ಕಿರು ಬರಹ: ದಸರಾ ನೆನಪುಗಳು

– ಗೋಪಾಲಕ್ರಿಶ್ಣ ಬಿ. ಎಂ.

ಹಳೆ ಮೈಸೂರ ಬಾಗದಲ್ಲೆ ಹುಟ್ಟಿ ಬೆಳದರೂ ಇಂದಿಗೂ ನಾನು ನಾಡ ಹಬ್ಬ ದಸರಾ ಮೆರವಣಿಗೆಯಲ್ಲಿ ಬಾಗವಹಿಸಿಲ್ಲ ಅಂತ ಹೇಳಿಕೊಳ್ಳಲು ನನಗೆ ನಾಚಿಕೆ, ಬೇಸರ ಒಟ್ಟಿಗೆ ಅಗುತ್ತದೆ. ಪ್ರತಿ ದಸರಾ ಹಬ್ಬದಲ್ಲೂ ಮೈಸೂರು ಮೆರವಣಿಗೆ ನೆನೆಯುತ್ತೇನೆ ಆದರೆ ಹೋಗಲು ಆಗಿಲ್ಲ. ಆದರೆ ಅದರಶ್ಟೆ ಅದ್ದೂರಿಯಾಗಿ ನಮ್ಮ ಬೆಂಗಳೂರಿನ ಜೆ.ಸಿ.ನಗರದ (ಹಿಂದೆ ಮುನಿರೆಡ್ಡಿ ಪಾಳ್ಯ ಎಂದು ಹೆಸರು) ಇಂದಿನ ಟಿ.ವಿ ಟವರ್ ಹಿಂದಿನ ಮೈದಾನದಲ್ಲಿ ದಸರಾ ನಡೆಯುತ್ತಿತ್ತು. ನನ್ನ ಚಿಕ್ಕಂದಿನ ದಸರಾ ನೆನೆಪೆಲ್ಲವೂ ಅದರ ಸುತ್ತ ಮುತ್ತಲೇ ಇದೆ. ಇಂದಿಗೂ ನನಗೆ ದಸರಾ ಎಂದರೆ ಅಲ್ಲಿ ನಡೆಯುವ 9 ರಾತ್ರಿಗಳ ಹಲವು ನಾಟಕ, ಸಂಗೀತ, ರಸ ಮಂಜರಿ ಮತ್ತಿತರ ಕಾರ‍್ಯಕ್ರಮಗಳಿಗಿಂತ ಅಲ್ಲಿ ಮಾರುತ್ತಿದ್ದ ಸಿಹಿ ಬೆಂಡು ಬತಾಸು, ಮೈಸೂರು ಪಾಕು, ವಡೆ, ಬಜ್ಜಿ ಬೊಂಡಗಳೆ ಮನಸ್ಸು ಸೆಳೆಯುತ್ತವೆ. ಗಿರಗಿಟ್ಟಲೆ, ಮ್ಯಾಜಿಕ್ ಶೋ, ದೇವರ ಮೂರ‍್ತಿಗಳ ಉತ್ಸವ ನೋಡುವುದೆ ನಮಗೆ ಕುಶಿ.

ದಸರಾ ನಡೆಯುವ ಜಾಗ ನಮ್ಮ ಮನೆಯಿಂದ ಸುಮಾರು 2 ಕಿ.ಮೀ. ದೂರ ಇದ್ದರೂ ಮನೆಯವರ, ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ನಡೆಯುತ್ತಲೆ ಹೋಗುತ್ತಿದ್ದೆವು, ಎಲ್ಲಾ ಕಾರ‍್ಯಕ್ರಮಗಳನ್ನು ಬಿಡದೆ ನೋಡಿಕೊಂಡು ಮನೆಗೆ ಮತ್ತೆ ನಡೆಯತ್ತಾ ಬರುವಾಗ ರಾತ್ರಿ 12 ದಾಟುತ್ತಿತ್ತು. ಆದರೆ ಕಿಂಚಿತ್ತೂ ಬಯ ಆಗಲಿ, ನಿದ್ದೆಗೆಟ್ಟ ಬಗ್ಗೆ ಆಗಲಿ ಯೋಚನೆ ಇರುತ್ತಿರಲಿಲ್ಲ. ಜೊತೆಗೆ ಮನೆ ಬಳಿಯೇ ಒಂದು ಶನಿ ದೇವರ ಗುಡಿ ಇದ್ದು, ಅಲ್ಲೂ ಗ್ರಾಮೋಪೋನಿನಲ್ಲಿ, ನಂತರದ ದಿನಗಳಲ್ಲಿ ಕ್ಯಾಸೆಟ್ ಹಾಕಿ ಡಾ. ರಾಜಕುಮಾರರ ಸಿನಿಮಾದ ಕತೆ, ಹಾಡುಗಳನ್ನು ಕೇಳುವುದು, ಕೊನೆಯ ದಿನ ದೇವರ ಮೆರವಣಿಗೆಯಲ್ಲಿ ಟಮಟೆ ಶಬ್ದಕ್ಕೆ ಕುಣಿಯುವುದು. ಓಹ್ ಆ ದಿನಗಳು ಮತ್ತೆ ಬರವು ಬಿಡಿ.

ಇಂದು ಎಲ್ಲವೂ ಬದಲಾಗಿದೆ ಅತವಾ ನಾವು ಬದಲಾಗಿದ್ದೇವೋ ಗೊತ್ತಿಲ್ಲ. ಆ ದೊಡ್ಡ ಮೈದಾನದಲ್ಲಿ ನಡೆಯುತ್ತಿದ ಜೆ.ಸಿ ನಗರ ದಸರ ಇಂದು ಒಂದು ಚಿಕ್ಕ ಮೈದಾನಕ್ಕೆ ಸೀಮಿತಗೊಂಡಿದೆ. ಹಿಂದಿನ‌ ಮೈದಾನದ ಜಾಗ ಸೈನ್ಯದ ಜಾಗ ಅಂತೆ, ಅವರ ವಶವಾಗಿದೆ. ಮನೆಯ ಮುಂದಿನ ಗುಡಿಯಲ್ಲೂ ಈಗ ಕೊನೆಯ ಎರಡು ದಿನಕ್ಕೆ ದಸರಾ ಸೀಮಿತವಾಗಿದೆ. ಈಗೇನಿದ್ದರು ಉತ್ತರ ಬಾರತೀಯರ ನವರಾತ್ರಿ ಕಾರ‍್ಯಕ್ರಮಗಳನ್ನು ನಮ್ಮ ಮನೆಯ ಬಳಿಯೇ ಅದ್ದೂರಿಯಾಗಿ ಆಚರಿಸುತ್ತಾ, ಪರಕೀಯರ ಪಾಲಾಗಿದೆ. ಹಳಬರೆಲ್ಲಾ ಮಾಯವಾದರೋ ಅನ್ನೋ ಬ್ರಮೆ ಕಾಡುತ್ತಿದೆ. ಅಂದು ನಾನು ನೋಡಿ ಅನುಬವಿಸಿದ ದಸರಾ ಎಲ್ಲಿ ಹೋಯಿತು ಅಂತ ಇಂದಿಗೂ ಹುಡುಕುತ್ತಾ, ಆ ದಿನಗಳ ಮೆಲುಕು ಹಾಕುತ್ತಾ ಇದ್ದೀನಿ…

(ಚಿತ್ರಸೆಲೆ: karnatakatourism.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: