ನಾ ನೋಡಿದ ಸಿನೆಮಾ: ಲಾಪಿಂಗ್ ಬುದ್ದ
ಕಿರಿಕ್ ಪಾರ‍್ಟಿ ಸಿನೆಮಾದಲ್ಲಿ “ಅಮ್ಮ… ನಾನು ಬೆಕ್ಕು” ಎನ್ನುತ್ತಾ ಎಲ್ಲರನ್ನೂ ನಗುವಿನ ಕಡಲಲ್ಲಿ ತೇಲಿಸಿದ್ದ ಪ್ರಮೋದ್ ಶೆಟ್ಟಿ ಅವರು ಈಗ ಲಾಪಿಂಗ್ ಬುದ್ದನಾಗಿ ಕನ್ನಡಿಗರ ಮುಂದೆ ಬಂದಿದ್ದಾರೆ.
ಪೊಲೀಸ್ ಪೇದೆಯಾಗಿ ಕೆಲಸ ಮಾಡುವ ನಾಯಕನಿಗೆ ರುಚಿಯಾದ ಊಟ ಎಂದರೆ ಆಸೆ. ರುಚಿಯಾಗಿ ಅಡುಗೆ ಮಾಡುವ ಹೆಂಡತಿಯ ಕೈ ಊಟ ತಿಂದುಕೊಂಡು, ಹೆಂಡತಿ, ಮಗು ಹಾಗೂ ಮಾವನ ಜೊತೆ ಒಂದು ಸುಂದರ ಕುಟುಂಬ ಕಟ್ಟಿಕೊಂಡಿರುವ ನಾಯಕ. ಪೊಲೀಸ್ ಟಾಣೆಯಲ್ಲಿ ಕಳ್ಳರಿಂದ ನಿಜವನ್ನು ಬಾಯಿ ಬಿಡಿಸಲು ಕೂಡ ನಾಯಕನ ಹೆಂಡತಿ ಮಾಡಿದ ರುಚಿಯಾದ ಅಡುಗೆಯೇ ಬೇಕು. ರುಚಿಯಾದ ಅಡುಗೆ ತಿಂದು ಬಾಯಿ ಬಿಡದ ಕಳ್ಳರೇ ಇಲ್ಲ. ಹೀಗೆ ಹಾಯಾಗಿ ಬದುಕು ಸಾಗುತ್ತಿರುವಾಗ, ಸಾರ‍್ವಜನಿಕರ ಪ್ರಶ್ನೆಯ ಮೇರೆಗೆ ದಿಡೀರನೆ ಟಾಣೆಯ ಸಿಬ್ಬಂದಿಗೆ ಬಂದೊದಗುವ ಹೊಸ ಸವಾಲು. ಇದರಿಂದಾಗಿ ನಾಯಕನ ನಗುವೇ ಮಾಯವಾಗುತ್ತದೆ. ಮುಂದೇನಾಗಬಹುದು ಎಂದು ತಿಳಿಯಬೇಕಿದ್ದರೆ ಸಿನೆಮಾದಲ್ಲಿದೆ ಉತ್ತರ.
ನಾಯಕನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿಯವರ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ನಾಯಕಿಯಾಗಿ ಗಂಟು ಮೂಟೆ ಕ್ಯಾತಿಯ ತೇಜು ಬೆಳವಾಡಿ ನಟಿಸಿದ್ದಾರೆ. ಕಳನಾಯಕನ ಪಾತ್ರದಲ್ಲಿ ದಿಗಂತ್ ಅವರ ಪಾತ್ರ ಚೆನ್ನಾಗಿದೆ. ಇನ್ನುಳಿದಂತೆ ಸುಂದರ್ ರಾಜ್ ಹಾಗೂ ಇತರರು ನಟಿಸಿದ್ದಾರೆ.
ಎಂ. ಬರತ್ ರಾಜ್ ಅವರ ಕತೆ ಹಾಗೂ ನಿರ‍್ದೇಶನವಿದ್ದು, ಎಸ್. ಚಂದ್ರಶೇಕರನ್ ಅವರ ಸಿನೆಮಾಟೊಗ್ರಪಿ, ಕೆ.ಎಂ.ಪ್ರಕಾಶ್ ಅವರ ಎಡಿಟಿಂಗ್ ಹಾಗೂ ವಿಶ್ಣು ವಿಜಯ್ ಅವರ ಸಂಗೀತವಿದೆ. ರಿಶಬ್ ಶೆಟ್ಟಿ ಪಿಲಂ ಅವ್ರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ. ಕುಟುಂಬ ಸಮೇತರಾಗಿ ಕೂತು ನೋಡಬಹುದಾದ ಈ ಸಿನೆಮಾ ಈಗ ಅಮೆಜಾನ್ ಪ್ರೈಮ್ ನಲ್ಲಿ ಲಬ್ಯವಿದೆ.
(ಚಿತ್ರ ಸೆಲೆ: primevideo.com)
ಇತ್ತೀಚಿನ ಅನಿಸಿಕೆಗಳು