ಕಿರು ಬರಹ: ಹಳೆಯ ಆಚರಣೆಗಳು ಇಂದಿನ ಬದುಕಿಗೆ ಅಡಚಣೆಯೇ?

– .

ವೈಜ್ನಾನಿಕ ಸಂಶೋದನೆಗಳು ವಿಕಸಿತಗೊಂಡಂತೆ ಇಂದಿನ ಯುವ ಪೀಳಿಗೆಯಲ್ಲಿ ವೈಜ್ನಾನಿಕ ಮನೋಬಾವ ಜಾಗ್ರುತಗೊಂಡು ನಮ್ಮ ಮನೆಯ ಹಿರಿಯರ ಹಳೆಯ ನಂಬಿಕೆ, ಆಚರಣೆಗಳ ಬಗ್ಗೆ ಮೂಗು ಮುರಿಯುವಂತಾಗಿದೆ. “ದ್ರಾಬೆ ಮುಂಡೆದೆ ಮನೆಯೊಳಗೆ ಚಪ್ಪಲಿ ಹಾಕೊಂಡು ಓಡಾಡ ಬಾರ‍್ದು ಕಣೋ, ಅದು ಮನೆಗೆ ದರಿದ್ರ” ಎಂದು ಹೇಳುವ ನಮ್ಮ ಮನೆಯ ವಯಸ್ಸಾದ ಅಜ್ಜಿಯ ಮಾತಿಗೆ ಮೊಮ್ಮಗನ ಪ್ರತಿಕ್ರಿಯೆ “ಅಜ್ಜಿ ಮನೆಯ ನೆಲದ ದೂಳಿನಲ್ಲಿ, ವಾಶ್ ರೂಂನಲ್ಲಿ ಕೊಟ್ಯಾಂತರ ಬ್ಯಾಕ್ಟೀರಿಯಾಗಳು ಇರುತ್ತವೆ ಅಜ್ಜಿ, ನಾವು ಮನೆಯ ಒಳಗು ಚಪ್ಪಲಿ ದರಿಸುವುದರಿಂದ ಬ್ಯಾಕ್ಟೀರಿಯಾಗಳು ನಮ್ಮ ಸಂಪರ‍್ಕಕ್ಕೆ ಬರದಂತೆ ತಡೆಯಬಹುದು. ಇದರಿಂದ ನಮ್ಮ ದೇಹಕ್ಕೆ ರೋಗ ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಬಹುದು. ನಿನ್ನಂಗೆ ಮನೆ ಒಳಗು ಹೊರಗೂ ಚಪ್ಪಲಿ ಹಾಕದೆ ಒಡಾಡಿದ್ರೆ ಅಶ್ಟೆ! ಡಾಕ್ಟ್ರು, ಮಾತ್ರೆ, ಸಿರಪ್ಪು, ಇಂಜೆಕ್ಶನ್ನು ಅಂತ ಆಸ್ಪತ್ರೆಗೂ ಮನೆಗೂ ಅಲೆದಾಡಬೇಕಾಗುತ್ತೆ. ಜೊತೆಗೆ ಸಾವಿರಾರು ರೂಪಾಯಿ ಕರ‍್ಚು, ನಿನ್ನ ಗೊಡ್ಡು ನಂಬಿಕೆಯಿಂದ ಅದ್ರುಶ್ಟ ಬರಲ್ಲ, ದರಿದ್ರ ಹತ್ಕೊಳುತ್ತೆ” ಎನ್ನುವ ವ್ಯಂಗ್ಯ, ಟೀಕೆ ಮಾಡುವವರಿಗೇನು ಕಮ್ಮಿಯಿಲ್ಲ.

ಮನೆಯ ಹಿರಿಯರು ಬಿಸಿಲು ಮಳೆ ಅಂತ ಲೆಕ್ಕಿಸದೆ, ಮೈಮುರಿದು ದುಡಿದು ಮನೆಯ ರೊಟ್ಟಿ, ಮುದ್ದೆ ಸಾರು, ಮಜ್ಜಿಗೆ, ಮೊಸರು, ತಾಜ ಕಾಯಿಪಲ್ಯೆ, ಹಣ್ಣುಹಂಪಲು, ಬೇಯಿಸಿದ ಕಾಳುಕಡ್ಡಿ ತಿಂದು ಸೂಕ್ಮಾಣು ಪ್ರತಿರೋದಕ ಶಕ್ತಿಯನ್ನು ಹೆಚ್ಚಿಸಿಕೊಂಡಿರುತ್ತಾರೆ. ಇದರಿಂದಾಗಿ ಹಿರಿಯರಿಗೆ ಸಣ್ಣಪುಟ್ಟ ನೆಗಡಿ, ಕೆಮ್ಮು, ಜ್ವರ, ಅಜೀರ‍್ಣದಂತಹ ಕಾಯಿಲೆ ಹತ್ತಿರ ಸುಳಿಯವುದೇ ಇಲ್ಲ. ಹಾಗೊಮ್ಮೆ ಹಾಯ್ದರು ಮನೆಮದ್ದೆ ಅವರಿಗೆ ರಾಮಬಾಣ. ಬೊಜ್ಜು, ಆಯಾಸ, ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ಕಾಯಿಲೆಗಳು ಅವರನ್ನು ಕಂಡರೆ ಅಂಜುತ್ತವೆ. ಇದು ಹಿರಿಯರು ತಮ್ಮ ಜೀವನಾನುಬವದಿಂದ, ಬದುಕಿನ ಹಳೆಯ ಆಚರಣೆ, ನಂಬಿಕೆಗಳಿಂದ ಕಂಡುಕೊಂಡ ಸತ್ಯ. ಈ ವಿಚಾರದಲ್ಲಿ ಇಂದಿನ ಡಿಜಿಟಲ್ ಯುಗದ ಯುವ ಪೀಳಿಗೆ ಸೋಲುತ್ತಿದ್ದಾರೆ ಎಂಬುದು ಕೂಡ ಅಶ್ಟೇ ಸತ್ಯ.

ಕಲಿತ ವಿದ್ಯೆಯಲ್ಲಿ ದೈಹಿಕ ಕಸರತ್ತಿಗಿಂತ, ಬೌದ್ದಿಕ ತಿಣುಕಾಟವೆ ಹೆಚ್ಚು. ಹಣಗಳಿಕೆಯ ಬರದಲ್ಲಿ ದಿನದ ಹೆಚ್ಚು ಸಮಯವನ್ನು ಸ್ಮಾರ‍್ಟ್ ಪೋನ್, ಲ್ಯಾಪ್‌ಟಾಪ್, ಇಂಟರ‍್ನೆಟ್ ಕಂಪ್ಯೂಟರ್ ನೆಂಟಸ್ತನದಲ್ಲಿ ಕುಳಿತಲ್ಲೆ ಕಳೆದು, ಕೆಲಸ ಮಾಡುತ್ತಾ, ಆನ್ಲೈನಿನಲ್ಲಿ ಪಿಜ್ಜಾ, ಬರ‍್ಗರ್, ಪಾಸ್ತ, ಮ್ಯಾಗಿ, ನ್ಯೂಡಲ್ಸ್, ಪ್ರೆಂಚ್ ಪ್ರೈ, ಚಿಕನ್ ಟಿಕ್ಕಾ, ಚಿಲ್ಲಿ ಚಿಕನ್ ಅಂತೆಲ್ಲ ಅ‍ರ್‍ಡರ್ ಮಾಡಿ ತರಿಸಿ ತಿಂದು, ತಮ್ಸ್ ಅಪ್, ಕೋಲಾ, ಸ್ಪ್ರೈಟ್, ಸೆವನ್ ಅಪ್ ನಂತಹ ಸಾಪ್ಟ್ ಡ್ರಿಂಕ್ಸ್ ಹೀರಿ ಡರ್ ಅಂತ ತೇಗುವುದೇ ನವಯುಗದ ಬದಲಾವಣೆ ಎಂತಾದರೆ, ಅಜೀರ‍್ಣ, ಬೊಜ್ಜುತನ, ರೋಗನಿರೋದಕ ಶಕ್ತಿ ಇಳಿಕೆಯಿಂದ ದೇಹ ರೋಗಗ್ರಸ್ತವಾಗುವುದಿಲ್ಲವೇ? ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರರೋಗಗಳಿಗೆ ಆಹ್ವಾನವಿತ್ತು ಚಿಕಿತ್ಸೆಗೆ ಹಣ ಸುರಿಯುವುದರ ಬಗ್ಗೆ ಇವರ‍್ಯಾರು ಮಾತನಾಡುವುದೇ ಇಲ್ಲ. ಇದನ್ನೆ ವಿಪರ‍್ಯಾಸವೆನ್ನುವುದು.

ಹಳೆಯ ಆಚರಣೆಗಳನ್ನು ಸರಿಯಾಗಿ ಗಮನಿಸಿ ನೋಡಿದರೆ ಕೆಲವು ವೈಜ್ನಾನಿಕ ಸತ್ಯಗಳು ಸಿಗುತ್ತವೆ. ಆದುನಿಕ ಜಗತ್ತಿನ ಹಲವು ಸತ್ಯಗಳಲ್ಲಿ ಅಪಾಯಕಾರಿ ಅಂಶಗಳು ಮಿಳಿತವಾಗಿದ್ದು ಮನುಕುಲಕ್ಕೆ ಒಳಿತಾಗುವ ಸತ್ಯ ಅಡಗಿರುತ್ತದೆ. ಹಾಗೆಯೇ ಹಳೆಯ ಆಚರಣೆಗಳೆಂದು ಸಂಪೂರ‍್ಣ ಅದಕ್ಕೆ ಶರಣಾಗಿ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವುದೂ ತರವಲ್ಲ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು. ಹಳೆಯ ಆಚರಣೆಯಲ್ಲೂ ಕೆಲವು ಒಳ್ಳೆಯದನ್ನು ಆಯ್ದುಕೊಂಡು ಬದುಕಿಗೆ ಅಳವಡಿಸಿಕೊಳ್ಳುವುದರಿಂದ ಏನೂ ಕೇಡಾಗುವುದಿಲ್ಲ. ಹಾಗೆಯೇ ಸಂಪೂರ‍್ಣ ಹಳೆಯ ಆಚರಣೆಗಳಿಗೆ ಜೋತು ಬಿದ್ದು ವೈಜ್ನಾನಿಕ ಸತ್ಯದಿಂದ ಕೂಡಿದ ಆದುನಿಕ ಸತ್ಯಗಳನ್ನು ಕಡೆಗಣಿಸುವಂತಿಲ್ಲ. ಇವೆರಡನ್ನು ಸಮನಾಗಿ ಬೆರೆಸಿ, ಬದುಕಿನಲ್ಲಿ ಆಚರಣೆಗೆ ತಂದರೆ ಬದುಕು ನಿಜಕ್ಕೂ ಸುಂದರ ಹೂವಾಗಿ ಅರಳಿ, ಜೀವಾನಾನುಬವದ ಹಳೆಯ ಆಚರಣೆಗೂ ಆದುನಿಕ ಜಗದ ಕಟು ಸತ್ಯಗಳಿಗೂ ಸಮಾನ ಗೌರವ ಸಿಕ್ಕಿ ಮನುಶ್ಯರ ಬದುಕು ಹಸನಾಗಿ, ಮಾನವ ಕಲ್ಯಾಣಕ್ಕೆ ಮುನ್ನುಡಿ ಬರೆದೀತೂ…

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *