ಕವಿತೆ: ಮಲೆನಾಡ ಒಡಲು
– ನಿತಿನ್ ಗೌಡ.
ಗಟ್ಟದ ಮೇಲೊಂದು
ಪುಟ್ಟ ಗುಡಿಯಿರಲು..
ಗುಡಿಯ ಅಂದಕೆ, ಮೆರಗು ತರಿಸೋ
ಹಸಿರ ಹೊದಿಕೆ ಇರಲು..
ಬಾನಲಿ ಗುಡುಗು ಮಿಂಚಿನ
ಕಣ್ಣಾಮುಚ್ಚಾಲೆಯಿರಲು..
ಮುಂಗಾರಿನ ಮುತ್ತಿನಂತಹ
ಸೋನೆ ಬೀಳಲು..
ಅಡವಿ ಒಡಲು ತಂಪಾಗುವುದು.
ನವಿಲು ಕುಣಿಯುವುದು ಗರಿಬಿಚ್ಚಿ..
ಕೋಗಿಲೆಯು ಹಾಡುವುದು ಇಂಪಾಗಿ..
ಕೊನೆಗೆ ಸೋನೆಯು ಕೊನೆಯಾಗಲು ಸಂಜೆಯಲಿ,
ಇಣುಕುವನು ನೇಸರನು,
ಪಡುವಣ ಮಲೆಯ ನಡುವೆ,
ಕೆಂದೋಕುಳಿಯ ಚೆಲ್ಲುತಾ..
ಅಲ್ಲಿ ಹಾರುವವು ಹಕ್ಕಿಯ ಸಾಲುಗಳು, ಸರದಿಯಲಿ;
ಕಾಣುವುದು ಆ ನೋಟ, ದೇವರ ರುಜುವಂತೆ..
ಈ ಚಿತ್ತಾರದ ಸೊಬಗು ಒಟ್ಟುಗೂಡುವ ಎಡೆ ಎಲ್ಲಿದೆ?
ಇನ್ನೆಲ್ಲಿರಲಿದೆ, ಮಲೆನಾಡ ಒಡಲಿನಲ್ಲಿ ಅಲ್ಲದೇ!
( ಚಿತ್ರಸೆಲೆ: bing.com )
ಇತ್ತೀಚಿನ ಅನಿಸಿಕೆಗಳು