ಮುಂಜಾವ ಮುಸುಕಿನ ಮುದ್ದಾಟ

– ರತೀಶ ರತ್ನಾಕರ.

IBR-1113189

ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು
ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು|
ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ,
ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ|
ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ ಇಲ್ಲ।

ಎದೆಯವುಚಿ ಮಲಗಿರುವ ಮಡದಿಗಿದೋ ಮಂಪರು
ನಿದಿರೆ ಅವಳಿಗೆ ಜೋರು ಜೊತೆಯಾಗಿ ನಾನಿದ್ದರು|
ಎದೆಬಡಿತ ಜೋಗುಳ, ಎನ್ನೆದೆಯೆ ತೊಟ್ಟಿಲು
ನಾ ಉಸಿರಾಟ ನಡೆಸುತಿರೆ ನಿದಿರಮ್ಮನ ಮಡಿಲು|
ಬದುಕುವ ಬಯಕೆಯು ಎಂದೆಂದಿಗೂ ಹೀಗೆ… ಕೊನೆಯೇ ಇಲ್ಲ।

ತಪ್ಪಿಕೊಳ್ಳುವ ತವಕ ಚುಚ್ಚುವ ಬೆಳಕನ್ನು
ಹುದುಗಿದಳು ನನ್ನೊಳಗೆ ಬಿಗಿದಪ್ಪಿ ಮಯ್ಯನ್ನು|
ಬಾಳ ಹಾಸಿಗೆ ಮೇಲೆ, ಒಲವಿನ ಹೊದಿಕೆಯಲಿ
ಜೋಡಿಯಿವೆ ಮಯ್ ಬಿಸಿಯ ಬೆಚ್ಚನೆಯ ಗೂಡಿನಲಿ|
ಇದ ನೋಡಿ ಕರುಬುವ ಮೂಡಣದವ…. ಉರಿಯುತಿಹ ಮೆಲ್ಲ।

ಮೂಡಣದ ದೊರೆಯುರಿದು ಮೇಲೇರುತಿಹನು
ವಾಡಿಕೆಯ ಗೆಯ್ಮೆಯ ನೆನೆಸುತಿಹನವನು|
ಹಗಲ ಹೊರೆಯನು ಹೊರೆದು, ಹೊಟ್ಟೆ ಪಾಡಿಗೆ ದುಡಿದು
ಎದುರು ನೋಡುವೆ ಬೆಳಗ ಮರಳಿ ಇರುಳನು ಕಳೆದು|
ಮುಂಜಾವ ಮುಸುಕಿನ ಮುದ್ದಾಟಕೆ… ಸೋಲದವರಿಲ್ಲ ।

(ಚಿತ್ರ: smashmaterials.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: