’ದ ಎಕಂಪನಿಸ್ಟ್’ – ಅನಿತ ದೇಸಾಯಿ ಅವರ ಸಣ್ಣ ಕತೆ

ಎಲ್ಲರಕನ್ನಡಕ್ಕೆ:- ಪಿ.ಪಿ.ಗಿರಿದರ, CIIL, ಮಯ್ಸೂರು

gharana1

ವೇದಿಕೆ ಮೇಲೆ ಮುಚ್ಚಿದ್ದ ತೆರೆಗಳ ಹಿಂದೆ ಹಾಡಿಕೆಯ ಉಲಿಮಟ್ಟಗಳನ್ನು ನನಗೆ ಆತ ಕೊಟ್ಟಿದ್ದು ಇನಿಪು-ಕಚೇರಿಯ ರಾತ್ರಿಯೇ. ಇದನ್ನು ಆತ ಮೊದಲೇ ಮಾಡುತ್ತಾನೆಂದು ನಾನು ಎಂದೂ ಹಾರಯ್ಸಿದೆ. ಸಾಯಂಕಾಲ ಪೂರ್‍ತಿ ನಾನು ಅತನ ವೀಳ್ಯೆದೆಲೆಗಳನ್ನು ಅಣಿಗೊಳಿಸುತ್ತಾ, ಆತನ ಸಿತಾರನ್ನು ಟ್ಯೂನ್ ಮಾಡುತ್ತಾ ಆತನ ಸುತ್ತ ಸುಳಿದಾಡುತ್ತಿದ್ದೆ. ಆತ ನನ್ನನ್ನು ಮಾತಾಡಿಸಲೊಲ್ಲ. ಆತನ ಜೊತೆ, ಆತನ ಸುತ್ತ, ಯಾವಾಗಲೂ ತುಂಬ ಜನ ಇರುತ್ತಿದ್ದರು. ಆತನ ಸೆರಪುಗ ಅತವ ಹೋಸ್ಟ್, ಇನಿಪು-ಕಚೇರಿ ಏರ್‍ಪಾಡು ಮಾಡುವವರು, ಆತನ ಗೆಳೆಯರು, ಆತನ ನಲ್ಮೆ-ಬಯಸಿಗರು, ಆತನ ಕಲಿಗ(ಸ್ಟುಡೆಂಟ್)ರು, ಹಿಂಬಾಲಕರು ಹೀಗೆ ಹತ್ತು ಹಲವಾರು ಜನ. ಆತ ಎಲ್ಲರೊಂದಿಗೆ ಮಾತಾಡಿ, ನಕ್ಕು ನಲಿಯುತ್ತಿದ್ದ. ಆದರೆ ನಾನು ಹತ್ತಿರ ಹೋದಾಗ ಮುಕ ಬೇರೆ ಕಡೆ ಹೊರಳಿಸುತ್ತಿದ್ದ. ನನಗೆ ನೋವಾಗುತ್ತಿರಲಿಲ್ಲ. ಇದು ನನ್ನ ಜೊತೆಗೆ ನಡೆದುಕೊಳ್ಳುವ ಆತನ ಪರಿ. ನಾನು ಈ ಪರಿಗೆ ಒಗ್ಗಿ ಹೋಗಿದ್ದೆ. ಕಚೇರಿ ಶುರುವಾಗುವ ಮೊದಲೇ ಆತ ಏನನ್ನು ನುಡಿಸುತ್ತಾನೆ ಎಂದು ನನಗೆ ಹೇಳುವುದನ್ನಶ್ಟೇ ನಾನು ಬಯಸಿದ್ದು. ಆತ ಹಾಗೆ ಮಾಡಿದ್ದರೆ ನಾನು ಅದಕ್ಕೆ ಅಣಿಯಾಗಬಹುದಿತ್ತು. ಆತ ಮಾಡುವಂತೆ ಮಾಡುವುದು, ಅಂದರೆ ಇನಿಪಿನೊಳಗೆ ಮಿಂಚಿನಂತೆ ಹಟಾತ್ತನೆ ದುಮುಕುವಂತೆ ಎಡೆಯಿಲ್ಲದೆ ಅಣಿಯಾಗದೇ ತೊಡಗುವುದು ನನಗೆ ಕಶ್ಟ ಅನ್ನಿಸಿತು. ಆದರೆ ಇದು ನನಗೆ ಆಗುವ ಹಾಗೆ ಇದನ್ನು ಕಲಿಯಬೇಕಾಗಿತ್ತು. ಕಲಿತೆ.

ಎಲ್ಲದರಲ್ಲೂ ಅತ ಮುಂಚ, ನಾನು ಹಿಂಬಾಲಕ.

ಹೋದ ಹದಿನಯ್ದು ವರ್‍ಶಗಳಿಂದ ಇದು ನಮ್ಮ ಬದುಕುವ ಪರಿಯಾಗಿ ನಡೆದುಕೊಂಡು ಬಂದಿದೆ. ನಾನು ಹದಿನಯ್ದು ವರ್‍ಶದವನಾದ ದಿನ ಇದು ಶುರುವಾಯಿತು. ನನ್ನ ತಂದೆ ತಯಾರಿಸಿದ ಹೊಸ ತಾನ್‌ಪುರವನ್ನು ತೆಗೆದುಕೊಂಡು ಉಸ್ತಾದ್ ರಹೀಮ್ ಕಾನ್ ನುಡಿಸಲಿದ್ದ ಇನಿಪು-ಕಚೇರಿಗೆ ನಾನು ಹೋದ ದಿನ ಆ ದಿನ. ತಂದೆ ಇನಿಪು-ವಾದ್ಯಗಳನ್ನು ತಯಾರಿಸುವವರು. ಅವರಿಗೆ ಬಹಳ ಇನಿಪು-ವಾದ್ಯಗಳನ್ನು ನುಡಿಸಲು ಚೆನ್ನಾಗಿ ಗೊತ್ತಿತ್ತು. ಉಸ್ತಾದ್ ರಹೀಮ್ ಕಾನ್ ಹೊಸ ತಾನ್‌ಪುರಕ್ಕೆ ಕೊಳ್ಬೆಸ ಹೇಳಿದ್ದರು (ಓರ್‍ಡರ್‍ ಕೊಟ್ಟಿದ್ದರು). ತಂದೆ ಈ ವಾದ್ಯಗಳನ್ನು ಒಲುಮೆಯಿಂದ ಮತ್ತು ಇನಿಪಿನ ಆಳವಾದ ಅರಿವಿನಿಂದ ತಯಾರಿಸುತ್ತಿದ್ದರು. ತಾವು ತಯಾರಿಸುವ ಇನಿಪು-ವಾದ್ಯಗಳ ಮೇಲು ಗುಣಮಟ್ಟ ತಂದೆಗೆ ಇನಿಪುಗಾರ-ಸಮುದಾಯದಲ್ಲಿ ಒಳ್ಳೆಯ ಹೆಸರು ತಂದಿಕ್ಕಿತ್ತು.

ಒಳಾಂಗಣ(ಹಾಲ್) ತಲುಪಿದೊಡನೆ ತಾನ್ಪುರ ಯಾರಿಗೆ ಕೊಡುವುದೆಂದು ನಾನು ಸುತ್ತ-ಮುತ್ತ ನೋಡಿದೆ. ಆದರೆ ಹಾಲ್‌ನಲ್ಲಿ ಕತ್ತಲೆ ಕವುಚಿತ್ತು ಯಾಕೆಂದರೆ ಏರ್‍ಪಾಡುಗರು ಒಳಾಂಗಣದಲ್ಲಿ ಕಚೇರಿಗೆ ಮೊದಲು ಪ್ರೇಕ್ಟಿಸ್ ಮಾಡಲು ದೀಪಗಳನ್ನು ಹಾಕಬಿಡುತ್ತಿರಲಿಲ್ಲ. ಇನಿಪುಗಾರರ ಪುಟ್ಟ ಆ ಗುಂಪನ್ನು ಬೆಳಗಿಸುವ ಒಂದೇ ಒಂದು ಮಿಂಚು-ಸೊಡರು (=ಇಲೆಕ್ಟ್ರಿಕ್ ಲಯ್ಟ್) ವೇದಿಕೆ ಮೇಲೆ ಇರುತ್ತ್ತಿತ್ತು. ಈ ಒಂಟಿ ಮಿಂಚು-ಸೊಡರಿನಿಂದ ಇನಿಪುಗಾರರ ಮುಂದೆ-ಒಳ್ಳೆಯದಾಗದಿರಬಹುದೆಂಬ-ಸುಳಿವು-ತೋರುವ(ಇನಾಸ್ಪಿಶಿಯಸ್), ಚಡಪಡಿಸುವ ನೀಳ ನೆರಳುಗಳು ಅವರನ್ನು ಸುತ್ತುವರಿದಿದ್ದವು. ಆಗೊಮ್ಮೆ ಈಗೊಮ್ಮೆ ತಮ್ಮ ಒಡನಾಡಿಗಳ ಹತ್ತಿರ ಮಾತಾಡಲು, ನಗಲು ಬಿಡುವು ಮಾಡಿಕೊಳ್ಳುತ್ತಾ, ಉಸ್ತಾದ್ ಸಿತಾರ್‍ ಅನ್ನು ಟ್ಯೂನ್ ಮಾಡುತ್ತಿದ್ದರು. ಎಲ್ಲರೂ ಮಾತಿನಲ್ಲಿ ತೊಡಗಿದ್ದರು. ಯಾರೂ ನನ್ನನ್ನು ನೋಡಲಿಲ್ಲ. ನನ್ನ ತಂದೆ ಅಶ್ಟು ಗವ್ರವದಿಂದ ಮಾತಾಡಿದ್ದ ಉಸ್ತಾದನ್ನು ನೋಡುತ್ತಾ ನಾನು ಬಾಗಿಲ-ದಾರಿಯಲ್ಲಿ ತುಂಬಾ ಹೊತ್ತು ನಿಂತೆ.

ದುಡ್ಡು-ಕೊಡುವುದರ ಬಗ್ಗೆ ಮಾತಾಡಬೇಡ! ಎಂದು ತಂದೆ ನನಗೆ ಮುನ್ನೆಚ್ಚರಿಕೆ ಕೊಟ್ಟಿದ್ದರು. ಅವರು ನಮಗೆ ಕೊಟ್ಟ ತಾನ್‌ಪುರದ ಆರ್‍ಡರ್‍‌ಏ ನಮಗೆ ಅವರು ಕೊಟ್ಟ ಗವ್ರವ.

ಅಪ್ಪನ ಈ ಮಾತು ನನಗೆ ಇಶ್ಟ ಆಯಿತು. ಅಪ್ಪನು ನನಗೆ ಅವರ ಬಗ್ಗೆ ಹೇಳಿದ್ದ ಮಾತು ದಿಟ ಎಂದೆಣಿಸಿ, ನಾನು ಅವರನ್ನು ದಿಟ್ಟಿಸಿದೆ. ಹಮ್ಮಿಕೊಳ್ಳದ-ಹಾಗೆ, ಆಸಕ್ತಿ-ಇಲ್ಲದ-ಹಾಗೆ ಮತ್ತು ಅಡ್ಡಾ-ದಿಡ್ಡಿಯಾಗಿ ಅವರು ಸಿತಾರ್‍ ಟ್ಯೂನ್ ಮಾಡುತ್ತಿದ್ದರು. ಆದರೆ ಅವರ ಬೆರಳುಗಳು ದೇವರ-ಬೆರಳುಗಳೆಂದು ಅನಿಸಿತು, ಅವು ಎಶ್ಟು ಪಳಗಿದ್ದವೆಂದರೆ ವಾದ್ಯದ ಮತ್ತು ಇನಿಪುಗಾರನ ನಡುವಣ ಅಂತಹ ನಂಟಿನಿಂದ ಸಾಕಲ್ಯ ಒಂದೇ ಹೊಮ್ಮುವಂತಾ ಸಂಗತಿ ಎಂದೆನಿಸುತ್ತಿತ್ತು.

ಚಡಪಡಿಸುತ್ತಾ, ಜೋರಾಗಿ, ಎಡೆ-ಬಿಡದೆ ಒಯ್ಯನೆ ಪಟಪಟನೇ ಬಡಬಡಿಸುತ್ತಿದ್ದ ಗುಂಪಿನ ನಡುವೆ ತಾನು ತುಂಬಾ ನೆಮ್ಮದಿಯಿಂದ, ಶಾಂತಿಯಿಂದ ಇದ್ದ, ಈಡು-ಹೊಂದಿದ ಆ ವ್ಯಕ್ತಿಯನ್ನೇ ಎಂದೂ ದಿಟ್ಟಿಸುತ್ತಾ, ಸೀಟುಗಳ ಸಾಲುಗಳ ನಡುವೆ ಇರುವ ಸೀಳು-ಕಿರುದಾರಿ(ಅಯ್ಲ್)ಯ ಮೇಲೆ ವೇದಿಕೆಯತ್ತ ನಾನು ಮೆಲ್ಲನೆ ನಡೆದೆ. ವೇದಿಕೆಯ ಹತ್ತಿರ ಬರುತ್ತಿದ್ದಂತೆ ಅವರ ಉದ್ದನೆಯ ಕೂದಲಿನ ಗೊಂಚಲಿನ ಕೆಳಗೆ ನನಗೆ ಅವರ ಮುಕ ಕಂಡಿತು. ಮುಕವೂ ದೇವರದೆಂದೆನಿಸಿತು: ಬಹುಶ ದವಡೆಗಳಿರುವೆಡೆ ತೂಕವಾಗಿದ್ದ ಮುಕ ದೊಡ್ಡದಾಗಿತ್ತು, ಆದರೆ ನಿಡಿದಾದ ಹಣೆ ಮತ್ತು ನಡುವೆ ತುಂಬಾ ಇಂಬಿದ್ದ(ಸ್ಪೇಸ್), ಕಡುಕಪ್ಪು ಕಣ್ಣುಗಳಿಂದ ಅದು ಸರಿದೂಗಿತ್ತು. ಅವರ ಮೂಗುಹೊಳ್ಳೆಗಳು ಮತ್ತು ಬಾಯಿಯೂ ಅರಸನಿಗೆ ತಕ್ಕವುವಾಗಿದ್ದು, ದೊಡ್ಡವಾಗಿದ್ದರೂ ಅವು ಚುರುಕಾಗಿ, ಹತೋಟಿಗೆ, ಹಿಡಿತಕ್ಕೆ ಒಳಪಟ್ಟಿದ್ದವು.

ನನಗೆ ನಾನೇ ಅವರ ಮುಕ ಹೊಂದಿದ್ದ ಎಲ್ಲ ಮನತಟ್ಟುವ ಅಂಶಗಳನ್ನು ಹೇಳಿಕೊಳ್ಳುತ್ತಾ ನಾನು ಅವರ ಮುಕವನ್ನೇ ನೋಡುತ್ತಿದ್ದಾಗ ಅವರು ವೇದಿಕೆ ಮೇಲಿಂದ ನನ್ನನ್ನು ನೋಡಿದರು. ಹಾಲ್‌ನ ಕತ್ತಲಲ್ಲಿ ಮತ್ತು ವೇದಿಕೆಯ ಮೇಲಿನ ನೆರಳುಗಳಲ್ಲಿ ಅವರು ಏನು ನೋಡಿದರೆಂದು ನನಗೆ ಗೊತ್ತಿಲ್ಲ. ಆದರೆ ಅವರು ಇನಿ-ನಯದ ಮುಗುಳ್ನಗು ನಕ್ಕು, ನನ್ನನ್ನು ತಮ್ಮೆಡೆ ಕರೆದರು: ನಿನ್ನ ಕಯ್ಯಲ್ಲಿ ಏನಿದೆ? ಕೇಳಿದರು.

*

ವೇದಿಕೆಯ ಬದಿಯ ಮೆಟ್ಟಲುಗಳ ಮೇಲೆ ಓಡಲು ನನಗೆ ದಯ್ರ್‍ಯ ಚಿಗುರಿ, ನೇರವಾಗಿ ಅವರ ಬಳಿಗೆ ತೆರಳಿದೆ. ಬೇರೆ ಯಾರನ್ನೂ ನಾನು ನೋಡಲಿಲ್ಲ. ಯಾರನ್ನೂ ಗಮನಿಸಲೂ ಇಲ್ಲ. ಅತವ ಯಾರ ಮಾರೆಸಕಕ್ಕೂ ಕೇರ್‍ ಮಾಡಲಿಲ್ಲ. ವೇದಿಕೆಯ ಮೇಲಿನ ಗುಂಪಿನ ನಡುವು(ಸೆಂಟರ್‍) ಅದ ಮತ್ತು ಮುಂದೆ ನನ್ನ ಬದುಕಿನ ನಡುವು ಆದ ಅವರತ್ತ ತೆರಳಿ ತಾನ್‌ಪುರ ಕೊಟ್ಟೆ.

ಆಹ್! ಹೊಸ ತಾನ್‌ಪುರ! ಸಂಗೀತದ ಓಣಿಯ ಮಿಶ್ರಾ ಅವರಿಂದ? ನೀನು ಮಿಶ್ರಾರವರ ಕಡೆಯಿಂದ ಬಂದಿದಿಯಾ?

ಅವರು ನನ್ನ ತಂದೆ. ನಾನು ಪಿಸುಗುಟ್ಟಿದೆ. ಪಿಸುಗುಡುವ ಮುನ್ನ ನನ್ನನ್ನು ಅವರತ್ತ ಸೆಳೆದ ಅವರ ಮುಕವನ್ನು ಎವೆಯಿಕ್ಕದೆ ದಿಟ್ಟಿಸುತ್ತಾ, ಅವರ ಮುಂದೆ ಮಂಡಿಯೂರಿದೆ.

ಮಿಶ್ರಾ ಅವರ ಮಗ? ಆಳವಾದ ನಣ್ಪಿನ, ಗೆಳೆತನದ ನಗು ನಕ್ಕು ಅವರು ಕೇಳಿದರು. ತಾನ್‌ಪುರದ ತಂತಿಗಳ ಮೇಲೆ ಬೆರಳುಗಳನ್ನು ಆಡಿಸಿದ ಮೇಲೆ, ತಾನ್ಪುರವನ್ನು ನೆಲಹಾಸಿನ ಮೇಲಿಡುತ್ತಾ ಅವರು ತಮ್ಮ ಕಯ್ ಚಾಚಿದರು. ಆಗ ಅವರ ಕುರ್‍ತದ ಜಿನುಗಾದ ಮಸ್ಲಿನ್ ಉಡುಪಿನ-ಕಯ್ ಹಿಂಸರಿದು, ಎದ್ದುಕಾಣುವ ನೆತ್ತರನಾಳಗಳಿದ್ದ, ಬಿಗಿಯಾದ ಚರ್‍ಮದ ಓಟಗಾರನ/ಆಟಗಾರನ ತರಹದ ಪುಶ್ಟ ಮತ್ತು ಮಸ್ಕ್ಯುಲರ್‍ ರಟ್ಟೆ ಬೆಳಕಿಗೆ ಬಂತು. ಅವರು ನನ್ನ ಗದ್ದವನ್ನು ಮುದ್ದಿಸಿದರು.

ನೀನು ನುಡಿಸುತ್ತೀಯಾ? ಕೇಳಿದರು ಅವರು. ನಮ್ಮ ತಾನ್‌ಪುರ-ನುಡಿಸುಗ ಇನ್ನೂ ಬಂದಿಲ್ಲ.

ಆತ ಎಲ್ಲಿ? ಅವರು ತಮ್ಮನ್ನು ಸುತ್ತುವರಿದಿದ್ದ ಜನರನ್ನು ಕೇಳಿದರು. ಆತ ಯಾಕೆ ಇನ್ನೂ ಬಂದಿಲ್ಲ?

*

ಅವರ ಎಲ್ಲಾ ಗೆಳೆಯರು ಹಿಂಬಾಲಕರು ಮಾತಾಡ-ತೊಡಗಿದರು. ಕೆಲವರು ಆತನಿಗೆ ಹುಶಾರಿಲ್ಲ ಎಂದೂ, ಇನ್ನು ಕೆಲವರು ಆತನಿಗೆ ಗೆಳೆಯರು ಸಿಕ್ಕಿ, ಆತ ಅವರೊಡನೆ ಎಲ್ಲೋ ಹೋದನೆಂದೂ ಹೇಳಿದರು. ನಿಜ ಹೇಳಬೇಕೆಂದರೆ, ಯಾರಿಗೂ ಆತ ಎಲ್ಲಿದ್ದಾನೆಂದು ಗೊತ್ತಿರಲಿಲ್ಲ.

ಹಳೆ ಕುಡುಕ! ಆತ ಈಗ ಹೆಂಡ ಕುಡಿಯುತ್ತಿರಬಹುದು. ಇನ್ನು ಮುಂದೆ ಅತ ನನಗೆ ನುಡಿಸುವುದು ಬೇಡ. ಈ ಮಗು ನುಡಿಸಲಿ! ಉಸ್ತಾದರು ತಮ್ಮ ತಲೆ ಕೊಡವಿ, ನುಡಿದರು.
ತಪಕ್ಕನೆ ಸಿತಾರ್‍ ಎತ್ತಿಕೊಂಡು ತಲೆಯನ್ನು ವಾದ್ಯದ ಮೇಲೆ ಬಾಗಿಸಿ, ನುಡಿಸಲು ತೊಡಗಿದರು. ಒಂದು ಬಗೆಯ ವಿಚಾರವಂತಿಕೆಯ ಮತ್ತು ಒಂದೆಡೆ-ತರುಹದ ಚಾಯೆ ಅವರ ಮುಕದ ಮೇಲೆ ಹಬ್ಬಿತ್ತು. ಇದರಿಂದಾಗಿ ನಾನು ಕೇಳಬೇಕೆಂದಿದ್ದ ಕೇಳ್ವಿಗಳಿಂದ ನನಗೆ ಅವರನ್ನು ಎಡೆವರಿಯಲಾಗಲಿಲ್ಲ(ಅಡ್ಡಿ ಮಾಡುವುದಾಗಲಿಲ್ಲ). ಅವರು ನನ್ನ ಮೇಲೆ ಒಂದೇ ಒಂದು ಗಿಡ್ಡ ನೋಟ ಬೀರಿ, ತಾನ್‌ಪುರ ಎತ್ತಿಕೊಂಡು ನುಡಿಸಲು ಹೇಳಿದರು.

ದೀಪಕ್ ರಾಗ! ಎಂದು ನುಡಿದು ನುಡಿಸಬೇಕಾದ ಉಲಿಮಟ್ಟ(ನೋಟ್ಸ್)ಗಳ ಬಗ್ಗೆಯೂ ಹೇಳಿದರು. ಅವರ ದನಿ ಎಶ್ಟು ಕೆಳಮಟ್ಟದ್ದು ಮತ್ತು ಚೆಚ್ಚರದ್ದೆಂದರೆ ನಾನು ಅವರ ಮೇಲೆಯೇ ಗಮನ ನೆಟ್ಟಿಲ್ಲದಿದ್ದರೆ ನನಗೆ ಅವರು ಹೇಳಿದ್ದು ಕೇಳಿಸುತ್ತಲೇ ಇರಲಿಲ್ಲ. ನೆಲದ ಮೇಲೆ ಅವರ ಹಿಂದೆ ಕೂತೆ. ಕೂತು ತಂದೆ ತಯಾರು ಮಾಡಿದ ತಾನ್‌ಪುರ ಕಯ್ಗೆತ್ತಿಕೊಂಡೆ. ನನಗೆ ಹೇಳಿದ ಮೂರು ಉಲಿಮಟ್ಟಗಳನ್ನು – ನಡುವಿನದ್ದು, ಮತ್ತು ಅದರ ಎಂಟುಲಿಕಂತೆ, ಅಯ್ದುಲಿಕಂತೆ – ಮರಳಿ ಮರಳಿ ನುಡಿಸ-ತೊಡಗಿದೆ. ನಾನು ಉಂಟುಮಾಡಿದ ದನಿಯ ಹಿನ್ನೆಲೆಯ ಬೀಸಿನ ಮೇಲೆ ಆತ ತಮ್ಮ ರಾಗವನ್ನು ಮುನ್ನೋರದೆ ಹೆಣೆದರು.

*

ನಾನು ಉಸ್ತಾದ್ ರಹೀಮ್ ಕಾನರ ಗುಂಪಿನ ತಾನ್‌ಪುರದ ನುಡಿಸುಗನಾದದ್ದು ಹೀಗೆ. ಅಂದಿನಿಂದ ನಾನು ಬೇರೆ ಯಾರಿಗೂ ನುಡಿಸಿಲ್ಲ. ಬೇರೆ ಏನನ್ನೂ ಮಾಡಿಲ್ಲ. ಇದು ನನ್ನ ಇಡೀ ಬದುಕು. ನನಗೆ ಮೂವತ್ತು ವರ್‍ಶ ವಯಸ್ಸು ಈಗ. ಉಸ್ತಾದ್‌ರ ಕೂದಲು ಈಗ ನೆರೆಯತೊಡಗಿದೆ. ಅವರನ್ನು ಕಾಡುವ ಕೆಟ್ಟ ಕೆಮ್ಮು ಆಗಾಗ ಇನಿಪು-ಕಚೇರಿಯನ್ನು ಎಡೆವರಿಯುತ್ತದೆ. ಇದರಿಂದ ಪಾರಾಗಲು ಅವರು ಬೇಕಾದ್ದಕ್ಕಿಂತ ಹೆಚ್ಚಾಗಿ ಓಪಿಯಮ್ ತಿನ್ನುತ್ತಾರೆ. ಎಂದೂ ನನ್ನನ್ನೇ ಮಾಡಲು ಹೇಳುವುದರಿಂದ ನಾನೇ ಇದನ್ನು ಅಣಿಗೊಳಿಸಿ ಅವರಿಗೆ ಕೊಡುತ್ತೇನೆ. ಬಾರತದ ಎಲ್ಲಡೆಗಳಲ್ಲಿ, ಎಲ್ಲ ಊರುಗಳಲ್ಲಿ, ಎಲ್ಲ ಅಮಗ(=ಸೀಜನ್)ಗಳಲ್ಲಿ, ಇನಿಪು-ಕಚೇರಿ ನಡೆಸಿದ್ದೇವೆ. ಇದೇ ಅವರ ಬದುಕು. ನನ್ನದೂ ಕೂಡ. ನಾವು ಈ ಬದುಕನ್ನು, ಈ ಇನಿಪನ್ನು, ಈ ಹಿಂಬಾಲಕ-ದಂಡನ್ನು ಹಂಚಿಕೊಂಡಿದ್ದೇವೆ. ಈ ಇಡಿಯೆಡೆಯಲ್ಲಿ ನನಗೆ ಬೇರೆ ಇನ್ನೇನು ಇರಲಿಕ್ಕೆ ಸಾದ್ಯ? ಕೆಲವರು ಅವರ ಬಳಿಯಿಂದ ನನ್ನನ್ನು ಮಾರುಹೋಗಿಸಿ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಇನ್ನೆಂದೂ, ಬೇರೆ ಏನನ್ನೂ ಬಯಸದೆ, ನಾನು ಮಾತ್ರ ಅವರೊಡನೆಯೇ ಉಳಿದಿದ್ದೇನೆ.

ಇದು ದಿಟ ಆದರೂ, ನಮ್ಮ ಇಡಿಯೆಡೆಯು ಗಟ್ಟಿ ನೆಲಮಟ್ಟದ ಮಾನವ-ನಂಟಿನಿಂದಲ್ಲದೆ – ಒಲುಮೆಯ ಒಲವಿನ ನಂಟು – ಇನಿಪಿನಿಂದ ವ್ಯಾಕ್ಯಿಸಲಾದ, ಉಂಟಾದ, ಸುತ್ತುವರಿದ ಇಡಿಯೆಡೆಯಲ್ಲ. ಅದು ಇನಿಪಿನಂತೆ ಗಟ್ಟಿಯಲ್ಲದ ನನಸಲ್ಲದ ಗುಣವಲ್ಲ ಅತವ ಕಲೆಯಂತೆ ಬವ್ದ್ದಿಕ ಸಂಗತಿಯೂ ಅಲ್ಲ. ಅದು ನಾಳುನಾಳಿ(ದಿನನಿತ್ಯ)ನ ನನಸಿನ ಮಟ್ಟzಲ್ಲಿ ಬದುಕುವ ಗುಣ – ಒಲವಿನ ಗುಣ. ಹಾಗೆ ಅಂತ ನಾನು ನಂಬಿದ್ದೆ. ಇದು ಅಲ್ಲದೇ ನಮ್ಮಿಬ್ಬರನ್ನೂ ಒಡಬರಿಸಿದ ಗುಣ ಯಾವುದಿರಲಿಕ್ಕೆ ಸಾದ್ಯ? ವಾದ್ಯ ನುಡಿಸುವಾಗ ಅವರು ನುಡಿಸುವ ಪ್ರತಿ ನುಡಿಕೆ ಅವರು ನುಡಿಸುವ ಮೊದಲೇ ನನಗೆ ಗೊತ್ತಿರುವುದು ಮತ್ತು ನಾನು ಅವರು ಬಯಸಿದ ಎಡೆಯಲ್ಲಿ ಎಂದೂ ಇರುವುದರ ಬಗ್ಗೆ ಅವರ ಆಳವಾದ ನಂಬಿಕೆ. ನಾವು ಎಂದೂ ಬೇರ್‍ಪಟ್ಟಿಲ್ಲ: ನಾವು ಬಿಡುವುದು ಮತ್ತು ತಲುಪುವುದು ಒಟ್ಟಿಗೆನೇ. ಇದು ಒಲವು ಅಲ್ಲವಾ? ನಮ್ಮಿಬ್ಬರದ್ದಕ್ಕಿಂತ ಹೆಚ್ಚು ಗಾಡವಾಗಿ ಹಾಸುಹೊಕ್ಕಾಗಿ ಬೆಸೆದುಹೋದ ನಂಟು ಬೇರೆಲ್ಲೂ ಇರಲಿಲ್ಲ.

ನಾನು ಹುಡುಗನಾಗಿದ್ದಾಗ, ಬೂಮಿಯ ಮೇಲೆ ನನಗೆ ಇತರೇ ಹಲವು ಸಂಗತಿಗಳು ಇದ್ದವು. ಇನಿಪಿನ ಸಂಪ್ರದಾಯದ ಕುಟುಂಬದ ಮುಕ್ಯ ದೇವರಾದ ಇನಿಪಂತೂ ಎಂದಿಗೂ ಮುಕ್ಯವಾಗಿತ್ತು. ಮನೆಯ ನಡುವಿನ ನಡುಮನೆಯು ಇನಿಪು-ವಾದ್ಯಗಳನ್ನು ತಯಾರಿಸುವುದಕ್ಕೆಂದೇ ಮೀಸಲಾಗಿತ್ತು. ಈ ತಯಾರಿಕೆಗೆ ತಂದೆ ಅವರ ಮುಂಚೆ ಅವರ ತಂದೆ ನೆಗಳ್ತೆ/ಹೆಸರು ಪಡೆದಿದ್ದರು. ಈ ನಡುಮನೆಯಿಂದ ಚೆಚ್ಚರದ ಕಾಯಕದ ದನಿಗಳು – ತಟ್ಟುವುದು, ಟೇಪಿಂಗ್, ಯೋಜಿಸುವುದು ಮತ್ತು ಟ್ಯೂನ್ ಮಾಡುವುದು – ಅಲ್ಲದೇ ಇನಿಪಿನ ದನಿಯೂ ಹೊಮ್ಮುತ್ತಿತ್ತು. ಅಲ್ಲಿ, ಕೆಲವು ಬಾರಿ ಇಂಪೆಸೆವ ಹೊಂದಿಕೆಯ, ಕೆಲವು ಬಾರಿ ಮರುಬಗೆತದ ಅತವ ಇಂಪಿಲ್ಲದ, ಇನಿಪು ಎಂದಿಗೂ ಮಿಡುಕುತ್ತಿತ್ತು. ಅದು ನಮ್ಮ ಮನೆಯ ಗಾಳಿಯ ಗುಣವೇ ಆಗಿತ್ತು. ಕೊನೆಗಾಣದ ಬೇರ್‍ಮೆಯಿಂದಾಗಿ ದಟ್ಟವಾಗಿದ್ದರೂ, ಇನಿಪಿನ ಒಳಹರಿವಿದ್ದ ಗಾಳಿ ಎಂದೂ ಮಿಡುಕದೆ ಇರುತ್ತಿರಲಿಲ್ಲ. ತಂದೆ ನನ್ನನ್ನು ಬೆಳಿಗ್ಗೆ ನಾಲ್ಕು ಗಂಟೆಗೆ ಏಳಿಸಿ ಕೆಳಗಣ ನಡುಮನೆಗೆ ಕರೆದುಕೊಂಡು ಹೋಗಿ ತಾನ್‌ಪುರ, ಹಾರ್‍ಮೋನಿಯಮ್, ಸಿತಾರ್‍ ಅಲ್ಲದೇ ತಬ್ಲಾನೂ ಕಲಿಸುವುದಕ್ಕೆ ಶುರುಮಾಡಿದಾಗ ನನಗೆ ನಾಲ್ಕು ವರ್‍ಶ ವಯಸ್ಸು. ತಂದೆಗೆ ಎಲ್ಲ ವಾದ್ಯಗಳನ್ನೂ ನುಡಿಸಲು ಬರುತ್ತಿತ್ತು. ನನಗೆ ಯಾವುದರ ಬಗ್ಗೆ ಒಲವಿದೆ ಎಂಬುದನ್ನು ಅವರು ತಿಳಿದುಕೊಳ್ಳಲು ಬಯಸಿದರು. ಹಲವು ತಲೆಮಾರುಗಳಿಂದ ಇನಿಪಿನ-ವಾದ್ಯಗಳನ್ನು ತಯಾರಿಸುತ್ತಿದ್ದ ಊರಿನ ಅ ಓಣಿಯಲ್ಲಿದ್ದ, ಇನಿಪನ್ನೇ ಉಸಿರಾಡುತ್ತಿದ್ದ, ಆ ಎತ್ತರವಾದ ಕಿರಿದಾದ ಮನೆಯಲ್ಲಿದ್ದ ನನಗೆ ಇನಿಪಿನಲ್ಲಿ ಒಲವಿದೆ ಎಂಬುದರ ಬಗ್ಗೆ ಎಂದೂ ಶಂಕೆ ಇರಲಿಲ್ಲ. ಅವರ ಮುಂದೆ ನಾನು ಚಕ್ಕಲ-ಬಕ್ಕಲ ಹಾಕಿ ಕುಳಿತು ನುಡಿಸುತ್ತಿದ್ದೆ. ಹಾಗೆ ನುಡಿಸುವಾಗ, ಹಾಗೆ ನುಡಿಸುತ್ತಾ ನಾನು ಕ್ರಮೇಣ ಬದುಕಿಗೆ ಚಿಗುರಿಕೊಂಡೆ, ತೆರೆದುಕೊಂಡೆ. ಕೊನೆಗೆ, ನನ್ನ ಇರುವಿನ ಒಳಸತ್ವ ಎದ್ದುನಿಲ್ಲುವ ತನಕ, ಹೊದ್ದಿದ್ದ ಹಾಸಿನಂತೆ, ಇರುಳಿಗೆ ಸೇರಿದ ಉಸಿರಡಗಿಸುಕದಂತೆ, ನಿದ್ದೆ ನನ್ನ ಮೇಲಿಂದ ಎದ್ದಿತು.

ಇನಿಪುಗಾರನೇ ಹೊರತು, ಇನಿಪು-ಮಾಡುಗನೇ ಹೊರತು, ನಾನು ವಾದ್ಯಗಳ ತಯಾರಕ ಅಲ್ಲ ಎಂಬುದನ್ನು ತಂದೆ ಕಂಡರು.

ಅವರು ನನಗೆ ಎಲ್ಲ ರಾಗಗಳನ್ನೂ ರಾಗಿನಿಗಳನ್ನೂ ಕಲಿಸಿದರು. ಅವರು ಇನಿಪರಿಮೆಯ ನನ್ನ ಅರಿವನ್ನು ತಮ್ಮ ಇಂಪೆಸೆಯದ, ಕರ್‍ಕಶ ದನಿಯಲ್ಲಿ ಬಿರುಸಿನ ಮತ್ತು ಪಟ್ಟುಹಿಡಿದ ಪ್ರಶ್ನೆಗಳಿಂದ ಒರೆಗೆ ಹಚ್ಚಿ ನೋಡಿದರು. ಯಾವುದರಲ್ಲೂ ಅವರು ನಮ್ಮ ಉಸ್ತಾದರ ತರಹ ಅಲ್ಲ. ಜಗಿದ ಎಲೆಯಡಿಕೆಯ ರಸವನ್ನು ತಮ್ಮ ಕೊರಕಲು ಬಿಳಿ ಗಡ್ಡದ ಮೇಲೆ ಉಗಿಯುತ್ತಿದ್ದರು. ನಾನು ಮಾಡುವ ಪ್ರತಿಯೊಂದೂ ಅವರಿಗೆ ಗೊತ್ತಿತ್ತು. ತಮ್ಮ ಕಯ್ಚಾಚಿ ಆಗಾಗ ನಾನು ನೋವಿನಿಂದ ಅರಚುವ ತನಕ ನನ್ನ ಕಿವಿಗಳನ್ನು ಹಿಂಡಿ ಹಿಡಿಯುತ್ತಿದ್ದರು. ಅಂತಹ ಪಾಟಗಳಿಂದ ನನಗೆ ಜಾರಿಕೊಳ್ಳುವ ಅಗತ್ಯ ಇತ್ತು. ನಿಜಕ್ಕೂ ಇದನ್ನು ಪುಟ್ಟ ಯುಕ್ತ ಹುಡುಗನಾದ ನಾನು ಹಲವು ಸಲ ಮಾಡಿದೆ : ಅವರ ಕಯ್ಗಳಿಂದ ತಪ್ಪಿಸಿಕೊಂಡು ಕಡಿದಾದ ಪಾವಟಿಗೆಯ ಮೆಟ್ಟಲುಗಳನ್ನು ಇಳಿದುಕೊಂಡು ನೆರೆಯ ಓಣಿ ಸೇರಿ, ಅಲ್ಲಿ ನನಗಿಂತ ಹೆಚ್ಚು ಸೋಮಾರಿಗಳಾದ ಮತ್ತು ಕಡಿಮೆ ಮೇಲ್ವಿಚಾರಿಸಲಾದ ಹುಡುಗರೊಂದಿಗೆ ಗಿಲ್ಲಿ-ದಂಡ, ಗೋಲಿ, ಕೋ-ಕೋ ಹೀಗೆ ಹತ್ತು ಹಲವು ಆಟ ಆಡುತ್ತಿದ್ದೆ.

ಇನಿಪಿಗಿಂತ ನಾನು ಗೋಲಿ-ಆಟಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟ ಕಾಲ ಒಂದಿತ್ತು. ಗೆದ್ದ ಗೋಲಿಗಳ ತೂಕದಿಂದ ನನ್ನ ಕುರ್‍ತದ ಜೇಬುಗಳು ಉಬ್ಬಿ ಹರಿದು ಹೋಗುವ ತನಕ, ತಾವು ಹೊರಳಾಡಿ, ನಾನಾಡಿದ ಪ್ರತಿ ಪಂದ್ಯವನ್ನು ಗೆಲ್ಲಲು ನನಗೆ ನೆರವಾದ ಬಿಳಿ ಗೀಟುಗಳಿದ್ದ, ಇನ್ನೇನು-ಕಪ್ಪು-ಅನ್ನಬಹುದಾದ, ಕಡುಗೆಂಪು ಗೋಲಿಯು ನನಗೆ ನೆನಪಾಗುತ್ತದೆ.

ಆಹಾ! ಎಶ್ಟು ಇಶ್ಟ ನನಗೆ ನಮ್ಮ ಅಮ್ಮನ ಸಿಹಿ ತಿಂಡಿಗಳು ಎಂದರೆ! ನಿಜಕ್ಕೂ ನಿಕ್ಕಿಯಾಗಿ, ಅವು ಅವುಗಳನ್ನು ಮಾಡಿದ, ಏನೂ ಅನಿಸದ, ವಟಗುಡುವ, ಬೋಳುದಲೆಯ ಹೆಂಗಸಿಗಿಂತ ನನಗೆ ಹೆಚ್ಚು ಇಶ್ಟವಾಗಿದ್ದವು! ಒಳಾಂಗಣಕ್ಕೇ ಸೀಮಿತಳಾದ, ಮಯ್ಸರಿಯಿಲ್ಲದ, ತೆರೆಯ-ಮರೆಯ, ಏನನ್ನೂ ಬೇಡದ, ಮನಸೆಳೆಯದ ಆಕೆ, ನನ್ನ ಮಟ್ಟಿಗೆ, ಎಂದೂ ಬದುಕಿಗೆ ತೆರೆದುಕೊಂಡವಳಲ್ಲ. ಎಂದೂ ಬದುಕಿದವಳಲ್ಲ! ಆದರೆ ಆಕೆ ಮಾಡಿದ ಹಲ್ವಾ ಮತ್ತು ಜಿಲೇಬಿಗಳು ಒಹ್! ಅವನ್ನು ನಾನು ತಿಂದಾಗ ಎಶ್ಟು ಬಿಸಿಯಾಗಿರುತ್ತಿದ್ದುವು ಎಂದರೆ ನನ್ನ ನಾಲಿಗೆಯ ಚರ್‍ಮ ಸುಟ್ಟು ಹೋಗುತ್ತಿತ್ತು. ನನ್ನ ತಂಗಿಯ ಮತ್ತು ಅಣ್ಣಂದಿರ ಪಾಲನ್ನೂ ಕಬಳಿಸಿ ನಾನು ತಿನ್ನುತ್ತಿದ್ದೆ. ಇದಕ್ಕೆ ಇಡೀ ಕುಟುಂಬದವರಿಂದ ಹೊಡೆಸಿಕೊಂಡು ಶಾಪ ಹಾಕಿಸಿಕೊಳ್ಳುತ್ತಿದ್ದಿದ್ದೂ ಉಂಟು.

ಮುಂದೆ, ನಾನು ಇನ್ನೂ ಸ್ವಲ್ಪ ದೊಡ್ಡವನಾದಾಗ, ಓಡುತಿಟ್ಟನೇ ಮುಕ್ಯ ಆದ ಕಾಲ ಒಂದಿತ್ತು. ಅಪ್ಪನಿಂದ ಅತವ ಅಮ್ಮನಿಂದ ಅತವ ಇತರರಿಂದ ಕದ್ದ ದುಡ್ಡನ್ನು ಕಯ್ಯಲ್ಲಿ ಬಚ್ಚಿಟ್ಟುಕೊಂಡು, ಸದ್ದು ಆಗದಿರಲೆಂದು ಕಾಲುಗಳಿಗೆ ಏನೂ ತೊಟ್ಟುಕೊಳ್ಳದೆಯೇ, ಇರುಳಿನ ಕತ್ತಲಿನಲ್ಲಿ ನನ್ನ ರೂಮಿನಿಂದ ಹೊರಬಿದ್ದು, ಗಾರಾದ ಇರುಳು-ಬದುಕಿನ ಬೀದಿಗಳ ಮೂಲಕ ಸಾಗಿ, ದಿನದ ಕೊನೆಯ ಆಟದ ಹೊತ್ತಿಗೆ ಸರಿಯಾಗಿ ಆಟದ-ಮನೆ ಸೇರುತ್ತಿದ್ದೆ. ಹೀಗೆ ಒಂದು ವಾರಕ್ಕೆ ನಾಲ್ಕು, ಅಯ್ದು, ಒಂದೊಂದು ಸಾರಿ, ಆರೂ ಓಡುತಿಟ್ಟಗಳನ್ನು ನೋಡುತ್ತಿದ್ದೆ. ಮೀನಾ ಕುಮಾರಿ ಮತ್ತು ನರ್‍ಗಿಸ್ ನನ್ನ ಸ್ವರ್‍ಗದ ರಾಣಿಗಳಾಗಿದ್ದರು.

ಕಾಲುಗಳನ್ನು ನನ್ನ ಕೆಳಗೆ ಹೊಗಿಸಿಕೊಂಡು ಹುಲ್ಲು-ಸೀಟಿನ ಮೇಲೆ ಕೂತು, ಕಯ್ಯಲ್ಲಿ ಉಪ್ಪು-ಹಾಕಿದ ಹೆಸರುಗಾಳಿನ ಕೋನ್ ಅನ್ನು ತಿನ್ನದೆಯೇ ಹಿಡಿದುಕೊಂಡು, ನಾನು ತೆರೆಯ ಮೇಲಿನ ಅವರ ಪ್ರೇಮಿಗಳ ಜಾಗದಲ್ಲಿ ನನ್ನನ್ನು ಇಟ್ಟುಕೊಂಡು, ಪೆಂಪಾದ, ಹೊಳೆಯುವ ಬಟ್ಟು ತೊಟ್ಟ ಈ ರಾಣಿಗಳನ್ನು ಬೆರಗುಗಣ್ಣುಗಳಿಂದ, ಬಾಯಿ-ಬಿಟ್ಟುಕೊಂಡು ನೋಡಿದಾಗ, ದೊಡ್ಡವನಾಗಿ, ಹುಲುಸಾದ ಸೊಂಪಾದ ಕೂದಲುಳ್ಳವನಾಗಿ, ಚುರುಕಾದ ಮತ್ತು ಮುನ್ನುಗ್ಗುವ ವ್ಯಕ್ತಿಯಾಗಿ ನನಗೆ ನಾನೇ ಕಂಡುಬಂದೆ. ಅವರ ಸೆಳೆತಗಳು, ಅವರ ಬೆಡಗು ನನ್ನ ಬದುಕಿನ ಕಾಲಿ ಜಾಗಗಳನ್ನು ತುಂಬಿ, ನನ್ನ ಬದುಕಿಗೆ ಹೊಸ ಬಣ್ಣ, ಹೊಸ ಮಿರುಗು ಲಯ ನೀಡಿದವು. ಆಗ ಎಂದೂ ಚುರುಕಾಗಿರುವ, ಎಂದೂ ಸ್ತಬ್ದವಾಗಿರದ ಕಯ್ಗೆ ಸಿಗದಿರುವ ಎಳೆಹರೆಯದ ಹುಡುಗಿಯರ, ಮತ್ತು ಸಾಯಂಕಾಲದ ಕೆಲಸಗಳು ತಮ್ಮನ್ನು ಉಸಿರು-ಕಟ್ಟಿಸುವ ಮೊದಲು ಬದುಕು ಕೊಂಚ ಬಿಡುವು ಮಾಡಿಕೊಂಡು ಸಾದ್ಯತೆಗಳನ್ನು ಮುಂದಿಡುವ ಮದ್ಯಾನ್ನದ ಆ ಹೊತ್ತಿನಲ್ಲಿ ತಮ್ಮ ಕಯ್ಗಳನ್ನು ಸೊಂಟದ ಮೇಲೆ ಇಟ್ಟುಕೊಂಡು, ತಮ್ಮ ಮನೆಗಳ ಹೊಸ್ತಿಲುಗಳ ಮೇಲೆ ನಿಂತ ನಮ್ಮ ಬೀದಿಯ ಬಲಿತ ಹಿರಿಯ ಮೇಟ್ರನ್-ತರದ ಹೆಂಗಸರ, ಅರಿವು ನನಗೆ ಮೂಡಿತು. ಈ ಎಳೆವಯಸ್ಸಿನ ಹುಡುಗಿಯರು ಹೊಲಸು ನೀರಿನಲ್ಲಿರುವ ಕಳೆಗಳಂತೆ ಇದ್ದರೂ, ಎಶ್ಟೇ ಕೊಳಕಲಾಗಿದ್ದರೂ ಸೆಳೆಯುವ ಮುಗುಳ್ನಗೆಗಳಿಗೆ, ಕದ್ದ-ನೋಟಗಳಿಗೆ ಮತ್ತು ಚಿನ್ನದ ಹೆಳಲುಗಳಿಗೆ, ಲೇಸುಗಳಿಗೆ ತೆರೆ-ಮೇಲಣ ರಾಣಿಗಳಿಗೆ ಏನೂ ಕಡಿಮೆ ಇರಲಿಲ್ಲ. ಕೆಲವರು ನನ್ನ ಕಣ್ಣುಗಳ ನೋಟಕ್ಕೆ ಮಾರೆಸಗಿದರು. ನನಗೆ ಬೇಕಾದ್ದನ್ನು ಕೊಡುವುದಾಗಿ ಮಾತು ಕೊಟ್ಟರು, ಆದರೆ ಈಗಲ್ಲ, ಆ ಮೇಲೆ, ಇನಿಪು-ಆಟ ಆದ ಮೇಲೆ.

ಆದರೆ ನಾನು ನನ್ನ ಉಸ್ತಾದನ್ನು ಬೇಟಿ ಮಾಡಿ, ಆತನಿಗೆ ನುಡಿಸಲು ಶುರು ಮಾಡಿದಾಗ ಎಲ್ಲರೂ ನನ್ನಿಂದ ದೂರ ಸರಿದರು, ಸರಿದು ಕಾಣದಾದರು. ನನ್ನ ತಾಯಿಯ ಸಿಹಿಯಾದ ಹಲ್ವಾದ ಜಾಗವನ್ನು, ಸಿನಿಮಾದ ರಾಣಿಯರ, ಬೀದಿ-ನೀರೆಯರ, ಗೋಲಿಗಳ, ಕದ್ದೊಯ್ದ ದುಡ್ಡಿನ ಮತ್ತು ಇನಿಪು-ಗಲ್ಲಿಯ ನನ್ನ ತಂದೆಯ ಮನೆಯಲ್ಲಿ ನಾನು ಹಿಂಡಿ ತೆಗೆದ ಎಲ್ಲಾ ನಲಿವು, ಹಿಗ್ಗಣೆ ಸಿರಿಗಳ ಜಾಗವನ್ನು ಉಸ್ತಾದ್ ತೆಗೆದುಕೊಂಡಿದ್ದರು. ನನಗೆ ಅಂತ ಆಟಿಗೆ ಸಾಮಾನು, ಅಂತ ಕನಸುಗಳು ಬೇಡವಾಗಿದ್ದವು. ನನಗೆ ನನ್ನ ಬದುಕಿನ ಉದ್ದೇಶ ಸಿಕ್ಕಿತ್ತು. ಇದನ್ನು ಏನೂ ಹಿಂಜರಿಕೆ ಇಲ್ಲದೆ ಈಡೇರಿಸುವುದರಲ್ಲಿ ನನಗೆ ಎಶ್ಟು ತ್ರುಪ್ತಿ ಸಿಕ್ಕಿತ್ತೆಂದರೆ ನಾನು ಇನ್ನೇನನ್ನೂ ಬಯಸಹೋಗಲಿಲ್ಲ.

ಈ ಇನಿಪು-ಕಚೇರಿಗಳ ಪಯಣಗಳಲ್ಲಿ ತಂದೆಯ ಇಳಿಗಾಲದಲ್ಲಿ ಅವರನ್ನು ನೋಡಿಕೊಳ್ಳಲು ಮತ್ತು ಅವರ ಕಾಯಿಲೆಗಳಿಗೆ ಸಾಕಾಗುವಶ್ಟು ನಾನು ಅಲ್ಪ ಸ್ವಲ್ಪ ದುಡ್ಡು ಮಾಡಿಕೊಂಡೆ ಎಂಬುದು ದಿಟನೇ. ನಾನು ಮದುವೆನೂ ಗಯ್ಕೊಂಡೆ. ಅಂದರೆ ನನ್ನನ್ನು ಅವರಿಗೆ ಪ್ರಿಯವಾದ ನೆರೆಹೊರೆಯ ಒಬ್ಬರ ಮಗಳಿಗೆ ಮದುವೆ ಮಾಡುವುದನ್ನು ತಾಯಿ ಸಂಬಾಳಿಸಿದರು. ಹುಡುಗಿ ಅವರ ಜೊತೆ ಬದುಕಿದಳು. ನಾನು ಅವಳನ್ನು ನೋಡುತ್ತಿದ್ದುದು ಬಹಳ ಅಪರೂಪಕ್ಕೆ. ನನಗೆ ಅವಳ ಹೆಸರೂ, ಮುಕವೂ ಮಸುಕು-ಮಸುಕಾಗಿ ನೆನಪಿವೆ. ತಾಯಿಯೊಡನೆ ಅವಳು ಏನೂ ತೊಂದರೆಗೊಳಗಾಗದ ಹಾಗಿದ್ದಾಳೆ. ನನಗೆ ಏನೂ ತೊಂದರೆ ಕೊಡುವುದಿಲ್ಲ. ನನ್ನ ಉಸ್ತಾದ್ ಜೊತೆ ಓಡಾಡಲು, ಅವರಿಗೆ ನುಡಿಸಲು ನಾನು ಸ್ವತಂತ್ರ.

ಅವರಿಗೂ ತಮ್ಮ ಕುಟುಂಬದ ಬಗ್ಗೆ ಮತ್ತು ಇಡಿಯೆಡೆಯ ಬಗ್ಗೆ ಇದೇ ನಿಲುವಿದೆ ಎಂಬುದು ನನ್ನ ನಂಬಿಕೆ. ನಮ್ಮ ಇನಿಪನ್ನು, ನಮ್ಮ ಇನಿಪು-ಕಚೇರಿಗಳನ್ನು ಬಿಟ್ಟರೆ ಅವರಲ್ಲೂ ಬೇರೆ ಯಾತರ ಬಗ್ಗೆನೂ ಒಂಚೂರು ಆಸಕ್ತಿ ಇರುವುದನ್ನು ನಾನಂತೂ ಕಂಡಿಲ್ಲ. ಪಾಯಶ ಅವರು ಮದುವೆ ಆಗಿದ್ದಾರೆ. ಈ ತರದ ಸುದ್ದಿಯನ್ನೂ ನಾನು ಕೇಳಿದ್ದೇನೆ. ಆದರೆ ನಾನು ಅವರ ಹೆಂಡತಿಯನ್ನಾಗಲೀ ಅತವ ಅವರು ಹೆಂಡತಿಯನ್ನು ನೋಡ-ಹೋಗುವುದನ್ನಾಗಲೀ ನೋಡಿಲ್ಲ. ಅದರ ಬಗ್ಗೆ ಕೇಳಿಲ್ಲ. ಪ್ರಾಯಶ ಅವರಿಗೆ ಮಕ್ಕಳಿದ್ದಾರೆ. ಪ್ರಾಯಶ ಒಂದು ದಿನ ಅವರೊಬ್ಬ ಮಗ ವೇದಿಕೆಯ ಮೇಲೆ ಕಾಣಿಸಿಕೊಂಡು ಅವರಿಗೆ ಹಾಡಿಕೆ-ಒಡಹೋಕನಾಗುವುದನ್ನು ಕಲಿತುಕೊಳ್ಳುತ್ತಾನೆ. ಪಯಣಗಳ ನಡುವೆ ನಾವು ಕೆಲವೊಮ್ಮೆ ಕೆಲ-ದಿನಗಳ ಮಟ್ಟಿಗೆ ದಣಿವಾರಿಸುಕೊಳ್ಳುವ ಬಿಡುವಿಗೆ ಮನೆಗೂ ಹೋಗುತ್ತೇವೆ ಎಂಬುದೂ ದಿಟನೇ. ಅನಿವಾರ್‍ಯವಾಗಿ ನಾವಿಬ್ಬರೂ ಈ ರಜಗಳನ್ನು ಮೊಟಕುಗೊಳಿಸಿ ಉಸ್ತಾದರ ಪಟ್ಟಣದ ಮನೆಗೆ ಪ್ರೇಕ್ಟಿಸ್‌ಗೆ ಬರುತ್ತೇವೆ. ನಾನು ವಾಪಸ್ ಬಂದಾಗ ಅವರು ನನ್ನನ್ನು ಏನನ್ನಾದರೂ ಕೇಳುವುದಿರಲಿ, ಮಾತೂ ಆಡುವುದಿಲ್ಲ. ಆದರೆ ನನ್ನ ಹೆಜ್ಜೆಯುಲಿ ಕೇಳಿದಾಗ ಅವರು ಅದನ್ನು ಗುರುತಿಸುತ್ತಾರೆಂದು ನನಗೆ ಗೊತ್ತು. ಆಗ ತಮ್ಮನ್ನು ಹಾಗೂ ನನ್ನನ್ನು ಅಣಕಿಸುವಂತೆ ಅವರು ಅರೆ-ಮುಗುಳ್ನಗು ನಕ್ಕು, ತಮ್ಮ ಅರೆ ಅಂಗಿ-ರಟ್ಟೆಯನ್ನು ಸುರುಳಿ-ಮಾಡಿ ಹಿಂದೆ ಸರಿಸಿ, ಸಿತಾರ್‍ ಎತ್ತಿಕೊಳ್ಳುತ್ತಾ ನನ್ನೆಡೆ ನೋಟ ಎಸೆದು, ತಲೆ-ಕುಲುಕುತ್ತಾರೆ. ರಾಗ ದೇಶ್ ಅತವ ಮಲ್ಹರ್‍ ಅತವ ಮೇಗ್ ಎಂದು ಅವರು ಸಾರುತ್ತಾರೆ. ನಾನು ಅವರ ಹಿಂದೆ ಬರಿ-ನೆಲದ ಮೇಲೆ ಕೂತು, ಅವರು ಹೇಳಿದ ರಾಗವನ್ನು ಕಟ್ಟಲು ಉಲಿಮಟ್ಟಗಳನ್ನು ನುಡಿಸುತ್ತೇನೆ.

ನಾನು ನಮ್ಮ ಈ ನಂಟನ್ನು, ಅವರಿಗೆ ಇರುವ ನನ್ನ ಅಗತ್ಯವನ್ನು ಮತ್ತು ತಾನ್ ಪುರದ ಮೇಲೆ ಅವರಿಗಿರುವ ನೆಚ್ಚಿಕೆಗಳನ್ನು ಸಲ್ಲುವುದಕ್ಕಿಂತ-ಹೆಚ್ಚಿಸಿ-ಹೇಳುತ್ತಿದ್ದೇನೆಂದು ನಿಮಗೆ ಅನಿಸಬಹುದು. ನನಗಿಂತ ಹೆಚ್ಚು ಮುಕ್ಯವಾದ ಪಾತ್ರಗಳನ್ನು ನಮ್ಮ ಇನಿಪು-ಗುಂಪಿನ ಬೇರೆ ಸದಸ್ಯರು ವಹಿಸುತ್ತಾರೆ ಎಂದು ನೀವು ಎತ್ತಿ ಹೇಳಬಹುದು. ನೀವು ಇದರ ಬಗ್ಗೆ ಸರಿಯಾಗಿ ಎಣಿಸಿದ್ದೇರೆಂದೂ ನಾನು ಒಪ್ಪಬಹುದು. ಆದರೆ ಈ ಒಪ್ಪಿಕೆ ಮೇಲ್ಮಯ್ಯದ್ದು. ಅವರ ಒಡಹೋಕನಾದ ತಬ್ಲ ನುಡಿಸುಗ ’ಮುಕ್ಯ’ ಪಾತ್ರ ವಹಿಸುತ್ತಾನೆಂಬುದು ನಿಚ್ಚಳವಾಗೇ ಇದೆ. ಈ ಪಾತ್ರ ಬಹಳ ಜೋರಾದ, ಅಗ್ರೆಸಿವ್ ಆದ ಮತ್ತು ಒಮ್ಮೊಮ್ಮೆ ಗುಡುಗಿನಶ್ಟು ಮೊಳಗುವಂತಾದ್ದು. ಆದರೆ ಈ ಮುಕ್ಯವಾದ ಪಾತ್ರ ಎಂತಹದ್ದು? ಅದು ಅನಿವಾರ್‍ಯವಾದದ್ದಲ್ಲ. ಅವರ ಮುಂಚ ವಿಮರ್‍ಶಕರು ಒಪ್ಪುವ ಹಾಗೆ, ತೊಡಗಿಸುವ, ಅಲಾಪದಿಂದ ಒಡಹೋಗದ ಟ್ಯವನ್ನು ನುಡಿಸುವಾಗ ನನ್ನ ಉಸ್ತಾದ್ ತಮ್ಮ ಅತಿ ಹೆಚ್ಚಿನ ಉಲಿಮಟ್ಟದಲ್ಲಿರುತ್ತಾರೆ. ಇದನ್ನು ಅವರು ಎಶ್ಟು ತೆಳುಪಿನಿಂದ, ಎಶ್ಟು ವಿಚಾರವಂತಿಕೆಯಿಂದ ಮತ್ತು ಸಂವೇದನೆಯಿಂದ ನುಡಿಸುತ್ತಾರೆಂದರೆ, ಕೆನ್ನೆಯ ಮೇಲೆ ಕಣ್ಣೀರನ್ನು ಸುರಿಯಗೊಡದೇ ನಾನು ಅದನ್ನು ಕೇಳಲು ಸಾದ್ಯವೇ ಇಲ್ಲ. ಆದರೆ ರಾಮನಾತ್ ತಬಲ ಮೇಲೆ ತಪ್ ಎಂದು ತಟ್ಟಿ, ತಮ್ಮ ಕಯ್ ಆಡಿಸಿದ ಕೂಡಲೆ ಇನಿಪು ಚುರುಕು, ದಯ್ರ್‍ಯ ಹಾಗೂ ಸೆಣಸಿನಿಂದ ಕೂಡುತ್ತದಾದರೂ, ಇನಿಪಿನ ಬೆಲೆ ಮೊಟಕಾಗುತ್ತದೆ ಎಂಬುದು ನನ್ನ ಮತ್ತು ಅನೇಕ ವಿಮರ್‍ಶಕರ ತೋಚಿಕೆ(ಅಬಿಪ್ರಾಯ). ಕೇಳುಗ-ನೆರೆವಿ(ಆಡಿಯಂಸ್)ಯು ನಿಜವಾಗಿ ಗತ್ ಅನ್ನು ಸಯ್ಪಿನ ಆಲಾಪಕ್ಕಿಂತ ಹೆಚ್ಚಾಗಿ ಸವಿಯುತ್ತದೆ ಎಂಬುದರ ಬಗ್ಗೆ ಸಂದೇಹ ಇಲ್ಲ. ಅದು ರಾಮಬನಾತರೆಡೆ ಹೆಚ್ಚು ಗಮನ ಹರಿಸುತ್ತೆಂಬುದೂ ದಿಟ. ಕೆಲವೊಮ್ಮೆ, ಒಂದು ಬ್ರಿಲಿಯಂಟ್ ಪೇಸೆಜಿನ ಕೊಲ್ಲಣಿಗೆ(ಪರ್‍ಪೋಮನ್ಸ್)ಯ ಹೊತ್ತಿನಲ್ಲಿ ರಾಮನಾತ್ ಉಸ್ತಾದಿಗೆ ಸಾಟಿಯೆನಿಸುವಶ್ಟು, ಬರಿ ಸಾಟಿಯೆನಿಸುವಶ್ಟೇ ಯಾಕೆ, ಉಸ್ತಾದನ್ನು ಮೀರಿಸುವಶ್ಟೂ ಮೆಚ್ಚುಗೆ ಗಳಿಸುತ್ತಾರೆ. ಆಗ ಉಸ್ತಾದರು ರಾಮನಾತರತ್ತ ತಿರುಗಿ ಮಸುಕಾದ ಮೆಚ್ಚಿಗೆಯ-ಮುಗುಳ್ನಗು ನಗುತ್ತಾರೆ. ಅತವ ಸಯ್ಪಾಗಿ ತಲೆ ಕುಲುಕುತ್ತಾರೆ: ಅವರು ಅಶ್ಟು ದೊಡ್ಡ-ಮನಸ್ಸಿನ ಮನುಶ್ಯ. ಅವರು ಇದನ್ನೇ ನನ್ನ ವಿಶಯದಲ್ಲಿ ಮಾಡುವುದಿಲ್ಲ. ಉಸ್ತಾದರ ಮತ್ತು ಒಡಹೋಕರ ಹಿಂದೆ ನೆರೆವಿ(ಆಡಿಯಂಸ್)ಗೆ ಕಾಣದ ಹಾಗೆಯೇ ನಾನು ಕೂತಿರುತ್ತೇನೆ. ನುಡಿಸಲು ನನಗೆ ಒಂಟಿ ಪಟ್ಯಗಳಿಲ್ಲ. ನಾನು ಉಸ್ತಾದರ ರಾಗವನ್ನು ಅನುಕರಿಸುವುದನ್ನಾಗಲೀ, ಯಾವುದೇ ರೀತಿಯ ಪಯ್ಪೋಟಿಯನ್ನು ಹೊಗುವುದಾಗಲೀ ಮಾಡುವುದಿಲ್ಲ. ರಾಗದ ನುಡಿಸುಹದಲ್ಲಿ ನಾನು ತಾನ್‌ಪುರದ ಮೂರು ತಂತಿಗಳ ಮೇಲೆ ಮತ್ತೆ ಮತ್ತೆ ಬೆರಳಾಡಿಸುತ್ತಾ ಒಂದು ತರಹದ ಡಲ್ಲಾದ ಮೊರೆತದ ದನಿ ಉಂಟು ಮಾಡುತ್ತಾ ಇನಿಪಿನಲ್ಲಿ ಎಡೆಗಳನ್ನು ತುಂಬುತ್ತೇನೆ. ಇದು ಉಸ್ತಾದರಿಗೆ ನಾನು ಉಸ್ತಾದರನ್ನು ಹಿಡಿದಿಡುವ ಉಲಿಮಟ್ಟಗಳ ರಾಗದ ದಾರಿ ಬಿಟ್ಟು ಹೋಗದಿರಲು ಅನುವಾಗುವಂತೆ ಮಾಡಿ ಕೊಡುವ ದಾರಿ. ನಾನು ಯಾವುದೇ ಪಯ್ಪೋಟಿಯಲ್ಲಿ ಬಾಗಿಯಾಗಿರದೇ ಇರುವುದರಿಂದ, ನನಗೆ ಎಂದೂ ಗಮನ ನನ್ನೆಡೆಗೇ ಹರಿಯುವಂತೆ ಮಾಡುವ ಆಸಕ್ತಿ ಇಲ್ಲದೇ ಇರುವುದರಿಂದ, ಅವರಿಗೆ ಇನಿಪಿನಲ್ಲಿ ಪಯ್ಪೋಟಿ ಒಡ್ಡದೇ ಇರುವುದರಿಂದ ನಾನೇ ಅವರ ನಿಜವಾದ ಒಡಹೋಕ ಅತವ ನಿಕ್ಕಿಯಾಗಿ ಅವರ ನಿಜವಾದ ಗೆಳೆಯ ಎಂಬುದು ನನ್ನ ಮತ. ಅವರು ನನ್ನೆಡೆ ನೋಡಿ ಮುಗುಳ್ನಗದೇ ಇರಬಹುದು, ಅತವ ಮೆಚ್ಚಿಕೆಯಿಂದ ತಲೆ-ಕುಲುಕದಿರಬಹುದು. ಆದರೆ ನಾನಿಲ್ಲದೆ ಅವರ ಇನಿಪಿಲ್ಲ. ಅವರ ಜೊತೆ ಅವರ ನೆರಳಿನ ತರಹ ನಾನಿರಲು ನನಗೆ ಈ ಮೆಚ್ಚಿಕೆಯ-ದೊರೆತ(ರಿವಾರ್‍ಡ್)ವೊಂದೇ ಸಾಕು. ಬಹಳ ಕೂದಲು ಹೊಂದಿದ, ಒಡ್ಡನಂತಿರುವ, ತನ್ನ ಅಂಗಿಯ ಕೆಳಗಿರುವ ತನ್ನ ಹೊಟ್ಟೆಯನ್ನು ಆಗಾಗ ಕೆರೆದುಕೊಳ್ಳುವ, ದೋಬಿ ತರಹ ಕಯ್ಬೆರಳುಗಳಲ್ಲಿ ಹೊನ್ನ-ಉಂಗುರಗಳನ್ನು ತೊಟ್ಟಿರುವ ರಾಮನಾತ, ನಾನು ವೇದಿಕೆಯ ಮೇಲೇರುವಾಗ ತನ್ನ ಕಾಲು ಚಾಚಿ ನನ್ನನ್ನು ಎಡವಿಸುವಾಗ, ಅತವ ತಣ್ಣಗಾದ ಹುದುಗು-ಹಿಟ್ಟು-ಸೇರಿಸದೇ-ಇರುವ, ಲೀವನ್-ಆಗದೇ-ಇರುವ ಬ್ರೆಡ್ ನನಗೆ ಬಿಟ್ಟು, ಮೇಜಿನ ಮೇಲಿರುವ ಎಲ್ಲ ಪಲಾವನ್ನು ತಾನೇ ಕಬಳಿಸಿ ಮುಕ್ಕುವಾಗ, ನನಗೇನೂ ತೊಂದರೆ ಅನಿಸುವುದಿಲ್ಲ. ನನಗೆ ಆತನ ನಿಜವಾದ ಸೊಮ್ಮು, ನಿಜವಾದ ಬೆಲೆ, ಅತವ ಬೆಲೆ-ಇಲ್ಲಮೆ ಗೊತ್ತು. ಆಗ ನಾನು ಇದನ್ನು ತಿಳಿಸುವ ನೋಟವನ್ನು ಅವನೆಡೆ ಬೀರುತ್ತೇನೆ ಅಶ್ಟೇ.

ನನ್ನ ಈ ನನ್ನ-ಬಗ್ಗೆಯೇ-ಇರುವ ನೆಮ್ಮದಿಯಿಂದ ನಾನು ಕೇವಲ ಒಮ್ಮೆ ಹೊರ ತಳ್ಳಲ್ಪಟ್ಟೆ. ಇದು ಎಶ್ಟು ಪೆದ್ದತನದ್ದು ಎಂದರೆ ನನಗೆ ಇದನ್ನು ಹೇಳಿಕೊಳ್ಳಲೂ ನಾಚಿಕೆಯೆನಿಸುತ್ತದೆ. ಅದು ಸ್ವಲ್ಪ ಹೊತ್ತೇ ಇದ್ದಿದ್ದು ಆದರೆ ಈಗಲೂ ಅದರ ಬಗ್ಗೆ ಯೋಚಿಸುವಾಗ ಮುಜುಗರ ಎನಿಸುತ್ತದೆ. ಇದಕ್ಕೆ ನನ್ನನ್ನು ಎಳೆದಿದ್ದು ನನ್ನ ಗೋಲಿ-ಆಡುವ ಚಿಕ್ಕಂದಿನ ಪೆದ್ದ ಗೆಳೆಯರು. ಅವರನ್ನು ನನ್ನ ಬದುಕಿನಲ್ಲಿ ಹಿಂದೆ ಬಿಟ್ಟ ಮೇಲೆ, ನಾನು ಎಂದೂ ಹಿಂದೆ ತಿರುಗಿ ನೋಡಬಾರದಾಗಿತ್ತು. ನಮ್ಮ ತವರು-ಪಟ್ಟಣದಲ್ಲಿ ಒಂದು ದಿನ ರಿಹರ್‍ಸಲ್ ಆದ ಮೇಲೆ ಕಚೇರಿ ತೊಡಗುವ ಕೆಲವು ತಾಸುಗಳ ಮುನ್ನ ಅವರು ನನ್ನ ಹತ್ತಿರ ಬಂದರು. ಅವರು ಕಳ್ಳರಂತೆ ಹಾಲಿನೊಳಗೆ ನುಸುಳಿ ಸಿಗರೆಟ್ ಸೇದುತ್ತಾ, ಜೋಕುಗಳನ್ನು ಹೇಳುತ್ತಾ, ಗುಟ್ಟಾಗಿ ತಡೆ-ಹಿಡಿದಂತೆ ನಗುತ್ತಾ, ಹಿಂದಣ ಸೀಟುಗಳಲ್ಲಿ ಕೂತಿದ್ದರು. ಆದಾಗ್ಯು ಇದು ವೇದಿಕೆಯ ವರೆಗೆ ಹರಿದು-ಹೋಗಿ ಹೊರ-ಇಡಿಯೆಡೆಯ ಆಗು-ಹೋಗುಗಳ ಪರಿವೆ ಇಲ್ಲದಿರುವಶ್ಟು ಇನಿಪಿನಲ್ಲಿ ಮುಳುಗಿಹೋಗದ ಜನರ ಗಮನ ಸೆಳೆಯಿತು. ನಾನು ಮತ್ತು ನನ್ನ ಉಸ್ತಾದಂತೂ ನಮ್ಮ ಗಮನ ಬೇರೆಡೆ ಹರಿಯದಂತೆ ನೋಡಿಕೊಂಡು ನಮ್ಮ ಇನಿಪಿನ ಮೇಲೆ ಮನ- ಇಟ್ಟಿದ್ದೆವು. ಇನಿಪಿನಲ್ಲಿ ತೊಡಗಿರುವಾಗ ಎಲ್ಲ ಗೊಂದಲಗೊಳಿಸುವ ಮನ-ತಿರುಗಿಸುವ ಆಗುಹಗಳನ್ನು ಹೊರಗಿಡುವ ಕಸುವು ನಮ್ಮಿಬ್ಬರಲ್ಲೂ ಇದೆ: ಈ ಕಸುವಿನ ಬಗ್ಗೆ ನಮಗೆ ಹೆಮ್ಮೆ ಇದೆ.

ನಾನು ಹಾಲ್ ಅನ್ನು ಬಿಡುವಾಗ ಅವರು ಇನ್ನೂ ಅಲ್ಲಿಯೇ ನಿಂತಿದ್ದನ್ನು ನೋಡಿದೆ: ಬಣ್ಣ ಬಣ್ಣದ ಅಂಗಿಗಳ, ಮಿರುಗುವಂತೆ ಎಣ್ಣೆ-ಮೆತ್ತಿದ ತಲೆ-ಕೂದಲಿನ ಮತ್ತು ಕಣ್ಣಿಗೆ-ರಾಚುವ ಮೆಟ್ಟುಗಳ ಬೆರಕೆ ಆ ಗುಂಪು. ಅವರು ನನ್ನ ಸುತ್ತ ಕಲೆತರು. ಊರಿನ ಗಲ್ಲಿಗಳಲ್ಲಿ ನಾವು ಆಡುತ್ತಿದ್ದ ಚಿಕ್ಕಂದಿನ ಆಟಗಳ ಬಗ್ಗೆ ಅವರು ಮಾತಾಡಿದ್ದರಿಂದಲೇ ನಾನು ಅವರನ್ನು ಗುರುತಿಸುವುದಕ್ಕಾಯಿತು. ಬೇರೆ ಎಲ್ಲಾ ಸಂಗತಿಗಳಲ್ಲಿ ಅವರು ನನಗಿಂತ ಬಹಳ ಬೇರೆಯಾಗಿದ್ದರು. ನಾವು ಬೇರೆ ಬೇರೆ ಹೊಲಬುಗಳಲ್ಲಿ ಪಯಣಿಸಿದೆವು ಎಂಬುದು ನಿಚ್ಚಳವಾಗಿತ್ತು. ಅವರ ಜೋರಾದ ದನಿಗಳು ಮತ್ತು ಚೀಪಾದ-ಅಂಗಿಗಳ ಬಣ್ಣ ನನಗೆ ಕೂಡಲೇ ತಲೆ ನೋವು ತಂದಿಕ್ಕಿದವು. ನಾನು ಅವರೊಡನೆ ನಮ್ರವಾಗಿ ಮತ್ತು ಒಲವಿಂದ ನಡೆದುಕೊಳ್ಳಬೇಕೆಂಬುದು ಗೊತ್ತಿದ್ದರೂ, ನನ್ನ ಕಲೆ ಮತ್ತು ಸ್ತಾನ ಈ ತರಹದ ನಡೆಯನ್ನು ಬಯಸುತ್ತದೆಂದು ಗೊತ್ತಿದ್ದರೂ, ಅವರೆಡೆ ನಗುತ್ತಾ ಇರುವುದು ನನಗೆ ಕಶ್ಟ ಎನಿಸಿತು. ನನ್ನನ್ನು ಪಕ್ಕದ ಟೀ-ಅಂಗಡಿಗೆ ಕರೆದುಕೊಂಡು ಹೋಗಲು ಮತ್ತು ಅಲ್ಲಿ ಟೀ ಕೊಳ್ಬೆಸ-ಹೇಳಲು (ಓರ್‍ಡರ್‍ ಮಾಡಲು) ನಾನು ಅವರಿಗೆ ಎರವಾದೆ. ಸ್ವಲ್ಪ ಹೊತ್ತು ನಾವು ನಮ್ಮ ಮನೆಗಳ ಬಗ್ಗೆ, ಕುಟುಂಬಗಳ ಬಗ್ಗೆ, ಗೆಳೆಯರ ಬಗ್ಗೆ, ಚಿಕ್ಕಂದಿನ ಆಟಗಳ ಬಗ್ಗೆ ಮಾತಾಡಿದೆವು. ಮುಂದೆ, ಅವರಲ್ಲೊಬ್ಬ – ಅಜೀತ್, ಅನಿಸುತ್ತೆ – ಹೀಗೆ ಉಲುಹಿದ:

ಅಣ್ಣ! ನೀನು ಅಶ್ಟು ಚೆನ್ನಾಗಿ ನುಡಿಸುತ್ತಿದ್ದೆ! ನಿನ್ನ ತಂದೆಗೆ ಇದರ ಬಗ್ಗೆ ಎಶ್ಟು ಹೆಮ್ಮೆ ಇತ್ತೆಂದರೆ ಅವರು ನೀನು ದೊಡ್ಡ ಉಸ್ತಾದ್ ಆಗ್ತೀಯ ಎಂದು ಅಂದುಕೊಂಡಿದ್ದರು. ನೀನು ಒಂದು ದಿನ ದೊಡ್ಡ ಉಸ್ತಾದ್ ಆಗ್ತೀಯ ಎಂದು ಅವರು ನಮಗೂ ಹೇಳಿದ್ದರು. ಈಗ ನೋಡಿದ್ರೆ! ನೀನು ವೇದಿಕೆಯ ಹಿಂದೆ ಕೂತು ರಹೀಮ್ ಕಾನ್‌ಗೆ ತಾನ್‌ಪುರ ನುಡಿಸ್ತಾ ಇದಿಯಾ?

ತಂದೆ ಕೊನೆಯುಸಿರೆಳೆದಾಗಿನಿಂದ ನನ್ನ ಜೊತೆ ಯಾರೂ ಎಂದೂ ಈ ರೀತಿ ಮಾತಾಡಿರಲಿಲ್ಲ. ಟಿ ಅನ್ನು ನನ್ನ ತೊಡೆಯ ಮೇಲೆ ಚೆಲ್ಲಿಕೊಂಡೆ. ನನಗೆ ಎಶ್ಟು ಶೋಕ್ ಆಯಿತೆಂದರೆ ಹಿಡಿತವರಿಯದ ಹಾಗೆ ನನ್ನ ತಲೆ ಸರಕ್ಕನೆ ಜಗ್ಗಿತು. ನಾನು ಅರೆ-ಎದ್ದು ನಿಂತೆ. ಆ ಪದಗಳು ಮತ್ತು ವಿಚಾರಗಳು ಉಸಿರು-ಕಟ್ಟಿ ಮುಂದೆ ಎಂದೂ ಅಲುಗಾಡದ ಹಾಗೆ ಆತನ ಗಂಟಲನ್ನು ಹಿಡಿದು ಅದುಮಿಟ್ಟುಕೊಳ್ಳಬೇಕೆಂದು ಎಣಿಸಿದೆ. ಆದರೆ ನಾನು ಆ ತರಹದ ಮನುಶ್ಯ ಅಲ್ಲ. ನಾನು ಬಹಳ ನಲುವಿನ ಮನುಶ್ಯ ಎಂಬುದು ನನಗೆ ತಿಳಿದಿರುವ ವಿಚಾರ. ಚೆಲ್ಲ್ಲಿದ್ದ ಟೀಯನ್ನು ನಾನು ತೊಟ್ಟಿದ್ದ ಬಟ್ಟೆಯಿಂದ ಒರೆಸಿದೆ. ಒರೆಸಿ, ನನ್ನ ಕಾಲುಗಳನ್ನೇ ದಿಟ್ಟಿಸುತ್ತಾ ನಿಂತೆ. ಟಿ-ಚೆಲ್ಲಿದ್ದ ಮುರಿದ ಹಳೆಯ ನನ್ನ ಚಪ್ಪಲಿಗಳನ್ನು ಮತ್ತು ನಾನು ತೊಟ್ಟಿದ್ದ ಬಿಳಿ ದೊಗಲೆ ದೇಸಿ ಬಟ್ಟೆಗಳನ್ನು ನೋಡುತ್ತಾ ನಿಂತೆ. ನಾನು ಅವರಿಗಿಂತ ಬಹಳ ಬೇರೆ ತರಹದ ಬದುಕನ್ನು ಬದುಕುತ್ತಾ ಇದ್ದೇನೆ ಎಂದು ನನಗೆ ನಾನೇ ಹೇಳಿಕೊಂಡೆ. ಬುದುಕುವಪರಿ ಮತ್ತು ನನ್ನ ಬದುಕಿನ ಉದ್ದೇಶ ಗುರಿಗಳು ಆ ಬೀದಿ-ಅಲೆಮಾರಿಗಳು ಒಣರ(ಗ್ರಹಿಸ)ಲಿಕ್ಕಾಗುವುದಕ್ಕಿಂತ ಎಶ್ಟು ಬೇರೆಯಾಗಿದ್ದವೆಂದರೆ ನಮ್ಮ ನಡುವಣ ತಿಳಿವಿನ ಕೊರತೆ ನನ್ನನ್ನು ಚಕಿತಗೊಳಿಸಬಾರದು ಅತವ ನಮ್ಮ ನಡುವಣ ತಿಳಿವಿನ ಕೊರತೆಯ ಬಗ್ಗೆ ನಾನು ತಪ್ಪಾಗಿ ಎಣಿಸಬಾರದು.

ಎಂತ ಪುಟ್ಕೋಸಿ ವಾದ್ಯ ಅದು, ತಾನ್‌ಪುರ! ಇನ್ನೂ ಜೋರಾಗಿ ಅಜಿತ ಹೇಳಿದ. ಅದು ಒಡಹೋಗುಕನೂ ಅಲ್ಲ. ಅದು ಏನೂ ಅಲ್ಲ! ಯಾವ ಮುಟ್ಟಾಳನಾದರೂ ಅದನ್ನು ನುಡಿಸಬಹುದು. ಮೂರೇ ಮೂರು ಉಲಿಮಟ್ಟಗಳು. ಮುಗಿಯಿತು! ಮತ್ತೆ ಮತ್ತೆ ಅದನ್ನೇ ನುಡಿಸ್ತಾ ಕೂತ್ಕೋ! ನಾನೂ ನುಡಿಸಬಲ್ಲೆ. ಅಜಿತ ತನ್ನ ಮಾತನ್ನು ದೊಡ್ಡ ಬೊಬ್ಬೆಯೊಡನೆ ಮುಗಿಸಿದ. ಉಳಿದವರು ಆತನ ಬೆನ್ನು ತಟ್ಟಿ ನಗೆಯ ಬುಗ್ಗೆಯಿಂದಾಗಿ ಮುಂದೆ ಬಾಗಿದರು.

ಆ ಮೇಲೆ ಬೋಲ ನನ್ನತ್ತ ತಿರುಗಿದ. ನೇರಳೆ ಬಣ್ಣದ ಅಂಗಿ ತೊಟ್ಟು ತನ್ನ ಮೀಸೆಯನ್ನು ಶುಂಟಿ ಬಣ್ಣಕ್ಕೆ ತಿರುಗಿಸಿದ್ದರೂ, ಆತ ಎಲ್ಲರಗಿಂತ ಸಯ್ಪಿನ(ಕ್ವಾಯಟ್) ಹುಡುಗ. ಮನೆಗೆ ಕನ್ನ ಹಾಕಿದ್ದಕ್ಕೆ ಮತ್ತು ಕಳ್ಳತನಕ್ಕೆ ಆತ ಎರಡು ಸಲ ಸೆರೆಮನೆಗೆ ಹೋಗಿ ಬಂದಿದ್ದ. ಆದರೂ ಆತ ಇನ್ನೇನು ನನ್ನನ್ನು ಮುಟ್ಟುವಶ್ಟು ಹತ್ತಿರಕ್ಕೆ ಬಾಗಿ, ಗಳಹುವ ದಯ್ರ್‍ಯ ಮಾಡಿದ:

ಅಣ್ಣ! ಸಿತಾರಿಗೆ ವಾಪಸ್ ಹೋಗು! ನಿನಗೆ ಸರೋದ್ ಮತ್ತು ವೀಣ ನುಡಿಸುವುದೂ ಗೊತ್ತು. ಸ್ವಲ್ಪ ಅಬ್ಯಾಸದಿಂದ ನೀನು ದೊಡ್ಡ ಉಸ್ತಾದ್ ಆಗಬಲ್ಲೆ. ಇದನ್ನು ನಾವು ನಿನ್ನ ಒಳಿತಿಗೇ ಹೇಳುತ್ತಿರುವುದು. ನೀನು ಮುಂದೆ ಹೆಸರು ಮಾಡಿ ಅಮೆರಿಕಕ್ಕೆ ಹೋದಾಗ, ನಮ್ಮ ಈ ಮಾತಿಗೆ ನಮಗೆ ನನ್ನಿ ಹೇಳ್ತಿಯ. ಬೇರೆ ಯಾರೋ ಎಲ್ಲ ಹೆಸರನ್ನು ಪಡೆದು, ನಿನ್ನ ಎಲ್ಲ ಹಣ ಪಡೆಯುವಾಗ, ನೀನು ವೇದಿಕೆಯ ಹಿಂದೆ ಎಲ್ಲೋ ಕುಳಿತು ಈ ಪೆದ್ದ ತಾನ್ ಪುರ ನುಡಿಸುತ್ತಾ ನಿನ್ನ ಬದುಕನ್ನು ಯಾಕೆ ಕಳಿತಿಯ?

ಅವರು ನನ್ನನ್ನು ಹೊಡೆಯಲು ತೀರ್‍ಮಾನಿಸಿದ್ದ ಹಾಗಿತ್ತು. ಅವರೆಲ್ಲ ನನ್ನ ಮೇಲೆ ಹತ್ತಿ ಉಸಿರುಗಟ್ಟಿಸಿ, ಕೂದಲು ಜಗ್ಗಿ ಹಿಡಿದು, ನನ್ನನ್ನು ಕೆಳಗೆಳೆಯುತ್ತಿರುವಂತೆ ತೋರಿತು. ಅವರ ಒರೆಗಳೇ ಹೊಡೆತಗಳು, ಅವರು ನನ್ನೆಡೆ ಎಸೆಯುತ್ತಿರುವ ವಿಚಾರಗಳೇ ನನ್ನ ಮೇಲೆ ಮಾಡುತ್ತಿರುವ ದಾಳಿಗಳು. ನಾನು ಸೋತಂತೆ ಅಳಿದಂತೆ ಅನಿಸಿತು. ನನ್ನ ಕೊನೆಯ ಶಕ್ತಿ ಬಳಸಿ ನಾನು ಅವರನ್ನು ಕೊಡವಿ, ದೂರ ಎಸೆದು, ಮೇಜು, ಕಪ್ಪು ತಟ್ಟೆಗಳನ್ನು ಬದಿಗೆ ಸರಿಸಿ ಟೀ-ಅಂಗಡಿಯಿಂದ ಓಟ-ಕಿತ್ತೆ. ಬೀದಿಯ ಮೇಲೆ ಓಡುತ್ತಾ ಇರುವಾಗ ಅವರು ನನ್ನನ್ನು ಹಿಂಬಾಲಿಸುತ್ತಿರುವಂತೆ ತೋಚಿತು. ನಾನು ಜನರನ್ನು ಒಂದು ಕಡೆಗೆ ದೂಡುತ್ತಾ, ಸ್ವಲ್ಪದರಲ್ಲೇ ರಿಕ್ಶಾಗಳಿಂದ, ಟೋಂಗಾಗಳಿಂದ ಬಸ್ಸುಗಳಿಂದ ನನ್ನನ್ನೇ ಬಚಾವ್ ಮಾಡಿ ಕೊಳ್ಳುತ್ತಾ ಓಡುತ್ತಿರುವಾಗ ನನ್ನನ್ನು ಕರೆಯುತ್ತಿರುವ ಅವರ ದನಿಗಳು ನನಗೆ ಕೇಳಿಬಂದವು. ಆಗ ಮದ್ಯಾನ್ನ ಅಗಿತ್ತು. ಬೀದಿಯಲ್ಲಿ ಜನರ ಗುಂಪುಗಳು ಇದ್ದವು. ದೂಳು ಮತ್ತು ಹೊಗೆ ದಿನದ ನಯ್ಸರ್‍ಗಿಕ ಬೆಳಕನ್ನು ಮುಚ್ಚಿದ್ದವು. ಓಡುತ್ತಿರುವಾಗ ಎಲ್ಲವೂ ಕೆಟ್ಟದ್ದಾಗಿ, ನೀಚದ್ದಾಗಿ, ನೀತಿಗೆ ಒಳಪಡದ್ದಾಗಿ, ಅಂದವಿಲ್ಲದ್ದವಾಗಿ ಕಂಡುಬಂದವು. ನಾನು ಇವೆಲ್ಲವನ್ನು ಬದಿಗೆ ತಳ್ಳಿ ಇವೆಲ್ಲವನ್ನೂ ಮೆಟ್ಟಿ ದಾಟಿ ಓಡಿದೆ.

’ಇವರು ಹೇಳಿದ್ದು ಸರಿನಾ? ನಾನೇ ಸಿತಾರ್‍ ನುಡಿಸಬಹುದಾಗಿತ್ತಾ?’ ನನ್ನನ್ನು ನಾನೇ ಕೇಳಿಕೊಂಡೆ. ’ಸರೋದನ್ನೋ ವೀಣಾವನ್ನೋ ನಾನೇ ನುಡಿಸಬಹುದಾಗಿತ್ತಾ? ನುಡಿಸಿ ನಾನೇ ಉಸ್ತಾದ್ ಆಗಬಹುದಾಗಿತ್ತಾ?’ ಇದು ನಗೆ ಎಂದೂ ತೋಚಿದ್ದಿಲ್ಲ. ತಂದೆ ನನಗೆ ಈ ಎಲ್ಲಾ ವಾದ್ಯಗಳನ್ನು ನುಡಿಸಲು ಹೇಳಿಕೊಟ್ಟು ನನಗೆ ಕಟ್ಟುನಿಟ್ಟಾದ ಶಿಸ್ತು ಕಲಿಸಿದ್ದರು. ಆದರೆ ಅವರೆಂದೂ ನನ್ನನ್ನು ಹಾಡಿ-ಹೊಗಳಿದ್ದಿಲ್ಲ. ಎಂದೂ ನಾನು ಮುಂಚೂಣಿಯ ಇನಿಪುಗಾರನಾಗಬಲ್ಲೆನೆಂಬ ಸುಳಿವು ಕೊಟ್ಟಿದ್ದಿಲ್ಲ. ಒಬ್ಬ ಬಡಗಿಯ ಮಗ ಹೇಗೆ ಮಂಚ, ಮೇಜು, ಕುರ್‍ಚಿ, ಶೆಲ್ಪ್ ಮಾಡುವುದನ್ನು ಸಹಜವಾಗಿ ಕಲಿಯುತ್ತಾನೋ ಅತವ ಕಿರಾಣಿ ಅಂಗಡಿಯವನ ಮಗ ಹೇಗೆ ಕಾಳು, ದವಸ ದಾನ್ಯಗಳನ್ನು ತೂಗಿ, ಮಾರಿ, ದುಡ್ಡು ಗಳಿಸುತ್ತಾನೋ, ಹಾಗೆಯೇ ನಾನೂ ಈ ವಾದ್ಯಗಳನ್ನು ನುಡಿಸ-ಕಲಿತಿದ್ದೆ. ಆದರೆ ನಾನು ಒಬ್ಬ ಕಲಾಕಾರ ಎಂದುಕೊಂಡೋ ಅತವ ಇದನ್ನು ಕಲೆಯೆಂದು ನೋಡದೇ ಈ ವಾದ್ಯಗಳನ್ನು ನುಡಿಸುವುದನ್ನೂ, ಅವರು ನನಗೆ ಹೇಳಿಕೊಟ್ಟ ರಾಗಗಳನ್ನು ನುಡಿಸಲೂ ಕಲಿತಿದ್ದೆ. ನಾನು ಪ್ರಾಯಶ ಪೆದ್ದ ಮತ್ತು ಹಿಂದುಳಿದ ಹುಡುಗ. ತಂದೆಯೂ ಎಂದೂ ಹಾಗೇ ಹೇಳುತ್ತಿದ್ದರು. ಇನಿಪು-ಓಣಿಯಲ್ಲಿನ ನಮ್ಮ ಮನೆಯ ಕತ್ತಲ-ಹಾಲಿನಲ್ಲಿ ನಾನು ನುಡಿಸುವುದನ್ನು ಈ ಹುಡುಗರು ಕೇಳಿದ್ದರು. ಈಗ ಇವರು ನಾನು ವೇದಿಕೆ ನಡುವೆ ಕೂತು ದೊಡ್ಡ ಕೇಳುಗ-ನೆರೆವಿಗಳಿಗೆ ನುಡಿಸಿ ಕೊಂಡಾಡಿಸಿಕೊಂಡು ದೊಡ್ಡ ಉಸ್ತಾದ್ ಆಗಬಹುದಿತ್ತು ಎಂದು ನನಗ್ ಹೇಳಿದ್ರು. ಅವರು ಹೇಳಿದ್ದು ಸರಿನಾ? ಇದು ದಿಟನಾ? ನಾನು ನನ್ನ ಬದುಕನ್ನು ಹಾಳು ಮಾಡಿದೆನಾ?

ಅರೆ-ಅಳುತ್ತಾ, ದಾರಿಯ ಅಡೆತಡೆಗಳನ್ನು ದೂಡುತ್ತಾ ಓಡುತ್ತಾ ನಾನು ಮೊದಲ ಬಾರಿಗೆ ಇವುಗಳ ಬಗ್ಗೆ ಯೋಚಿಸಿದೆ. ಇವು ದಯ್ರ್‍ಯಗೆಡಿಸುವ ವಿಚಾರಗಳೇ – ನನ್ನನ್ನು ತುಳಿದು, ಅಳಿಸುವ ದೊಡ್ಡದಾದ ತೂಕದ, ಕರಾಳವಾದ ವಿಚಾರಗಳು. ಓಡಿ ಓಡಿ ಒಂದು ಕಬ್ಬಿಣದ ಕಟಕಟೆಯ ಕಡೆಗೆ ದೂಡಲಾದೆ. ಅದರ ಸಲಾಕೆಗಳಿಗೆ ಆತು, ಕಣ್ಣೀರು ಸುರಿಸುತ್ತಿದ್ದಂತೆಯೇ ಪಟ್ಟಣದ ಪಾರ್‍ಕಿನ ಹೂ ಬಿಡುತ್ತಿರುವ ಕೇನಾ ಹೂಗಳ ಪಾತಿಗಳನ್ನೂ, ಮೇಲಳಲಿನ ಸೋಗೆ-ಮರಗಳ ಸಾಲುಗಳನ್ನೂ ದಿಟ್ಟಿಸಿದೆ. ಆಗ ಯಾರೋ – ಒಬ್ಬ ತಿರುಕ ಅತವ ಪೋಲೀಸ್ ಪೇದೆ – ನನ್ನನ್ನು ಮಾತಾಡಿಸಿದಂತೆ ಅನಿಸಿತು. ಏನಾದರೂ ತೊಂದರೆಗೆ ಸಿಕ್ಕ್ ಹಾಕ್ಕೊಂಡಿದಿಯಾ? ಆತ ಕೇಳಿದ. ನನಗೆ ಯಾರೊಡನೆಯೂ ಮಾತಾಡಲು ಇಶ್ಟವಿರಲಿಲ್ಲ. ಆತನನ್ನು ನೋಡದೆಯೇ ಆತನನ್ನು ಕೊಡವಿ ಪಾರ್‍ಕಿನ ಗೇಟನ್ನು ಪತ್ತೆ ಮಾಡಿ, ನನ್ನ ಮೇಲೇ ಹತೋಟಿ ಸಾದಿಸಿ, ನನ್ನ ವಿಚಾರಗಳನ್ನು ಓರಣವಾಗಿಸಿ ಪಾರ್‍ಕ್ ಒಳ-ನಡೆದೆ.

ಎತ್ತರವಾದ ಪೊದೆಗಳ ನಡುವೆ ದಾರಿ ಕಂಡುಕೊಳ್ಳುತ್ತಾ ಅಲ್ಲೇ ಆ ಕಡೆ ಈ ಕಡೆ ನಡೆದಾಡಿದೆ. ಹೀಗೆ ಒಬ್ಬಂಟಿಯಾಗಿ ನಡೆದಾಡುವಾಗ ಚಿಂತಿಸಲೆಳಸಿದೆ. ಸಾಕಶ್ಟು ಅತ್ತಿದ್ದರಿಂದ ನನಗೆ ನೆಮ್ಮದಿ ಶಾಂತಿ ಬಂದಿಕ್ಕಿತ್ತು. ಕೆಟ್ಟ ತಲೆನೋವು ಇದ್ದರೂ ನೆಮ್ಮದಿ ಮನೆ ಮಾಡಿತ್ತು. ನನ್ನೊಡನೆ ನಾನೇ ಮಾತಾಡಿದೆ.

ಉಸ್ತಾದನ್ನು ಮೊದಲ ಬಾರಿ ಬೆಟ್ಟಿಯಾದಾಗ ನಾನು ಹದಿನಯ್ದು ವರ್‍ಶದ ಹುಡುಗ. ನಮ್ಮಪ್ಪ ಹೇಳಿದ ಹಾಗೆ ಪೆದ್ದ ಹಿಂದುಳಿದ ಹುಡುಗ. ಅವರು ಕೊಳ್ಬೆಸ-ಹೇಳಿದ(ಓರ್‍ಡರ್‍) ತಾನ್‌ಪುರ ವನ್ನು ಅವರಿಗೆ ಕೊಡಲು ನಾನು ವೇದಿಕೆ ಮೇಲೆ ಕಾಲಿಟ್ಟಾಗ ಅವರ ಮುಕದ ಮೇಲೆ ಅಗ್ಗಳಿಕೆ ಮತ್ತು ಒಬ್ಬ ನಿಜವಾದ ಮುಂದಾಳಿನ ನೆಮ್ಮದಿ, ಬುದ್ದಿವಂತಿಕೆ ಮತ್ತು ಎದೆ-ತುಂಬಿದ ಮರುಕ ಕಂಡೆ. ಒಮ್ಮೆಲೆ ನಾನು ತಾನ್‌ಪುರವನ್ನಲ್ಲದೇ ನನ್ನ ಇಡೀ ಬದುಕನ್ನೇ ಆತನ ಕಯ್ಗಳಲ್ಲಿಡಲು ಬಯಸಿದೆ.

ನನ್ನನ್ನು ತೆಗೆದುಕೋ! ತೆಗೆದುಕೊಂಡು ನನ್ನನ್ನು ಮುನ್ನಡೆಸು! ನಾನು ಅವರಿಗೆ ಹೇಳಲೆಳಸಿದೆ. ಬದುಕುವುದನ್ನು ಕಲಿಸು! ನನಗೆ, ನಿಮ್ಮೊಡನೆ, ನಿಮ್ಮಿಂದ, ಇರಲು ಬಿಡು! ನನಗೆ ನೆರವಾಗು! ನನ್ನ ಜೊತೆ ಮೆದುವಾಗಿ ಮರುಕದಿಂದ ನಡೆದುಕೊ!

ನಾನು ಈ ಪದಗಳನ್ನು ಉಲುಹಲಿಲ್ಲ. ಅವರು ನನ್ನಿಂದ ತಾನ್‌ಪರ ತೆಗೆದುಕೊಂಡು ಅವರಿಗೋಸ್ಕರ ನುಡಿಸಲು ನನಗೆ ಹೇಳಿದರು. ಇದು ನಾನು ಅವರಿಗೆ ಹೇಳದ, ಆದರೂ ಅವರು ಕೇಳಿಸಿಕೊಂಡ, ನನ್ನ ಪದಗಳಿಗೆ ಅವರ ಮಾರೆಸಕವಾಗಿತ್ತು. ನನಗೋಸ್ಕರ ನುಡಿಸು! ಈ ಪದಗಳಿಂದ ಅವರು ನನ್ನನ್ನು ಉಂಟು ಮಾಡಿದರು, ನನ್ನ ಬದುಕನ್ನು ಉಂಟು ಮಾಡಿದರು, ನನ್ನ ಬದುಕಿಗೆ ಆಕಾರ, ಉದ್ದೇಶ, ತಿರುಳು ಹುರುಳುಗಳನ್ನು ತಂದಿಕ್ಕಿದರು. ಅದು ನನ್ನ (ಮರು)ಹುಟ್ಟಿನ ಗಳಿಗೆಯಾಗಿತ್ತು. ಅವರು ನನ್ನ ತಂದೆ ತಾಯಿ ಇಬ್ಬರೂ ಆಗಿದ್ದರು. ಅವರು ನನಗೆ, ಅಂದರೆ ತಾನ್‌ಪುರ ನುಡಿಸುಗ ಬಯ್ಯಾನಿಗೆ, ಹುಟ್ಟು ನೀಡಿದಾತ.

ಈ ಮೊದಲು ನಾನು ಏನೂ ಅಲ್ಲ: ಬೇರೆ ಉಂಡಾಡಿಗಳ ಜೊತೆ, ಅಲೆಮಾರಿಗಳ ಜೊತೆ ಅಂಡಲೆಯುತ್ತಿದ್ದ ಒಬ್ಬ ಹಸಿದ ಕೊಳಕು ಬೀದಿ-ಹುಡುಗ ಆಗಿದ್ದೆ.. ನನಗೆ ಬದುಕು ಎಂಬುದು ಇರಲಿಲ್ಲ. ತಂದೆ ನನ್ನ ಪ್ರತಿ ತಪ್ಪಿಗೆ ನನ್ನ ಕಿವಿ-ಹಿಂಡುತ್ತಾ, ಚುರುಕು ಮುಟ್ಟಿಸುತ್ತಾ ನನಗೆ ಕಲಿಸಿದ್ದರಿಂದಲೆ ನನಗೆ ಇನಿಪು ನುಡಿಸುವದಕ್ಕಾಯಿತು. ನಾನು ಮುಂಚೆ ತಾಯಿಯ ದುಡ್ಡು ಸಿಹಿತಿನಿಸುಗಳನ್ನು ಕದ್ದಿದ್ದೆ. ಈ ತರದ ಹೊಲಬು ಹಿಡಿದ ನಾನು ಏನೂ ಅಲ್ಲದವನಾಗಿದ್ದೆ. ನಾನು ಏನೂ ಅಲ್ಲದವನಾಗಿದ್ದೆನೆಂಬುದರ ಬಗ್ಗೆ ತಲೆ ಕೆಡಿಸಿಕೊಂಡು ಅದರ ಬಗ್ಗೆ ಏನಾದರೂ ಮಾಡುವ ಕಾಳಜಿ ತೋರಿಸುವವರ‍್ಯಾರೂ ಇಡಿಯೆಡೆಯಲ್ಲಿ ಇರಲಿಲ್ಲ. ತಾನ್‌ಪುರ ಹಿಡಿದುಕೊಂಡು ಒಂದು ಕಡೆ ಹಾಲಿನ ಕತ್ತಲಿನ ಮೂಲೆಯಲ್ಲಿ ಅಡ್ಡಾ ದಿಡ್ಡಿಯಾಗಿ ಅವಿತುಕೊಂಡಿದ್ದ ನನ್ನನ್ನು ನೋಡಿ ಕೂಗಿ ಕರೆದು ನನ್ನ ಬದುಕಿನ ಜೊತೆ ಏನು ಮಾಡುವುದೆಂದು ನನಗೆ ತೋರಿಸಿ ಕೊಟ್ಟವರು ಉಸ್ತಾದ್ ರಹೀಮ್ ಕಾನ್ ಅವರು. ಎಲ್ಲಕ್ಕೂ, ನನ್ನ ಬದುಕಿಗೇ, ಅವರೇ ಕಾರಣ. ಇದಕ್ಕೆ ನಾನು ಅವರಿಗೆ ರುಣಿ, ನಾನು ಅವರ ಹಂಗಿಗ.

ಹವ್ದು. ಒಬ್ಬ ದೊಡ್ಡ ಉಸ್ತಾದಿಗೆ ಅವರ ಹಿಂದೆ ಅವರಿಗೆ ನೋಡಲಿಕ್ಕೂ ಅಗದ ಎಡೆಯಲ್ಲಿ ಕೂತು ಅವರನ್ನು ಉರವಣೆ(ಪ್ರೇರಣೆ) ಬಿಗಿಹಿಡಿ(ಗ್ರಿಪ್ ಮಾಡಿ)ದಾಗ ತಮ್ಮ ದಾರಿ ತಪ್ಪಿ ಹೋಗದ ಹಾಗೆ ಮಾಡುವ, ಅವರಿಗೆ ಇದಕ್ಕೆ ಅಗತ್ಯ ಇರುವ, ಉಲಿಮಟ್ಟಗಳನ್ನು ತಾನ್‌ಪುರದಲ್ಲಿ ನುಡಿಸುವುದು ನನ್ನ ಹಣೆಯಲ್ಲಿ ಬರೆದಿತ್ತು. ಸಯ್ಪಿನಿಂದ, ಗಮನ ಸೆಳೆಯದ ರೀತಿಯಲ್ಲಿ ಇಡಿಯೆಡೆಯು ಪ್ರೀತಿಸುವ ತಮ್ಮ ದೊಡ್ಡ ಇನಿಪಿನ ಕೆಲಸ ಮಾಡಲು ಬೇಕಾಗುವ ಸಾಮಗ್ರಿ ಯಾರಾದರೂ ಅವರಿಗೆ ಒದಗಿಸಬಹುದಿತ್ತು. ಉಸ್ತಾದಿಗೆ ನಾನು ಮಾಡುವುದನ್ನು, ಅಂದರೆ ನಾನು ನುಡಿಸುವ ಬಗೆಯಲ್ಲಿ ತಾನ್‌ಪುರ ನುಡಿಸುವುದನ್ನು, ಯಾರಾದರೂ ಮಾಡಬಹುದಿತ್ತು. ಆದರೆ ಈ ಕೆಲಸಕ್ಕೆ ಅವರು ಬೇರೆ ಯಾರನ್ನೂ ಆರಿಸದೆ, ನನ್ನನ್ನೇ ಅರಿಸಿದರು. ಅವರು ನನಗೆ ನನ್ನ ಹಣೆಬರಹವನ್ನು, ನನ್ನ ಬದುಕನ್ನು ನೀಡಿದರು. ನನಗೆ ಅವರನ್ನು ನಿರಾಕರಿಸಲು ಆಗುತ್ತಿತ್ತೇ? ಒಬ್ಬ (ಹುಲು)ಮಾನವ ದೇವರನ್ನು ನಿರಾಕರಿಸಲು ಸಾದ್ಯವೇ?

ಇದನ್ನು ಮಾಡುವಶ್ಟು ಮುಟ್ಟಾಳರೂ ಇರಬಹುದೆಂಬ ವಿಚಾರ ನನ್ನ ಮುಕದ ಮೇಲೆ ಮುಗುಳ್ನಗೆ ತಂದಿಕ್ಕಿತು. ಈ ಹಣೆಬರಹದ ಗಳಿಗೆ ಕದ ತಟ್ಟಿದಾಗ ನನಗೂ, ಅಂದರೆ ಬಯ್ಯನಿಗೂ, ಗೊತ್ತಾಗಿತ್ತು. ಆತನ ದೇವರು ಬಂದು ಬೆಟ್ಟಿಯಾದಾಗ ಒಬ್ಬ ಹಿಂದುಳಿದ ಬೇಕಾಬಿಟ್ಟಿಯ ಬೀದಿ-ಹುಡುಗನೂ ಆತನನ್ನು ಗುರುತಿಸಿದ್ದ. ನನಗೆ ನಿರಾಕರಿಸಲಾಗುತ್ತಿರಲಿಲ್ಲ. ನಾನು ತಾನ್‌ಪುರವನ್ನು ಕಯ್ಗೆತ್ತಿಕೊಂಡು ನನ್ನ ಉಸ್ತಾದಿಗೊಸ್ಕರ ನುಡಿಸಿದೆ. ಆಗಿನಿಂದ ಎಂದೂ ನಾನು ನುಡಿಸಿದ್ದೇನೆ. ನಾನು ಇದಕ್ಕಿಂತ ಒಳ್ಳೆಯ ಹಣೆಬರಹವನ್ನು ಬಯಸಿರಲಾಗುತ್ತಿರಲಿಲ್ಲ.

ಪಾರ್‍ಕಿನಿಂದ ಹೊರಬಂದೊಡನೆ ನಾನು ಒಂದು ಟೊಂಗವನ್ನು ಕೂಗಿಕರೆದೆ. ನಡೆಸುಗ/ಬಿಡುಗ(ಡ್ರಯ್ವರ್‍)ನಿಗೆ ನನ್ನನ್ನು ನನ್ನ ಉಸ್ತಾದ ಹತ್ತಿರ ಕರೆದುಕೊಂಡು ಹೋಗುವಂತೆ ಕಟ್ಟು-ಮಾಡಿದೆ(ಓರ್‍ಡರ್‍ ಮಾಡಿದೆ). ನನ್ನ ಬದುಕಿನಲ್ಲಿ ಎಂದೂ ಅಶ್ಟು ಜೋರಾಗಿ, ಅಶ್ಟು ಆತ್ಮವಿಶ್ವಾಸದಿಂದ ನಾನು ಮಾತಾಡಿರಲಿಲ್ಲ. ನೀವೂ ಅದನ್ನು ಕೇಳಬೇಕಾಗಿತ್ತು. ನನ್ನ ಉಸ್ತಾದ್ ಅದನ್ನು ಕೇಳಿಸಿಕೊಳ್ಳಬೇಕಾಗಿತ್ತು!

* * *

(ಚಿತ್ರ: http://www.imratkhan.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. vivekshankar153 says:

    ಕತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  2. ವೇದಿಕೆ, ರಾತ್ರಿ, ಸಾಯಂಕಾಲ, ಪೂರ್ತಿ, ವಾದ್ಯ, ಗುಣ, ಅಂಗಣ, ದೀಪ, ಗೌರವ, ಶಾಂತಿ, ವ್ಯಕ್ತಿ, ಅಂಶ, ಮಾತ್ರ, ಮಾನವ, ರಾಗ, ರಾಗಿನಿ, ಅಗತ್ಯ, ರಾಣಿ, ಪ್ರೇಮಿ, ಅಪರೂಪ, ಪ್ರಾಯಶ, ದೇಶ್, ಆಲಾಪ, ಉದ್ದೇಶ, ಚಕಿತ, ನೀಚ, ಚಿಂತೆ – ಎಷ್ಟೊಂದು ಸಕ್ಕದ ಪದಗಳು! ಹೇಗೂ ಅರ್ಥವಾಗದಂತೆಯೇ ಬರೆದಿದ್ದಾಯ್ತು, ಇನ್ನೂ ಈ ಪದಗಳು ಬೇಕಿತ್ತಾ? ಇದರ ಬದಲು ಎದ್ದೆಡೆ, ಇರುಳು, ಸಂಜೆ, ಪೂರ, ನುಡಿಗ/ಉಲಿಗ, ತಲೆ, ಅಂಗಳ, ಬೆಳಕು, ಪೆರ್ಮೆ, ನೆಮ್ಮದಿ, ಆಳು, ಬೊಟ್ಟು, ಅಷ್ಟೇ, ಉಲಿ, ಹೆಣ್ಣುಲಿ, ಬೇಕಾದ್ದು, ಒಡತಿ, ಕಾದಲ/ಕಾದಲಿ, ಕೆಟ್ಟಮೋರೆ, ಇರಬಹುದು, ನಾಡ್, ನೀಳುಲಿ, ಹಮ್ಮುಗೆ, ನಿಲ್ಲುಗೆ, ಕೀಳು, ಒಳಮಾತು ಅಂತ ಬಳಸಬಹುದಿತ್ತು.

    ಇನ್ನು ಕಷ್ಟಪಟ್ಟು ತಿರುಚಿಯಾದರೂ ನಯ್ಸರ್ಗಿಕ (ನೈಸರ್ಗಿಕ), ದಯ್ರ್ಯ (ಧೈರ್ಯ), ರುಣಿ (ಋಣಿ) ಅನ್ನುವ ಬದಲು ತಂತಾನೆಕ, ಆಳ್ಮೆ, ಪಡೆಕ ಅನ್ನಬಹುದಿತ್ತಲ್ಲವೇ?

    ತಪ್ಪನ್ನೇ ಕಂಡುಹಿಡೆದೆನೆನ್ನದಿರಿ. ಇವನ್ನೂ “ಸರಿ”ಪಡಿಸಿ ಅಂತ ಸಲಹೆ ಅಷ್ಟೇ.

    ಇನ್ನು ಕನ್ನಡದಲ್ಲೇ ಇಂಪು, ಹಿಗ್ಗು, ಮಾಡ್ಕೊಂಡೆ ಅನ್ನೋ ಸುಲಭವಾಗಿ ಅರ್ಥವಾಗುವ, ಜನಬಳಸುವ ಪದಗಳಿದ್ದಾಗ ಇನಿಪು, ಹಿಗ್ಗಣೆ, ಗಯ್ಕೊಂಡೆ?

    ರಾಣಿಗಳು ಅಲ್ಲ, ರಾಣಿಯರು

  3. neelanjana says:

    ಯಾವುದಾದರೊಂದು ಕತೆಯನ್ನೋ ಬರಹವನ್ನೋ ಕಟ್ಟೊರೆಯನ್ನೋ ನುಡಿಮಾರ್ಪು ಮಾಡಬೇಕಾದರೆ ಮೊದಲ ಕಟ್ಟಳೆ ಏನು ಗೊತ್ತಾ? ನಮಗೆ ಆ ಬಗ್ಗೆ ಅರಿಮೆ ಇದೆಯಾ ಇಲ್ಲ್ವಾ ? ಪೆರ್ನುಡಿಯಲ್ಲಿ ಬರೆದಿದ್ದು ನಮ್ಮ ಮಟ್ಟಿಗೆ ದಕ್ಕಿರತ್ತಾ ಇಲ್ವಾ ಅಂತ. ಇಲ್ದೇ ಇದ್ರೆ ಏನಾಗುತ್ತೆ ಅಂದ್ರೆ, – ಚೆಂಡು ನೋಡದವನು ಕಾಲ್ಚೆಂಡಾಟದ ಬಗ್ಗೆ ಪದಕ್ಕೆ ಪದವಿಟ್ಟು ಬರೆದಂತೆ ಆಗುತ್ತೆ.

    ಎತ್ತುಗೆಗೆ ಕೆಳಗಿನ ಮಾರ್ಪುಗಳು:

    >> ಅವರ ದನಿ ಎಶ್ಟು ಕೆಳಮಟ್ಟದ್ದು

    >> ನನಗೆ ಹೇಳಿದ ಮೂರು ಉಲಿಮಟ್ಟಗಳನ್ನು – ನಡುವಿನದ್ದು, ಮತ್ತು ಅದರ ಎಂಟುಲಿಕಂತೆ, ಅಯ್ದುಲಿಕಂತೆ – ಮರಳಿ ಮರಳಿ ನುಡಿಸ-ತೊಡಗಿದೆ.

    >> ಕೆಲವು ಬಾರಿ ಇಂಪೆಸೆವ ಹೊಂದಿಕೆಯ, ಕೆಲವು ಬಾರಿ ಮರುಬಗೆತದ ಅತವ ಇಂಪಿಲ್ಲದ, ಇನಿಪು ಎಂದಿಗೂ ಮಿಡುಕುತ್ತಿತ್ತು.

    >> ಅವರು ನನಗೆ ಎಲ್ಲ ರಾಗಗಳನ್ನೂ ರಾಗಿನಿಗಳನ್ನೂ ಕಲಿಸಿದರು.

    >> ರಾಗ ದೇಶ್ ಅತವ ಮಲ್ಹರ್‍ ಅತವ ಮೇಗ್ ಎಂದು ಅವರು ಸಾರುತ್ತಾರೆ. ನಾನು ಅವರ ಹಿಂದೆ ಬರಿ-ನೆಲದ ಮೇಲೆ ಕೂತು, ಅವರು ಹೇಳಿದ ರಾಗವನ್ನು ಕಟ್ಟಲು ಉಲಿಮಟ್ಟಗಳನ್ನು ನುಡಿಸುತ್ತೇನೆ.

    >> ಈ ಪಾತ್ರ ಬಹಳ ಜೋರಾದ, ಅಗ್ರೆಸಿವ್ ಆದ ಮತ್ತು ಒಮ್ಮೊಮ್ಮೆ ಗುಡುಗಿನಶ್ಟು ಮೊಳಗುವಂತಾದ್ದು. ಆದರೆ ಈ ಮುಕ್ಯವಾದ ಪಾತ್ರ ಎಂತಹದ್ದು? ಅದು ಅನಿವಾರ್‍ಯವಾದದ್ದಲ್ಲ. ಅವರ ಮುಂಚ ವಿಮರ್‍ಶಕರು ಒಪ್ಪುವ ಹಾಗೆ, ತೊಡಗಿಸುವ, ಅಲಾಪದಿಂದ ಒಡಹೋಗದ ಟ್ಯವನ್ನು ನುಡಿಸುವಾಗ ನನ್ನ ಉಸ್ತಾದ್ ತಮ್ಮ ಅತಿ ಹೆಚ್ಚಿನ ಉಲಿಮಟ್ಟದಲ್ಲಿರುತ್ತಾರೆ.

    >> ರಾಗದ ನುಡಿಸುಹದಲ್ಲಿ ನಾನು ತಾನ್‌ಪುರದ ಮೂರು ತಂತಿಗಳ ಮೇಲೆ ಮತ್ತೆ ಮತ್ತೆ ಬೆರಳಾಡಿಸುತ್ತಾ ಒಂದು ತರಹದ ಡಲ್ಲಾದ ಮೊರೆತದ ದನಿ ಉಂಟು ಮಾಡುತ್ತಾ ಇನಿಪಿನಲ್ಲಿ ಎಡೆಗಳನ್ನು ತುಂಬುತ್ತೇನೆ

    >> ಅತವ ತಣ್ಣಗಾದ ಹುದುಗು-ಹಿಟ್ಟು-ಸೇರಿಸದೇ-ಇರುವ, ಲೀವನ್-ಆಗದೇ-ಇರುವ ಬ್ರೆಡ್ ನನಗೆ ಬಿಟ್ಟು, ಮೇಜಿನ ಮೇಲಿರುವ ಎಲ್ಲ ಪಲಾವನ್ನು ತಾನೇ ಕಬಳಿಸಿ ಮುಕ್ಕುವಾಗ,

    >> ಎಂತ ಪುಟ್ಕೋಸಿ ವಾದ್ಯ ಅದು, ತಾನ್‌ಪುರ! ಇನ್ನೂ ಜೋರಾಗಿ ಅಜಿತ ಹೇಳಿದ. ಅದು ಒಡಹೋಗುಕನೂ ಅಲ್ಲ. ಅದು ಏನೂ ಅಲ್ಲ! ಯಾವ ಮುಟ್ಟಾಳನಾದರೂ ಅದನ್ನು ನುಡಿಸಬಹುದು. ಮೂರೇ ಮೂರು ಉಲಿಮಟ್ಟಗಳು.

    >> ಅಣ್ಣ! ಸಿತಾರಿಗೆ ವಾಪಸ್ ಹೋಗು! ನಿನಗೆ ಸರೋದ್ ಮತ್ತು ವೀಣ ನುಡಿಸುವುದೂ ಗೊತ್ತು.

    ಮನ್ನಿಸಿ, ಅನ್ನ ಬೆಂದಿದೆಯೋ ಅಂತ ನೋಡೋಕೆ ನಾಲ್ಕು ಅಗುಳೇ ಸಾಕು. ಈ ಕಥೆ “ಎಲ್ಲರಕನ್ನಡ” ವಿರಲಿ, ಯಾರ ಕನ್ನಡವೂ ಆಗುವುದರಲ್ಲಿ ಪೂರ್ತಿ ಸೋತಿದೆ.

ಅನಿಸಿಕೆ ಬರೆಯಿರಿ:

%d bloggers like this: