ಕರ‍್ಜಿಕಾಯಿ
ಏನೇನು ಬೇಕು?
- ಮೈದಾಹಿಟ್ಟು – 1 ಕಪ್ಪು
- ಚಿರೋಟಿ ರವೆ – 1 ಕಪ್ಪು
- ಉಪ್ಪು – 1 ಚಿಟಿಕೆ
- ಕೊಬ್ಬರಿ ತುರಿ- 1 ಕಪ್ಪು
- ಬೆಲ್ಲದ ಪುಡಿ – 1 ಕಪ್ಪು
- ಹುರಿಗಡಲೆ – 1 ಕಪ್ಪು
- ಬಿಳಿ ಎಳ್ಳು – ಅರ್‍ದ ಕಪ್ಪು
- ಗಸಗಸೆ – 2 ಚಮಚ
- ಏಲಕ್ಕಿ ಪುಡಿ – ಸ್ವಲ್ಪ
- ಸ್ವಲ್ಪ ನೀರು
- ಕರಿಯಲು ಎಣ್ಣೆ
ಮಾಡುವ ಬಗೆ:
ಮೊದಲಿಗೆ ಒಂದು ಪಾತ್ರೆಗೆ ಮೈದಾಹಿಟ್ಟು, ಚಿರೋಟಿ ರವೆ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಸೇರಿಸಿ ಚೆನ್ನಾಗಿ ಬೆರೆಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ ಕನಿಶ್ಟ 30 ನಿಮಿಶ ಹಾಗೆಯೇ ಇಡಿ.
ಕೊಬ್ಬರಿ ತುರಿಯನ್ನು ಮೊದಲು ಮಿಕ್ಸರಲ್ಲಿ ಪುಡಿ ಮಾಡಿ ಇಡಿ. ಒಂದು ಬಾಣಲೆಗೆ ಎಳ್ಳು, ಹುರಿಗಡಲೆ, ಗಸಗಸೆ ಹಾಕಿ ಹದವಾಗಿ ಹುರಿದು ಮಿಕ್ಸರಲ್ಲಿ ಪುಡಿ ಮಾಡಿ. ಈಗ ಒಂದು ಪಾತ್ರೆಗೆ, ಮಿಕ್ಸರಲ್ಲಿ ಪುಡಿ ಮಾಡಿದ ಕೊಬ್ಬರಿ ತುರಿ, ಕುಟ್ಟಿ ಪುಡಿಮಾಡಿದ ಬೆಲ್ಲ, ಮೊದಲೇ ಪುಡಿ ಮಾಡಿಟ್ಟಿದ್ದ ಎಳ್ಳು, ಹುರಿಗಡಲೆ, ಗಸಗಸೆ ಸೇರಿಸಿ ಏಲಕ್ಕಿ ಪುಡಿ ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರೆಸಿಡಿ. ಕರ‍್ಜಿಕಾಯಿ ಸೂಸಲ ಸಿದ್ದವಾದಂತಾಗುತ್ತದೆ. ನಂತರ ಪೂರಿಹಿಟ್ಟಿನ ಹಾಳೆಗಳನ್ನು ಮಾಡಿ, ಒಂದೊಂದೇ ಹಾಳೆಗೆ ಅಗತ್ಯವಿರುವಶ್ಟು ಸೂಸಲ ಹಾಕಿ ಕರ‍್ಜಿಕಾಯಿ ಆಕಾರದಲ್ಲಿ ಮಾಡಿ, ಕಾದ ಎಣ್ಣೆಯಲ್ಲಿ ಮದ್ಯಮ ಉರಿಯಲ್ಲಿ ಎರಡು ಬದಿ ಹದವಾಗಿ ಕರಿದರೆ ರುಚಿ ರುಚಿಯಾದ ಗರಿ ಗರಿಯಾದ ಕರ‍್ಜಿಕಾಯಿ ಸಿದ್ದವಾಗುತ್ತದೆ. ಗಣಪತಿ ಹಬ್ಬದಲ್ಲಿ ಕರ‍್ಜಿಕಾಯಿ ಹೆಚ್ಚಾಗಿ ಮಾಡಲಾಗುತ್ತದೆ.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು