ಪ್ರೀತಿಪಾತ್ರರಿಗೊಂದು ಪತ್ರ

– .

ನಾನು ಕ್ಶೇಮವಾಗಿದ್ದೇನೆ, ನೀನು ಕೂಡ ಆರಾಮವಾಗಿ ಇದ್ದೀಯ ಅಂದು ಕೊಳ್ಳುತ್ತೇನೆ. ಮನೆಯವರೆಲ್ಲರಿಗೂ ನಾನು ಕೇಳಿದೆ ಅಂತ ಹೇಳು ಹೇಮಾ. ಬಂಟಿ ಹೇಗಿದ್ದಾನೆ? ಸಮಯಕ್ಕೆ ಸರಿಯಾಗಿ ತಿನ್ನುತ್ತಾನ? ಬೆಳಿಗ್ಗೆ ಬಂಟಿಯ ಜೊತೆಗೆ ವಾಯುವಿಹಾರ ಮಾಡುತ್ತೀಯ ಹೇಗೆ? ಅವನ ತುಂಟಾಟ ಇನ್ನೂ ಹೆಚ್ಚಾಗಿರಬೇಕು ಅಲ್ಲವ?

ಇಲ್ಲಿ ಅತಿಯಾದ ಸೆಕೆ, ವಾತವರಣ ಸದಾ ಮಂಜು ಮುಸುಕಿದಂತೆ ಕಲುಶಿತ ಗಾಳಿ ತುಂಬಿರುತ್ತದೆ. ಉಸಿರಾಡುವುದಕ್ಕೆ ಯೋಗ್ಯವಿಲ್ಲ ಎನಿಸುತ್ತದೆ. ನಾನು ಕೆಲಸಕ್ಕೆ ಬೆಳಿಗ್ಗೆ ಬಹಳ ಬೇಗನೆ ತೆರಳುತ್ತೇನೆ. ಬೆಳಿಗ್ಗೆ ಒಂಬತ್ತು ದಾಟಿದ ಮೇಲೆ ಟ್ರಾಪಿಕ್ ಜಾಮ್ ಒತ್ತಡ ಪ್ರಾರಂಬವಾಗಿ ಬಿಡುತ್ತದೆ. ನನ್ನ ಬೆಳಗ್ಗಿನ ಉಪಹಾರ ಕಂಪನಿಯ ಕ್ಯಾಂಟಿನಿನಲ್ಲೇ ಆಗುತ್ತದೆ. ಮದ್ಯಾಹ್ನದ ಬೋಜನವೂ ಕ್ಯಾಂಟಿನಿನಲ್ಲೆ! ಹಾಗಾಗಿ ನಿನ್ನ ಕೈ ಅಡುಗೆಯ ರುಚಿ ತುಂಬ ನೆನಪಾಗುತ್ತದೆ. ಆಪೀಸ್ ಸಾಯಂಕಾಲ 6 ಗಂಟೆಗೆ ಮುಗಿಯುತ್ತದೆ. ಮತ್ತದೇ ಟ್ರಾಪಿಕ್ ಜಾಮ್ ಒತ್ತಡದೊಂದಿಗೆ ರೂಂ ಸೇರಲು ಕನಿಶ್ಟ ಎರಡು ಗಂಟೆ ಬೇಕು. ಮನೆ ತಲುಪುವುದು ರಾತ್ರಿ ಎಂಟು ಗಂಟೆಯಾಗಿ ಬಿಡುತ್ತದೆ. ಅಡುಗೆ ಮಾಡಿಕೊಳ್ಳುವ ಉತ್ಸಾಹ ಇರದ ಕಾರಣ ‘ಮಹರಾಜ್’ ಕ್ಯಾಂಟಿನಿನಿಂದ ಬಿಸಿ ತರಕಾರಿ ಪಲಾವ್ ಕಟ್ಟಿಸಿಕೊಂಡು ಹೋಗುತ್ತೇನೆ. ರೂಂನ ಸುತ್ತಮುತ್ತ ಹಾರುವ ವಿಮಾನ, ಓಡುವ ರೈಲು, ಪ್ಯಾಕ್ಟರಿಯ ಸೈರನ್, ರಸ್ತೆಯ ಮೇಲಿನ ವಾಹನಗಳ ಓಡಾಟದ ಸದ್ದು, ಜನರ ಗೌಜು ಗದ್ದಲ ಎಲ್ಲವೂ ರಾತ್ರಿ ಹನ್ನೆರುಡು ಗಂಟೆಯವರೆಗೂ ಇರುತ್ತದೆ. ನನಗೆ ನಿತ್ಯ ನಿದ್ದೆ ಹತ್ತಬೇಕೆಂದರೆ ಬೆಳಗ್ಗಿನ ಜಾವ ಎರಡು ಗಂಟೆ ಆಗುತ್ತದೆ. ಮತ್ತೆ ಬೆಳಿಗ್ಗೆ ಆರಕ್ಕೆ ಏಳಲೇ ಬೇಕು ಏಕೆಂದರೆ ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಡಲೇಬೇಕು, ಹಾಗಾದಾರೆ ಮಾತ್ರ ನಾನು ಹತ್ತು ಗಂಟೆಗೆ ಕಂಪನಿಯ ಕಚೇರಿ ತಲುಪುತ್ತೇನೆ.

ಇಲ್ಲಿಯ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯದ ಜೊತೆಗೆ ಒತ್ತಡದ ಜೀವನ ಕಂಡಿತವಾಗಿಯೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಲ್ಲಿ ಹಸಿರು ತುಂಬಿದ ಮರಗಿಡ, ಸ್ವಚ್ಚ ಹರಿಯುವ ನೀರು, ಶುದ್ದವಾದ ಗಾಳಿ, ಎಲ್ಲವೂ ದುರ‍್ಲಬ. ಹಣಗಳಿಕೆಗಾಗಿ ಓಡುವ ಕುದುರೆ ಬೆನ್ನು ಹತ್ತಿದ ಮನುಶ್ಯನಿಗೆ. ನಗು, ಸಂತೋಶ, ಆರೋಗ್ಯ, ನೆಮ್ಮದಿ ಎಲ್ಲವೂ ಇಲ್ಲಿ ಮರಿಚಿಕೆಯಾದಂತೆ ಅನುಬವವಾಗುತ್ತಿದೆ.

ಇಲ್ಲಿನ ಅತಿಯಾದ ನಗರೀಕರಣದಿಂದಾಗಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸ್ವಯಂಕ್ರುತ ಅಪರಾದ ಮನುಶ್ಯ ಎಸಗುತಿದ್ದಾನೆ ಎಂದೆನಿಸುತ್ತಿದೆ. ನಮ್ಮೂರಿನ ಹಸಿರು ಬತ್ತದ ಗದ್ದೆ, ಪಶ್ಚಿಮಗಟ್ಟದ ದಟ್ಟವಾದ ಕಾನನ, ಸದಾ ಅಬ್ಬರಿಸಿ ಬೋರ‍್ಗರೆದು ಹರಿಯುವ ಬದ್ರಾನದಿ, ನದಿಯೊಳಗೆ ಕಾಲು ಇಳಿ ಬಿಟ್ಟು ಕಾಲಾಡಿಸುತ್ತಿರುವಾಗ ಸಣ್ಣ ಸಣ್ಣ ಮೀನುಗಳು ಹಿಮ್ಮಡಿಯ ಚರ‍್ಮ ಕಚ್ಚಿ ತಿನ್ನುವಾಗ ಆಗುವ ಕಚಗುಳಿ ಎಲ್ಲ ಮರೆತಂತಾಗಿದೆ. ಈ ಮಹಾನಗರಗಳಲ್ಲಿ ಇದನ್ನೆ ಪಿಶ್ ಆಕ್ಯುಪಂಚರ್(ತೆರಪಿ) ಎಂದು ದುಡ್ಡುಕೊಟ್ಟು ಮಾಡಿಸಿಕೊಳ್ಳುತ್ತಾರೆ. ನಮ್ಮಲ್ಲಿ ಪ್ರಾಕ್ರುತಿಕವಾಗಿ ಉಚಿತವಾಗಿ ಸಿಗುವುದೆಲ್ಲವೂ ಇಲ್ಲಿ ಹಣಕೊಟ್ಟು ಪಡೆದುಕೊಳ್ಳಬೇಕು? ನಗರ ಸಂಪೂರ‍್ಣ ವ್ಯಾಪರಮಯವಾಗಿ ಬಿಟ್ಟಿದೆ. ಇಲ್ಲಿ ಹಣವಿಲ್ಲದವನು ಹೆಣಕ್ಕೆ ಸಮಾನ. ನಮ್ಮ ಹಳ್ಳಿಯಲ್ಲಿ ಜೇಬಲ್ಲಿ ಸಾಕಶ್ಟು ಹಣವಿಲ್ಲದಿದ್ದರೂ ಹೇಗೋ ಜೀವನ ಸಾಗಿಸಿಬಿಡಬಹುದು! ಆದರೆ ಇಲ್ಲಿ ಹಾಗಲ್ಲ ‘ದುಡ್ಡೆ ದೊಡ್ಡಪ್ಪ’ ಎಂಬ ಮಾತು ಈ ನಗರಕ್ಕೆ ಸೂಕ್ತವಾಗಿದೆ! ಇಲ್ಲಿ ಕಣ್ಣು ಹಾಯಿಸಿದಶ್ಟು ದೂರ ಕಾಂಕ್ರೀಟ್ ಕಾಡೆ ತುಂಬಿದೆ. ಈ ‘ಗ್ಲೋಬಲ್ ವಾರ‍್ಮಿಂಗ್’ ಎಂಬುದರ ಅಡ್ಡಪರಿಣಾಮ ಇಲ್ಲಿ ಹೆಚ್ಚು ಹೆಚ್ಚು ಕಂಡುಬರುತ್ತಿದೆ. ಇದರ ಅಡ್ಡಪರಿಣಾಮ ರುತುಮಾನದ ಮೇಲೆ ಆಗಿ ಅಕಾಲಿಕ ಮಳೆ, ಅತಿವ್ರುಶ್ಟಿ, ಮಂಜಿನ ಮುಸುಕು, ಕಲುಶಿತ ಹವೆ ಅತಿಯಾದ ಉಶ್ಣತೆ ಇವೆಲ್ಲವೂ ಬಂದೆರಗಿ ಮನುಶ್ಯರ ಜೀವನ ನರಕಮಯವಾಗಿಸುತ್ತಿದೆ. ನನಗೇನೋ ಇನ್ನೂ ಕೆಲವು ವರ‍್ಶಗಳ ನಂತರ ಈ ಉದ್ಯೋಗಕ್ಕೆ ಶರಣು ಹೊಡೆದು ನಮ್ಮ ಹಳ್ಳಿಯಲ್ಲಿ ಉಳಿದು ಕ್ರುಶಿ ಮಾಡೋಣ ಎನಿಸುತ್ತಿದೆ. ಈ ನಗರದ ನರಕದ ಬದುಕಿಗಿಂತ ನಮ್ಮ ಹಳ್ಳಿಯ ನೆಮ್ಮದಿಯ ಬದುಕೆ ಲೇಸು ಎನುಸುತ್ತಿದೆ.

“ಹಸಿರೇ ಉಸಿರು” ಸಾದ್ಯವಾದಶ್ಟು ಗದ್ದೆಯ ಬಳಿ, ಮನೆಯ ಸುತ್ತಮುತ್ತ ಗಿಡ ನೆಟ್ಟು ಬೆಳೆಸು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ರೋಗಗ್ರಸ್ತರಾಗಿ ಅಲ್ಪಾಯುಶಿಗಳಾಗುವ ಬಯವಿದೆ. ಆರೋಗ್ಯದ ಕಡೆ ಗಮನ ಇರಲಿ. ಆದಶ್ಟು ಬೇಗನೆ ಹಳ್ಳಿಗೆ ಬಂದು ಸೇರುವ ಸಮಯಕ್ಕೆ ನಾನು ಚಾತಕ ಪಕ್ಶಿಯಂತೆ ಕಾಯುತ್ತಿದ್ದೇನೆ.

ಇಂತಿ ನಿನ್ನ ಪ್ರೀತಿಯ,
‌ಅಶೋಕ ಪ ಹೊನಕೇರಿ

( ಚಿತ್ರಸೆಲೆ: pixxabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: