ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 11 ನೆಯ ಕಂತು – ರಾಜ್ಯ ಸರ‍್ವಸ್ವ ದಾನ

– ಸಿ.ಪಿ.ನಾಗರಾಜ.

*** ರಾಜ್ಯ ಸರ‍್ವಸ್ವ ದಾನ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ(ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ರಾಜ್ಯ ಸರ್ವಸ್ವ ದಾನ ’ ಎಂಬ ಅಯ್ದನೆಯ ಅಧ್ಯಾಯದ 1 ರಿಂದ 34 ರ ವರೆಗಿನ ಮೂವತ್ನಾಲ್ಕು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

 ಪಾತ್ರಗಳು

ವಿಶ್ವಾಮಿತ್ರ: ಒಬ್ಬ ಮುನಿ. ಈತನು ಕುಶಿಕನೆಂಬ ರಾಜನ ಮಗನಾದ್ದರಿಂದ ಕೌಶಿಕ ಎಂಬ ಮತ್ತೊಂದು ಹೆಸರಿದೆ.
ಹರಿಶ್ಚಂದ್ರ: ಅಯೋಧ್ಯೆಯ ರಾಜ.
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಪಟ್ಟದ ರಾಣಿ.
ಲೋಹಿತಾಶ್ವ: ಹರಿಶ್ಚಂದ್ರನ ಮಗ
ಸತ್ಯಕೀರ್ತಿ: ಹರಿಶ್ಚಂದ್ರನ ಮಂತ್ರಿ

*** ರಾಜ್ಯ ಸರ್ವಸ್ವ ದಾನ ***

ವಡಬಾಗ್ನಿ ಜಡೆವೊತ್ತುದೋ… ಸಿಡಿಲು ಹೊಸ ಭಸಿತವ ಇಡಕಲಿತುದೋ… ಕಾಡ ಕಿಚ್ಚು ಕೃಷ್ಣಾಜಿನವನ್ ಉಡಕಲಿತುದೋ… ಪ್ರಳಯ ವಹ್ನಿ ತಪವಿರ್ದುದೋ… ಭಾಳಲೋಚನನ ಕೋಪ ಕಡುಗಿ ಮುನಿಯಾಯ್ತೊ… ಹೇಳ್ ಎನೆ… ಕಣ್ಣ ಕಡೆ ತೋರಗಿಡಿ ಕೆದರೆ; ಮೀಸೆಗೂದಲು ಹೊತ್ತಿ ಹೊಗೆಯ ಬಿರುನುಡಿಗಳ್ ಉರಿಯುಗುಳೆ; ವಿಶ್ವಾಮಿತ್ರನ್ ಅವನೀಶನ ಎಡೆಗೆ ಉರವಣಿಸಿ ಬಂದನ್.

ವಿಶ್ವಾಮಿತ್ರ: ಅನಿಲನ್ ಬಿರುಗಾಳಿಯನ್ ಬೀಸಲಮ್ಮನ್; ಸುರಪನ್ ಅರೆವಳೆಗಳನ್ ಕರೆಯಲಮ್ಮನ್; ತರಣಿ ಅತಿ ಕಡುವಿಸಿಲ ಕರೆಯಲಮ್ಮನ್; ದಾವಾಗ್ನಿ ಮೇರೆಯನ್

 ಮೀರಲಮ್ಮನ್; ಲೋಕವ ಮುರಿವ ಜವಗಿವನ ದೂತರು ಗೀತರ್ ಎಂಬರ್ ಎದ್ದು ಎರಗಲಮ್ಮರು. ನಿನ್ನ ಧೀವಶ. ತಪೋವನದೊಳ್ ಇಂದು ಎಮ್ಮ ನೀನ್

 ಕೊರಚಾಡಲೆಂದು ಅರಿದರಿದು ಬೀಡಮ್ ಬಿಟ್ಟೆ.

ಹರಿಶ್ಚಂದ್ರ: ತಂದೆ, ಎಳಸಿ ಪುಣ್ಯಾರ್ಥದಿಮ್ ವಂದನೆ ನಿಮಿತ್ತ ಗುರುನಿಳಯಕ್ಕೆ ಶಿಷ್ಯನ್ ಎಯ್ತಪ್ಪುದಕೆ ಸಾಹಸದ ಬಲವೇಕೆ.

ವಿಶ್ವಾಮಿತ್ರ: ನುಡಿಯೊಳು ನಯಮ್ ಪಡೆದು, ಕಾರ್ಯದೊಳು ಗುರುವಿನ ಅಸುಗೆ ಮುಳಿದು, ಸರ್ವಸ್ವ ಅಪಹರಣವಮ್ ಮಾಳ್ಪ ಕಡುಗಲಿತನವು… ಇದಾವ ಪುಣ್ಯವ ಪಡೆವ ಶಿಷ್ಯತನದ

 ಒಳಗು ಪೇಳು.

ಹರಿಶ್ಚಂದ್ರ: ಎನ್ನ ದೆಸೆಯಿಂದ ಕೆಟ್ಟುದೇನ್!

ವಿಶ್ವಾಮಿತ್ರ: ಅರಸುಗಳಿಗೆ ಉಪದೇಶವನ್ ಮಾಡಿ ವಸ್ತುವನ್ ನೆರಹಬಲ್ಲವನಲ್ಲ. ನಿಜವೈರವಮ್ ಬಿಟ್ಟು ಹರುಷದಿಂದಿರ್ಪ ಮೃಗಸಂಕುಳಮ್; ಸರ್ವಋತುಗಳೊಳು ಫಲವಿಡಿದು

 ಒರಗುವ ತರುಕುಲಮ್; ಬತ್ತದೆ ಒಂದೇ ಪರಿಯಲಿಹ ಸರೋವರವೆಂಬ ಧನ. ಇದೆಲ್ಲವನ್ ಇರಿದು ಮುರಿದು ಕುಡಿದು ಅರೆಮಾಳ್ಪ ಬಲುಹು ಸರ್ವಸ್ವ ಅಪಹರಣವಲ್ಲದೆ ಬಳಿಕ್ಕ ಏನು?

ಹರಿಶ್ಚಂದ್ರ: ಬರುಮುನಿಸನ್ ಇಟ್ಟುಕೊಂಡು ಅರುಹುವಂತಾಗಿ… ನಾನ್ ಇರಿದ ಮೃಗ… ಮುರಿದ ಮರ… ಕುಡಿದ ಕೊಳನ್ ಆವುದು? ಎಲೆ, ಕಿರುಜಡೆಯ ನೀತಿವಿದ ತೋರಿಸು.

(ಎನೆ, ಘುಡುಘುಡುಸುತ ಎದ್ದು.. ಹಳಗಾಲದಂದು ಅರತ ಕೊಳನಮ್… ಕೊಳೆತು ಮುರಿದ ಮರನಮ್… ನೃಪನನ್ ಉರೆ ತಂದ ಹಲವು ಗಾಯದ ಹಂದಿಯನ್ ತೋರಿ ಜರೆದು…)

ವಿಶ್ವಾಮಿತ್ರ: ಪಾಪಿ, ನೀನ್ ಇನ್ನಾವ ನೆವವನ್ ಒಡ್ಡುವೆ.

(ಎನುತ ಮತ್ತೆ ಇಂತು ಎಂದನು.)

ವಿಶ್ವಾಮಿತ್ರ: ಹಿಂದೆ ಸಂಪದದೊಳ್ ಉರೆ ಗರ್ವದಿಮ್ ಮೆರೆದ ಸಕ್ರಂದನನ ಸಿರಿಯ ನೀರೊಳಗೆ ನೆರಹಿದ ಮುನಿಪನ ಅಂದವನ್ ಮಾಡುವೆನು. ಹರನ ಹಣೆಗಣ್ಣ ಹಗ್ಗಿಯನು

 ಹಗೆಗೊಂಬ ಅಂದದಿನ್ ಇಂದು ಎನ್ನ ಹಗೆಗೊಂಡೆ… ಬಿಟ್ಟ ಬೀಡೆಲ್ಲಮನ್ ಕೊಂದು ಕೂಗಿಡಿಸಿ ನೆರೆ ಸುಟ್ಟು ಬೊಟ್ಟಿಡುವೆನ್… ಆರ್ ಎಂದು ಇರ್ದೆ… ನಿನ್ನ ಗುರು

 ಹೇಳನೇ… ತನ್ನ ಸುತರ ಅಳಲ ತಿಣ್ಣವನ್.

ಹರಿಶ್ಚಂದ್ರ: ಒಸೆದು ಹುಟ್ಟಿಸುವ, ಪಾಲಿಸುವ, ಮರ್ದಿಸುವ ಸತ್ವಸಮರ್ಥನ್ ಎನಿಪ ನೀನೇ… ತಪ್ಪ ಹೊರಿಸಿ ದಟ್ಟಿಸುವಡೆ… ಇನ್ನು ಉತ್ತರಿಸಿ ಶುದ್ಧವಹುದು ಅರಿದಯ್ಯ. ತಂದೆ, ಆನ್ ನಿಮ್ಮ

 ಕರುಣದ ತೊಟ್ಟಿಲ ಹಸುಳೆ… ಆನ್ ಸರ್ವ ಅಪರಾಧಿ… ಕರುಣಿಸು… ದಯಮ್ ಕೆಡದಿರ್… ಉದ್ರೇಕಿಸದಿರ್.

(ಎಂದು ಪದ ಬಿಸರುಹದ ಮೇಲೆ ನಿಜಮಣಿ ಮಕುಟ ಮಂಡಿತ ಶಿರೋಂಬುಜವನು ಕೆಡಹಿದನು.)

ಹರಿಶ್ಚಂದ್ರ: ನೋಡಿ ವಂದಿಸಿ ಹೋಹ ಶಿಷ್ಯಂಗೆ ನೀಮ್ ಕೃಪೆಯ ಮಾಡುವುದು. ಹದುಳದಿಮ್ ಬಲವನೆಲ್ಲವ ಹೊಳ್ಳು ಮಾಡಬಗೆವರೆ ಹೇಳ್.

ವಿಶ್ವಾಮಿತ್ರ: ಪ್ರಳಯ ಫಣಿಯ ಅಣಲ ಹೊಳಲೊಳಗೆ ಕೈಯ ನೀಡಿ ದಾಡೆಯಮ್ ಮುರಿಯ ಬಗೆವಂತೆ… ಎನ್ನ ಬಸುರಿಂದ ಮೂಡಿರ್ದ ಕನ್ನೆಯರ ಚೆನ್ನೆಯರನ್ ಅಬಲೆಯರ

 ಗಾಡಿಕಾತಿಯರನ್ ಅರಿದರಿದು… ಇಂತು ಸಾಯ ಸದೆಬಡಿವರೇ ಹೇಳು.

ಹರಿಶ್ಚಂದ್ರ: ಬೇಗದಲಿ ನಿಮ್ಮ ಮನೆಯವರೆಂದು ಮೊರೆಯಿಟ್ಟರಾಗಿ ಕರುಣಿಸಿ ಬಿಟ್ಟೆನ್. ಅಲ್ಲದಿರ್ದಡೆ ಕೆಡಹಿ ಮೂಗನ್ ಅರಿದು, ಎಳಹೂಟೆಯಮ್ ಕಟ್ಟಿ, ಬಟ್ಟಬಯಲೊಳ್ ಹೆಟ್ಟ ಎಳಸುವೆ.

ವಿಶ್ವಾಮಿತ್ರ: ಏಗೆಯ್ದರ್… ಅವರೊಳ್ ಅನ್ಯಾಯವೇನ್?

ಹರಿಶ್ಚಂದ್ರ: ಮುನೀಶ ಚಿತ್ತೈಸು, ಎನ್ನ ಮೇಗಿರ್ದ ಸತ್ತಿಗೆಯನ್ ಈಯ… ಅಲ್ಲದೊಡೆ ಗಂಡನಾಗು… ನೀನ್ ಆಗದೊಡೆ ಮೊರೆಯಿಡುವೆವು ಎಂದರು.

ವಿಶ್ವಾಮಿತ್ರ: ಹೊಡೆ… ಅದಕ್ಕೇನು. ಅವದಿರನ್ ಹೊಡೆದ ಕೈಗಳಮ್ ಕಡಿವೆ. ನಿನ್ನನ್ ನಚ್ಚಿ ಮಲೆತ ದೇಶವನ್ ಉರುಹಿ ಸುಡುವೆನ್. ಆ ದೇಶಕ್ಕೆ ಹಿತವಾಗಿ ಬಂದ ಮುನಿಯನ್

 ಮುರಿವೆನ್. ಆ ಮುನಿಯನು ಹಿಡಿದು, ಕದನಕ್ಕೆಂದು ಬಂದ ಅಮರರಮ್ ಕೆಡಹಿ ಹುಡುಕುನೀರ್ ಅದ್ದುವೆ. ಎನ್ನ ಅಳವನ್ ಅರಿಯಾ. ಮುನ್ನ ತೊಡಕಿ ತನಗಾದ

 ಭಂಗಗಳಮ್ ಕಮಲಕಂದನು ನಿನಗೆ ಹೇಳನೇ.

(ತರಿಸಂದ ಮುನಿಯ ಕೋಪದ ಕಿಚ್ಚನ್, ಉಬ್ಬರದ ಬಿರುಬನ್ ಅರಿದು…)

ಹರಿಶ್ಚಂದ್ರ:(ತನ್ನ ಮನದಲ್ಲಿ)

 ಅತಿ ತೀವ್ರತರವಾಯಿತು ಇನ್ನು ಕಿರಿದರಲಿ ತಗ್ಗುವುದಲ್ಲ… ಗರ್ವಿಸುವುದು ಉಚಿತವಲ್ಲ.

(ಎಂದು ವಸುಧಾಧೀಶನು…)

ಹರಿಶ್ಚಂದ್ರ:ಅರಿಯದೆ ಅನ್ಯಾಯಮನ್ ಮಾಡಿದೆನ್. ಇದು ಒಮ್ಮಿಂಗೆ ನೆರೆದ ಕೋಪಾಗ್ನಿಯಮ್ ಬಿಡು ತಂದೆ.

(ಎಂದು ಧರೆಗೆ ಉರುವ ಸತಿಸುತವೆರಸಿ ಪೊಡವಟ್ಟಡೆ, ಆಸುರದ ಕೋರಡಿಗನು ಅಣಕಿಸಿದನ್.)

ವಿಶ್ವಾಮಿತ್ರ: ಕೋಡದೆ… ಅಂಜದೆ… ಲೆಕ್ಕಿಸದೆ ಬಂದು ಬನದೊಳಗೆ ಬೀಡ ಬಿಟ್ಟು… ಅನಿಮಿತ್ತ ಅನ್ಯಾಯ ಕೋಟಿಯಮ್ ಮಾಡಿ… ಮಕ್ಕಳುಗಳನ್ ಸಾಯ ಸದೆಬಡಿದುದಲ್ಲದೆ… ಬನ್ನವೆತ್ತಿ

 ಹಲವು ಕೇಡು ಮಾತುಗಳಿಂದ ಕೆಡೆನುಡಿದು, ಮತ್ತೆ ಈಗ ಬೇಡ… ಕೋಪವನ್ ಉಡುಗು ತಂದೆ ಎಂದೆನೆ… ಎಲವೊ ಕೇಳ್, ನಿನ್ನ ಕೋಡ(?) ಕೊರೆಯದೆ ಬರಿದೆ ಬಿಟ್ಟಪೆನೆ.

 ಹರಿಶ್ಚಂದ್ರ: ಕ್ರೂರರ್, ಅತ್ಯಧಮರ್, ಉದ್ರೇಕಿಗಳು, ದುರ್ಜನಾಕಾರರುಮ್ ಧೂರ್ತರೊಳಗಾಗಿ ಶರಣ್ ಎನಲು ನಿಜ ವೈರವಮ್ ಬಿಡುವರ್ ಎಂಬಾಗ, ನೆರೆ ಸರ್ವಸಂಗನಿವೃತ್ತರ್

 ಎನಿಪ ನಿಮಗೆ ಓರಂತೆ ಬೇಡಿಕೊಳುತಿಪ್ಪ ಎನ್ನ ಮೇಲೆ ಇನಿತು ಕಾರುಣ್ಯವೇಕಿಲ್ಲ ತಂದೆ.

 ವಿಶ್ವಾಮಿತ್ರ: ಇಂತು ಈಗ ಎನ್ನಯ ಕುಮಾರಿಯರ ಮದುವೆಯಾಗು. ಎಲ್ಲಾ ನಿರೋಧಮಮ್ ಬಿಡುವೆನ್.

 ಹರಿಶ್ಚಂದ್ರ: ವಿವಿಧ ಗುರ್ವಾಜ್ಞೆಯೊಳು ಕೆಲವು ಮಾಡುವವು… ಕೆಲವು ಮೀರುವವು.

ವಿಶ್ವಾಮಿತ್ರ: ಆ ಕಾರ್ಯಮ್ ಉಳ್ಳವಮ್ ಮಾಳ್ಪುದು… ಉಳಿದವ ಬಿಡುವುದೈಸಲೇ… ಗುರುಭಕ್ತಿ.

ಹರಿಶ್ಚಂದ್ರ: ಮುನಿಪ ಕೇಳ್, ನೀವ್ ಎನ್ನ ಮನದ ಹವಣನ್ ಆರಯ್ಯಲೆಂದು ಅನುಗೆಯ್ದಿರಲ್ಲದೆ, ಈ ನವ ನರಕಮನ್ ಮಾಡ ಹೇಳಿದವರುಂಟೆ. ನಾ ನಿಮ್ಮವನು. ನಿಮ್ಮ ಮನದ

 ಅನುವನ್ ಅರಿಯೆನೆ.

ವಿಶ್ವಾಮಿತ್ರ: ನಿನ್ನಯ ಮನದ ಹವಣರಿಯಲೆಂದು ಒತ್ತಿ ನುಡಿಯಿತಿಲ್ಲ. ತಾತ್ಪರ್ಯವಾಗಿ ನುಡಿದೆವು. ನಿನ್ನ ಚಿತ್ತದಲಿ ಶಂಕಿಸದೆ ಮದುವೆಯಾಗು.

(ಎಂದು ಕೌಶಿಕ ಮುನೀಂದ್ರನ್ ನುಡಿಯಲು… .)

ಹರಿಶ್ಚಂದ್ರ: ಉತ್ತಮದ ರವಿಕುಲದೊಳ್ ಉದಿಸಿ, ಚಾಂಡಾಲತ್ವ ಪೆತ್ತ ಸತಿಯರ್ಗೆ ಎಳಸಿ, ಘೋರ ನರಕಾಳಿಗೆ ಅನಿಮಿತ್ತ ಹೋಹವನಲ್ಲ… ಇದನ್ ಬೆಸಸಬೇಡಿ.

(ಎಂದು ಭೂಭುಜನ್ ಕೈಮುಗಿದನು.)

ವಿಶ್ವಾಮಿತ್ರ: ಬಿಡದೆ ಸತಿಯರ ಹೊಲೆಯರೆಂಬ ನೆವ ಏಕೆ… ಅವರ ಹಡೆದ ಎನ್ನನೇ ಹೊಲೆಯನ್ ಎಂದು ಆಡಿದಾತನ್.

ಹರಿಶ್ಚಂದ್ರ: ಮುನಿಪ, ಭಸಿಧರನ್ ಎನಲು ರುದ್ರನನ್ ಬಯ್ದವನೆ… ಹೊಲೆಗೆರೆಯ ಜಲದ ನಡುವೆ ಬಿಂಬಿಸುವ ರವಿ ಹೊಲೆಯನೇ… ಕಮಲಭವನೊಡನೆ ಹುರುಡಿಸಿ, ಬೇರೆ ಸರ್ವಜೀವರ

 ಮಾಡುವೆಡೆಯೊಳ್ ಆ ಜೀವರೊಳಗಾದವನೆ. ನಿಮ್ಮ ಹವಣರಿಯದೆ ಆಡಿದರಿ.

ವಿಶ್ವಾಮಿತ್ರ: ಅಂಬುಧಿವ್ರಜಪರಿಮಿತ ಅವನೀತಳದೊಳ್ ಆಡಂಬರದ ಕೀರ್ತಿಯಮ್ ತಳೆದ ನಾನಾ ಮುನಿ ಕದಂಬ ಅಧಿನಾಥ ವಿಶ್ವಾಮಿತ್ರಮುನಿ ಸುತೆಯರನ್ ಜಗಚ್ಚಕ್ಷು ಎನಿಪ

 ಅಂಬುಜಪ್ರಿಯ ಕುಲಲಾಮನ್ ಅವನೀಶ ನಿಕುರುಂಬ ಅಧಿಪತಿ ಹರಿಶ್ಚಂದ್ರರಾಯನ್ ತಂದನ್ ಎಂಬೊಂದು ತೇಜಮಮ್ ಕೊಡಬೇಕು. ಭೂಪ, ಕೈಮುಗಿದು ಬೇಡಿದೆನ್.

