ಸ್ಟೀವ್ ಜಾಬ್ಸ್ ಹೇಳಿದ ಆ ಮೂರು ಕತೆಗಳು

–  ಪ್ರಕಾಶ್ ಮಲೆಬೆಟ್ಟು.

ಆಪಲ್ ಐಪೋನ್ ಬಗೆಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ? ಈ ಕಂಪೆನಿಯ ಜನಕರಲ್ಲಿ ಒಬ್ಬರಾದ ಸ್ಟೀವ್ ಜಾಬ್ ಬಗ್ಗೆ ಕೂಡ ಅರಿಯದವರು ಉದ್ಯಮ ಕ್ಶೇತ್ರದಲ್ಲಿ ವಿರಳ. ಅವರು 2005 ರಲ್ಲಿ ಸ್ಟನ್ ಪೋರ‍್ಡ್ ವಿಶ್ವ ವಿದ್ಯಾನಿಲಯದ ವಿದ್ಯಾರ‍್ತಿಗಳ ಮುಂದೆ ಮಾಡಿದ ಬಾಶಣ ಜಗತ್ತಿನ ಅತ್ಯುತ್ತಮ ಬಾಶಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಅವರ ಬಾಶಣ ಕನ್ನಡ ಸೇರಿದಂತೆ ವಿಶ್ವದ ಅನೇಕ ಬಾಶೆಗಳಲ್ಲಿ ಅನುವಾದಗೊಂಡು ಯುಟ್ಯೂಬ್ ನಲ್ಲಿ ಲಬ್ಯವಿದೆ. ನಾನಿಲ್ಲಿ ಆ ಬಾಶಣದ ಅನುವಾದ ಮಾಡಲು ಹೊರಟಿಲ್ಲ. ಅದರಲ್ಲಿ ಅವರ ಜೀವನದ ಮೂರು ಕತೆಗಳನ್ನು ಹೇಳಿದ್ದಾರೆ. ಹಾಗೆ ನೋಡಲು ಹೋದರೆ ಅದು ಅವರ ಜೀವನದ ಕತೆ ಮಾತ್ರವಲ್ಲ . ಮನುಶ್ಯನ ಜೀವನದ ಪ್ರತಿಬಿಂಬವೇ ಅವರ ಆ ಬಾಶಣ. ಅವರ ಕತೆಗಳಲ್ಲಿ ನನ್ನ ಜೀವನದ ಪ್ರತಿಬಿಂಬ ಕೂಡ ನನಗೆ ಕಂಡು ಬಂದಿದೆ. ಅದನ್ನು ನಿಮ್ಮೊಂದಿಗೆ ಸಂಕ್ಶಿಪ್ತವಾಗಿ ಹಂಚಿಕೊಳ್ಳುತ್ತಿದ್ದೇನೆ.

ಮೊದಲ ಕತೆ – ಜೀವನದ ಚುಕ್ಕೆಗಳ ಸಂಪರ‍್ಕ

ತಮ್ಮ ಮೊದಲ ಕತೆಯಲ್ಲಿ ಅವರು ಜೀವನದ ಚುಕ್ಕೆಗಳ ಸಂಪರ‍್ಕದ ಬಗ್ಗೆ ತಮ್ಮ ಬಾಲ್ಯ ಮತ್ತು ತಾರುಣ್ಯದ ಗಟನೆಗಳ ಮೂಲಕ ವಿವರಿಸುತ್ತಾರೆ. ಜೀವನದ ಚುಕ್ಕೆಗಳನ್ನು ಜೋಡಿಸಿಕೊಂಡು ಬವಿಶ್ಯವನ್ನು ಹುಡುಕಬಾರದು ಬದಲಿಗೆ ಜೀವನದ ಚುಕ್ಕೆಗಳನ್ನು ಹಿಂದಕ್ಕೆ ಜೋಡಿಸಿಕೊಂಡು (ಬೂತಕಾಲಕ್ಕೆ) ನೋಡಬೇಕು. ಆಗ ನಮ್ಮ ಜೀವನದ ಅರ‍್ತ ನಮಗೆ ಸ್ಪಶ್ಟವಾಗುತ್ತ ಹೋಗುತ್ತದೆ. ಇದನ್ನು ನೀವು ಕರ‍್ಮವೆಂದಾದರೂ ಹೇಳಿ, ಹಣೆಬರಹವೆಂದಾದರೂ ಹೇಳಿ! ಆದರೆ ಜೀವನದ ಪರಮ ಸತ್ಯ ಏನೆನಂದರೆ, ನಮ್ಮ ಬಾಳಿನಲ್ಲಿ ನಡೆಯುವ ಪ್ರತಿ ಗಟನೆಗಳು ನಮ್ಮ ಬವಿಶ್ಯವನ್ನು ಬರೆಯುತ್ತ ಸಾಗುತ್ತವೆ. ನಾನು ಅಕೌಂಟಿಂಗ್ ಸಾಪ್ಟ್ ವೇರ್ ಟ್ಯಾಲಿಯನ್ನು ಯಾವತ್ತಿಗೂ ಯಾರ ಬಳಿಯೂ ಕಲಿಯಲಿಲ್ಲ. ಸುಮಾರು 20 ವರುಶಗಳ ಹಿಂದೆ ಬೆಂಗಳೂರಿನ ಸಪ್ನಾ ಬುಕ್ ಹೌಸ್ ನಲ್ಲಿ ಟ್ಯಾಲಿ ಕಲಿಕಾ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದೇನೋ ಮನಸಾಯಿತು. ಅದನ್ನು ಕೊಂಡುಕೊಂಡೆ. ಆಮೇಲೆ ನಾನು ಕೆಲಸ ಮಾಡುವ ಜಾಗದಲ್ಲಿ ಸುಮಾರು ನಾಲ್ಕು ವರುಶಗಳ ಕಾಲ ಕಂಪ್ಯೂಟರೇ ಇರಲಿಲ್ಲ. ಇನ್ನು ಟ್ಯಾಲಿ ಕಲಿಯೋದು ಎಲ್ಲಿಂದ ಬಂತು! ಆಮೇಲೆ ಹೊರದೇಶಕ್ಕೆ ಹೊರಡುವ ಒಂದು ತಿಂಗಳ ಮೊದಲು ಬೆಂಗಳೂರಿನ ಒಂದು ಪೀಟೋಪಕರಣ ಸರಬರಾಜಿನ ಕಚೇರಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಅಲ್ಪ ಸಲ್ಪ ಟ್ಯಾಲಿ ಕಲಿತೆ. ಆದರೆ ಒಂದು ತಿಂಗಳಿನ ಒಳಗೆ ಹೊರದೇಶಕ್ಕೆ ತೆರಳಿದೆ. ಇಲ್ಲೂ ಕೂಡ ಕಂಪ್ಯೂಟರ್ ಇದ್ದರೂ ಟ್ಯಾಲಿ ಇರಲಿಲ್ಲ. ಎಲ್ಲ ಹಸ್ತಚಾಲಿತ ಕೆಲಸವೇ ಇತ್ತು. ಆದರೆ ನನ್ನ ದಣಿ ಟ್ಯಾಲಿ ಸಾಪ್ಟ್ ವೇರ್ ಕರೀದಿ ಮಾಡುತ್ತಾರೆ ಮತ್ತು ನನ್ನ ಬಳಿ ಹೇಳುತ್ತಾರೆ; ಹಿಂದಿನ ಹಲವು ವರುಶಗಳ ಲೆಕ್ಕವನ್ನು ಟ್ಯಾಲಿಗೆ ಹಾಕಬೇಕು ಎಂದು. ಹೀಗಿ ಅಲ್ಲಿ ನನಗೆ ನನ್ನಶ್ಟಕ್ಕೆ ಟ್ಯಾಲಿ ಕಲಿಯುವ ಅವಕಾಶ ದೊರಕಿತು. ಮುಂದೆ ನಾವು ನಮ್ಮ ಸ್ವಂತ ಕಂಪನಿ ಮೊದಲು ಮಾಡಿದಾಗ ನನ್ನ ಈ ಕಲಿಕೆ ನನಗೆ ಉಪಯೋಗಕ್ಕೆ ಬಂದಿತು. ಇಲ್ಲಿ ಆ ಜೀವನದ ಚುಕ್ಕೆ ಟ್ಯಾಲಿ. ಅದೆಶ್ಟೋ ವರುಶಗಳ ಹಿಂದೆ ಆ ಪುಸ್ತಕದಂಗಡಿಯಲ್ಲಿ ಟ್ಯಾಲಿ ಪುಸ್ತಕವನ್ನು ನಾನು ಕರೀದಿಸುವಂತೆ ಮಾಡಿದ್ದೆ ಈ ಜೀವನದ ಚುಕ್ಕೆ ಮತ್ತು ಇವತ್ತು ಹಿಂದೆ ತಿರುಗಿ ನೋಡಿದಾಗ ಆ ಚುಕ್ಕೆಗಳು ಜೋಡಣೆಯಾದದ್ದು ನನಗೆ ಕಂಡುಬರುತ್ತಿದೆ. ಇಂತಹ ಅನೇಕ ಚುಕ್ಕೆಗಳ ಜೋಡಣೆ ನನ್ನ ಜೀವನದಲ್ಲಿ ನಡಿದಿದೆ. ಕಾಲೇಜು ಶಿಕ್ಶಣ ಮುಗಿಸಿ ಮಂಗಳೂರಿನ ಬೀದಿ ಬದಿಯ ಅಂಗಡಿಯವರಿಗೆ ಚಹಾ ಹುಡಿ ಮಾರುವಾಗ ಶುರುವಾದ ಚುಕ್ಕಿ ಇಂದು ಪರದೇಶದಲ್ಲಿ ಸ್ವಂತ ಒಂದು ಉದ್ಯೋಗ ಮಾಡುತ್ತಿರುವಾಗ ಜೋಡಣೆಯಾದದ್ದು ನನಗೆ ಕಾಣಿಸುತ್ತಿದೆ. ನಿಜ ಗೆಳೆಯರೇ ನಮ್ಮ ಜೀವನದ ಪ್ರತಿಕ್ಶಣ ಕೂಡ ನಮ್ಮ ಬವಿಶ್ಯದ ಚುಕ್ಕಿಗಳನ್ನು ಜೋಡಿಸುತ್ತವೆ. ನೀವು ಹಿಂದೆ ತಿರುಗಿ ನೋಡಿದಾಗ ನಮಗದು ಅರ‍್ತವಾಗುತ್ತೆ.

ಎರಡನೇ ಕತೆ – ಸೋಲು ಮತ್ತು ಪ್ರೀತಿ

ಒಂದು ಕಾಲ ಬಂದೊದಗುತ್ತದೆ; ಅವರು ಪ್ರೀತಿಯಿಂದ ಕಟ್ಟಿದ ಸಂಸ್ತೆಯಿಂದಲೇ ಅವರನ್ನು ಹೊರದಬ್ಬುತ್ತಾರೆ. ಆದರೆ ಅವರು ತಮ್ಮ ಕೆಲಸವನ್ನು ಪ್ರೀತಿಸುಂತವರಾಗಿದ್ದರಿಂದ, ಎದೆಗುಂದದೆ ಮತ್ತೊಂದು ಕಂಪನಿಯನ್ನು ಕಟ್ಟಿ ಬೆಳೆಸುತ್ತಾರೆ. ಇತ್ತ ಅವರ ಕನಸಿನ ಕಂಪನಿ ಆಪಲ್ ದಿವಾಳಿಯಾಗುವತ್ತ ಸಾಗುತಿದ್ದರೆ ಅವರು ಕಟ್ಟಿದ ಹೊಸ ಕಂಪನಿಗಳಾದ ನೆಕ್ಸ್ಟ್ ಅಂಡ್ ಪಿಕ್ಸಾರ್ ಲಾಬದತ್ತ ಸಾಗುತ್ತವೆ. ಕಡೆಗೆ ಆಪಲ್ ಕಂಪನಿ ಇವರ ಹೊಸ ಕಂಪನಿಯನ್ನು ಕರೀದಿಸಿ ಸ್ಟೀವ್ ರವರನ್ನು ಮರಳಿ ತಮ್ಮ ಆಪಲ್ ಕಂಪನಿಗೆ ಮುಕ್ಯಸ್ತರನ್ನಾಗಿ ಮಾಡಿ ಕರೆತರುತ್ತಾರೆ. ನೋಡಿ ನಾವು ನಮ್ಮ ಕೆಲಸವನ್ನು ಪ್ರೀತಿಸಿದರೆ ಕಂಡಿತವಾಗಿಯೂ ಯಾವ ಸೋಲಿಗೂ ನಮ್ಮನ್ನು ಕಟ್ಟಿ ಹಾಕಲು ಸಾದ್ಯವಿಲ್ಲ.

ನಾನು ಕೂಡ ಕಂಡದ್ದು ಸೋಲೇ. ನಾವು ಉದ್ಯಮ ಮೊದಲು ಮಾಡಿದಾಗ ಮೊದಲ ತಿಂಗಳಿನಲ್ಲೇ ನಮಗೆ ಎದುರಾದದ್ದು ದೊಡ್ಡ ಸೋಲು. ಹೆಚ್ಚು ಕಮ್ಮಿ ಹತ್ತಿರ ಹತ್ತಿರ ಒಂದು ಕೋಟಿಯನ್ನು ರಾತ್ರೋ ರಾತ್ರಿ ವಂಚಕ ಕಂಪೆನಿಯಿಂದಾಗಿ ನಾವು ಕಳೆದುಕೊಳ್ಳಬೇಕಾಯಿತು. ಆದರೆ ನಮ್ಮ ಕೆಲಸದ ಬಗ್ಗೆ ನಮಗಿರುವ ಪ್ರೀತಿ, ಸಮರ‍್ಪಣೆ ನಮ್ಮನ್ನು ಸೋಲಿನಿಂದ ಮೇಲಕ್ಕೇಳುವಂತೆ ಮಾಡಿತು. ಇಂದು ನಮ್ಮ ಸಂಸ್ತೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರಿದೆ. ಇದೆಲ್ಲವೂ ಕೆಲಸದ ಮೇಲೆ ನಮಗಿರುವ ಆರಾದನಾ ಬಾವ ನಮ್ಮ ಕಟಿಣ ಶ್ರಮದಿಂದ ಸಾದ್ಯವಾಗಿದೆ. ಹಾಗಾಗಿ ನನ್ನ ಜೀವನದ ಅನುಬವದಿಂದ ನಾನು ಹೇಳುತ್ತೇನೆ; ನಮ್ಮ ಕೆಲಸವವನ್ನು ನಾವು ಪ್ರೀತಿಸಿದರೆ , ಯಾವ ಸೋಲಿಗೂ ಕೂಡ ನಮ್ಮನ್ನು ಅಲುಗಾಡಿಸಲು ಸಾದ್ಯವಿಲ್ಲ.

ಮೂರನೆಯ ಕತೆ – ಸಾವು

ದುರದ್ರುಶ್ಟವಶಾತ್ ಸ್ಟೀವ್ ಜಾಬ್ ಇಂದು ಈ ಪ್ರಪಂಚದಲ್ಲಿಲ್ಲ. ಆದರೆ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. 2004 ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸ್ಟೀವ್ ಗೆ ವೈದ್ಯರು ನೀವಿನ್ನು ಕೆಲವೇ ತಿಂಗಳ ಅತಿತಿಯೆಂದು ಹೇಳಿರುತ್ತಾರೆ. ಸ್ಟೀವ್ ಜಾಬ್ ತಮ್ಮ ಜಗತ್ ಪ್ರಸಿದ್ದ ಬಾಶಣ ಮಾಡಿದ್ದು 2005 ರಲ್ಲಿ. ಆದರೆ ಅವರೊಬ್ಬ ಹುಟ್ಟು ಹೋರಾಟಗಾರ. ವೈದ್ಯರು ನೀವು ಕೆಲವೇ ತಿಂಗಳು ಬದುಕುವಿರಿ ಎಂದು ಹೇಳಿದರೂ ಕೂಡಾ, ಅವರು ಹೋರಾಟ ಮಾಡುತ್ತಾರೆ. ಕ್ಯಾನ್ಸರ್ ಅನ್ನು ಗೆಲ್ಲುತ್ತಾರೆ ಕೂಡ! ಸಾವಿನ ವಿರುದ್ದ ಅವರ ಹೋರಾಟ 2011 ರ ತನಕ ನಡೆಯುತ್ತದೆ. ಕಡೆಗೆ 2011 ರಲ್ಲಿ ಅವರು ಈ ಲೋಕದ ಪ್ರಯಾಣ ಮುಗಿಸುತ್ತಾರೆ.

ತಮ್ಮ ಮೂರನೇ ಕತೆಯಲ್ಲಿ ಅವರು ಹೀಗೆ ಹೇಳುತ್ತಾರೆ; ಜೀವನದ ಕಡೆಯ ಸತ್ಯ ಸಾವು ಎಂದು. ಸಾವಿನಿಂದ ಪಾರದವರು ಯಾರು ಇಲ್ಲ. ಕಡೆಗೆ ಸ್ವರ‍್ಗಕ್ಕೆ ಹೋಗಬೇಕೆಂದು ಹೇಳುವವರು ಕೂಡ ಸಾಯಲು ಬಯಸುವುದಿಲ್ಲ. ಸಾವಿನಿಂದ ಪಾರಾಗಲು ಯಾರಿಂದಲೂ ಸಾದ್ಯವಿಲ್ಲ. ಹಾಗಾಗಿ ನಮ್ಮೊಳಗೇ ಒಂದು ಹಸಿವಿರಬೇಕು. ಕಲಿಕೆಯ ಹಸಿವು, ಸಾದಿಸುವ ಹಸಿವು, ಬೆಳೆಯುವ ಹಸಿವು. ಸಮಯ ಕಡಿಮೆ ಇದೆ. ನನ್ನ ಸಾವು ನಾಳೇಯೇ ಬರುತ್ತದೆ ಎನ್ನುವುದಾದರೆ, ನಾನು ಇಂದು ಏನನ್ನು ಮಾಡಬಯುಸುತ್ತೇನೆ ಎನ್ನುವುದನ್ನು ಯೋಚಿಸಿಕೊಂಡು ಅದನ್ನು ಅಂದೇ ಮಾಡಿ ಮುಗಿಸಬೇಕು. ಅಶ್ಟೇ ಅಲ್ಲ ನಾವು ಮೂರ‍್ಕರಾಗಿ ಕೂಡ ಇರಬೇಕು. ನಮಗೆಲ್ಲವೂ ಗೊತ್ತಿದೆ ಅನ್ನುವ ಅಹಂಕಾರ ನಮ್ಮೊಳಗೇ ಇದೆಯಾದಲ್ಲಿ ನಮಗಿಂತ ದೊಡ್ಡ ತಿಳಿವುಗೇಡಿಗಳು ಬೇರಾರಿಲ್ಲ. ಹೊಸ ವಿಶಯಗಳನ್ನು ಕಲಿಯಬೇಕಾದಲ್ಲಿ ನಾವು ಮೂರ‍್ಕರಾಗಿದ್ದುಕೊಂಡು, ಅದನ್ನು ಅರಿಯುವ ಪ್ರಯತ್ನ ಮಾಡಿದಾಗ ಮಾತ್ರ ನಮ್ಮ ತಿಳುವಳಿಕೆ ಹೆಚ್ಚಾಗುತ್ತೆ. ಹಾಗಾಗಿ ಜ್ನಾನದ ಹಸಿವಿನ ಬಗ್ಗೆ, ಹೊಸ ವಿಚಾರಗಳನ್ನು ಕಲಿಯುವ ಬಗ್ಗೆ ಮೂರ‍್ಕ ಅನಿಸಿಕೊಂಡರೂ ಪರವಾಗಿಲ್ಲ. ಇವು ಸ್ಟೀವ್ ಜಾಬ್ ರವರ ಮಾತುಗಳು.

ಎಶ್ಟೊಂದು ಸತ್ಯ ಅಲ್ವ. ನಾನು ವಿಜ್ನಾನದ ವಿದ್ಯಾರ‍್ತಿ ಅಲ್ಲ. ನನ್ನದು ವಾಣಿಜ್ಯ ಕಲಿಕೆ. ಆದರೆ ನಾವು ಮಾರುತಿರುವುದು ವಿದ್ಯುತ್ ಉಪಕರಣಗಳನ್ನು. ನನ್ನ ಇಶ್ಟು ವರುಶಗಳ ಅನುಬವದಲ್ಲಿ ಸಾವಿರಾರು ಉಪಕರಣಗಳ ಬಗೆಗೆ ಅರಿತುಕೊಂಡಿರುವೆ. ಆದರೆ ಎಶ್ಟು ಕಲಿತರೂ ಸಾಲದೆನಿಸುತ್ತದೆ. ಪ್ರತಿನಿತ್ಯ ಒಂದಲ್ಲ ಒಂದು ಹೊಸ ವಸ್ತುವಿನ ಬಗೆಗೆ ಗ್ರಾಹಕರು ವಿಚಾರಿಸಿದಾಗ, ಹುಡುಕಿ ಹೇಳತ್ತೇನೆಂದು ತಿಳಿಸುತ್ತೇನೆಯೇ ವಿನಹ ಆ ವಿದದ ವಸ್ತು ಬರೋದಿಲ್ಲ ಅಂತ ಹೇಳುವ ದೈರ‍್ಯ ನನ್ನಲ್ಲಿ ಇಲ್ಲ. ಏಕೆಂದರೆ ಎಶ್ಟೋ ಬಾರಿ ನನ್ನ ತಿಳುವಳಿಕೆ ಸೀಮಿತವಾದದ್ದು ಅನ್ನುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಶ್ಟೋ ವಸ್ತುಗಳ ಬಗೆಗೆ ನಮಗೆ ಅರಿವೇ ಇರುವುದಿಲ್ಲ. ಕಲಿಕೆ ಇದೊಂದು ಬಗೆಯ ನಿರಂತರವಾದ ಹಸಿವು. ಕೆಲವರು ನಿನಗೆ ಅಶ್ಟು ಗೊತ್ತಿಲ್ವ ಎಂದು ಹೇಳಿದಾಗ ನಮಗೆ ಗೊತ್ತಿಲ್ಲದ್ದಿದ್ದರೆ ಇಲ್ಲ ಅಂತ ಹೇಳುವ ಪ್ರಾಮಾಣಿಕೆ ನಮ್ಮಲಿರಬೇಕು. ಸುಮ್ಮನೆ ಗೊತ್ತಿದೆ ಅನ್ನುವ ನಾಟಕ ಮಾಡಿದರೆ ನಾವು ಬೆಳೆಯಲು ಸಾದ್ಯವಿಲ್ಲ. ಗೊತ್ತಿಲ್ಲದಿರುವುದನ್ನು, ಗೊತ್ತಿಲ್ಲವೆಂದು ಒಪ್ಪಿಕೊಂಡು ಕಲಿಯುವುದರಲ್ಲಿ ಇರುವುದೇ ಜಾಣತನ. ಇನ್ನು ಸಾವು ಎನ್ನೋದು ಸತ್ಯ. ಬದುಕು ಕ್ಶಣಿಕ. ಹಾಗಾಗಿ ಪ್ರತಿಕ್ಶಣ ಕೂಡ ನಾವು ಬದುಕನ್ನು ಸಂಬ್ರಮಿಸಬೇಕು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: