ನಾ ನೋಡಿದ ಸಿನೆಮಾ: ಬೈರತಿ ರಣಗಲ್
2024 ರಲ್ಲಿ ನೋಡುಗರನ್ನ ತಿಯೇಟರ್ ಗೆ ಕರೆತರುವ ಸಿನೆಮಾಗಳು ಬರಲಿಲ್ಲ ಎಂದು ಬೇಸರಗೊಂಡಿದ್ದ ಸಿನೆಮಾ ರಸಿಕರಿಗೆ ಹೇಳಿಮಾಡಿಸಿದಂತೆ ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನೆಮಾ 15 ನವೆಂಬರ್ 2024 ರಂದು ಬಿಡುಗಡೆಯಾಗಿ ಎಲ್ಲೆಡೆ ಒಳ್ಳೆಯ ಜನಸ್ಪಂದನೆ ಪಡೆಯುತ್ತಿದೆ
ಕನ್ನಡದ ಕೆಜಿಎಪ್ ಹಾಗೂ ತೆಲುಗಿನ ಬಾಹುಬಲಿ ಸಿನೆಮಾಗಳು ಸೀಕ್ವೆಲ್ ಗಳ ಟ್ರೆಂಡ್ ಹುಟ್ಟು ಹಾಕಿರುವುದು ಎಲ್ಲರಿಗೂ ತಿಳಿದದ್ದೇ. ಈ ಟ್ರೆಂಡ್ ಗೆ ತುಸು ಹೊಸತನದಂತೆ ಒಂದು ಪ್ರೀಕ್ವೆಲ್ ಮೂಲಕ ಜನರ ಮುಂದೆ ಬಂದಿದೆ ಬೈರತಿ ರಣಗಲ್ ಸಿನೆಮಾ. ಶಿವರಾಜ್ ಕುಮಾರ್ ಹಾಗೂ ಶ್ರೀ ಮುರುಳಿ ನಟಿಸಿ ನರ‍್ತನ್ ಅವರು ನಿರ್‍ದೇಶಿಸಿದ್ದ ಮಪ್ತಿ ಸಿನೆಮಾ ನೋಡಿದ್ದವರಿಗೆ, ಸಿನೆಮಾದ ಕೊನೆಯಲ್ಲಿ ಇದು ಮಪ್ತಿ ಸಿನೆಮಾದ ಪ್ರೀಕ್ವೆಲ್ ಎಂದು ತಿಳಿದು ಬರುತ್ತದೆ.
ಎಂದಿನಂತೆ ಶಿವರಾಜ್ ಕುಮಾರ್ ಅವರೇ ಈ ಸಿನಿಮಾದ ಜೀವಾಳ. ಇವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ನಟಿಸಿದ್ದಾರೆ, ನಾಯಕನ ತಂಗಿಯ ಪಾತ್ರದಲ್ಲಿ ಚಾಯಾಸಿಂಗ್ ಮುಂದುವರೆದಿದ್ದು. ಕಳನಾಯಕನಾಗಿ ರಾಹುಲ್ ಬೋಸ್ ನಟಿಸಿದ್ದಾರೆ. ಮದು ಗುರುಸ್ವಾಮಿ ಇಲ್ಲಿಯೂ ಸಹ ಸಿಂಗ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ದೇವರಾಜ್, ಅವಿನಾಶ್, ಗೋಪಾಲ್ ಕ್ರಿಶ್ಣ ದೇಶಪಾಂಡೆ ಹಾಗೂ ಇತರರು ನಟಿಸಿದ್ದಾರೆ.
ರಣಗಲ್ ಹೇಗೆ ಹುಟ್ಟಿಕೊಂಡಿತು, ನಾಯಕ ಹಾಗೂ ಆತನ ತಂಗಿ ನಡುವಿನ ಬಿರುಕಿಗೆ ಕಾರಣ ಏನು ಹೀಗೆ ಮಪ್ತಿ ಸಿನೆಮಾ ಹುಟ್ಟು ಹಾಕಿದ್ದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಎರಡೂ ಸಿನೆಮಾಗಳಿಗೂ ಒಳ್ಳೆಯ ಬೆಸುಗೆ ಹಾಕಿ ಮಂದಿಯ ಮುಂದಿಟ್ಟಿದ್ದಾರೆ ನಿರ‍್ದೇಶಕ ನರ‍್ತನ್. ಆಕಾಶ್ ಹಿರೇಮಟ್ ಅವರ ಎಡಿಟಿಂಗ್ ಹಾಗೂ ನವೀನ್ ಕುಮಾರ್ ಅವರ ಸಿನೇಮಾಟೋಗ್ರಪಿ ಚೆನ್ನಾಗಿ ಕೆಲಸಮಾಡಿದೆ. ರವಿ ಬಸ್ರೂರ್ ಅವರು ಸಂಗೀತಕ್ಕೆ ಹೆಚ್ಚು ಒತ್ತು ನೀಡಬಹುದಿತ್ತು.
ಸಿನೆಮಾದುದ್ದಕ್ಕೂ ನೋಡುಗರನ್ನ ಹಿಡಿದಿಡುವ ಸಿನೆಮಾ, ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಗಳಿಸುವ ಮೂಲಕ ಈ ವರ‍್ಶದ ಬ್ಲಾಕ್ ಬಸ್ಟರ್ ಆಗುವ ಎಲ್ಲಾ ಸೂಚನೆ ನೀಡಿದೆ. ಆಕ್ಶನ್ ಸಿನೆಮಾದ ರಸಿಕರು ನೀವಾಗಿದ್ದಲ್ಲಿ ನಿಮ್ಮನ್ನು ಕಂಡಿತಾ ರಂಜಿಸುತ್ತದೆ ಈ ಸಿನೆಮಾ.
(ಚಿತ್ರಸೆಲೆ: thehindu.com )
ಇತ್ತೀಚಿನ ಅನಿಸಿಕೆಗಳು