ಪಂಪ ಕವಿಯ ‘ಆದಿಪುರಾಣ’ ಕಾವ್ಯದಲ್ಲಿನ ಪದ್ಯಗಳ ಓದು – ಕಂತು-2

– ಸಿ.ಪಿ.ನಾಗರಾಜ.

(ಕ್ರಿ.ಶ.942 ರಲ್ಲಿ ರಚನೆಗೊಂಡ ಪಂಪ ಕವಿಯ ‘ಆದಿ ಪುರಾಣ’ ಕಾವ್ಯದ ಮೊದಲನೆಯ ಆಶ್ವಾಸದ 17 ನೆಯ ಪದ್ಯ.)

*** ಪದ್ಯ ***

ಮೃದುಪದಗತಿಯಿಂ ರಸಭಾ
ವದ ಪೆರ್ಚಿಂ ಪಣ್ಯವನಿತೆವೋಲ್ ಕೃತಿ ಸೌಂದ
ರ್ಯದ ಚಾತುರ್ಯದ ಕಣಿಯೆನೆ
ವಿದಗ್ಧಬುಧಜನದ ಮನಮನಲೆಯಲೆವೇಡಾ.

ಅನ್ವಯಾನುಸಾರ ಓದು

ಕೃತಿ ಪಣ್ಯವನಿತೆವೋಲ್;
ಮೃದುಪದಗತಿಯಿಮ್ ರಸಭಾವದ ಪೆರ್ಚಿಮ್;
ಸೌಂದರ್ಯದ ಚಾತುರ್ಯದ ಕಣಿಯೆನೆ;
ವಿದಗ್ಧಬುಧಜನದ ಮನಮನ್ ಅಲೆಯಲೆವೇಡಾ.

ಪದ ವಿಂಗಡಣೆ ಮತ್ತು ತಿರುಳು

ಕೃತಿ=ಕಾವ್ಯ; ಪಣ್ಯ=ಮಾರಾಟ/ವಿಕ್ರಯ; ವನಿತೆ=ಹೆಂಗಸು; ಪಣ್ಯವನಿತೆ=ವಿಲಾಸಿನಿ/ಸೂಳೆ; ವೋಲ್=ಅಂತೆ/ಆ ರೀತಿಯಲ್ಲಿ;

ಕೃತಿ ಪಣ್ಯವನಿತೆವೋಲ್=ಕಾವ್ಯವು ವಿಲಾಸಿನಿಯಂತೆ ; ಮೃದು=ಕೋಮಲವಾದ/ಇಂಪಾದ;

ಪದ=ಪಾದ/ಹೆಜ್ಜೆ/ಶಬ್ದ/ನುಡಿ/ನಿಲುವು; ಗತಿ+ಇಮ್; ಗತಿ=ನಡಿಗೆ/ಗಮನ; ಇಮ್=ಇಂದ;

ಮೃದುಪದಗತಿಯಿಮ್=ಈ ನುಡಿಗಳು ವಿಲಾಸಿನಿಯ ನಾಟ್ಯ ಪ್ರದರ್‍ಶನದ ಹಾವಬಾವಕ್ಕೂ ಮತ್ತು ಕಾವ್ಯ ರಚನೆಯ ಪ್ರಕ್ರಿಯೆಗೂ ಅನ್ವಯವಾಗುತ್ತವೆ; 1. ವಿಲಾಸಿನಿಯು ರಂಗ ಮಂಟಪದಲ್ಲಿ ಸಂಗೀತ ಮತ್ತು ವಾದ್ಯಗಳ ನಾದಕ್ಕೆ ಅನುಗುಣವಾಗಿ ಇಡುತ್ತಿರುವ ಕೋಮಲವಾದ ಹೆಜ್ಜೆಗಳ ನಡಿಗೆಯಿಂದ; 2.ಇಂಪಾದ ಶಬ್ದಗಳ ನೆಯ್ಗೆಯ ಪದರಚನೆ, ವಾಕ್ಯರಚನೆ ಮತ್ತು ತಿರುಳಿನ ಕಲಾತ್ಮಕವಾದ ಜೋಡಣೆಯಿಂದ;

ರಸ=ರಂಗದಲ್ಲಿ ಪ್ರದರ್‍ಶನಗೊಳ್ಳುತ್ತಿರುವ ನಾಟ್ಯವನ್ನು ನೋಡುತ್ತಿರುವಾಗ ಇಲ್ಲವೇ ಕಾವ್ಯವನ್ನು ಓದುತ್ತಿರುವಾಗ/ಕೇಳುತ್ತಿರುವಾಗ ವ್ಯಕ್ತಿಗಳ ಮನದಲ್ಲಿ ಉಂಟಾಗುವ ಸಂವೇದನೆ. ಈ ಬಗೆಯ ಸಂವೇದನೆಯನ್ನು ಆಲಂಕಾರಿಕರು ‘ರಸ’ ವೆಂದು ಕರೆದು, “ಶ್ರುಂಗಾರ-ಹಾಸ್ಯ-ಕರುಣೆ-ರೌದ್ರ-ವೀರ-ಬಯಾನಕ-ಬೀಬತ್ಸ-ಅದ್ಬುತ-ಶಾಂತ” ಎಂಬ ಒಂಬತ್ತು ಬಗೆಯ ನವರಸಗಳನ್ನು ಹೆಸರಿಸಿದ್ದಾರೆ; ಭಾವ=ವ್ಯಕ್ತಿಯ ಮನದಲ್ಲಿ ಉಂಟಾಗುವ ಕಲ್ಪನೆ ಮತ್ತು ಚಿಂತನೆಯ ಒಳಮಿಡಿತಗಳು;

ರಸಭಾವ=ನವರಸಗಳ ಸಂವೇದನೆ; ಪೆರ್ಚು+ಇಮ್; ಪೆರ್ಚು=ಹೆಚ್ಚಳ;

ರಸಭಾವದ ಪೆರ್ಚಿಮ್=1. ವಿಲಾಸಿನಿಯ ಕಲಾತ್ಮಕವಾದ ನಾಟ್ಯವನ್ನು ನೋಡುತ್ತಿರುವ ವ್ಯಕ್ತಿಗಳ ಮನದಲ್ಲಿ ಉದ್ದೀಪನಗೊಂಡ ಸಂವೇದನೆಯ ಹೆಚ್ಚಳದಿಂದ; 2. ಕಾವ್ಯದ ಓದುಗರ / ಕೇಳುಗರ ಮನದಲ್ಲಿ ಉದ್ದೀಪನಗೊಂಡ ಸಂವೇದನೆಯ ಹೆಚ್ಚಳದಿಂದ;

ಸೌಂದರ್ಯ=ಚೆಲುವು/ಅಂದ; ಚಾತುರ್ಯ=ಕುಶಲತೆ/ಜಾಣತನ; ಕಣಿ+ಎನೆ; ಕಣಿ=ಗಣಿ/ಆಕರ/ಉತ್ಪತ್ತಿಯ ನೆಲೆ; ಎನೆ=ಎನ್ನುವಂತೆ;

ಸೌಂದರ್ಯದ ಚಾತುರ್ಯದ ಕಣಿಯೆನೆ=1.ಅಂದಚೆಂದದ ಮಯ್ ಮಾಟ ಮತ್ತು ನಾಟ್ಯಕಲೆಯ ಪರಿಣತಿಯ ಗಣಿಯೆನ್ನುವಂತೆ ವಿಲಾಸಿನಿಯಿದ್ದಾಳೆ 2. ನುಡಿಯ ಸೊಬಗು, ಅರಿವು ಹಾಗೂ ಆನಂದದ ಆಕರವೆನ್ನುವಂತೆ ಕಾವ್ಯವಿದೆ;

ವಿದಗ್ಧ=ಪಾಂಡಿತ್ಯ/ಜ್ನಾನ; ಬುಧ=ವಿದ್ವಾಂಸ/ಪಂಡಿತ/ತಿಳುವಳಿಕೆಯಿಂದ ಕೂಡಿದ; ವಿದಗ್ಧಬುಧಜನ=ಕಲೆ ಸಂಗೀತ ಸಾಹಿತ್ಯದಲ್ಲಿ ಅಬಿರುಚಿಯುಳ್ಳವರು; ಮನಮ್+ಅನ್; ಮನ=ಮನಸ್ಸು; ಅಲೆ=ಸಂಚರಿಸು/ಕಾಡು/ಸೋಲಿಸು; ಅಲೆಯಲೆವೇಡಾ=ಸೋಲಿಸದೇ ಬಿಡುವುದೇ;