ಹರಿಶ್ಚಂದ್ರ: ಎಡೆವಿಡದೆ ಬೇಡಿ ಕಾಡುವಿರಾದಡೆ ಇನ್ನು ಕೇಳ್, ಕಡೆಗೆ ಎನ್ನ ಸರ್ವರಾಜ್ಯವನಾದಡಮ್ ನಿಮಗೆ ಕೊಡಹಡೆವೆನೈ… ಸಲ್ಲದು ಈ ಒಂದು ತೇಜಮನ್ ಕೊಡೆನ್.

(ಎಂದು ಭೂಪಾಲನು ನುಡಿಯಲು…)

ವಿಶ್ವಾಮಿತ್ರ: ತಥಾಸ್ತು… ಹಡೆದೆನ್… ಹಡೆದೆನ್. ಅವನೀಶರ ಒಡೆಯ , ದಾನಿ ಲಲಾಮ, ಸತ್ಯಾವತಂಸ..

(ಎಂದು ಎಡೆವಿಡದೆ ಹೊಗಳಿ ಬಿಡದೆ ಸಂಗಡದ ಮುನಿವರರು ಸಹಿತ ಆಘೋಷಿಸಿದನು.)

ವಿಶ್ವಾಮಿತ್ರ: ನೃಪ, ಇಂತು ಎನ್ನ ಕಾಟಕ್ಕೆ ಬೇಸತ್ತು ನೀನೊಬ್ಬನ್ ಎಂತಕ್ಕೆ ಕೊಟ್ಟನ್ ಎಂದಡೆ ಬಿಡೆನು. ನಿನ್ನ ಕಾಂತೆ, ಸುತ, ಮಂತ್ರಿಗಳ ಮತ ಬೇಹುದು. ಅವರುಗಳನ್ ಬೇಗ ಒಡಬಡಿಸು.

ಹರಿಶ್ಚಂದ್ರ: ಭ್ರಾಂತಮುನಿ, ನಾನೊಬ್ಬ ಸಾಲದೇ… ಸ್ತೀಬಾಲರ್ ಎಂತಾದಡಮ್ ನುಡಿವರ್. ಅವರ ಇಚ್ಛೆಯೇ, ಎನ್ನ ಸಂತಸದೆ ಕೋ…

ವಿಶ್ವಾಮಿತ್ರ: ಅದರ ಮಾತನ್ ಬಿಟ್ಟು ಧಾರೆಯಮ್ ತಾ.

 ಹರಿಶ್ಚಂದ್ರ: ಅಡವಿಯಮ್ ಮೊಗೆದು ಸುಡುವ ಅಗ್ನಿಗೆ ಆಪೋಶನದ ಗೊಡವೆ ಏವುದು? … ಬಲಾತ್ಕಾರದಿಮ್ ಕೊಂಬಿರಾದಡೆ ಧಾರೆಯೇಕಯ್ಯ. ಧಾರೆ ಕೊಡದಿರೆ, ಮರಳಿ ನೀನ್ ಬಿಡುವುದುಂಟೆ.

ವಿಶ್ವಾಮಿತ್ರ: ಬಿಡುವೆನ್, ಎನ್ನಯ ಮಕ್ಕಳನ್ ಮದುವೆಯಾಗು.

 ಹರಿಶ್ಚಂದ್ರ: ಅಡಿಗಡಿಗೆ ಕೆಟ್ಟ ನುಡಿಯನ್ ನುಡಿಯುತಿರಬೇಡ. ಹಿಡಿ

(ಎಂದು ಅವನೀಶನು ಸರ್ವಸಾಮ್ರಾಜ್ಯಮನ್ ಮುನಿಗೆ ಧಾರೆಯನ್ ಎರೆದನ್.)

ವಿಶ್ವಾಮಿತ್ರ: ಏನೇನನ್ ಧಾರೆಯನ್ ಎರೆದೆ.

ಹರಿಶ್ಚಂದ್ರ: ಚತುರಂಗ ಸೇನೆಯಮ್… ಸಕಲ ಭಂಡಾರವಮ್… ನಿಜ ರಾಜಧಾನಿಯಮ್… ಜಗದಾಣೆ ಘೋಷಣೆಯುಮನ್… ಕಟಕವನು… ಸಪ್ತದ್ವೀಪಂಗಳ ಆನಂದದಿಂದೆ ಇತ್ತೆನ್. ಇನ್ನು

 ಸರ್ವ ಅನುಸಂಧಾನಮನ್ ಬಿಟ್ಟು, ಕರುಣಿಸಿ ಹರಸುತಿಹುದು.

(ಎಂದು ಭೂನಾಥನ್ ಎರಗಿ ಬೀಳ್ಕೊಂಡಡೆ, ಅಣಕಿಸಿ ನಗುತ…)

ವಿಶ್ವಾಮಿತ್ರ:ಹೋಗಯ್ಯ ಹೋಗು.

ಹರಿಶ್ಚಂದ್ರ:(ತನ್ನ ಮನದಲ್ಲಿ)

ಹರಣಮನ್ ಬೇಡದೆ ಉಳುಹಿದನು. ಲೇಸಾಯ್ತು, ಮುನಿ ಕರುಣಿಸಿದನ್.

(ಎಂದು ತಲೆದಡವಿಕೊಳುತ ಉತ್ಸವದೊಳ್ ಉರವಣಿಸಿ ರಥವೇರಿ ನಡೆಗೊಳಲು…)

ವಿಶ್ವಾಮಿತ್ರ:ಬಂದು ಹೋಗು. ಒಂದು ನುಡಿ ಪೇಳ್ವೆನ್.

(ಎಂದು ಹುರುಡಿಗನು ಮತ್ತೆ ಕರೆಯಲು, ಮರಳಿ ಬಂದು…)

ಹರಿಶ್ಚಂದ್ರ:ಚಚ್ಚರ ಬೆಸಸು… ಬೆಸನ್ ಆವುದು?

(ಎಂದು ಧೀರೋದಾತ್ತನ್ ಎರಡು ಕೈಮುಗಿಯಲ್, ಆ ಮುನಿ ನುಡಿದ ಕಷ್ಟವನ್ ಅದಾವ ಜೀವರು ಕೇಳ್ವರು.)

ವಿಶ್ವಾಮಿತ್ರ:ಎಳಸಿ ನೀನ್ ಎನಗೆ ಧಾರೆಯನ್ ಎರೆದ ಸರ್ವಸ್ವದೊಳಗಣವು ನಿನ್ನ ತೊಡಿಗೆಗಳ್. ಅವಮ್ ನೀಡು.

(ಎನಲು, ಕಳೆದು ನೀಡಿದಡೆ…)

ವಿಶ್ವಾಮಿತ್ರ:ಇನ್ನು ಮಂತ್ರಿ ಸತಿ ಸುತರ ತೊಡಿಗೆಗಳ ಈಗಳ್ ನೀಡು.

(ಎನಲು, ಕಳೆದು ಕೊಟ್ಟಡೆ…)

ವಿಶ್ವಾಮಿತ್ರ:ಮೇಲೆ ನೀವೆಲ್ಲರು ಉಟ್ಟ ಉಡುಗೆಗಳನು ನೀಡು.

ಹರಿಶ್ಚಂದ್ರ: ಅವನ್ ಈವ ಪರಿ ಆವುದು?

(ಎಂದು ಅಳುಕಿ ಮನಗುಂದಿ ಚಿಂತಿಸುತ ಕೈಮುಗಿದಿರ್ಪ ಭೂಪನನ್ ಕಂಡು…)

ವಿಶ್ವಾಮಿತ್ರ: ಅವನಿಪರು ಮರುಳರ್ ಎಂಬುದು ತಪ್ಪದು. ಇದಕೆ ಉಪಾಯವ ಕಾಣ್ಬುದು ಅರಿದೆ. ನಾ ತೋರಿದಪೆನ್.

(ಎಂದು ತನ್ನವನ್ ಒಬ್ಬನ್ ಉಟ್ಟ ಹಣ್ಣರುವೆ ಸೀರೆಯನ್ ಈಸಿಕೊಂಡು, ನಾಲ್ಕಾಗಿ ಸೀಳಿ, ಶಿವಶಿವ… ಮಹಾದೇವ… ಕರುಣವಿಲ್ಲದ ಪಾಪಿ ಅವಿಚಾರದಿಮ್

ನೀಡೆ… ನಾಚದೆ… ಒಗಡಿಸದೆ… ಅಳುಕದೆ ಅವರ್ ಒಬ್ಬರು ಒಂದೊಂದನು ಉಟ್ಟು ದಿವ್ಯಾಂಬರವನ್ ಇತ್ತಡೆ ಅಲಸದೆ ಕೊಂಡನು. ತೃಣ ಸಸಿ

ಮುಖ್ಯ ಜೀವಿಗಳಿಗೆ ಮಿಸುಪ ಕಳೆಗಳನು ಒಸೆದೊಸೆದು ದಾನವಿತ್ತು ಅಂಬರವನು ಉಳಿದ ಅಮಳ ಶಶಿಯಂತೆ ಅಂಬರವನ್ ಉಳಿದು ಅರುವೆಯುಟ್ಟ

ಅರಸನು ಸರ್ವತೊಡಿಗೆಗಳನ್ ಇತ್ತು ಕುಸಿದು ಪೊಡಮಟ್ಟು…)

ಹರಿಶ್ಚಂದ್ರ:ಇನ್ನು ಹೋಹೆನೈ ತಂದೆ… . ಸಂತಸವೆ ನಿಮಗೆ.

(ಎನಲ್ ಅಡ್ಡಮೋರೆಯೊಳ್ ಉದಾಸೀನ ಮಸಕದಿಮ್…)

ವಿಶ್ವಾಮಿತ್ರ: ಹೋಗು.

(ಎಂದು ಹೋಗಬಿಟ್ಟು, ಅಳುಪಿ ಮತ್ತೆ… ಆ ಕೈಯಲೇ ಕರೆದನು.)

ವಿಶ್ವಾಮಿತ್ರ: ಮನದೊಳ್ ಇರ್ದುದನ್ ಒಂದನ್ ಆಡಬೇಕು. ಆಡಿದಡೆ ಮುನಿಯಲೇ…

ಹರಿಶ್ಚಂದ್ರ: ಎಲೆ ತಂದೆ, ಮುನ್ನ ಏನನ್ ಆಡಿದಡೆ ನಾ ಮುನಿದೆನ್ ಪೇಳ್.

ವಿಶ್ವಾಮಿತ್ರ: ನೀನು ಬಹು ಸುವರ್ಣಯಾಗವ ಮಾಡಿದಂದು ಎನಗೆ ದಕ್ಷಿಣೆಗೆ ಇತ್ತ ಧನವನ್ ಈವುದು. ದೇಶವನು ಬಿಟ್ಟು ಹೋಹಾತನ್… ಅನ್ಯಸಾಲವನು ನೆಟ್ಟನೆ ಹೊತ್ತು ಹೋಗಲಾಗದು… ನಿಲಿಸಲಾಗದು… ಇತ್ತು ಬಳಿಕ ಅಡಿಯನಿಡು.

ಹರಿಶ್ಚಂದ್ರ: ಅನುಗೆಟ್ಟ ಮರುಳೆ, ನೀನ್ ಎಂದ ಅಲ್ಪದಕ್ಷಿಣೆಯ ಧನವು ಎನಿತು. ನಿನ್ನ ಮನದಾರ್ತವ ಎನಿತರೊಳ್ ಅಳಿವುದು. ಅನಿತರ್ಥ ಮೊದಲ ಭಂಡಾರದೊಳಗೆ ಅದೆ. ನೀನ್ ಇನ್ನು ಬಳಲಿಸದಿರ್.

(ಎನಲು ಕೊನೆ ಬೆರಳನು ಅಲುಗಿ ತಲೆದೂಗಿ…)

ವಿಶ್ವಾಮಿತ್ರ:ಲೇಸೈ ನಿನ್ನ ಮನಕೆ ಸರಿಯಿಲ್ಲ. ಮಝು… ಭಾಪು… ಭಾಪರರೆ… ನೆಟ್ಟನೆ ಕೊಟ್ಟು, ಕಾಳ್ಗೆಡೆದು ನುಡಿವ ನುಡಿ ಹಸನಾಯಿತು.

(ಎಂದು ಘೂರ್ಮಿಸಿ ನಕ್ಕನು.)

ಹರಿಶ್ಚಂದ್ರ: ಕಡೆಗಣಿಸಿ ನಗಲೇಕೆ ತಂದೆ.

ವಿಶ್ವಾಮಿತ್ರ: ಧಾರೆಯಮ್ ಕೊಡುವಾಗ ದಕ್ಷಿಣೆಯ ಧನವು ಅದರೊಳ್ ಅದೆಯೆಂದು ನುಡಿದುದುಂಟೇ.

ಹರಿಶ್ಚಂದ್ರ: ಹೇರನ್ ಒಪ್ಪಿಸಿದವಂಗೆ ಎಲ್ಲಿಯದು ಸುಂಕ.

ವಿಶ್ವಾಮಿತ್ರ: ಒಡಲ್ ಅಳಿದಡಮ್ ಸಾಲ ಅಳಿಯದು ಎನಲ್… ಈ ಧರಣಿ ಒಡೆತನಮ್ ಹೋದಡೆ ಏನ್ ಸಾಲ ಹೋಹುದೆ. ಮುನ್ನಿನ ಒಡವೆಯನ್ ಕೊಡು. ಕೊಡದಡೆ ಎಲ್ಲವಮ್ ಮರಳಿ ಕೈಕೊಳು. ಬರಿದೆ ಬಿಡೆನ್.

(ಎಂದನು. ಜತ್ತಕನ ನುಡಿಗೆ ತೆಕ್ಕಿದನೆ… ತೆರಳಿದನೆ… ತಲೆಗುತ್ತಿದನೆ… ಸಡಿಫಡಿಲ್ ಇಲ್ಲ.)

ಹರಿಶ್ಚಂದ್ರ: ಅವಧಿಯಮ್ ಕೊಟ್ಟು ಚಿತ್ತವಿತ್ತು ಅನುಸರಿಸಿ ಕೊಂಬಿರಾದೆಡೆ ತಂದು ನಿರ್ಣಯಿಸಿ ಕೊಡುವೆನ್.

ವಿಶ್ವಾಮಿತ್ರ: ಹತ್ತು ದಿನ.

ಹರಿಶ್ಚಂದ್ರ: ಆರೆನ್.

ವಿಶ್ವಾಮಿತ್ರ: ಇಪ್ಪತ್ತು ದಿನ.

ಹರಿಶ್ಚಂದ್ರ: ದೊರಕದು.

ವಿಶ್ವಾಮಿತ್ರ: ಮೂವತ್ತು ದಿನ.

ಹರಿಶ್ಚಂದ್ರ: ಆಗದು.

ವಿಶ್ವಾಮಿತ್ರ: ನಾಲ್ವತ್ತೆಂಟು ದಿನ.

ಹರಿಶ್ಚಂದ್ರ: ಅಲ್ಲವೆಂದೆನ್ನೆ. ನೀನ್ ಇತ್ತ ಅವಧಿ ಕಿರಿದು. ಈವರಿಲ್ಲ. ಧನವಮ್ ಗಳಿಸಿ ತಂದು ಈವೆನ್ ಎನಲು ದಿನವಿಲ್ಲ. ಒಬ್ಬ ತೆರಕಾರನನ್ ನಿರ್ಣಯಿಸಿ ಕೊಟ್ಟಡೆ ಆತಂಗೆ

 ಕೊಡುವೆನ್.

ವಿಶ್ವಾಮಿತ್ರ: ಬಲ್ಲಿದನನ್ ಒಬ್ಬನನ್ ಕೊಡುವೆನ್. ಆತಂಗೆ ಧನವೆಲ್ಲವಮ್ ನಿರ್ಣಯಿಸಿ ಕೊಡುವಂತಿರೆ ಎನಗೆ ಇಲ್ಲಿ ಹೊಲ್ಲಹಮ್ ಸೂರುಳು ಸೂರುಳಿಡು. ಬೇಗ ಕಾಡದೆ

 ಕಳುಹಿದಪೆನ್.

ಹರಿಶ್ಚಂದ್ರ: ಅವಧಿಗೆ ನಿಮ್ಮ ಧನವಮ್ ಈಯದಡೆ ಶಿವಪೂಜೆಯಮ್ ಮಾಡದವನು; ಗುರ್ವಾಜ್ಞೆ ಕೆಟ್ಟವನು; ಪರಸತಿಗೆ ಅಳುಪುವವನು; ಪರರ ಅಸುಗೆ ಮುಳಿವವನು; ತಾಯನ್

 ಬಗೆಯದವನು; ತಂದೆಯನ್ ಒಲ್ಲದವನು; ಪರನಿಂದೆಗೆಯ್ವವವನು; ಇಟ್ಟಿಗೆಯ ಸುಟ್ಟವನು; ಬೇಗೆಯನ್ ಇಕ್ಕುವವನ್; ಅಧಮರನು ಬೆರಸುವವನು; ಕುಲಧರ್ಮ ಕೆಟ್ಟವನ್

 ಇಳಿವ ನರಕದೊಳಗೆ ಇಳಿವೆನ್.

ವಿಶ್ವಾಮಿತ್ರ: ಮೇಲಿನ್ನು ನಾನು ಆಳ್ವ ದೇಶದೊಳು ಬೇಡದಂತೆ, ಓಲೈಸದಂತೆ, ಕೃಷಿ ವ್ಯವಸಾಯಮ್ ಮಾಡದೆ, ಆಲಯಮ್ ಕಟ್ಟಿರದೆ, ಅವಧಿಯೊಳು ಹೊನ್ನ ನಿರ್ಣಯಿಸುವುದು ಬೇಗ.

(ಎನಲು ಭೂಲೋಲನ್ ಅದಕೆ ಒಡಂಬಡಲು…)

ವಿಶ್ವಾಮಿತ್ರ: ಸಪ್ತದ್ವೀಪಜಾಲವೆಲ್ಲ ಎನ್ನವು ಅವರಿಂದ ಹೊರಗೆ ಆವುದು.

(ಎಂದಾಲಿಸಲು)

ಹರಿಶ್ಚಂದ್ರ: ಮುನಿ ಕೇಳ್, ಹೇಮಕೂಟಮ್ ವಾರಣಾಸಿಗಳು ಹೊರಗು. ಪ್ರಳಯಕ್ಕೆ ಹೊರಗು; ಕಲಿಕಾಲ ಹೊಗದು; ಅಂತಕನ ಸುಳಿವು ಅವರೊಳಿಲ್ಲ; ಕಾಮನ ಡಾವರಮ್ ಕೊಳ್ಳದು.

 ಉಳಿದ ಮಾಯೆಯ ಮಾತು ಬೇಡ. ಪಾಪಂಗಳ ಆಟಮ್ ನಾಟವು; ಅನ್ಯಾಯದ ಕಳೆಗೆ ತೆಕ್ಕವು; ಮಾರಿ ಮೃತ್ಯುಗಿತ್ಯುಗಳ ಬಲೆಗೆ ಒಳಗಾಗದು; ಅಧಿಕ ಪುಣ್ಯದ ಬೀಡು;

 ಮಂಗಳದ ನಿಳಯ; ಮುಕ್ತಿಯ ಮೂಲ ಎನಿಸುವವು ಕಾಶಿ ಹಂಪೆಗಳು. ಮುನಿ ಕೇಳು, ಅವಕೆ ವಿಶ್ವೇಶ್ವರ… ವಿರೂಪಾಕ್ಷರೇ ಒಡೆಯರ್; ಅವನಿಯೊಳಗೆ ಅಲ್ಲಿ ನಿನ್ನ ಆಜ್ಞೆಗಳು

 ಸಲ್ಲ; ಬರಿಯ ವಿಚಾರ ಹೊಲ್ಲ; ಹಂಪೆಗೆ ಹೋಹದೆ ಎಡೆಯಿಲ್ಲ; ಕಾಶೀಪುರವನೆ ಸಾರ್ದು ನಿವಗೆ ಕೊಡುವ ಅರ್ಥಮನ್ ಕೊಡುವೆನ್. ಇನ್ನು ಅಳಲಿಸದೆ ಶಿವಮೂರ್ತಿ

 ಮುನಿನಾಥ ಕರುಣಿಸು.

 ವಿಶ್ವಾಮಿತ್ರ: ಹೋಗು ವಸ್ತುವ ಬೇಗ ಮಾಡು.

(ಎಂದಡೆ ಆ ಧೈರ್ಯನಿಧಿ ಭೂಪಾಲನು ವಿಶ್ವಾಮಿತ್ರ ಮುನಿಯ ಅಡಿಗೆ ಎರಗಿ ನಡೆದನು.)

ತಿರುಳು: ರಾಜ್ಯ ಸರ್ವಸ್ವ ದಾನ

ರಾಜ್ಯ ಸರ್ವಸ್ವ ದಾನ=ರಾಜ್ಯದ ಸಕಲ ಸಂಪತ್ತನ್ನು ದಾನಮಾಡುವುದು;

ವಿಶ್ವಾಮಿತ್ರನ ಕೋಪೋದ್ರೇಕದ ಚಹರೆಯನ್ನು ಮುನಿಯಾದವನ ಉಡುಗೆ ತೊಡುಗೆಗಳೊಡನೆ ಸಮೀಕರಿಸಿ ಅತಿಶಯವಾದ ನುಡಿಗಳ ಮೂಲಕ ಚಿತ್ರಿಸಲಾಗಿದೆ.

ವಡಬಾಗ್ನಿ=ಕಡಲಿನಲ್ಲಿ ಕಾಣಿಸಿಕೊಳ್ಳುವ ಬೆಂಕಿ;

ವಡಬಾಗ್ನಿ ಜಡೆವೊತ್ತುದೋ=ಕಡಲಿನ ಬೆಂಕಿಯೇ ತಲೆಯಲ್ಲಿ ಎತ್ತಿಕಟ್ಟಿರುವ ಜಡೆಯ ರೂಪವನ್ನು ತಳೆಯಿತೋ;

ಸಿಡಿಲು ಹೊಸ ಭಸಿತವ ಇಡಕಲಿತುದೋ=ಎಲ್ಲವನ್ನೂ ಸುಟ್ಟು ಬೂದಿ ಮಾಡಬಲ್ಲ ಸಿಡಿಲು ಹಣೆಯಲ್ಲಿ ಹೊಸ ವಿಬೂತಿಯನ್ನು ಇಡಲು ಕಲಿಯಿತೋ;

ಕೃಷ್ಣಾಜಿನ=ಕರಿಯ ಜಿಂಕೆಯ ತೊಗಲು;

ಕಾಡ ಕಿಚ್ಚು ಕೃಷ್ಣಾಜಿನವನ್ ಉಡಕಲಿತುದೋ=ಕಾಡೆಲ್ಲವನ್ನೂ ಸುಡುವ ಬೆಂಕಿಯು ಜಿಂಕೆಯ ತೊಗಲನ್ನು ಉಡಲು ಕಲಿತುದೋ;

ವಹ್ನಿ=ಬೆಂಕಿ;

ಪ್ರಳಯ ವಹ್ನಿ ತಪವಿರ್ದುದೋ=ಪ್ರಳಯ ಕಾಲದ ಬೆಂಕಿಯು ತಪಸ್ಸಿಗೆ ಕುಳಿತಿದೆಯೋ;

ಭಾಳಲೋಚನ=ಹಣೆಯಲ್ಲಿ ಮೂರನೆಯ ಕಣ್ಣುಳ್ಳ ಶಿವ; ಕಡುಗು=ಹೆಚ್ಚಾಗು;

ಭಾಳಲೋಚನನ ಕೋಪ ಕಡುಗಿ ಮುನಿಯಾಯ್ತೊ=ಮುಕ್ಕಣ್ಣನಾದ ಶಿವನ ಕೋಪವೇ ಹೆಚ್ಚಾಗಿ ವಿಶ್ವಾಮಿತ್ರ ಮುನಿಯ ರೂಪವನ್ನು ತಳೆಯಿತೊ;

ಹೇಳ್ ಎನೆ=ಹೇಳು ಎನ್ನುವಂತೆ; ಕಣ್ಣ ಕಡೆ=ಕಣ್ಣುಗಳ ಅಂಚು; ತೋರ+ಕಿಡಿ=ದಪ್ಪನೆಯ ಕೆಂಡ;

ಕಣ್ಣ ಕಡೆ ತೋರಗಿಡಿ ಕೆದರೆ=ವಿಶ್ವಾಮಿತ್ರನ ಕಣ್ಣಂಚುಗಳಿಂದ ದೊಡ್ಡ ಕಿಡಿ ಹಾರುತ್ತಿರಲು;

ಮೀಸೆಗೂದಲು ಹೊತ್ತಿ ಹೊಗೆಯ ಬಿರುನುಡಿಗಳ ಉರಿಯುಗುಳೆ=ಮೀಸೆಯ ಕೂದಲು ಹೊತ್ತಿಕೊಂಡು ಹೊಗೆಯು ಹೊರಹೊಮ್ಮುತ್ತಿದೆ ಎಂಬ ನುಡಿಗಳು ಕೋಪದ ತೀವ್ರತೆಯನ್ನು ಸೂಚಿಸುವ ರೂಪಕದ ನುಡಿಗಳಾಗಿವೆ. ವಿಶ್ವಾಮಿತ್ರನು ಒರಟೊರಟಾಗಿ ಆಕ್ರೋಶದಿಂದ ಮಾತನಾಡಲು ತೊಡಗಲು;

ವಡಬಾಗ್ನಿ—ಸಿಡಿಲು—ಕಾಡ ಕಿಚ್ಚು—ಪ್ರಳಯ ವಹ್ನಿ—ಭಾಳಲೋಚನ-ಕಣ್ಣ ಕಡೆ ತೋರಗಿಡಿ-ಮೀಸೆಯ ಕೂದಲು ಹೊತ್ತಿಕೊಂಡು ಉರಿಯುವುದು=ಇವೆಲ್ಲವೂ ವಿಶ್ವಾಮಿತ್ರನ ಕೋಪೋದ್ರೇಕದ ಸ್ವರೂಪಕಕ್ಕೆ ರೂಪಕಗಳಾಗಿ ಮೂಡಿಬಂದಿವೆ;

ವಿಶ್ವಾಮಿತ್ರನ್ ಅವನೀಶನ ಎಡೆಗೆ ಉರವಣಿಸಿ ಬಂದನ್=ವಿಶ್ವಾಮಿತ್ರನು ರಾಜ ಹರಿಶ್ಚಂದ್ರನು ಇದ್ದ ಕಡೆಗೆ ರಬಸದಿಂದ ದಾವಿಸಿ ಬಂದನು;

ಅನಿಲ=ಗಾಳಿ/ವಾಯುದೇವ;

ಅನಿಲನ್ ಬಿರುಗಾಳಿಯನ್ ಬೀಸಲಮ್ಮನ್=ನನ್ನ ಆಶ್ರಮದ ಪ್ರದೇಶದಲ್ಲಿ ವಾಯುದೇವನು ಬಿರುಗಾಳಿಯನ್ನು ಬೀಸಲಾರ;

ಸುರಪ=ದೇವೇಂದ್ರ/ವರುಣ ದೇವ; ಅರೆವಳೆ=ಬಿರುಸಾದ ಮಳೆ/ಚಚ್ಚುಮಳೆ;

ಸುರಪನ್ ಅರೆವಳೆಗಳನ್ ಕರೆಯಲಮ್ಮನ್=ನನ್ನ ಆಶ್ರಮದ ಪ್ರದೇಶದಲ್ಲಿ ದೇವೇಂದ್ರನು ದೊಡ್ಡ ಮಳೆಯನ್ನು ಸುರಿಸಲಾರ;

ತರಣಿ=ಸೂರ್‍ಯ;

ತರಣಿ ಅತಿ ಕಡುವಿಸಿಲ ಕರೆಯಲಮ್ಮನ್=ನನ್ನ ಆಶ್ರಮದ ಪ್ರದೇಶದಲ್ಲಿ ಸೂರ್‍ಯನು ಅತಿಯಾಗಿ ಸುಡು ಬಿಸಲಿನ ಪ್ರಕರ ಕಿರಣಗಳನ್ನು ಬೀರಲಾರ;

ದಾವಾಗ್ನಿ ಮೇರೆಯನ್ ಮೀರಲಮ್ಮನ್=ನನ್ನ ಆಶ್ರಮದ ಪ್ರದೇಶದೊಳಕ್ಕೆ ಕಾಳ್ಗಿಚ್ಚು ತನ್ನ ಮಿತಿಯನ್ನು ಮೀರಿ ಹಬ್ಬುವುದಿಲ್ಲ; ಜವ=ಯಮ ;

ಗಿವ=ಗಿವ ಎಂಬ ಪದಕ್ಕೆ ಯಾವ ತಿರುಳು ಇಲ್ಲ; ದೂತ=ಸೇವಕ; ಗೀತರು=ಗೀತರು ಎಂಬ ಪದಕ್ಕೆ ಯಾವ ತಿರುಳು ಇಲ್ಲ; ಜನರು ಮಾತಿನ ಸನ್ನಿವೇಶಗಳಲ್ಲಿ ವ್ಯಕ್ತಿಗಳು ಇಲ್ಲವೇ ವಸ್ತುಗಳ ಬಗ್ಗೆ ತಾವು ಹೊಂದಿರಬಹುದಾದ ತಿರಸ್ಕಾರದ ಬಾವನೆಯನ್ನು ಸೂಚಿಸುವಾಗ ಈ ರೀತಿ “ಜವಗಿವ—ದೂತರುಗೀತರು” ಎಂಬ ಪದರೂಪವನ್ನು ಬಳಸುತ್ತಾರೆ;

ಲೋಕವ ಮುರಿವ ಜವಗಿವನ ದೂತರು ಗೀತರ್ ಎಂಬರ್ ಎದ್ದು ಎರಗಲಮ್ಮರು=ಲೋಕದಲ್ಲಿ ಎಲ್ಲ ಜೀವಿಗಳಿಗೂ ಸಾವಿನ ಕುಣಿಕೆಯನ್ನು ಹಾಕಿ ಎಳೆದೊಯ್ಯುವ ಯಮನ ದೂತರು ನನ್ನ ಆಶ್ರಮದೊಳಕ್ಕೆ ಬಂದು ಯಾವ ಜೀವಗಳ ಮೇಲೂ ಆಕ್ರಮಣ ಮಾಡಲಾರರು;

ಧೀವಶ=ಉದ್ದಟತನ/ಕೆಚ್ಚು/ದಿಟ್ಟತನ;

ನಿನ್ನ ಧೀವಶ=ನಿನ್ನಲ್ಲಿ ಉದ್ದಟತನ ಹೆಚ್ಚಾಗಿದೆ;

ಕೊರಚಾಡು=ಪೀಡಿಸು/ಹಿಂಸಿಸು;

ತಪೋವನದೊಳ್ ಇಂದು ಎಮ್ಮ ನೀನ್ ಕೊರಚಾಡಲೆಂದು ಅರಿದರಿದು ಬೀಡಮ್ ಬಿಟ್ಟೆ=ಈ ತಪೋವನವು ನನ್ನದೆಂದು ತಿಳಿದಿದ್ದರೂ ಇಂದು ನಮ್ಮನ್ನು ಪೀಡಿಸಲೆಂಬ ಉದ್ದೇಶದಿಂದಲೇ ನನ್ನ ಆಶ್ರಮದ ಪ್ರದೇಶಕ್ಕೆ ಬಂದು ಬೀಡನ್ನು ಬಿಟ್ಟಿದ್ದೀಯೆ;

ತಂದೆ, ಎಳಸಿ ಪುಣ್ಯಾರ್ಥದಿಮ್=ತಂದೆಯೇ, ನಿನ್ನ ಕಣ್ತುಂಬ ನೋಡಿ ಪುಣ್ಯವನ್ನು ಪಡೆಯಬೇಕೆಂದು ಬಯಸಿ;

ವಂದನೆ ನಿಮಿತ್ತ=ನಿನಗೆ ನಮಸ್ಕರಿಸಿ ಹೋಗಬೇಕೆಂಬ ಕಾರಣದಿಂದ;

ಗುರುನಿಳಯಕ್ಕೆ ಶಿಷ್ಯನ್ ಎಯ್ತಪ್ಪುದಕೆ ಸಾಹಸದ ಬಲವೇಕೆ=ಗುರುವಿನ ಆಶ್ರಮಕ್ಕೆ ಶಿಶ್ಯನಾದ ನಾನು ಬಂದುದಕ್ಕೆ, ಉದ್ದಟತನದ ರಾಜಬಲವನ್ನು ತೋರಿಸುವುದಕ್ಕಾಗಿ ನಾನು ಬಂದಿದ್ದೇನೆ ಎಂದು ಈ ರೀತಿ ಏಕೆ ಆರೋಪಿಸುತ್ತಿರುವಿರಿ;

ನುಡಿಯೊಳು ನಯಮ್ ಪಡೆದು=ಮಾತಿನಲ್ಲಿ ಒಲವು ನಲಿವಿನ ಹಿತನುಡಿಗಳನ್ನಾಡುತ್ತ;

ಕಾರ್ಯದೊಳು ಗುರುವಿನ ಅಸುಗೆ ಮುಳಿದು=ಕ್ರಿಯೆಯಲ್ಲಿ ಗುರುವಾದ ನನ್ನ ಪ್ರಾಣಕ್ಕೆ ಸಂಚಕಾರವನ್ನು ತರಬೇಕೆಂಬ ದುರುದ್ದೇಶದಿಂದ ಕೂಡಿ;

ಸರ್ವಸ್ವ ಅಪಹರಣವಮ್ ಮಾಳ್ಪ ಕಡುಗಲಿತನವು=ನನ್ನದೆಲ್ಲವನ್ನೂ ವಶಪಡಿಸಿಕೊಳ್ಳಬೇಕೆಂದು ಸೇನಾಬಲದೊಡನೆ ಬಂದು ನನ್ನ ಆಶ್ರಮದ ಪ್ರದೇಶದಲ್ಲಿ ನೀನು ಮಾಡುತ್ತಿರುವ ದಾಳಿಯು;

ಇದಾವ ಪುಣ್ಯವ ಪಡೆವ ಶಿಷ್ಯತನದ ಒಳಗು ಪೇಳು=ಇದಾವ ರೀತಿಯಲ್ಲಿ ಪುಣ್ಯವನ್ನು ಪಡೆಯಲು ಬರುವ ಶಿಶ್ಯತನದ ಒಳ್ಳೆಯ ನಡೆನುಡಿಯಾಗುತ್ತದೆ ಎಂಬುದನ್ನು ಹೇಳು;

ಎನ್ನ ದೆಸೆಯಿಂದ ಕೆಟ್ಟುದೇನ್=ನನ್ನಿಂದ ಏನು ಹಾಳಾಯಿತು… ಯಾರಿಗೆ ಹಾನಿಯುಂಟಾಯಿತು;

ಅರಸುಗಳಿಗೆ ಉಪದೇಶವನ್ ಮಾಡಿ ವಸ್ತುವನ್ ನೆರಹಬಲ್ಲವನಲ್ಲ=ಅರಸುಗಳಿಗೆ ತಿಳುವಳಿಕೆಯನ್ನು ಹೇಳಿ, ನಡೆದ ಸಂಗತಿಯನ್ನು ಅವರಿಗೆ ಮನವರಿಕೆ ಮಾಡುವ ಶಕ್ತಿ ನನ್ನಲ್ಲಿಲ್ಲ;

ನಿಜವೈರವಮ್ ಬಿಟ್ಟು=ನಿಸರ್‍ಗಸಹಜವಾದ ಹಗೆತನವನ್ನು ಬಿಟ್ಟು;

ಹರುಷದಿಂದಿರ್ಪ ಮೃಗಸಂಕುಳಮ್=ಆನಂದಿಂದ ಬಾಳುತ್ತಿರುವ ಪ್ರಾಣಿಗಳ ಸಮೂಹ;

ಸರ್ವಋತುಗಳೊಳು ಫಲವಿಡಿದು ಒರಗುವ ತರುಕುಲಮ್=ವಸಂತ-ಗ್ರೀಶ್ಮ-ವರ್‍ಶ-ಶರತ್-ಹೇಮಂತ-ಶಿಶಿರ ಎಂಬ ಆರು ರುತುಮಾನಗಳಲ್ಲಿಯೂ ಹೂ ಕಾಯಿ ಹಣ್ಣುಗಳಿಂದ ತುಂಬಿ ಬಾಗಿ ಬಳುಕುವ ಮರಗಿಡಪೊದೆಗಳಿಂದ ಕೂಡಿರುವ ಸಸ್ಯಸಮೂಹ;

ಬತ್ತದೆ ಒಂದೇ ಪರಿಯಲಿಹ ಸರೋವರವೆಂಬ ಧನ=ಬಿರುಬೇಸಗೆಯಲ್ಲಿಯೂ ಬತ್ತದೆ, ವರುಶದ ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿ ತುಂಬಿ ತುಳುಕುತ್ತಿರುವ ಜಲ ಸಂಪತ್ತಿನಿಂದ ಕೂಡಿದ ಸರೋವರ;

ಇದೆಲ್ಲವನ್ ಇರಿದು ಮುರಿದು ಕುಡಿದು ಅರೆಮಾಳ್ಪ ಬಲುಹು=ಪ್ರಾಣಿಪಕ್ಶಿಗಳನ್ನು ಕೊಂದು, ಮರಗಿಡಬಳ್ಳಿಗಳನ್ನು ಕತ್ತರಿಸಿ, ಕೆರೆಕೊಳಸರೋವರದ ನೀರೆಲ್ಲವನ್ನೂ ಬಗ್ಗಡಗೊಳಿಸಿ ಕಾಡಿನ ಸಂಪತ್ತಿನಲ್ಲಿ ಅರ್‍ದ ಬಾಗವನ್ನು ನಾಶಮಾಡಿದ ನಿನ್ನ ಶಕ್ತಿ;

ಸರ್ವಸ್ವ ಅಪಹರಣವಲ್ಲದೆ ಬಳಿಕ್ಕ ಏನು=ಮುನಿಗಳಿಗೆ ನೆಲೆಯಾದ ಕಾಡು ಮತ್ತು ಆಶ್ರಮದ ಲೂಟಿಯಲ್ಲದೆ ಮತ್ತಿನ್ನೇನು;

ಬರುಮುನಿಸನ್ ಇಟ್ಟುಕೊಂಡು ಅರುಹುವಂತಾಗಿ=ವಿನಾಕಾರಣ ನನ್ನ ಬಗ್ಗೆ ಕೋಪಿಸಿಕೊಂಡು ಈ ರೀತಿ ಆಪಾದನೆಯನ್ನು ಮಾಡುತ್ತಿದ್ದೀರಿ;

ಎಲೆ, ಕಿರುಜಡೆಯ ನೀತಿವಿದ ನಾನ್ ಇರಿದ ಮೃಗ… ಮುರಿದ ಮರ… ಕುಡಿದ ಕೊಳನ್ ಆವುದು… ತೋರಿಸು ಎನೆ=ನೀತಿವಂತರಾದ ವಿಶ್ವಾಮಿತ್ರ ಮುನಿಯೇ, ನಾನು ಕೊಂದ ಪ್ರಾಣಿ… ಕತ್ತರಿಸಿದ ಮರ… ಬಗ್ಗಡಗೊಳಿಸಿದ ಕೊಳ ಯಾವುದು ತೋರಿಸಿ ಎಂದು ರಾಜ ಹರಿಶ್ಚಂದ್ರನು ಮರುಪ್ರಶ್ನಿಸಲು;

ಘುಡುಘುಡುಸುತ ಎದ್ದು=ವಿಶ್ವಾಮಿತ್ರ ಮುನಿಯು ದೊಡ್ಡ ದನಿಯಲ್ಲಿ ಅಬ್ಬರಿಸುತ್ತ ಮೇಲೆದ್ದು;

ಹಳಗಾಲದಂದು ಅರತ ಕೊಳನಮ್=ಈ ಹಿಂದೆ ಎಂದೋ ಒಂದು ಕಾಲದಲ್ಲಿ ಬತ್ತಿಹೋಗಿದ್ದ ಕೊಳವನ್ನು;

ಕೊಳೆತು ಮುರಿದ ಮರನಮ್=ವಯಸ್ಸಾಗಿ ಟೊಳ್ಳುಹಿಡಿದು ಕೊಳೆತು ಮುರಿದುಹೋಗಿ ಬಿದ್ದಿರುವ ಮರವನ್ನು;

ನೃಪನನ್ ಉರೆ ತಂದ ಹಲವು ಗಾಯದ ಹಂದಿಯನ್ ತೋರಿ ಜರೆದು=ರಾಜ ಹರಿಶ್ಚಂದ್ರನನ್ನು ನೇರವಾಗಿ ತನ್ನ ಆಶ್ರಮದತ್ತ ಬರುವಂತೆ ಮಾಡಿದ ಗಾಯಗೊಂಡಿದ್ದ ಹಂದಿಯನ್ನು ತೋರಿ, ಇದಕ್ಕೆಲ್ಲಾ ನೀನೇ ಕಾರಣನೆಂದು ಹರಿಶ್ಚಂದ್ರನನ್ನು ನಿಂದಿಸಿ;

ಪಾಪಿ, ನೀನ್ ಇನ್ನಾವ ನೆವವನ್ ಒಡ್ಡುವೆ ಎನುತ ಮತ್ತೆ ಇಂತು ಎಂದನು=ಪಾಪಿಯಾದ ಹರಿಶ್ಚಂದ್ರನೇ, ನೀನು ಈಗ ಮಾಡಿರುವ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಇನ್ನಾವ ನೆಪವನ್ನು ಹೇಳುತ್ತೀಯೆ ಎಂದು ಜರೆದು, ಮತ್ತೆ ಈ ರೀತಿ ವಿಶ್ವಾಮಿತ್ರನು ಹೇಳತೊಡಗಿದನು;

ಸಕ್ರಂದನ=ದೇವೇಂದ್ರ; ಮುನಿಪ=ದೂರ್‍ವಾಸ ಮುನಿ; ನೀರೊಳಗೆ ನೆರಹು=ಇದೊಂದು ನುಡಿಗಟ್ಟು.ನೀರಿನಲ್ಲಿ ಕೊನೆಗೊಳಿಸು/ಮುಗಿಸು. ಅಂದರೆ ಸರ್‍ವನಾಶ ಮಾಡು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ;

ಹಿಂದೆ ಸಂಪದದೊಳ್ ಉರೆ ಗರ್ವದಿಮ್ ಮೆರೆದ ಸಕ್ರಂದನನ ಸಿರಿಯ ನೀರೊಳಗೆ ನೆರಹಿದ ಮುನಿಪನ ಅಂದವನ್ ಮಾಡುವೆನು=ಈ ಹಿಂದೆ ದೇವೇಂದ್ರನು ಸಿರಿಸಂಪತ್ತಿನ ಸೊಕ್ಕಿನಿಂದ ಮೆರೆಯುತ್ತಿದ್ದಾಗ, ಅವನಲ್ಲಿಗೆ ಬಂದ ದೂರ್‍ವಾಸ ಮುನಿಯು ಕೊಟ್ಟ ಶಿವನ ಪ್ರಸಾದವನ್ನು ದೇವೇಂದ್ರನು ತಿರಸ್ಕರಿಸಲು, ಕೋಪಗೊಂಡ ಮುನಿಯು ದೇವೇಂದ್ರನ ಸಿರಿಸಂಪತ್ತನ್ನೆಲ್ಲಾ ಸರ್‍ವನಾಶ ಮಾಡಿದಂತೆ ಈಗ ನಾನು ನಿನ್ನ ಸಿರಿಸಂಪತ್ತನ್ನೆಲ್ಲಾ ನಾಶ ಮಾಡಿ, ನಿನ್ನ ಸೊಕ್ಕನ್ನು ಅಡಗಿಸುತ್ತೇನೆ; ಹಗ್ಗಿ=ಬೆಂಕಿ;

ಹರನ ಹಣೆಗಣ್ಣ ಹಗ್ಗಿಯನು ಹಗೆಗೊಂಬ ಅಂದದಿನ್ ಇಂದು ಎನ್ನ ಹಗೆಗೊಂಡೆ=ಶಿವನನ್ನು ಕೆರಳಿಸಿ, ಅವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾಗುವ ರೀತಿಯಲ್ಲಿ ಇಂದು ನೀನು ನನಗೆ ಹಗೆಯಾದೆ; ಕೂಗಿಡಿಸು=ಕೂಗಿಕೊಳ್ಳುವಂತೆ ಮಾಡು/ಗೋಳಾಡಿಸು;

ಬಿಟ್ಟ ಬೀಡೆಲ್ಲಮನ್ ಕೊಂದು ಕೂಗಿಡಿಸಿ ನೆರೆ ಸುಟ್ಟು ಬೊಟ್ಟಿಡುವೆನ್=ಕಾಡಿನ ಈ ನನ್ನ ಆಶ್ರಮದಲ್ಲಿ ನೀನು ಬಿಟ್ಟಿರುವ ಸೇನಾಬಲವೆಲ್ಲವನ್ನೂ ಮತ್ತು ಪರಿವಾರವೆಲ್ಲವನ್ನೂ ಕೊಂದು ಕೂಗಿಡಿಸಿ, ಎಲ್ಲವನ್ನೂ ಸುಟ್ಟು ಬೂದಿಮಾಡಿ ನನ್ನ ಹಣೆಗೆ ಬೊಟ್ಟನ್ನು ಇಟ್ಟುಕೊಳ್ಳುವೆನು;

ಆರ್ ಎಂದು ಇರ್ದೆ=ನನ್ನನ್ನು ಯಾರೆಂದು ತಿಳಿದಿರುವೆ. ಅಂದರೆ ನನ್ನ ಶಕ್ತಿ, ಪರಾಕ್ರಮ ಮತ್ತು ಮಹಿಮೆಯು ಏನೆಂಬುದನ್ನು ನೀನು ತಿಳಿದಿಲ್ಲ; ಅಳಲು=ಸಂಕಟ/ಶೋಕ; ತಿಣ್ಣ=ಹೊರೆ/ಬಾರ;

ತನ್ನ ಸುತರ ಅಳಲ ತಿಣ್ಣವನ್ ನಿನ್ನ ಗುರು ಹೇಳನೇ=ತನ್ನ ಮಕ್ಕಳು ನನ್ನಿಂದ ಅನುಬವಿಸಿದ ಸಂಕಟದ ತೀವ್ರತೆಯನ್ನು ನಿನ್ನ ಗುರುವಾದ ವಸಿಷ್ಟನು ನಿನಗೆ ಹೇಳಲಿಲ್ಲವೇ;

ಒಸೆದು ಹುಟ್ಟಿಸುವ, ಪಾಲಿಸುವ, ಮರ್ದಿಸುವ ಸತ್ವಸಮರ್ಥನ್ ಎನಿಪ ನೀನೇ… ತಪ್ಪ ಹೊರಿಸಿ ದಟ್ಟಿಸುವಡೆ=ಜಗತ್ತಿನಲ್ಲಿ ಎಲ್ಲರನ್ನು ಪ್ರೀತಿಯಿಂದ ಹುಟ್ಟಿಸುವ, ಸಾಕಿ ಸಲಹುವ, ತಪ್ಪನ್ನು ಮಾಡಿದಾಗ ತಿದ್ದಿ ಸರಿಪಡಿಸುವ ಶಕ್ತಿಯುಳ್ಳವನು ಎಂದು ಹೆಸರಾಂತ ಮುನಿಯಾದ ನೀನೇ… ಈಗ ನನ್ನ ಮೇಲೆ ವಿನಾಕಾರಣ ತಪ್ಪನ್ನು ಹೊರಿಸಿ ಮೂದಲಿಸುತ್ತಿರುವಾಗ;

ಇನ್ನು ಉತ್ತರಿಸಿ ಶುದ್ಧವಹುದು ಅರಿದಯ್ಯ=ನಿನಗೆ ಉತ್ತರವನ್ನು ನೀಡಿ, ನಿನ್ನನ್ನು ಶಾಂತಗೊಳಿಸಲು ನನ್ನಿಂದ ಆಗುವುದಿಲ್ಲ;

ತಂದೆ, ಆನ್ ನಿಮ್ಮ ಕರುಣದ ತೊಟ್ಟಿಲ ಹಸುಳೆ=ತಂದೆ, ನಾನು ನಿಮ್ಮ ಕರುಣೆಯ ತೊಟ್ಟಿಲ ಮಗು;

ಆನ್ ಸರ್ವ ಅಪರಾಧಿ=ನಾನು ಎಲ್ಲ ರೀತಿಯಿಂದಲೂ ತಪ್ಪನ್ನು ಮಾಡಿದ್ದೇನೆ; ಪದ=ಪಾದ; ಬಿಸರುಹ=ಕಮಲ/ತಾವರೆ;

ಕರುಣಿಸು… ದಯಮ್ ಕೆಡದಿರ್… ಉದ್ರೇಕಿಸದಿರ್ ಎಂದು ಪದ ಬಿಸರುಹದ ಮೇಲೆ ನಿಜಮಣಿ ಮಕುಟ ಮಂಡಿತ ಶಿರೋಂಬುಜವನು ಕೆಡಹಿದನು=ಕರುಣೆಯನ್ನು ನೀಡು… ಕ್ರೂರನಾಗಬೇಡ… ಕೆರಳಬೇಡ ಎಂದು ಮೊರೆಯಿಡುತ್ತ, ವಿಶ್ವಾಮಿತ್ರ ಮುನಿಯ ಪಾದಕಮಲದ ಮೇಲೆ ರತ್ನಗಳಿಂದ ಕಂಗೊಳಿಸುತ್ತಿದ್ದ ಕಿರೀಟದಾರಿಯಾದ ರಾಜ ಹರಿಶ್ಚಂದ್ರನು ತನ್ನ ತಲೆಯನ್ನು ಇಟ್ಟನು;

ನೋಡಿ ವಂದಿಸಿ ಹೋಹ ಶಿಷ್ಯಂಗೆ ನೀಮ್ ಕೃಪೆಯ ಮಾಡುವುದು=ನಿಮ್ಮನ್ನು ಕಂಡು, ನಮಿಸಿ ಹೋಗಬೇಕೆಂದು ಬಂದಿರುವ ಶಿಶ್ಯನಿಗೆ ನೀವು ಒಳಿತಾಗಲೆಂದು ಅನುಗ್ರಹವನ್ನು ಮಾಡುವುದು;

ಹದುಳದಿಮ್ ಬಲವನೆಲ್ಲವ ಹೊಳ್ಳು ಮಾಡಬಗೆವರೆ ಹೇಳ್=ಹುಮ್ಮಸ್ಸಿನಿಂದ ನನ್ನ ಶಕ್ತಿಯನ್ನೆಲ್ಲ ಇಲ್ಲದಂತೆ ಮಾಡಲು ನೀವು ಮನಸ್ಸು ಮಾಡಿರುವುದು ಸರಿಯೇ… ನೀವೇ ಹೇಳಿ;

ಪ್ರಳಯ ಫಣಿಯ ಅಣಲ ಹೊಳಲೊಳಗೆ ಕೈಯ ನೀಡಿ ದಾಡೆಯಮ್ ಮುರಿಯ ಬಗೆವಂತೆ=ಪ್ರಳಯ ಕಾಲದಲ್ಲಿ ಬುಸುಗುಡುತ್ತ ಹೆಡೆ ಎತ್ತಿರುವ ಹಾವಿನ ಬಾಯೊಳಕ್ಕೆ ಕಯ್ ಹಾಕಿ, ಹಾವಿನ ಹಲ್ಲನ್ನು ಮುರಿಯಲು ಸಾಹಸ ಮಾಡುವಂತೆ;

ಎನ್ನ ಬಸುರಿಂದ ಮೂಡಿರ್ದ ಕನ್ನೆಯರ… ಚೆನ್ನೆಯರನ್… ಅಬಲೆಯರ ಗಾಡಿಕಾತಿಯರನ್ ಅರಿದರಿದು… ಇಂತು ಸಾಯ ಸದೆಬಡಿವರೇ ಹೇಳು=ನನ್ನ ಹೊಟ್ಟೆಯಲ್ಲಿ ಹುಟ್ಟಿದ ಕನ್ನೆಯರನ್ನು… ಚೆಲುವೆಯರನ್ನು… ಬಲಹೀನರಾದ ಆ ಸುಂದರಿಯರನ್ನು… ಅವರು ಯಾರೆಂಬುದನ್ನು ಚೆನ್ನಾಗಿ ತಿಳಿದಿದ್ದರೂ… ಈ ರೀತಿ ಸಾಯುವಂತೆ ಸದೆಬಡಿಯುವುದು ನ್ಯಾಯವೇ ನೀನೇ ಹೇಳು;

ಬೇಗದಲಿ ನಿಮ್ಮ ಮನೆಯವರೆಂದು ಮೊರೆಯಿಟ್ಟರಾಗಿ ಕರುಣಿಸಿ ಬಿಟ್ಟೆನ್=ನೀವು ಯಾರೆಂದು ನಾನು ಕೇಳಿದಾಗ ತಡಮಾಡದೆ ನಿಮ್ಮ ಮನೆಯವರೆಂದು ಮೊರೆಯಿಟ್ಟುದ್ದರಿಂದ, ಕರುಣೆಯಿಂದ ಅವರನ್ನು ಓಡಿಹೋಗಲು ಬಿಟ್ಟೆನು;

ಅಲ್ಲದಿರ್ದಡೆ=ಇವರು ನಿಮ್ಮ ಹೆಣ್ಣು ಮಕ್ಕಳಲ್ಲದೆ ಬೇರೆಯ ಹೆಂಗಸರಾಗಿದ್ದರೆ;

ಕೆಡಹಿ ಮೂಗನ್ ಅರಿದು=ಕೆಳಕ್ಕೆ ಬೀಳಿಸಿ, ಮೂಗನ್ನು ಕೊಯ್ದು; ಎಳಹೂಟೆ=ಬೆಳೆಯ ನಡುವೆ ಇರುವ ಹೆಚ್ಚಿನ ಪಯಿರುಗಳನ್ನು ಮತ್ತು ಕಳೆಯನ್ನು ಕೀಳುವುದಕ್ಕಾಗಿ ಬಳಸುವ ಬೇಸಾಯದ ಒಂದು ಉಪಕರಣ. ಇದನ್ನು ‘ಹಲಬೆ’ ಎನ್ನುತ್ತಾರೆ; ಪೆಟ್ಟ/ಹೆಟ್ಟ=ಮಣ್ಣಿನ ಹೆಂಟೆಯನ್ನು ಪುಡಿಮಾಡಲು ಬಳಸುವ ಬೇಸಾಯದ ಉಪಕರಣ; ಹೆಟ್ಟವೆಳಸು=ಹೆಟ್ಟ ಉಪಕರಣವನ್ನು ಹೊಲಗದ್ದೆಯಲ್ಲಿ ಹೂಡಿ ಎಳೆದಾಗ ಮಣ್ಣಿನ ಮುದ್ದೆಗಳೆಲ್ಲವೂ ಪುಡಿಯಾಗಿತ್ತದೆ;

ಎಳಹೂಟೆಯಮ್ ಕಟ್ಟಿ, ಬಟ್ಟಬಯಲೊಳ್ ಹೆಟ್ಟವೆಳಸುವೆ=ಎಳಹೂಟೆಯನ್ನು ಕಟ್ಟಿ ಬಟ್ಟಬಯಲಿನಲ್ಲಿ ಹೆಟ್ಟ ಎಳಸುತ್ತಿದ್ದೆ. ಹಲಬೆಯನ್ನು ಹೊಡೆಯುವುದಕ್ಕೆ ದನಗಳನ್ನು ಕಟ್ಟುವ ಬದಲು, ಈ ಇಬ್ಬರು ತರುಣಿಯರನ್ನು ನೊಗಕ್ಕೆ ಕಟ್ಟಿ, ದೊಡ್ಡದಾಗಿರುವ ಬಯಲಿನಲ್ಲಿ ಮಣ್ಣಿನ ಹೆಂಟೆಗಳನ್ನು ಇವರಿಂದಲೇ ಪುಡಿಮಾಡಿಸುತ್ತಿದ್ದೆ;

ಏಗೆಯ್ದರ್=ಅವರು ಅಂತಹ ತಪ್ಪೇನನ್ನು ಮಾಡಿದರು;

ಅವರೊಳ್ ಅನ್ಯಾಯವೇನ್=ಅವರ ನಡೆನುಡಿಯಲ್ಲಿ ತಪ್ಪೇನು; ನಿನಗೆ ಯಾವ ಅನ್ಯಾಯವನ್ನು ಮಾಡಿದರು. ಅವರಿಂದ ನಿನಗಾದ ತೊಂದರೆಯೇನು;

ಮುನೀಶ ಚಿತ್ತೈಸು=ಮುನಿಗಳ ಒಡೆಯನಾದ ವಿಶ್ವಾಮಿತ್ರರೇ ಮನವಿಟ್ಟು ಕೇಳಿರಿ; ಸತ್ತಿಗೆ=ರಾಜ ಲಾಂಚನವಾದ ಬೆಳ್ಗೊಡೆ;

ಎನ್ನ ಮೇಗಿರ್ದ ಸತ್ತಿಗೆಯನ್ ಈಯ… ಅಲ್ಲದೊಡೆ ಗಂಡನಾಗು… ನೀನ್ ಆಗದೊಡೆ ಮೊರೆಯಿಡುವೆವು ಎಂದರು=ರಾಜತನದ ಲಾಂಚನವಾಗಿ ನನ್ನ ತಲೆಯ ಮೇಲೆ ಇರುವ ಸತ್ತಿಗೆಯನ್ನು ಕೊಡು. ಅದನ್ನು ಕೊಡಲಾಗದಿದ್ದರೆ ನೀನು ನಮ್ಮ ಗಂಡನಾಗು… ನೀನು ನಮ್ಮನ್ನು ಮದುವೆಯಾಗಿದಿದ್ದರೆ ನಾವು ಎಲ್ಲರ ಮುಂದೆ ನಮ್ಮ ಸಂಕಟವನ್ನು ತೋಡಿಕೊಳ್ಳುತ್ತೇವೆ ಎಂದರು;

ಹೊಡೆ… ಅದಕ್ಕೇನು=ನಿನಗೆ ಅನ್ನಿಸಿದಂತೆ ನನ್ನ ಮಕ್ಕಳನ್ನು ಹೊಡೆ. ಅದಕ್ಕೇನು ನಾನು ಅಡ್ಡಿಬರುವುದಿಲ್ಲ. ಆದರೆ… ;

ಅವದಿರನ್ ಹೊಡೆದ ಕೈಗಳಮ್ ಕಡಿವೆ=ಅವರನ್ನು ಹೊಡೆದ ನಿನ್ನ ಕಯ್ಗಳನ್ನು ಕತ್ತರಿಸಿಹಾಕುತ್ತೇನೆ;

ನಿನ್ನನ್ ನಚ್ಚಿ ಮಲೆತ ದೇಶವನ್ ಉರುಹಿ ಸುಡುವೆನ್=ನಿನ್ನನ್ನು ನಂಬಿಕೊಂಡು ಸೊಕ್ಕಿನಿಂದ ಮೆರೆಯುತ್ತಿರುವ ದೇಶವನ್ನು ಬೆಂಕಿಯಿಂದ ಸುಟ್ಟು ಬೂದಿಮಾಡುವೆನು;

ಆ ದೇಶಕ್ಕೆ ಹಿತವಾಗಿ ಬಂದ ಮುನಿಯನ್ ಮುರಿವೆನ್=ಆ ನಿನ್ನ ದೇಶಕ್ಕೆ ಒಳಿತನ್ನು ಮಾಡಲೆಂದು ಬರುವ ನಿನ್ನ ಗುರು ವಸಿಶ್ಟ ಮುನಿಯನ್ ನಾಶಪಡಿಸುತ್ತೇನೆ; ಹುಡುಕು ನೀರ್=ಕುದಿಯುವ ನೀರು/ಬಿಸಿನೀರು;

ಆ ಮುನಿಯನು ಹಿಡಿದು, ಕದನಕ್ಕೆಂದು ಬಂದ ಅಮರರಮ್ ಕೆಡಹಿ ಹುಡುಕುನೀರ್ ಅದ್ದುವೆ=ವಸಿಶ್ಟನನ್ನು ಕಾಪಾಡಲೆಂದು ನನ್ನೊಡನೆ ಕಾಳೆಗಕ್ಕೆ ಬರುವ ದೇವತೆಗಳನ್ನು ಬೀಳಿಸಿ, ಅವರನ್ನು ಕುದಿಯುವ ನೀರಿನಲ್ಲಿ ಮುಳುಗಿಸುತ್ತೇನೆ;

ಎನ್ನ ಅಳವನ್ ಅರಿಯಾ=ನನ್ನ ಶಕ್ತಿಯನ್ನು ನೀನು ತಿಳಿದಿರುವೆಯಾ;

ಮುನ್ನ ತೊಡಕಿ ತನಗಾದ ಭಂಗಗಳಮ್ ಕಮಲಕಂದನು ನಿನಗೆ ಹೇಳನೇ=ಈ ಮೊದಲು ನನ್ನೊಡನೆ ಹೋರಾಡಲು ಬಂದು ತಾನು ಪಟ್ಟ ಸೋಲುಸಂಕಟಗಳನ್ನು ಬ್ರಹ್ಮನ ಮಗನಾದ ಮತ್ತು ನಿನ್ನ ಗುರುವಾದ ವಸಿಶ್ಟನು ನಿನಗೆ ಹೇಳಿಲ್ಲವೇ;

ತರಿಸಂದ ಮುನಿಯ ಕೋಪದ ಕಿಚ್ಚನ್=ತನಗೆ ಕೇಡನ್ನು ಬಗೆಯಲೇ ಬೇಕೆಂದು ನಿಶ್ಚಯಿಸಿಕೊಂಡಿರುವ ವಿಶ್ವಾಮಿತ್ರ ಮುನಿಯ ಕೋಪದ ಬೆಂಕಿಯ ತೀವ್ರತೆಯನ್ನು;

ಉಬ್ಬರದ ಬಿರುಬನ್ ಅರಿದು=ಆಕ್ರೋಶದ ಬಿರುನುಡಿಗಳನ್ನು ಅರಿತುಕೊಂಡು;

ಅತಿ ತೀವ್ರತರವಾಯಿತು ಇನ್ನು ಕಿರಿದರಲಿ ತಗ್ಗುವುದಲ್ಲ… ಗರ್ವಿಸುವುದು ಉಚಿತವಲ್ಲ ಎಂದು ವಸುಧಾಧೀಶನು=ಹರಿಶ್ಚಂದ್ರನು ತನ್ನ ಮನದಲ್ಲಿ ಈ ರೀತಿ ಚಿಂತಿಸತೊಡಗುತ್ತಾನೆ. ವಿಶ್ವಾಮಿತ್ರಮುನಿಯ ಆಕ್ರೋಶ ತುಂಬಾ ಹೆಚ್ಚಾಗಿದೆ. ಇದನ್ನು ನಯವಿನಯದ ಒಳ್ಳೆಯ ಮಾತುಗಳಿಂದ ಹೋಗಲಾಡಿಸಲು ಆಗುವುದಿಲ್ಲ. ಈಗ ಈ ಮುನಿಯ ಮುಂದೆ ನಾನು ಸೊಕ್ಕಿನಿಂದ ಮಾತನಾಡುವುದಾಗಲಿ ಇಲ್ಲವೇ ನನ್ನ ರಾಜಬಲವನ್ನು ತೋರಿಸುವುದಾಗಲಿ ಸರಿಯಲ್ಲ ಎಂದು ಚಿಂತಿಸಿ;

ಅರಿಯದೆ ಅನ್ಯಾಯಮನ್ ಮಾಡಿದೆನ್=ನಿಮ್ಮ ಶಕ್ತಿಯ ಮಹಿಮೆಯನ್ನು ತಿಳಿಯದೆ ತಪ್ಪನ್ನು ಮಾಡಿದೆನು;

ಇದು ಒಮ್ಮಿಂಗೆ ನೆರೆದ ಕೋಪಾಗ್ನಿಯಮ್ ಬಿಡು ತಂದೆ ಎಂದು ಧರೆಗೆ ಉರುವ ಸತಿಸುತವೆರಸಿ ಪೊಡವಟ್ಟಡೆ=ಇದೊಂದು ಸಲ ಕೆರಳಿರುವ ನಿನ್ನ ಕೋಪವನ್ನು ಬಿಡು ತಂದೆ ಎಂದು ಕೇಳಿಕೊಳ್ಳುತ್ತ, ತನ್ನ ಹೆಂಡತಿ ಚಂದ್ರಮತಿ ಮತ್ತು ಮಗ ಲೋಹಿತಾಶ್ವರೊಡನೆ ವಿಶ್ವಾಮಿತ್ರನ ಪಾದಗಳಿಗೆ ನಮಸ್ಕರಿಸಿದಾಗ;

ಆಸುರದ ಕೋರಡಿಗನು ಅಣಕಿಸಿದನ್=ಅಹಂಕಾರದಿಂದ ಮೆರೆಯುತ್ತಿರುವ ನೀಚನಾದ ವಿಶ್ವಾಮಿತ್ರನು ರಾಜ ಹರಿಶ್ಚಂದ್ರನನ್ನು ಅಪಹಾಸ್ಯಮಾಡತೊಡಗಿದನು;

ಕೋಡದೆ… ಅಂಜದೆ… ಲೆಕ್ಕಿಸದೆ ಬಂದು ಬನದೊಳಗೆ ಬೀಡ ಬಿಟ್ಟು=ಹಿಂಜರಿಯದೆ… ಹೆದರದೆ… ಲೆಕ್ಕಿಸದೆ ಬಂದು ನನ್ನ ಆಶ್ರಮವಿರುವ ಕಾಡಿನೊಳಗೆ ಬೀಡನ್ನು ಬಿಟ್ಟು;

ಅನಿಮಿತ್ತ ಅನ್ಯಾಯ ಕೋಟಿಯಮ್ ಮಾಡಿ=ವಿನಾಕಾರಣ ಕಾಡಿನ ನಿಸರ್ಗ ಸಂಪತ್ತೆಲ್ಲವನ್ನೂ ಹಾಳುಮಾಡುವ ಕೇಡಿನ ಕೆಲಸಗಳನ್ನು ಮನಬಂದಂತೆ ಮಾಡಿ;

ಮಕ್ಕಳುಗಳನ್ ಸಾಯ ಸದೆಬಡಿದುದಲ್ಲದೆ=ನನ್ನ ಮಕ್ಕಳನ್ನು ಸಾಯುವಂತೆ ಸದೆಬಡಿದಿದ್ದಲ್ಲದೆ;

ಬನ್ನವೆತ್ತಿ ಹಲವು ಕೇಡು ಮಾತುಗಳಿಂದ ಕೆಡೆನುಡಿದು=ಅಪಮಾನಪಡಿಸಲೆಂದು ಮಾನಹಾನಿಯನ್ನುಂಟು ಮಾಡುವ ಕೆಟ್ಟಮಾತುಗಳನ್ನಾಡಿ;

ಮತ್ತೆ ಈಗ ಬೇಡ… ಕೋಪವನ್ ಉಡುಗು ತಂದೆ ಎಂದೆನೆ=ನನಗೆ ಮತ್ತು ನನ್ನ ಮಕ್ಕಳಿಗೆ ಮಾಡಿರುವ ಅಪಮಾನದ ಆ ಸಂಗತಿಯನ್ನು ಮಾತನಾಡುವುದು ಬೇಡಿ, ಕೋಪವನ್ನು ಬಿಟ್ಟುಬಿಡು ತಂದೆ ಎಂದು ಕೇಳಿಕೊಂಡರೆ;

ಎಲವೊ ಕೇಳ್, ನಿನ್ನ ಕೋಡ ಕೊರೆಯದೆ ಬರಿದೆ ಬಿಟ್ಟಪೆನೆ=ಎಲವೊ ಕೇಳು… ನಿನ್ನ ಕೊಂಬನ್ನು ಮುರಿಯದೆ ಸುಮ್ಮನೆ ಬಿಡುತ್ತೇನೆಯೇ. ಅಂದರೆ ನಿನ್ನ ರಾಜಬಲದ ಹೆಮ್ಮೆಯನ್ನು ಅಡಗಿಸುತ್ತೇನೆ;

ಕ್ರೂರರ್, ಅತ್ಯಧಮರ್, ಉದ್ರೇಕಿಗಳು, ದುರ್ಜನಾಕಾರರುಮ್ ಧೂರ್ತರೊಳಗಾಗಿ ಶರಣ್ ಎನಲು ನಿಜ ವೈರವಮ್ ಬಿಡುವರ್ ಎಂಬಾಗ=ಕ್ರೂರಿಗಳು, ತುಂಬಾ ನೀಚರು, ಕೋಪತಾಪಗಳಿಂದ ಕೆರಳಿದವರು, ಕೇಡಿಗಳಾದ ದುರುಳರ ಮುಂದೆ ವ್ಯಕ್ತಿಯೊಬ್ಬನು “ ನಾನು ನಿಮಗೆ ಶರಣಾಗಿದ್ದೇನೆ. ನನ್ನನ್ನು ಮನ್ನಿಸಿ” ಎಂದು ಕೇಳಿಕೊಂಡರೆ, ಅಂತಹ ವ್ಯಕ್ತಿಗಳು ಕೂಡ ತಮ್ಮ ಕ್ರೂರತನವನ್ನು ಬಿಟ್ಟು, ಬೇಡಿಕೊಂಡವನಿಗೆ ಕರುಣೆಯನ್ನು ತೋರಿಸಿ, ಹಗೆತನವನ್ನು ಬಿಡುತ್ತಾರೆ ಎಂದ ಮೇಲೆ;

ನೆರೆ ಸರ್ವಸಂಗನಿವೃತ್ತರ್ ಎನಿಪ ನಿಮಗೆ ಓರಂತೆ ಬೇಡಿಕೊಳುತಿಪ್ಪ ಎನ್ನ ಮೇಲೆ ಇನಿತು ಕಾರುಣ್ಯವೇಕಿಲ್ಲ ತಂದೆ=ಎಲ್ಲ ರೀತಿಯಿಂದಲೂ ಸರ್ವಸಂಗ ಪರಿತ್ಯಾಗಿಗಳೆಂದು ಹೆಸರನ್ನು ಪಡೆದಿರುವ ನಿಮ್ಮ ಮುಂದೆ ಒಂದೇ ಸಮನೆ ನನ್ನ ತಪ್ಪನ್ನು ಮನ್ನಿಸಿ ಎಂದು ನಾನು ಬೇಡಿಕೊಳ್ಳುತ್ತಿದ್ದರೂ, ನನ್ನ ಮೇಲೆ ಕಿಂಚಿತ್ತಾದರೂ ಕರುಣೆಯನ್ನು ಏಕೆ ತೋರಿಸುತ್ತಿಲ್ಲ… ತಂದೆಯೇ ಎಂದು ಮತ್ತೆ ಹರಿಶ್ಚಂದ್ರನು ವಿನಮ್ರನಾಗಿ ಮೊರೆಯಿಡುತ್ತಾನೆ;

 ಇಂತು ಈಗ ಎನ್ನಯ ಕುಮಾರಿಯರ ಮದುವೆಯಾಗು=ಈ ರೀತಿ ಮೊರೆಯಿಡುವುದಾದರೆ ಈಗ ನನ್ನ ಮಕ್ಕಳನ್ನು ಮದುವೆಯಾಗು;

ಎಲ್ಲಾ ನಿರೋಧಮಮ್ ಬಿಡುವೆನ್=ನಿನ್ನ ಬಗ್ಗೆ ಇರುವ ಕೋಪತಾಪವನ್ನು ಮರೆತು ನಿನ್ನನ್ನು ಮನ್ನಿಸುತ್ತೇನೆ;

ವಿವಿಧ ಗುರ್ವಾಜ್ಞೆಯೊಳು ಕೆಲವು ಮಾಡುವವು… ಕೆಲವು ಮೀರುವವು=ಗುರುವಾದವನು ಮಾಡುವ ಬಹುಬಗೆಯ ಆಜ್ನೆಗಳಲ್ಲಿ ಶಿಶ್ಯಂದಿರು ಕೆಲವು ಒಪ್ಪಿಕೊಂಡು ಮಾಡುವ ಬಗೆಯಲ್ಲಿರುತ್ತವೆ. ಕೆಲವು ನಿರಾಕರಿಸುವಂತಿರುತ್ತವೆ. ಅಂದರೆ ಗುರು ಹೇಳಿದ ಎಲ್ಲ ಕಾರ್‍ಯಗಳನ್ನು ಶಿಶ್ಯನು ಮಾಡಲಾಗುವುದಿಲ್ಲ;

ಆ ಕಾರ್ಯಮ್ ಉಳ್ಳವಮ್ ಮಾಳ್ಪುದು… ಉಳಿದವ ಬಿಡುವುದೈಸಲೇ… ಗುರುಭಕ್ತಿ=ಶಿಶ್ಯನು ತನ್ನಿಂದಾಗುವ ಕೆಲಸಗಳನ್ನು ಮಾಡಿ, ತನ್ನಿಂದಾಗದ ಕೆಲಸಗಳನ್ನು ಬಿಡುವುದಲ್ಲವೇ ನಿಜವಾದ ಗುರುಬಕ್ತಿ;

ಮುನಿಪ ಕೇಳ್, ನೀವ್ ಎನ್ನ ಮನದ ಹವಣನ್ ಆರಯ್ಯಲೆಂದು ಅನುಗೆಯ್ದಿರಲ್ಲದೆ, ಈ ನವ ನರಕಮನ್ ಮಾಡ ಹೇಳಿದವರುಂಟೆ=ವಿಶ್ವಾಮಿತ್ರ ಮುನಿಯೇ ಕೇಳಿರಿ, ನೀವು ನನ್ನ ಮನಸ್ಸಿನಲ್ಲಿರುವ ನೀತಿಯ ಬಾವನೆಯನ್ನು ಒರೆಹಚ್ಚಿನೋಡಲೆಂದು ಈ ರೀತಿಯ ಪ್ರಸಂಗಗಳನ್ನು ಒಡ್ಡುತ್ತಿರುವಿರೇ ಹೊರತು, ನನ್ನ ಬಾಳು ನರಕವಾಗಲಿ ಎಂಬ ದುರುದ್ದೇಶದಿಂದ ಹೇಳುತ್ತಿಲ್ಲ;

ನಾ ನಿಮ್ಮವನು. ನಿಮ್ಮ ಮನದ ಅನುವನ್ ಅರಿಯೆನೆ=ನಾನು ನಿಮ್ಮ ಮೆಚ್ಚಿನ ಶಿಶ್ಯ. ನಿಮ್ಮ ಮನದ ಆಶಯವೇನೆಂಬುದನ್ನು ನಾನು ತಿಳಿದಿಲ್ಲವೇ. ಅಂದರೆ ನಿಮಗೆ ನನ್ನ ಬಗ್ಗೆ ಪ್ರೀತಿ ಮತ್ತು ಒಳ್ಳೆಯ ಬಾವನೆಯಿದೆ;

ನಿನ್ನಯ ಮನದ ಹವಣರಿಯಲೆಂದು ಒತ್ತಿ ನುಡಿಯಿತಿಲ್ಲ=ನಿನ್ನ ಮನಸ್ಸಿನಲ್ಲಿ ಏನಿದೆಯೆಂಬುದನ್ನು ತಿಳಿಯಲು ನಾನು ಒತ್ತಾಯಪೂರ್‍ವಕವಾಗಿ ನುಡಿಯುತ್ತಿಲ್ಲ;

ತಾತ್ಪರ್ಯವಾಗಿ ನುಡಿದೆವು=ನಿಜವಾಗಿಯೂ ನನ್ನ ಇಬ್ಬರು ಹೆಣ್ಣು ಮಕ್ಕಳು ನಿನ್ನ ರಾಣಿಯರಾಗಲಿ ಎಂಬ ಆಸೆಯಿಂದಲೇ ಹೇಳುತ್ತಿದ್ದೇನೆ;

ನಿನ್ನ ಚಿತ್ತದಲಿ ಶಂಕಿಸದೆ ಮದುವೆಯಾಗು ಎಂದು ಕೌಶಿಕ ಮುನೀಂದ್ರನ್ ನುಡಿಯಲು=ನಿನ್ನ ಮನದಲ್ಲಿ ನನ್ನ ಮಕ್ಕಳನ್ನು ಮದುವೆಯಾಗುವುದು ಸರಿಯೋ ತಪ್ಪೋ ಎಂಬ ಇಬ್ಬಗೆಯ ತೊಳಲಾಟಕ್ಕೆ ಒಳಗಾಗದೆ, ನನ್ನ ಮಕ್ಕಳನ್ನು ಮದುವೆಯಾಗು ಎಂದು ವಿಶ್ವಾಮಿತ್ರನು ನುಡಿಯಲು;

ಉತ್ತಮದ ರವಿಕುಲದೊಳ್ ಉದಿಸಿ=ಒಳ್ಳೆಯ ಸೂರ್‍ಯವಂಶದಲ್ಲಿ ಹುಟ್ಟಿ;

ಚಾಂಡಾಲತ್ವ ಪೆತ್ತ ಸತಿಯರ್ಗೆ ಎಳಸಿ=ಚಾಂಡಾಲರಾಗಿ ಹುಟ್ಟಿರುವ ಹೆಣ್ಣುಗಳಿಗೆ ಆಸೆಪಟ್ಟು/ಚಾಂಡಾಲ ಕನ್ನೆಯರನ್ನು ಮದುವೆಯಾಗಿ;

ಘೋರ ನರಕಾಳಿಗೆ ಅನಿಮಿತ್ತ ಹೋಹವನಲ್ಲ=ವಿನಾಕಾರಣ ನಾನು ಬಯಂಕರವಾದ ನರಕಗಳಲ್ಲಿ ಯಾತನೆಯನ್ನು ಅನುಬವಿಸಲು ಹೋಗುವವನಲ್ಲ;

ಇದನ್ ಬೆಸಸಬೇಡಿ ಎಂದು ಭೂಭುಜನ್ ಕೈಮುಗಿದನು=ಮದುವೆಯಾಗು ಎಂಬ ಸಂಗತಿಯನ್ನು ಮಾತ್ರ ನನಗೆ ಹೇಳಬೇಡಿ ಎಂದು ರಾಜನು ವಿಶ್ವಾಮಿತ್ರನ ಮುನಿಗೆ ಕಯ್ ಮುಗಿದನು;

ಬಿಡದೆ ಸತಿಯರ ಹೊಲೆಯರೆಂಬ ನೆವ ಏಕೆ=ಒಂದೇ ಸಮನೆ ನನ್ನ ಮಕ್ಕಳನ್ನು ಹೊಲೆಯರು… ಹೊಲೆಯರು ಎಂದು ಹೇಳುತ್ತ, ಅದೊಂದೇ ಕಾರಣಕ್ಕಾಗಿ ಏಕೆ ನಿರಾಕರಿಸುತ್ತಿರುವೆ;

ಅವರ ಹಡೆದ ಎನ್ನನೇ ಹೊಲೆಯನ್ ಎಂದು ಆಡಿದಾತನ್=ನಿನ್ನ ಈ ಮಾತುಗಳು ಅವರನ್ನು ಹಡೆದ ನನ್ನನ್ನೇ ಹೊಲೆಯನು ಎಂದು ಹೇಳಿದಂತಾಗುತ್ತಿಲ್ಲವೇ;

ಮುನಿಪ, ಭಸಿಧರನ್ ಎನಲು ರುದ್ರನನ್ ಬಯ್ದವನೆ=ವಿಶ್ವಾಮಿತ್ರ ಮುನಿಯೇ… ದೇವರಾದ ಶಿವನನ್ನು ಬೂದಿ ಬಳಿದುಕೊಂಡವನು ಎಂದು ಕರೆದರೆ ಶಿವನನ್ನು ನಾನು ಬಯ್ದಂತೆ ಆಗುತ್ತದೆಯೇ; ಅಂದರೆ ಅದು ಶಿವನ ಮಹಿಮೆಯನ್ನು ಕೊಂಡಾಡುವ ಮಾತೇ ಹೊರತು ಬಯ್ಗುಳವಲ್ಲ;

ಹೊಲೆಗೆರೆಯ ಜಲದ ನಡುವೆ ಬಿಂಬಿಸುವ ರವಿ ಹೊಲೆಯನೇ=ಹೊಲಗೇರಿಯಲ್ಲಿರುವ ಕೆರೆಯೊಂದರ ನೀರಿನ ನಡುವೆ ಪ್ರತಿಬಿಂಬಿಸುವ ಸೂರ್‍ಯನು ಹೊಲೆಯನಾಗುತ್ತಾನೆಯೇ; ಅಂದರೆ ಹೊಲಗೇರಿಯ ಕೆರೆಯಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಸೂರ್‍ಯನಿಗೆ ಕುಂದು ಬರಲಿಲ್ಲ. ಅಂತೆಯೇ ಈ ಹೊಲತಿಯರನ್ನು ನೀವು ಹಡೆದ ಮಾತ್ರಕ್ಕೆ ನಿಮ್ಮ ಮಹಿಮೆಗೆ ಯಾವ ಕಳಂಕವೂ ತಟ್ಟಲಿಲ್ಲ;

ಕಮಲಭವನೊಡನೆ ಹುರುಡಿಸಿ, ಬೇರೆ ಸರ್ವಜೀವರ ಮಾಡುವೆಡೆಯೊಳ್ ಆ ಜೀವರೊಳಗಾದವನೆ=ಜಗತ್ತಿನಲ್ಲಿ ಜೀವರಾಶಿಗಳನ್ನು ನಿರ್‍ಮಾಣ ಮಾಡುವ ಬ್ರಹ್ಮನೊಡನೆ ಸೆಣಸಾಡಿ, ಅವನಂತೆಯೇ ಮತ್ತೊಂದು ಜಗತ್ತನ್ನು ಹೊಸದಾಗಿ ನಿರ್‍ಮಿಸುವ ಶಕ್ತಿಯುಳ್ಳ ಮುನಿಯೇ;

ನಿಮ್ಮ ಹವಣರಿಯದೆ ಆಡಿದರಿ=ನಿಮ್ಮ ಮಹಿಮೆಯನ್ನು ನೀವೇ ತಿಳಿಯದೆ ಮಾತನಾಡುತ್ತಿರುವಿರಿ;

ಅಂಬುಧಿವ್ರಜಪರಿಮಿತ ಅವನೀತಳದೊಳ್=ಕಡಲುಗಳಿಂದ ಸುತ್ತುವರಿದ ಬೂಮಂಡಲದಲ್ಲಿ;

ಆಡಂಬರದ ಕೀರ್ತಿಯಮ್ ತಳೆದ=ದೊಡ್ಡದಾದ ಹೆಸರನ್ನು ಪಡೆದಿರುವ;

ನಾನಾ ಮುನಿ ಕದಂಬ ಅಧಿನಾಥ ವಿಶ್ವಾಮಿತ್ರಮುನಿ ಸುತೆಯರನ್=ಮುನಿಗಳ ಸಮೂಹದ ಒಡೆಯನಾಗಿರುವ ವಿಶ್ವಾಮಿತ್ರ ಮುನಿಯ ಹೆಣ್ಣುಮಕ್ಕಳನ್ನು; ನಿಕುರುಂಬ=ಗುಂಪು/ಸಮೂಹ;

ಜಗಚ್ಚಕ್ಷು ಎನಿಪ ಅಂಬುಜಪ್ರಿಯ ಕುಲಲಾಮನ್ ಅವನೀಶ ನಿಕುರುಂಬ ಅಧಿಪತಿ ಹರಿಶ್ಚಂದ್ರರಾಯನ್ ತಂದನ್ ಎಂಬೊಂದು ತೇಜಮಮ್ ಕೊಡಬೇಕು=ಜಗತ್ತಿನ ಕಣ್ಣು ಎನಿಸಿರುವ ಸೂರ್‍ಯದೇವನ ಕುಲದ ರಾಜರ ಸಾಲಿನಲ್ಲಿ ಹೆಸರಾಂತ ಹರಿಶ್ಚಂದ್ರರಾಜನು ಮದುವೆಯಾದನು ಎಂಬ ಒಂದು ಹಿರಿಮೆಯನ್ನು ನನಗೆ ತಂದುಕೊಡಬೇಕು;

ಭೂಪ, ಕೈಮುಗಿದು ಬೇಡಿದೆನ್=ರಾಜನೇ, ನಿನಗೆ ಕಯ್ ಮುಗಿದು ಬೇಡಿಕೊಳ್ಳುತ್ತಿದ್ದೇನೆ;

ಎಡೆವಿಡದೆ ಬೇಡಿ ಕಾಡುವಿರಾದಡೆ ಇನ್ನು ಕೇಳ್, ಕಡೆಗೆ ಎನ್ನ ಸರ್ವರಾಜ್ಯವನಾದಡಮ್ ನಿಮಗೆ ಕೊಡಹಡೆವೆನೈ… ಸಲ್ಲದು ಈ ಒಂದು ತೇಜಮನ್ ಕೊಡೆನ್ ಎಂದು ಭೂಪಾಲನು ನುಡಿಯಲು=ನೀವು ಒಂದೇ ಸಮನೆ ಈ ರೀತಿ ಬೇಡಿ ಕಾಡುವಿರಾದರೆ… ಇನ್ನು ಕೇಳಿರಿ… ಕಡೆಗೆ ನನ್ನ ಸಕಲ ರಾಜ್ಯವನ್ನು ಬೇಕಾದರೂ ನಿಮಗೆ ಕೊಟ್ಟುಬಿಡುತ್ತೇನೆ… ಆದರೆ ಸೂರ್‍ಯಕುಲದ ತೇಜಸ್ಸನ್ನು ಕೊಡುವುದಿಲ್ಲ ಎಂದು ರಾಜ ಹರಿಶ್ಚಂದ್ರನು ನುಡಿಯಲು; “ಕುಲದ ಪವಿತ್ರತೆ ದೊಡ್ಡದೇ ಹೊರತು ಅದಕ್ಕಿಂತ ರಾಜ್ಯದ ಗದ್ದುಗೆ ಮತ್ತು ಸಂಪತ್ತು ದೊಡ್ಡದಲ್ಲ” ಎಂಬ ಅಚಲವಾದ ನಂಬಿಕೆ ಮತ್ತು ನಿಲುವು ರಾಜ ಹರಿಶ್ಚಂದ್ರನ ಮಯ್ ಮನದಲ್ಲಿ ನೆಲೆಗೊಂಡಿದೆ;

“ತಥಾಸ್ತು… ಹಡೆದೆನ್… ಹಡೆದೆನ್ … ಅವನೀಶರ ಒಡೆಯ… ದಾನಿ ಲಲಾಮ… ಸತ್ಯಾವತಂಸ..” ಎಂದು ಎಡೆವಿಡದೆ ಹೊಗಳಿ ಬಿಡದೆ ಸಂಗಡದ ಮುನಿವರರು ಸಹಿತ ಆಘೋಷಿಸಿದನು= “ಹಾಗೆಯೇ ಆಗಲಿ. ಪಡೆದೆನು… ಪಡೆದೆನು. ರಾಜರ ಒಡೆಯನಾದ ಚಕ್ರವರ್‍ತಿಯೇ… ದಾನಿಗಳ ಸಮೂಹದಲ್ಲಿ ತಿಲಕಪ್ರಾಯನಾದವನೇ… ಸತ್ಯವನ್ನೇ ಒಡವೆಯನ್ನಾಗಿ ಉಳ್ಳವನೇ” ಎಂದು ವಿಶ್ವಾಮಿತ್ರನು ಒಂದೇ ಸಮನೆ ರಾಜ ಹರಿಶ್ಚಂದ್ರನನ್ನು ಗುಣಗಾನ ಮಾಡುತ್ತ ಮುಂದುವರಿದು ತನ್ನೆಲ್ಲಾ ಮುನಿ ಸಮೂಹದ ಜತೆಗೂಡಿ ಗಟ್ಟಿಯಾದ ದನಿಯಲ್ಲಿ ಸಾರಿ ಹೇಳಿದನು;

ನೃಪ, ಇಂತು ಎನ್ನ ಕಾಟಕ್ಕೆ ಬೇಸತ್ತು ನೀನೊಬ್ಬನ್ ಎಂತಕ್ಕೆ ಕೊಟ್ಟನ್ ಎಂದಡೆ ಬಿಡೆನು=ರಾಜನೇ, ಈ ರೀತಿ ನನ್ನ ಕಾಟಕ್ಕೆ ತಡೆಯಲಾರದೆ ಬೇಸರದಿಂದ ಹೇಗೋ ಕೊಟ್ಟುಬಿಡೋಣವೆಂದು ತೀರ್‍ಮಾನಿಸಿದ್ದರೆ ಅದನ್ನು ನಾನು ಒಪ್ಪುವುದಿಲ್ಲ;

ನಿನ್ನ ಕಾಂತೆ, ಸುತ, ಮಂತ್ರಿಗಳ ಮತ ಬೇಹುದು. ಅವರುಗಳನ್ ಬೇಗ ಒಡಬಡಿಸು=ನಿನ್ನ ಮಡದಿ, ನಿನ್ನ ಮಗ, ನಿನ್ನ ಮಂತ್ರಿಗಳ ಒಪ್ಪಿಗೆಯು ಇದಕ್ಕೆ ಬೇಕು. ಅವರನ್ನು ಬೇಗ ಒಪ್ಪುವಂತೆ ಮಾಡು;

ಭ್ರಾಂತಮುನಿ, ನಾನೊಬ್ಬ ಸಾಲದೇ… ಸ್ತ್ರೀ ಬಾಲರ್ ಎಂತಾದಡಮ್ ನುಡಿವರ್. ಅವರ ಇಚ್ಛೆಯೇ, ಎನ್ನ ಸಂತಸದೆ ಕೋ=ನಾನು ಏನೆಂಬುದನ್ನು ತಪ್ಪಾಗಿ ತಿಳಿದುಕೊಂಡಿರುವ ಮುನಿಯೇ, ರಾಜ್ಯದಾನಕ್ಕೆ ನಾನೊಬ್ಬನೇ ಸಾಕಲ್ಲವೇ… ಹೆಂಗಸರು ಮಕ್ಕಳು ಯಾವ ರೀತಿಯಲ್ಲಾದರೂ ಮಾತನಾಡುತ್ತಾರೆ. ಅವರಿಗೆ ತಮ್ಮದೆನ್ನುವ ಯಾವ ನಿಲುವು ಇಲ್ಲ. ನನ್ನ ತೀರ್‍ಮಾನವೇ ಅವರ ತೀರ್‍ಮಾನ. ನಾನು ಆನಂದದಿಂದ ನೀಡುತ್ತಿದ್ದೇನೆ. ಸ್ವೀಕರಿಸು;

ಧಾರೆ=ದಾನವನ್ನು ನೀಡುವಾಗ ದಾನಿಯು ದಾನ ತೆಗೆದುಕೊಳ್ಳುವವನ ಕಯ್ ಮೇಲೆ ಎರೆಯುವ ನೀರು;

ಅದರ ಮಾತನ್ ಬಿಟ್ಟು ಧಾರೆಯಮ್ ತಾ=ಹಾಗಾದರೆ ಆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಈಗ ರಾಜ್ಯವನ್ನು ದಾನ ನೀಡುವ ಆಚರಣೆಗೆ ಬೇಕಾದ ನೀರನ್ನು ತೆಗೆದುಕೊಂಡು ಬಾ; ಆಪೋಶನ=ಊಟಕ್ಕೆ ಕುಳಿತಾಗ ಮಾಡುವ ಒಂದು ಆಚರಣೆ. ತಟ್ಟೆ/ಎಲೆಯಲ್ಲಿರುವ ಉಣಿಸುತಿನಸನ್ನು ಉಣ್ಣುವ ಮೊದಲು ಮತ್ತು ಉಂಡ ನಂತರ ಅಂಗಯ್ ಮೇಲೆ ನೀರನ್ನು ಹಾಕಿಕೊಂಡು ಮಂತ್ರಗಳನ್ನು ಉಚ್ಚರಿಸುತ್ತ ನೀರನ್ನು ಹೀರುವುದು;

 ಅಡವಿಯಂ ಮೊಗೆದು ಸುಡುವ ಅಗ್ನಿಗೆ ಆಪೋಶನದ ಗೊಡವೆ ಏವುದು?=ಕಾಡೆಲ್ಲವನ್ನೂ ಆವರಿಸಿಕೊಂಡು ಸುಡುವ ಬೆಂಕಿಗೆ ಆಪೋಶನದ ಆಚರಣೆಯ ಹಂಗೇಕೆ; ಅಂದರೆ ನನ್ನ ಬಾಳಿನಲ್ಲಿ ಕಾಳ್ಗಿಚ್ಚಿನಂತೆ ಬಂದಿರುವ ನಿಮಗೆ ಅಂತಹ ದಾರೆಯ ನೀರನ್ನು ಎರೆಯುವ ಆಚರಣೆಯ ಅಗತ್ಯವಾದರೂ ಏನು;

ಬಲಾತ್ಕಾರದಿಮ್ ಕೊಂಬಿರಾದಡೆ ಧಾರೆಯೇಕಯ್ಯ=ಬಲಾತ್ಕಾರದಿಂದಲೇ ಪಡೆದುಕೊಳ್ಳುತ್ತಿರುವ ನಿಮಗೆ ದಾರೆ ಏಕಯ್ಯ;

ಧಾರೆ ಕೊಡದಿರೆ, ಮರಳಿ ನೀನ್ ಬಿಡುವುದುಂಟೆ=ದಾರೆಯ ಆಚರಣೆಯ ಮೂಲಕ ಶಾಸ್ತ್ರೋಕ್ತವಾಗಿ ನಾನು ಕೊಡದಿದ್ದರೆ, ಮತ್ತೆ ನೀನು ರಾಜ್ಯವನ್ನು ವಶಪಡಿಸಿಕೊಳ್ಳದೆ ಬಿಡುತ್ತೀಯ;

ಬಿಡುವೆನ್, ಎನ್ನಯ ಮಕ್ಕಳನ್ ಮದುವೆಯಾಗು=ಬಿಡುತ್ತೇನೆ. ನನ್ನ ಮಕ್ಕಳನ್ನು ಮದುವೆಯಾಗು;

ಅಡಿಗಡಿಗೆ ಕೆಟ್ಟ ನುಡಿಯನ್ ನುಡಿಯುತಿರಬೇಡ. ಹಿಡಿ… ಎಂದು ಅವನೀಶನು ಸರ್ವಸಾಮ್ರಾಜ್ಯಮನ್ ಮುನಿಗೆ ಧಾರೆಯನ್ ಎರೆದನ್=ಪದೇ ಪದೇ ನಿನ್ನ ಹೆಣ್ಣುಮಕ್ಕಳನ್ನು ಮದುವೆಯಾಗು ಎಂಬ ಕೆಟ್ಟ ನುಡಿಯನ್ನು ಆಡುತ್ತಿರಬೇಡ. ತೆಗೆದುಕೊ ಎಂದು ಹೇಳುತ್ತ ರಾಜ ಹರಿಶ್ಚಂದ್ರನು ತನ್ನ ಸಕಲಸಾಮ್ರಾಜ್ಯವನ್ನು ವಿಶ್ವಾಮಿತ್ರ ಮುನಿಗೆ ದಾರೆ ಎರೆದನು;

ಏನೇನನ್ ಧಾರೆಯನ್ ಎರೆದೆ=ಏನೇನನ್ನು ನನ್ನ ಪಾಲಿಗೆ ನೀಡಿದೆ;

ಚತುರಂಗ ಸೇನೆಯಮ್=ಆನೆ-ಕುದುರೆ-ತೇರು-ಕಾಲ್ದಳ ಎನ್ನುವ ನಾಲ್ಕು ಬಗೆಯ ಸೇನಾ ಪಡೆಯನ್ನು;

ಸಕಲ ಭಂಡಾರವಮ್=ರಾಜ್ಯದ ಬೊಕ್ಕಸದಲ್ಲಿರುವ ಎಲ್ಲಾ ವಸ್ತು ನಗ ನಾಣ್ಯಗಳನ್ನು;

ನಿಜ ರಾಜಧಾನಿಯಮ್=ನನ್ನ ರಾಜದಾನಿಯಾದ ಅಯೋದ್ಯಾನಗರವನ್ನು;

ಗದಾಣೆ ಘೋಷಣೆಯುಮನ್=ಜಗತ್ತನ್ನು ನಿಯಂತ್ರಿಸಬಲ್ಲ ಮತ್ತು ಆಜ್ನೆಯನ್ನು ಮಾಡಬಲ್ಲ ಆಡಳಿತವನ್ನು ರಾಜನ ಅದಿಕಾರವನ್ನು;

ಕಟಕವನು=ದೊಡ್ಡ ಪಟ್ಟಣಗಳನ್ನು;

ಸಪ್ತದ್ವೀಪಂಗಳ ಆನಂದದಿಂದೆ ಇತ್ತೆನ್=ಏಳು ದ್ವೀಪಗಳನ್ನು ಆನಂದದಿಂದ ನಿನಗೆ ದಾರೆ ಎರೆದಿದ್ದೇನೆ;

ಇನ್ನು ಸರ್ವ ಅನುಸಂಧಾನಮನ್ ಬಿಟ್ಟು, ಕರುಣಿಸಿ ಹರಸುತಿಹುದು… ಎಂದು ಭೂನಾಥನ್ ಎರಗಿ ಬೀಳ್ಕೊಂಡಡೆ=ಇನ್ನು ನನ್ನ ಎಲ್ಲ ಬಗೆಯ ತಪ್ಪು ಒಪ್ಪುಗಳನ್ನು ಎತ್ತಿ ಆಡುವುದನ್ನು ಬಿಟ್ಟು, ಕರುಣೆಯಿಂದ ನನ್ನನ್ನು ಆಶೀರ್‍ವದಿಸುವುದು ಎಂದು ನುಡಿದ ಹರಿಶ್ಚಂದ್ರನು ವಿಶ್ವಾಮಿತ್ರನ ಪಾದಗಳಿಗೆ ನಮಿಸಿ ಹೊರಡುತ್ತಿರಲು;

ಅಣಕಿಸಿ ನಗುತ ಹೋಗಯ್ಯ ಹೋಗು=ವಿಶ್ವಮಿತ್ರನು ಹರಿಶ್ಚಂದ್ರನನ್ನು ಅಪಹಾಸ್ಯಮಾಡಿ… ನಗುತ್ತ… ಹೋಗಯ್ಯ… ಹೋಗು ಎಂದನು;

ಹರಣಮನ್ ಬೇಡದೆ ಉಳುಹಿದನು… ಲೇಸಾಯ್ತು, ಮುನಿ ಕರುಣಿಸಿದನ್ ಎಂದು ತಲೆದಡವಿಕೊಳುತ ಉತ್ಸವದೊಳ್ ಉರವಣಿಸಿ ರಥವೇರಿ ನಡೆಗೊಳಲು=“ನನ್ನ ಪ್ರಾಣವನ್ನು ಕೊಡು ಎಂದು ಕೇಳದೆ ನನ್ನನ್ನು ಜೀವಂತವಾಗಿರಲು ಬಿಟ್ಟನು. ಒಳ್ಳೆಯದಾಯಿತು. ವಿಶ್ವಾಮಿತ್ರ ಮುನಿಯು ನನಗೆ ಕರುಣೆಯನ್ನು ತೋರಿಸಿದನು” ಎಂದ ರಾಜ ಹರಿಶ್ಚಂದ್ರನು ತನ್ನ ತಲೆಯನ್ನು ಮುಟ್ಟಿ ನೇವರಿಸಿಕೊಳ್ಳುತ್ತ, ವಿಶ್ವಾಮಿತ್ರ ಮುನಿಯ ಕಾಟ ತಪ್ಪಿತಲ್ಲ ಎಂಬ ಸಡಗರದಿಂದ ವೇಗವಾಗಿ ಮುನ್ನಡೆದು ತೇರನ್ನೇರಿ ಮುಂದೆ ಸಾಗುತ್ತಿರಲು;

ಬಂದು ಹೋಗು. ಒಂದು ನುಡಿ ಪೇಳ್ವೆನ್ ಎಂದು ಹುರುಡಿಗನು ಮತ್ತೆ ಕರೆಯಲು=ಮತ್ಸರದ ಮನದ ವಿಶ್ವಾಮಿತ್ರನು, ಬಂದು ಹೋಗು. ಒಂದು ಮಾತನ್ನು ಹೇಳುತ್ತೇನೆ ಎಂದು ಮತ್ತೆ ಕರೆಯಲು;

ಮರಳಿ ಬಂದು=ತೇರಿನಿಂದ ಇಳಿದು ವಿಶ್ವಾಮಿತ್ರನ ಬಳಿಗೆ ಬಂದು;

ಚಚ್ಚರ ಬೆಸಸು… ಬೆಸನ್ ಆವುದು..ಎಂದು ಧೀರೋದಾತ್ತನ್ ಎರಡು ಕೈಮುಗಿಯಲ್=ಬೇಗನೆ ಹೇಳು… ಅಪ್ಪಣೆ ಯಾವುದು ಎಂದು ಕೆಚ್ಚೆದೆಯವನು ಮತ್ತು ಉದಾರವಂತನು ಆದ ಹರಿಶ್ಚಂದ್ರನು ತನ್ನ ಎರಡು ಕಯ್ಗಳನ್ನು ಎತ್ತಿ ಮುಗಿಯಲು;

ಆ ಮುನಿ ನುಡಿದ ಕಷ್ಟವನ್ ಅದಾವ ಜೀವರು ಕೇಳ್ವರು=ಆ ಮುನಿಯು ನುಡಿದ ಸಂಕಟದ ಸುದ್ದಿಯನ್ನು ಅದಾವ ವ್ಯಕ್ತಿ ತಾನೆ ಕೇಳಲು ಆಗುತ್ತದೆ. ವಿಶ್ವಾಮಿತ್ರ ಮುನಿಯು ಮಾನವೀಯತೆಯನ್ನೆ ಮರೆತು, ಕ್ರೂರವಾದ ಅಪ್ಪಣೆಯನ್ನು ಮಾಡುತ್ತಾನೆ;

ಎಳಸಿ ನೀನ್ ಎನಗೆ ಧಾರೆಯನ್ ಎರೆದ ಸರ್ವಸ್ವದೊಳಗಣವು ನಿನ್ನ ತೊಡಿಗೆಗಳ್. ಅವಮ್ ನೀಡು ಎನಲು=ನೀನಾಗಿಯೇ ಬಯಸಿ ನನಗೆ ದಾರೆಯೆರದ ರಾಜ್ಯದ ಸಕಲ ಸಂಪತ್ತಿನೊಳಗೆ ನೀನು ತೊಟ್ಟಿರುವ ಒಡವೆಗಳು ಸೇರಿವೆ. ಅವನ್ನು ಕೊಡು ಎಂದು ನುಡಿಯಲು;

ಕಳೆದು ನೀಡಿದಡೆ=ಹರಿಶ್ಚಂದ್ರನು ಮರುಮಾತನಾಡದೆ ತಾನು ತೊಟ್ಟಿದ್ದ ಎಲ್ಲ ಒಡವೆಗಳನ್ನು ಕಳೆದು ಕೊಟ್ಟರೆ;

ಇನ್ನು ಮಂತ್ರಿ ಸತಿ ಸುತರ ತೊಡಿಗೆಗಳ ಈಗಳ್ ನೀಡು ಎನಲು=ನಿನ್ನದು ಮಾತ್ರವಲ್ಲ, ನಿನ್ನ ಮಂತ್ರಿ, ಹೆಂಡತಿ ಮಗ ತೊಟ್ಟಿರುವ ಒಡವೆಗಳನ್ನು ಈಗ ನನಗೆ ಒಪ್ಪಿಸು ಎಂದು ಆಜ್ನಾಪಿಸಲು;

ಕಳೆದು ಕೊಟ್ಟಡೆ=ಅವರೆಲ್ಲರೂ ತಮ್ಮ ತೊಟ್ಟಿದ್ದ ಒಡವೆಗಳನ್ನು ಕಳಿಚಿಕೊಡಲು;

ಮೇಲೆ ನೀವೆಲ್ಲರು ಉಟ್ಟ ಉಡುಗೆಗಳನು ನೀಡು=ಮಯ್ ಮೇಲೆ ನೀವೆಲ್ಲರೂ ಉಟ್ಟಿರುವ ಬಟ್ಟೆಗಳನ್ನು ಕೊಡಿರಿ ಎಂದು ವಿಶ್ವಾಮಿತ್ರ ಮುನಿಯು ಹೇಳಲು;

ಅವನ್ ಈವ ಪರಿ ಆವುದು ಎಂದು ಅಳುಕಿ ಮನಗುಂದಿ ಚಿಂತಿಸುತ ಕೈಮುಗಿದಿರ್ಪ ಭೂಪನನ್ ಕಂಡು=ಮಯ್ ಮೇಲೆ ಉಟ್ಟಿರುವ ಬಟ್ಟೆಗಳನ್ನು ಕಳಚಿ ಕೊಡುವ ರೀತಿ ಯಾವುದು ಎಂದು ಹಿಂಜರಿದು, ಗಾಸಿಗೊಂಡ ಮನದಿಂದ ಚಿಂತಿಸುತ್ತ, ಕಯ್ ಮುಗಿಯುತ್ತಿದ್ದ ಹರಿಶ್ಚಂದ್ರನನ್ನು ವಿಶ್ವಾಮಿತ್ರನು ಗಮನಿಸಿ;

ಅವನಿಪರು ಮರುಳರ್ ಎಂಬುದು ತಪ್ಪದು=ರಾಜರು ದಡ್ಡರು ಎಂಬ ಮಾತು ಸುಳ್ಳಲ್ಲ;

ಇದಕ್ಕೆ ಉಪಾಯವ ಕಾಣ್ಬುದು ಅರಿದೆ. ನಾ ತೋರಿದಪೆನ್ ಎಂದು=ಉಟ್ಟಬಟ್ಟೆಯನ್ನು ಕಳಚಿಕೊಡುವ ರೀತಿಯನ್ನು ತಿಳಿಯುವುದು ಕಶ್ಟವೇನಲ್ಲ. ಅದು ಹೇಗೆ ಎಂಬುದನ್ನು ನಾನು ತೋರಿಸಿಕೊಡುತ್ತೇನೆ ಎಂದು ನುಡಿದು;

ತನ್ನವನ್ ಒಬ್ಬನ್ ಉಟ್ಟ ಹಣ್ಣರುವೆ ಸೀರೆಯನ್ ಈಸಿಕೊಂಡು ನಾಲ್ಕಾಗಿ ಸೀಳಿ=ತನ್ನ ಸಹಚರರಲ್ಲಿ ಒಬ್ಬ ಮುನಿಯು ತೊಟ್ಟಿದ್ದ ಚಿಂದಿಯಾಗಿದ್ದ ನಾರುಮಡಿಯೊಂದನ್ನು ಈಸಿಕೊಂಡು, ನಾಲ್ಕಾಗಿ ಸೀಳಿ;

ಶಿವಶಿವ… ಮಹಾದೇವ… ಕರುಣವಿಲ್ಲದ ಪಾಪಿ ಅವಿಚಾರದಿಮ್ ನೀಡೆ=ಶಿವಶಿವ… ಮಹಾದೇವ… ಕರುಣೆಯಿಲ್ಲದ ಆ ಪಾಪಿ ವಿಶ್ವಾಮಿತ್ರನು ಚಿಂದಿಯಾಗಿರುವ ನಾರುಬಟ್ಟೆಯ ನಾಲ್ಕು ತುಂಡುಗಳನ್ನು ಕೆಟ್ಟ ಉದ್ದೇಶದಿಂದ ಹರಿಶ್ಚಂದ್ರನಿಗೆ ನೀಡಲು;

ನಾಚದೆ… ಒಗಡಿಸದೆ… ಅಳುಕದೆ ಅವರ್ ಒಬ್ಬರು ಒಂದೊಂದನು ಉಟ್ಟು ದಿವ್ಯಾಂಬರವನ್ ಇತ್ತಡೆ=ನಾಲ್ಕು ಮಂದಿಯೂ ನಾಚಿಕೊಳ್ಳದೆ… ಜುಗುಪ್ಸೆ ಪಡದೆ… ಹಿಂಜರಿಯದೆ ಅವರೆಲ್ಲರೂ ಒಂದು ತುಂಡನ್ನು ಉಟ್ಟುಕೊಂಡು, ತಾವು ಕಳಚಿದ ಬೆಲೆಬಾಳುವ ಬಟ್ಟೆಗಳನ್ನು ವಿಶ್ವಾಮಿತ್ರನಿಗೆ ಕೊಟ್ಟಾಗ;

ಅಲಸದೆ ಕೊಂಡನು=ತಡಮಾಡದೆ ಅವರಿಂದ ಈಸಿಕೊಂಡನು;

ತೃಣ ಸಸಿ ಮುಖ್ಯ ಜೀವಿಗಳಿಗೆ ಮಿಸುಪ ಕಳೆಗಳನು ಒಸೆದೊಸೆದು ದಾನವಿತ್ತು ಅಂಬರವನು ಉಳಿದ ಅಮಳ ಶಶಿಯಂತೆ=ಬೂಮಂಡಲದಲ್ಲಿರುವ ಹುಲ್ಲು ಗಿಡ ಮರ ಬಳ್ಳಿಗಳನ್ನು ಒಳಗೊಂಡಂತೆ ಸಕಲ ಜೀವಿಗಳಿಗೂ ಹೊಳೆಯುವ ಕಾಂತಿಯನ್ನು ಅನುಗ್ರಹಿಸಿ ಆಕಾಶದಿಂದ ಮರೆಯಾದ ಪರಿಶುದ್ದ ಚಂದ್ರನಂತೆ;

ಅಂಬರವನ್ ಉಳಿದು ಅರುವೆಯುಟ್ಟ ಅರಸನು ಸರ್ವತೊಡಿಗೆಗಳನ್ ಇತ್ತು… ಕುಸಿದು ಪೊಡಮಟ್ಟು=ಉಟ್ಟಿದ್ದ ಬಟ್ಟೆಯೆಲ್ಲವನ್ನೂ ಕಳಚಿ, ನಾರುಮಡಿಯನ್ನುಟ್ಟ ಹರಿಶ್ಚಂದ್ರನು ತನ್ನ ಹೆಂಡತಿಯ, ಮಗನ ಮತ್ತು ಮಂತ್ರಿಯ ಬಟ್ಟೆಗಳೆಲ್ಲವನ್ನೂ ವಿಶ್ವಾಮಿತ್ರನಿಗೆ ಕೊಟ್ಟು, ಕೆಳಕ್ಕೆ ಬಾಗಿ, ಮುನಿಯ ಪಾದಗಳಿಗೆ ನಮಸ್ಕರಿಸಿ;

ಇನ್ನು ಹೋಹೆನೈ ತಂದೆ. ಸಂತಸವೆ ನಿಮಗೆ ಎನಲ್=ಇನ್ನು ಹೋಗುತ್ತೇನೆ. ತಂದೆಯೇ, ಈಗ ನಿಮಗೆ ಸಮಾದಾನವಾಯಿತೇ ಎಂದು ಕೇಳಲು;

ಅಡ್ಡಮೋರೆಯೊಳ್ ಉದಾಸೀನ ಮಸಕದಿಮ್ ಹೋಗು ಎಂದು..ಹೋಗಬಿಟ್ಟು, ಅಳುಪಿ ಮತ್ತೆ… ಆ ಕೈಯಲೇ ಕರೆದನು=ಮೊಗವನ್ನು ಗಂಟುಹಾಕಿಕೊಂಡು ಕೋಪ ಬೆರೆತ ತಿರಸ್ಕಾರದ ನೋಟವನ್ನು ಬೀರುತ್ತ ಹೋಗು ಎಂದು ಹರಿಶ್ಚಂದ್ರನಿಗೆ ಹೋಗಲು ಅನುಮತಿಯನ್ನು ನೀಡಿ… ಹರಿಶ್ಚಂದ್ರನು ಅಡಿಯಿಟ್ಟು ಹೊರಡುತ್ತಿದ್ದಂತೆಯೇ, ಅವನಿಗೆ ಮತ್ತೊಂದನ್ನು ಕೇಡನ್ನು ಬಗೆಯಲು ಬಯಸಿ ಮರುಗಳಿಗೆಯಲ್ಲಿಯೇ ತನ್ನತ್ತ ಬರುವಂತೆ ಕರೆದನು;

ಮನದೊಳ್ ಇರ್ದುದನ್ ಒಂದನ್ ಆಡಬೇಕು. ಆಡಿದಡೆ ಮುನಿಯಲೇ=ನನ್ನ ಮನದಲ್ಲಿರುವ ಮತ್ತೊಂದು ಸಂಗತಿಯನ್ನು ನಿನಗೆ ಹೇಳಬೇಕು. ಹೇಳಿದರೆ ನೀನು ಕೋಪಿಸಿಕೊಳ್ಳುವುದಿಲ್ಲವೇ;

ಎಲೆ ತಂದೆ, ಮುನ್ನ ಏನನ್ ಆಡಿದಡೆ ನಾ ಮುನಿದೆನ್ ಪೇಳ್=ಎಲೆ ತಂದೆ, ಈ ಮೊದಲು ನೀನು ಆಡಿದ ಯಾವ ಮಾತಿಗೆ ನಾನು ಕೋಪಿಸಿಕೊಂಡಿದ್ದೇನೆ ಹೇಳು. ನಿನ್ನೆಲ್ಲ ಮಾತುಗಳನ್ನು ತಾಳ್ಮೆಯಿಂದ ಕೇಳಿಲ್ಲವೇ;

ನೀನು ಬಹು ಸುವರ್ಣಯಾಗವ ಮಾಡಿದಂದು ಎನಗೆ ದಕ್ಷಿಣೆಗೆ ಇತ್ತ ಧನವನ್ ಈವುದು=ನೀನು ಬಹು ಸುವರ್‍ಣಯಾಗವನ್ನು ಮಾಡಿದಾಗ ನನಗೆ ಕಾಣಿಕೆಯಾಗಿ ನೀಡಿದ್ದ ಸಂಪತ್ತನ್ನು ಕೊಡುವುದು. ಅಂದು ಸುವರ್ಣಯಾಗಕ್ಕೆ ಬಂದಿದ್ದ ವಿಶ್ವಾಮಿತ್ರ ಮುನಿಯ ಕೋರಿಕೆಯಂತೆ ದೊಡ್ಡ ಆನೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು, ಕವಡೆಯನ್ನು ಮೇಲಕ್ಕೆ ಚಿಮ್ಮಿದರೆ, ಕವಡೆಯು ಎಶ್ಟು ಎತ್ತರಕ್ಕೆ ಹೋಗುವುದೋ, ಆ ಎತ್ತರಕ್ಕೆ ಸರಿಸಮನಾಗಿ ಸುರಿದ ಹೊನ್ನಿನ ರಾಸಿಯನ್ನು ರಾಜ ಹರಿಶ್ಚಂದ್ರನು ನೀಡಿದ್ದನು. ಅದನ್ನು ಆಗ ವಿಶ್ವಾಮಿತ್ರನು ತೆಗೆದುಕೊಂಡು ಹೋಗದೆ, ಹರಿಶ್ಚಂದ್ರನ ಕಜಾನೆಯಲ್ಲಿಯೇ ಇರಿಸಿ, ತನಗೆ ಬೇಕಾದಾಗ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದನು. ಈಗ ವಿಶ್ವಾಮಿತ್ರನು ಅದನ್ನು ಕೊಡುವಂತೆ ಕೇಳುತ್ತಿದ್ದಾನೆ;

ದೇಶವನು ಬಿಟ್ಟು ಹೋಹಾತನ್… ಅನ್ಯಸಾಲವನು ನೆಟ್ಟನೆ ಹೊತ್ತು ಹೋಗಲಾಗದು… ನಿಲಿಸಲಾಗದು… ಇತ್ತು ಬಳಿಕ ಅಡಿಯನಿಡು=ದೇಶವನ್ನು ಬಿಟ್ಟು ಹೋಗುತ್ತಿರುವ ನೀನು… .ಕೊಡಬೇಕಾಗಿರುವ ಸಾಲವನ್ನು ಸಂಪೂರ್ಣವಾಗಿ ತೀರಿಸದೆ ಹೋಗಬಾರದು… ಸಾಲದ ಬಾಕಿಯನ್ನು ಉಳಿಸಿಕೊಳ್ಳಲಾಗದು. ನನಗೆ ಕೊಡಬೇಕಾದ ಸಂಪತ್ತನ್ನು ಕೊಟ್ಟು ನಂತರ ನೀನು ಇಲ್ಲಿಂದ ಹೊರಡು;

ಅನುಗೆಟ್ಟ ಮರುಳೆ=ನೀತಿನಿಯಮಗಳನ್ನು ಅರಿಯದ ತಿಳಿಗೇಡಿಯೇ;

ನೀನ್ ಎಂದ ಅಲ್ಪದಕ್ಷಿಣೆಯ ಧನವು ಎನಿತು=ಇಡೀ ರಾಜ್ಯದ ಸಂಪತ್ತೇ ನಿನ್ನದಾಗಿರುವಾಗ, ನೀನು ಕೇಳುತ್ತಿರುವ ಅಲ್ಪಕಾಣಿಕೆಯ ಸಂಪತ್ತು ಎಶ್ಟು ದೊಡ್ಡದು;

ನಿನ್ನ ಮನದಾರ್ತವ ಎನಿತರೊಳ್ ಅಳಿವುದು=ನಿನ್ನ ಮನದ ದುರಾಶೆಯು ಯಾವ ಪ್ರಮಾಣದ ಸಂಪತ್ತಿನಿಂದ ತಾನೆ ಹಿಂಗುತ್ತದೆ. ನಿನ್ನ ದುರಾಶೆಗೆ ಕೊನೆಯಿಲ್ಲವೇ;

ಅನಿತರ್ಥ ಮೊದಲ ಭಂಡಾರದೊಳಗೆ ಅದೆ=ನಿನಗೆ ನಾನು ಕೊಟ್ಟಿದ್ದ ಕಾಣಿಕೆಯ ಸಂಪತ್ತೆಲ್ಲವೂ ರಾಜ್ಯದ ಬೊಕ್ಕಸದಲ್ಲಿಯೇ ಇದೆ;

ನೀನ್ ಇನ್ನು ಬಳಲಿಸದಿರ್ ಎನಲು=ನೀನು ಇನ್ನು ನಮ್ಮನ್ನು ಇಲ್ಲಸಲ್ಲದ ಕಾರಣಗಳನ್ನು ಒಡ್ಡಿ ಬಳಲಿಸಬೇಡ ಎಂದು ಹರಿಶ್ಚಂದ್ರನು ನುಡಿಯಲು;

ಕೊನೆ ಬೆರಳನು ಅಲುಗಿ ತಲೆದೂಗಿ=ವಿಶ್ವಾಮಿತ್ರ ಮುನಿಯು ಹರಿಶ್ಚಂದ್ರನನ್ನು ಅಣಕ ಮಾಡುವಂತೆ ತನ್ನ ಕಿರು ಬೆರಳನ್ನು ಆಡಿಸುತ್ತ, ತಲೆ ತೂಗುತ್ತ;

ಲೇಸೈ… ನಿನ್ನ ಮನಕೆ ಸರಿಯಿಲ್ಲ=ಒಳ್ಳೆಯದು… ನನ್ನ ಮಾತು ನಿನ್ನ ಮನಸ್ಸಿಗೆ ಸರಿ ಎನಿಸಿಲ್ಲ; ಮಝ—ಭಾಪು—ಭಾಪರರೆ=ಈ ಪದಗಳೆಲ್ಲವೂ ಇತರರ ಸಾದನೆಗಳನ್ನು ಗುರುತಿಸಿ ಕೊಂಡಾಡುವಾಗ ಬಳಸುವ ಮೆಚ್ಚುಗೆಯ ಪದಗಳು. ಈ ಸನ್ನಿವೇಶದಲ್ಲಿ ಅಪಹಾಸ್ಯದ ತಿರುಳಿನಲ್ಲಿ ಬಳಕೆಗೊಂಡಿವೆ;

ಮಝು… ಭಾಪು… ಭಾಪರರೆ… ನೆಟ್ಟನೆ ಕೊಟ್ಟು, ಕಾಳ್ಗೆಡೆದು ನುಡಿವ ನುಡಿ ಹಸನಾಯಿತು ಎಂದು ಘೂರ್ಮಿಸಿ ನಕ್ಕನು=ಹರಿಶ್ಚಂದ್ರನೇ… ಮಝ… ಭಾಪು… ಭಾಪರರೆ… ಮೊದಲು ನನಗೆ ದಕ್ಷಿಣೆಯನ್ನು ನೀನೇ ಕೊಟ್ಟು, ಈಗ ಕೊಡಲಾಗದೆ ಕೆಟ್ಟ ಮಾತುಗಳನ್ನಾಡುತ್ತಿರುವ ನಿನ್ನ ನುಡಿಗಳು ಬಹಳ ಚೆನ್ನಾಗಿವೆ ಎಂದು ಗಹಗಹಿಸಿ ನಕ್ಕನು;

ಕಡೆಗಣಿಸಿ ನಗಲೇಕೆ… ತಂದೆ=ನನ್ನನ್ನು ಕಡೆಗಣಿಸಿ ಅಣಕಿಸುವಂತೆ ಏಕೆ ನಗುತ್ತಿರುವೆ… ತಂದೆ. ನನ್ನ ನಡೆನುಡಿಯಲ್ಲಿ ಅಂತಹ ಇಬ್ಬಂದಿತನವನ್ನು ನೀನೇನು ಕಂಡೆ;

ಧಾರೆಯಮ್ ಕೊಡುವಾಗ ದಕ್ಷಿಣೆಯ ಧನವು ಅದರೊಳ್ ಅದೆಯೆಂದು ನುಡಿದುದುಂಟೇ=ನಿನ್ನ ರಾಜ್ಯವನ್ನು ನನಗೆ ದಾರೆಯೆರೆಯುವಾಗ, ಆ ಸಂಪತ್ತಿನಲ್ಲಿ ನನಗೆ ಕೊಟ್ಟಿದ್ದ ದಕ್ಶಿಣೆಯ ಹಣವೂ ಇದೆ ನೀನು ಹೇಳಿದ್ದೆಯ; ಸುಂಕ=ಒಂದು ಊರಿನಿಂದ ಮತ್ತೊಂದು ಊರಿಗೆ ಸರಕನ್ನು ಸಾಗಿಸುವಾಗ, ಆಡಳಿತ ನಡೆಸುವ ರಾಜ್ಯದ ಬೊಕ್ಕಸಕ್ಕೆ ಕೊಡಬೇಕಾದ ತೆರಿಗೆಯ ಹಣ;

ಹೇರನ್ ಒಪ್ಪಿಸಿದವಂಗೆ ಎಲ್ಲಿಯದು ಸುಂಕ=ಬಂಡಿಯಲ್ಲಿ ತುಂಬಿರುವ ವಸ್ತುಗಳೆಲ್ಲವನ್ನು ವಶಪಡಿಸಿಕೊಂಡಿರುವ ತೆರಿಗೆಯ ಅದಿಕಾರಿಗೆ ಮತ್ತೆ ಸುಂಕವನ್ನೇಕೆ ಕೊಡಬೇಕು;

ಒಡಲ್ ಅಳಿದಡಮ್ ಸಾಲ ಅಳಿಯದು ಎನಲ್=ಸಾಲಗಾರ ಸತ್ತುಹೋದರೂ, ಆತನು ಮಾಡಿದ್ದ ಸಾಲ ಹಾಗೆಯೇ ಉಳಿಯುತ್ತದೆ;

ಈ ಧರಣಿ ಒಡೆತನಮ್ ಹೋದಡೆ ಏನ್ ಸಾಲ ಹೋಹುದೆ=ನಿನ್ನ ಪಾಲಿಗೆ ಈ ರಾಜ್ಯದ ಒಡೆತನ ಈಗ ಇಲ್ಲವಾದರೂ ನೀನು ನನಗೆ ಕೊಡಬೇಕಾದ ಕಾಣಿಕೆಯ ರುಣ ಹೋಗುತ್ತದೆಯೇ;

ಮುನ್ನಿನ ಒಡವೆಯನ್ ಕೊಡು. ಕೊಡದಡೆ ಎಲ್ಲವಮ್ ಮರಳಿ ಕೈಕೊಳು. ಬರಿದೆ ಬಿಡೆನ್ ಎಂದನು=ಈ ಮೊದಲು ನೀನು ನನಗೆ ಕೊಟ್ಟಿದ್ದ ಸಂಪತ್ತನ್ನು ಕೊಡು. ಕೊಡಲಾಗದಿದ್ದರೆ ನಿನ್ನ ರಾಜ್ಯಸಂಪತ್ತೆಲ್ಲವನ್ನೂ ಪುನಹ ನೀನೇ ತೆಗೆದುಕೊ. ನನ್ನ ಪಾಲಿನ ಕಾಣಿಕೆಯ ಸಂಪತ್ತು ಬರದ ಹೊರತು ನಿನ್ನನ್ನು ಬಿಡುವುದಿಲ್ಲ ಎಂದು ವಿಶ್ವಾಮಿತ್ರನು ಹರಿಶ್ಚಂದ್ರನಿಗೆ ದರ್ಮಸಂಕಟವನ್ನು ತಂದಿತ್ತನು;

ಸಡಿಫಡ=ತಿರಸ್ಕಾರ ಮತ್ತು ಕೋಪವನ್ನು ಸೂಚಿಸುವ ಪದ;

ಜತ್ತಕನ ನುಡಿಗೆ ತೆಕ್ಕಿದನೆ… ತೆರಳಿದನೆ… ತಲೆಗುತ್ತಿದನೆ… ಸಡಿಫಡಿಲ್ ಇಲ್ಲ=ಕಪಟಿ ವಿಶ್ವಾಮಿತ್ರ ಮುನಿಯ ಮಾತಿಗೆ ಹರಿಶ್ಚಂದ್ರನು ಹೆದರಿದನೆ… ಹಿಂಜರಿದನೆ… ತಲೆತಗ್ಗಿಸದನೆ… ತಿರಸ್ಕಾರ ಮತ್ತು ಕೋಪದಿಂದ ಉದ್ರೇಕಗೊಂಡನೆ—ಈ ಯಾವುದೇ ಬಗೆಯ ಒಳಮಿಡಿತಗಳಿಗೆ ಒಳಗಾಗಲಿಲ್ಲ. ಶಾಂತಚಿತ್ತನಾಗಿಯೇ ಈ ಸನ್ನಿವೇಶವನ್ನು ಎದುರಿಸಲು ಸಿದ್ದನಾಗುತ್ತಾನೆ;

ಅವಧಿಯಮ್ ಕೊಟ್ಟು=ದಕ್ಶಿಣೆಯ ಸಂಪತ್ತನ್ನು ಹಿಂತಿರುಗಿಸಲು ಕಾಲಾವಕಾಶವನ್ನು ನೀಡಿ;

ಚಿತ್ತವಿತ್ತು ಅನುಸರಿಸಿ ಕೊಂಬಿರಾದೆಡೆ=ಸ್ವಲ್ಪ ಸಮಾದಾನದಿಂದ ನೆರವಾದರೆ;

ತಂದು ನಿರ್ಣಯಿಸಿ ಕೊಡುವೆನ್=ಸಂಪತ್ತನ್ನು ಗಳಿಸಿ ಕೊಡಬೇಕಾದುದನ್ನು ಚುಕ್ತ ಮಾಡುತ್ತೇನೆ;

ಹತ್ತು ದಿನ… . ಆರೆನ್=ಹತ್ತು ದಿನ… ಶಕ್ತನಾಗೆನು;

ಇಪ್ಪತ್ತು ದಿನ… ದೊರಕದು=ಇಪ್ಪತ್ತು ದಿನ… ದೊರಕುವುದಿಲ್ಲ;

ಮೂವತ್ತು ದಿನ… ಆಗದು=ಮೂವತ್ತು ದಿನ… ಸಾಕಾಗುವುದಿಲ್ಲ;

ನಾಲ್ವತ್ತೆಂಟು ದಿನ… ಅಲ್ಲವೆಂದೆನ್ನೆ=ನಲವತ್ತೆಂಟು ದಿನ… ಸಾಕಾಗದು ಎನ್ನಲಾರೆ. ಈ ಅವದಿಯೊಳಗೆ ಕೊಡಬಲ್ಲೆ;

ನೀನ್ ಇತ್ತ ಅವಧಿ ಕಿರಿದು=ಆದರೆ ನೀನು ಕೊಟ್ಟಿರುವ ಕಾಲಾವಕಾಶ ಬಹಳ ಕಡಿಮೆಯಾಗಿದೆ;

ಈವರಿಲ್ಲ=ನಿನಗೆ ಕೊಡಬೇಕಾದಶ್ಟು ದೊಡ್ಡ ಮೊತ್ತದ ಸಂಪತ್ತನ್ನು ನನಗೆ ಕೊಡುವವರು ಯಾರು ಇಲ್ಲ;

ಧನವಮ್ ಗಳಿಸಿ ತಂದು ಈವೆನ್ ಎನಲು ದಿನವಿಲ್ಲ=ಸಂಪತ್ತನ್ನು ದುಡಿದು ಸಂಪಾದಿಸಿ ತಂದುಕೊಡೋಣವೆಂದರೆ ಹೆಚ್ಚು ದಿನಗಳ ಕಾಲಾವಕಾಶವಿಲ್ಲ;

ಒಬ್ಬ ತೆರಕಾರನನ್ ನಿರ್ಣಯಿಸಿ ಕೊಟ್ಟಡೆ ಆತಂಗೆ ಕೊಡುವೆನ್=ಒಬ್ಬ ವಸೂಲಿಕಾರನನ್ನು ನೇಮಿಸಿ ನನ್ನೊಡನೆ ಕಳುಹಿಸಿದರೆ, ಆತನ ಕಯ್ಗೆ ಸಂಪತ್ತನ್ನು ಕೊಡುತ್ತೇನೆ;

ಬಲ್ಲಿದನನ್ ಒಬ್ಬನನ್ ಕೊಡುವೆನ್=ಶಕ್ತನಾದ ಒಬ್ಬನನ್ನು ನಿನ್ನೊಡನೆ ಕಳುಹಿಸುತ್ತೇನೆ;

ಆತಂಗೆ ಧನವೆಲ್ಲವಮ್ ನಿರ್ಣಯಿಸಿ ಕೊಡುವಂತಿರೆ=ಆತನ ಕಯ್ಗೆ ನೀನು ಸಂಪತ್ತನ್ನು ಕೊಡುತ್ತೇನೆ ಎಂದು ಹೇಳಿದ್ದರೂ;

ಎನಗೆ ಇಲ್ಲಿ ಹೊಲ್ಲಹಮ್=ನನಗೆ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲ. ಏನೋ ಕೆಡುಕು ಕಾಣಿಸುತ್ತಿದೆ;

ಸೂರುಳು ಸೂರುಳಿಡು =ನಲವತ್ತೆಂಟು ದಿನಗಳ ಒಳಗಾಗಿಯೇ ಸಂಪತ್ತನ್ನು ಹಿಂತಿರುಗಿಸುತ್ತೇನೆ ಎಂದು ಮತ್ತೊಮ್ಮೆ ಆಣೆಯಿಟ್ಟು ಹೇಳು;

ಕಾಡದೆ ಬೇಗ ಕಳುಹಿದಪೆನ್=ನಿನ್ನನ್ನು ಹೆಚ್ಚು ಕಾಡಿಸದೆ ಬೇಗ ಕಳುಹಿಸುತ್ತೇನೆ;

ಅವಧಿಗೆ ನಿಮ್ಮ ಧನವಮ್ ಈಯದಡೆ=ನೀವು ಕೊಟ್ಟಿರುವ ನಲವತ್ತೆಂಟು ದಿನದೊಳಗೆ ನಿಮಗೆ ಕೊಡಬೇಕಾದ ಸಂಪತ್ತನ್ನು ನಾನು ಕೊಡದಿದ್ದರೆ;

ಶಿವಪೂಜೆಯಮ್ ಮಾಡದವನು=ಶಿವ ಪೂಜೆಯನ್ನು ಮಾಡದವನು;

ಗುರ್ವಾಜ್ಞೆ ಕೆಟ್ಟವನು=ಗುರುವಿನ ಆಜ್ಞೆಗೆ ತಪ್ಪಿನಡೆದವನು;

ಪರಸತಿಗೆ ಅಳುಪುವವನು=ಇತರರ ಹೆಂಡತಿಯೊಡನೆ ಕಾಮದ ನಂಟನ್ನು ಪಡೆಯಲು ಬಯಸುವವನು;

ಪರರ ಅಸುಗೆ ಮುಳಿವವನು=ಬೇರೆಯವರ ಜೀವಕ್ಕೆ ಹಾನಿಯನ್ನುಂಟುಮಾಡುವವನು;

ತಾಯನ್ ಬಗೆಯದವನು=ತಾಯಿಯನ್ನು ಪ್ರೀತಿಯಿಂದ ಸಲಹದವನು;

ತಂದೆಯನ್ ಒಲ್ಲದವನು=ತಂದೆಯನ್ನು ದೂರತಳ್ಳಿದವನು;

ಪರನಿಂದೆಗೆಯ್ವವವನು=ಇತರರನ್ನು ಬಯ್ಯುವವನು;

ಇಟ್ಟಿಗೆಯ ಸುಟ್ಟವನು=ಇಟ್ಟಿಗೆಯನ್ನು ಸುಟ್ಟವನು(ಈ ನುಡಿಗಳಿಗೆ ಸರಿಯಾದ ತಿರುಳು ಏನೆಂಬುದು ತಿಳಿದುಬಂದಿಲ್ಲ);

ಬೇಗೆಯನ್ ಇಕ್ಕುವವನ್=ನಾಡಿನ ಮತ್ತು ಕಾಡಿನ ಸಂಪತ್ತಿಗೆ ಬೆಂಕಿಯನ್ನು ಹಾಕುವವನು;

ಅಧಮರನು ಬೆರಸುವವನು=ಕೆಟ್ಟವರ ಸಹವಾಸವನ್ನು ಮಾಡುವವನು;

ಕುಲಧರ್ಮ ಕೆಟ್ಟವನ್=ತಾನು ಹುಟ್ಟಿದ ಕುಲದ ಸಂಪ್ರದಾಯ ಮತ್ತು ಆಚರಣೆಗಳನ್ನು ಕಡೆಗಣಿಸಿದವನು;

ಇಳಿವ ನರಕದೊಳಗೆ ಇಳಿವೆನ್=ಇಂತಹ ನೀಚರೆಲ್ಲರೂ ಹೋಗುವ ನರಕದೊಳಕ್ಕೆ ಹೋಗುತ್ತೇನೆ;

ಮೇಲಿನ್ನು ನಾನು ಆಳ್ವ ದೇಶದೊಳು ಬೇಡದಂತೆ, ಓಲೈಸದಂತೆ, ಕೃಷಿ ವ್ಯವಸಾಯಮ್ ಮಾಡದೆ, ಆಲಯಮ್ ಕಟ್ಟಿರದೆ, ಅವಧಿಯೊಳು ಹೊನ್ನ ನಿರ್ಣಯಿಸುವುದು ಬೇಗ ಎನಲು=ಈಗ ವಿಶ್ವಾಮಿತ್ರ ಮುನಿಯು ಹರಿಶ್ಚಂದ್ರನಿಗೆ ಮತ್ತೊಂದು ಕರಾರನ್ನು ಹಾಕುತ್ತಾನೆ. ಇನ್ನು ಮುಂದೆ ನನ್ನ ಆಳ್ವಿಕೆಗೆ ಒಳಪಟ್ಟ ದೇಶದಲ್ಲಿ ನೀನು ಸಂಪತ್ತಿಗಾಗಿ ಯಾರನ್ನು ಬೇಡಬಾರದು; ಯಾರ ಸೇವೆಯನ್ನು ಮಾಡಬಾರದು; ಬೇಸಾಯದಲ್ಲಿ ತೊಡಗಬಾರದು; ಮನೆಯನ್ನು ಕಟ್ಟಬಾರದು. ಕೊಟ್ಟಿರುವ ಕಾಲಾವಕಾಶದಲ್ಲಿ ನನ್ನ ಕಾಣಿಕೆಯ ಹೊನ್ನನ್ನು ಬೇಗ ಹಿಂತಿರುಗಿಸು ಎಂದು ಆಜ್ನಾಪಿಸಲು;

ಭೂಲೋಲನ್ ಅದಕೆ ಒಡಂಬಡಲು=ಹರಿಶ್ಚಂದ್ರನು ಅದಕ್ಕೆ ಒಪ್ಪಿಗೆ ನೀಡಲು;

ಸಪ್ತದ್ವೀಪಜಾಲವೆಲ್ಲ ಎನ್ನವು ಅವರಿಂದ ಹೊರಗೆ ಆವುದು ಎಂದಾಲಿಸಲು=ಏಳು ದ್ವೀಪಗಳ ಸಮೂಹದಿಂದ ಕೂಡಿದ ಬೂಮಂಡಲವೆಲ್ಲವೂ ನನ್ನ ಆಳ್ವಿಕೆಯಲ್ಲಿರುವಾಗ, ಅದರಿಂದ ಹೊರಪಟ್ಟ ರಾಜ್ಯ ಯಾವುದು. ಎಲ್ಲಿ ನೀನು ನನಗೆ ಕೊಡಬೇಕಾದ ಸಂಪತ್ತನ್ನು ಸಂಪಾದಿಸುತ್ತೀಯೆ ಎಂದು ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪ್ರಶ್ನಿಸಲು;

ಮುನಿ ಕೇಳ್, ಹೇಮಕೂಟಮ್ ವಾರಣಾಸಿಗಳು ಹೊರಗು=ಮುನಿಯೇ ಕೇಳು… ಹೇಮಕೂಟವೆಂದು ಹೆಸರಾಂತ ಹಂಪಿ ಮತ್ತು ವಾರಣಾಸಿಯೆಂದು ಹೆಸರಾಂತ ಕಾಶಿಯ ಪ್ರಾಂತ್ಯಗಳು ನಿನ್ನ ಆಳ್ವಿಕೆಗೆ ಒಳಪಟ್ಟಿಲ್ಲ.

ಪ್ರಳಯಕ್ಕೆ ಹೊರಗು=ಅಲ್ಲಿ ಪ್ರಳಯ ಉಂಟಾಗುವುದಿಲ್ಲ;

ಕಲಿಕಾಲ ಹೊಗದು=ಕಲಿಯುಗದ ಪ್ರವೇಶವಿಲ್ಲ. ಕ್ರುತಯುಗ–ತ್ರೇತಾಯುಗ-ದ್ವಾಪರಾಯುಗ—ಕಲಿಯುಗ ಎಂಬ ನಾಲ್ಕು ಕಾಲಮಾನಗಳ ಕಲ್ಪನೆಯು ಜನಮನದಲ್ಲಿದೆ. ಒಂದೊಂದು ಯುಗ ಕಳೆದು ಮತ್ತೊಂದು ಯುಗ ಹುಟ್ಟುತ್ತಿದ್ದಂತೆಯೇ ಮಾನವ ಸಮುದಾಯದ ನಡೆನುಡಿಗಳಲ್ಲಿ ಒಳ್ಳೆಯತನದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಬಾವನೆಯು ಜನಮನದಲ್ಲಿದೆ;

ಅಂತಕನ ಸುಳಿವು ಅವರೊಳಿಲ್ಲ=ಸಾವಿನ ದೇವತೆಯಾದ ಯಮನು ಅಲ್ಲಿಗೆ ಬರುವುದಿಲ್ಲ;

ಕಾಮನ ಡಾವರಮ್ ಕೊಳ್ಳದು=ಮಯ್ ಮನವನ್ನು ಕಾಡುವ ಕಾಮದೇವನ ಹಿಂಸೆಗೆ ಅಲ್ಲಿ ಅವಕಾಶವಿಲ್ಲ;

ಉಳಿದ ಮಾಯೆಯ ಮಾತು ಬೇಡ=ಇನ್ನುಳಿದಂತೆ ಮಾನವರ ಮನಸ್ಸನ್ನು ಕೆಟ್ಟದ್ದರ ಕಡೆಗೆ ಎಳೆದೊಯ್ಯುವ ಯಾವದೇ ಬಗೆಯ ವ್ಯಾಮೋಹ/ಕಪಟತನ/ಬ್ರಮೆಯ ಸಂಗತಿಗಳು ಅಲ್ಲಿಲ್ಲ;

ಪಾಪಂಗಳ ಆಟಮ್ ನಾಟವು=ಪಾಪದ ವ್ಯವಹಾರಗಳು ಅಲ್ಲಿ ನಡೆಯುವುದಿಲ್ಲ;

ಅನ್ಯಾಯದ ಕಳೆಗೆ ತೆಕ್ಕವು=ಅನ್ಯಾಯದ ನಡೆನುಡಿಗೆ ಹಿಮ್ಮೆಟ್ಟುವುದಿಲ್ಲ. ಅಂದರೆ ಅನ್ಯಾಯದ ನಡೆನುಡಿಯನ್ನು ಅಡಗಿಸಲಾಗುತ್ತದೆ;

ಮಾರಿ ಮೃತ್ಯುಗಿತ್ಯುಗಳ ಬಲೆಗೆ ಒಳಗಾಗದು=ಕೇಡನ್ನುಂಟುಮಾಡುವ ಸಾವಿನ ಬಲೆಗೆ ಅಲ್ಲಿ ಯಾರೂ ಸಿಲುಕುವುದಿಲ್ಲ;

ಅಧಿಕ ಪುಣ್ಯದ ಬೀಡು=ಹೆಚ್ಚಿನ ಪುಣ್ಯದ ನೆಲೆ;

ಮಂಗಳದ ನಿಳಯ=ಒಳಿತನ್ನುಂಟುಮಾಡುವ ಮಂದಿರ;

ಕಾಶಿ ಹಂಪೆಗಳು ಮುಕ್ತಿಯ ಮೂಲ ಎನಿಸುವವು=ಕಾಶಿ ಮತ್ತು ಹಂಪೆಗಳು ಎಲ್ಲ ರೀತಿಯ ಒಳಿತಿಗೆ ಮೂಲ ನೆಲೆಗಳು ಎಂದು ಹೆಸರನ್ನು ಪಡೆದಿವೆ;

ಮುನಿ ಕೇಳು, ಅವಕೆ ವಿಶ್ವೇಶ್ವರ… ವಿರೂಪಾಕ್ಷರೇ ಒಡೆಯರ್=ಮುನಿಯೇ ಕೇಳು… ಕಾಶಿ ಪಟ್ಟಣಕ್ಕೆ ವಿಶ್ವೇಶ್ವರನು ಒಡೆಯ ಮತ್ತು ಹಂಪೆಯ ಪಟ್ಟಣಕ್ಕೆ ವಿರೂಪಾಕ್ಶನೇ ಒಡೆಯ;

ಅವನಿಯೊಳಗೆ ಅಲ್ಲಿ ನಿನ್ನ ಆಜ್ಞೆಗಳು ಸಲ್ಲ=ದೇವರ ಆಳ್ವಿಕೆಗೆ ಒಳಪಟ್ಟಿರುವ ಕಾಶಿಯಲ್ಲಿ ಮತ್ತು ಹಂಪೆಯಲ್ಲಿ ನಿನ್ನ ರಾಜಾಜ್ನೆಗಳು ನಡೆಯುವುದಿಲ್ಲ;

ಬರಿಯ ವಿಚಾರ ಹೊಲ್ಲ=ತರ್ಕದ ವಿಚಾರಗಳಿಗೆ ಅಲ್ಲಿ ಅವಕಾಶವಿಲ್ಲ;

ಹಂಪೆಗೆ ಹೋಹದು ಎಡೆಯಿಲ್ಲ=ಹಂಪೆಗೆ ಹೋಗುವುದಕ್ಕೆ ಅವಕಾಶವಿಲ್ಲ. ಏಕೆಂದರೆ ಹಂಪೆಯು ಅಯೋದ್ಯಾ ನಗರದಿಂದ ಬಹುದೂರದಲ್ಲಿದೆ;

ಕಾಶೀಪುರವನೆ ಸಾರ್ದು=ಆದ್ದರಿಂದ ಕಾಶಿ ಪಟ್ಟಣಕ್ಕೆ ತೆರಳಿ;

ನಿವಗೆ ಕೊಡುವ ಅರ್ಥಮನ್ ಕೊಡುವೆನ್=ನಿಮಗೆ ಕೊಡಬೇಕಾದ ಸಂಪತ್ತನ್ನು ಹಿಂತಿರುಗಿಸುತ್ತೇನೆ;

ಇನ್ನು ಅಳಲಿಸದೆ ಶಿವಮೂರ್ತಿ ಮುನಿನಾಥ ಕರುಣಿಸು=ಇನ್ನು ಹೆಚ್ಚಿನ ಕಾಟವನ್ನು ಕೊಡದೆ ಶಿವನಂತಿರುವ ಮುನಿಗಳ ಒಡೆಯನಾದ ವಿಶ್ವಾಮಿತ್ರನೇ, ಕರುಣೆಯನ್ನು ತೋರಿ, ನಾನು ಇಲ್ಲಿಂದ ಹೋಗಲು ಅನುಮತಿಯನ್ನು ನೀಡು;

ಹೋಗು ವಸ್ತುವ ಬೇಗ ಮಾಡು ಎಂದಡೆ=ಹೋಗು… ನನಗೆ ಕೊಡಬೇಕಾದ ಸಂಪತ್ತನ್ನು ಬೇಗ ಜತೆಗೂಡಿಸು ಎಂದು ವಿಶ್ವಾಮಿತ್ರನು ನುಡಿಯಲು;

ಆ ಧೈರ್ಯನಿಧಿ ಭೂಪಾಲನು ವಿಶ್ವಾಮಿತ್ರ ಮುನಿಯ ಅಡಿಗೆ ಎರಗಿ ನಡೆದನು=ಎದೆಗುಂದದ ಹರಿಶ್ಚಂದ್ರನು ವಿಶ್ವಾಮಿತ್ರನ ಪಾದಕ್ಕೆ ನಮಿಸಿ, ಸತಿ ಸುತ ಮಂತ್ರಿ ಮತ್ತು ತೆರಕಾರನ ಜತೆಗೂಡಿ ಕಾಶಿಯತ್ತ ನಡೆದನು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *