ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 15 ನೆಯ ಕಂತು – ಕಾಶಿ ನಗರದಲ್ಲಿ ಹರಿಶ್ಚಂದ್ರ

– ಸಿ.ಪಿ.ನಾಗರಾಜ.

*** ಪ್ರಸಂಗ-15: ಕಾಶಿ ನಗರದಲ್ಲಿ ಹರಿಶ್ಚಂದ್ರ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 12 ರಿಂದ 21 ಪದ್ಯದ ವರೆಗಿನ ಹತ್ತು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು:

ನಕ್ಷತ್ರಕ: ವಿಶ್ವಾಮಿತ್ರ ಮುನಿಯ ಆಪ್ತ ಶಿಷ್ಯ. ಹರಿಶ್ಚಂದ್ರನಿಂದ ಬರಬೇಕಾದ ಸಂಪತ್ತನ್ನು ವಸೂಲು ಮಾಡಲೆಂದು ನೇಮಕಗೊಂಡಿರುವ ತೆರಕಾರ.
ಹರಿಶ್ಚಂದ್ರ: ಅಯೋಧ್ಯಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿದ್ದಾನೆ.
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ.

*** ಪ್ರಸಂಗ-15: ಕಾಶಿ ನಗರದಲ್ಲಿ ಹರಿಶ್ಚಂದ್ರ ***

ಹಲವು ನಗರಂಗಳಮ್… ಹಲವು ಅರಣ್ಯಂಗಳಮ್… ಹಲವು ಗಿರಿಗಳ ಕಳಿದು ನಡೆತರಲು… ಮುಂದೆ ಘುಳುಘುಳು ಧ್ವಾನದಿಂದೆ ಎಸೆವ ಗಂಗಾನದಿ “ನುತ ಕಲಿಮಲಕುಲಾಪಕರ್ಷಣೆ ಆನು… ವಿಪುಳ ಪಾತಕ ಕೋಟಿ ಕೋಟಿಯೆಂಬ ಜಲಜವನ ಚಂದ್ರಕಳೆ ಆನು… ಭವಭಯ ಕುಧರ ಕುಲಿಶಾಭಿಧಾನೆಯು ಆನ್” ಎಂದು ಧರೆಗೆ ಅರುಪಲೆಂದು ಉಲಿವಂತೆ ವಿರಾಜಿಸಿದಳು.

“ಆರಾದಡು ಬಿಡೆ ಕೇಳ್ದಡೆ ಅಘಹರಮ್… ನೆನೆಯೆ ಪುಣ್ಯೌಘ… ನುಡಿದಡೆ ಸರ್ವಸಿದ್ಧಿ… ಕಂಡಡೆ ಜನ್ಮ ನಾಶ… ಪೊಗಳ್ದಡೆ ಸುರೇಂದ್ರತ್ವ… ಸೋಂಕಿದಡೆ ಕಮಲಜ ಪದವಿ… ಮರೆದು ಒಮ್ಮೆ ಕುಡಿತೆಗೊಂಡು ಕುಡಿದನಾದಡೆ ಮುಕ್ತಿ… ಅವಗಾಹ ಇರ್ದನಾದಡೆ ಗಣೇಶತ್ವ… ಸಾರ್ದಡೆ ಈ ಗಂಗೆಯಿಂದೆ ಮಹಾರುದ್ರತ್ವ ಪಡೆವರ್ ಎಂಬ ಮಹಿಮೆಗೆ ವೇದಮತವು ಸಾಕ್ಷಿ. ಅವಗಾಹ ಇರ್ದುಮ್ ಭವ ಭಯಾಂಬುಧಿಯಮ್ ಉತ್ತರಿಸುವಂತೆ ಉತ್ತರಿಸಿ, ಈ ಗಂಗೆಯಿಂದೆ ಕೃತಾರ್ಥತೆಯನ್ ಎಯ್ದುತಿಪ್ಪವರನ್ ಈಕ್ಷಿಸಿ, ಇಂದು ನರಕಿಗಳು ತನ್ನೊಳಗೆ ತೊಳೆದ ದೋಷ ತವಿಲಾದುದು. ಪತಿಹಿತವೆಯಹ ಸುದತಿ, ಅನೃತವನ್ ಅರಿಯದ ಅವನೀಶನ್, ಉಭಯ ಕುಲ ಶುದ್ಧನಹ ಕುವರನ್, ಈ ಸ್ವಾಮಿಹಿತವನಹ ಮಂತ್ರಿಯ ಸೋಂಕು ತನಗೆ ಕೈಸಾರ್ದುದು” ಎಂದು ಗಂಗೆ ಹೆಚ್ಚಿದಳು.

ನಡೆಯೂಡೆ ಮದ್ದು ವಿಷವೊಡಲಿಂಗೆ ಹಿತವೆಂಬ ನುಡಿಯಂತೆ ಸುಖವಿಲ್ಲ ಪುಣ್ಯವುಂಟು ಉಳಿದ ಹಲವೆಡೆಯ ಸುಕ್ಷೇತ್ರಂಗಳೊಳಗೆ ಅವರ ಪರಿಯಲ್ಲ. ಸುಖವುಂಟು ಪುಣ್ಯವುಂಟು ಕುಡಿವ ಪಾದೋದಕಮ್ ಪನ್ನೀರ ಪಾನವಾದಡೆ ಧರಿಸುವ ಪ್ರಸಾದಮ್ ಸುಧಾಪಿಂಡವಾದಡೆ ಬಿಡುವರ್ ಆರ್ ಎನಿಪ್ಪಂತೆ ಜನದ ಇಹಪರಕೆ ಕಾಶೀಕ್ಷೇತ್ರವು ಸೊಗಸು. ಮುಗಿಲ ಬಸುರಮ್ ಬಗಿದು ನೆಗೆದೊಗೆದು ಮೀರಿ ಮೆರೆವ ಅಗಣಿತ ವೃಷಧ್ವಜಂಗಳ; ಸೂರ್ಯಕೋಟಿಯಮ್ ತೆಗೆದವು ಎಂಬಂತೆ ಮಾರ್ಪೊಳೆವ ಹೊಂಗಳಸಂಗಳ; ಎಸೆವ ಶಿವನಿಳಯಂಗಳ ಸೊಗಸಿಗೆ ಎಡೆಯಾಡಿ ಆಡುತ ಪಾಡುತ ಎಯ್ತಪ್ಪ; ಪೊಗಳಿ ಪೊಡಮಡುವ; ಬಲಗೊಂಬ; ನೋಡುವ ನಲಿವ ನಗುವ ನಾನಾ ಜನವನ್ ಒತ್ತರಿಸಿ ನಡೆತಂದು ವಿಶ್ವಪತಿಯನ್ ಕಂಡನು. ನೋಡಿ ಪರಮಾನಂದ ಮೂಡಿ; ಸುಖರಸದೊಳ್ ಓಲಾಡಿ; ಕೀರ್ತಿಸಿ ಹರಸಿ ಹಾಡಿ ಸದ್ಭಕ್ತಿಯಮ್ ಬೇಡಿ; ಮನದೊಳಗೆ ಮಾತಾಡಿ; ನೆರೆ ಬಿನ್ನಹಮ್ ಮಾಡಿ; ಪ್ರಸಾದ ಫಲವ ಸೂಡಿ; ಪರಿಣಾಮವಮ್ ಮಾಡಿ; ದುಃಸ್ಥಿತಿಯ ನೀಗಾಡಿ; ಭವಜಲವನ್ ಈಸಾಡಿ; ಬಲ್ಪಿಮ್ ಮನಮ್ ಮೂಡಿ ಬೀಳ್ಕೊಂಡು, ಸಂತಸದಿ ಉಳಿದ ಲಿಂಗಂಗಳಮ್ ನೋಡುತ ಮರಳಿದನ್. ಗಡಿಗೆಟ್ಟ ಲಿಂಗಂಗಳ ಒಪ್ಪಕ್ಕೆ; ಭೋಗಂಗಳ ಅಡಕಕ್ಕೆ; ಮಂಗಳದ ಮಸಕಕ್ಕೆ; ರಚನೆಗಳ ಸಡಗರಕೆ ಬೆರಗಾಗುತ ಎಲ್ಲಾ ನಿರೋಧಮಮ್ ಮರೆದು ನೋಡುತ್ತ ಅರಸನು ನಡೆಯುತಿರಲ್ ಇದಿರೆದ್ದು ಮಾರಿಯಂದದಿ ಬಂದು…

ನಕ್ಷತ್ರಕ: ಹೊನ್ನನ್ ಕೊಡು. ಇನ್ನು ತಳುವಿದಡೆ ಎನ್ನ ಪತಿ ಎನಗೆ ಕಡುಮುಳಿವನ್.

(ಎಂದು ಜರೆಯುತ್ತ ನಕ್ಷತ್ರಕನ್ ಸೆರಗಮ್ ತುಡುಕಿ ಹಿಡಿದನು. ಕೊಟ್ಟ ಅವಧಿಯಮ್ ನೆನೆದು ನೋಡಿ… ಹವ್ವನೆ ಹಾರಿ…)

ಹರಿಶ್ಚಂದ್ರ: ಮುಟ್ಟಿಬಂದುದು ದಿನಮ್. ಕೈಕೊಂಡ ತೆರದವನ್ ಕಟ್ಟುಗ್ರನ್. ಅಭ್ಯಾಸದವರಿಲ್ಲ. ಚಾಚಲ್ ಅಡಪಿಲ್ಲ. ನಾನ್ ಕುಲಧರ್ಮವ ಬಿಟ್ಟು ತಿರಿವವನಲ್ಲ. ಓಲೈಸಿ ನೆರೆ ಲಜ್ಜೆಗೆಟ್ಟು ಬೇಡುವಡೆ ಇಲ್ಲಿ ದೊರೆಯಿಲ್ಲ. ಕೃಷಿಯಿಂದ ಹುಟ್ಟಿಸುವೆನ್ ಎಂಬಡೆ ಎಡೆಯಿಲ್ಲ. ಇನ್ನು ಏನ್ ಗೆಯ್ವೆನ್.

(ಎಂದು ಅರಸನು ಮರುಗಿದನ್. ಹರಿಶ್ಚಂದ್ರನ ಸಂಕಟವನ್ನು ಕಂಡ ಚಂದ್ರಮತಿಯು…)

ಚಂದ್ರಮತಿ: (ತನ್ನ ಮನದಲ್ಲಿ) ಏನ್ ಗೆಯ್ವೆ. ಚಿಂತಾಗ್ನಿ ಉರಿಯ ಹೊಯ್ಲಿಮ್ ಕರಗಿ ಹೋಗದಿರನ್. ಎಚ್ಚರಿಸಬೇಕು.

(ಎಂದುಕೊಂಡು, ಹರಿಶ್ಚಂದ್ರನಿಗೆ ಒಂದು ಸಲಹೆಯನ್ನು ನೀಡುತ್ತಾಳೆ.)

 ಅವಧಿ ಮೇಗೆ ಎರಡು ಜಾವ. ಇದರೊಳಗೆ ತಿದ್ದುವ ಬುದ್ಧಿಯಮ್ ಕಾಣಬೇಕಲ್ಲದೆ ಮೂಗುವಟ್ಟಿರ್ದಡೆ ಏನ್ ಅಹುದು.

ಹರಿಶ್ಚಂದ್ರ: ಇರದೆ ಬಳಿಕ ಏನ್ ಗೆಯ್ವೆ ಹೇಳ್.

ಚಂದ್ರಮತಿ: ಸಾಲದಲಿ ಪೋದನಿತು ಪೋಗಲಿ. ಎಮ್ಮಿಬ್ಬರಮ್ ಮಾರಿ, ಬಳಿಕ ಉಳಿದುದಮ್ ಕಾಣು. ನಡೆ ನಡೆ.

(ಎಂದಳು. ಆಗ ಹರಿಶ್ಚಂದ್ರನು ಅವಳ ಸಲಹೆಯನ್ನು ನಿರಾಕರಿಸುತ್ತ…)

ಹರಿಶ್ಚಂದ್ರ: ಕಡುನಿರೋಧಂಗೊಳಿಸಿ ದೇಶದಿಮ್ ಪರದೇಶಕೆ ಒಡವರಿಸಿತಲ್ಲದೆ, ಆನ್ ಇರ್ದು ನಿಮ್ಮನ್ ಮಾರುಗೊಡಲಾಪನೇ…

ಚಂದ್ರಮತಿ: ಎಲೆ ಮರುಳೆ, ಸರ್ವಕ್ಕೆ ಮೊದಲು ಸತಿಸುತರು… ತನ್ನ ಒಡಲು ಕಡೆ… ಸತ್ಯಕ್ಕೆ ನೇಮಕ್ಕೆ ಬಂಧನಕ್ಕೆ ಎಡೆಯಲ್ ಅಳುಪಲು ಶಿವ ಮನಮ್ ನೋಳ್ಪನೈ… ಲಜ್ಜೆಗೆಡದೆ ಎಮ್ಮ ಮಾರು… ಮತ್ತೆ ಆದುದಾಗಲಿ.

(ಎಂದಡೆ ಅವನಿಪನ್ ಒಡಂಬಟ್ಟನು.)

ತಿರುಳು: ಕಾಶಿ ನಗರದಲ್ಲಿ ಹರಿಶ್ಚಂದ್ರ

ಹಲವು ನಗರಂಗಳಮ್… ಹಲವು ಅರಣ್ಯಂಗಳಮ್… ಹಲವು ಗಿರಿಗಳ ಕಳಿದು ನಡೆತರಲು=ಹಲವು ನಗರಗಳನ್ನು, ಕಾಡುಗಳನ್ನು ಮತ್ತು ಬೆಟ್ಟಗಳನ್ನು ದಾಟಿಕೊಂಡು ಸತಿ ಸುತ ಮಂತ್ರಿಯ ಜತೆಗೂಡಿ ಹರಿಶ್ಚಂದ್ರನು ಕಾಶಿ ನಗರದತ್ತ ನಡೆದುಬರುತ್ತಿರಲು;

ಮುಂದೆ ಘುಳುಘುಳು ಧ್ವಾನದಿಂದೆ ಎಸೆವ ಗಂಗಾನದಿ=ಮುಂದೆ ಗುಳುಗುಳು ದನಿಯನ್ನು ಮಾಡುತ್ತ ತುಂಬಿ ಹರಿಯುತ್ತ ಕಂಗೊಳಿಸುತ್ತಿರುವ ಗಂಗಾನದಿಯು ಕಂಡುಬಂದಿತು; ಕವಿಯು ಇನ್ನು ಮುಂದಿನ ಕೆಲವು ಪದ್ಯಗಳಲ್ಲಿ ಗಂಗಾ ನದಿಯ ಬಗ್ಗೆ ಇಂಡಿಯಾ ದೇಶದ ಜನಮಾನಸದಲ್ಲಿರುವ ನಂಬಿಕೆಗಳನ್ನು ರೂಪಕದ ನುಡಿಗಳ ಮೂಲಕ ಚಿತ್ರಿಸಿದ್ದಾನೆ;

ನುತ=ಹೊಗಳಿದ/ಪ್ರಸಿದ್ದವಾದ; ಕಲಿ=ಕಲಿಯುಗ; ಮಲ=ಪಾಪ; ಕುಲ+ಅಪಕರ್ಷಣೆ; ಕುಲ=ರಾಶಿ; ಅಪಕರ್ಷಣ=ಕುಗ್ಗಿಸುವುದು; ಆನು=ನಾನು;

ನುತ ಕಲಿಮಲಕುಲಾಪಕರ್ಷಣೆ ಆನು=ಕಲಿಯುಗದಲ್ಲಿ ಜನರ ಪಾಪದ ರಾಶಿಯನ್ನು ನಿವಾರಿಸುವವಳು ನಾನು ಎಂದು ಹೆಸರನ್ನು ಪಡೆದಿದ್ದೇನೆ;

ವಿಪುಳ ಪಾತಕ ಕೋಟಿ ಕೋಟಿಯೆಂಬ ಜಲಜವನ ಚಂದ್ರಕಳೆ ಆನು=ಅತಿ ಹೆಚ್ಚಾದ ಪಾತಕವೆಂಬ ಬಿಳಿಯ ತಾವರೆಯ ವನಕ್ಕೆ ಚಂದ್ರಕಾಂತಿಯು ನಾನು. ಇದೊಂದು ರೂಪಕ. ಚಂದ್ರನು ಮೂಡುತ್ತಿದ್ದಂತೆಯೇ ಬಿಳಿಯ ತಾವರೆಗಳು ಮುದುಡಿಕೊಳ್ಳುತ್ತವೆ. ಅಂತೆಯೇ ಗಂಗೆಯನ್ನು ನೋಡುತ್ತಿದ್ದಂತೆಯೇ ಜನರ ಪಾಪಗಳು ಇಲ್ಲವಾಗುತ್ತವೆ;

ಭವ=ಹುಟ್ಟು; ಕುಧರ=ಬೆಟ್ಟ; ಕುಲಿಶ+ಅಭಿದಾನ; ಕುಲಿಶ=ಇಂದ್ರನ ಬಳಿ ಇರುವ ವಜ್ರಾಯುದ. ಇದು ಬೆಟ್ಟಗಳನ್ನು ನಾಶಮಾಡಬಲ್ಲ ಆಯುದ; ಅಭಿಧಾನ=ಹೆಸರು;

ಭವಭಯ ಕುಧರ ಕುಲಿಶಾಭಿಧಾನೆಯು ಆನ್=ಮತ್ತೆ ಮತ್ತೆ ಮರುಹುಟ್ಟನ್ನು ಪಡೆಯುತ್ತಿರುವ ಮಾನವ ಜೀವಿಗಳ ಹೆದರಿಕೆಯೆಂಬ ಬೆಟ್ಟಗಳ ರೆಕ್ಕೆಗಳನ್ನು ಕತ್ತರಿಸಿಹಾಕುವ ವಜ್ರಾಯುಧವೆಂಬ ಹೆಸರನ್ನು ಪಡೆದವಳು ನಾನು. ಅಂದರೆ ನನ್ನನ್ನು ನೋಡಿದವರಿಗೆ ಮತ್ತು ನನ್ನಲ್ಲಿ ಮಿಂದವರಿಗೆ ಮರುಹುಟ್ಟು ಇರುವುದಿಲ್ಲ. ಅವರೆಲ್ಲರೂ ಹುಟ್ಟು ಸಾವಿನ ಸುಳಿಯಿಂದ ಪಾರಾಗಿ ಮುಕ್ತಿಯನ್ನು ಪಡೆಯುತ್ತಾರೆ;

ಎಂದು ಧರೆಗೆ ಅರುಪಲೆಂದು ಉಲಿವಂತೆ ವಿರಾಜಿಸಿದಳು=ಎಂದ ಜಗತ್ತಿಗೆ ತನ್ನ ಮಹಿಮೆಯನ್ನು ತಿಳಿಸಲೆಂದು ದನಿ ಮಾಡುತ್ತಿರುವಂತೆ ಹರಿಯುತ್ತ ಗಂಗೆಯು ಕಂಗೊಳಿಸಿದಳು;

ಆರಾದಡು ಬಿಡೆ ಕೇಳ್ದಡೆ ಅಘಹರಮ್=ಯಾರೇ ಆದರೂ ಗಂಗೆಯಾದ ನನ್ನ ಮಹಿಮೆಯನ್ನು ಬಿಡದೆ ಕೇಳಿದರೆ, ಅವರು ಮಾಡಿದ್ದ ಪಾಪವೆಲ್ಲವೂ ತೊಲಗುತ್ತದೆ;

ನೆನೆಯೆ ಪುಣ್ಯೌಘ=ನನ್ನನ್ನು ನೆನೆದರೆ ಪುಣ್ಯದ ರಾಶಿ ದೊರೆಯುತ್ತದೆ;

ನುಡಿದಡೆ ಸರ್ವಸಿದ್ಧಿ=ನನ್ನ ಬಗ್ಗೆ ಮಾತನಾಡಿದರೆ ವ್ಯಕ್ತಿಯ ಜೀವನದ ಎಲ್ಲ ಬಯಕೆಗಳು ಈಡೇರುತ್ತವೆ;

ಕಂಡಡೆ ಜನ್ಮ ನಾಶ=ನನ್ನನ್ನು ನೋಡಿದರೆ ಸಾಕು, ಅವರಿಗೆ ಮರುಹುಟ್ಟು ಇರುವುದಿಲ್ಲ. ಹುಟ್ಟು ಸಾವಿನ ಸುಳಿಯಿಂದ ಪಾರಾಗಿ ಶಾಶ್ವತವಾದ ಮುಕ್ತಿಯನ್ನು ಪಡೆಯುತ್ತಾರೆ;

ಪೊಗಳ್ದಡೆ ಸುರೇಂದ್ರತ್ವ=ನನ್ನ ಮಹಿಮೆಯ ಗುಣಗಾನ ಮಾಡಿದರೆ ದೇವೇಂದ್ರ ಪದವಿ ದೊರೆಯುತ್ತದೆ;

ಸೋಂಕಿದಡೆ ಕಮಲಜ ಪದವಿ=ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬ್ರಹ್ಮನ ಪದವಿಯು ದೊರೆಯುತ್ತದೆ;

ಮರೆದು ಒಮ್ಮೆ ಕುಡಿತೆಗೊಂಡು ಕುಡಿದನಾದಡೆ ಮುಕ್ತಿ=ಆಕಸ್ಮಿಕವಾಗಿಯಾದರೂ ಗಂಗಾ ನದಿಯ ನೀರನ್ನು ಒಮ್ಮೆ ಬೊಗಸೆಯಲ್ಲಿ ತೆಗೆದುಕೊಂಡು ಕುಡಿದರೆ ಮುಕ್ತಿಯು ದೊರೆಯುತ್ತದೆ;

ಅವಗಾಹ ಇರ್ದನಾದಡೆ ಗಣೇಶತ್ವ=ಗಂಗಾ ನದಿಯಲ್ಲಿ ಮುಳುಗಿ ಎದ್ದವನಾದರೆ ದೇವಲೋಕದಲ್ಲಿ ದೇವಗಣಗಳಿಗೆ ಒಡೆಯನಾಗುತ್ತಾನೆ;

ಸಾರ್ದಡೆ ಈ ಗಂಗೆಯಿಂದೆ ಮಹಾರುದ್ರತ್ವ ಪಡೆವರ್ ಎಂಬ ಮಹಿಮೆಗೆ ವೇದಮತವು ಸಾಕ್ಷಿ=ವ್ಯಕ್ತಿಯ ಜೀವನವು ಗಂಗಾನದಿಯಲ್ಲಿಯೇ ಕೊನೆಗೊಂಡರೆ ಮಹಾರುದ್ರನ ಪದವಿಯನ್ನು ಪಡೆಯುತ್ತಾರೆ ಎಂದು ವೇದದಲ್ಲಿ ಒಕ್ಕಣೆಗೊಂಡಿರುವ ನುಡಿಗಳೇ ನನ್ನ ಮಹಿಮೆಗೆ ಸಾಕ್ಶಿಯಾಗಿವೆ;

ಭವ ಭಯಾಂಬುಧಿಯಮ್ ಉತ್ತರಿಸುವಂತೆ ಅವಗಾಹ ಇರ್ದುಮ್ ಉತ್ತರಿಸಿ ಈ ಗಂಗೆಯಿಂದೆ ಕೃತಾರ್ಥತೆಯನ್ ಎಯ್ದುತಿಪ್ಪವರನ್ ಈಕ್ಷಿಸಿ=ಹುಟ್ಟು ಸಾವಿನಿಂದ ಕೂಡಿದ ಪ್ರಾಪಂಚಿಕ ಜೀವನದ ಅಂಜಿಕೆಯ ಸಾಗರವನ್ನು ದಾಟುವಂತೆ ನೀರಿನಲ್ಲಿ ಮುಳುಗೇಳುತ್ತ, ಪುಣ್ಯವನ್ನು ಪಡೆಯುತ್ತಿರುವವರನ್ನು ಗಂಗಾದೇವಿಯು ನೋಡುತ್ತ;

ಇಂದು ಪತಿಹಿತವೆಯಹ ಸುದತಿ=ಪತಿಗೆ ಒಳಿತನ್ನುಂಟು ಮಾಡುವ ಹೆಂಡತಿ ಚಂದ್ರಮತಿ;

ಅನೃತವನ್ ಅರಿಯದ ಅವನೀಶನ್=ಸುಳ್ಳನ್ನು ಆಡದ ಹರಿಶ್ಚಂದ್ರ;

ಉಭಯ ಕುಲ ಶುದ್ಧನಹ ಕುವರನ್=ತಾಯಿ ಮತ್ತು ತಂದೆಯ ಮನೆತನದಲ್ಲಿ ಉತ್ತಮ ಪುತ್ರನಾಗಿರುವ ಲೋಹಿತಾಶ್ವ;

ಈ ಸ್ವಾಮಿಹಿತವನಹ ಮಂತ್ರಿಯ ಸೋಂಕು=ತನ್ನ ಒಡೆಯನಾದ ಹರಿಶ್ಚಂದ್ರನ ಒಳಿತನ್ನೇ ಬಯಸುವ ಮಂತ್ರಿಯ ಆಗಮನದಿಂದ;

ಇಂದು ನರಕಿಗಳು ತನ್ನೊಳಗೆ ತೊಳೆದ ದೋಷ ತವಿಲಾದುದು=ಇಂದು ಪಾಪಿಗಳು ತನ್ನೊಳಗೆ ತೊಳದೆ ಪಾಪದ ಕಳಂಕವೆಲ್ಲವೂ ನಾಶವಾಯಿತು;

ತನಗೆ ಕೈಸಾರ್ದುದು ಎಂದು ಗಂಗೆ ಹೆಚ್ಚಿದಳು=ತನಗೆ ಪುಣ್ಯವೆಲ್ಲವೂ ಮತ್ತೆ ದೊರಕಿದಂತಾಯತು ಎಂದು ಗಂಗಾದೇವಿ ಆನಂದವನ್ನು ಪಡುವಂತೆ ತುಂಬಿ ಹರಿದಳು;

ಮದ್ದು=ಔಶದಿ;

ನಡೆಯೂಡೆ ಮದ್ದು ವಿಷವೊಡಲಿಂಗೆ ಹಿತವೆಂಬ ನುಡಿಯಂತೆ ಉಳಿದ ಹಲವೆಡೆಯ ಸುಕ್ಷೇತ್ರಂಗಳೊಳಗೆ ಸುಖವಿಲ್ಲ ಪುಣ್ಯವುಂಟು=ರೋಗಿಯನ್ನು ಗುಣಪಡಿಸಲೆಂದು ಚೆನ್ನಾಗಿ ತಿನ್ನಿಸಿದ ಮದ್ದು ಬಾಯಿಗೆ ವಿಶದಂತೆ ಕಹಿಯಾಗಿದ್ದರೂ ದೇಹಕ್ಕೆ ಒಳಿತು ಎಂಬ ನುಡಿಯಂತೆ, ಕಾಶಿಯನ್ನು ಹೊರತುಪಡಿಸಿ ಉಳಿದ ಹಲವು ದೇವತಾ ನೆಲೆಗಳಲ್ಲಿ ದೇಹಕ್ಕೆ ಸುಕ ದೊರಕುವುದಿಲ್ಲ, ಆದರೆ ಜೀವಕ್ಕೆ ಪುಣ್ಯ ಮಾತ್ರ ದೊರಕುತ್ತದೆ;

ಅವರ ಪರಿಯಲ್ಲ=ಆದರೆ ಪುಣ್ಯಕ್ಶೇತ್ರವಾದ ಕಾಶಿಯು ಬೇರೆ ಕ್ಶೇತ್ರಗಳ ಹಾಗಲ್ಲ;

ಸುಖವುಂಟು ಪುಣ್ಯವುಂಟು=ಈ ಕಾಶಿಯಲ್ಲಿ ಸುಕವೂ ಇದೆ; ಪುಣ್ಯವೂ ಇದೆ;

ಪಾದೋದಕ=ಪಾದವನ್ನು ತೊಳೆದ ನೀರು;

ಪನ್ನೀರು=ಪರಿಮಳದಿಂದ ಕೂಡಿದ ರುಚಿಕರವಾದ ನೀರು;

ಕುಡಿವ ಪಾದೋದಕಮ್ ಪನ್ನೀರ ಪಾನವಾದಡೆ=ಇಲ್ಲಿ ಕುಡಿಯುವ ಪಾದೋದಕವು ಪನ್ನೀರ ಪಾನೀಯವಾದರೆ;

ಧರಿಸುವ ಪ್ರಸಾದಮ್ ಸುಧಾಪಿಂಡವಾದಡೆ=ತೆಗೆದುಕೊಳ್ಳುವ ಪ್ರಸಾದವು ಅಮ್ರುತದ ಉಂಡೆಯಾದರೆ;

ಬಿಡುವರ್ ಆರ್ ಎನಿಪ್ಪಂತೆ=ಯಾರು ತಾನೆ ಬಿಡುತ್ತಾರೆ ಎನ್ನುವಂತೆ;

ಜನದ ಇಹಪರಕೆ ಕಾಶೀಕ್ಷೇತ್ರವು ಸೊಗಸು=ಜನರ ಇಹಲೋಕದ ನೆಮ್ಮದಿಯ ಬದುಕಿಗೆ ಮತ್ತು ಪರಲೋಕದ ಮುಕ್ತಿಗೆ ಕಾಶಿ ನಗರವು ಪವಿತ್ರವಾದ ನೆಲೆಯಾಗಿದೆ;

ವೃಷಧ್ವಜ=ಶಿವನ ವಾಹನವಾದ ನಂದಿಯ ಚಿತ್ರವಿರುವ ಬಾವುಟ;

ಮುಗಿಲ ಬಸುರಮ್ ಬಗಿದು ನೆಗೆದೊಗೆದು ಮೀರಿ ಮೆರೆವ ಅಗಣಿತ ವೃಷಧ್ವಜಂಗಳ=ಆಕಾಶದ ಎತ್ತರಕ್ಕೆ ನೆಗೆದು ಹಾರುತ್ತ ಕಂಗೊಳಿಸುತ್ತಿರುವ ಲೆಕ್ಕವಿಲ್ಲದಶ್ಟು ನಂದಿ ಚಿತ್ರದ ಬಾವುಟಗಳ;

ಸೂರ್ಯಕೋಟಿಯಮ್ ತೆಗೆದವು ಎಂಬಂತೆ ಮಾರ್ಪೊಳೆವ ಹೊಂಗಳಸಂಗಳ=ಕೋಟಿ ಸೂರ್ಯರ ಪ್ರಜ್ವಲಿಸುವ ಬೆಳಕನ್ನು ಹೊರಹೊಮ್ಮಿಸುತ್ತಿದ್ದೇವೆ ಎಂಬಂತೆ ಪ್ರತಿಪಲಿಸುತ್ತಿರುವ ಗುಡಿಗೋಪುರಗಳ ಮೇಲಿನ ತುದಿಯಲ್ಲಿರುವ ಚಿನ್ನದ ಕಳಸಗಳ;

ಎಸೆವ ಶಿವನಿಳಯಂಗಳ ಸೊಗಸಿಗೆ ಎಡೆಯಾಡಿ ಆಡುತ ಪಾಡುತ ಎಯ್ತಪ್ಪ=ಕಂಗೊಳಿಸುತ್ತಿರುವ ಶಿವ ದೇವಾಲಯಗಳ ಅಂದಚೆಂದಕ್ಕೆ ಮನಸೋತು, ದೇಗುಲಗಳೆಲ್ಲವನ್ನೂ ಸುತ್ತಾಡಿ, ದೇವರ ನಾಮ ಸ್ಮರಣೆಯನ್ನು ಮಾಡುತ್ತ, ದೇವರ ಮಹಿಮೆಯನ್ನು ಕೊಂಡಾಡುವ ಹಾಡುಗಳನ್ನು ಹಾಡುತ್ತ ಬರುತ್ತಿರುವ;

ಪೊಗಳಿ ಪೊಡಮಡುವ=ದೇವರ ಮಹಿಮೆಯನ್ನು ಹೊಗಳಿ ನಮಸ್ಕರಿಸುವ;

ಬಲಗೊಂಬ=ದೇಗುಲದ ಒಳ ಪ್ರಾಂಗಣದಲ್ಲಿ ಬಲಗಡೆಯಿಂದ ಸುತ್ತು ಹಾಕುವ;

ನೋಡುವ ನಲಿವ ನಗುವ ನಾನಾ ಜನವನ್ ಒತ್ತರಿಸಿ ನಡೆತಂದು ವಿಶ್ವಪತಿಯನ್ ಕಂಡನು=ದೇವರನ್ನು ನೋಡಿ ಕುಣಿದಾಡುವ ಆನಂದಿಸುವ ಬಹುಬಗೆಯ ಜನರ ಗುಂಪಿನ ನಡುವೆ ಹರಿಶ್ಚಂದ್ರನು ಜಾಗವನ್ನು ಮಾಡಿಕೊಂಡು ಮುಂದೆ ಬಂದು ವಿಶ್ವದ ಒಡೆಯನಾದ ವಿಶ್ವಾನಾತ ದೇವರ ವಿಗ್ರಹವನ್ನು ನೋಡಿದನು;

ನೋಡಿ ಪರಮಾನಂದ ಮೂಡಿ=ದೇವರನ್ನು ನೋಡುತ್ತಿದ್ದಂತೆಯೇ ಹೆಚ್ಚಿನ ಆನಂದ ಉಂಟಾಗಿ;

ಸುಖರಸದೊಳ್ ಓಲಾಡಿ=ಒಲವು ನಲಿವು ನೆಮ್ಮದಿಯ ಬಾವಗಳಿಂದ ಹಿಗ್ಗಿ;

ಕೀರ್ತಿಸಿ ಹರಸಿ ಹಾಡಿ=ದೇವರ ಮಹಿಮೆಯನ್ನು ಗುಣಗಾನ ಮಾಡುತ್ತ, ಹರಕೆಯನ್ನು ಕಟ್ಟಿಕೊಂಡು ಹಾಡುತ್ತ;

ಸದ್ಭಕ್ತಿಯಮ್ ಬೇಡಿ=ಒಳ್ಳೆಯ ನಡೆನುಡಿಯಿಂದ ಬಾಳುವಂತಹ ಮನಸ್ಸನ್ನು ನೀಡುವಂತೆ ದೇವರಲ್ಲಿ ಮೊರೆಯಿಟ್ಟು;

ಮನದೊಳಗೆ ಮಾತಾಡಿ=ಮನದೊಳಗೆ ತನ್ನ ಬದುಕಿನ ಆಗುಹೋಗುಗಳೆಲ್ಲವನ್ನೂ ದೇವರೊಂದಿಗೆ ಹೇಳಿಕೊಳ್ಳುತ್ತ;

ನೆರೆ ಬಿನ್ನಹಮ್ ಮಾಡಿ=ಈಗ ವಿಶ್ವಾಮಿತ್ರನ ರುಣವನ್ನು ತೀರಿಸಲು ನೆರವಾಗುವಂತೆ ಕೋರಿಕೊಂಡು;

ಪ್ರಸಾದ ಫಲವ ಸೂಡಿ=ಪೂಜೆಯ ನಂತರ ಪ್ರಸಾದವಾಗಿ ನೀಡಿದ ಹೂವನ್ನು ತಲೆಯಲ್ಲಿ ಮುಡಿದುಕೊಂಡು;

ಪರಿಣಾಮವಮ್ ಮಾಡಿ=ಬಗ್ಗಿ ನಮಸ್ಕರಿಸಿ;

ದುಃಸ್ಥಿತಿಯ ನೀಗಾಡಿ=ತನಗೆ ಬಂದೊದಗಿರುವ ಸಂಕಟವನ್ನೆಲ್ಲಾ ಮಯ್ ಮನದಿಂದ ತೆಗೆದುಹಾಕಿ;

ಭವಜಲವನ್ ಈಸಾಡಿ… ಬಲ್ಪಿಮ್ ಮನಮ್ ಮೂಡಿ ಬೀಳ್ಕೊಂಡು=ಹುಟ್ಟಿನ ಸಾಗರವನ್ನು ಈಜಾಡಿ; ಅಂದರೆ ಹುಟ್ಟಿದ ನಂತರ ಬರುವ ಎಲ್ಲ ಬಗೆಯ ಸಂಕಟವನ್ನು ಎದುರಿಸುವಂತಹ ಶಕ್ತಿಯು ಮನದಲ್ಲಿ ಮೂಡಲು, ದೇವ ಸನ್ನಿದಿಯಿಂದ ಹೊರಟು;

ಸಂತಸದಿ ಉಳಿದ ಲಿಂಗಂಗಳಮ್ ನೋಡುತ ಮರಳಿದನ್=ಆನಂದದಿಂದ ಬೇರೆ ಲಿಂಗಗಳೆಲ್ಲವನ್ನೂ ನೋಡುತ್ತ ದೇಗುಲದಿಂದ ಹೊರಬಂದನು;

ಗಡಿಗೆಟ್ಟ ಲಿಂಗಂಗಳ ಒಪ್ಪಕ್ಕೆ=ಕಾಶಿ ನಗರದ ಎಲ್ಲೆಡೆಯಲ್ಲಿಯೂ ಕಂಡುಬರುತ್ತಿರುವ ಲಿಂಗಗಳ ಸೊಗಸಿಗೆ;

ಭೋಗಂಗಳ ಅಡಕಕ್ಕೆ=ದೇವರ ವಿಗ್ರಹವಾದ ಲಿಂಗಗಳಿಗೆ ಮಾಡುತ್ತಿರುವ ಬಹುಬಗೆ ಪೂಜೆಗಳ ಆಚರಣೆಗೆ;

ಮಂಗಳದ ಮಸಕಕ್ಕೆ=ಜಗತ್ತಿಗೆ ಮಂಗಳವನ್ನುಂಟುಮಾಡುವ ಸಡಗರಕ್ಕೆ;

ರಚನೆಗಳ ಸಡಗರಕೆ ಬೆರಗಾಗುತ=ಪೂಜೆಯ ಆಚರಣೆಗಳ ಸೊಗಸಿಗೆ ಅಚ್ಚರಿಯನ್ನು ಪಡುತ್ತ;

ಎಲ್ಲಾ ನಿರೋಧಮಮ್ ಮರೆದು ನೋಡುತ್ತ ಅರಸನು ನಡೆಯುತಿರಲ್=ತನ್ನ ಬದುಕಿನಲ್ಲಿ ನಡೆದ ಎಲ್ಲಾ ತೊಂದರೆಯನ್ನು ಮರೆತವನಾಗಿ, ದೇವರ ಪೂಜೆಯ ಅಂದಚೆಂದದ ಆಚರಣೆಗಳನ್ನು ಮತ್ತು ಜನರ ಉತ್ಸಾಹವನ್ನು ಹರಿಶ್ಚಂದ್ರನು ನೋಡುತ್ತ, ಕಾಶಿ ನಗರದ ಬೀದಿಯಲ್ಲಿ ನಡೆದು ಬರುತ್ತಿರಲು;

ಮಾರಿಯಂದದಿ ಇದಿರೆದ್ದು ಬಂದು=ಒಲಿದರೆ ಒಳಿತನ್ನು ಮಾಡುವ; ಮುನಿದರೆ ಸಾವುನೋವನ್ನುಂಟುಮಾಡುವ ದೇವತೆಯೆಂದು ಜನರು ನಂಬಿರುವ ಮಾರಿದೇವತೆಯಂತೆ ನಕ್ಶತ್ರಕನು ಹರಿಶ್ಚಂದ್ರನಿಗೆ ಅಡ್ಡಲಾಗಿ ಎದುರುಬಂದು ನಿಂತು;

ಹೊನ್ನನ್ ಕೊಡು=ಗುರುಗಳಾದ ವಿಶ್ವಾಮಿತ್ರರಿಗೆ ಕೊಡಬೇಕಾದ ಸಂಪತ್ತನ್ನು ಕೊಡು;

ಇನ್ನು ತಳುವಿದಡೆ ಎನ್ನ ಪತಿ ಎನಗೆ ಕಡುಮುಳಿವನ್ ಎಂದು ಜರೆಯುತ್ತ ನಕ್ಷತ್ರಕನ್ ಸೆರಗಮ್ ತುಡುಕಿ ಹಿಡಿದನು=ಇನ್ನು ತಡಮಾಡಿದರೆ ನನ್ನ ಒಡೆಯನಾದ ವಿಶ್ವಾಮಿತ್ರನು ನನ್ನ ಬಗ್ಗೆ ತುಂಬಾ ಕೋಪಿಸಿಕೊಳ್ಳುತ್ತಾನೆ ಎಂದು ನಿಂದಿಸುತ್ತ, ನಕ್ಶತ್ರಕನು ಹರಿಶ್ಚಂದ್ರನ ತೊಟ್ಟಿದ್ದ ಶಲ್ಯದ ಅಂಚನ್ನು ತಟ್ಟನೆ ಹಿಡಿದುಕೊಂಡನು;

ಪವ್ವನೆ ಪಾರು=ಇದ್ದಕ್ಕಿದ್ದಂತೆ ಹಾರು/ಹಟಾತ್ತನೆ ಮೇಲಕ್ಕೆ ನೆಗೆ;

ಕೊಟ್ಟ ಅವಧಿಯಮ್ ನೆನೆದು ನೋಡಿ… ಹವ್ವನೆ ಹಾರಿ=ರುಣವನ್ನು ಹಿಂತಿರುಗಿಸಲು ಕೊಟ್ಟಿದ್ದ ನಲವತ್ತು ದಿನದ ಕಾಲಾವಕಾಶವನ್ನು ನೆನಪಿಸಿಕೊಂಡು… ಬೆಚ್ಚಿಬಿದ್ದು;

ಮುಟ್ಟಿಬಂದುದು ದಿನಮ್=ಕೊಟ್ಟಿದ್ದ ಗಡುವು ದಿನಗಳು ಮುಗಿಯುತ್ತ ಬಂದಿವೆ;

ಕೈಕೊಂಡ ತೆರದವನ್ ಕಟ್ಟುಗ್ರನ್=ವಸೂಲು ಮಾಡಲು ಬಂದಿರುವ ತೆರಕಾರನು ಮಹಾಕ್ರೂರಿ;

ಅಭ್ಯಾಸದವರಿಲ್ಲ=ಈ ಕಾಶಿ ನಗರದಲ್ಲಿ ನನಗೆ ಪರಿಚಿತರಾದವರು ಯಾರೂ ಇಲ್ಲ;

ಚಾಚಲ್ ಅಡಪಿಲ್ಲ=ಒತ್ತೆಯಿಟ್ಟು ಹಣವನ್ನು ಪಡೆಯೋಣವೆಂದರೆ, ಒತ್ತೆಯಿಡಲು ಬೆಲೆಬಾಳುವ ಯಾವುದೇ ಒಡವೆ ವಸ್ತುಗಳು ನನ್ನಲ್ಲಿಲ್ಲ;

ನಾನ್ ಕುಲಧರ್ಮವ ಬಿಟ್ಟು ತಿರಿವವನಲ್ಲ=ಸೂರ್‍ಯವಂಶದ ಮನೆತನದಲ್ಲಿ ಹುಟ್ಟಿ ಬೆಳೆದಿರುವ ನಾನು, ನನ್ನ ಕುಲದ ಆಚಾರ ಮತ್ತು ಸಂಪ್ರದಾಯಗಳನ್ನು ಬಿಟ್ಟು, ಇತರರ ಮುಂದೆ ಕಯ್ ಒಡ್ಡಿ ಬೇಡುವವನಲ್ಲ;

ಓಲೈಸಿ ನೆರೆ ಲಜ್ಜೆಗೆಟ್ಟು ಬೇಡುವಡೆ ಇಲ್ಲಿ ದೊರೆಯಿಲ್ಲ=ಮನವೊಲಿಸಿಕೊಂಡು ಸಂಪೂರ್‍ಣವಾಗಿ ನಾಚಿಕೆಯನ್ನು ತೊರೆದು ಬೇಡೋಣವೆಂದರೆ ಕಾಶಿ ನಗರವನ್ನು ಯಾವೊಬ್ಬ ದೊರೆ ಆಳುತ್ತಿಲ್ಲ. ಇಲ್ಲಿ ಕಾಶಿನಾತನಾದ ವಿಶ್ವೇಶ್ವರ ಸ್ವಾಮಿಯೇ ರಾಜ;

ಕೃಷಿಯಿಂದ ಹುಟ್ಟಿಸುವೆನ್ ಎಂಬಡೆ ಎಡೆಯಿಲ್ಲ=ಬೇಸಾಯವನ್ನು ಮಾಡಿ ಸಂಪತ್ತನ್ನು ಗಳಿಸೋಣವೆಂದರೆ ಅದಕ್ಕೆ ಕಾಲಾವಕಾಶವಿಲ್ಲ;

ಇನ್ನು ಏನ್ ಗೆಯ್ವೆನ್ ಎಂದು ಅರಸನು ಮರುಗಿದನ್=ಇನ್ನು ಏನು ಮಾಡಲಿ ಎಂದು ಹರಿಶ್ಚಂದ್ರನು ತಳಮಳಿಸಿದನು;

ಏನ್ ಗೆಯ್ವೆ. ಚಿಂತಾಗ್ನಿ ಉರಿಯ ಹೊಯ್ಲಿಮ್ ಕರಗಿ ಹೋಗದಿರನ್. ಎಚ್ಚರಿಸಬೇಕು=ಹರಿಶ್ಚಂದ್ರನ ತಳಮಳವನ್ನು ಕಂಡು ಮನನೊಂದ ಚಂದ್ರಮತಿಯು ತನ್ನಲ್ಲಿಯೇ ಈ ರೀತಿ ಆಲೋಚಿಸುತ್ತಾಳೆ. “ಈಗ ನಾನೇನು ಮಾಡಲಿ. ಚಿಂತೆಯೆಂಬ ಬೆಂಕಿಯ ಉರಿಯ ಹೊಡೆತಕ್ಕೆ ಸಿಲುಕಿ ನನ್ನ ಗಂಡ ಹರಿಶ್ಚಂದ್ರನು ನಾಶವಾಗುತ್ತಾನೆ. ಎಂತಾದರೂ ಮಾಡಿ ನಾನು ನನ್ನ ಗಂಡನನ್ನು ಉಳಿಸಿಕೊಳ್ಳಲೇಬೇಕು.” ಎಂದು ನಿಶ್ಚಯಿಸಿಕೊಂಡು ಹರಿಶ್ಚಂದ್ರನಿಗೆ ಒಂದು ಸಲಹೆಯನ್ನು ನೀಡುತ್ತಾಳೆ;

ಜಾವ=ದಿನದ 24 ಗಂಟೆಯಲ್ಲಿ 3 ಗಂಟೆಯ ಅವದಿಯನ್ನು ಒಂದು ಜಾವ ಎಂದು ಗುರುತಿಸುತ್ತಾರೆ;

ಅವಧಿ ಮೇಗೆ ಎರಡು ಜಾವ=ಕೊಟ್ಟಿರುವ ನಲವತ್ತು ದಿನಗಳ ಕಾಲಾವಕಾಶದಲ್ಲಿ ಇನ್ನು ಎರಡು ಜಾವಗಳು ಉಳಿದಿವೆ;

ಇದರೊಳಗೆ ತಿದ್ದುವ ಬುದ್ಧಿಯಮ್ ಕಾಣಬೇಕಲ್ಲದೆ ಮೂಗುವಟ್ಟಿರ್ದಡೆ ಏನ್ ಅಹುದು=ಈ ಅವದಿಯೊಳಗೆ ಕೊಡಬೇಕಾಗಿರುವ ಸಂಪತ್ತನ್ನು ಹಿಂತಿರುಗಿಸುವ ದಾರಿಯನ್ನು ಕಾಣಬೇಕಲ್ಲದೆ, ಮೂಕವಾಗಿದ್ದರೆ ಏನಾಗುತ್ತದೆ;

ಇರದೆ ಬಳಿಕ ಏನ್ ಗೆಯ್ವೆ ಹೇಳ್=ಮೂಕನಾಗದೆ ಈಗ ಇನ್ನೇನು ಮಾಡಲಿ ಹೇಳು ಎಂದು ಹರಿಶ್ಚಂದ್ರನು ಚಂದ್ರಮತಿಯನ್ನು ಮರುಪ್ರಶ್ನಿಸುತ್ತಾನೆ;

ಸಾಲದಲಿ ಪೋದನಿತು ಪೋಗಲಿ. ಎಮ್ಮಿಬ್ಬರಮ್ ಮಾರಿ, ಬಳಿಕ ಉಳಿದುದಮ್ ಕಾಣು. ನಡೆ ನಡೆ ಎಂದಳು=ಸಾಲದ ಮೊತ್ತದಲ್ಲಿ ಕಡಿಮೆಯಾದಶ್ಟು ಆಗಲಿ. ನನ್ನನ್ನು ಮತ್ತು ಲೋಹಿತಾಶ್ವನನ್ನು ಮಾರಿ, ಇನ್ನುಳಿದ ಸಂಪತ್ತಿಗೆ ಬೇರೊಂದು ಪ್ರಯತ್ನವನ್ನು ಮಾಡು. ನಡೆ… ನಡೆ… ಬೇಗ ನಮ್ಮನ್ನು ಮಾರು ಎಂದು ಚಂದ್ರಮತಿಯು ಸಲಹೆಯನ್ನು ನೀಡಿದಳು;

ಕಡುನಿರೋಧಂಗೊಳಿಸಿ ದೇಶದಿಮ್ ಪರದೇಶಕೆ ಒಡವರಿಸಿತಲ್ಲದೆ, ಆನ್ ಇರ್ದು ನಿಮ್ಮನ್ ಮಾರುಗೊಡಲಾಪನೇ=ಆಗ ಹರಿಶ್ಚಂದ್ರನು ಅವಳ ಸಲಹೆಯನ್ನು ನಿರಾಕರಿಸುತ್ತ “ನಿಮ್ಮೆಲ್ಲರನ್ನೂ ಅಪಾರವಾದ ಸಂಕಟಕ್ಕೆ ಗುರಿಮಾಡಿ, ದೇಶವನ್ನು ಬಿಟ್ಟು ಪರದೇಶಕ್ಕೆ ನನ್ನೊಡನೆ ಬರುವಂತೆ ಮಾಡಿದ್ದಲ್ಲದೆ, ನಾನು ಜೀವಂತವಾಗಿರುವಾಗಲೇ ನಿಮ್ಮನ್ನು ಮಾರುವುದಕ್ಕೆ ಒಪ್ಪುತ್ತೇನೆಯೇ” ಎಂದನು;

ಎಲೆ ಮರುಳೆ, ಸರ್ವಕ್ಕೆ ಮೊದಲು ಸತಿಸುತರು… ತನ್ನ ಒಡಲು ಕಡೆ=ನೀನು ಸರಿಯಾಗಿ ಆಲೋಚನೆ ಮಾಡದೆ ಈ ರೀತಿ ಮಾತನಾಡುತ್ತಿರುವೆ… ಹೆಂಡತಿ ಮತ್ತು ಮಗನ ಬಗ್ಗೆ ಮೋಹಕ್ಕೆ ಒಳಗಾಗಿ ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ನೀನು ತಿಳಿಯದವನಾಗಿದ್ದೀಯೆ. ಕುಟುಂಬಕ್ಕೆ ಆಪತ್ತು ಬಂದಾಗ, ಸತಿಸುತರು ಮೊದಲು ತ್ಯಾಗಕ್ಕೆ ಮುಂದಾಗಬೇಕು. ಅನಂತರ ಪತಿಯು ಕಟ್ಟಕಡೆಯಲ್ಲಿ ಹೋರಾಡಬೇಕು;

ಸತ್ಯಕ್ಕೆ ನೇಮಕ್ಕೆ ಬಂಧನಕ್ಕೆ ಎಡೆಯಲ್ ಅಳುಪಲು ಶಿವ ಮನಮ್ ನೋಳ್ಪನೈ=ಸತ್ಯಕ್ಕೆ, ಒಳ್ಳೆಯ ಆಚರಣೆಗೆ ಮತ್ತು ಯಾವುದೇ ಬಗೆಯ ಸಂಕಟವನ್ನು ಎದುರಿಸಲು ಮುಂದಾಗದೆ ಹಿಂಜರಿದರೆ ಶಿವನು ಮನಸ್ಸನ್ನು ನೋಡುತ್ತಾನೆ. ಅಂದರೆ ವ್ಯಕ್ತಿಯ ಮನದಲ್ಲಿ ನಿಜವಾದ ಪ್ರೀತಿ ಇದೆಯೋ ಇಲ್ಲವೋ ಎಂಬುದನ್ನು ಒರೆಹಚ್ಚಿ ನೋಡುತ್ತಾನೆ;

ಲಜ್ಜೆಗೆಡದೆ ಎಮ್ಮ ಮಾರು… ಮತ್ತೆ ಆದುದಾಗಲಿ ಎಂದಡೆ ಅವನಿಪನ್ ಒಡಂಬಟ್ಟನು=“ಹೆಂಡತಿ ಮತ್ತು ಮಗನನ್ನು ಮಾರಬೇಕಾದ ಪ್ರಸಂಗ ಒದಗಿಬಂದಿತೆಂದು ನಾಚಿಕೆಪಟ್ಟುಕೊಳ್ಳದೆ, ಹಿಂಜರಿಯದೆ ನಮ್ಮನ್ನು ಮಾರು. ಅನಂತರ ನಮ್ಮ ಸಂಸಾರದಲ್ಲಿ ಏನಾಗುತ್ತದೆಯೋ ಆಗಲಿ”ಎಂದು ಚಂದ್ರಮತಿಯು ಅಚಲವಾದ ನಿಶ್ಚಯದಿಂದ ನುಡಿಯಲು, ಹರಿಶ್ಚಂದ್ರನು ಆಕೆಯ ಸಲಹೆಯನ್ನು ಒಪ್ಪಿಕೊಂಡನು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *