ಕವಿತೆ: ಸುಳ್ಳು
– ವೆಂಕಟೇಶ ಚಾಗಿ.
ಮತ್ತದೇ ಸುಳ್ಳನ್ನು
ನಿಜವೆಂದು ಸಾರುತ್ತಿರುವಿರಿ ಏಕೆ
ಗಾಳಿಯಲ್ಲಿ ತೇಲಿದೊಡನೆ
ನಿಮ್ಮ ಹಸಿ ಸುಳ್ಳಿನ ಸರಕು
ನಿಜವಾದೀತೇ
ಕಿವಿಯೊಳಗೆ ನುಗ್ಗಿದೊಡೆ
ಸುಳ್ಳು ಅಮರವಾದೀತೆ
ಎಲ್ಲವೂ ಸುಳ್ಳೆಂದಮೇಲೆ
ಸುಳ್ಳು ಉಸಿರಾಡುವುದೇ
ಸೂರ‍್ಯನ ಬೆಳಕಿನ ಮುಂದೆ
ಯಾವ ಕತ್ತಲಿಗಿದೆ ಬದುಕು
ತಾನು ಸುಟ್ಟರೂ ಜಗವ ಬೆಳಗಿ
ನಿಜವ ತೋರಿಸುವನಾತ
ಎಲ್ಲಾ ಕತ್ತಲುಗಳು ಕರಗಬೇಕು
ಬದುಕು ಬೆಳಗಬೇಕು
ನಿಮ್ಮ ಸುಳ್ಳಿನ ಸರಕೇ ಮಾಯೆ
ಎಲ್ಲವೂ ಸುಳ್ಳೆಂದಮೇಲೆ
ಸುಳ್ಳು ಉಸಿರಾಡುವುದೇ
ನೆತ್ತರಿನ ಇತಿಹಾಸದೊಳಗಿಳಿದು
ಒಂದಿಶ್ಟು ಅರಿತರಾಯಿತು
ದರ‍್ಮ ದರ‍್ಮಗಳ ಎದೆಯೊಳಗೆ
ಸುಳ್ಳು ತುರುಕಿದವರು ನೀವು
ಸ್ವಾರ‍್ತದ ನಶೆಯೊಳಗೆ
ಸುಳ್ಳನ್ನೇ ಬಿತ್ತಿ ಬೆಳೆಯುವಿರಿ
ಯಾರೋ ಬಲಿಯಾದರು
ಯಾರೋ ಕರಗಿ ಶರಣಾದರು
ಎಲ್ಲವೂ ಸುಳ್ಳೆಂದಮೇಲೆ
ಸುಳ್ಳು ಉಸಿರಾಡುವುದೇ
ಸತ್ಯವೊಂದೇ ಬದುಕಿದರೆ
ಅಂದೇ ಅಜ್ನಾನದ ಮರಣ
ಹೊಸ ಜಗದ ಉದಯ
ಚೇ ಸುಳ್ಳು ಸುಳ್ಳಾಗುವುದು
ಅದೆಶ್ಟು ಕಶ್ಟ ಅದೇಕೆ ಇಶ್ಟ
ಎಲ್ಲವೂ ಅರ‍್ತವಾಗುವುದು
ಎಲ್ಲವೂ ಸುಳ್ಳಾದಮೇಲೆ
ನಿಜ, ಎದೆಗಿಳಿದ ಮೇಲೆ
ಇತ್ತೀಚಿನ ಅನಿಸಿಕೆಗಳು