ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 2 ನೆಯ ಕಂತು – ಬಹು ಸುವರ್‍ಣಯಾಗ

– ಸಿ.ಪಿ.ನಾಗರಾಜ.

*** ಬಹು ಸುವರ್‍ಣಯಾಗ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು): ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ ಮೃಗಯಾ ಪ್ರಸಂಗ ’ ಮೂರನೆಯ ಅಧ್ಯಾಯದ 7 ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ವಿಶ್ವಾಮಿತ್ರ: ಒಬ್ಬ ಮುನಿ.
ಹರಿಶ್ಚಂದ್ರ: ಅಯೋಧ್ಯೆಯ ರಾಜ.
ವಿಶ್ವಾಮಿತ್ರನ ಆಶ್ರಮದ ಮುನಿಗಳು.

*** ಬಹು ಸುವರ್ಣಯಾಗ ***

“ಕೋಣನೆರಡುಮ್ ಹೋರೆ ಗಿಡುವಿಂಗೆ ಮಿತ್ತು” ಎಂಬ ಕ್ಷೋಣಿಯಾಡುವ ಗಾದೆಯಮ್ ದಿಟಮ್ ಮಾಳ್ಪಂತೆ ಕೌಶಿಕನ್ ವಸಿಷ್ಠಂಗೆ ಹೂಣಿಸಿ…

ವಿಶ್ವಾಮಿತ್ರ: (ತನ್ನಲ್ಲಿಯೇ)

ನುಡಿದ ಪ್ರತಿಜ್ಞೆಯಮ್ ಗೆಲುವಡೆ ಇನ್ನು ಜಾಣಿಮ್ ಹರಿಶ್ಚಂದ್ರರಾಯನ ಉನ್ನತಿಯಳಿವ ಕಾಣಬೇಕು.

(ಎಂದು ಅಖಿಳ ಸಾಮಾರ್ಥದ ಕಲಾಪ್ರವೀಣನ್ ಅಂತಸ್ಥದ ಏಕಾಂತದೊಳ್ ಚಿಂತೆಯಿಮ್ ಭ್ರಾಂತಿಯೋಗದೊಳ್ ಇರ್ದನು.)

ವಿಶ್ವಾಮಿತ್ರ: (ತನ್ನ ಮನದಲ್ಲಿ)

ಧರೆಯೊಳು ಹರಶ್ಚಂದ್ರನನ್ ಹುಸಿಕನ್ ಎಂದೆನಿಪ ಪರಿಯು ಆವುದು…

(ಎಂದು ಚಿಂತಿಸಲ್ ಒಂದು ಉಪಾಯವು ಅಂಕುರಿಸೆ ಕಂಡು ಉಬ್ಬಿ, ಭುಜವೊಯ್ದು ನಿಜವೈರದ ಅಂತಸ್ಥ ಅರಿಯದ ಮುನಿಗಳ ಕರೆದು…)

ವಿಶ್ವಾಮಿತ್ರ: ನೀವ್ ಇಂತೀಗ ಹೋಗಿ ಭೂವರನನ್ ಉಪಚರಿಸಿ ಬೋಧಿಸಿ, ಆವ ಪರಿಯೊಳಮ್ ಬಹುಸುವರ್ಣಯಾಗವನ್ ಮಾಳ್ಪ ಅನುವನು ಉರೆ ಮಾಳ್ಪುದು.

(ಎಂದು ವಿಶ್ವಾಮಿತ್ರನು ಕಳುಹಿದನು. ಮುನಿಗಳ್ ಕೌಶಿಕನ ಕುಟಿಲವ ಅರಿಯದೆ ಹೋಗಿ, ಅವನೀಶಂಗೆ ಮಂಗಳ ಆಶೀರ್ವಾದ ಶೇಷೆಯನ್ ಸೂಸಲ್…)

ಹರಿಶ್ಚಂದ್ರ: ಏನು ಕಾರ್ಯ ಬಿಜಯಂಗೆಯ್ದಿರಿ.

ಮುನಿಗಳು: ಸಕಲ ವೇದ ಪೌರಾಣ ಆಗಮ ರಾಶಿಗಳೊಳ್ ಅಧಿಕ ಧರ್ಮಮಮ್ ಕಂಡು ಅರಿಪಲೋಸುಗಮ್ ಬಂದೆವು.

ಹರಿಶ್ಚಂದ್ರ: ಆವುದು?

ಮುನಿಗಳು: ಮಾಳ್ಪ ವಿಶ್ವಾಸಮಮ್ ನುಡಿಯೆ ಪೇಳ್ದಪೆವು. ಮಾಡದಡೆ ಅದಮ್ ನುಡಿದು ಫಲವೇನ್.

(ಎಂದರು. ಮನವೊಸೆದು ಮಾಡುವಂತಾಗಿ..)

ಹರಿಶ್ಚಂದ್ರ: ಗುರುವಾಸಿಷ್ಠಮುನಿಯ ಪದಪಂಕೇಜದಾಣೆ ನೆಟ್ಟನೆ ಪೇಳ್ವುದು.

ಮುನಿಗಳು: ಬಹುಸುವರ್ಣಯಾಗಮ್ ಯಾಗಕೋಟಾನುಕೋಟಿಗಳೊಳ್ ಅಧಿಕಫಲವು…ನಿನಗಲ್ಲದೆ ಉಳಿದ ಭೂಪರ್ಗೆ ಆಗದು.

ಹರಿಶ್ಚಂದ್ರ: ಅದರ ಅನುವು ಆವುದು?

ಮುನಿಗಳು: ದೋಷ ನೆಟ್ಟನೆ ನಿನಗೆ ಬಾರದ ಅಂದದಿ ನೆರೆದ ಮುನಿಗಳಿಗೆ ಬೇಡಿದನಿತು ವಸ್ತುವನ್ ಈಯಬೇಕು.

(ಎಂದರು. ಆ ವಿಮಳ ಮುನಿಗಳ ಹಿತೋಪದೇಶವಮ್ ಆಂತು ಭೂವರನ್ ಸರ್ವಮುನಿವರ್ಗಮಮ್ ಬರಿಸಿ, ನಾನಾವೇದವಿಹಿತ ಧರ್ಮ ಆಗಮ ಅರ್ಥದಿಮ್ ಯಾಗಮಮ್ ಮಾಡಿ, ಬಳಿಕ ಆವಾವ ಮುನಿಗಳ್ ಆವಾವ ಧನವಮ್ ಬೇಡಲ್, ಓವಿ ಕೊಟ್ಟು ಉಪಚರಿಸುತಿರೆ, ಸುಜನಮೃಗಧೀವರನ್ ಕಪಟವಟು ಕೌಶಿಕನ್ ವಾಸಿಷ್ಠ ಮುನಿ ಹೋದ ಹೊತ್ತಮ್ ಅರಿದು ಬಂದ. ಹರಿದು ವಿಶ್ವಾಮಿತ್ರಮುನಿಗೆ ಎರಗಿ ಚರಣಸರಸಿರುಹಮಮ್ ತೊಳೆದು..)

ಹರಿಶ್ಚಂದ್ರ: ನೆನೆದ ಅರ್ಥಮಮ್ ಬೆಸಸಿಮ್.

ವಿಶ್ವಾಮಿತ್ರ: ಅರಸ, ಪಿರಿಯ ಕರಿಯಮ್ ಮೆಟ್ಟಿ, ಕವಡೆಯಮ್ ಮಿಡಿದಡೆ ಎನಿತು ಉದ್ದಕ್ಕೆ ಹೋಹುದು, ಅದರ ಸರಿಯೆನಿಸಿ ಸುರಿದ ಹೊಸ ಹೊನ್ನ ರಾಸಿಯನ್ ಈವುದು.

ಹರಿಶ್ಚಂದ್ರ: ಹಸಾದಮ್ ಕೊಟ್ಟೆನ್. ಅದಮ್ ಈಗಲೆ ಇರದೆ ಒಯ್ವುದು.

ವಿಶ್ವಾಮಿತ್ರ: ನಿನ್ನ ಮೇಲಿರಲಿ. ಬೇಹಾಗ ತರಿಸಿಕೊಂಡಪೆನ್.

ಎಂದನು. ಕೊಂಡ ಹೊಸ ಹೊನ್ನ ರಾಸಿಯನ್ ಅವನಿಪಾಲಕನ ಭಂಡಾರದೊಳಗೆ ಇರಿಸಿ ತನ್ನಾಶ್ರಮಕೆ ಮರಳಿ….

ತಿರುಳು: ಬಹು ಸುವರ್‍ಣಯಾಗ

“ಕೋಣನೆರಡುಮ್ ಹೋರೆ ಗಿಡುವಿಂಗೆ ಮಿತ್ತು” ಎಂಬ ಕ್ಷೋಣಿಯಾಡುವ ಗಾದೆಯಮ್ ದಿಟಮ್ ಮಾಳ್ಪಂತೆ=ಎರಡು ಕೋಣಗಳು ಒಂದಕ್ಕೆ ಮತ್ತೊಂದು ಡಿಕ್ಕಿಹೊಡೆಯುತ್ತ ಹೋರಾಡುವಾಗ ನಡುವೆ ಇರುವ ಸಣ್ಣಪುಟ್ಟ ಗಿಡಗಂಟೆಗಳೆಲ್ಲವೂ ನಾಶವಾಗುತ್ತವೆ ಎಂದು ಲೋಕದ ಜನರು ಆಡುವ ಗಾದೆಯನ್ನು ನಿಜವನ್ನಾಗಿ ಮಾಡುವಂತೆ; ತೋಳ್ಬಲ/ಜಾತಿಬಲ/ಸೇನಾಬಲ/ಹಣಬಲವುಳ್ಳ ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಹೋರಾಟ ನಡೆಯುವಾಗ, ಇವರ ನಡುವೆ ಸಿಲುಕಿದ ಈ ಬಲಗಳಿಲ್ಲದ ವ್ಯಕ್ತಿಗಳು ಸಾವು ನೋವಿಗೆ ಗುರಿಯಾಗಿ ನರಳುತ್ತಾರೆ. ಬಲಶಾಲಿಗಳ ಹೋರಾಟದಲ್ಲಿ ಬಲಹೀನರು ಅಳಿಯುತ್ತಾರೆ ಎಂಬ ಲೋಕ ಜೀವನದ ವಾಸ್ತವವನ್ನು ಈ ಗಾದೆಯು ಸೂಚಿಸುತ್ತಿದೆ;

ಕೌಶಿಕನ್ ವಸಿಷ್ಠಂಗೆ ಹೂಣಿಸಿ=ವಿಶ್ವಾಮಿತ್ರನು ವಸಿಷ್ಟನಿಗೆ ಎದುರುಬಿದ್ದು; ದೇವೇಂದ್ರನ ಓಲಗದಲ್ಲಿ ವಸಿಷ್ಟನು “ಹರಿಶ್ಚಂದ್ರನು ಸತ್ಯವಂತ ” ಎಂದು ಹೇಳಿದ ಮಾತನ್ನು ಸುಳ್ಳನ್ನಾಗಿಸಲೇಬೇಕೆಂಬ ಪಣತೊಟ್ಟು; ಕುಶಿಕನೆಂಬ ರಾಜನ ಮಗನಾದ ವಿಶ್ವಾಮಿತ್ರನಿಗೆ ಕೌಶಿಕ ಎಂಬ ಮತ್ತೊಂದು ಹೆಸರಿತ್ತು.

ನುಡಿದ ಪ್ರತಿಜ್ಞೆಯಮ್ ಗೆಲುವಡೆ=ದೇವೇಂದ್ರನ ಓಲಗದಲ್ಲಿ ನಾನು ಮಾಡಿರುವ ಪ್ರತಿಜ್ನೆಯನ್ನು ಗೆಲ್ಲಬೇಕಾದರೆ;

ಇನ್ನು ಜಾಣಿಮ್ ಹರಿಶ್ಚಂದ್ರರಾಯನ ಉನ್ನತಿಯಳಿವ ಕಾಣಬೇಕು ಎಂದು=ಇನ್ನು ಮುಂದೆ ತುಂಬಾ ಜಾಣತನದಿಂದ ಹರಿಶ್ಚಂದ್ರರಾಯನ ಸತ್ಯದ ಹಿರಿಮೆಯನ್ನು ನಾಶಪಡಿಸುವ ಸಂಚನ್ನು ರೂಪಿಸಬೇಕು ಎಂದುಕೊಂಡು;

ಅಖಿಳ ಸಾಮಾರ್ಥದ ಕಲಾಪ್ರವೀಣನ್= ಸಾಮ-ದಾನ-ಬೇದ-ದಂಡಗಳೆಂಬ ರಹಸ್ಯದ ಕಾರ್‍ಯಾಚರಣೆಗಳ ತಂತ್ರ ಕುತಂತ್ರಗಳಲ್ಲಿ ಪರಿಣತನಾದ ವಿಶ್ವಾಮಿತ್ರನು;

ಅಂತಸ್ಥದ ಏಕಾಂತದೊಳ್ ಚಿಂತೆಯಿಮ್ ಭ್ರಾಂತಿಯೋಗದೊಳ್ ಇರ್ದನು=ಆಶ್ರಮದಲ್ಲಿ ತಾನೊಬ್ಬನೇ ಕುಳಿತುಕೊಂಡು ಯಾವ ಯಾವ ಬಗೆಯ ಸಂಚುಗಳನ್ನು ಹೂಡಬಹುದು ಎಂದು ತನ್ನ ಮನದಲ್ಲಿ ಚಿಂತಿಸುತ್ತ, ಕೇಡನ್ನು ಬಗೆಯುವ ಕಲ್ಪನೆಗಳಲ್ಲಿ ಮುಳುಗಿದ್ದನು;

ಧರೆಯೊಳು ಹರಶ್ಚಂದ್ರನನ್ ಹುಸಿಕನ್ ಎಂದೆನಿಪ ಪರಿಯು ಆವುದು ಎಂದು ಚಿಂತಿಸಲ್=ಬೂಮಂಡಲದಲ್ಲಿ ಹರಿಶ್ಚಂದ್ರನನ್ನು ಸುಳ್ಳುಗಾರ ಎಂದು ಎಲ್ಲರೂ ಕರೆಯುವಂತೆ ಮಾಡುವ ಬಗೆ ಯಾವುದೆಂದು ಚಿಂತಿಸುತ್ತಿರುವಾಗ;

ಒಂದು ಉಪಾಯವು ಅಂಕುರಿಸೆ ಕಂಡು ಉಬ್ಬಿ, ಭುಜವೊಯ್ದು=ಮನಸ್ಸಿನಲ್ಲಿ ಒಂದು ಉಪಾಯವು ಹೊಳೆದುದನ್ನು ಕಂಡು ಆನಂದದಿಂದ ಹಿಗ್ಗಿ, ತನ್ನ ಬುಜವನ್ನು ತಾನೇ ತಟ್ಟಿಕೊಂಡು ಅಂದರೆ ಇಂತಹ ಉಪಾಯವನ್ನು ಕಂಡುಹಿಡಿದೆನಲ್ಲಾ ಎಂಬ ಹೆಮ್ಮೆಯಿಂದ;

ನಿಜವೈರದ ಅಂತಸ್ಥ ಅರಿಯದ ಮುನಿಗಳ ಕರೆದು=ಹರಿಶ್ಚಂದ್ರನ ಬಗ್ಗೆ ತನ್ನ ಮನದಲ್ಲಿರುವ ಹಗೆತನದ ಸಂಗತಿಯನ್ನು ತಿಳಿಯದ ಮುನಿಗಳನ್ನು ಕರೆದು;

ನೀವ್ ಇಂತೀಗ ಹೋಗಿ ಭೂವರನನ್ ಉಪಚರಿಸಿ ಬೋಧಿಸಿ=ನೀವು ಈ ಕೂಡಲೇ ಅಯೋದ್ಯೆಯ ರಾಜನಾದ ಹರಿಶ್ಚಂದ್ರನ ಬಳಿಗೆ ಹೋಗಿ, ರಾಜನಿಗೆ ಮಂಗಳವನ್ನು ಕೋರಿ ಆಶೀರ್‍ವದಿಸಿ, ದರ್‍ಮದ ಸಂಗತಿಗಳನ್ನು ತಿಳಿಸಿ;

ಆವ ಪರಿಯೊಳಮ್=ಯಾವು ರೀತಿಯ ನಡೆನುಡಿಯಿಂದಲಾದರೂ ಹರಿಶ್ಚಂದ್ರನು ನಿಮ್ಮನ್ನು ಮೆಚ್ಚುವಂತೆ ಮಾಡಿ; ಅಂದರೆ ನಿಮ್ಮ ಮಾತಿಗೆ ಮನ್ನಣೆಯನ್ನು ನೀಡುವಂತೆ ಒಲಿಸಿಕೊಂಡು;

ಬಹುಸುವರ್ಣಯಾಗವನ್ ಮಾಳ್ಪ ಅನುವನ್=ಬಹು ಸುವರ್‍ಣಯಾಗವನ್ನು ಮಾಡುವ ಸಿದ್ದತೆಯನ್ನು; ಬಹು ಸುವರ್‍ಣಯಾಗಯಾಗ ಎಂದರೆ ಯಾಗದ ಪೂಜೆಯ ಆಚರಣೆಗಳನ್ನು ಮುಗಿಸಿನಂತರ, ‘ಬಹು ’ ಎಂದರೆ ದೊಡ್ಡ ಪ್ರಮಾಣದಲ್ಲಿ, ‘ಸುವರ್‍ಣಯಾಗ ’ ಎಂದರೆ ಚಿನ್ನವನ್ನು ಮುನಿಗಳಿಗೆ ಮತ್ತು ಗುರುಹಿರಿಯರಿಗೆ ದಾನಮಾಡುವುದು;

ಉರೆ ಮಾಳ್ಪುದು ಎಂದು ವಿಶ್ವಾಮಿತ್ರನು ಕಳುಹಿದನು=ಅತಿಶಯವಾಗಿ ಮಾಡುವುದು ಎಂದು ಹೇಳಿ ವಿಶ್ವಾಮಿತ್ರನು ತನ್ನ ಆಶ್ರಮದಲ್ಲಿದ್ದ ಮುನಿಗಳನ್ನು ಹರಿಶ್ಚಂದ್ರನಲ್ಲಿಗೆ ಕಳುಹಿಸಿದನು;

ಮುನಿಗಳ್ ಕೌಶಿಕನ ಕುಟಿಲವ ಅರಿಯದೆ ಹೋಗಿ=ಮುನಿಗಳು ವಿಶ್ವಾಮಿತ್ರನ ಕಪಟತನದ ಉದ್ದೇಶವನ್ನು ತಿಳಿಯದೆ ಅಯೋದ್ಯೆಗೆ ಬಂದು;

ಅವನೀಶಂಗೆ ಮಂಗಳ ಆಶೀರ್ವಾದ ಶೇಷೆಯಮ್ ಸೂಸಲ್=ರಾಜನಿಗೆ ಮಂಗಳ ಪೂರ್‍ವಕವಾಗಿ ಆಶೀರ್‍ವಾದವನ್ನು ಮಾಡಿ ತಲೆಯ ಮೇಲೆ ಅಕ್ಶತೆಯ ಕಾಳುಗಳನ್ನು ಹಾಕಲು;

ಏನು ಕಾರ್ಯ ಬಿಜಯಂಗೆಯ್ದಿರಿ=ಯಾವ ಉದ್ದೇಶಕ್ಕಾಗಿ ದಯಮಾಡಿಸಿದ್ದೀರಿ;

ಸಕಲ ವೇದ ಪೌರಾಣ ಆಗಮ ರಾಶಿಗಳೊಳ್ ಅಧಿಕ ಧರ್ಮಮಮ್ ಕಂಡು ಅರಿಪಲೋಸುಗಮ್ ಬಂದೆವು=ಎಲ್ಲ ಬಗೆಯ ವೇದ ಪುರಾಣ ಆಗಮ ಮುಂತಾದ ನೂರಾರು ಹೊತ್ತಗೆಗಳಲ್ಲಿ ಅತಿಹೆಚ್ಚಿನ ದರ್‍ಮದ ಆಚರಣೆಯನ್ನು ತಿಳಿದುನೋಡಿ, ಅದನ್ನು ನಿನಗೆ ತಿಳಿಸೋಣವೆಂದು ಬಂದಿದ್ದೇವೆ;

ಆವುದು=ದರ್‍ಮದ ಆಚರಣೆ ಯಾವುದು ಎಂದು ಹರಿಶ್ಚಂದ್ರನು ಮುನಿಗಳನ್ನು ಕೇಳುತ್ತಾನೆ;

ಮಾಳ್ಪ ವಿಶ್ವಾಸಮಮ್ ನುಡಿಯೆ ಪೇಳ್ದಪೆವು. ಮಾಡದಡೆ ಅದಮ್ ನುಡಿದು ಫಲವೇನ್ ಎಂದರು=ಮಾಡುತ್ತೇನೆಂದು ನೀನು ಬರವಸೆಯ ನುಡಿಯನ್ನಾಡಿದರೆ ಮಾತ್ರ ನಾವು ಹೇಳುತ್ತೇವೆ. ನಾವು ಹೇಳಿದ ನಂತರ ನೀನು ಅದನ್ನು ಮಾಡದಿದ್ದರೆ, ನಾವು ಹೇಳುವುದರಿಂದ ಏನು ತಾನೆ ಪ್ರಯೋಜನ ಎಂದರು;

ಮನವೊಸೆದು ಮಾಡುವಂತಾಗಿ=ಮನಮೆಚ್ಚಿ ಮಾಡುವಂತಾಗಿ ಅಂದರೆ ಹರಿಶ್ಚಂದ್ರನ ಮನದಲ್ಲಿ ಮುನಿಗಳ ಮಾತು ಪರಿಣಾಮವನ್ನು ಬೀರಿ, ಅವರು ಹೇಳುವ

ದರ್‍ಮದ ಆಚರಣೆಯನ್ನು ಮಾಡಲು ನಿಶ್ಚಯಿಸಿಕೊಂಡು;

ಗುರು ವಾಸಿಷ್ಠಮುನಿಯ ಪದಪಂಕೇಜದಾಣೆ ನೆಟ್ಟನೆ ಪೇಳ್ವುದು=ಗುರು ವಸಿಷ್ಟಮುನಿಯ ಪಾದಕಮಲದ ಮೇಲೆ ಆಣೆಯಿಡುತ್ತಿದ್ದೇನೆ. ನೀವು ಹೇಳಿದ

ದರ್‍ಮದ ಆಚರಣೆಯನ್ನು ನೆರವೇರಿಸುತ್ತೇನೆ. ಅದೇನೆಂಬುದನ್ನು ಯಾವ ಹಿಂಜರಿಕೆಯಿಲ್ಲದೆ ನೇರವಾಗಿ ಹೇಳಿರಿ;

ಬಹುಸುವರ್ಣಯಾಗಮ್ ಯಾಗಕೋಟಾನುಕೋಟಿಗಳೊಳ್ ಅಧಿಕಫಲವು ನಿನಗಲ್ಲದೆ ಉಳಿದ ಭೂಪರ್ಗೆ ಆಗದು=ಲೆಕ್ಕವಿಲ್ಲದಶ್ಟು ಸಂಕೆಯಲ್ಲಿರುವ ಕೋಟಿಗಟ್ಟಲೆ ಯಾಗಗಳಲ್ಲಿ ಬಹು ಸುವರ್‍ಣಯಾಗವೆಂಬುದನ್ನು ಮಾಡಿದರೆ ಅತಿಹೆಚ್ಚಿನ ಪಲವು ದೊರಕುತ್ತದೆ. ಈ ಯಾಗವನ್ನು ನೀನಲ್ಲದೆ ಉಳಿದ ರಾಜರಿಂದ ಮಾಡಲಾಗುವುದಿಲ್ಲ;

ಅದರ ಅನುವು ಆವುದು=ಬಹು ಸುವರ್‍ಣಯಾಗದ ವಿದಿವಿದಾನಗಳು ಯಾವ ಬಗೆಯಲ್ಲಿವೆ;

ದೋಷ ನೆಟ್ಟನೆ ನಿನಗೆ ಬಾರದ ಅಂದದಿ ನೆರೆದ ಮುನಿಗಳಿಗೆ ಬೇಡಿದನಿತು ವಸ್ತುವನ್ ಈಯಬೇಕು ಎಂದರು=ನಿನ್ನ ದಾನಶೀಲತೆಗೆ ಕಳಂಕ ತಟ್ಟದ ರೀತಿಯಲ್ಲಿ ಯಾಗಕ್ಕೆ ಬಂದಿರುವ ಮುನಿಗಳು ಬಯಸಿದಶ್ಟು ವಸ್ತುವನ್ನು ಕೊಡಬೇಕು ಎಂದರು;

ಆ ವಿಮಳ ಮುನಿಗಳ ಹಿತೋಪದೇಶವನ್ ಆಂತು=ಆ ಹೆಸರಾಂತ ಮುನಿಗಳ ಹಿತನುಡಿಗಳನ್ನು ಒಪ್ಪಿಕೊಂಡು ಅದರಂತೆಯೇ ಬಹು ಸುವರ್‍ಣಯಾಗವನ್ನು ಮಾಡಲು ಸಿದ್ದನಾಗಿ;

ಭೂವರನ್ ಸರ್ವಮುನಿವರ್ಗಮಮ್ ಬರಿಸಿ=ರಾಜ ಹರಿಶ್ಚಂದ್ರನು ತನ್ನ ರಾಜ್ಯದಲ್ಲಿದ್ದ ಮುನಿಗಳೆಲ್ಲರನ್ನೂ ಯಾಗಕ್ಕೆ ಕರೆಸಿಕೊಂಡು;

ನಾನಾ ವೇದವಿಹಿತ ಧರ್ಮ ಆಗಮ ಅರ್ಥದಿಮ್ ಯಾಗಮಮ್ ಮಾಡಿ=ನಾಲ್ಕು ವೇದಗಳಲ್ಲಿ ಹೇಳಿರುವ ದರ್ಮದ ಆಚರಣೆಗಳನ್ನು ಮತ್ತು ಆಗಮದ ಹೊತ್ತಗೆಗಳಲ್ಲಿ ಹೇಳಿರುವ ಶಾಸ್ತ್ರದ ವಿದಿವಿದಾನಗಳನ್ನು ಅನುಸರಿಸಿ ಯಾಗವನ್ನು ಮಾಡಿ;

ಬಳಿಕ ಆವಾವ ಮುನಿಗಳು ಆವಾವ ಧನವಮ್ ಬೇಡಲ್=ಯಾಗದ ಕೊನೆಯಲ್ಲಿ ಯಾವ ಯಾವ ಮುನಿಗಳು ಯಾವ ಯಾವ ಬಗೆಯ ಸಿರಿಸಂಪತ್ತನ್ನು ಬೇಡುತ್ತಾರೆಯೋ;

ಓವಿ ಕೊಟ್ಟು ಉಪಚರಿಸುತಿರೆ=ಪ್ರೀತಿಯಿಂದ ಕೊಟ್ಟು ಮುನಿಗಳನ್ನು ಉಪಚರಿಸುತ್ತಿರಲು;

ಸುಜನಮೃಗಧೀವರನ್ ಕಪಟವಟು ಕೌಶಕನ್ ವಾಸಿಷ್ಠ ಮುನಿ ಹೋದ ಹೊತ್ತನ್ ಅರಿದು ಬಂದ=ಒಳ್ಳೆಯ ವ್ಯಕ್ತಿಗಳನ್ನೇ ಬೇಟೆಯಾಡುವ ಕಪಟತನದ ನಡೆನುಡಿಯ ವಿಶ್ವಾಮಿತ್ರನು ವಸಿಷ್ಟ ಮುನಿಯ ಯಾಗವನ್ನು ಮುಗಿಸಿಕೊಂಡು ಹೋದ ಸಮಯವನ್ನು ತಿಳಿದುಕೊಂಡು, ಈಗ ಯಾಗದ ವೇದಿಕೆಗ ಬಂದನು;

ಸುಜನ=ಒಳ್ಳೆಯ ವ್ಯಕ್ತಿಗಳು; ಮೃಗ=ಪ್ರಾಣಿಪಕ್ಶಿಗಳು; ಧೀವರ=ಬೇಡ/ಬೇಟೆಗಾರ;

ಸುಜನಮೃಗಧೀವರ=ಒಳ್ಳೆಯ ವ್ಯಕ್ತಿಗಳಿಗೆ ಸಾವುನೋವನ್ನುಂಟುಮಾಡುವವನು;

ಹರಿದು ವಿಶ್ವಾಮಿತ್ರಮುನಿಗೆ ಎರಗಿ ಚರಣಸರಸಿರುಹಮಮ್ ತೊಳೆದು=ಯಾಗದ ವೇದಿಕೆಗೆ ಬಂದ ವಿಶ್ವಾಮಿತ್ರಮುನಿಯ ಬಳಿಗೆ ಹರಿಶ್ಚಂದ್ರನು ಬಂದು, ಮುನಿಯ ಪಾದಕ್ಕೆ ನಮಿಸಿ, ಅವನ ಪಾದಕಮಲವನ್ನು ತೊಳೆದು ಉಪಚರಿಸಿ;

ನೆನೆದ ಅರ್ಥಮಮ್ ಬೆಸಸಿಮ್=ನೀವು ಬಯಸುತ್ತಿರುವ ಸಿರಿಸಂಪತ್ತಿನ ಪ್ರಮಾಣ ಎಶ್ಟು ಎಂಬುದನ್ನು ಅಪ್ಪಣೆಮಾಡಿ;

ಅರಸ, ಪಿರಿಯ ಕರಿಯಮ್ ಮೆಟ್ಟಿ, ಕವಡೆಯಮ್ ಮಿಡಿದಡೆ ಎನಿತು ಉದ್ದಕ್ಕೆ ಹೋದುದು, ಅದರ ಸರಿಯೆನಿಸಿ ಸುರಿದ ಹೊಸ ಹೊನ್ನ ರಾಸಿಯನ್ ಈವುದು=ರಾಜನೇ, ದೊಡ್ಡ ಆನೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು, ಕವಡೆಯನ್ನು ಮೇಲಕ್ಕೆ ಚಿಮ್ಮಿದರೆ, ಕವಡೆಯು ಎಶ್ಟು ಎತ್ತರಕ್ಕೆ ಹೋಗುವುದೋ, ಆ ಎತ್ತರಕ್ಕೆ ಸರಿಸಮನಾಗಿ ಸುರಿದ ಹೊಸ ಹೊನ್ನಿನ ರಾಸಿಯನ್ನು ಕೊಡುವುದು;

ಹಸಾದಮ್ ಕೊಟ್ಟೆನ್=ತಮ್ಮ ಮಾತಿನಂತೆ ನೀವು ಕೇಳಿದಶ್ಟು ಹೊನ್ನನ್ನು ಕೊಟ್ಟೆನು ಎಂದು ಹೇಳಿ ಹೊನ್ನಿನ ರಾಶಿಯನ್ನು ವಿಶ್ವಾಮಿತ್ರಮುನಿಗೆ ತೋರಿಸುತ್ತ;

ಅದಮ್ ಈಗಲೆ ಇರದೆ ಒಯ್ವುದು=ನಿಮ್ಮ ಹೊನ್ನನ್ನು ಈಗಲೆ ಇಲ್ಲಿ ಬಿಡದೆ ನೀವು ತೆಗೆದುಕೊಂಡು ಹೋಗಿ;

ನಿನ್ನ ಮೇಲಿರಲಿ. ಬೇಹಾಗ ತರಿಸಿಕೊಂಡಪೆನ್ ಎಂದನು=ನಿನ್ನ ಬಳಿಯಲ್ಲಿಯೇ ಇರಲಿ. ನನಗೆ ಬೇಕಾದಾಗ ತರಿಸಿಕೊಳ್ಳುವೆನು ಎಂದನು;

ಕೊಂಡ ಹೊಸ ಹೊನ್ನ ರಾಸಿಯಮ್ ಅವನಿಪಾಲಕನ ಭಂಡಾರದೊಳಗೆ ಇರಿಸಿ ತನ್ನಾಶ್ರಮಕೆ ಮರಳಿ=ಬಹು ಸುವರ್‍ಣಯಾಗದಲ್ಲಿ ದಾನವಾಗಿ ಪಡೆದ ಹೊಸ ಹೊನ್ನ ರಾಸಿಯನ್ನು ವಿಶ್ವಾಮಿತ್ರ ಮುನಿಯು ರಾಜ ಹರಿಶ್ಚಂದ್ರನ ಕಜಾನೆಯೊಳಗೆ ಇರಿಸಿ, ತನ್ನ ಆಶ್ರಮಕ್ಕೆ ಹಿಂತಿರುಗಿದನು;

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *