ವಚನ: ನಡೆಯೊಳಗೆ ನುಡಿ ತುಂಬಿ

– .

ವಚನಗಳು, Vachanas

ಮೂಲತಹ ಕಲಬುರಗಿ ಜಿಲ್ಲೆಯ ಜೇವರ‍್ಗಿ ಪಟ್ಟಣದವರಾದ ಶಣ್ಮುಕ ಸ್ವಾಮಿಯವರ ಕಾಲಮಾನ ಕ್ರಿ.ಶ. 1639 ರಿಂದ 1711 ಎಂದು ತಿಳಿದು ಬರುತ್ತದೆ. ಇವರು ಸುಮಾರು ಏಳುನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ‘ಅಕಂಡೇಶ್ವರಾ’ ಎಂಬ ನಾಮಾಂಕಿತದಿಂದ ವಚನಗಳನ್ನು ಪ್ರಕಟಗೊಳಿಸಿದ್ದಾರೆ. ಶಣ್ಮುಕಸ್ವಾಮಿಯವರು ಶರಣ ಪರಂಪರೆಯವರಾಗಿದ್ದು, ತಾವು ನಿತ್ಯ ಕಂಡುಂಡ ವಿಶಯಗಳ ಅನುಬವದ ಆದಾರದ ಮೇಲೆ ವಚನಗಳನ್ನು ರಚಿಸಿದ್ದಾರೆ. ಅವರ ಹಲವು ವಚನಗಳಲ್ಲಿ ಈ ಕೆಳಗಿನ ವಚನವೂ ಒಂದಾಗಿದೆ.

ನಡೆಯೊಳಗೆ ನುಡಿ ತುಂಬಿ
ನುಡಿಯೊಳಗೆ ನಡೆ ತುಂಬಿ
ನಡೆ ನುಡಿ ಎರಡನೂ ಪರಿಪೂರ್ಣ ತುಂಬಿ
ಲಿಂಗವ ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ
ಶುದ್ದ ಚಾರಿತ್ರ‍್ಯವಿಲ್ಲದಿದ್ದರೆ ಮನುಶ್ಯ ಬೌದ್ದಿಕ ವಿಕಾಸ ಹೊಂದಿಯೂ ಪ್ರಯೋಜನವೇನು? ಮನುಶ್ಯ ಎಲ್ಲರಿಗೂ ಒಪ್ಪಿತವಾಗ ಬೇಕಾದರೆ ಆತ ಒಳಗೂ ಹೊರಗೂ ಶುದ್ದ ಚಾರಿತ್ರ‍್ಯವಂತನಾಗಿ ಹೊರಹೊಮ್ಮಬೇಕು. ಈ ಶುದ್ದ ಚಾರಿತ್ರ‍್ಯ ಸಂಸ್ಕಾರದಿಂದ ಮಾತ್ರ ಬರಲು ಸಾದ್ಯ. ನಮ್ಮ ನಡೆಯಂತೆ ಮಾತುಗಳಿರಬೇಕು, ನಾವು ನುಡಿದಂತೆ ನಡೆಯುವ ಚಾರಿತ್ರ‍್ಯವಂತರಾಗಿರಬೇಕು.
ಈ ನಡೆ ಮತ್ತು ನುಡಿ ಎರಡೂ ಪರಿಶುದ್ದವಾಗಿದ್ದು ಒಂದಕ್ಕೊಂದು ಹಾಸುಹೊಕ್ಕಾಗಿ ಪರಿಪೂರ‍್ಣವಾಗಿ ತುಂಬಿ, ಬಕ್ತಿ ಬಾವದ ಪರಾಕಾಶ್ಟೆಯಲಿ ಲಿಂಗವ ದ್ಯಾನಿಸುತ್ತಾ, ಅದರಲಿ ಬೆರೆತು ಹೋಗುವವನೆ ನಿಜವಾದ ಶರಣನಾಗಿದ್ದಾನೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ನಡೆ ನುಡಿ ಪರಿಶುದ್ದವಾಗಿಟ್ಟುಕೊಂಡು ನಡೆಯುವವರು ಬಹಳ ಕಡಿಮೆ. ಪ್ರಾಮಾಣಿಕತೆ ಮರೀಚಿಕೆಯಾಗಿ, ಸ್ವಾರ‍್ತ ಲಾಲಸೆಗಳೆ ಮೇಲುಗೈ ಸಾದಿಸುತ್ತಿರುವ ಈ ಹೊತ್ತಿನಲ್ಲಿ, ಶಣ್ಮುಕ ಸ್ವಾಮಿಯವರ ಮೇಲಿನ ವಚನ ಸುಡು ಬಿಸಿಲ ಮರಳುಗಾಡಿನಲಿ ನಿಡು ಸುಯ್ಯುವ ಬಿಸಿಗಾಳಿಗೆ ಎದುರಾಗಿ, ಚಳಿಗಾಲದ ಮಂಜು ಮುಸುಕಿನ ಚಂದಿರನ ಬೆಳಕಿನಲಿ ಬೀಸುವ ಕುಳಿರ‍್ಗಾಳಿಯಂತೆ ಕಚಗುಳಿಯಿಡುತ್ತದೆ.
(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: