಿವಾಹ ನಿರಂತರಾಯವು=ಕ್ರಿಶ್ಣನು ಒಪ್ಪಿದರೆ ಉತ್ತರೆ ಮತ್ತು ಅಬಿಮನ್ಯುವಿನ ವಿವಾಹ ಯಾವುದೇ ಅಡೆತಡೆಯಿಲ್ಲದೆ ಚೆನ್ನಾಗಿ ನಡೆಯುತ್ತದೆ;
ಚಿಂತೆ ಬೇಡ ಎನಲು =ಚಿಂತೆ ಮಾಡಬೇಡ ಎಂದು ದರ್‍ಮರಾಯನು ನುಡಿಯಲು; ಮೇಣ್=ಇಲ್ಲವೇ;
ಒಡಬಡಲಿ ಮೇಣ್ ಇರಲಿ =ಕ್ರಿಶ್ಣನು ಮದುವೆಗೆ ಒಪ್ಪಲಿ ಇಲ್ಲವೇ ಒಪ್ಪದಿರಲಿ;
ನಿಮ್ಮಡಿ=ತಾವು; ಮುರಾರಿ=ಕ್ರಿಶ್ಣ; ಕೃತಾರ್ಥ=ಕಯ್ಗೊಂಡ ಕೆಲಸದಲ್ಲಿ ಶ್ರೇಯಸ್ಸನ್ನು ಪಡೆದವನು/ಪುಣ್ಯಶಾಲಿ; ಹಿಗ್ಗು=ಆನಂದ;
ಗುರು ನಿಮ್ಮಡಿ ಮುರಾರಿಯ ತೋರಿಸುವಿರಾದೊಡೆ ಕೃತಾರ್ಥನು ತಾನು. ಎನುತ ಮತ್ಸ್ಯನೃಪ ಹಿಗ್ಗಿದನು=ಗುರು ಸಮಾನರಾದ ತಾವು ಈ ನೆಪದಲ್ಲಿ ಮುರಾರಿಯನ್ನು ನಮಗೆ ತೋರಿಸಿದರೆ ನಾನೇ ಪುಣ್ಯಶಾಲಿ ಎನ್ನುತ್ತ ವಿರಾಟರಾಯನು ಹಿಗ್ಗಿದನು;
ಅನಂತರ ದ್ವಾರಕಾವತಿಯಲ್ಲಿದ್ದ ಕ್ರಿಶ್ಣನನ್ನು ಪಾಂಡವರು ವಿರಾಟನಗರಿಗೆ ಕರೆಸಿಕೊಂಡು, ಮದುವೆಗೆ ಕ್ರಿಶ್ಣನ ಒಪ್ಪಿಗೆಯನ್ನು ಪಡೆದು ಪಾಂಡವರು, ಯಾದವರು ಮತ್ತು ವಿರಾಟರಾಯನ ಕಡೆಯವರೆಲ್ಲರೂ ಜತೆಗೂಡಿ ಸಡಗರದಿಂದ ಉತ್ತರೆ ಮತ್ತು ಅಬಿಮನ್ಯುವಿನ ಮದುವೆಯನ್ನು ಮಾಡುತ್ತಾರೆ.)
(ಚಿತ್ರ ಸೆಲೆ: quoracdn.net)
ಇತ್ತೀಚಿನ ಅನಿಸಿಕೆಗಳು