ವಿದಗ್ಧಬುಧಜನದ ಮನಮನ್ ಅಲೆಯಲೆವೇಡಾ=ಕಲಾ ರಸಿಕರಾದ ಮತ್ತು ಕಾವ್ಯ ಸಹ್ರುದಯರಾದ ವ್ಯಕ್ತಿಗಳ ಮನಸ್ಸನ್ನು ತನ್ನತ್ತ ಸೆಳೆಯದೇ ಬಿಡುವುದೇ; ಅಂದರೆ ವಿಲಾಸವತಿಯ ನಾಟ್ಯದ ಸೊಬಗು ಹೇಗೆ ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತದೆಯೋ ಅಂತೆಯೇ ಕಾವ್ಯದ ನುಡಿರಚನೆ ಮತ್ತು ರಸಬಾವಗಳು ಸಹ್ರುದಯರ ಮನಸ್ಸಿಗೆ ಅರಿವು ಮತ್ತು ಆನಂದವನ್ನು ನೀಡುತ್ತವೆ;

ಸಹ್ರುದಯ’ ಎಂದರೆ ಕವಿಗೆ ಸಮಾನವಾದ ಹ್ರುದಯವುಳ್ಳವನು. ಕವಿಯು ಕಾವ್ಯರಚನೆಯಲ್ಲಿ ತೊಡಗಿದಾಗ ಕವಿಯ ಮನಸ್ಸು ಹೇಗೆ ಕಾವ್ಯಲೋಕದಲ್ಲಿಯೇ ತಲ್ಲೀನವಾಗಿರುತ್ತದೆಯೋ ಅಂತೆಯೇ ಕಾವ್ಯವನ್ನು ಓದುತ್ತಿರುವಾಗ/ಕೇಳುತ್ತಿರುವಾಗ ಕಾವ್ಯಲೋಕದಲ್ಲಿ ತಲ್ಲೀನನಾಗುವ ವ್ಯಕ್ತಿ;

ಈ ಪದ್ಯದಲ್ಲಿ ಕಾವ್ಯದ ಸ್ವರೂಪ ಮತ್ತು ಕಲಾತ್ಮಕವಾದ ಕಾವ್ಯದ ಓದುವಿಕೆ ಇಲ್ಲವೇ ಕೇಳುವಿಕೆಯಿಂದ ಉಂಟಾಗುವ ಪರಿಣಾಮಗಳನ್ನು ಸುಂದರಿಯೂ ನಾಟ್ಯಕಲಾವಿದೆಯೂ ಆದ ಪಣ್ಯವನಿತೆಯ ರೂಪ ಮತ್ತು ಕಲಾ ಪ್ರದರ್‍ಶನದ ಪ್ರಕ್ರಿಯೆಗೆ ಹೋಲಿಸಿ ಬಣ್ಣಿಸಲಾಗಿದೆ.

ಇಂಡಿಯಾ ದೇಶದ ಪ್ರಾಚೀನ ಸಮಾಜದಲ್ಲಿ ಪಣ್ಯವನಿತೆಯರಿಗೆ ಸಾಮಾಜಿಕ ಮನ್ನಣೆಯಿತ್ತು. ಸಂಗೀತ ಮತ್ತು ನಾಟ್ಯಕಲೆಯಲ್ಲಿ ಅಪಾರವಾದ ಪರಿಣತಿಯನ್ನು ಪಡೆದುಕೊಂಡಿದ್ದ ಪಣ್ಯವನಿತೆಯರು ರಾಜನ ಒಡ್ಡೋಲಗದಲ್ಲಿ ರಾಜನರ್‍ತಕಿಯರಾಗಿ ಮತ್ತು ದೇವಾಲಯಗಳಲ್ಲಿ ದೇವನರ್‍ತಕಿಯರಾಗಿ ಸೇವೆ ಸಲ್ಲಿಸುತ್ತಿದ್ದರು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: