ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 23ನೆಯ ಕಂತು: ಸುಡುಗಾಡಿನಲ್ಲಿ ಹರಿಶ್ಚಂದ್ರ ಮತ್ತು ಚಂದ್ರಮತಿ
– ಸಿ.ಪಿ.ನಾಗರಾಜ.
*** ಪ್ರಸಂಗ-23: ಸುಡುಗಾಡಿನಲ್ಲಿ ಹರಿಶ್ಚಂದ್ರ ಮತ್ತು ಚಂದ್ರಮತಿ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ’ ಎಂಬ ಎಂಟನೆಯ ಅದ್ಯಾಯದ 25 ರಿಂದ 45 ನೆಯ ಪದ್ಯದ ವರೆಗಿನ ಇಪ್ಪತ್ತೊಂದು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ. ಈಗ ಕಾಶಿ ನಗರದಲ್ಲಿರುವ ಬ್ರಾಹ್ಮಣನ ಮನೆಯೊಂದರಲ್ಲಿ ದಾಸಿಯಾಗಿದ್ದಾಳೆ.
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿ ಕಾಶಿ ನಗರದಲ್ಲಿರುವ ಸುಡುಗಾಡಿನ ಕಾವಲುಗಾರನಾಗಿದ್ದಾನೆ.
*** ಪ್ರಸಂಗ-23: ಸುಡುಗಾಡಿನಲ್ಲಿ ಹರಿಶ್ಚಂದ್ರ ಮತ್ತು ಚಂದ್ರಮತಿ ***
ಕೆಡೆದ ಮುಂಡದ; ಬಿದ್ದ ತಲೆಯ; ಚಲ್ಲಿದ ಕರುಳ; ಪಡಲಿಟ್ಟ ಕಾಳಿಜದ; ಕೋಳ್ಗೆಸರ ಮಿದುಳ ; ಹೊನಲಿಡುವ ರಕುತದ ಕಡಲೊಳ್ ಅಡಿಯಿಡಲುಬಾರದು ಎಂಬಂತೆ ವಿಶ್ವಾಮಿತ್ರನು ಅಡವಿಯೊಳಗೆ ಎಯ್ದೆ ನಾನಾ ಭಯಂಕರವ ಸಾಲಿಡಲ್… ಅದನು ಪುತ್ರಶೋಕಗ್ರಹಾವಿಷ್ಟತೆಯ ಕಡುಪಿನಿಮ್ ಲೆಕ್ಕಿಸದೆ ಬಂದು, ಸುಡುಗಾಡೊಳ್ ತನಯನ ಶವವನು ಇಳುಹಿದಳು; ಗಳಗಳನೆ ಮುನ್ನ ಬೆಂದು ಉಳಿದಿರ್ದ ಕರಿ ಕೊಳ್ಳಿಗಳನ್ ಎಲ್ಲವಮ್ ಸಿದಿಗೆ ತಂದೊಟ್ಟಿ, ಮೇಲೆ ಮಂಗಳಮಯ ಕುಮಾರನನ್ ಪಟ್ಟಿರಿಸಿ, ಕೆಲದೊಳ್ ಉರಿವ ಅಗ್ನಿಯಮ್ ಪಿಡಿದು ನಿಂದು…
ಚಂದ್ರಮತಿ: ಹುಟ್ಟಿದಲ್ಲಿ ಹುಟ್ಟು… ಬೆಳೆದಲ್ಲಿ ಬೆಳೆ.
(ಎಂದು ನುಡಿದು ಇಳುಹಲ್ ಅನುಗೆಯ್ದ್… ಇಳುಹಲಾರದೆ… ಅಳವಳಿದು ಬಾಯಳಿದು ಮೊರೆಯಿಟ್ಟಡೆ… ಭೂಪನು ಆ ದನಿ ಕೇಳ್ದು… ನಿದ್ರೆ ತಿಳಿದೆದ್ದು ಬಂದನು.)
ಹರಿಶ್ಚಂದ್ರ: ನಟ್ಟಿರುಳು ಸುಡುಗಾಡೊಳ್ ಒಬ್ಬಳ್ ಓರಂತೆ ಬಾಯ್ವಿಟ್ಟು ಹಲುಬುವ ವೀರನಾರಿ ಆವಳೊ… ಮೀರಿ ಸುಟ್ಟಿಯಾದಡೆ ನಿನಗೆ ವೀರಬಾಹುಕನಾಣೆ… ಕದ್ದು ಸುಡಬಂದೆ ನಿನ್ನ ನಿಟ್ಟೆಲುವ ಮುರಿವೆನ್.
(ಎಂದು ಭೂಪನು ಉರವಣಿಸಿ ಜರೆಯುತ್ತ ದಟ್ಟಿಸುತ ಬಂದು, ಹಿಡಿದಿರ್ದ ಕಿಚ್ಚಮ್ ಕೆದರಿ, ಮುಟ್ಟಿಗೆಯ ಮೇಲಿರ್ದ ಸುತನ ಹಿಂಗಾಲ್ ಪಿಡಿದು, ಸೆಳೆದು ಬಿಸುಟನ್.)
ಚಂದ್ರಮತಿ: ಬಿಸುಡದಿರು… ಬಿಸುಡದಿರು… ಬೇಡಬೇಡ… ಅಕಟಕಟ… ಹಸುಳೆ ನೊಂದಹನ್.
(ಎಂದು ಬೀಳ್ವನನ್ ಎತ್ತಿ ತಕ್ಕಿಸಿಕೊಂಡು…)
ಚಂದ್ರಮತಿ: ಕುಲವ ನೋಡದೆ ಬೇಡಿಕೊಂಬೆನ್… ಇವನ್ ಎನ್ನ ಮಗನಲ್ಲ… ನಿನ್ನ ಸಿಸುವಿನೋಪಾದಿ… ಸುಡಲ್ ಅನುಮತವನಿತ್ತು… ರಕ್ಷಿಸು… ಕರುಣಿ.
ಹರಿಶ್ಚಂದ್ರ: ಎಲೆ ಮರುಳೆ, ಹೆಣನ್ ಉಟ್ಟುದಮ್… ಮಸಣವಾಡಗೆಯ ಹಾಗವನು ಕೊಟ್ಟಲ್ಲದೇ ಏನ್ ಎಂದಡಮ್ ಬಿಡೆನ್.
ಚಂದ್ರಮತಿ: ಇಂದು ಎನಗೆ ಕೊಡಲ್ ಏನು ಇಲ್ಲ. ಲೋಗರ ಮನೆಯ ಬಡದಾಸಿ ಕರುಣಿಸು.
ಹರಿಶ್ಚಂದ್ರ: ನಿನ್ನ ಕೊರಳಿನೊಳ್ ಇರ್ದ ಕಡು ಚೆಲುವ ತಾಳಿಯನ್ ಅದನ್ ಅಡವನಿರಿಸಿ ಬಳಿಕ ನೀ ಬಿಡಿಸಿಕೋ.
(ಎನಲು ಮಡದಿ ಕರನೊಂದು…)
ಚಂದ್ರಮತಿ: (ತನ್ನಲ್ಲಿಯೇ ಹೇಳಿಕೊಂಡಳು.) ಅಕಟ… ಪೊಡವಿಪತಿ ಮಡಿದ ಕೇಡು ಅಡಸಿತು. ಅಲ್ಲದಡೆ ಎನ್ನ ಗುಪ್ತ ಮಂಗಳಸೂತ್ರದ ಎಡೆಯ ಹೊಳೆಹೊಳೆವ ಐದೆದಾಳಿಯನ್ ಇದನ್… ಶ್ವಪಚನ್ ಎಂತು ಕಂಡಪನ್.
ಚಂದ್ರಮತಿ: (ಲೋಹಿತಾಶ್ವನ ಹೆಣದ ಮುಂದೆ ದೊಡ್ಡ ದನಿಯಲ್ಲಿ ಅಳುತ್ತ)
ವಿಗತ ಸಪ್ತದ್ವೀಪಪತಿಯ ಬಸುರಲಿ ಬಂದು… ಮಗನೆ, ನಿನಗೆ ಒಮ್ಮೆಟ್ಟು ಸುಡುಗಾಡು ಹಗೆಯಾಯ್ತೆ. ಮಿಗೆ ಸಕಲ ಲೋಕದೊಳು ತನ್ನ ಆಣೆ ಸಲುವನ ಕುಮಾರನ್ ಎನಿಸುವ ನಿನ್ನನು ಬಗೆಯದೆ ಈ ಚಂಡಾಲನ್ ಆಣೆಯಿಡುವಂತಾಯ್ತೆ… ಜಗದ ನವನಿಧಿಗೆ ಒಡೆಯನ್ ಆತ್ಮಭವನ್ ಎನಿಸಿ… ಮುಟ್ಟಿಗೆಯ ಸುಂಕದ ಹಾಗವಿಲ್ಲಾಯ್ತೆ… ಮಗನೆ…
(ಎಂದು ಹಂಬಲಿಸುತ ಅಳಲಿದಳು. ವನಿತೆಯ ಅಳಲಮ್ ಕೇಳ್ದು ನಡುಗಿ…)
ಹರಿಶ್ಚಂದ್ರ: (ತನ್ನ ಮನದಲ್ಲಿ) ವಿಶ್ವಾಮಿತ್ರ ಮುನಿ ಎನಗೆ ಮತ್ತೆ ಮಾಡಿದ ತೊಡಕು ಇದಾಗದಿರದು..
(ಎನುತ ಮನದೊಳು ಮರುಗುತ..)
ಹರಿಶ್ಚಂದ್ರ: ಎಲೆ ತರುಣಿ, ಆವ ಲೋಕದೊಳ್ ಆಣೆ ಸಲುವುದು ಎನಿಸುವ ಭೂಪನ ತನಯನ್ ಈ ತರಳನ್. ನೆಲದೆರೆಯನ್ ಇಕ್ಕು ಎನಲು, ಕೊಡಲಿಲ್ಲದೆ ಅಧಿಕರ ಪೆಸರ್ಗೊಳಲು
ಬಿಡುವೆನೆ. ಶೋಕಿಸುವ ಹೊತ್ತು, ಹುಸಿದು ಶೋಕಿಸುವೊಡೆ ಏನಹುದು.
(ಎಂದನು ಅವನೀಶನು.)
ಚಂದ್ರಮತಿ: ಹಿಂದುಳಿದ ಸಂಪದವನ್ ಎಣಿಸುವುದು ಹುಸಿಯಲ್ಲ. ಇಂದು ಈಗ ತೋರಬಪ್ಪುದೆ. ಹುಸಿಯದುಂಟೆ… ತಪ್ಪೆ?
ಹರಿಶ್ಚಂದ್ರ: ಅದಕೇನ್… ಆತನ್ ಆರ ಮಗನ್… ಆವ ಪೆಸರ್… ಆವ ನಾಡ ಅರಸನ್?
ಚಂದ್ರಮತಿ: ಸಂದ ರವಿಕುಲತಿಲಕನ್ ಎನಿಪ ಆ ತ್ರಿಶಂಕುವಿನ ನಂದನನ್ ಅಯೋಧ್ಯಾಪತಿ ಹರಿಶ್ಚಂದ್ರನ್.
(ಎನೆ ನೊಂದು…)
ಹರಿಶ್ಚಂದ್ರ: ಆತನ ಅಂಗನೆ… ಕುಮಾರರ್ ಏನಾದರ್… ಎಲ್ಲಿ ಇರ್ದಪರು ಹೇಳ್.
ಚಂದ್ರಮತಿ: ಪೊಡವೀಶ್ವರನ್ ಹಿಂದೆ ಹರಸಿ, ಹಾಳಮ್ ಬಿಟ್ಟು, ಹಡೆದ ಸುತನ್ ಈತನ್… ಆತನ ವನಿತೆ ನಾನ್.
ಹರಿಶ್ಚಂದ್ರ: ಈ ತನಯನ್ ಮಡಿದ ಕಾರಣ ಆವುದು.
ಚಂದ್ರಮತಿ: ಎಮ್ಮಿಬ್ಬರಮ್ ಮಾರುಗೊಂಡ ಒಡೆಯನ ಅರಮನೆಗೆ ಹುಲುಹುಳ್ಳಿಯಮ್ ತಪ್ಪೆನ್ ಎಂದು ಅಡವಿಗೆ ಎಯ್ದಿದಡೆ, ಅಲ್ಲಿ ಕಾಳೋರಗಮ್ ಕಚ್ಚಿ ಈ ಕಂದನ್ ಮಡಿದನ್. ಈ ವಿಧಿಗೆ ಸೇರಿತು. ಹರಿಶ್ಚಂದ್ರನ ಇರವೇನ್.
ಹರಿಶ್ಚಂದ್ರ: ನುಡಿಯಲ್ ಅರಿಯದೆ ಸಕಲರಾಜ್ಯಮಮ್ ಹೋಗಾಡಿ, ಕಡೆಗೆ ಅಧಿಕ ಋಣಿಯಾಗಿ ನೆಲೆಗೆಟ್ಟು, ಮಂತ್ರಿ ಬೆರಸು ಅಡವಿಗುರಿಯಾಗಿ, ಕೈವಿಡಿದ ಸತಿಪುತ್ರರಮ್ ಸುಕ್ಷೇತ್ರದೊಳಗೆ ಮಾರಿ, ಕಡೆಗೆ ಚಂಡಾಲ ಕಿಂಕರನಾಗಿ ದೋಷಕ್ಕೆ ನಡುಗದೆ, ಕುಲಾಚಾರಮಮ್ ಬಿಟ್ಟು, ಜನಕೆ ನಗೆಗೆಡೆಯಾದ ಪಾತಕ ಹರಿಶ್ಚಂದ್ರನ್ ಅವನನ್ ಏನೆಂದು ನೆನೆದಪೆ.
ಚಂದ್ರಮತಿ: ಜಡೆವೊತ್ತಡಮ್, ಹಸಿಯ ತೊವಲ್ ಉಟ್ಟಡಮ್, ನಾಡ ಸುಡುಗಾಡಿನೊಳಗೆ ಇರ್ದಡಮ್, ನರಕಪಾಲಮಮ್ ಪಿಡಿದು ತಿರಿದು ಇರ್ದಡಮ್, ವಿಷ ಉಂಡಡಮ್ ಶವಶಿರೋಮಾಲೆ ಕಟ್ಟಿರ್ದಡಮ್, ಕಡು ಮರುಳ್ ಪಡೆಯ ಸಂಗಡ ಬತ್ತಲಿರ್ದಡಮ್, ಮೃಡನಲ್ಲದೆ ಅಖಿಲಲೋಕಕ್ಕೆ ಒಡೆಯನಿಲ್ಲ ಎಂಬ ನುಡಿಯಂತಿರೆ ಎನಗೆ ಆ ಹರಿಶ್ಚಂದ್ರನಲ್ಲದೆ ಇನ್ನಾರು ಗತಿ ಮತಿ.
(ಎಂದಳು. ಉರುವ ಅಬಲೆಯ ಉಚಿತ ವಚನಮ್ ಕರ್ಣಪಥದಿನ್ ಒಳಗೆ ಎರಗಿ ಚಿತ್ತವನು ತೊತ್ತಳದುಳಿದು ಧೈರ್ಯಮಮ್ ಬರಿಕೈದು, ಕರಣಂಗಳಮ್ ಕದಡಿ, ಹೆಮ್ಮೆಯಮ್ ಹರಿದು, ಅಳಲನ್ ಒದೆದು ಎಬ್ಬಿಸಿ, ಮರುಕಮಮ್ ಮಸೆದು, ಕಂಬಿನಿ ಪೊನಲ ಕೋಡಿಯಮ್ ಕೊರೆದು, ಮತಿಗತಿ ಮಾಯೆಯಮ್ ತೋರಿ ಮೀರಿ, ನೇಸರ ಕುಲಜನ್ ಓರಂತೆ ಸಿಗ್ಗಾಗಿ, ತಾ ಮಾಡಿದ ಅಪರಾಧಮಮ್ ನೆನೆದನ್.)
ಹರಿಶ್ಚಂದ್ರ: ಈ ಸತಿಯನ್ … ಈ ಶುಚಿಯನ್ … ಈ ಪತಿವ್ರತೆಯ ನಾನ್ ಈಸು ಧಾವತಿಗೆ ಒಳಗುಮಾಡಿದೆನು. ನೀಚ ದ್ವಿಜೇಶಂಗೆ ಮಾರಿ ಮರೆದು ಈ ಸುತನನ್… ಈ ಸುಖಿಯನ್… ಈ ಸೊಬಗ ಸುಕುಮಾರನ ಓಸರಿಸದೆ ಉರಗ ಕೊಲುವಂತೆ ಮಾಡಿದೆನ್.
(ಎಂಬ ಹೇಸಿಕೆಯ ವಾರಾಶಿ ತುಂಬಿ ತುಳುಕಾಡಿ ಹೊರಸೂಸುವ ಅಳಲಮ್ ನಿಲಿಸಿ, ನಿಲಿಸಲಾರದೆ ಮಗನ ಮೇಲೆ ದೊಪ್ಪನೆ ಕೆಡೆದನು.)
ಚಂದ್ರಮತಿ: ತನಗೆ ಹೊಯ್ ಕೈಯಪ್ಪ ಭೂಭುಜರನ್ ಓಲೈಸಿ ಧನವನ್ ಆರ್ಜಿಸಿ ತಂದು, ಸೆರೆಯ ಬಿಡಿಸುವನ್ ಎಮ್ಮ ಜನಪನ್ ಎಂದು ಆನ್ ಇರಲು, ಮಾದಿಗಂಗೆ ಆಳಾಗಿ ಸುಡುಗಾಡ ಕಾವ ಭಾಗ್ಯ ನಿನಗಾಯ್ತೆ ಭೂಪಾಲ.
(ಎಂದು ದುಃಖಕ್ಕೆ ಪುತ್ರನ ಶೋಕದ ಉರಿಗೆ ತನು ಹೇವರಿಸಿ, ವನಿತೆ ತಾ ಮನನೊಂದು ಬೆಂದು ಬೆರಗಾಗಿ ಚಿಂತಿಸುತ, ತೂಕದ ಕೋಲ ತೊಲೆಯಾದಳು.)
ಹರಿಶ್ಚಂದ್ರ: ಪ್ರಕಟ ರಾಜ್ಯಭ್ರಷ್ಟನಾಗಿ ಚಂಡಾಲ ಸೇವಕನಾದ ಪಾಪಿಯನ್ ನೀಚನನ್ ಅನೂನಪಾತಕನನ್ ಎನ್ನನ್ ಪೋಲ್ತು ಕೆಡದೆ, ನಿಮ್ಮಜ್ಜ ತ್ರಿಶಂಕು ಭೂವರನ ಅಂದದಿ ಈ ಕುಮಾರಕನ್ ಸಕಲ ರಾಜ್ಯಕ್ಕೆ ಒಡೆಯನಾಗದಿರನ್ ಎಂಬ ನಂಬುಗೆಯಲ್ ಆನ್ ಇರಲು ಕಂದ, ನೀನ್ ಅಕಟ ನಿಷ್ಕಾರಣಮ್ ಮಡಿವರೇ ತಂದೆ.
(ಎಂದು ಅರಸನು ಅಳಲ್ ತೊಡಗಿದನ್.)
ಹರಿಶ್ಚಂದ್ರ: ಮುಂದೆ ನೀನ್ ಆಳಲಿಹ ಧರೆಯನ್ ಅನ್ಯರಿಗೆ ಇತ್ತನ್ ಎಂದು ನುಡಿಸೆಯೊ… ಮತ್ತೆ ಅದಲ್ಲದೆ ಎಮ್ಮಿಬ್ಬರಮ್ ತಂದು ಲೋಗರಿಗೆ ಮಾರಿದನ್ ಎಂದು ನುಡಿಸೆಯೋ… ಚಾಂಡಾಲಸೇವೆ ಮಾಡಿ ನಿಂದೆಯಿಲ್ಲದ ಸೂರ್ಯಕುಲಕೆ ಕುಂದಮ್ ತಂದನ್ ಎಂದು ನುಡಿಸೆಯೊ… ನುಡಿಯದಿಹ ಹದನನ್ ಅರುಪಬೇಕು.
(ಎಂದು ಒರಲಿ ಬಾಯ್ವಿಟ್ಟು ಕರೆದು ಸುತನಲ್ಲಿ ಮಾರುತ್ತರವನು ಹಾರಿದನು.)
ಹರಿಶ್ಚಂದ್ರ: ಅರಿರಾಯರೊಳು ಕಾದಿ ಮಡಿದಾತನಲ್ಲ; ಮುನಿವರರ ಯಾಗವ ಕಾದು ಮಡಿದಾತನಲ್ಲ; ದೇವರಿಗೆ ಹಿತವಾಗಿ ಮಡಿದವನಲ್ಲ; ಮಾಂಸದಾನವ ಬೇಡಿದರ್ಗೆ ಒಡಲನು ಅರಿದರಿದು ಕೊಟ್ಟು ಮಡಿದವನಲ್ಲ; ಹುಳ್ಳಿಯಮ್ ತರಹೋಗಿ ಕಾಡೊಳಗೆ ಬಡಹಾವು ಕಚ್ಚಿ, ಮುನಿವರಿಗೆ ನಗೆಗೆಡೆಯಾಗಿ ನಿಷ್ಕಾರಣಮ್ ಮಡಿವರೇ ಕಂದ ಹೇಳ್. ಮೇಗೆ ಮಗನ್ ಅರಸಾಗಬೇಕೆಂಬ ಮರುಕದಿಮ್, ಯಾಗಕ್ಕೆ ಸುತನನ್ ಅರಿದು ಇಕ್ಕಲಾರದೆ ಲೋಭಿಯಾಗಿ, ಮುನಿಪುತ್ರನನ್ ಮಾರುಗೊಂಡು ಇತ್ತನ್ ಎಂಬ ಅಪಕೀರ್ತಿಯೇ ಉಳಿದುದು. ಲೋಗರ ಮಗನನ್ ಇಕ್ಕೆ ನೆಲೆಯ ನೋಡಿದನ್. ಅಕಟ… ಸಾಗುದುರೆಗೆ ಹುಲ್ಲನ್ ಅಡಕಿದನು… ಒಣಗಿದ ಹಣ್ಣ ಕಾಗೆ ಕದುಕಿತ್ತೆಂದು ಸಂದ ಜನ ನಿಂದೆಗೆಯ್ವ ಅಂದವಾಯ್ತು ಎನಗೆ.
ಚಂದ್ರಮತಿ: ಸುತನ ರೂಪಿನ ಸೊಬಗನ್; ಅಂಗಸುಕುಮಾರದ ಉನ್ನತಿಯ; ಬಾಲ್ಯದ ಚೆಲುವನ್; ಎಲ್ಲಾ ಕಳಾಪ್ರವೀಣತೆಯ; ಗುರುವಿಕೆಯ; ಗಾಡಿಯ; ಧೃತಿಯನ್; ಒಟ್ಟಜೆಯನ್; ಅಳವಟ್ಟ ನುಡಿಯ ಚದುರ; ನುತಲಕ್ಷಣಾವಳಿಯನ್; ಅಧಿಕ ಗುಣಗಣವನ್; ಆಯತಿಗೆಟ್ಟು ನೆನೆದು ಶೋಕಿಪೆನ್ ಎಂದಡೆ, ಆ ಕಲ್ಪಶತ ಎಯ್ದದು. ಅರಸ, ದುಃಖವನು ಸಂತೈಸಿಕೊಂಡು ಎನ್ನನ್ ಅವಧರಿಸು. ಪುದಿದ ಇರುಳು ಕಡೆಗಾಣ್ಬ ಕುರುಹು ಆಗುತಿದೆ. ಸೂರ್ಯನ್ ಉದಯಿಸಿದನಾದಡೆ ಎನ್ನವರ್ ಎನ್ನನ್ ಅರಸಿ ತಳುವಿದಳ್ ಎಂದು ಕೊಲ್ಲದೆ ಇರರ್. ಅರಸ, ಈ ಕುಮಾರನನ್ ಈಗ ದಹಿಸಬೇಕು.
(ಎಂದು ಸುದತಿ ನುಡಿಯಲು, ಅವನೀಶ ನುಡಿದನ್…)
ಹರಿಶ್ಚಂದ್ರ: ತೆರೆಯನಿಕ್ಕದೆ ಸುಡಲ್ ಬಾರದು. ಉಳ್ಳಡೆ ಕೊಡು. ಇಲ್ಲದಡೆ ಬೇಗದಿ ಹೋಗಿ ನಿನ್ನ ಒಡೆಯನನ್ ಬೇಡಿ ತಾ. ತಾರದಿರೆ ಸುಡಲ್ ಬೇಡ.
ಚಂದ್ರಮತಿ: ಒಡೆಯರ್ ಈವವರಲ್ಲ.
ಹರಿಶ್ಚಂದ್ರ: ಬೇಡಿ ನೋಡಿ… ಕೊಡದಡೆ, ಋಣಂಬಡು. ಹುಟ್ಟದಿರ್ದಡೆ ಸುಡುವ ಗೊಡವೆ ಬೇಡ. ಅನ್ನೆಗಮ್ ಬಂದನಿತು ಬಕ್ಕೆ.
(ಎಂದು ತರುಣನ್ ಉಟ್ಟುದನು ಪೊಡವೀಶ್ವರನ್ ಕೊಂಡು, ಅತ್ತಲ್ ತಿರುಗಿ ತನ್ನ ಕಾಪಿನ ಗುಡಿಗೆ ನಡೆಗೊಂಡನ್. ಇತ್ತಲ್ ಪುರಕೆ ಬರುತಿಪ್ಪ ಮಡದಿಗೆ
ಎಡೆವಟ್ಟೆಯೊಳು ಬಂದ ಸಂಕಟವನ್ ಆವ ಜೀವರು ಕೇಳ್ವರು.)
ತಿರುಳು: ಸುಡುಗಾಡಿನಲ್ಲಿ ಹರಿಶ್ಚಂದ್ರ ಮತ್ತು ಚಂದ್ರಮತಿ
ಬೆಂಕಿಯ ಉರಿಯನ್ನು ಕಂಡು ಸುಡುಗಾಡಿನ ಕಡೆ ಚಂದ್ರಮತಿಯು ಲೋಹಿತಾಶ್ವನ ಹೆಣವನ್ನು ಹೊತ್ತುಕೊಂಡು ಬರುತ್ತಿರುವಾಗ ವಿಶ್ವಾಮಿತ್ರನು ಅನೇಕ ಬಗೆಯ ಅಡೆತಡೆಗಳನ್ನು ಒಡ್ಡುತ್ತಾನೆ; ಮುಂಡ=ಮಾನವನ ತಲೆಯಿಲ್ಲದ ದೇಹದ ಬಾಗ;
ಕೆಡೆದ ಮುಂಡದ=ಬಿದ್ದಿರುವ ಮುಂಡಗಳ; ಬಿದ್ದ ತಲೆಯ=ಬಿದ್ದಿರುವ ತಲೆಗಳ; ಚಲ್ಲಿದ ಕರುಳ=ನೆಲದ ಮೇಲೆ ಹರಡಿಕೊಂಡು ಬಿದ್ದಿರುವ ಕರುಳಿನ ಉಂಡೆಗಳ; ಪಡಲಿಟ್ಟ ಕಾಳಿಜದ=ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಿತ್ತಜನಕಾಂಗದ; ಕೋಳ್ಗೆಸರ ಮಿದುಳ=ಹಸಿಹಸಿಯಾದ ಕೆಸರಿನಲ್ಲಿ ಬಿದ್ದಿರುವ ಮಿದುಳಿನ; ಹೊನಲಿಡುವ ರಕುತದ ಕಡಲೊಳ್=ಹರಿಯುತ್ತಿರುವ ನೆತ್ತರಿನ ಕೋಡಿಯಲ್ಲಿ; ಅಡಿಯಿಡಲು ಬಾರದು ಎಂಬಂತೆ ವಿಶ್ವಾಮಿತ್ರನು ಅಡವಿಯೊಳಗೆ ಎಯ್ದೆ ನಾನಾ ಭಯಂಕರವ ಸಾಲಿಡಲ್=ವಿಶ್ವಾಮಿತ್ರನು ಚಂದ್ರಮತಿಯು ಬರುತ್ತಿರುವ ಕಾಲುಹಾದಿಯಲ್ಲಿ ಹೆಜ್ಜೆಯಿಡಲಾಗದಂತೆ ಬಯಂಕರವಾದ ರೀತಿಯಲ್ಲಿ ಮಾನವರ ದೇಹದ ರಕ್ತಮಾಂಸದಿಂದ ಕೂಡಿದ ಬಾಗಗಳನ್ನು ಚಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿರುವಂತೆ ಕ್ರುತಕವಾಗಿ ನಿರ್‍ಮಿಸಿದ್ದಾನೆ;
ಪುತ್ರಶೋಕಗ್ರಹಾವಿಷ್ಟತೆಯ ಕಡುಪಿನಿಮ್ ಅದನು ಲೆಕ್ಕಿಸದೆ ಬಂದು=ಪುತ್ರಶೋಕದ ತೀವ್ರತೆಯಲ್ಲಿ ನೊಂದು ಬೇಯುತ್ತಿರುವ ಚಂದ್ರಮತಿಯು ಅದೆಲ್ಲವನ್ನು ಲೆಕ್ಕಿಸದೆ ಮುನ್ನಡೆದು; ಸುಡುಗಾಡೊಳ್ ತನಯನ ಶವವನು ಇಳುಹಿದಳು=ಹೊತ್ತಿರುವ ಮಗನ ಶವವನ್ನು ಸುಡುಗಾಡಿನಲ್ಲಿ ಒಂದೆಡೆ ಕೆಳಕ್ಕೆ ಇಳಿಸುತ್ತಾಳೆ; ಗಳಗಳನೆ=ಕಟ್ಟಿಗೆಯ ತುಂಡುಗಳಿಗೆ ಬೆಂಕಿ ಚೆನ್ನಾಗಿ ಹತ್ತಿಕೊಂಡು ಉರಿಯುವಾಗ ಕೇಳಿಬರುವ ಶಬ್ದ; ಕೊಳ್ಳಿ=ಉರಿಯುತ್ತಿರುವ ಕಟ್ಟಿಗೆ; ಕರಿಯ ಕೊಳ್ಳಿ=ಅರ್‍ದ ಬೆಂದ ನಂತರ ಬೆಂಕಿಯು ಆರಿಹೋಗಿರುವ ಮಸಿಹಿಡಿದ ಕೊಳ್ಳಿ; ಸಿದಿಗೆ=ಚಿತೆ; ಗಳಗಳನೆ ಮುನ್ನ ಬೆಂದು ಉಳಿದಿರ್ದ ಕರಿ ಕೊಳ್ಳಿಗಳನ್ ಎಲ್ಲವಮ್ ಸಿದಿಗೆ ತಂದೊಟ್ಟಿ=ಗಳಗಳನೆ ಮೊದಲು ಬೆಂದು ಉಳಿದಿದ್ದ ಕರಿಯ ಕೊಳ್ಳಿಗಳೆಲ್ಲವನ್ನೂ ಆಯ್ದು ತಂದು ಚಿತೆಯ ಮೇಲೆ ಜೋಡಿಸಿ; ಮೇಲೆ ಮಂಗಳಮಯ ಕುಮಾರನನ್ ಪಟ್ಟಿರಿಸಿ=ಚಿತೆಯ ಮೇಲೆ ಮಂಗಳಕರನಾದ ಕುಮಾರನನ್ನು ಮಲಗಿಸಿ;
ಉರಿವ ಅಗ್ನಿಯಮ್ ಪಿಡಿದು ಕೆಲದೊಳ್ ನಿಂದು=ಉರಿಯುತ್ತಿರುವ ಕೊಳ್ಳಿಯೊಂದನ್ನು ಹಿಡಿದುಕೊಂಡು ಚಿತೆಯ ಪಕ್ಕದಲ್ಲಿ ನಿಂತು; ಹುಟ್ಟಿದಲ್ಲಿ ಹುಟ್ಟು… ಬೆಳೆದಲ್ಲಿ ಬೆಳೆ ಎಂದು ನುಡಿದು=ಈ ಜನ್ಮದಲ್ಲಿ ಯಾವ ಸೂರ್‍ಯವಂಶದ ಮನೆತನದಲ್ಲಿ ಹುಟ್ಟಿದ್ದೆಯೋ ಅದೇ ಮನೆತನದಲ್ಲಿ ಮತ್ತೆ ಹುಟ್ಟಿ ಬಾ… ಯಾವ ಅಯೋದ್ಯಾನಗರದ ಅರಮನೆಯಲ್ಲಿ ರಾಜಕುವರನಾಗಿ ಬೆಳೆದೆಯೋ ಅಲ್ಲಿಯೇ ಬೆಳೆದು ದೊಡ್ಡವನಾಗು ಎಂದು ನುಡಿದು; ಇಳುಹಲ್ ಅನುಗೆಯ್ದು=ಚಿತೆಗೆ ಬೆಂಕಿ ಇಡಲು ಸಿದ್ದಳಾಗಿ; ಇಳುಹಲಾರದೆ ಅಳವಳಿದು ಬಾಯಳಿದು ಮೊರೆಯಿಟ್ಟಡೆ=ಕೊಳ್ಳಿಯಿಡಲಾರದೆ ನಿತ್ರಾಣಗೊಂಡು, ಗೋಳಾಡುತ್ತ, ಮಗನ ಹೆಸರನ್ನು ಹಿಡಿದು ಕೂಗಿಕೊಳ್ಳುತ್ತಿರಲು; ಭೂಪನು ಆ ದನಿ ಕೇಳ್ದು… ನಿದ್ರೆ ತಿಳಿದೆದ್ದು ಬಂದನು= ಸುಡುಗಾಡಿನಲ್ಲಿ ಕಾವಲುಗಾರನಾಗಿದ್ದ ಹರಿಶ್ಚಂದ್ರನು ಆ ಗೋಳಿನ ದನಿಯನ್ನು ಕೇಳಿ, ಎಚ್ಚರಗೊಂಡು ಚಿತೆಯ ಬಳಿಗೆ ಬಂದನು;
ನಟ್ಟಿರುಳು ಸುಡುಗಾಡೊಳ್ ಒಬ್ಬಳ್ ಓರಂತೆ ಬಾಯ್ವಿಟ್ಟು ಹಲುಬುವ ವೀರನಾರಿ ಆವಳೊ=ಈ ನಡುರಾತ್ರಿಯಲ್ಲಿ ಸುಡುಗಾಡಿನಲ್ಲಿ ಒಬ್ಬಳೇ… ಒಂದೇ ಸಮನೆ ಗೋಳಾಡುತ್ತ ಸಂಕಟಪಡುತ್ತಿರುವ ದಿಟ್ಟೆಯಾದ ಹೆಂಗಸು ಯಾರಿರಬಹುದು; ಮೀರಿ ಸುಟ್ಟಿಯಾದಡೆ ನಿನಗೆ ವೀರಬಾಹುಕನಾಣೆ=ಸುಡುಗಾಡಿನ ಕಟ್ಟಲೆಯನ್ನು ಲೆಕ್ಕಿಸಿದೆ ಸುಟ್ಟೆಯಾದಡೆ ನಿನಗೆ ವೀರಬಾಹುಕನ ಆಣೆ/ವೀರಬಾಹುಕನ ಆಜ್ನೆಯಂತೆ ದಂಡನೆಯನ್ನು ನೀಡಲಾಗುತ್ತದೆ; ಕದ್ದು ಸುಡಬಂದೆ ನಿನ್ನ ನಿಟ್ಟೆಲುವ ಮುರಿವೆನ್ ಎಂದು ಭೂಪನು ಉರವಣಿಸಿ ಜರೆಯುತ್ತ ದಟ್ಟಿಸುತ ಬಂದು=ಕದ್ದು ಸುಡಲು ಬಂದಿರುವೆಯಲ್ಲಾ… ನಿನ್ನ ಬೆನ್ನುಮೂಳೆಯನ್ನು ಮುರಿಯುತ್ತೇನೆ ಎಂದು ಹರಿಶ್ಚಂದ್ರನು ಅಬ್ಬರಿಸಿ ನಿಂದಿಸುತ್ತ… ಗದರಿಸುತ್ತ ಬಂದು; ಹಿಡಿದಿರ್ದ ಕಿಚ್ಚಮ್ ಕೆದರಿ=ಆಕೆಯ ಕಯ್ಯಲ್ಲಿದ್ದ ಕೊಳ್ಳಿಯನ್ನು ಕಿತ್ತುಕೊಂಡು ದೂರ ಎಸೆದು; ಮುಟ್ಟಿಗೆಯ ಮೇಲಿರ್ದ ಸುತನ ಹಿಂಗಾಲ್ ಪಿಡಿದು, ಸೆಳೆದು ಬಿಸುಟನ್=ಚಿತೆಯ ಮೇಲಿದ್ದ ಲೋಹಿತಾಶ್ವನ ಹಿಂಗಾಲನ್ನು ಹಿಡಿದೆಳೆದು ಕೆಳಕ್ಕೆ ಬಿಸಾಡಿದನು;
ಬಿಸುಡದಿರು… ಬಿಸುಡದಿರು… ಬೇಡಬೇಡ… ಅಕಟಕಟ… ಹಸುಳೆ ನೊಂದಹನ್ ಎಂದು ಬೀಳ್ವನನ್ ಎತ್ತಿ ತಕ್ಕಿಸಿಕೊಂಡು=ಬಿಸುಡದಿರು… ಬಿಸುಡದಿರು… ಬೇಡಬೇಡ… ಅಯ್ಯಯ್ಯೋ… ಮಗು ನೊಂದುಹೋಗುತ್ತಾನೆ ಎಂದು ಚಂದ್ರಮತಿಯು ಉದ್ವೇಗದಿಂದ ನುಡಿಯುತ್ತ, ಕೆಳಗಡೆ ಬಿದ್ದಿದ್ದ ಮಗನನ್ನು ತಬ್ಬಿಕೊಂಡು; ಕುಲವ ನೋಡದೆ ಬೇಡಿಕೊಂಬೆನ್. ಇವನ್ ಎನ್ನ ಮಗನಲ್ಲ… ನಿನ್ನ ಸಿಸುವಿನೋಪಾದಿ… ಸುಡಲ್ ಅನುಮತವನಿತ್ತು… ರಕ್ಷಿಸು… ಕರುಣಿ=ನೀನು ಕುಲದಲ್ಲಿ ಚಂಡಾಲನೆಂದು ಗೊತ್ತಿದ್ದರೂ ಅದನ್ನು ಮರೆತು ಬೇಡಿಕೊಳ್ಳುತ್ತಿದ್ದೇನೆ. ಇವನು ನನ್ನ ಮಗನಲ್ಲ. ನಿನ್ನ ಮಗನೆಂದು ತಿಳಿದು ಸುಡಲು ಅನುಮತಿಯನ್ನು ಕೊಟ್ಟು ಕಾಪಾಡು… ಕರುಣಿ;
ಇಂತಹ ಸಂಕಟದ ಸಮಯದಲ್ಲಿಯೂ ಚಂದ್ರಮತಿಯ ಮನದಲ್ಲಿ ತನ್ನ ಎದುರಿಗೆ ಇರುವ ಕಾವಲುಗಾರನು ‘ ಕೀಳು ಕುಲದವನು ’ ಎಂಬ ಬಾವನೆಯು ಹೆಡೆ ಎತ್ತಿದೆ; ಇದಕ್ಕೆ ಕಾರಣವೇನೆಂದರೆ ಬ್ರಾಹ್ಮಣ/ಕ್ಶತ್ರಿಯ/ವೈಶ್ಯ/ಶೂದ್ರ ಎಂಬ ವರ್‍ಣ ವ್ಯವಸ್ತೆ ಮತ್ತು ಪಂಚಮ ಹಾಗೂ ನೂರೆಂಟು ಜಾತಿಗಳು ಹಾಗೂ ಸಾವಿರಾರು ಬಗೆಯ ಉಪಜಾತಿಗಳ ಹೆಣಿಗೆಯಿಂದ ರೂಪುಗೊಂಡಿರುವ ಇಂಡಿಯಾ ದೇಶದ ಸಾಮಾಜಿಕ ರಚನೆ. ಇದರಿಂದಾಗಿ ಜನಜೀವನದ ನಿತ್ಯ ವ್ಯವಹಾರಗಳ ಪ್ರತಿಯೊಂದು ಗಳಿಗೆಯಲ್ಲಿಯೂ ಪ್ರತಿಯೊಬ್ಬ ವ್ಯಕ್ತಿಯ ಮಯ್ ಮನದಲ್ಲಿಯೂ ಮೇಲು ಕೀಳಿನ ವರ್‍ಣ, ಪಂಚಮ ಮತ್ತು ಜಾತಿ ಬಾವನೆಯು ಹಾಸುಹೊಕ್ಕಾಗಿರುತ್ತದೆ; ಇದಕ್ಕೆ ಚಂದ್ರಮತಿಯ ವರ್‍ತನೆಯು ಹೊರತಾಗಿಲ್ಲ;
ಎಲೆ ಮರುಳೆ, ಹೆಣನ್ ಉಟ್ಟುದಮ್… ಮಸಣವಾಡಗೆಯ ಹಾಗವನು ಕೊಟ್ಟಲ್ಲದೇ ಏನ್ ಎಂದಡಮ್ ಬಿಡೆನ್=ಎಲೆ ತಿಳಿಗೇಡಿಯೇ, ಸುಡುಗಾಡಿನ ನಿಯಮದಂತೆ ಹೆಣಕ್ಕೆ ತೊಡಿಸಿರುವ ಬಟ್ಟೆಯನ್ನು ಮತ್ತು ಸುಡುಗಾಡಿನ ನೆಲದ ತೆರಿಗೆಯ ನಾಣ್ಯವನ್ನು ಕೊಡದಿದ್ದರೆ, ನೀನು ಯಾವ ರೀತಿ ಮೊರೆಯಿಟ್ಟು ಗೋಳಾಡಿದರೂ ನಿನ್ನ ಮಗನ ಹೆಣವನ್ನು ಸುಡುವುದಕ್ಕೆ ಬಿಡುವುದಿಲ್ಲ; ಇಂದು ಎನಗೆ ಕೊಡಲ್ ಏನು ಇಲ್ಲ. ಲೋಗರ ಮನೆಯ ಬಡದಾಸಿ ಕರುಣಿಸು=ಈಗ ನನ್ನ ಬಳಿ ಸುಡುಗಾಡಿನ ನೆಲದ ತೆರಿಗೆಯನ್ನು ಕೊಡಲು ಯಾವ ಹಣವೂ ಇಲ್ಲ. ಸಿರಿವಂತರ ಮನೆಯ ಬಡದಾಸಿ ನಾನು. ದಯೆತೋರು;
ನಿನ್ನ ಕೊರಳಿನೊಳ್ ಇರ್ದ ಕಡು ಚೆಲುವ ತಾಳಿಯನ್ ಅದನ್ ಅಡವನಿರಿಸಿ ಬಳಿಕ ನೀ ಬಿಡಿಸಿಕೋ ಎನಲು=ನಿನ್ನ ಕೊರಳಿನಲ್ಲಿರುವ ತುಂಬ ಅಂದವಾದ ತಾಳಿಯನ್ನು ಅಡವಿಟ್ಟು ಹಣವನ್ನು ತರುವುದು. ಅನಂತರ ಅದನ್ನು ಬಿಡಿಸಿಕೊಳ್ಳುವೆಯಂತೆ ಎಂದು ಪರಿಹಾರವನ್ನು ಸೂಚಿಸಲು; ಮಡದಿ ಕರನೊಂದು=ಚಂದ್ರಮತಿಯು ಬಹಳವಾಗಿ ಸಂಕಟಕ್ಕೆ ಒಳಗಾಗಿ ಪರಿತಪಿಸುತ್ತ; ಅಕಟ… ಪೊಡವಿಪತಿ ಮಡಿದ ಕೇಡು ಅಡಸಿತು. ಅಲ್ಲದಡೆ ಎನ್ನ ಗುಪ್ತ ಮಂಗಳಸೂತ್ರದ ಎಡೆಯ ಹೊಳೆಹೊಳೆವ ಐದೆದಾಳಿಯನ್ ಇದನ್ ಶ್ವಪಚನ್ ಎಂತು ಕಂಡಪನ್=ಅಯ್ಯೋ… ಹರಿಶ್ಚಂದ್ರನು ಸಾವನ್ನಪ್ಪಿದ ದುರಂತ ಉಂಟಾಗಿದೆ. ಇಲ್ಲದಿದ್ದರೆ ನನ್ನ ಕೊರಳಿನಲ್ಲಿ ಹೊಳೆಹೊಳೆಯುತ್ತಿರುವ ಮುತ್ತಯ್ದೆತನದ ಮಂಗಳಸೂತ್ರವಾದ ತಾಳಿಯನ್ನು ಈ ಚಂಡಾಲನು ಹೇಗೆ ತಾನೆ ನೋಡುತ್ತಿದ್ದ; “ತನ್ನ ಕೊರಳಿನಲ್ಲಿದ್ದ ತಾಳಿಯು ಗಂಡನಾದ ಹರಿಶ್ಚಂದ್ರನಿಗೆ ಮಾತ್ರ ಕಾಣುತ್ತಿತ್ತು. ಹರಿಶ್ಚಂದ್ರನು ಸತ್ತುಹೋಗಿರುವುದರಿಂದ, ಈಗ ಅದು ಬೇರೆಯವರ ಕಣ್ಣಿಗೆ ಕಾಣುತ್ತಿದೆ” ಎಂಬ ಒಂದು ನಂಬಿಕೆಯು ಚಂದ್ರಮತಿಯ ಮನದಲ್ಲಿತ್ತು;
ವಿಗತ ಸಪ್ತದ್ವೀಪಪತಿಯ ಬಸುರಲಿ ಬಂದು… ಮಗನೆ, ನಿನಗೆ ಒಮ್ಮೆಟ್ಟು ಸುಡುಗಾಡು ಹಗೆಯಾಯ್ತೆ=ಈ ಮೊದಲು ಏಳು ದ್ವೀಪಗಳ ಒಡೆಯನಾಗಿದ್ದ ಹರಿಶ್ಚಂದ್ರ ಮಹಾರಾಜನ ಮಗನಾಗಿ ಹುಟ್ಟಿಬಂದು, ಮಗನೇ ಈಗ ನಿನಗೆ ಸುಡುಗಾಡಿನಲ್ಲಿ ಒಂದು ಪಾದದ ಅಗಲ ಜಾಗ ಸಿಗದಂತಾಯಿತೆ; ಮಿಗೆ ಸಕಲ ಲೋಕದೊಳು ತನ್ನ ಆಣೆ ಸಲುವನ ಕುಮಾರನ್ ಎನಿಸುವ ನಿನ್ನನು ಬಗೆಯದೆ ಈ ಚಂಡಾಲನ್ ಆಣೆಯಿಡುವಂತಾಯ್ತೆ=ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿನಲ್ಲಿಯೇ ಯಾರ ಆಜ್ನೆಯು ನಡೆಯುತ್ತಿತ್ತೋ ಅಂತಹ ರಾಜನಾಗಿದ್ದವನ ಮಗನಾದ ನಿನ್ನನ್ನು ಯಾರೆಂದು ತಿಳಿಯದೆ, ಈ ಚಂಡಾಲನು ನಿನಗೆ ಆಜ್ನೆ ಮಾಡುವಂತಾಯಿತೆ; ಅಂದರೆ ನಿನ್ನನ್ನು ಸುಡಲು ಕಟ್ಟಲೆಯನ್ನು ಹಾಕುವಂತಾಯಿತೆ; ಜಗದ ನವನಿಧಿಗೆ ಒಡೆಯನ ಆತ್ಮಭವನ್ ಎನಿಸಿ… ಮುಟ್ಟಿಗೆಯ ಸುಂಕದ ಹಾಗವಿಲ್ಲಾಯ್ತೆ… ಮಗನೆ… ಎಂದು ಹಂಬಲಿಸುತ ಅಳಲಿದಳು=ಜಗತ್ತಿನಲ್ಲಿರುವ ಒಂಬತ್ತು ಬಗೆಯ ಸಂಪತ್ತಿಗೆ ಒಡೆಯನಾಗಿದ್ದ ಹರಿಶ್ಚಂದ್ರನ ಮಗನಾಗಿ ಹುಟ್ಟಿ, ಸುಡುಗಾಡಿನಲ್ಲಿ ಚಿತೆಯ ಸುಂಕವನ್ನು ಕೊಡಲು ಹಣವಿಲ್ಲದಂತಾಯಿತೆ… ಎಂದು ಪ್ರಲಾಪಿಸುತ್ತ ಸಂಕಟಪಟ್ಟಳು;
ವನಿತೆಯ ಅಳಲಮ್ ಕೇಳ್ದು ನಡುಗಿ=ಚಂದ್ರಮತಿಯ ಪ್ರಲಾಪವನ್ನು ಕೇಳಿದ ಹರಿಶ್ಚಂದ್ರನು ತೀವ್ರವಾದ ಸಂಕಟದಿಂದ ನಡುಗಿಹೋಗಿ; ವಿಶ್ವಾಮಿತ್ರ ಮುನಿ ಎನಗೆ ಮತ್ತೆ ಮಾಡಿದ ತೊಡಕು ಇದಾಗದಿರದು… ಎನುತ ಮನದೊಳು ಮರುಗುತ=ವಿಶ್ವಾಮಿತ್ರ ಮುನಿಯು ನನಗೆ ಮತ್ತೆ ತಂದೊಡ್ಡಿರುವ ಕಶ್ಟವಲ್ಲದೆ, ಇದು ಬೇರೆಯಲ್ಲ ಎಂದುಕೊಂಡು ಮನದಲ್ಲಿ ಕೊರಗುತ್ತ; ಎಲೆ ತರುಣಿ, ಈ ತರಳನ್ ಆವ ಲೋಕದೊಳ್ ಆಣೆ ಸಲುವುದು ಎನಿಸುವ ಭೂಪನ ತನಯನ್=ಎಲೆ ತರುಣಿ, ಈ ಹುಡುಗನು ಯಾವ ರಾಜ್ಯವನ್ನಾಳುವ ರಾಜನ ಮಗ; ನೆಲದೆರೆಯನ್ ಇಕ್ಕು ಎನಲು, ಕೊಡಲಿಲ್ಲದೆ ಅಧಿಕರ ಪೆಸರ್ಗೊಳಲು ಬಿಡುವೆನೆ=ಸುಡುಗಾಡಿನ ನೆಲದ ತೆರಿಗೆಯನ್ನು ಕೊಡು ಎಂದು ನಾನು ಕೇಳಲು, ಕೊಡಲು ಹಣವಿಲ್ಲದೆ, ದೊಡ್ಡವರ ಹೆಸರನ್ನು ಹೇಳಿದರೆ ಬಿಟ್ಟುಬಿಡುತ್ತೇನೆಯೇ; ಶೋಕಿಸುವ ಹೊತ್ತು, ಹುಸಿದು ಶೋಕಿಸುವೊಡೆ ಏನಹುದು ಎಂದನು ಅವನೀಶನು=ಸಂಕಟದಿಂದ ಪರಿತಪಿಸುವ ಸಮಯದಲ್ಲಿ ಸುಳ್ಳನ್ನಾಡುತ್ತ ಗೋಳಾಡಿದರೆ ಏನು ಪ್ರಯೋಜನ ಎಂದು ಹರಿಶ್ಚಂದ್ರನು ಚಂದ್ರಮತಿಯನ್ನು ನಿಂದಿಸಿದನು;
ಹಿಂದುಳಿದ ಸಂಪದವನ್ ಎಣಿಸುವುದು ಹುಸಿಯಲ್ಲ. ಇಂದು ಈಗ ತೋರಬಪ್ಪುದೆ. ಹುಸಿಯದುಂಟೆ… ತಪ್ಪೆ=ನಮಗೆ ಹಿಂದೆ ಇದ್ದ ಸಂಪತ್ತನ್ನು ನೆನೆದುಕೊಳ್ಳುವದು ಹೇಗೆ ಸುಳ್ಳಾಗುತ್ತದೆ. ಅದು ಇಂದು ನಮ್ಮ ಪಾಲಿಗೆ ಬರುವುದಿಲ್ಲ ಎನ್ನುವುದು ನಿಜ. ಆದರೆ ಅದನ್ನು ನೆನೆದುಕೊಳ್ಳುವುದರಲ್ಲಿ ತಪ್ಪೇನು; ಅದಕೇನ್=ಹಾಗೆ ನೆನೆದುಕೊಳ್ಳುವುದರಿಂದ ಪ್ರಯೋಜನವೇನು ಎಂದ ಹರಿಶ್ಚಂದ್ರನು ಮತ್ತೆ ಆ ಹುಡುಗನ ಬಗ್ಗೆ ವಿಚಾರಿಸುತ್ತಾನೆ; ಆತನ್ ಆರ ಮಗನ್… ಆವ ಪೆಸರ್… ಆವ ನಾಡ ಅರಸನ್=ಆ ಹುಡುಗನು ಯಾರ ಮಗ… ಅವನ ಹೆಸರೇನು… ಅವನ ತಂದೆ ಯಾವ ನಾಡಿನ ಅರಸ; ಸಂದ ರವಿಕುಲತಿಲಕನ್ ಎನಿಪ ಆ ತ್ರಿಶಂಕುವಿನ ನಂದನನ್ ಅಯೋಧ್ಯಾಪತಿ ಹರಿಶ್ಚಂದ್ರನ್ ಎನೆ=ಹೆಸರಾಂತ ಸೂರ್‍ಯವಂಶದಲ್ಲಿಯೇ ಉತ್ತಮನು ಎನಿಸದ ಆ ತ್ರಿಶಂಕು ಮಹಾರಾಜನ ಮಗ ಅಯೋದ್ಯಾಪತಿಯಾದ ಹರಿಶ್ಚಂದ್ರ ಎಂದು ಚಂದ್ರಮತಿಯು ಹೇಳಲು; ನೊಂದು=ಹರಿಶ್ಚಂದ್ರನು ಮನದಲ್ಲಿ ಗಾಸಿಗೊಂಡು; ಆತನ ಅಂಗನೆ… ಕುಮಾರರ್ ಏನಾದರ್… ಎಲ್ಲಿ ಇರ್ದಪರು ಹೇಳ್=ಆತನ ಹೆಂಡತಿ ಮತ್ತು ಮಗ ಏನಾದರು… ಈಗ ಅವರು ಎಲ್ಲಿದ್ದಾರೆ ಹೇಳು;
ಪೊಡವೀಶ್ವರನ್ ಹಿಂದೆ ಹರಸಿ ಹಾಳಮ್ ಬಿಟ್ಟು ಹಡೆದ ಸುತನ್ ಈತನ್… ಆತನ ವನಿತೆ ನಾನ್=ರಾಜನಾಗಿದ್ದ ಹರಿಶ್ಚಂದ್ರನು ಈ ಹಿಂದೆ ವರುಣದೇವನಿಗೆ ಹರಸಿಕೊಂಡು ನೆಲವನ್ನು ದಾನವಾಗಿ ನೀಡಿ ಪಡೆದ ಮಗನು ಈತ… ಹರಿಶ್ಚಂದ್ರನ ಹೆಂಡತಿ ನಾನು; ಈ ತನಯನ್ ಮಡಿದ ಕಾರಣ ಆವುದು=ಈ ಮಗನು ಸಾಯುವುದಕ್ಕೆ ಕಾರಣವೇನು; ಎಮ್ಮಿಬ್ಬರಮ್ ಮಾರುಗೊಂಡ ಒಡೆಯನ ಅರಮನೆಗೆ ಹುಲುಹುಳ್ಳಿಯಮ್ ತಪ್ಪೆನ್ ಎಂದು ಅಡವಿಗೆ ಎಯ್ದಿದಡೆ, ಅಲ್ಲಿ ಕಾಳೋರಗಮ್ ಕಚ್ಚಿ ಈ ಕಂದನ್ ಮಡಿದನ್=ನಮ್ಮಿಬ್ಬರನ್ನು ಕೊಂಡುಕೊಂಡ ಒಡೆಯನ ದೊಡ್ಡ ಮನೆಗೆ ಹುಲ್ಲು ಮತ್ತು ಪುಳ್ಳೆಯನ್ನು ತರುತ್ತೇನೆ ಎಂದು ಕಾಡಿಗೆ ಲೋಹಿತಾಶ್ವನು ಹೋದರೆ, ಅಲ್ಲಿ ಬಯಂಕರವಾದ ಹಾವು ಕಚ್ಚಿ ಈ ಕಂದನು ಸತ್ತನು. ಈ ವಿಧಿಗೆ ಸೇರಿತು=ಈ ರೀತಿಯ ಸಾವು ಇವನ ಹಣೆಬರಹದಲ್ಲಿತ್ತು; ಹರಿಶ್ಚಂದ್ರನ ಇರವೇನ್= ಈಗ ಹರಿಶ್ಚಂದ್ರನು ಸ್ತಿತಿಯು ಹೇಗಿದೆಯೊ ಎಂದು ಚಂದ್ರಮತಿಯು ಪರಿತಪಿಸಿದಳು; ನುಡಿಯಲ್ ಅರಿಯದೆ=ಹೇಗೆ ಮಾತನಾಡಬೇಕೆಂಬುದನ್ನು ತಿಳಿಯದೆ/ಹೇಗೆ ವ್ಯವಹರಿಸಬೇಕು ಎಂಬ ಅರಿವಿಲ್ಲದೆ;
ಸಕಲ ರಾಜ್ಯಮಮ್ ಹೋಗಾಡಿ=ಸಕಲ ರಾಜ್ಯವನ್ನು ಕಳೆದುಕೊಂಡು; ಕಡೆಗೆ ಅಧಿಕ ಋಣಿಯಾಗಿ ನೆಲೆಗೆಟ್ಟು=ಕೊನೆಗೆ ಹೆಚ್ಚಿನ ಸಾಲಗಾರನಾಗಿ ನೆಲೆಯನ್ನು ಕಳೆದುಕೊಂಡು; ಮಂತ್ರಿ ಬೆರಸು ಅಡವಿಗುರಿಯಾಗಿ=ಮಂತ್ರಿಯ ಜತೆಗೂಡಿ ಕಾಡುಪಾಲಾಗಿ; ಕೈವಿಡಿದ ಸತಿಪುತ್ರರಮ್ ಸುಕ್ಷೇತ್ರದೊಳಗೆ ಮಾರಿ=ಕಯ್ ಹಿಡಿದ ಹೆಂಡತಿಯನ್ನು ಮತ್ತು ಹೆತ್ತ ಮಗನನ್ನು ಕಾಶಿನಗರದಲ್ಲಿ ಮಾರಾಟಮಾಡಿ; ಕಡೆಗೆ ಚಂಡಾಲ ಕಿಂಕರನಾಗಿ=ಕೊನೆಗೆ ಚಂಡಾಲನ ದಾಸನಾಗಿ; ದೋಷಕ್ಕೆ ನಡುಗದೆ=ಅಪಮಾನಕ್ಕೆ ಹೆದರದೆ; ಕುಲಾಚಾರಮಮ್ ಬಿಟ್ಟು=ಕುಲದ ಸಂಪ್ರದಾಯ ಮತ್ತು ಆಚಾರವನ್ನು ತ್ಯಜಿಸಿ; ಜನಕೆ ನಗೆಗೆಡೆಯಾದ ಪಾತಕ ಹರಿಶ್ಚಂದ್ರನ್ ಅವನನ್ ಏನೆಂದು ನೆನೆದಪೆ=ಜನಗಳ ಬಾಯಲ್ಲಿ ತಿರಸ್ಕಾರದ ನಗೆಗೆ ಈಡಾದ ಪಾಪಿ ಹರಿಶ್ಚಂದ್ರ. ಅವನಲ್ಲಿ ಯಾವ ಒಳ್ಳೆಯ ಗುಣವಿದೆಯೆಂದು ನೆನೆದುಕೊಳ್ಳುತ್ತಿರುವೆ;
ಚಂದ್ರಮತಿಯು ದೇವರಾದ ಶಿವನ ರೂಪ ಮತ್ತು ಮಹಿಮೆಯ ಬಗ್ಗೆ ಜನಮನದಲ್ಲಿರುವ ಹತ್ತಾರು ಬಗೆಯ ನಂಬಿಕೆ ಮತ್ತು ಕಲ್ಪನೆಯ ಚಿತ್ರಗಳನ್ನು ಬಣ್ಣಿಸುತ್ತ, ಶಿವನು ಯಾವ ರೂಪಿನಲ್ಲಿದ್ದರೂ, ಯಾವ ವೇಶವನ್ನು ತೊಟ್ಟಿದ್ದರೂ ಮತ್ತು ಏನನ್ನೇ ಮಾಡಿದ್ದರೂ ಇಡೀ ಜಗತ್ತಿಗೆ ಹೇಗೆ ಆತನೊಬ್ಬನನ್ನೇ ದೇವರೆಂದು ಜನರು ನಂಬಿದ್ದಾರೆಯೋ ಅಂತೆಯೇ ಹರಿಶ್ಚಂದ್ರನು ಈಗ ಯಾವುದೇ ರೀತಿಯಲ್ಲಿದ್ದರೂ… ಏನೇ ಆಗಿದ್ದರೂ ಆತನೇ ನನ್ನ ಪತಿ… ನನಗೆ ಗತಿ ಮತ್ತು ಮತಿ ಎಂದು ಹೇಳತೊಡಗುತ್ತಾಳೆ;
ಜಡೆವೊತ್ತಡಮ್=ಶಿವನು ತಲೆಯಲ್ಲಿ ಜಡೆಯನ್ನು ಎತ್ತಿಕಟ್ಟಿಕೊಂಡು ಸಂನ್ಯಾಸಿಯಾಗಿದ್ದರೂ; ಹಸಿಯ ತೊವಲ್ ಉಟ್ಟಡಮ್=ಶಿವನು ಹಸಿಯ ತೊಗಲನ್ನು ಉಡುಗೆಯಾಗಿ ಉಟ್ಟುಕೊಂಡಿದ್ದರೂ; ನಾಡ ಸುಡುಗಾಡಿನೊಳಗೆ ಇರ್ದಡಮ್=ಶಿವನು ನಾಡಿನ ಸುಡುಗಾಡಿನಲ್ಲಿ ವಾಸವಿದ್ದರೂ; ನರಕಪಾಲಮಮ್ ಪಿಡಿದು ತಿರಿದು ಇರ್ದಡಮ್=ಶಿವನು ತಲೆಬುರುಡೆಯನ್ನು ಹಿಡಿದುಕೊಂಡು ಬಿಕ್ಕೆಯನ್ನು ಬೇಡುತ್ತಿದ್ದರೂ ;
ವಿಷ ಉಂಡಡಮ್= ಶಿವನು ನಂಜನ್ನು ಕುಡಿದರೂ; ದೇವತೆಗಳು ಮತ್ತು ರಕ್ಕಸರು ಹಾಲಿನ ಕಡಲನ್ನು ಕಡೆದಾಗ ಅಮ್ರುತದ ಜತೆಗೆ ವಿಶವು ಬಂದಿತೆಂದು, ಅಮ್ರುತವನ್ನು ದೇವತೆಗಳು ಕೊಂಡೊಯ್ದರೆ, ವಿಶವನ್ನು ಶಿವನು ಕುಡಿದು ಜಗತ್ತಿನ ಜೀವಿಗಳನ್ನು ಕಾಪಾಡಿದನೆಂಬ ಪುರಾಣ ಕತೆಯಿದೆ; ಶವಶಿರೋಮಾಲೆ ಕಟ್ಟಿರ್ದಡಮ್=ತಲೆಬುರುಡೆಯ ಮಾಲೆಯನ್ನು ಹಾಕಿಕೊಂಡಿದ್ದರೂ; ಕಡು ಮರುಳ್ ಪಡೆಯ ಸಂಗಡ ಬತ್ತಲಿರ್ದಡಮ್=ದೊಡ್ಡ ಸಂಕೆಯ ಪಿಶಾಚಿಗಳ ಗುಂಪಿನೊಡನೆ ಮಯ್ ಮೇಲೆ ಬಟ್ಟೆಯಿಲ್ಲದೆ ಬತ್ತಲೆಯಿದ್ದರೂ; ಮೃಡನಲ್ಲದೆ ಅಖಿಲಲೋಕಕ್ಕೆ ಒಡೆಯನಿಲ್ಲ ಎಂಬ ನುಡಿಯಂತಿರೆ=ಶಿವನಲ್ಲದೆ ಸಮಸ್ತಲೋಕಕ್ಕೆ ಒಡೆಯನಿಲ್ಲ ಎಂಬ ನುಡಿಯಂತೆ; ಎನಗೆ ಆ ಹರಿಶ್ಚಂದ್ರನಲ್ಲದೆ ಇನ್ನಾರು ಗತಿ ಮತಿ ಎಂದಳು=ನನಗೆ ಆ ಹರಿಶ್ಚಂದ್ರನಲ್ಲದೆ ಬೇರೆ ಇನ್ನಾರು ದಿಕ್ಕಿಲ್ಲವೆಂದು… ತನ್ನ ಪಾಲಿಗೆ ಈಗಲೂ ಹರಿಶ್ಚಂದ್ರನೇ ಸರ್‍ವಸ್ವವಾಗಿದ್ದಾನೆ ಎಂದು ನುಡಿದಳು; ಚಂದ್ರಮತಿಯು ತನ್ನ ಬಗ್ಗೆ ಆಡಿದ ಒಲವು ಮತ್ತು ನಂಬಿಕೆಯ ನುಡಿಗಳನ್ನು ಕೇಳಿ ಹರಿಶ್ಚಂದ್ರನು ಹಲವಾರು ಬಗೆಯ ಒಳಮಿಡಿತಗಳ ಒತ್ತಡದಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ;
ಉರುವ ಅಬಲೆಯ ಉಚಿತವಚನಮ್ ಕರ್ಣಪಥದಿನ್ ಒಳಗೆ ಎರಗಿ=ಉತ್ತಮಳಾದ ಚಂದ್ರಮತಿಯ ಒಲವಿನ ಮತ್ತು ನಂಬಿಕೆಯ ಮಾತುಗಳು ಕಿವಿಯ ಮೂಲಕ ಮನವನ್ನು ಮುಟ್ಟಿ; ಚಿತ್ತವನು ತೊತ್ತಳದುಳಿದು=ಮನಸ್ಸನ್ನು ಗಾಸಿಗೊಳಿಸಿ; ಧೈರ್ಯಮಮ್ ಬರಿಕೈದು=ಮನದ ಕೆಚ್ಚನ್ನು ಬರಿದುಮಾಡಿ; ಕರಣಂಗಳಮ್ ಕದಡಿ=ಪಂಚೇಂದ್ರಿಯಗಳನ್ನು ಕಳವಳಕ್ಕೆ ಗುರಿಪಡಿಸಿ; ಹೆಮ್ಮೆಯಮ್ ಹರಿದು=ತನ್ನ ಬಗ್ಗೆ ತನ್ನಲ್ಲಿಯೇ ಇದ್ದ ಮೇಲರಿಮೆಯನ್ನು ಅಡಗಿಸಿ; ಅಳಲನ್ ಒದೆದು ಎಬ್ಬಿಸಿ=ಈಗ ಬಂದಿರುವ ಸಂಕಟವನ್ನು ಸರಿಯಾಗಿ ತಿಳಿದುಕೊಳ್ಳುವಂತೆ ಮಾಡಿ; ಮರುಕಮಮ್ ಮಸೆದು=ದುಗುಡವನ್ನು ಹೆಚ್ಚಿಸಿ; ಕಂಬಿನಿ ಪೊನಲ ಕೋಡಿಯಮ್ ಕೊರೆದು=ಕಣ್ಣೀರಿನ ಪ್ರವಾಹದ ಕೋಡಿಯನ್ನು ಕೊರೆದು; ಮತಿಗತಿ ಮಾಯೆಯಮ್ ತೋರಿ ಮೀರಿ=ಬುದ್ದಿಗೆ ಕವಿದುಕೊಂಡಿರುವ ತಪ್ಪುಗ್ರಹಿಕೆಗಳನ್ನು ತಿಳಿಯುವಂತೆ ಮಾಡಿ; ನೇಸರ ಕುಲಜನ್ ಓರಂತೆ ಸಿಗ್ಗಾಗಿ=ಸೂರ್‍ಯಕುಲದ ಹರಿಶ್ಚಂದ್ರನು ಒಂದೇ ಸಮನೆ ನಾಚಿಕೊಂಡು; ತಾ ಮಾಡಿದ ಅಪರಾಧಮಮ್ ನೆನೆದನ್=ಇದುವರೆಗೂ ತಾನು ಮಾಡಿದ ತಪ್ಪುಗಳೆಲ್ಲವನ್ನೂ ನೆನೆದುಕೊಂಡನು;
ಈ ಸತಿಯನ್… ಈ ಶುಚಿಯನ್… ಈ ಪತಿವ್ರತೆಯ ನಾನ್ ಈಸು ಧಾವತಿಗೆ ಒಳಗುಮಾಡಿದೆನು=ಇಂತಹ ಹೆಂಡತಿಯನ್ನು… ಇಂತಹ ಶೀಲವತಿಯನ್ನು…ಇಂತಹ ಪತಿವ್ರತೆಯನ್ನು ಇಶ್ಟೊಂದು ಸಂಕಟಕ್ಕೆ ಗುರಿಮಾಡಿದೆನು; ನೀಚ ದ್ವಿಜೇಶಂಗೆ ಈ ಸುತನನ್ ಈ ಸುಖಿಯನ್ ಮಾರಿ ಮರೆದು=ನೀಚನಾದ ಬ್ರಾಹ್ಮಣನಿಗೆ ಇಂತಹ ಮಗನನ್ನು… ಇಂತಹ ಕೋಮಲೆಯನ್ನು ಮಾರಿ, ಅವರನ್ನು ಮರೆತು; ಈ ಸೊಬಗ ಸುಕುಮಾರನ ಓಸರಿಸದೆ ಉರಗ ಕೊಲುವಂತೆ ಮಾಡಿದೆನ್ ಎಂಬ=ಇಂತಹ ಚೆಲುವನಾದ ಸುಪುತ್ರನ ಒಳಿತನ್ನು ಬಯಸದೆ ಹಾವು ಕಚ್ಚಿ ಸಾಯುವಂತೆ ಮಾಡಿದೆನು ಎನ್ನುವ; ವಾರಾಶಿ=ಕಡಲು; ಹೇಸಿಕೆಯ ವಾರಾಶಿ ತುಂಬಿ ತುಳುಕಾಡಿ=ಜುಗುಪ್ಸೆಯ ಬಾವನೆಯು ತುಂಬಾ ಹೆಚ್ಚಾಯಿತು ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ; ಹೇಸಿಕೆಯ ವಾರಾಶಿ ತುಂಬಿ ತುಳುಕಾಡಿ ಹೊರಸೂಸುವ ಅಳಲಮ್ ನಿಲಿಸಿ ನಿಲಿಸಲಾರದೆ ಮಗನ ಮೇಲೆ ದೊಪ್ಪನೆ ಕೆಡೆದನು=ತನ್ನ ಬೇಜವಾಬ್ದಾರಿತನದ ವರ್‍ತನೆಯ ಬಗ್ಗೆ ಜುಗುಪ್ಸೆಯ ಕಡಲು ತುಂಬಿ ತುಳಿಕಾಡಿ ಹೊರಚೆಲ್ಲುತ್ತಿರುವ ಸಂಕಟವನ್ನು ತಡೆದುಕೊಳ್ಳಲಾಗದೆ ಮಗನ ಮೇಲೆ ದೊಪ್ಪನೆ ಉರುಳಿದನು;
ತನಗೆ ಹೊಯ್ ಕೈಯಪ್ಪ ಭೂಭುಜರನ್ ಓಲೈಸಿ ಧನವನ್ ಆರ್ಜಿಸಿ ತಂದು, ಸೆರೆಯ ಬಿಡಿಸುವನ್ ಎಮ್ಮ ಜನಪನೆಂದು ಆನ್ ಇರಲು=ತನಗೆ ಸಮಾನರಾಗಿರುವ ರಾಜರ ನೆರವಿನಿಂದ ಸಂಪತ್ತನ್ನು ಗಳಿಸಿ ತಂದು, ಬ್ರಾಹ್ಮಣನ ಮನೆಯ ಜೀತದ ಸೆರೆಯಿಂದ ನಮ್ಮನ್ನು ಬಿಡಿಸುತ್ತಾನೆ ನಮ್ಮ ರಾಜನೆಂದು ನಾನು ನಂಬಿಕೊಂಡಿರಲು; ಮಾದಿಗಂಗೆ ಆಳಾಗಿ ಸುಡುಗಾಡ ಕಾವ ಭಾಗ್ಯ ನಿನಗಾಯ್ತೆ ಭೂಪಾಲ ಎಂದು=ಮಾದಿಗನಿಗೆ ಆಳಾಗಿ ಸುಡುಗಾಡನ್ನು ಕಾಯುವ ಬಾಗ್ಯ ನಿನಗೆ ಆಯಿತೆ ರಾಜನೇ ಎಂದು ನುಡಿಯುತ್ತ; ತೂಕದ ಕೋಲ ತೊಲೆ=ವಸ್ತುಗಳನ್ನು ತೂಕ ಮಾಡಲು ಬಳಸುವ ತಕ್ಕಡಿಯ ಮೇಲುಬಾಗದಲ್ಲಿರುವ ದಪ್ಪನೆಯ ಕೋಲು; ದುಃಖಕ್ಕೆ ಪುತ್ರನ ಶೋಕದ ಉರಿಗೆ ತನು ಹೇವರಿಸಿ= ಹರಿಶ್ಚಂದ್ರನಿಗೆ ಬಂದೊದಗಿರುವ ಸಂಕಟಕ್ಕೆ ಮತ್ತು ಮಗ ಲೋಹಿತಾಶ್ವನ ಸಾವಿನ ಶೋಕದ ಉರಿಗೆ ದೇಹವು ಕುಗ್ಗಿ; ವನಿತೆ ತಾ ಮನನೊಂದು ಬೆಂದು ಬೆರಗಾಗಿ ಚಿಂತಿಸುತ=ಚಂದ್ರಮತಿಯು ಮನನೊಂದು ಬೆಂದು ಅಚ್ಚರಿಗೊಂಡು ಚಿಂತಿಸುತ್ತ; ತೂಕದ ಕೋಲ ತೊಲೆಯಾದಳು= ವಸ್ತುವಿನ ಬಾರ ಮತ್ತು ತೂಕದ ಬಟ್ಟಿನ ಬಾರವೆರಡನ್ನು ತಡೆಯಲಾರದೆ ಅತ್ತಿತ್ತ ಹೊಯ್ದಾಡುವ ತಕ್ಕಡಿಯ ದಂಡದಂತೆ ಮಾನಸಿಕ ಸಂಕಟದ ತುಯ್ದಾಡುವಿಕೆಯಲ್ಲಿ ಸಿಲುಕಿದಳು;
ಕಂದ… ಪ್ರಕಟ ರಾಜ್ಯಭ್ರಷ್ಟನಾಗಿ ಚಂಡಾಲಸೇವಕನಾದ ಪಾಪಿಯನ್ ನೀಚನನ್ ಅನೂನಪಾತಕನನ್ ಎನ್ನನ್ ಪೋಲ್ತು ಕೆಡದೆ=ಮಗನೇ… ಎಲ್ಲರಿಗೂ ಗೊತ್ತಿರುವಂತೆ ರಾಜ್ಯವನ್ನು ಕಳೆದುಕೊಂಡು ಚಂಡಾಲನ ದಾಸನಾದ ಪಾಪಿಯೂ ನೀಚನೂ ಹೆಚ್ಚಿನ ತಪ್ಪುಗಳನ್ನು ಮಾಡಿದ ನನ್ನಂತೆ ನೀನು ಹಾಳಾಗದೆ; ನಿಮ್ಮಜ್ಜ ತ್ರಿಶಂಕುಭೂವರನ ಅಂದದಿ ಸಕಲ ರಾಜ್ಯಕ್ಕೆ ಈ ಕುಮಾರಕನ್ ಒಡೆಯನಾಗದಿರನ್ ಎಂಬ ನಂಬುಗೆಯಲ್ ಆನ್ ಇರಲು=ನಿಮ್ಮ ಅಜ್ಜನಾದ ತ್ರಿಶಂಕು ಮಹಾರಾಜನಂತೆ ಸಕಲ ರಾಜ್ಯಕ್ಕೆ ಈ ನನ್ನ ಮಗನು ಒಡೆಯನಾಗದೆ ಇರುವುದಿಲ್ಲ ಎಂಬ ನಂಬುಗೆಯಿಂದ ನಾನು ಕೂಡಿದ್ದರೆ; ಅಕಟ, ನೀನು ನಿಷ್ಕಾರಣಮ್ ಮಡಿವರೇ ತಂದೆ ಎಂದು ಅರಸನು ಅಳಲ್ ತೊಡಗಿದನ್=ಅಯ್ಯೋ… ನೀನು ವಿನಾಕಾರಣ ಈ ರೀತಿ ಸಾವನ್ನಪ್ಪುತ್ತಾರೆಯೇ ತಂದು ಎಂದು ಹರಿಶ್ಚಂದ್ರನು ಸಂಕಟದಿಂದ ಪರಿತಪಿಸತೊಡಗಿದನು; ಮುಂದೆ ನೀನ್ ಆಳಲಿಹ ಧರೆಯನ್ ಅನ್ಯರಿಗೆ ಇತ್ತನ್ ಎಂದು ನುಡಿಸೆಯೊ=ಮುಂದೆ ನೀನು ಆಳಬೇಕಾಗಿದ್ದ ಬೂಮಂಡಲವನ್ನು ಬೇರೆಯವರಿಗೆ ನಾನು ಕೊಟ್ಟೆನು ಎಂಬ ಮುನಿಸಿನಿಂದ ನನ್ನನ್ನು ಮಾತನಾಡಿಸುತ್ತಿಲ್ಲವೋ;
ಮತ್ತೆ ಅದಲ್ಲದೆ ಎಮ್ಮಿಬ್ಬರಮ್ ತಂದು ಲೋಗರಿಗೆ ಮಾರಿದನ್ ಎಂದು ನುಡಿಸೆಯೋ=ಅದೂ ಅಲ್ಲದೆ ನನ್ನನ್ನು ಮತ್ತು ನನ್ನ ತಾಯಿ ಚಂದ್ರಮತಿಯನ್ನು ಬೇರೆಯ ಜನರಿಗೆ ಮಾರಿದನು ಎಂಬ ಸಂಕಟದಿಂದ ನನ್ನನ್ನು ಮಾತನಾಡಿಸುತ್ತಿಲ್ಲವೋ; ಚಾಂಡಾಲಸೇವೆ ಮಾಡಿ ನಿಂದೆಯಿಲ್ಲದ ಸೂರ್ಯಕುಲಕೆ ಕುಂದಮ್ ತಂದನ್ ಎಂದು ನುಡಿಸೆಯೊ=ಚಾಂಡಾಲನ ದಾಸನಾಗಿ ಕಳಂಕವಿಲ್ಲದ ಸೂರ್‍ಯವಂಶಕ್ಕೆ ಕೆಟ್ಟಹೆಸರನ್ನು ತಂದನು ಎಂದು ನನ್ನನ್ನು ಮಾತನಾಡಿಸುತ್ತಿಲ್ಲವೋ; ನುಡಿಯದಿಹ ಹದನನ್ ಅರುಪಬೇಕು ಎಂದು ಒರಲಿ ಬಾಯ್ವಿಟ್ಟು ಕರೆದು ಸುತನಲ್ಲಿ ಮಾರುತ್ತರವನು ಹಾರಿದನು=ನಾನು ಎದುರಿಗೆ ಇದ್ದರೂ ನನ್ನೊಡನೆ ಮಾತನಾಡದಿರುವುದಕ್ಕೆ ಕಾರಣವೇನೆಂಬುದನ್ನು “ಲೋಹಿತಾಶ್ವನೇ ತಿಳಿಸು” ಎಂದು ಸಂಕಟದಿಂದ ಪ್ರಲಾಪಿಸುತ್ತ, ಮಗನಿಂದ ಮರುಮಾತನ್ನು ಕೇಳಲು ಬಯಸಿದನು; ಅರಿರಾಯರೊಳು ಕಾದಿ ಮಡಿದಾತನಲ್ಲ=ಶತ್ರುರಾಜರೊಡನೆ ಹೋರಾಡಿ ಮರಣವನ್ನು ಅಪ್ಪಿದವನಲ್ಲ; ಮುನಿವರರ ಯಾಗವ ಕಾದು ಮಡಿದಾತನಲ್ಲ= ಉತ್ತಮರಾದ ಮುನಿಗಳ ಯಾಗದ ಆಚರಣೆಗೆ ಅಡಚಣೆಯನ್ನು ಒಡ್ಡುವವರೊಡನೆ ಹೋರಾಡಿ ಸತ್ತವನಲ್ಲ; ದೇವರಿಗೆ ಹಿತವಾಗಿ ಮಡಿದವನಲ್ಲ=ದೇವರಿಗೆ ಮೆಚ್ಚುಗೆಯಾಗುವಂತೆ ಒಳ್ಳೆಯ ಕೆಲಸವೊಂದನ್ನು ಮಾಡುವಾಗ ಸತ್ತವನಲ್ಲ;
ಮಾಂಸದಾನವ ಬೇಡಿದರ್ಗೆ ಒಡಲನು ಅರಿದರಿದು ಕೊಟ್ಟು ಮಡಿದವನಲ್ಲ=ದೇಹದ ಮಾಂಸದಾನವನ್ನು ಬೇಡಿದವರಿಗೆ ದೇಹದ ಅಂಗಾಂಗಗಳನ್ನು ಕತ್ತರಿಸಿ ಕತ್ತರಿಸಿ ಕೊಟ್ಟು ಸತ್ತವನಲ್ಲ. ಈ ನುಡಿಗಳು ಶಿಬಿ ಎಂಬ ಚಕ್ರವರ್‍ತಿಯ ಜೀವನದಲ್ಲಿ ನಡೆದ ಪ್ರಸಂಗವನ್ನು ಹೇಳುತ್ತಿವೆ. ಗಿಡುಗ ಪಕ್ಶಿಯು ಪಾರಿವಾಳ ಹಕ್ಕಿಯನ್ನು ಬೇಟೆಯಾಡಲೆಂದು ಬೆನ್ನು ಹತ್ತಿ ಬಂದಾಗ, ಪಾರಿವಾಳವು ಶಿಬಿ ಚಕ್ರವರ್‍ತಿಯ ಬಳಿಬಂದು ಶರಣಾಗಿ ತನ್ನ ಪ್ರಾಣವನ್ನು ಉಳಿಸಬೇಕೆಂದು ಮೊರೆಯಿಡುತ್ತದೆ. ಆಗ ಶಿಬಿ ಚಕ್ರವರ್‍ತಿಯು ಪಾರಿವಾಳದ ಜೀವವನ್ನು ಉಳಿಸುವ ಬರವಸೆಯನ್ನು ನೀಡಿ, ತನ್ನ ದೇಹದ ಬಾಗಗಳನ್ನು ಕತ್ತರಿಸಿ ಕತ್ತರಿಸಿ ಗಿಡುಗ ಪಕ್ಶಿಗೆ ನೀಡತೊಡಗುತ್ತಾನೆ. ಇದು ದೇವತೆಗಳಾದ ಇಂದ್ರ ಮತ್ತು ಅಗ್ನಿ ಜತೆಗೂಡಿ ಶಿಬಿ ಚಕ್ರವರ್‍ತಿಯ ದಾನಶೀಲತೆಯನ್ನು ಒರೆಹಚ್ಚಬೇಕೆಂದು ಹೂಡಿದ್ದ ಆಟವಾಗಿರುತ್ತದೆ. ಇಂದ್ರನು ಗಿಡುಗನಾಗಿ, ಅಗ್ನಿಯು ಪಾರಿವಾಳವಾಗಿ ರೂಪವನ್ನು ತಳೆದು ಈ ರೀತಿ ಶಿಬಿ ಚಕ್ರವರ್‍ತಿಯನ್ನು ಪರೀಕ್ಶಿಸಿ, ಅವನ ಪರೋಪಕಾರ ಗುಣಕ್ಕೆ ಮೆಚ್ಚುಗೆಯನ್ನು ಸೂಚಿಸಿ ಹರಸುತ್ತಾರೆ;
ಹುಳ್ಳಿಯಮ್ ತರಹೋಗಿ ಕಾಡೊಳಗೆ ಬಡಹಾವು ಕಚ್ಚಿ, ಮುನಿವರಿಗೆ ನಗೆಗೆಡೆಯಾಗಿ ನಿಷ್ಕಾರಣಮ್ ಮಡಿವರೇ ಕಂದ ಹೇಳ್=ಒಣ ಕಟ್ಟಿಗೆಯ ತುಂಡುಗಳನ್ನು ತರಲುಹೋಗಿ ಕಾಡಿನಲ್ಲಿ ಹಾವು ಕಚ್ಚಿ, ನಮ್ಮನ್ನು ಕಂಡು ಹೊಟ್ಟೆಕಿಚ್ಚುಪಡುವವರ ಮುಂದೆ ನಗೆಪಾಟಲಾಗುವಂತೆ ಇಂತಹ ರೀತಿಯಲ್ಲಿ ಸಾಯುತ್ತಾರೆಯೇ ಕಂದ ಹೇಳು. ಅಂದರೆ ಸೂರ್‍ಯವಂಶದ ರಾಜಕುವರನಾದ ನೀನು ಮಹತ್ತರವಾದ ಕೆಲಸದಲ್ಲಿ ತೊಡಗಿದ್ದಾಗ ವೀರಮರಣ ಬರಬೇಕಿತ್ತೇ ಹೊರತು, ಇಂತಹ ಸಾಮಾನ್ಯವಾದ ಕೆಲಸದಲ್ಲಿ ತೊಡಗಿದ್ದಾಗ ಸಾವು ಬರಬಾರದಿತ್ತು; ಮೇಗೆ ಮಗನ್ ಅರಸಾಗಬೇಕೆಂಬ ಮರುಕದಿಮ್ ಯಾಗಕ್ಕೆ ಸುತನನ್ ಅರಿದು ಇಕ್ಕಲಾರದೆ ಲೋಭಿಯಾಗಿ ಮುನಿಪುತ್ರನನ್ ಮಾರುಗೊಂಡು ಇತ್ತನ್ ಎಂಬ ಅಪಕೀರ್ತಿಯೇ ಉಳಿದುದು=ಇದೆಲ್ಲಕ್ಕಿಂತ ಹೆಚ್ಚಾಗಿ “ಹರಿಶ್ಚಂದ್ರನು ತನ್ನ ಮಗನು ಅರಸನಾಗಬೇಕೆಂಬ ಕೊರಗಿನಿಂದ ವರುಣದೇವನಿಗೆ ಹರಕೆ ಹೊತ್ತಿದ್ದಂತೆ ಮಗನನ್ನು ಬಲಿಕೊಡಲಾರದೆ, ಮಗನನ್ನು ಉಳಿಸಿಕೊಳ್ಳಬೇಕೆಂಬ ವ್ಯಾಮೋಹದಿಂದ ಅಜೀಗರ್‍ತನೆಂಬ ಮುನಿಯ ಮಗನನ್ನು ಹಣಕೊಟ್ಟು ಕೊಂಡುಕೊಂಡು, ತನ್ನ ಮಗನ ಬದಲು ಮುನಿಯ ಮಗನನ್ನು ಯಾಗಕ್ಕೆ ಬಲಿಕೊಟ್ಟನು” ಎಂಬ ಕೆಟ್ಟಹೆಸರು ನನ್ನ ಪಾಲಿಗೆ ಶಾಶ್ವತವಾಗಿ ಉಳಿಯಿತು; ಮೂರು ಗಾದೆಗಳನ್ನು ಹೇಳುವುದರ ಮೂಲಕ ಹರಿಶ್ಚಂದ್ರನು ತನಗೆ ಬಂದ ಹೀನಗತಿಯನ್ನು ಹೇಳಿಕೊಳ್ಳುತ್ತಾನೆ;ಲೋಗರ ಮಗನನ್ ಇಕ್ಕೆ ನೆಲೆಯ ನೋಡಿದನ್= ಬೇರೆಯವರ ಮಗನನ್ನು ಬಲಿಕೊಟ್ಟು, ತಾನು ಇರಬೇಕಾದ ನೆಲೆಯನ್ನು ನೋಡಿದನು.ಈ ಗಾದೆಯ ತಿರುಳನ್ನು ಸೂಚಿಸುವ “ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳವನ್ನು ನೋಡಿದರು” ಎಂಬ ಗಾದೆಯು ಜನರ ನಿತ್ಯಜೀವನದ ಮಾತುಕತೆಗಳಲ್ಲಿ ಬಳಕೆಯಾಗುತ್ತಿದೆ;
ಅಕಟ… ಸಾಗುದುರೆಗೆ ಹುಲ್ಲನ್ ಅಡಕಿದನು=ಅಯ್ಯೋ… ಇನ್ನೇನು ಸಾಯುತ್ತಲಿರುವ ಕುದುರೆಯ ಮುಂದೆ ರಾಶಿ ರಾಶಿ ಹುಲ್ಲನ್ನು ಸುರಿದನು; ಅಂದರೆ ಹರಿಶ್ಚಂದ್ರನು ತನ್ನ ಮಗನ ಉಳಿವಿಗೋಸ್ಕರ ಬೇರೆಯವರ ಮಗನನ್ನು ಬಲಿಕೊಟ್ಟರೂ, ಕೊನೆಗೆ ಈತನ ಮಗನೂ ಉಳಿಯಲಿಲ್ಲ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಒಣಗಿದ ಹಣ್ಣ ಕಾಗೆ ಕದುಕಿತ್ತು ಎಂದು=ರಸ ಹಿಂಗಿಹೋಗಿ ಒಣಗಿಹೋಗಿರುವ ಹಣ್ಣನ್ನು ಕಾಗೆ ಕುಕ್ಕಿತು ಎಂಬ ಗಾದೆಯು ಮಾಡಿದ ಕೆಲಸದಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂಬ ತಿರುಳನ್ನು ಹೊಂದಿದೆ. ಅಂತೆಯೇ ಹರಿಶ್ಚಂದ್ರನು ವರುಣ ದೇವನಿಗೆ ಕೊಟ್ಟ ಮಾತಿನಂತೆ ಮಗನನ್ನು ಯಾಗದಲ್ಲಿ ಬಲಿಕೊಡದೆ ಉಳಿಸಿಕೊಳ್ಳಲು ಮಾಡಿದ ಕುತಂತ್ರದಿಂದ ಲೋಹಿತಾಶ್ವನನ್ನು ಉಳಿಸಿಕೊಳ್ಳಲು ಆಗಲಿಲ್ಲವೆಂದು; ಸಂದ ಜನ ನಿಂದೆಗೆಯ್ವ ಅಂದವಾಯ್ತು ಎನಗೆ=ನನ್ನನ್ನು ಬಲ್ಲ ಪ್ರಜೆಗಳು ನಿಂದೆಯನ್ನು ಮಾಡುವ ರೀತಿಯಾಯ್ತು ನನ್ನ ಬಾಳು;
ಸುತನ ರೂಪಿನ ಸೊಬಗನ್=ಮಗನ ರೂಪಿನ ಚೆಲುವನ್ನು; ಅಂಗಸುಕುಮಾರದ ಉನ್ನತಿಯ=ಅವನ ಅಂಗದ ಕೋಮಲತೆಯ ಹಿರಿಮೆಯನ್ನ; ಬಾಲ್ಯದ ಚೆಲುವನ್=ಬಾಲ್ಯದ ಅಂದಚೆಂದ ಆಟವನ್ನು; ಎಲ್ಲಾ ಕಳಾಪ್ರವೀಣತೆಯ=ಎಲ್ಲಾ ಬಗೆಯ ಕಲೆಯ ಚತುರತೆಯನ್ನು; ಗುರುವಿಕೆಯ=ದೊಡ್ಡತನದ ನಡೆನುಡಿಯನ್ನು; ಗಾಡಿಯ=ಚೆಲುವನ್ನು; ಧೃತಿಯನ್=ಕೆಚ್ಚನ್ನು; ಒಟ್ಟಜೆಯನ್=ಪರಾಕ್ರಮವನ್ನು; ಅಳವಟ್ಟ ನುಡಿಯ ಚದುರ=ಜೀವನದಲ್ಲಿ ಅಳವಡಿಸಿಕೊಂಡ ಮಾತಿನ ಕುಶಲತೆಯನ್ನು;ನುತಲಕ್ಷಣಾವಳಿಯನ್=ಕೊಂಡಾಡುವಂತಹ ಒಳ್ಳೆಯ ನಡೆನುಡಿಗಳನ್ನು; ಅಧಿಕ ಗುಣಗಣವನ್=ದೊಡ್ಡದಾದ ಗುಣಗಳನ್ನು; ಆಯತಿಗೆಟ್ಟು ನೆನೆದು ಶೋಕಿಪೆನ್ ಎಂದಡೆ ಆ ಕಲ್ಪಶತ ಎಯ್ದದು=ವ್ಯಾಪ್ತಿಯನ್ನು ಮೀರಿ ನೆನೆಸಿಕೊಂಡು ಶೋಕಿಸುತ್ತೇನೆ ಎಂದರೆ ನೂರು ಯುಗಗಳಾದರೂ ಸಾಲದು; ಅರಸ, ದುಃಖವನು ಸಂತೈಸಿಕೊಂಡು ಎನ್ನನ್ ಅವಧರಿಸು= ಅರಸ, ಪುತ್ರಶೋಕವನ್ನು ಸಹಿಸಿಕೊಂಡು ನಾನು ಹೇಳುವ ಮಾತುಗಳನ್ನು ಕೇಳು; ಪುದಿದ ಇರುಳು ಕಡೆಗಾಣ್ಬ ಕುರುಹು ಆಗುತಿದೆ=ಕವಿದಿದ್ದ ಇರುಳು ಮುಗಿಯುವ ಕುರುಹು ಆಗುತ್ತಿದೆ;
ಸೂರ್ಯನ್ ಉದಯಿಸಿದನಾದಡೆ ಎನ್ನವರ್ ಎನ್ನನ್ ಅರಸಿ ತಳುವಿದಳ್ ಎಂದು ಕೊಲ್ಲದೆ ಇರರ್=ಸೂರ್‍ಯನು ಹುಟ್ಟಿಬಂದ ಕೂಡಲೇ ನನ್ನ ಒಡೆಯನ ಕಡೆಯವರು ನನ್ನನ್ನು ಹುಡುಕಿಕೊಂಡು ಬಂದು ನೋಡಿ, ಮನೆಗೆಲಸಕ್ಕೆ ಬರಲು ತಡಮಾಡಿದಳು ಎಂದು ಕೊಲ್ಲದೆ ಇರುವುದಿಲ್ಲ; ಅರಸ, ಈ ಕುಮಾರನನ್ ಈಗ ದಹಿಸಬೇಕು ಎಂದು ಸುದತಿ ನುಡಿಯಲು=ಅರಸ, ಈ ನಮ್ಮ ಮಗನನ್ನು ಈಗ ಸುಡಬೇಕು ಎಂದು ಚಂದ್ರಮತಿಯು ಹೇಳಲು; ಅವನೀಶ ನುಡಿದನ್=ಹರಿಶ್ಚಂದ್ರನು ಅವಳ ಮಾತಿಗೆ ಈ ರೀತಿ ಉತ್ತರಿಸಿದನು; ತೆರೆಯನಿಕ್ಕದೆ ಸುಡಲ್ ಬಾರದು. ಉಳ್ಳಡೆ ಕೊಡು. ಇಲ್ಲದಡೆ ಬೇಗದಿ ಹೋಗಿ ನಿನ್ನ ಒಡೆಯನನ್ ಬೇಡಿ ತಾ. ತಾರದಿರೆ ಸುಡಲ್ ಬೇಡ=ಹೆಣ ಸುಡಲು ಕೊಡಬೇಕಾದ ತೆರಿಗೆಯನ್ನು ಕೊಡದಿದ್ದರೆ ಸುಡುವುದಕ್ಕಾಗುವುದಿಲ್ಲ. ಇದ್ದರೆ ಕೊಡು. ಇಲ್ಲದಿದ್ದರೆ ಬೇಗ ಹೋಗಿ ನಿನ್ನ ಒಡೆಯನನ್ನು ಬೇಡಿ ಪಡೆದು ತರುವುದು. ತೆರಿಗೆಯ ಹಣವನ್ನು ತರುವುದಕ್ಕೆ ಆಗದಿದ್ದರೆ ಸುಡಲು ಆಗುವುದಿಲ್ಲ; ಒಡೆಯರ್ ಈವವರಲ್ಲ=ಒಡೆಯರು ಕೊಡುವವರಲ್ಲ;
ಬೇಡಿ ನೋಡಿ… ಕೊಡದಡೆ, ಋಣಂಬಡು= ಬೇಡಿ ನೋಡು. ಕೊಡದಿದ್ದರೆ ಸಾಲಮಾಡು; ಹುಟ್ಟದಿರ್ದಡೆ ಸುಡುವ ಗೊಡವೆ ಬೇಡ=ಸಾಲ ಸಿಗದಿದ್ದರೆ ಸುಡುವ ಚಿಂತೆಯೇ ಬೇಡ; ಅನ್ನೆಗಮ್ ಬಂದನಿತು ಬಕ್ಕೆ ಎಂದು=ಅಲ್ಲಿಯ ತನಕ ಹೆಣವನ್ನು ಸುಡುವುದಕ್ಕೆ ಕೊಡಬೇಕಾಗಿರುವ ತೆರಿಗೆಯ ವಸ್ತುಗಳಲ್ಲಿ ಬಂದಶ್ಟು ಬರಲಿ ಎಂದು ನುಡಿದು; ತರುಣನ್ ಉಟ್ಟುದನು ಪೊಡವೀಶ್ವರನ್ ಕೊಂಡು=ಲೋಹಿತಾಶ್ವನು ತೊಟ್ಟಿದ್ದ ಬಟ್ಟೆಯನ್ನು ಸುಡುಗಾಡಿನ ಕಾವಲುಗಾರನಾದ ಹರಿಶ್ಚಂದ್ರನು ಬಿಚ್ಚಿ ತೆಗೆದುಕೊಂಡು; ಅತ್ತಲ್ ತಿರುಗಿ ತನ್ನ ಕಾಪಿನ ಗುಡಿಗೆ ನಡೆಗೊಂಡನ್= ಹಿಂತಿರುಗಿ ತನ್ನ ಕಾವಲಿನ ಗುಡಿಸಲಿನತ್ತ ಹೊರಟನು;
ಇತ್ತಲ್ ಪುರಕೆ ಬರುತಿಪ್ಪ ಮಡದಿಗೆ ಎಡೆವಟ್ಟೆಯೊಳು ಬಂದ ಸಂಕಟವನ್ ಆವ ಜೀವರು ಕೇಳ್ವರು=ಈ ಕಡೆ ಸುಡುಗಾಡಿನ ತೆರಿಗೆಯ ಹಣವನ್ನು ಪಡೆದು ಬರಲೆಂದು ಬರುತ್ತಿರುವ ಚಂದ್ರಮತಿಗೆ ದಾರಿಯ ನಡುವೆ ಉಂಟಾದ ಸಂಕಟವನ್ನು ಯಾವ ಜೀವರು ತಾನೆ ಕೇಳುವುದಕ್ಕೆ ಆಗುತ್ತದೆ. ಅಂದರೆ ಅವಳ ಬಂದೊದಗಲಿರುವ ಸಂಕಟವು ಬಹು ದೊಡ್ಡದೆಂದು ಕವಿಯು ಉದ್ಗರಿಸುತ್ತಿದ್ದಾನೆ;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು