ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 12 ನೆಯ ಕಂತು – ವಿಶ್ವಾಮಿತ್ರ ಮುನಿಯ ಮತ್ತೊಂದು ಒಳಸಂಚು
– ಸಿ.ಪಿ.ನಾಗರಾಜ.
*** ವಿಶ್ವಾಮಿತ್ರ ಮುನಿಯ ಮತ್ತೊಂದು ಒಳಸಂಚು ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ(ಸಂಪಾದಕರು): ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ರಾಜ್ಯ ಸರ್ವಸ್ವ ದಾನ’ ಎಂಬ ಅಯ್ದನೆಯ ಅಧ್ಯಾಯದ 35 ರಿಂದ 41 ರ ವರೆಗಿನ ಏಳು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ವಿಶ್ವಾಮಿತ್ರ: ಒಬ್ಬ ಮುನಿ. ಈತನು ಕುಶಿಕನೆಂಬ ರಾಜನ ಮಗನಾದ್ದರಿಂದ ಕೌಶಿಕ ಎಂಬ ಮತ್ತೊಂದು ಹೆಸರಿದೆ.
ಹರಿಶ್ಚಂದ್ರ: ಅಯೋದ್ಯೆಯ ರಾಜ.
*** ವಿಶ್ವಾಮಿತ್ರ ಮುನಿಯ ಮತ್ತೊಂದು ಒಳಸಂಚು ***
ಬಿಟ್ಟು ಹೆದರದೆ ಹೋಹ ನೃಪನ ಕಳೆಯಮ್ ಕಂಡು…
ವಿಶ್ವಾಮಿತ್ರ: (ತನ್ನಲ್ಲಿಯೇ) ಕೆಟ್ಟೆನ್. ಅವನಿಯನ್ ಎಯ್ದೆ ಕೊಂಡಡೆ ಅಂತು ಅದನ್ ಒಡಂಬಟ್ಟು ಶಪಥಕ್ಕೆ ಮೆಯ್ಗೊಟ್ಟನ್. ಅವನಲ್ಲಿ ಹುಸಿ ಹುಟ್ಟದು. ಇನ್ನು ಅಕಟ… ನಾನು ನಟ್ಟು ಕೋಟಲೆಗೊಂಡು ಅನಂತಕಾಲಮ್ ತಪಮ್ ಪಟ್ಟ ಪುಣ್ಯವನ್ ಈವೆನ್ ಎಂದೆನ್. ಅದು ಹೋದಡೆ ಮುನಿಗಳ್ ಎನ್ನನ್ ಒಳಗಿಟ್ಟುಕೊಂಬರೆ.
(ಎಂದು ಓರಂತೆ ಮುನಿನಾಥನು ಮರುಗಿದನ್.)
ವಿಶ್ವಾಮಿತ್ರ: (ಮತ್ತೆ ತನ್ನಲ್ಲಿಯೇ ಈ ರೀತಿ ಆಲೋಚಿಸತೊಡಗಿದನು.) ಕುಂದದೆ ವಸಿಷ್ಠನೊಳು ಮಲೆತು ಬೆಂಗೊಟ್ಟು ಉಳ್ಳ ಹೆಂದದ ತಪಃಫಲವ ಹೋಗಾಡಿದಾತನ್… ಈ ಬಂದನ್ ಎಂದು ಎನ್ನನ್ ಎಲ್ಲಾ ಮುನೀಶ್ವರರು ನಗದೆ ಇರರ್.
(ಎಂದು ತನ್ನ ತಾನು ಕೊಂದುಕೊಳ ಬಗೆದು, ಮತ್ತೆ ಎಚ್ಚತ್ತು…)
ಚಿತ್ತದಲಿ ನೊಂದಡೆ ಏನಹುದು. ಇದಕೆ ತಕ್ಕುದಮ್ ಕಾಣಬೇಕು.
(ಎಂದು ಚಿಂತಿಸಿ ನೋಡಿ ಆ ನಿಷ್ಕರುಣನು ಮತ್ತೊಂದು ಉಪಾಯಮಮ್ ಕಂಡನ್..)
ವಿಶ್ವಾಮಿತ್ರ:(ಮತ್ತೆ ತನ್ನಲ್ಲಿಯೇ ಈ ರೀತಿ ಆಲೋಚಿಸತೊಡಗಿದನು) ಪುರದ ವಿಭವದ, ಜನದ ಸಿರಿಯ, ವಿಸ್ತರದ ಕೇರಿಗಳ, ಕೈಗೆಯ್ದ ದುರ್ಗದ ಬಲುಹ, ತನ್ನ ಹಿರಿಯ ಅರಮನೆಯ, ಕೇಳೀವನದ, ಲತಾಗೃಹದ, ದೀಹದ ಖಗ ಮೃಗಾವಳಿಗಳ, ವರ ಚಿತ್ರಶಾಲೆಗಳ, ಧನ ಧಾನ್ಯ ಸಂಚಯದ , ಪರಮ ವನಿತೆಯರ, ನಾನಾ ರತ್ನಕೋಶದ ಉಬ್ಬರದ ಸೊಗಸನ್ ಕಂಡು ಮನ ಮರುಗದೇ… ಪುರಕ್ಕೆ ಒಯ್ದು ನೋಡವೆನ್.
(ಎಂದನು. ಹೋಗುತ್ತಿದ್ದ ಹರಿಶ್ಚಂದ್ರನನ್ನು ಮತ್ತೆ ತನ್ನತ್ತ ಬರುವಂತೆ ಕೂಗಿ ಕರೆದು…)
ವಿಶ್ವಾಮಿತ್ರ: ಧರಣೀಶ, ಒಂದು ಮಾತುಂಟು. ಬಂದು ಹೋಗು.
(ಎಂದು ಕರೆದು)
ನಿನ್ನ ನಂಬಿ ನಾನು ರಾಜ್ಯಮ್ ಗೆಯ್ವ ಭರದೊಳ್ ಅರಿಯದೆ ಹೋದಡೆ… ಎಲೆ ಮರುಳೆ, ನಿನಗೆ ಎಲ್ಲಿಯ ಅರಸುತನವೆಂದು ಮೀರಿ, ಪುರದ ಬಾಗಿಲ ಬಲಿದು, ಗದರಿಕೊಂಡು ಅಬ್ಬರಿಸಿ ಪರಿಜನಮ್ ಕಲುಗುಂಡ ಕರೆಯದೆ ಇರರ್. ಎನ್ನನ್ ಒಯ್ದಿರಿಸಿ ಸರ್ವವನ್ ಒಪ್ಪುಗೊಟ್ಟು ಹೋಗು.
(ಎಂದಡೆ ಅವನಿಪನ್ ಒಡಂಬಟ್ಟನು.)
ವಿಶ್ವಾಮಿತ್ರ: ನಡೆ… ರಥವನ್ ಏರಿಕೊಳ್.
ಹರಿಶ್ಚಂದ್ರ: ಒಲ್ಲೆನ್.
ವಿಶ್ವಾಮಿತ್ರ: ಏಕೊಲ್ಲೆ?
ಹರಿಶ್ಚಂದ್ರ: ಪರರ ಒಡವೆ… ಎನಗೆ ಆಗದು.
ವಿಶ್ವಾಮಿತ್ರ: ಏಕೆ ಆಗದು?… ಆನ್ ಇತ್ತೆನ್.
ಹರಿಶ್ಚಂದ್ರ: ಇತ್ತಡೆ… ಕೊಳಲುಬಾರದು.
ವಿಶ್ವಾಮಿತ್ರ: ಏನ್ ಕಾರಣಮ್ ಬಾರದು.
ಹರಿಶ್ಚಂದ್ರ: ಎಮಗಮ್ ಪ್ರತಿಗ್ರಹ ಸಲ್ಲದು.
ವಿಶ್ವಾಮಿತ್ರ: ಕಡೆಗೆ ನಿನ್ನೊಡವೆ ಅಲ್ಲವೆ?
ಹರಿಶ್ಚಂದ್ರ: ಅಲ್ಲ.
ವಿಶ್ವಾಮಿತ್ರ: ಏಕಲ್ಲ?
ಹರಿಶ್ಚಂದ್ರ: ಕೊಡದ ಮುನ್ನ ಎನ್ನ ಒಡವೆ. ಕೊಟ್ಟ ಬಳಿಕ… ಎನಗೆ ಎಲ್ಲಿಯ ಒಡವೆ.
(ಎಂದು ಅರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ ನುಡಿಗೊಟ್ಟನು.)
ವಿಶ್ವಾಮಿತ್ರ: ಬೇಡಿಕೊಂಬೆನ್ ಭೂಪ.
ಹರಿಶ್ಚಂದ್ರ: ಬೇಡ… ಬೇಡ… ನಾ ಮಾಡಿದುದನ್ ಎನ್ನ ಕಣ್ಣಾರೆ ನೋಡುವೆನು. ನೀನ್ ಆಡಂಬರದೊಳು ರಥವೇರಿ ಚತುರಂಗಬಲವೆರಸಿ ನಡೆ ತಂದೆ. ಎನ್ನ ಕಾಡಬೇಡ. ಅವಧಿ ಕಿರಿದು. ಎಡೆ ದೂರ. ಹೊತ್ತ ಹೋಗಾಡದಿರ್ದಡೆ ತನ್ನನ್ ಒಯ್ದು ಮೇರುವಿನ ತುದಿ ಕೋಡನ್ ಏರಿಸಿದಾತ ನೀನ್.
(ಎಂದು ಮುನಿಪತಿಗೆ ಭೂಭುಜನ್ ಕೈಮುಗಿದನು.)
ವಿಶ್ವಾಮಿತ್ರ: ಅಕ್ಕರಿಂದಲ್ಲ ನೀನ್ ಓಡಿಹೋದಹೆ ಎಂಬ ಕಕ್ಕುಲಿತೆಗೆ ಏರು ಎಂದೆನೈಸೆ.
ಹರಿಶ್ಚಂದ್ರ: ಬಲುಗಾಹನ್ ಇಕ್ಕಯ್ಯ.
ವಿಶ್ವಾಮಿತ್ರ: ಕಾಹಿನವರು ನಿನ್ನವರ್.
ಹರಿಶ್ಚಂದ್ರ: ಅವರು ಬೇಡಯ್ಯ. ನಿನ್ನ ಮಕ್ಕಳಹ ಮುನಿಗಳನ್ ಬೆಸಸು.
(ಎನಲು ಬೆಸಸಿ ಮುನಿ ರಕ್ಕಸನ್ ರಥವೇರಿ ಚತುರಂಗಬಲ ಬೆರಸಿ ಸರ್ವಸಂಭ್ರಮದ ಸಡಗರಮ್ ಮಿಕ್ಕು ಮಿಗಲ್ ಅಯೋಧ್ಯಾಪುರಕೆ ನಡೆದನ್.)
ತಿರುಳು: ವಿಶ್ವಾಮಿತ್ರ ಮುನಿಯ ಮತ್ತೊಂದು ಒಳಸಂಚು
ಕಳೆ=ಹೋಗು;
ಬಿಟ್ಟು ಹೆದರದೆ ಹೋಹ ನೃಪನ ಕಳೆಯಮ್ ಕಂಡು=ರಾಜ್ಯದ ಸಂಪತ್ತೆಲ್ಲವನ್ನೂ ತನಗೆ ದಾರೆಯೆರೆದು, ಕಿಂಚಿತ್ತಾದರೂ ಚಿಂತೆಯಾಗಲಿ ಇಲ್ಲವೇ ಹಿಂಜರಿಕೆಯಾಗಲಿ ಇಲ್ಲದೆ ಹರಿಶ್ಚಂದ್ರನು ಹೋಗುತ್ತಿರುವುದನ್ನು ವಿಶ್ವಾಮಿತ್ರನು ಗಮನಿಸಿ;
ಕೆಟ್ಟೆನ್=ನಾನು ಕೆಟ್ಟೆನಲ್ಲಾ. ಅಂದರೆ ನನಗೆ ಸೋಲುಂಟಾಯಿತು ಎಂದು ವಿಶ್ವಾಮಿತ್ರ ಮುನಿಯು ಗಾಸಿಗೊಂಡನು;
ಅವನಿಯನ್ ಎಯ್ದೆ ಕೊಂಡಡೆ=ರಾಜ್ಯ ಸರ್‍ವಸ್ವವನ್ನು ಸಂಪೂರ್‍ಣವಾಗಿ ಕಿತ್ತುಕೊಂಡರೆ;
ಅಂತು ಅದನ್ ಒಡಂಬಟ್ಟು=ಆ ರೀತಿ ರಾಜ್ಯವನ್ನು ಬಿಟ್ಟುಕೊಡುವುದಕ್ಕೆ ಒಪ್ಪಿಕೊಂಡು;
ಶಪಥಕ್ಕೆ ಮೆಯ್ಗೊಟ್ಟನ್=ಸತ್ಯದ ನಡೆನುಡಿಗೆ ಶರಣಾದನು;
ಅವನಲ್ಲಿ ಹುಸಿ ಹುಟ್ಟದು=ಹರಿಶ್ಚಂದ್ರ ನಡೆನುಡಿಯಲ್ಲಿ ಸುಳ್ಳನ್ನು ಕಾಣಲಾಗದು;
ಅಕಟ… ಇನ್ನು ನಾನು ನಟ್ಟು ಕೋಟಲೆಗೊಂಡು ಅನಂತಕಾಲಮ್ ತಪಮ್ ಪಟ್ಟ ಪುಣ್ಯವನ್ ಈವೆನ್ ಎಂದೆನ್=ಅಯ್ಯೋ… .ಇನ್ನು ನಾನೇನು ಮಾಡಲಿ… ರಾಜ ಹರಿಶ್ಚಂದ್ರನು ಸುಳ್ಳನ್ನಾಡದೆ ಸತ್ಯವಂತನಾಗಿಯೇ ಉಳಿದರೆ, ಆಗ ಅಪಾರವಾದ ಪರಿಶ್ರಮ ಮತ್ತು ತೊಂದರೆಗಳನ್ನು ಎದುರಿಸಿ ಅನಂತಕಾಲ ತಪ್ಪಸ್ಸನ್ನು ಮಾಡಿ, ನಾನು ಗಳಿಸಿರುವ ಪುಣ್ಯವನ್ನೆಲ್ಲಾ ಆತನಿಗೆ ನೀಡುವೆನೆಂದು ದೇವೇಂದ್ರನ ಒಡ್ಡೋಲಗದಲ್ಲಿ ಮುನಿಗಳ ಮುಂದೆ ವಸಿಷ್ಠನಿಗೆ ಮಾತು ಕೊಟ್ಟಿದ್ದೇನೆ;
ಅದು ಹೋದಡೆ ಮುನಿಗಳ್ ಎನ್ನನ್ ಒಳಗಿಟ್ಟುಕೊಂಬರೆ ಎಂದು ಓರಂತೆ ಮುನಿನಾಥನು ಮರುಗಿದನ್=ನಾನು ಗಳಿಸಿರುವ ಪುಣ್ಯ ಹೋದರೆ, ಮುನಿಗಳು ತಮ್ಮ ಸಂಗಡ ನನ್ನನ್ನು ಇಟ್ಟುಕೊಳ್ಳುತ್ತಾರೆಯೇ. ಪುಣ್ಯವನ್ನು ಕಳೆದುಕೊಂಡ ನನ್ನನ್ನು ದೇವಲೋಕದಿಂದ ಹೊರದೂಡುತ್ತಾರೆ;
ಕುಂದದೆ ವಸಿಷ್ಠನೊಳು ಮಲೆತು ಬೆಂಗೊಟ್ಟು… ಉಳ್ಳ ಹೆಂದದ ತಪಃಫಲವ ಹೋಗಾಡಿದಾತನ್… ಈ ಬಂದನ್ ಎಂದು ಎನ್ನನ್ ಎಲ್ಲಾ ಮುನೀಶ್ವರರು ನಗದೆ ಇರರ್ ಎಂದು ತನ್ನ ತಾನು ಕೊಂದುಕೊಳ ಬಗೆದು, ಮತ್ತೆ ಎಚ್ಚತ್ತು=“ನಾನು ದೇವೇಂದ್ರನ ಒಡ್ಡೋಲಗಕ್ಕೆ ಹೋದರೆ, ನನ್ನನ್ನು ನೋಡಿ… ಈ ವಿಶ್ವಾಮಿತ್ರನು ಸುಮ್ಮನಿರಲಾರದೆ ವಸಿಶ್ಟರನ್ನು ಎದುರುಹಾಕಿಕೊಂಡು ಪಣತೊಟ್ಟು, ಈಗ ಸೋತು, ಗಳಿಸಿದ್ದ ಮಹತ್ತರವಾದ ತಪಸ್ಸಿನ ಪಲವನ್ನು ಕಳೆದುಕೊಂಡವನು… ಇಲ್ಲಿಗೆ ಬಂದನು” ಎಂದು ಅಲ್ಲಿರುವ ಎಲ್ಲಾ ಮುನಿಗಳು ಮಾತನಾಡಿಕೊಂಡು ನಗದೆ ಇರುವುದಿಲ್ಲ ಎಂದು ವಿಶ್ವಾಮಿತ್ರನು ತನ್ನ ಮನದಲ್ಲಿಯೇ ಕಲ್ಪಿಸಿಕೊಂಡು ಅಳುಕುತ್ತ, ಇಂತಹ ಅಪಮಾನಕ್ಕೆ ಗುರಿಯಾಗುವುದರ ಬದಲು ಸಾಯುವುದು ಮೇಲೆಂದು ಬಾವಿಸಿ, ತನ್ನನ್ನು ತಾನು ಕೊಂದುಕೊಳ್ಳಲು ಯೋಚಿಸಿ, ಮರುಗಳಿಗೆಯಲ್ಲಿಯೇ ಮಾನಸಿಕ ಕುಗ್ಗುವಿಕೆಯಿಂದ ಚೇತರಿಸಿಕೊಂಡು;
ಚಿತ್ತದಲಿ ನೊಂದಡೆ ಏನಹುದು… ಇದಕೆ ತಕ್ಕುದನ್ ಕಾಣಬೇಕು ಎಂದು ಚಿಂತಿಸಿ ನೋಡಿ… ಆ ನಿಷ್ಕರುಣನು ಮತ್ತೊಂದು ಉಪಾಯಮಮ್ ಕಂಡನ್=ಮನಸ್ಸಿನಲ್ಲಿ ನೋವನ್ನುಂಡರೆ ಏನಾಗುತ್ತದೆ. ಈಗ ನನಗೆ ಉಂಟಾಗಿರುವ ಸೋಲನ್ನು ತಪ್ಪಿಸಿಕೊಳ್ಳಲು ತಕ್ಕ ದಾರಿಯನ್ನು ಹುಡುಕಬೇಕು ಎಂದು ಚಿಂತಿಸಿ ನೋಡಿ, ಆ ಕಡುಕ್ರೂರಿಯಾದ ವಿಶ್ವಾಮಿತ್ರ ಮುನಿಯು ಮತ್ತೊಂದು ಒಳಸಂಚನ್ನು ಹೂಡಲು ನಿಶ್ಚಯಿಸಿದನು;
ಪುರದ ವಿಭವದ=ಅಯೋದ್ಯಾ ನಗರದ ಹಿರಿಮೆಯನ್ನು;
ಜನದ ಸಿರಿಯ=ಪ್ರಜೆಗಳ ಒಲುಮೆಯ ಸಂಪತ್ತನ್ನು;
ವಿಸ್ತರದ ಕೇರಿಗಳ=ವಿಸ್ತಾರವಾದ ಬೀದಿಗಳ;
ಕೈಗೆಯ್ದ ದುರ್ಗದ ಬಲುಹ= ನಿರ್‍ಮಿಸಿರುವ ಬಲವಾದ ಕೋಟೆಯನ್ನು;
ತನ್ನ ಹಿರಿಯ ಅರಮನೆಯ=ಸೂರ್‍ಯವಂಶದ ರಾಜರಿಂದ ತಲೆಮಾರಿನಿಂದ ತಲೆಮಾರಿಗೆ ಬಂದಿರುವ ದೊಡ್ಡ ಅರಮನೆಯನ್ನು;
ಕೇಳೀವನದ=ಕ್ರೀಡೆಗಳನ್ನು ಆಡಲೆಂದು ನಿರ್‍ಮಿಸಿರುವ ಉಪವನ;
ಲತಾಗೃಹದ=ಹೂಬಳ್ಳಿಗಳನ್ನು ಮತ್ತು ಎಲೆಗಳ ಹಂಬುಗಳನ್ನು ಕಂಬಗಳಿಗೆ ನುಲಿದುಕೊಂಡು ಹಬ್ಬುವಂತೆ ಮಾಡಿ ನಿರ್‍ಮಿಸಿರುವ ಮಂಟಪಗಳಿಂದ;
ದೀಹದ ಖಗಮೃಗಾವಳಿಗಳ=ಸಾಕಿದ ಪಕ್ಶಿಪ್ರಾಣಿಗಳ ಹಿಂಡಿನಿಂದ;
ವರ ಚಿತ್ರಶಾಲೆಗಳ=ಕಲಾತ್ಮಕ ಚಿತ್ರಗಳಿಂದ ಜೋಡಿಸಿಟ್ಟಿರುವ ಕೊಟಡಿಗಳ;
ಧನ ಧಾನ್ಯ ಸಂಚಯದ=ಹಣ ಒಡವೆ ವಸ್ತು ದವಸಗಳ ಸಂಗ್ರಹದ;
ಪರಮ ವನಿತೆಯರ=ಉತ್ತಮರಾದ ಹೆಂಗಸರು;
ನಾನಾ ರತ್ನಕೋಶದ=ಬಹು ಬಗೆಯ ಮುತ್ತು ರತ್ನ ವಜ್ರದ ಹರಳುಗಳಿಂದ ತುಂಬಿರುವ ಬೊಕ್ಕಸದ;
ಉಬ್ಬರದ ಸೊಗಸನ್ ಕಂಡು ಮನ ಮರುಗದೇ=ಅಯೋದ್ಯಾನಗರದಲ್ಲಿರುವ ಅತಿಶಯವಾದ ಸಿರಿಸಂಪದಗಳ ಸೊಗಸನ್ನು ಮತ್ತು ಒಲುಮೆಯ ಪ್ರಜೆಗಳನ್ನು ಕಂಡು ಹರಿಶ್ಚಂದ್ರನ ಮನಸ್ಸು ಸೋಲದಿರುವುದೇ;
ಪುರಕ್ಕೆ ಒಯ್ದು ನೋಡವೆನ್ ಎಂದನು=ಅಯೋದ್ಯಾನಗರಕ್ಕೆ ಹರಿಶ್ಚಂದ್ರನನ್ನು ಕರೆದುಕೊಂಡು ಹೋಗಿ, ಮತ್ತೊಮ್ಮೆ ಹರಿಶ್ಚಂದ್ರನ ಸತ್ಯದ ನಿಲುವನ್ನು ಒರೆಹಚ್ಚಿನೋಡುತ್ತೇನೆ ಎಂದು ವಿಶ್ವಾಮಿತ್ರ ಮುನಿಯು ತನ್ನಲ್ಲಿಯೇ ಹೇಳಿಕೊಂಡನು;
ಧರಣೀಶ, ಒಂದು ಮಾತುಂಟು. ಬಂದು ಹೋಗು ಎಂದು ಕರೆದು=ರಾಜನೇ, ಒಂದು ಮಾತುಂಟು… ಬಂದು ಹೋಗು ಎಂದು ತನ್ನ ಬಳಿಗೆ ಕರೆದು;
ನಿನ್ನ ನಂಬಿ ನಾನು ರಾಜ್ಯಮ್ ಗೆಯ್ವ ಭರದೊಳ್ ಅರಿಯದೆ ಹೋದಡೆ=ಕಾಡಿನಲ್ಲಿ ನೀನು ನನಗೆ ರಾಜ್ಯ ಸರ್‍ವಸ್ವವನ್ನು ದಾರೆಯೆರೆದಿರುವೆ. ಇದನ್ನೇ ನಂಬಿಕೊಂಡು ನಾನು ರಾಜ್ಯವನ್ನಾಳಬೇಕೆಂಬ ಆತುರದಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯದೆ, ನೀನಿಲ್ಲದೆ ನಾನೊಬ್ಬನೇ ಅಯೋದ್ಯಾನಗರಕ್ಕೆ ಹೋದರೆ;
ಎಲೆ ಮರುಳೆ, ಪರಿಜನಮ್ ಗದರಿಕೊಂಡು ಅಬ್ಬರಿಸಿ… ನಿನಗೆ ಎಲ್ಲಿಯ ಅರಸುತನವೆಂದು ಮೀರಿ… ಪುರದ ಬಾಗಿಲ ಬಲಿದು… ಕಲುಗುಂಡ ಕರೆಯದೆ ಇರರ್=ಅಯೋದ್ಯೆಯಲ್ಲಿರುವ ನಿನ್ನ ಪ್ರಜೆಗಳು ನನ್ನನ್ನು ಗದರಿಸುತ್ತ, ಅಬ್ಬರಿಸುತ್ತ “ಎಲೆ ತಿಳಿಗೇಡಿಯೇ, ನಿನಗೆ ಎಲ್ಲಿಯ ಅರಸುತನ” ಎಂದು ನನ್ನನ್ನು ಲೆಕ್ಕಿಸದೆ, ಪುರದ ದಿಡ್ಡಿ ಬಾಗಿಲನ್ನು ಮುಚ್ಚಿ, ನನ್ನ ಮೇಲೆ ಕಲ್ಲಿನ ಸುರಿಮಳೆಯನ್ನು ಕರೆಯದೆ ಇರಲಾರರು;
ಎನ್ನನ್ ಒಯ್ದಿರಿಸಿ ಸರ್ವವನ್ ಒಪ್ಪುಗೊಟ್ಟು ಹೋಗು ಎಂದಡೆ=ಆದ್ದರಿಂದ ನನ್ನನ್ನು ಅಯೋದ್ಯಾನಗರಕ್ಕೆ ಕರೆದುಕೊಂಡು ಹೋಗಿ, ಪ್ರಜೆಗಳ ಮುಂದೆಯೇ ರಾಜ ಸರ್‍ವಸ್ವವನ್ನು ನನಗೆ ನೀಡಿ, ಅನಂತರ ನೀನು ಹೋಗು ಎಂದು ವಿಶ್ವಾಮಿತ್ರ ಮುನಿಯು ಹೇಳಿದಾಗ;
ಅವನಿಪನ್ ಒಡಂಬಟ್ಟನು=ಹರಿಶ್ಚಂದ್ರನು ಅಂತೆಯೇ ಆಗಲಿ ಎಂದು ಒಪ್ಪಿಕೊಂಡನು;
ನಡೆ ರಥವನ್ ಏರಿಕೊಳ್=ನಡೆ… ತೇರನ್ನೇರು;
ಒಲ್ಲೆನ್=ಬೇಕಾಗಿಲ್ಲ;
ಏಕೊಲ್ಲೆ=ಏತಕ್ಕೆ ಬೇಡ;
ಪರರ ಒಡವೆ… ಎನಗೆ ಆಗದು=ತೇರು ಬೇರೆಯವರದು. ನಾನು ಅದರಲ್ಲಿ ಹೋಗಬಾರದು;
ಏಕೆ ಆಗದು?… ಆನ್ ಇತ್ತೆನ್=ಏಕೆ ಹೋಗಬಾರದು… .ನಾನೇ ತೇರನ್ನು ಕೊಡುತ್ತಿರುವೆನು;
ಇತ್ತಡೆ ಕೊಳಲುಬಾರದು=ನೀನು ಕೊಟ್ಟರೂ ನಾನು ತೆಗೆದುಕೊಳ್ಳಬಾರದು;
ಏನ್ ಕಾರಣಮ್ ಬಾರದು=ಯಾವ ಕಾರಣದಿಂದ ನೀನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ;
ಪ್ರತಿಗ್ರಹ=ದಾನವನ್ನು ಪಡೆಯುವುದು;
ಎಮಗಮ್ ಪ್ರತಿಗ್ರಹ ಸಲ್ಲದು=ನಾನು ಮತ್ತೊಬ್ಬರಿಂದ ದಾನವಾಗಿ ಏನನ್ನೂ ಪಡೆಯುವಂತಿಲ್ಲ;
ಕಡೆಗೆ ನಿನ್ನೊಡವೆ ಅಲ್ಲವೆ=ಎಶ್ಟೇ ಆದರೂ ಈ ತೇರು ನಿನ್ನದೇ ಅಲ್ಲವೇ;
ಅಲ್ಲ=ನನ್ನದಲ್ಲ;
ಏಕಲ್ಲ=ಏಕೆ ನಿನ್ನದಲ್ಲ;
ಕೊಡದ ಮುನ್ನ ಎನ್ನ ಒಡವೆ. ಕೊಟ್ಟ ಬಳಿಕ… ಎನಗೆ ಎಲ್ಲಿಯ ಒಡವೆ… ಎಂದು ಅರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ ನುಡಿಗೊಟ್ಟನು=“ನಿನಗೆ ದಾರೆಯೆರೆಯುವುದಕ್ಕೆ ಮೊದಲು ಅದು ನನ್ನ ಒಡವೆಯಾಗಿತ್ತು. ಕೊಟ್ಟ ಬಳಿಕ ಅದು ನನ್ನ ಒಡವೆ ಹೇಗಾಗುತ್ತದೆ” ಎಂದು… ಅಬ್ಬಬ್ಬಾ… ದಾನಿಗಳಲ್ಲೇ ಉತ್ತಮನಾದ ಹರಿಶ್ಚಂದ್ರನು ವಿಶ್ವಾಮಿತ್ರ ಮುನಿಗೆ ಪ್ರತ್ಯುತ್ತರವನ್ನು ನೀಡಿದನು;
ಬೇಡಿಕೊಂಬೆನ್ ಭೂಪ=ಬೇಡಿಕೊಳ್ಳುತ್ತಿದ್ದೇನೆ ರಾಜನೇ, ನನ್ನೊಡನೆ ತೇರನ್ನೇರು;
ಬೇಡ… ಬೇಡ…ನಾ ಮಾಡಿದುದನ್ ಎನ್ನ ಕಣ್ಣಾರೆ ನೋಡುವೆನು=ಬೇಡ… ಬೇಡ… ನಾನು ತೇರನ್ನೇರುವುದಿಲ್ಲ, ರಾಜ್ಯ ಸರ್‍ವಸ್ವವನ್ನು ನಿನಗೆ ದಾರೆ ಎರೆದಿರುವ ನಾನು, ನನ್ನ ಕಣ್ಣಾರ ನಿನ್ನ ರಾಜತನವನ್ನು ನೋಡುತ್ತೇನೆ;
ನೀನ್ ಆಡಂಬರದೊಳು ರಥವೇರಿ ಚತುರಂಗಬಲವೆರಸಿ ನಡೆ ತಂದೆ=ನೀನು ಆಡಂಬರದಿಂದ ತೇರನ್ನೇರಿ ಚತುರಂಗ ಬಲದಿಂದ ಕೂಡಿ ಅಯೋದ್ಯಾನಗರದತ್ತ ನಡೆ ತಂದೆ;
ಎನ್ನ ಕಾಡಬೇಡ=ನನ್ನನ್ನು ಪೀಡಿಸಬೇಡ;
ಅವಧಿ ಕಿರಿದು… ಎಡೆ ದೂರ=ನಿನಗೆ ಕೊಡಬೇಕಾಗಿರುವ ಸಂಪತ್ತನ್ನು ನಾನು ಹಿಂತಿರುಗಿಸಲು ಇರುವ ಕಾಲ ಬಹಳ ಕಡಿಮೆ. ಆದರೆ ಆ ಸಂಪತ್ತನ್ನು ಗಳಿಸಲು ನಾನು ಹೋಗಬೇಕಾಗಿರುವ ಕಾಶಿ ಪಟ್ಟಣ ಇಲ್ಲಿಂದ ಬಹಳ ದೂರವಿದೆ;
ಹೊತ್ತ ಹೋಗಾಡದಿರ್ದಡೆ=ಕಾಲವನ್ನು ಸುಮ್ಮನೆ ಹಾಳುಮಾಡದೆ ಕಾಶಿಗೆ ನಾನು ಬೇಗ ಹೋಗಲು ಅವಕಾಶ ನೀಡಿದರೆ;
ತನ್ನನ್ ಒಯ್ದು ಮೇರುವಿನ ತುದಿ ಕೋಡನ್ ಏರಿಸಿದಾತ ನೀನ್ ಎಂದು ಮುನಿಪತಿಗೆ ಭೂಭುಜನ್ ಕೈಮುಗಿದನು=ನನ್ನನ್ನು ಕರೆದುಕೊಂಡು ಮೇರು ಪರ್‍ವತದ ತುತ್ತತುದಿಗೆ ಏರಿಸಿದ ಪುಣ್ಯ ನಿನ್ನದಾಗುತ್ತದೆ ಎಂದು ವಿಶ್ವಾಮಿತ್ರ ಮುನಿಗೆ ಹರಿಶ್ಚಂದ್ರನು ಕಯ್ ಮುಗಿದನು. ಇದೊಂದು ಅಣಕದ ತಿರುಳಿನಲ್ಲಿ ಬಳಕೆಯಾಗಿರುವ ಮಾತು. ಅಂದರೆ ಮತ್ತೆ ಮತ್ತೆ ನೀನು ಹೊಸ ಹೊಸ ಕಾಟವನ್ನು ಕೊಡದೆ, ನನ್ನನ್ನು ಬಿಟ್ಟರೆ ಸಾಕು… ಅದೇ ನನ್ನ ಪಾಲಿಗೆ ನೀನು ಮಾಡುವ ದೊಡ್ಡ ಉಪಕಾರವಾಗುತ್ತದೆ;
ಅಕ್ಕರಿಂದಲ್ಲ ನೀನ್ ಓಡಿಹೋದಹೆ ಎಂಬ ಕಕ್ಕುಲಿತೆಗೆ ಏರು ಎಂದೆನೈಸೆ=ನಿನ್ನ ಮೇಲಣ ಪ್ರೀತಿಯಿಂದ ತೇರನ್ನು ಏರಿ ಅಯೋದ್ಯಾನಗರಕ್ಕೆ ಬಾ ಎಂದು ಕರೆಯಲಿಲ್ಲ. ತೇರನ್ನೇರದಿದ್ದರೆ ನೀನು ಎಲ್ಲಿ ತಪ್ಪಿಸಿಕೊಂಡು ಓಡಿಹೋಗುವೆಯೋ ಎಂಬ ಚಿಂತೆಯಿಂದ ನನ್ನೊಡನೆ ತೇರನ್ನೇರಿ ಬಾ ಎಂದೆನು;
ಬಲುಗಾಹನ್ ಇಕ್ಕಯ್ಯ=ನಾನು ಓಡಿಹೋಗದಂತೆ ತಡೆಯಲು ದೊಡ್ಡ ಪಡೆಯನ್ನು ನೇಮಿಸು;
ಕಾಹಿನವರು ನಿನ್ನವರ್=ಸೇನಾಪಡೆಯವರು ನಿನ್ನವರು;
ಅವರು ಬೇಡಯ್ಯ. ನಿನ್ನ ಮಕ್ಕಳಹ ಮುನಿಗಳನ್ ಬೆಸಸು ಎನಲು=ನನ್ನ ಸೇನಾಪಡೆಯವರು ಬೇಡಯ್ಯ.ನಿನ್ನ ಮಕ್ಕಳಂತಿರುವ ಮುನಿಗಳನ್ನು “ನನ್ನ ಬೆಂಗಾವಲಿಗೆ ನೇಮಿಸು” ಎಂದು ಹರಿಶ್ಚಂದ್ರನು ನುಡಿಯಲು;
ಬೆಸಸಿ=ಹರಿಶ್ಚಂದ್ರನಿಗೆ ಮುನಿಗಳನ್ನೇ ಕಾವಲು ಪಡೆಯಾಗಿ ನೇಮಿಸಿ;
ಮುನಿ ರಕ್ಕಸನ್ ರಥವೇರಿ=ಕ್ರೂರಿಯಾದ ವಿಶ್ವಾಮಿತ್ರ ಮುನಿಯು ತೇರನ್ನೇರಿ;
ಚತುರಂಗಬಲ ಬೆರಸಿ=ತೇರು-ಆನೆ-ಕುದುರೆ-ಕಾಳ್ದಳದ ನಾಲ್ಕು ಬಗೆಯ ಸೇನಾಪಡೆಯ ಜತೆಗೂಡಿ;
ಸರ್ವಸಂಭ್ರಮದ ಸಡಗರಮ್ ಮಿಕ್ಕು ಮಿಗಲ್ ಅಯೋಧ್ಯಾಪುರಕೆ ನಡೆದನ್=ತನ್ನ ಇಚ್ಚೆಯಂತೆಯೇ ಎಲ್ಲವೂ ನಡೆಯುತ್ತಿದೆಯೆಂಬ ಉತ್ಸಾಹ ತುಂಬಿದ ಸಡಗರ ಇಮ್ಮಡಿಗೊಂಡು ವಿಶ್ವಾಮಿತ್ರನು ಅಯೋದ್ಯಾಪುರಕ್ಕೆ ಹೊರಟನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು