ನಾ ನೋಡಿದ ಸಿನೆಮಾ: ಪೌಡರ್
ನೋಡುಗರನ್ನು ಸೆಳೆಯುವಲ್ಲಿ ಹಾಸ್ಯ ಸಿನೆಮಾಗಳು ಒಂದು ರೀತಿಯ ಲೆವೆಲ್ ಪ್ಲೇಯಿಂಗ್ ಸಿನೆಮಾಗಳು ಎನ್ನಬಹುದು. ಏಕೆಂದರೆ ಕಾಲಕಾಲಕ್ಕೆ ನೋಡುಗರ ಅಬಿರುಚಿ ಬದಲಾಗುತ್ತಾ ಹೋಗುತ್ತಿದ್ದರೂ, ಹಾಸ್ಯ ಸಿನೆಮಾಗಳು ಮಾತ್ರ ಅಂದಿಗೂ ಇಂದಿಗೂ ತಮ್ಮ ಸ್ತಾನವನ್ನು ಕಾಯ್ದುಕೊಂಡಿವೆ. ಹೆಚ್ಚಿನ ಸಂಕ್ಯೆಯಲ್ಲಿ ತೆರೆಕಾಣದಿದ್ದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಬಂದು ನೋಡುಗರನ್ನು ನಗಿಸುತ್ತವೆ. ಈ ಸಾಲಿಗೆ ಸೇರುವ ಸಿನೆಮಾವೊಂದು ದೊಡ್ಡ ತೆರೆಗೆ ಬಂದು, ಹೆಚ್ಚು ಮಂದಿಯನ್ನು ತಲುಪಲಾಗದೆ ಓಟಿಟಿಯಲ್ಲಿ ನೋಡುಗರನ್ನು ಸೆಳೆಯುತ್ತಿದೆ. ಅದುವೇ ಎರಡು ತಿಂಗಳ ಹಿಂದೆ ತೆರೆಕಂಡ ‘ಪೌಡರ್’.
ಇರುವದರಲ್ಲೇ ಕುಶಿ ಪಟ್ಟು ಬದುಕುತ್ತಿರುವ ನಾಯಕ ಸೂರ್‍ಯ (ದಿಗಂತ್), ಮಹತ್ವಾಕಾಂಕ್ಶೆ ಇರುವ ನಾಯಕಿ (ದನ್ಯಾ ರಾಮ್ ಕುಮಾರ್). ಹೊಸ ವ್ಯಾಪಾರದ ಉಪಾಯಗಳನ್ನು ಹೊತ್ತು, ಗೆಲುವಿಗಾಗಿ ಹಾತೊರೆಯುತ್ತಿರುವ ಕರಣ್ (ಅನಿರುದ್ ಆಚಾರ್‍ಯ). ಮುಂದೆ ಮಡದಿಯಾಗಿ ಬರುವವಳ ಜೊತೆ ಹಸನಾದ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತ ಮತ್ತೊಂದು ಪಾತ್ರದಾರಿ ಪವನ್ (ರವಿಶಂಕರ್ ಗೌಡ), ಮದುವೆ ಮಂಟಪದಲ್ಲಿ ಮೋಸಹೋದಾಕೆ ಮಲ್ಲಿಕಾ (ಶರ್‍ಮಿಳಾ ಮಾಂಡ್ರೆ), ಗ್ಯಾಂಗ್ ಸ್ಟರ್ ಅಣ್ಣಾಚ್ಚಿ (ರಂಗಾಯಣ ರಗು), ಅಣ್ಣಾಚ್ಚಿಯ ಎದುರಾಳಿ ಸುಲೈಮಾನ್ (ಗೋಪಾಲ್ ಕ್ರಿಶ್ಣ ದೇಶಪಾಂಡೆ), ಕಂಟೆಂಟ್ ಕ್ರಿಯೇಟರ್ ಡಾ. ಹೂ (ನಾಗಬೂಶಣ) ಈ ಎಲ್ಲಾ ಪಾತ್ರಗಳ ಹೂರಣವೆ ಪೌಡರ್.
ಇಡೀ ಸಿನೆಮಾದಲ್ಲಿ ಅನಿರುದ್ ಆಚಾರ್‍ಯ, ಗೋಪಾಲ್ ಕ್ರಿಶ್ಣ ದೇಶಪಾಂಡೆ ಹಾಗೂ ನಾಗಬೂಶಣ ಅವರು ನೋಡುಗರನ್ನು ನಕ್ಕುನಗಿಸುತ್ತಾರೆ. ಇನ್ನುಳಿದಂತೆ ರಂಗಾಯಣ ರಗು ಹಾಗೂ ರವಿಶಂಕರ್ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ. 2 ಗಂಟೆ ನೋಡುಗರನ್ನು ಹಿಡಿದಿಡುವಲ್ಲಿ ಸಿನೆಮಾ ಗೆಲ್ಲುತ್ತದೆ.
ದೀಪಕ್ ವೆಂಕಟೇಶನ್ ಅವರ ಕತೆ ಇದ್ದು, ಜನಾರ್‍ದನ್ ಚಿಕ್ಕಣ್ಣ ಅವರು ಈ ಸಿನೆಮಾವನ್ನು ನಿರ್‍ದೇಶಿಸಿದ್ದಾರೆ. ಹರಿಕ್ರಿಶ್ಣ ಎನ್. ಅವರ ಎಡಿಟಿಂಗ್, ವಾಸುಕಿ ವೈಬವ್ ಅವರ ಸಂಗೀತವಿದ್ದು, ಕೆ ಆರ್ ಜಿ ಸ್ಟುಡಿಯೋ ಹಾಗೂ ದ ವೈರಲ್ ಪೀವರ್ ಸಂಸ್ತೆಯವರು ಈ ಸಿನೆಮಾವನ್ನು ನಿರ್‍ಮಿಸಿದ್ದಾರೆ. ಮನೆಮಂದಿಯಲ್ಲಾ ಕೂತು, ಒಮ್ಮೆ ನೋಡಬಹುದಾದ ಈ ಸಿನೆಮಾ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಲಬ್ಯವಿದೆ.
(ಚಿತ್ರಸೆಲೆ: kannada.hindustantimes.com )
ಇತ್ತೀಚಿನ ಅನಿಸಿಕೆಗಳು