ಕಿರುಬರಹ: ಇಳಿವಯಸ್ಸಿನ ಯಶೋಗಾತೆ
“ಲೇ ರಾಜಿ ವಯಸ್ಸು ದೇಹಕ್ಕಾಗಿದೆ ಅಶ್ಟೇ, ಈ ವಯಸ್ಸು ಅನ್ನೊದು ಸಂಕ್ಯೆ ಅಶ್ಟೆ. ಮಕ್ಕಳು ಅಮೇರಿಕಾದಲ್ಲಿ ಇದಾರೆ ಅನ್ನೋ ಚಿಂತೆ ಬಿಡು, ನಾವು ಮನೆಯಲ್ಲಿ ದಿನವೂ ಹೇಗೆ ಬದುಕಬೇಕು ಅನ್ನೊದರ ಬಗ್ಗೆ ಗಮನ ಕೊಡು ಅಶ್ಟೇ”. “ಅಲ್ರೀ ಈ ಹತ್ತು ಗುಂಟೆ ಜಾಗದೊಳಗಿನ ಒಂಟಿ ಮನೆ ಇತ್ತೀಚಿಗೆ ಯಾಕೋ ಬೂತ ಬಂಗಲೆ ತರ ಅನಿಸ್ತಾ ಇದೆ, ಈ ಮನೆಯೊಳಗೆ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರ ಓಡಾಟವಿಲ್ಲ, ಮನೆ ನಂದಗೋಕುಲ ಅನ್ನೋ ಹೆಸರಿಗೆ ಅಪವಾದವಾಗಿದೆ. ಅಶ್ಟಕ್ಕೂ ಮಕ್ಕಳಿಬ್ರು ಯಾಕೆ ಇತ್ತೀಚಿಗೆ ಪೋನೆ ಮಾಡ್ತಾ ಇಲ್ಲ? ನಮಗೂ ಈ ಇಳಿ ವಯಸ್ಸಲ್ಲಿ ಮನೆ ಕೆಲಸದಾಕೆ ಶಿವಮ್ಮನೆ ನಮ್ಮ ಬಂದು ಬಳಗ ಎಲ್ಲ ಆಗಿದ್ದಾಳೆ” ಎಂದು ಕೊರಗು ವ್ಯಕ್ತಪಡಿಸಿದರು ರಾಜಮ್ಮ. ಗಂಡ ಪರಮೇಶ್ವರ ಹೆಂಡತಿಯನ್ನು ಸಂತೈಸುತ್ತ “ನೀನು ಮಕ್ಕಳ ಚಿಂತೆ ಬಿಡು, ಎದ್ದು ಸ್ನಾನ ಮುಗಿಸಿ ಗೀತಾ ಪಾರಾಯಣ ಮಾಡು ಅಶ್ಟರಲ್ಲಿ ನಾನು ಜಟ್ ಪಟ್ ಅಂತ ಅವಲಕ್ಕಿ ಉಪ್ಪಿಟ್ಟು ಮಾಡಿ ಬಿಡ್ತೀನಿ” ಎನ್ನುತ್ತಾ ಅಡುಗೆ ಮನೆ ಕಡೆಗೆ ನಡೆದರು.
ರಾಜಮ್ಮನವರು ಸ್ನಾನ ಮಾಡಿ ಗೀತಾ ಪಾರಾಯಣ ಮುಗಿಸುವಶ್ಟರಲ್ಲೆ ಕೆಲಸದಾಕೆ ಶಿವಮ್ಮ ಬಂದು ಪಾತ್ರೆ ತೊಳೆಯುತ್ತಿದ್ದಳು, ಪರಮೇಶ್ವರ ಅವರು ಬಿಸಿ ಬಿಸಿ ಅವಲಕ್ಕಿ ಉಪ್ಪಿಟ್ಟು ಮಾಡಿ ತಂದು ರಾಜಮ್ಮ ಅವರಿಗೆ ಕೊಡುತ್ತ “ನೋಡು ರಾಜಿ ಈ ನಳಮಹಾರಾಜನ ನಳಪಾಕ ತಿಂದು ಹೇಗೆ ಗುಂಡಗುಂಡಗೆ ಇದಿಯಾ” ಎಂದು ಚೇಡಿಸಿದರು. ಇದಕ್ಕೆ ನಸುನಕ್ಕು ರಾಜಿ “ಅಲ್ಲರೀ ನೀವು ನಿವ್ರುತ್ತಿ ಹೊಂದಿದ ಮೇಲೆ ಪಾಕಶಾಲೆಯ ನಳಮಹಾರಾಜರಾಗಿದ್ದೀರೀ, ನೀವು ಕೆಲಸಕ್ಕೆ ಹೋಗುವಾಗ ನಾನು ಮಾಡಿಕೊಟ್ಟ ರುಚಿರುಚಿಯಾದ ಸ್ವಾದಿಶ್ಟ ಊಟ ತಿಂದು, ಈ ಇಳಿ ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿದ್ದೀರಿ” ಎಂದು ಗಂಡನ ಮಾತಿಗೆ ಚಾಟಿ ಬೀಸಿದರು. ಇಬ್ಬರೂ ಬಿಸಿ ಬಿಸಿ ಕಾಪಿ ಹೀರುತ್ತಾ, ಕೊಂಚ ಹೊತ್ತು ಲೋಕಾಬಿರಾಮವಾಗಿ ಹರಟಿ ನಂತರ ಪರಮೇಶ್ವರ ಅವರು ತಮ್ಮ ಗೆಳೆಯರ ಪಟಾಲಂ ಜೊತೆ ಹರಟಲು ಮನೆಯ ಹತ್ತಿರದ ಉದ್ಯಾನವನಕ್ಕೆ ತೆರಳಿದರು.
ಶಿವಮ್ಮ ಮನೆ ಕೆಲಸ ಮಾಡಿ ಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮನೆಯ ಹಾಲಿನಲ್ಲಿ ಕುಳಿತಾಗ ಯಜಮಾನಿ ರಾಜಮ್ಮ ಶಿವಮ್ಮನನ್ನು ಮಾತಿಗೆ ಎಳೆದರು. “ನೋಡು ಶಿವಮ್ಮ ನಾವು ಹೆತ್ತ ಮಕ್ಕಳು ನಮ್ಮ ಇಳಿ ವಯಸ್ಸಿನಲ್ಲಿ ನಮ್ಮ ಜೊತೆಗೆ ಇಲ್ಲ, ಅವರೆಲ್ಲ ಅಮೇರಿಕಾದಲ್ಲಿ ಬದುಕು ಕಟ್ಟಿಕೊಳ್ಳಲು ನೆಲೆಸಿದ್ದಾರೆ. ಇತ್ತೀಚಿಗಂತೂ ಮಗ, ಸೊಸೆ, ಮೊಮ್ಮಕ್ಕಳು ಪೋನ್ ಮಾಡಿ ಮಾತನಾಡಿಸುವುದನ್ನೂ ಬಿಟ್ಟಿದ್ದಾರೆ. ಬಾರತಕ್ಕೆ ಬಂದು ನಮ್ಮನ್ನು ನೋಡುವುದಂತು ಕನಸಿನ ಮಾತು. ಈ ಇಳಿ ವಯಸ್ಸಿನಲ್ಲಿ ನನಗೆ ಅವರು, ಅವರಿಗೆ ನಾನು ಎಂದು ಗಂಡ ಹೆಂಡತಿ ಇಬ್ಬರೂ ಹೊಂದಾಣಿಕೆ ಜೀವನ ಮಾಡಿಕೊಂಡಿರೋದರಿಂದ ನಮ್ಮ ಈ ಮುಸ್ಸಂಜೆ ಬದುಕಿನಲ್ಲೂ ಒಂದಿಶ್ಟು ಸಂತೋಶ ಉಳಿದುಕೊಂಡಿದೆ. ಇಂತ ಬಾಗ್ಯಕ್ಕೆ ಮಕ್ಕಳು ಯಾಕ್ ಬೇಕು ಶಿವಮ್ಮ” ಎಂದು ರಾಜಮ್ಮ ಪ್ರಶ್ನಾರ‍್ತಕವಾಗಿ ಆಕೆಯನ್ನು ನೋಡಿದರು. ರಾಜಕ್ಕ ನೀವು ಸುಮ್ಸುಮ್ನೆ ಬೇಸರ ಮಾಡ್ಕೋಬೇಡಿ, ಎಲ್ಲರ ಮನೆಲೂ ದ್ವಾಸೆ ತೂತೆ. ಇಶ್ಟಕ್ಕೂ ಮಕ್ಕಳು ಬೆಳಿಯಗಂಟ ನಮ್ಮಕ್ಕಳು, ರೆಕ್ಕೆ ಬಲ್ತು ತಾವೆ ಹಾರಂಗಾದ್ಮೇಲೆ ಯಾರ ಹಂಗು? ಅಲ್ವೇ, ಎಂದು ಮಾರ‍್ಮಿಕವಾಗಿ ನುಡಿದಳು. ಮುಂದುವರಿದು “ನಮ್ಮ ಸೊಸೆಗೆ ನೋಡಿ, ಮದ್ವೆ ಆಗಿ ಹದಿನೈದು ವರ‍್ಶ ಆದ್ರೂ ಅವಳ ಹೊಟ್ಟೆಲಿ ಒಂದು ಕೂಸು ಅಂತ ಆ ದ್ಯಾವ್ರು ಕೊಡ್ಲಿಲ್ಲ. ಈಗ ಮಕ್ಕಳು ವಿಚಾರನೆ ಮರ‍್ತು ಅಂಗನವಾಡಿ ಇಸ್ಕೂಲ್ಗೆ ಟೀಚರ್ ಆಗಿ ಸೇರ‍್ಕೊಂಡವಳೆ. ಆ ಮಕ್ಕಳನ್ನೆ ಬಲು ಪ್ರೀತಿ ಮಾಡ್ತ, ಅವರ ಜೊತೆಗೆ ಆಟವಾಡ್ತ ತನ್ನ ನೋವು ಮರೀತಾಳೆ. ಈಗ ಅದರಲ್ಲೆ ಸುಕ ಕಾಣ್ತಾ ಇದಾಳೆ” ಎಂದಾಗ ರಾಜಮ್ಮನ ಮನದಲ್ಲಿ ಒಂದು ನೂತನ ಆಲೋಚನೆ ಮನದಲ್ಲಿ ಮಿಂಚಿನಂತೆ ಪಳಗುಟ್ಟಿತು.
ಪರಮೇಶ್ವರ ಅವರು ಮದ್ಯಾಹ್ನದ ಊಟ ಮುಗಿಸಿ ಹಾಲಿನ ಸೋಪಾದ ಮೇಲೆ ಕೂತಿದ್ದಾಗ ರಾಜಮ್ಮ ಅವರ ಕಾಲ ಬಳಿ ಕುಳಿತು ಕಾಲು ಒತ್ತುತ್ತಾ “ರೀ ನಾವ್ಯಾಕೆ ಒಂದು ಟ್ರಸ್ಟ್ ಮಾಡಿ ಸರ‍್ಕಾರಿ ಅನುಮತಿಯೊಂದಿಗೆ ಅನಾತ ಮಕ್ಕಳ ಆಶ್ರಮ ತೆಗೆದು ಮಕ್ಕಳ ಸೇವೆಯಲ್ಲಿ ತೊಡಗಿಕೊಳ್ಳಬಾರ‍್ದು?” ಎಂದು ತಮ್ಮೊಳಗೆ ಮಿಂಚಿ ಹೊದ ಆಲೋಚನೆಯನ್ನು ಹೊರಹಾಕಿದರು. “ರಾಜಿ ನಿನ್ನ ಆಲೋಚನೆಯೇನೋ ಸರಿ, ಆದ್ರೆ ಅದಕ್ಕೆ ನಮ್ಮದೆ ಸ್ವಂತ ಕಟ್ಟಡ ಬೇಕು, ಸರ‍್ಕಾರಿ ಅನುಮತಿ ಬೇಕು, ಜೊತೆಗೆ ಅನಾತಾಶ್ರಮ ನಡೆಸಕ್ಕೆ ಸಾಕಶ್ಟು ಹಣ ಬೇಕು. ಇದರ ಜೊತೆಗೆ ಜನ ಸೇವೆ ಮಾಡೋ ಮನಸ್ಸೂ ಬೇಕು ಅದೆಲ್ಲ ಅಶ್ಟು ಸುಲಬದ ಮಾತಲ್ಲ ರಾಜಿ” ಎಂದು ಉದ್ಗರಿಸಿದರು. “ಅಲ್ರಿ ಸ್ವಂತ ಕಟ್ಟಡಕ್ಕೆ ನಮ್ಮದೇ ಮನೆ ಇದೆ, ಪ್ರಾರಂಬಿಕ ಹಣಕ್ಕೆ ನಾವು ಉಳಿಸಿಟ್ಟ ನಿವ್ರುತ್ತಿಯ ಹಣವಿದೆ. ಸೇವೆ ಮಾಡಲಿಕ್ಕೆ ನಾವಿಬ್ರು ಈಗ ಕಾಲಿನೇ ಇದೀವಿ, ಅನಾತಾಶ್ರಮ ಪ್ರಾರಂಬಿಸೋಕೆ ಮತ್ತೇನ್ಬೇಕು ಹೇಳಿ? ಮುಂದೆ ಅದನ್ನು ನಡೆಸೋಕೆ ನಮ್ಮ ಗೆಳೆಯರು, ಬಂದುಬಳಗದಿಂದ ದಾನ ಪಡೆಯುವ ಪ್ರಯತ್ನ ಮಾಡಿದರಾಯ್ತು” ಎಂದಾಗ ಪರಮೇಶ್ವರ ಅವರು ನಿರುತ್ತರರಾದರು.
ಪರಮೇಶ್ವರ ಹಾಗೂ ರಾಜಮ್ಮನವರ ಸತತ ಪ್ರಯತ್ನದಿಂದ ಚಾರಿಟೇಬಲ್ ಟ್ರಸ್ಟನ್ನು ಪ್ರಾರಂಬಿಸಿ, ಸರ‍್ಕಾರದ ಅನುಮತಿಯೊಂದಿಗೆ ತಮ್ಮ ಮನೆಯನ್ನು ಅನಾತಾಶ್ರಮವಾಗಿ ಪರಿವರ‍್ತಿಸಿ ಅನಾತ ಮಕ್ಕಳನ್ನು ಹುಡುಕಿ ತಂದು, ತಮ್ಮ ಆಶ್ರಮದಲ್ಲಿ ಇರಿಸಿಕೊಂಡು ಸಾಕ ತೊಡಗಿದರು. ಮೊದಮೊದಲಿಗೆ ಬಂದುಬಾಂದವರು, ಗೆಳೆಯರು ಮೂದಲಿಸಿದರಾದರೂ ಇವರಿಬ್ಬರ ಈ ಇಳಿ ವಯಸ್ಸಿನ ಮಾನವೀಯತೆ ಮತ್ತು ಸೇವಾ ಮನೋಬಾವ ಕಂಡು ಕ್ರಮೇಣ ಹೊಗಳಲು ಪ್ರಾರಂಬಿಸಿದರು. ಯಾವುದೇ ಸದುದ್ದೇಶಕ್ಕೆ ಹಣ ಸಹಾಯ ತಾನಾಗಿಯೇ ಒದಗಿ ಬರುತ್ತದೆ ಎಂಬುದಕ್ಕೆ ರಾಜಮ್ಮ ಮತ್ತು ಪರಮೇಶ್ವರ ಸಾಕ್ಶಿಯಾದರು.
ಇದೀಗ ಇವರಿಬ್ಬರು ಹುಟ್ಟು ಹಾಕಿದ ಟ್ರಸ್ಟ್ಗೆ ದಶಮಾನೋತ್ಸವದ ಸಂಬ್ರಮ, ಇಲ್ಲಿ ಸುಮಾರು ನೂರು ಮಕ್ಕಳು ಪಾಲನೆ ಪೋಶಣೆಗೆ ಒಳಗಾಗಿದ್ದು, ಎಶ್ಟೋ ಮಕ್ಕಳು ಕಲಿತು ಸ್ವತಂತ್ರ ಉದ್ಯೋಗಿಗಳಾಗಿ ಜೀವನ ಕಟ್ಟಿಕೊಂಡಿದ್ದಾರೆ. ರಾಜಮ್ಮ ಹಾಗೂ ಪರಮೇಶ್ವರ ಇಬ್ಬರೂ ಈ ಇಳಿ ವಯಸ್ಸಿನಲ್ಲಿ ಅತಿ ಸಂತಸದಿಂದ ಇದ್ದಾರೆ. ಅನಾತ ಮಕ್ಕಳಲ್ಲೆ ತಮ್ಮ ಮಕ್ಕಳನ್ನು ಕಂಡು ಸಾರ‍್ತಕತೆ ಹೊಂದುತ್ತಿದ್ದಾರೆ. ಈ ಅನಾತಾಶ್ರಮದಲ್ಲಿ ಬೆಳೆದು ಸ್ವತಂತ್ರ ಜೀವನ ಕಟ್ಟಿಕೊಂಡವರು ಇವರಿಗೆ ಚಿರರುಣಿಯಾಗಿದ್ದಾರೆ. ಇವರನ್ನು ಸಾಕಿದ ಟ್ರಸ್ಟಿನ ಮೇಲೆ ಅಬಿಮಾನ ಹೊಂದಿದ್ದಾರೆ. ಇಂದು ರಾಜಮ್ಮ, ಪರಮೇಶ್ವರರಿಗೆ ಜ್ವರವೆಂದರೂ ನೂರಾರು ಜನ ಓಡಿ ಬಂದು ಆರೈಕೆ ಮಾಡುತ್ತಾರೆ. ಅವರ ಇಳಿ ವಯಸ್ಸಿನ ಜೀವನದ ಮೇಲೆ ನಿಗಾ ಇಡುತ್ತಾರೆ, ಹೆಚ್ಚು ಕಾಳಜಿ ವಹಿಸುತ್ತಾರೆ. ಇಬ್ಬರೂ ಮುಸ್ಸಂಜೆಯಲಿ ತಮ್ಮ ಟ್ರಸ್ಟಿನ ಉದ್ಯಾನವನದ ತೂಗುಯ್ಯಾಲೆಯಲ್ಲಿ ಕುಳಿತು ಪರಸ್ಪರ ಮುಕ ನೋಡಿ ನಗುತ್ತಾ, ರಾಜಮ್ಮನವರು “ನೋಡ್ರಿ ನಾವು ಹೆತ್ತ ಮಕ್ಕಳು ಈ ಇಳಿ ವಯಸ್ಸಿನಲ್ಲಿ ನಮ್ಮ ಜೊತೆಗಿಲ್ಲ ಎಂಬ ಕೊರಗು ಈಗ ಇಲ್ಲವೇ ಇಲ್ಲ. ನಮಗೀಗ ಎಶ್ಟೊಂದು ಮಕ್ಕಳು ಪ್ರೀತಿಯಿಂದ ಸೇವೆ ಮಾಡಲು ಹಾತೊರೆಯುತಿದ್ದಾರೆ. ನಮಗೆ ಇಡಿ ಸಮಾಜವೇ ನಮ್ಮ ಕುಟುಂಬ ಎಂದು ಪ್ರೀತಿಸುವ ವಿಶಾಲ ಮನಸ್ಸು ಬೇಕು, ಇತರರ ಮಕ್ಕಳೂ ನಮ್ಮ ಮಕ್ಕಳೇ ಎಂದು ಪ್ರೀತಿಯಿಂದ ಪಾಲನೆ ಮಾಡುವ ಮಾತ್ರು ಹ್ರುದಯ ಬೇಕು, ಆ ಮನೋಬಾವ ನಮ್ಮಿಬ್ಬರಲ್ಲೂ ಇದ್ದಿದ್ದರಿಂದ ನಾವು ಯಶಸ್ವಿಯಾದೆವು. ನಾವು ಸಮಾಜಕ್ಕೆ ಒಳಿತು ಮಾಡಿದರೆ ಪ್ರತಿಯಾಗಿ ಅದು ನಮಗೆ ಒಳಿತು ಮಾಡಿಯೇ ಮಾಡುತ್ತದೆ, ಇಲ್ಲಿ ನಿಸ್ವಾರ‍್ತ ಸೇವಾ ಮನೋಬಾವ ಗೆಲ್ಲುತ್ತದೆ ಅಲ್ವೇನ್ರಿ” ಎಂದು ರಾಜಮ್ಮನವರು ಬಾವುಕರಾಗಿ ನುಡಿದಾಗ, ಗಂಡ ಹೆಂಡತಿ ಇಬ್ಬರಲ್ಲೂ ತಮ್ಮ ಈ ಇಳಿ ವಯಸ್ಸಿನ ಸಾರ‍್ತಕ ಜೀವನದ ಬಗ್ಗೆ ಹ್ರುದಯದಲ್ಲಿ ಅಬಿಮಾನ ತುಂಬಿಕೊಂಡಿತ್ತು. ಇಬ್ಬರ ಕಣ್ಣಲ್ಲೂ ಎರಡು ಹನಿ ಕಂಬನಿ ತೊಟ್ಟಿಕ್ಕಿತು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು